ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 15

“ನಾನು ನಿನ್ನ ವೇಶ್ಯಾವಾಟಿಕೆಯನ್ನ ನಿಲ್ಲಿಸಿಬಿಡ್ತೀನಿ”

“ನಾನು ನಿನ್ನ ವೇಶ್ಯಾವಾಟಿಕೆಯನ್ನ ನಿಲ್ಲಿಸಿಬಿಡ್ತೀನಿ”

ಯೆಹೆಜ್ಕೇಲ 16:41

ಮುಖ್ಯ ವಿಷಯ: ಯೆಹೆಜ್ಕೇಲ ಮತ್ತು ಪ್ರಕಟನೆ ಪುಸ್ತಕಗಳಲ್ಲಿ ತಿಳಿಸಿರೋ ವೇಶ್ಯೆಯರ ವಿವರಣೆಯಿಂದ ನಾವೇನು ಕಲಿಬಹುದು

1, 2. ಯಾವ ರೀತಿಯ ವೇಶ್ಯೆಯನ್ನ ನೋಡಿದ್ರೆ ನಮಗೆ ಹೇಸಿಗೆ ಅನ್ಸುತ್ತೆ?

 ವೇಶ್ಯೆ ಅನ್ನೋ ಪದ ಕೇಳಿದ ಕೂಡಲೇ ನಮ್ಗೆ ತುಂಬಾ ಬೇಸರ ಆಗುತ್ತೆ. ಒಬ್ಬ ವೇಶ್ಯೆಯನ್ನ ನೋಡಿದಾಗ ಅವ್ರು ಯಾಕೆ ಈ ರೀತಿ ಜೀವನ ಆರಿಸಿಕೊಂಡಿರಬಹುದು ಅಂತ ನಾವು ಯೋಚಿಸಬಹುದು. ಅವಳು ಸ್ವಂತ ಕುಟುಂಬದವರಿಂದನೇ ಹಿಂಸೆ, ಅತ್ಯಾಚಾರ ಅನುಭವಿಸಿ ಚಿಕ್ಕ ವಯಸ್ಸಲ್ಲೇ ಮನೆ ಬಿಟ್ಟು ನಂತ್ರ ವೇಶ್ಯೆ ಆಗಿರಬಹುದಾ? ಕಡು ಬಡತನದಿಂದ ಬೇರೆ ಯಾವುದೇ ದಾರಿ ಇಲ್ಲದೆ ತಮ್ಮನ್ನೇ ಈ ಕೆಲ್ಸಕ್ಕೆ ಮಾರಿಕೊಂಡಿರಬಹುದಾ? ಕ್ರೂರ ಗಂಡನಿಂದ ತಪ್ಪಿಸಿಕೊಂಡು ಹೋದಾಗ ಈ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿರಬಹುದಾ? ಲೋಕದ ಯಾವುದೇ ಕಡೆ ಹೋದ್ರೂ ಈ ರೀತಿಯ ನೋವಿನ ಕಥೆಗಳು ಕೇಳಿಬರುತ್ತವೆ. ಇವೆಲ್ಲಾ ಯೇಸು ಕ್ರಿಸ್ತನಿಗೆ ಗೊತ್ತಿದ್ರಿಂದನೇ ಆತನು ಕೆಲವು ವೇಶ್ಯೆಯರ ಜೊತೆ ಪ್ರೀತಿ, ಕರುಣೆಯಿಂದ ನಡ್ಕೊಂಡ. ಅವ್ರಲ್ಲಿ ಯಾರಾದ್ರೂ ನಿಜವಾಗಿ ಪಶ್ಚಾತ್ತಾಪಪಟ್ಟು ತಮ್ಮ ಜೀವ್ನ ರೀತಿನ ಬದಲಾಯಿಸಿಕೊಂಡ್ರೆ ಮುಂದೆ ಒಳ್ಳೇ ಜೀವನ ಪಡ್ಕೊಬಹುದು ಅಂತ ಯೇಸು ಒತ್ತಿ ಹೇಳಿದ.—ಮತ್ತಾ. 21:28-32; ಲೂಕ 7:36-50.

2 ಆದ್ರೆ ನಾವೀಗ ಇನ್ನೊಂದು ರೀತಿಯ ವೇಶ್ಯೆಯ ಬಗ್ಗೆ ನೋಡೋಣ. ಅವಳು ತಾನಾಗೇ ಇಂಥ ಜೀವನ ರೀತಿಯನ್ನ ಆಯ್ಕೆ ಮಾಡಿದ್ದಾಳೆ. ಇದೊಂದು ಕೆಟ್ಟ ಕೆಲ್ಸ ಅಂತಲ್ಲ, ತಾನು ಮಾಡ್ತಿರೋದು ಒಂದು ದೊಡ್ಡ ಸಾಧನೆ ಅಂತ ಅಂದ್ಕೊಂಡಿದ್ದಾಳೆ. ತುಂಬಾ ದುಡ್ಡು ಮಾಡಬಹುದು, ತುಂಬಾ ಜನ್ರನ್ನ ತನ್ನ ಮುಷ್ಠಿಲಿ ಇಟ್ಕೊಬಹುದು ಅಂತ ಗೊತ್ತಿರೋದ್ರಿಂದ ಅವಳು ಇದನ್ನ ಹೆಮ್ಮೆಯಿಂದ ಮಾಡಿದ್ದಾಳೆ. ಇದಕ್ಕಿಂತ ಕೆಟ್ಟ ವಿಷ್ಯ ಏನಂದ್ರೆ ಅವಳನ್ನ ತುಂಬಾ ಪ್ರೀತಿಸುವ ಚಿನ್ನದಂಥ ಗಂಡನಿಗೆ ಮೋಸ ಮಾಡಿ ಇಂಥಾ ಕೆಲಸಕ್ಕೆ ಕಾಲು ಇಟ್ಟಿದ್ದಾಳಂದ್ರೆ ಅವಳ ಬಗ್ಗೆ ಏನು ಹೇಳೋಣ! ಇಂಥ ಹೆಂಗಸನ್ನ ನೋಡಿದ್ರೆ ನಮಗೆ ಹೇಸಿಗೆ ಅನ್ಸುತ್ತೆ ಅಲ್ವಾ? ಯೆಹೋವ ದೇವ್ರಿಗೆ ಸುಳ್ಳು ಧರ್ಮಗಳನ್ನ ನೋಡಿದ್ರೆ ಅಷ್ಟೇ ಹೇಸಿಗೆ ಅನ್ಸುತ್ತೆ. ಅದಕ್ಕೇ ಬೈಬಲಿನಲ್ಲಿ ಆಗಾಗ ಸುಳ್ಳು ಧರ್ಮವನ್ನ ವೇಶ್ಯೆಗೆ ಹೋಲಿಸಲಾಗಿದೆ.

3. ಈ ಅಧ್ಯಾಯದಲ್ಲಿ ನಾವು ಯಾವುದರ ಬಗ್ಗೆ ಚರ್ಚಿಸ್ತೇವೆ?

3 ಯೆಹೆಜ್ಕೇಲನ ಪುಸ್ತಕದಲ್ಲಿ ಗಮನಾರ್ಹವಾದ ಎರಡು ವೃತ್ತಾಂತಗಳಿವೆ. ಈ ವೃತ್ತಾಂತಗಳಲ್ಲಿ ಇಸ್ರಾಯೇಲ್ಯರನ್ನ ಮತ್ತು ಯೆಹೂದ್ಯರನ್ನ ವೇಶ್ಯೆಯರಿಗೆ ಹೋಲಿಸಲಾಗಿದೆ. ಅವ್ರು ಯೆಹೋವನಿಗೆ ಎಷ್ಟರ ಮಟ್ಟಿಗೆ ದ್ರೋಹ ಮಾಡಿದ್ದಾರೆ ಅನ್ನೋದನ್ನ ವಿವರಿಸಲಾಗಿದೆ. (ಯೆಹೆ. ಅಧ್ಯಾ. 16 ಮತ್ತು 23) ಅಲ್ಲಿರೋ ದಾಖಲೆಗಳ ಬಗ್ಗೆ ತಿಳ್ಕೊಳ್ಳೋ ಮುಂಚೆ ನಾವು ಇನ್ನೊಬ್ಬ ಸಾಂಕೇತಿಕ ವೇಶ್ಯೆಯ ಬಗ್ಗೆ ತಿಳ್ಕೊಳ್ಳೋಣ. ಈ ವೇಶ್ಯೆ ಇಸ್ರಾಯೇಲ್ಯ ಜನಾಂಗ ಹುಟ್ಟೋ ಮುಂಚಿನಿಂದಲೇ ಇತ್ತು ಮತ್ತು ಈಗಲೂ ಮೆರೆಯುತ್ತಾ ಇದ್ದಾಳೆ. ಈ ವೇಶ್ಯೆ ಯಾರು ಅಂತ ಪ್ರಕಟನೆ ಪುಸ್ತಕದಲ್ಲಿ ತಿಳಿಸಲಾಗಿದೆ.

‘ವೇಶ್ಯೆಯರ ತಾಯಿ’

4, 5. “ಮಹಾ ಬಾಬೆಲ್‌” ಯಾರನ್ನ ಸೂಚಿಸ್ತಾಳೆ? ಅದನ್ನ ನಾವು ಹೇಗೆ ಹೇಳಬಹುದು? (ಆರಂಭದ ಚಿತ್ರ ನೋಡಿ.)

4 ಯೋಹಾನನು ತಾನು ನೋಡಿದ ದರ್ಶನದ ಬಗ್ಗೆ ವಿವರಿಸುವಾಗ ಒಬ್ಬ ಸ್ತ್ರೀ ಬಗ್ಗೆ ಹೇಳಿದ್ದಾನೆ. ಅವಳನ್ನ “ಪ್ರಸಿದ್ಧ ವೇಶ್ಯೆ,” ‘ಮಹಾ ಬಾಬೆಲ್‌ ವೇಶ್ಯೆಯರ ತಾಯಿ’ ಅಂತ ಕರೆಯಲಾಗಿದೆ. (ಪ್ರಕ. 17:1, 5) ನೂರಾರು ವರ್ಷಗಳಿಂದ ಈ ವೇಶ್ಯೆ ಯಾರು ಅನ್ನೋದ್ರ ಬಗ್ಗೆ ಧಾರ್ಮಿಕ ನಾಯಕರು ಮತ್ತು ಬೈಬಲ್‌ ವಿದ್ವಾಂಸರು ವಾದಗಳನ್ನ ಮಾಡಿದ್ದಾರೆ. ಕೆಲವ್ರು ಅವಳನ್ನ ಬಾಬೆಲ್‌, ರೋಮ್‌ ಅಥ್ವಾ ರೋಮನ್‌ ಕ್ಯಾಥೊಲಿಕ್‌ ಚರ್ಚ್‌ ಅಂತ ಹೇಳಿದ್ದಾರೆ. ಆದ್ರೆ ಸುಮಾರು ದಶಕಗಳ ಹಿಂದೆನೇ ಯೆಹೋವನ ಸಾಕ್ಷಿಗಳು ಈ “ಪ್ರಸಿದ್ಧ ವೇಶ್ಯೆ” ಯಾರನ್ನ ಸೂಚಿಸ್ತಾಳೆ ಅಂತ ಗುರುತಿಸಿದ್ದಾರೆ. ಅವಳು ಸುಳ್ಳು ಧರ್ಮಗಳ ಲೋಕ ಸಾಮ್ರಾಜ್ಯವನ್ನು ಸೂಚಿಸ್ತಾಳೆ. ಅದನ್ನ ನಾವು ಹೇಗೆ ಹೇಳಬಹುದು?

5 ಈ ವೇಶ್ಯೆ ‘ಭೂಮಿಯ ರಾಜರೊಂದಿಗೆ’ ಅಂದ್ರೆ ರಾಜಕೀಯ ಶಕ್ತಿಗಳೊಂದಿಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ ಅಂತ ಬೈಬಲ್‌ ಹೇಳುತ್ತೆ. ಆದ್ರಿಂದ ಈ ವೇಶ್ಯೆ ರಾಜಕೀಯ ಶಕ್ತಿಗಳನ್ನ ಸೂಚಿಸಲ್ಲ ಅಂತ ಸ್ಪಷ್ಟವಾಗಿ ಗೊತ್ತಾಗುತ್ತೆ. ಅವಳು ಸತ್ತಾಗ ‘ಭೂಮಿಯ ಮೇಲಿರೋ ವ್ಯಾಪಾರಿಗಳು’ ಅಂದ್ರೆ ಈ ಲೋಕದ ವ್ಯಾಪಾರ ವ್ಯವಸ್ಥೆ ಅತ್ತು ಗೋಳಾಡುತ್ತೆ ಅಂತ ಬೈಬಲ್‌ ಹೇಳುತ್ತೆ. ಆದ್ರಿಂದ ಮಹಾ ಬಾಬೆಲ್‌ ಈ ಲೋಕದ ವ್ಯಾಪಾರ ವ್ಯವಸ್ಥೆಯನ್ನೂ ಸೂಚಿಸಲ್ಲ ಅಂತ ಹೇಳಬಹುದು. ಹಾಗಾದ್ರೆ ಈ ವೇಶ್ಯೆ ಯಾರು? ಈ ವೇಶ್ಯೆ ‘ಮಂತ್ರತಂತ್ರಗಳನ್ನ’ ಮಾಡ್ತಾಳೆ, ಮೂರ್ತಿ ಪೂಜೆಯನ್ನ ಮತ್ತು ಮೋಸವನ್ನ ಮಾಡ್ತಾಳೆ ಅಂತ ತಿಳಿಸಲಾಗಿದೆ. ಈ ಲೋಕದಲ್ಲಿರೋ ಭ್ರಷ್ಟ ಧರ್ಮಗಳು ಇದನ್ನೇ ಮಾಡ್ತಿವೆ ಅಲ್ವಾ? ಅಷ್ಟೇ ಅಲ್ಲ, ಈ ವೇಶ್ಯೆ ಲೋಕದ ರಾಜಕೀಯ ಶಕ್ತಿಗಳ ಮೇಲೆ ಸವಾರಿ ನಡೆಸೋದಾಗಿ ಅಂದ್ರೆ ಅಧಿಕಾರವನ್ನ ಚಲಾಯಿಸೋದಾಗಿ ಹೇಳಲಾಗಿದೆ. ಅವಳು ಯೆಹೋವ ದೇವರ ನಂಬಿಗಸ್ತ ಸೇವಕರನ್ನು ಹಿಂಸಿಸ್ತಾಳೆ ಅಂತನೂ ತಿಳಿಸಲಾಗಿದೆ. (ಪ್ರಕ. 17:2, 3; 18:11, 23, 24) ಇಂದಿನವರೆಗೂ ಸುಳ್ಳು ಧರ್ಮಗಳು ಇದನ್ನೇ ಮಾಡ್ತಾ ಬಂದಿವೆ ಅಲ್ವಾ?

ಎಲ್ಲಾ ರೀತಿಯ ಸುಳ್ಳು ಧಾರ್ಮಿಕ ಆಚರಣೆಗಳು, ಬೋಧನೆಗಳು ಮತ್ತು ಸಂಘಟನೆಗಳು ಹಿಂದಿನ ಕಾಲದ ಬಾಬೆಲಿಂದ ಹುಟ್ಟಿ ಹಬ್ಬಿಕೊಂಡಿವೆ (ಪ್ಯಾರ 6 ನೋಡಿ)

6. ಮಹಾ ಬಾಬೆಲನ್ನ ಯಾಕೆ ‘ವೇಶ್ಯೆಯರ ತಾಯಿ’ ಅಂತ ಕರೆಯಲಾಗಿದೆ?

6 ಬಾಬೆಲನ್ನ “ಪ್ರಸಿದ್ಧ ವೇಶ್ಯೆ” ಅಂತ ಮಾತ್ರ ಅಲ್ಲ, ‘ವೇಶ್ಯೆಯರ ತಾಯಿ’ ಅಂತನೂ ಯಾಕೆ ಕರೆಯಲಾಗಿದೆ? ಸುಳ್ಳು ಧರ್ಮದಲ್ಲಿ ಲೆಕ್ಕವಿಲ್ಲದಷ್ಟು ಪಂಗಡಗಳು, ಗುಂಪುಗಳು ಇವೆ. ಹಿಂದಿನ ಕಾಲದ ಬಾಬೆಲ್‌ ಅಥವಾ ಬ್ಯಾಬಿಲೋನ್‌ನಲ್ಲಿ ಯೆಹೋವ ದೇವ್ರು ಭಾಷೆಯನ್ನ ಗಲಿಬಿಲಿ ಮಾಡಿದ್ರು. ಆಗ ಸುಳ್ಳು ಧರ್ಮದ ಎಲ್ಲಾ ರೀತಿಯ ಬೋಧನೆಗಳು ಭೂಮಿಯಲ್ಲೆಲ್ಲಾ ಹಬ್ಬಿಕೊಂಡಿತು. ಇದ್ರಿಂದ ಬೇರೆಬೇರೆ ರೀತಿಯ ಧರ್ಮಗಳು ಹುಟ್ಟಿಕೊಂಡವು. ಹೀಗೆ ಎಲ್ಲ ಸುಳ್ಳು ಧರ್ಮಗಳು ಬಾಬೆಲ್‌ ಪಟ್ಟಣದಿಂದಲೇ ಬಂದಿದ್ರಿಂದ ಆ ಸ್ತ್ರೀಗೆ “ಮಹಾ ಬಾಬೆಲ್‌” ಅನ್ನೋ ಹೆಸ್ರು ಸೂಕ್ತವಾಗಿದೆ. (ಆದಿ. 11:1-9) ಹಾಗಾಗಿ ಲೋಕದಲ್ಲಿರೋ ಎಲ್ಲಾ ಧರ್ಮಗಳನ್ನ ಒಂದು ಸಂಘಟನೆಯ ಅಥವಾ ಒಬ್ಬ ಪ್ರಸಿದ್ಧ ವೇಶ್ಯೆಯ “ಹೆಣ್ಣುಮಕ್ಕಳಾಗಿದ್ದಾರೆ” ಅಂತ ಹೇಳಬಹುದು. ಸೈತಾನನು ಜನ್ರನ್ನ ಮಂತ್ರತಂತ್ರದ, ಮೂರ್ತಿಪೂಜೆಯ ಮತ್ತು ಯೆಹೋವ ದೇವ್ರಿಗೆ ನೋವು ತರಿಸೋ ಆಚಾರ-ಪದ್ಧತಿಗಳ ಪಾಶಕ್ಕೆ ಬೀಳಿಸಲಿಕ್ಕಾಗಿ ಸುಳ್ಳು ಧರ್ಮಗಳನ್ನ ಉಪಯೋಗಿಸ್ತಿದ್ದಾನೆ. ಅದಕ್ಕೇ, ಇಡೀ ಲೋಕದಲ್ಲಿ ಹಬ್ಬಿರೋ ಈ ಭ್ರಷ್ಟ ಸಂಘಟನೆಯ ಬಗ್ಗೆ ದೇವಜನ್ರಿಗೆ ಈ ಎಚ್ಚರಿಕೆ ಕೊಡಲಾಗಿದೆ: “ನನ್ನ ಜನ್ರೇ, . . . ಅವಳು ಮಾಡೋ ಪಾಪದಲ್ಲಿ ನಿಮಗೆ ಒಂದು ಪಾಲೂ ಇರಬಾರದಂದ್ರೆ . . . ಅವಳನ್ನ ಬಿಟ್ಟು ಹೊರಗೆ ಬನ್ನಿ.”—ಪ್ರಕಟನೆ 18:4, 5 ಓದಿ.

7. ಮಹಾ ಬಾಬೆಲಿಂದ “ಹೊರಗೆ ಬನ್ನಿ” ಅನ್ನೋ ಎಚ್ಚರಿಕೆಗೆ ನಾವ್ಯಾಕೆ ಕಿವಿಗೊಡಬೇಕು?

7 ಆ ಎಚ್ಚರಿಕೆಗೆ ನೀವು ಕಿವಿಗೊಡ್ತಿದ್ದೀರಾ? ಯೆಹೋವ ದೇವರು ನಮ್ಮಲ್ಲಿ ‘ಆಧ್ಯಾತ್ಮಿಕ ವಿಷಯಗಳ ಅಗತ್ಯ’ ಇರೋ ಹಾಗೆ ಸೃಷ್ಟಿ ಮಾಡಿದ್ದಾನೆ. (ಮತ್ತಾ. 5:3) ಆ ಅಗತ್ಯವನ್ನ ಪೂರೈಸಬೇಕಂದ್ರೆ ನಾವು ಶುದ್ಧ ಆರಾಧನೆಯನ್ನ ಮಾಡಲೇಬೇಕು. ಯೆಹೋವನ ಸೇವಕರು ಎಲ್ಲಾ ರೀತಿಯ ಸುಳ್ಳು ಧರ್ಮದ ಆಚಾರ ವಿಚಾರಗಳಿಂದ ದೂರ ಇರಲೇಬೇಕು. ಆದ್ರೆ ನಾವು ಹಾಗಿರೋದು ಸೈತಾನನಿಗೆ ಇಷ್ಟ ಇಲ್ಲ. ನಾವು ಯೆಹೋವನಿಗೆ ನಂಬಿಕೆ ದ್ರೋಹ ಮಾಡಿ, ಹಾಳಾಗಿ ಹೋಗಬೇಕು ಅಂತ ಅವನು ಬಯಸ್ತಾನೆ. ದೇವಜನ್ರನ್ನ ದಾರಿ ತಪ್ಪಿಸೋದ್ರಲ್ಲಿ ಅವನು ಸ್ವಲ್ಪ ಮಟ್ಟಿಗೆ ಜಯಗಳಿಸ್ತಾನೆ ಅನ್ನೋದು ನಿಜನೇ. ಉದಾಹರಣೆಗೆ ದೇವಜನ್ರು ನೂರಾರು ವರ್ಷಗಳಿಂದ ಆಧ್ಯಾತ್ಮಿಕ ವೇಶ್ಯಾವಾಟಿಕೆಯನ್ನ ನಡೆಸ್ತಾ ಇದ್ರು. ಅಂದ್ರೆ ಯೆಹೋವನಿಗೆ ನಂಬಿಕೆ ದ್ರೋಹ ಮಾಡ್ತಾ ಇದ್ರು. ಯೆಹೆಜ್ಕೇಲನ ಕಾಲದಲ್ಲೂ ಇದು ಮುಂದುವರಿದಿತ್ತು. ನಾವೀಗ ಆ ವಿಷ್ಯದ ಬಗ್ಗೆ ಹೆಚ್ಚನ್ನ ತಿಳಿಯೋಣ. ಅದರಿಂದ ಯೆಹೋವ ದೇವರ ಮಟ್ಟಗಳ ಬಗ್ಗೆ, ನ್ಯಾಯದ ಬಗ್ಗೆ ಮತ್ತು ಆತನ ಕರುಣೆಯ ಬಗ್ಗೆ ಪಾಠಗಳನ್ನ ಕಲಿಯೋಣ.

‘ನೀನು ವೇಶ್ಯೆ ಆದೆ’

8-10. (ಎ) ಶುದ್ಧ ಆರಾಧನೆಯ ಬಗ್ಗೆ ಯಾವ ಮುಖ್ಯ ವಿಷಯವನ್ನ ನಾವು ಮನಸ್ಸಲ್ಲಿ ಇಟ್ಟುಕೊಳ್ಳಬೇಕು? (ಬಿ) ಸುಳ್ಳು ದೇವರುಗಳ ಆರಾಧನೆ ಮಾಡಿದ್ರೆ ಯೆಹೋವನಿಗೆ ಹೇಗನಿಸುತ್ತೆ? ವಿವರಿಸಿ.

8 ಜನ್ರು ನಂಬಿಕೆ ದ್ರೋಹ ಮಾಡಿದಾಗ ತನಗೆ ಎಷ್ಟು ನೋವಾಯ್ತು ಅಂತ ತೋರಿಸೋಕೆ ಯೆಹೋವ ದೇವ್ರು ಯೆಹೆಜ್ಕೇಲನ ಪುಸ್ತಕದಲ್ಲಿ ವೇಶ್ಯೆಯ ದೃಷ್ಟಾಂತವನ್ನು ತಿಳಿಸಿದ್ದಾನೆ. ಇದ್ರ ಬಗ್ಗೆ ಎರಡು ವೃತ್ತಾಂತಗಳನ್ನ ಯೆಹೆಜ್ಕೇಲ ಬರೆದಿದ್ದಾನೆ. ಜನ್ರು ನಂಬಿಕೆ ದ್ರೋಹ ಮಾಡಿ ಆಧ್ಯಾತ್ಮಿಕ ವೇಶ್ಯಾವಾಟಿಕೆ ಮಾಡಿದಾಗ ಯೆಹೋವ ದೇವ್ರಿಗೆ ಎಷ್ಟು ನೋವಾಯ್ತು ಅಂತ ಆ ವೃತ್ತಾಂತಗಳಲ್ಲಿ ನಾವು ನೋಡಬಹುದು. ಯೆಹೋವ ದೇವ್ರು ಅವರನ್ನ ಯಾಕೆ ವೇಶ್ಯೆಯರಿಗೆ ಹೋಲಿಸಿದನು?

9 ಈ ಪ್ರಶ್ನೆಗೆ ಉತ್ರ ತಿಳ್ಕೊಳ್ಳೋಕೆ ನಾವು ಶುದ್ಧ ಆರಾಧನೆಯಲ್ಲಿ ಇರಬೇಕಾದ ಒಂದು ಮುಖ್ಯ ವಿಷಯದ ಬಗ್ಗೆ ತಿಳ್ಕೊಬೇಕು. ಅದನ್ನ ನಾವು ಈಗಾಗಲೇ ಈ ಪುಸ್ತಕದ ಐದನೇ ಅಧ್ಯಾಯದಲ್ಲಿ ಚರ್ಚೆ ಮಾಡಿದ್ದೇವೆ. ಅದನ್ನೀಗ ನೆನಪಿಸಿಕೊಳ್ಳೋಣ. ಯೆಹೋವ ದೇವ್ರು ಇಸ್ರಾಯೇಲ್ಯರಿಗೆ, “ನನ್ನನ್ನ ಬಿಟ್ಟು ಬೇರೆ ಯಾರೂ ನಿಮಗೆ ದೇವರು ಆಗಿರಬಾರದು . . . ನಾನೇ ನಿಮ್ಮ ದೇವರಾದ ಯೆಹೋವ. ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ ದೇವರು ನಾನು” ಅಂತ ಹೇಳಿದನು. (ವಿಮೋ. 20:3, 5) ಯೆಹೋವ ದೇವ್ರು ನಂತ್ರನೂ ಅದನ್ನ ಈ ರೀತಿ ಒತ್ತಿ ಹೇಳಿದನು: “ನೀವು ಬೇರೆ ಯಾವ ದೇವರಿಗೂ ಅಡ್ಡ ಬೀಳಬಾರದು. ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಇಷ್ಟಪಡೋ ದೇವರು ನಾನು. ಅದಕ್ಕೇ ನೀವು ಯೆಹೋವನಾದ ನನ್ನನ್ನ ಮಾತ್ರ ಆರಾಧಿಸಬೇಕು. ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ ದೇವರು ನಾನು.” (ವಿಮೋ. 34:14) ಇಲ್ಲಿ, ಯೆಹೋವ ದೇವ್ರು ತಾನೇನು ಬಯಸ್ತೇನೆ ಅಂತ ಸ್ಪಷ್ಟವಾಗಿ ಹೇಳಿದ್ದಾನೆ. ನಮ್ಮ ಆರಾಧನೆಯನ್ನ ಸ್ವೀಕರಿಸಬೇಕಾದ್ರೆ ನಾವು ಆತನನ್ನ ಮಾತ್ರ ಆರಾಧಿಸಬೇಕು.

10 ಈ ವಿಷ್ಯ ಎಷ್ಟು ಗಂಭೀರವಾಗಿದೆ ಅಂತ ಅರ್ಥ ಮಾಡ್ಕೊಳ್ಳೋಕೆ ನಾವೀಗ ಮದ್ವೆ ಬಂಧದ ಉದಾಹರಣೆಯನ್ನ ನೋಡೋಣ. ತಮ್ಮ ಸಂಗಾತಿ ತನ್ನನ್ನ ಮಾತ್ರ ಪ್ರೀತಿಸಬೇಕು, ತನಗೆ ನಂಬಿಗಸ್ತರಾಗಿರಬೇಕು ಅಂತ ಗಂಡ ಮತ್ತು ಹೆಂಡತಿ ಬಯಸ್ತಾರೆ. ಆ ರೀತಿ ಬಯಸೋದು ಅವ್ರ ಹಕ್ಕು ಕೂಡ. ಅವರಲ್ಲಿ ಒಬ್ಬರು, ಬೇರೆಯವ್ರ ಕಡೆ ಲೈಂಗಿಕ ಆಸಕ್ತಿ ತೋರಿಸೋದಾದ್ರೆ ಅಥ್ವಾ ಸಂಬಂಧ ಬೆಳೆಸೋದಾದ್ರೆ ಅವ್ರ ಸಂಗಾತಿಗೆ ಕೋಪ ಬರುತ್ತೆ. ತನಗೆ ದ್ರೋಹ ಮಾಡಿದ್ದಾರೆ ಅಂತ ಅನ್ಸುತ್ತೆ. (ಇಬ್ರಿಯ 13:4 ಓದಿ.) ಅದೇ ತರ ಯೆಹೋವನಿಗೆ ತಮ್ಮನ್ನ ಸಮರ್ಪಿಸಿಕೊಂಡ ಜನ್ರು ಸುಳ್ಳು ದೇವ್ರನ್ನ ಆರಾಧಿಸೋದಾದ್ರೆ ಅದನ್ನ ಸಹಿಸೋಕೆ ಆಗಲ್ಲ. ಅದು ತನಗೆ ನಂಬಿಕೆ ದ್ರೋಹ ಬಗೆದ ಹಾಗೆ ಅಂತ ಆತನು ನೆನಸ್ತಾನೆ. ಈ ರೀತಿ ಮಾಡ್ದಾಗ ತನಗೆ ಹೇಗೆ ಅನ್ಸುತ್ತೆ ಅಂತ ಯೆಹೋವನು ಯೆಹೆಜ್ಕೇಲ 16 ನೇ ಅಧ್ಯಾಯದಲ್ಲಿ ತಿಳಿಸಿದ್ದಾನೆ.

11. ಯೆರೂಸಲೇಮಿನ ಆರಂಭದ ಬಗ್ಗೆ ಯೆಹೋವನು ಏನು ಹೇಳಿದ್ದಾನೆ?

11 ಯೆಹೋವ ದೇವ್ರು ತನಗಾದ ದುಃಖವನ್ನ ವ್ಯಕ್ತಪಡಿಸ್ತಾ ತುಂಬಾ ಹೊತ್ತು ಮಾತಾಡಿದ್ದನ್ನ ಯೆಹೆಜ್ಕೇಲ 16 ನೇ ಅಧ್ಯಾಯದಲ್ಲಿ ನೋಡಬಹುದು. ಇದು ಹೀಬ್ರು ಶಾಸ್ತ್ರಗ್ರಂಥದಲ್ಲಿರೋ ತುಂಬಾ ದೊಡ್ಡ ಭವಿಷ್ಯವಾಣಿ. ಯೆಹೋವ ದೇವ್ರು ಇಲ್ಲಿ ಯೆರೂಸಲೇಮಿನ ಜೊತೆ ಮಾತಾಡಿದ್ದಾನೆ. ಈ ಪಟ್ಟಣ, ನಂಬಿಕೆ ದ್ರೋಹ ಮಾಡಿದ ಎಲ್ಲಾ ಯೆಹೂದ್ಯರನ್ನು ಸೂಚಿಸುತ್ತೆ. ಈ ಪಟ್ಟಣ ಹೇಗೆ ಅಸ್ತಿತ್ವಕ್ಕೆ ಬಂತು ಮತ್ತು ಅದು ಹೇಗೆ ನಂಬಿಕೆ ದ್ರೋಹ ಮಾಡಿತು ಅನ್ನೋ ನೋವಿನ ಕಥೆಯನ್ನ ಯೆಹೋವನು ಹೇಳಿದ್ದಾನೆ. ಯೆರೂಸಲೇಮ್‌ ಹುಟ್ಟಿದಾಗಲೇ ಬಿಟ್ಟು ಹೋದ ನಿಸ್ಸಹಾಯಕ ಕೂಸಿನಂತೆ ಇತ್ತು. ಅದನ್ನ ಕೇಳೋರು ಯಾರೂ ಇರಲಿಲ್ಲ. ಅದಕ್ಕೆ ಸಹಾಯ ಮಾಡೋರು ಯಾರೂ ಇರಲಿಲ್ಲ. ಸುಳ್ಳು ದೇವರುಗಳನ್ನು ಆರಾಧಿಸ್ತಿದ್ದ ಕಾನಾನ್ಯರು ಅವಳ ಹೆತ್ತವರಾಗಿದ್ದರು. ತುಂಬಾ ವರ್ಷಗಳಿಂದ, ದಾವೀದನು ಯೆರೂಸಲೇಮನ್ನ ವಶಮಾಡಿಕೊಳ್ಳುವ ತನಕ ಅದು ಕಾನಾನಿನ ಯೆಬೂಸಿಯರ ಅಧೀನತೆಯಲ್ಲಿತ್ತು. ಕೊಳಕಾಗಿರೋ ಆ ಕೂಸಿನ ಮೇಲೆ ಯೆಹೋವ ದೇವ್ರಿಗೆ ಕನಿಕರ ಹುಟ್ಟಿ ಅದಕ್ಕೆ ಸ್ನಾನ ಮಾಡಿಸಿ, ಬೇಕಾಗಿರೋದನ್ನೆಲ್ಲಾ ಕೊಟ್ಟನು. ದೊಡ್ಡವಳಾದ ಮೇಲೆ ಆ ಮಗು ಯೆಹೋವನ ಹೆಂಡತಿ ಆದಳು. ಇಸ್ರಾಯೇಲ್ಯರು ಸಮಯಾನಂತ್ರ ಯೆರೂಸಲೇಮಿಗೆ ಬಂದು ನೆಲೆಸಿದಾಗ ಅದು ಯೆಹೋವನ ಹೆಂಡ್ತಿ ತರ ಆಯ್ತು. ಅವ್ರು ಮೋಶೆಯ ಕಾಲದಲ್ಲೇ ಸ್ವಇಚ್ಛೆಯಿಂದ ಯೆಹೋವನ ಜೊತೆ ಒಂದು ಒಪ್ಪಂದ ಮಾಡ್ಕೊಂಡಿದ್ರು. (ವಿಮೋ. 24:7, 8) ಆಮೇಲೆ ಯೆರೂಸಲೇಮ್‌ ಇಸ್ರಾಯೇಲಿನ ರಾಜಧಾನಿ ಆದಾಗ ಯೆಹೋವನು ಅದನ್ನ ಆಶೀರ್ವದಿಸಿದನು, ಅದಕ್ಕೆ ಸಿರಿ-ಸಂಪತ್ತನ್ನ ಕೊಟ್ಟನು ಮತ್ತು ಅಲಂಕರಿಸಿದನು. ಇದು ಒಬ್ಬ ಶ್ರೀಮಂತ ಗಂಡ ತನ್ನ ಹೆಂಡತಿಗೆ ಒಡವೆಗಳನ್ನ ಕೊಟ್ಟು ಖುಷಿಪಡಿಸೋ ತರ ಇತ್ತು.—ಯೆಹೆ. 16:1-14.

ಯೆರೂಸಲೇಮಿನಲ್ಲಿ ವಿಗ್ರಹಾರಾಧನೆಯನ್ನ ಶುರುಮಾಡೋಕೆ ಸೊಲೊಮೋನನನ್ನ ಅನ್ಯದೇಶದ ಹೆಂಡತಿಯರು ಪ್ರೇರಿಸಿದ್ರು (ಪ್ಯಾರ 12 ನೋಡಿ)

12. ಯೆರೂಸಲೇಮಿನಲ್ಲಿ ವಿಗ್ರಹಾರಾಧನೆ ಹೇಗೆ ನುಸುಳಿತು?

12 ಆಮೇಲೆ ಏನಾಯ್ತು ಅಂತ ಗಮನಿಸಿ. ಯೆಹೋವನು ಹೀಗೆ ಹೇಳಿದನು: “ನೀನು ನಿನ್ನ ಸೌಂದರ್ಯವನ್ನೇ ನಂಬೋಕೆ ಶುರು ಮಾಡ್ದೆ. ನಿನ್ನ ಕೀರ್ತಿಯಿಂದಾಗಿ ವೇಶ್ಯೆ ಆದೆ. ದಾರಿಯಲ್ಲಿ ಹೋಗಿ ಬರೋ ಒಬ್ಬೊಬ್ಬನ ಜೊತೆನೂ ಸಂಬಂಧ ಇಟ್ಕೊಂಡು ವೇಶ್ಯಾವಾಟಿಕೆ ಮಾಡ್ದೆ ಮತ್ತು ನಿನ್ನನ್ನೇ ಅವ್ರಿಗೆ ಒಪ್ಪಿಸ್ಕೊಂಡೆ.” (ಯೆಹೆ. 16:15) ಸೊಲೊಮೋನನ ಕಾಲದಲ್ಲಿ ಯೆಹೋವನು ತನ್ನ ಜನ್ರನ್ನ ಎಷ್ಟರ ಮಟ್ಟಿಗೆ ಆಶೀರ್ವದಿಸಿದನಂದ್ರೆ ಯೆರೂಸಲೇಮ್‌ ಬೇರೆಲ್ಲ ಪಟ್ಟಣಗಳಿಗಿಂತ ಶ್ರೀಮಂತವಾಯ್ತು ಮತ್ತು ಸುಂದರವಾಗಿ ಕಾಣಿಸ್ತು. (1 ಅರ. 10:23, 27) ಆದ್ರೆ ಆಮೇಲೆ ಯೆರೂಸಲೇಮಿನ ಜನ್ರು ಯೆಹೋವನಿಗೆ ದ್ರೋಹ ಬಗೆಯೋಕೆ ಶುರು ಮಾಡಿದ್ರು. ಸೊಲೊಮೋನನು ತನ್ನ ವಿಧರ್ಮಿ ಹೆಂಡತಿಯರನ್ನ ಮೆಚ್ಚಿಸೋಕೆ ಯೆರೂಸಲೇಮಿನಲ್ಲಿ ಸುಳ್ಳು ದೇವರುಗಳ ಆರಾಧನೆಯನ್ನ ಶುರು ಮಾಡಿದನು. (1 ಅರ. 11:1-8) ಅವನ ನಂತ್ರ ಬಂದ ಕೆಲವು ರಾಜರು ಅವನಿಗಿಂತ ಕೆಟ್ಟದಾಗಿ ನಡ್ಕೊಂಡ್ರು. ಇಡೀ ಪಟ್ಟಣವನ್ನ ಸುಳ್ಳು ಆರಾಧನೆಯಿಂದ ತುಂಬಿಸಿ ಬಿಟ್ರು. ಜನ್ರು ತನಗೆ ಈ ರೀತಿ ದ್ರೋಹ ಬಗೆದು ವೇಶ್ಯೆ ತರ ನಡ್ಕೊಂಡಾಗ ಯೆಹೋವನಿಗೆ ಹೇಗೆ ಅನಿಸ್ತು? ಆತನು ಹೀಗೆ ಹೇಳಿದನು: “ಅಂಥ ವಿಷ್ಯ ಆಗಬಾರದಾಗಿತ್ತು, ಯಾವತ್ತೂ ನಡಿಬಾರದಾಗಿತ್ತು.” (ಯೆಹೆ. 16:16) ಆದ್ರೆ ಜನ ಬದಲಾಗೋದು ಬಿಟ್ಟು ಇನ್ನೂ ನೀಚ ಕೆಲ್ಸಗಳನ್ನ ಮಾಡಿದ್ರು!

ಕೆಲವು ಇಸ್ರಾಯೇಲ್ಯರು ಮೋಲೆಕನಂಥ ಸುಳ್ಳು ದೇವರುಗಳಿಗೆ ತಮ್ಮ ಮಕ್ಕಳನ್ನ ಬಲಿ ಅರ್ಪಿಸಿದ್ರು

13. ಯೆರೂಸಲೇಮಲ್ಲಿ ದೇವಜನರು ಯಾವ ತಪ್ಪುಗಳನ್ನ ಮಾಡಿದ್ರು?

13 ಯೆಹೋವನು ಯೆರೂಸಲೇಮಿನ ಬಗ್ಗೆ ಹೀಗೆ ಹೇಳಿದನು: “ನೀನು ಇಷ್ಟೆಲ್ಲ ವೇಶ್ಯಾವಾಟಿಕೆ ಮಾಡಿದ್ದು ಸಾಲದು ಅಂತ ನೀನು ಹೆತ್ತ ನನ್ನ ಮಕ್ಕಳನ್ನ ಮೂರ್ತಿಗಳಿಗೆ ಬಲಿ ಕೊಟ್ಟೆ. ನನ್ನ ಮಕ್ಕಳನ್ನ ಸಾಯಿಸಿ ಬೆಂಕಿಯಲ್ಲಿ ಆಹುತಿ ಕೊಟ್ಟೆ.” ಇದ್ರಿಂದ ಯೆಹೋವನಿಗೆ ತುಂಬಾ ನೋವಾಯ್ತು. (ಯೆಹೆ. 16:20, 21) ಯೆಹೋವನ ಜನ್ರು ಈ ರೀತಿ ನೀಚ ಕೆಲಸಗಳನ್ನ ಮಾಡುವಾಗ ಸೈತಾನ ಎಷ್ಟು ಕ್ರೂರಿಯಾಗಿದ್ದಾನೆ ಅಂತ ಗೊತ್ತಾಗುತ್ತೆ. ಅವನ ನಿಜ ಬಣ್ಣ ಬಯಲಾಗುತ್ತೆ. ಇಂಥಾ ಕೆಲ್ಸಗಳನ್ನ ಮಾಡೋಕೆ ಅವನೇ ಜನರನ್ನ ಪ್ರೇರಿಸ್ತಾನೆ ಮತ್ತು ಅದನ್ನ ನೋಡಿ ಖುಷಿಪಡ್ತಾನೆ. ಯೆಹೋವನು ಎಲ್ಲವನ್ನ ನೋಡ್ತಿದ್ದಾನೆ ಮತ್ತು ಸೈತಾನನು ಮಾಡಿರೋ ಎಲ್ಲಾ ಕೃತ್ಯಗಳ ಪರಿಣಾಮವನ್ನು ಆತನು ಸರಿಮಾಡ್ತಾನೆ ಮತ್ತು ಎಲ್ಲರಿಗೆ ನ್ಯಾಯ ಮಾಡ್ತಾನೆ.—ಯೋಬ 34:24 ಓದಿ.

14. ಯೆರೂಸಲೇಮಿನ ಅಕ್ಕಂದಿರು ಯಾರು? ಆ ಮೂವರಲ್ಲಿ ಹೆಚ್ಚು ನೀಚ ಕೆಲಸ ಮಾಡಿದವಳು ಯಾರು?

14 ಯೆರೂಸಲೇಮಿಗೆ ಯಾವತ್ತೂ ತನ್ನ ತಪ್ಪಿನ ಅರಿವಾಗಲಿಲ್ಲ. ಅವಳು ವೇಶ್ಯಾವಾಟಿಕೆ ಮಾಡ್ತಾ ಹೋದಳು. ಅವಳು ಮುಂಚೆ ಇದ್ದ ವೇಶ್ಯೆಯರಿಗಿಂತ ನಾಚಿಕೆಗೆಟ್ಟ ಕೆಲ್ಸಗಳನ್ನ ಮಾಡ್ತಿದ್ದಾಳೆ ಅಂತ ಯೆಹೋವನು ಹೇಳಿದನು. ಯಾಕಂದ್ರೆ ತನ್ನ ಜೊತೆ ಅನೈತಿಕ ಕೆಲ್ಸಗಳನ್ನ ಮಾಡೋಕೆ ಅವಳೇ ದುಡ್ಡು ಕೊಟ್ಟು ಜನ್ರನ್ನ ಖರೀದಿಸ್ತಿದ್ದಳು! (ಯೆಹೆ. 16:34) ಯೆರೂಸಲೇಮ್‌ ಅವಳ “ತಾಯಿಯಂತೆ” ಇದ್ದಾಳೆ ಅಂತ ಯೆಹೋವನು ಹೇಳಿದನು. ಅಂದ್ರೆ ಇಸ್ರಾಯೇಲ್ಯರು, ಯೆರೂಸಲೇಮಲ್ಲಿ ಮುಂಚೆ ಇದ್ದ ಸುಳ್ಳು ಆರಾಧಕರ ತರನೇ ಆಗಿದ್ರು. (ಯೆಹೆ. 16:44, 45) ಅವರು ಎಲ್ಲಾ ಕೆಟ್ಟ ಕೆಲಸಗಳನ್ನ ಮಾಡ್ತಿದ್ರು. ಯೆರೂಸಲೇಮಿಗೂ ಮುಂಚೆ ಸಮಾರ್ಯ ಕೂಡ ಯೆಹೋವನಿಗೆ ನಂಬಿಕೆ ದ್ರೋಹ ಮಾಡಿ ಆತನಿಂದ ದೂರ ಹೋಗಿತ್ತು. ಹಾಗಾಗಿ ಸಮಾರ್ಯ ಯೆರೂಸಲೇಮಿನ ಅಕ್ಕ ಅಂತ ಯೆಹೋವನು ಹೇಳಿದನು. ಯೆರೂಸಲೇಮಿಗೆ ಇನ್ನೊಬ್ಬ ಅಕ್ಕ ಕೂಡ ಇದ್ದಾಳೆ ಅಂತನೂ ಹೇಳಿದನು. ಅದೇ ಸೋದೋಮ್‌. ಅಹಂಕಾರದಿಂದ ನೀಚ ಕೃತ್ಯಗಳನ್ನ ಮಾಡುತ್ತಿದ್ದ ಅವಳನ್ನ ಯೆಹೋವನು ಹೇಗೆ ನಾಶ ಮಾಡಿದನು ಅಂತ ಎಲ್ಲರಿಗೂ ಗೊತ್ತಿತ್ತು. ಆದ್ರೆ ಯೆರೂಸಲೇಮ್‌ ತನ್ನ ಅಕ್ಕಂದಿರಾದ ಸಮಾರ್ಯ ಮತ್ತು ಸೊದೋಮಿಗಿಂತ ಕೀಳಾಗಿ ನಡ್ಕೊಂಡಿದ್ದಾಳೆ ಅಂತ ಯೆಹೋವನು ಹೇಳಿದನು. (ಯೆಹೆ. 16:46-50) ಎಷ್ಟೇ ಎಚ್ಚರಿಕೆಗಳನ್ನ ಕೊಟ್ರೂ ಯೆಹೋವ ದೇವ್ರ ಮಾತಿಗೆ ಒಂಚೂರೂ ಬೆಲೆ ಕೊಡದೆ ದೇವರ ಸೇವಕರು ಕೆಟ್ಟ ಕೆಲಸಗಳನ್ನ ಮಾಡ್ತಾ ಹೋದ್ರು.

15. ಯೆಹೋವನು ಯೆರೂಸಲೇಮಿನ ವಿರುದ್ಧ ಯಾಕೆ ತೀರ್ಪು ಕೊಟ್ಟನು? ಅವರಿಗೆ ಯಾವ ನಿರೀಕ್ಷೆ ಕೊಟ್ಟನು?

15 ಹಾಗಾದ್ರೆ ಯೆಹೋವನು ಏನು ಮಾಡಲಿದ್ದನು? ಯೆಹೋವನು ಹೀಗೆ ಹೇಳಿದನು: “ನೀನು ಯಾರಿಗೆಲ್ಲ ಸುಖಕೊಟ್ಟಿಯೋ ಆ ಎಲ್ಲ ಗಂಡಸ್ರನ್ನೂ . . . ಒಟ್ಟುಸೇರಿಸ್ತೀನಿ” ಮತ್ತು “ನಾನು ನಿನ್ನನ್ನ ಅವ್ರ ಕೈಗೆ ಒಪ್ಪಿಸ್ತೀನಿ.” ತನ್ನ ಜನ್ರು ಹಿಂದೆ ಯಾವ ದೇಶಗಳ ಜೊತೆ ಮಿತ್ರತ್ವ ಬೆಳೆಸಿದ್ರೋ ಆ ದೇಶಗಳೇ ಯೆರೂಸಲೇಮಿನ ಸಿರಿಸಂಪತ್ತನ್ನ ದೋಚಿಕೊಳ್ಳಲಿದ್ರು, ಅವಳನ್ನ ಹಾಳು ಮಾಡಲಿದ್ರು. “ಅವರು ನಿನ್ನನ್ನ ಕಲ್ಲು ಹೊಡಿದು ಸಾಯಿಸ್ತಾರೆ, ಕತ್ತಿಗಳಿಂದ ಕೊಲ್ತಾರೆ” ಅಂತನೂ ಯೆಹೋವನು ಹೇಳಿದನು. ಯೆಹೋವನು ಯಾಕೆ ಈ ರೀತಿ ತೀರ್ಪು ಕೊಟ್ಟನು? ತನ್ನ ಜನರನ್ನ ಸಂಪೂರ್ಣವಾಗಿ ನಾಶ ಮಾಡೋದು ಆತನ ಉದ್ದೇಶ ಆಗಿರಲಿಲ್ಲ. ಬದಲಿಗೆ “ನಾನು ನಿನ್ನ ವೇಶ್ಯಾವಾಟಿಕೆಯನ್ನ ನಿಲ್ಲಿಸಿಬಿಡ್ತೀನಿ” ಅಂತ ಯೆಹೋವನು ಹೇಳಿದನು. ಅಷ್ಟೇ ಅಲ್ಲ “ನಾನು ನಿನ್ನ ಮೇಲಿರೋ ಕೋಪವನ್ನ ತೀರಿಸ್ಕೊಳ್ತೀನಿ. ಆಗ ನಿನ್ನ ಮೇಲಿರೋ ನನ್ನ ಕ್ರೋಧವು ಹೋಗುತ್ತೆ, ನನ್ನ ಕೋಪ ತಣ್ಣಗಾಗುತ್ತೆ. ಇನ್ಮೇಲೆ ನಾನು ಸಿಟ್ಟು ಮಾಡ್ಕೊಳಲ್ಲ” ಅಂದನು. ನಾವು ಈ ಪುಸ್ತಕದ 9 ನೇ ಅಧ್ಯಾಯದಲ್ಲಿ ನೋಡಿದ ಹಾಗೆ ಯೆಹೋವನ ಮುಖ್ಯ ಉದ್ದೇಶ ಬಂಧಿವಾಸದ ನಂತ್ರ ತನ್ನ ಜನ್ರನ್ನ ಬಿಡುಗಡೆ ಮಾಡಿ ಪುನಃಸ್ಥಾಪಿಸೋದೇ ಆಗಿತ್ತು. ಯಾಕೆ? ಯಾಕಂದ್ರೆ ಯೆಹೋವನು ಹೀಗೆ ಹೇಳಿದನು: “ನೀನು ಯುವತಿ ಆಗಿದ್ದಾಗ ನಾನು ನಿನ್ನ ಜೊತೆ ಮಾಡ್ಕೊಂಡಿದ್ದ ಒಪ್ಪಂದವನ್ನ ನೆನಪಿಸ್ಕೊಳ್ತೀನಿ.” (ಯೆಹೆ. 16:37-42, 60) ತನ್ನ ಜನ್ರು ನಿಷ್ಠೆ ತೋರಿಸದೇ ಇದ್ರೂ ಯೆಹೋವನು ಮಾತ್ರ ಯಾವಾಗಲೂ ನಿಷ್ಠನಾಗಿದ್ದನು.—ಪ್ರಕಟನೆ 15:4 ಓದಿ.

16, 17. (ಎ) ಒಹೊಲ ಮತ್ತು ಒಹೊಲೀಬ ಸುಳ್ಳು ಕ್ರೈಸ್ತ ಧರ್ಮಗಳನ್ನ ಸೂಚಿಸಲ್ಲ ಅಂತ ಯಾಕೆ ಹೇಳಬಹುದು? (“ವೇಶ್ಯೆಯರಾದ ಅಕ್ಕ-ತಂಗಿ” ಅನ್ನೋ ಚೌಕ ನೋಡಿ.) (ಬಿ) ಯೆಹೆಜ್ಕೇಲ ಪುಸ್ತಕದ 16 ಮತ್ತು 23 ನೇ ಅಧ್ಯಾಯದಿಂದ ನಾವೇನು ಕಲಿಬಹುದು?

16 ಯೆಹೆಜ್ಕೇಲ 16 ನೇ ಅಧ್ಯಾಯದಲ್ಲಿರೋ ಯೆಹೋವನ ಮಾತಿನಿಂದ ದೇವರ ನೀತಿಯ ಮಟ್ಟಗಳ ಬಗ್ಗೆ, ನ್ಯಾಯದ ಬಗ್ಗೆ, ಕರುಣೆಯ ಬಗ್ಗೆ ನಾವು ತುಂಬಾ ವಿಷಯಗಳನ್ನ ಕಲಿತೇವೆ. ಯೆಹೆಜ್ಕೇಲ 23 ನೇ ಅಧ್ಯಾಯದಲ್ಲೂ ನಾವು ಇದೇ ವಿಷಯಗಳನ್ನ ಕಲಿಬಹುದು. ತನ್ನ ಜನ್ರು ಮಾಡಿದ ತಪ್ಪು ಕೆಲ್ಸಗಳ ಬಗ್ಗೆ ಯೆಹೋವ ದೇವ್ರು ನೇರವಾಗಿ ಹೇಳಿದ್ದಾನೆ. ಇದನ್ನ ಈಗಿನ ಕ್ರೈಸ್ತರು ಎಚ್ಚರಿಕೆಯಾಗಿ ತಗೊಬೇಕು. ಯೆಹೂದ ಮತ್ತು ಯೆರೂಸಲೇಮಿನ ತರ ಯಾವತ್ತೂ ಯೆಹೋವನ ಮನಸ್ಸನ್ನು ನೋಯಿಸಬಾರದು. ಆದ್ರಿಂದ ನಾವು ಎಲ್ಲಾ ರೀತಿ ಮೂರ್ತಿಪೂಜೆಯಿಂದ ದೂರ ಇರಬೇಕು. ಇದ್ರಲ್ಲಿ ದುರಾಸೆ, ಹಣ ಮತ್ತು ವಸ್ತುಗಳ ಆಸೆ ಸೇರಿದೆ. (ಮತ್ತಾ. 6:24; ಕೊಲೊ. 3:5) ಯೆಹೋವ ದೇವ್ರು ಈ ಕೊನೆ ದಿನಗಳಲ್ಲಿ ಶುದ್ಧ ಆರಾಧನೆಯನ್ನ ಪುನಃಸ್ಥಾಪಿಸಿದ್ದಾನೆ. ಅದು ಮತ್ತೆ ಯಾವತ್ತೂ ಅಶುದ್ಧ ಆಗೋಕೆ ಆತನು ಬಿಡಲ್ಲ. ಅದಕ್ಕೆ ನಾವು ಎಷ್ಟು ಆಭಾರಿಗಳಾಗಿರಬೇಕಲ್ವಾ! ದೇವರ ಇಸ್ರಾಯೇಲಿನ ಜೊತೆಗೆ ಯೆಹೋವನು “ಒಂದು ಶಾಶ್ವತ ಒಪ್ಪಂದ” ಮಾಡಿದ್ದಾನೆ. (ಯೆಹೆ. 16:60) ಈ ಒಪ್ಪಂದ ಮುರಿದು ಹೋಗಲ್ಲ. ಯಾಕಂದ್ರೆ ಆಧ್ಯಾತ್ಮಿಕ ಇಸ್ರಾಯೇಲ್‌ ಯಾವತ್ತೂ ನಂಬಿಕೆ ದ್ರೋಹ ಮಾಡಲ್ಲ. ಆದ್ರಿಂದ ಶುದ್ಧ ಜನರೊಂದಿಗೆ ಸಹವಾಸ ಮಾಡಲು ನಮಗೆ ಸಿಕ್ಕಿರೋ ಅವಕಾಶವನ್ನ ನಾವು ಯಾವತ್ತೂ ಕಡೆಗಣಿಸಬಾರದು.

17 ಹಾಗಾದ್ರೆ ವೇಶ್ಯೆಯರ ಬಗ್ಗೆ ಯೆಹೆಜ್ಕೇಲನ ಪುಸ್ತಕದಲ್ಲಿ ತಿಳಿಸಲಾಗಿರುವ ಯೆಹೋವ ದೇವರ ಮಾತಿಂದ “ಪ್ರಸಿದ್ಧ ವೇಶ್ಯೆ” ಮಹಾ ಬಾಬೆಲ್‌ ಬಗ್ಗೆ ನಾವೇನು ಕಲಿಬಹುದು? ಇದನ್ನೇ ಮುಂದೆ ನೋಡೋಣ.

“ಅದು ಇನ್ಯಾವತ್ತೂ ಕಾಣಿಸಲ್ಲ”

18, 19. ಯೆಹೆಜ್ಕೇಲನ ಪುಸ್ತಕದಲ್ಲಿರೋ ವೇಶ್ಯೆಯರಿಗೂ ಪ್ರಕಟನೆ ಪುಸ್ತಕದಲ್ಲಿ ತಿಳಿಸಲಾಗಿರೋ ವೇಶ್ಯೆಗೂ ಯಾವ ಹೋಲಿಕೆ ಇದೆ?

18 ಯೆಹೋವ ದೇವ್ರು ಬದಲಾಗಲ್ಲ. (ಯಾಕೋ. 1:17) ಸುಳ್ಳು ಧರ್ಮವಾದ ಮಹಾ ಬಾಬೆಲಿನ ಬಗ್ಗೆ ಆತನಿಗಿರೋ ಮನೋಭಾವ ಯಾವತ್ತೂ ಬದಲಾಗಲ್ಲ. ಹಾಗಾಗಿ ಯೆಹೆಜ್ಕೇಲನ ಪುಸ್ತಕದಲ್ಲಿ ತಿಳಿಸಿರೋ ವೇಶ್ಯೆಯರಿಗೆ ಆದ ಶಿಕ್ಷೆಗೂ ಪ್ರಕಟನೆ ಪುಸ್ತಕದಲ್ಲಿ ಹೇಳಿರೋ ‘ಪ್ರಸಿದ್ಧ ವೇಶ್ಯೆಗೆ’ ಆಗೋ ಶಿಕ್ಷೆಗೂ ಹೋಲಿಕೆ ಇರೋದ್ರಲ್ಲಿ ಆಶ್ಚರ್ಯವೇ ಇಲ್ಲ.

19 ಇದಕ್ಕೆ ಒಂದು ಉದಾಹರಣೆಯನ್ನ ನೋಡೋಣ. ಯೆಹೆಜ್ಕೇಲನ ಪುಸ್ತಕದಲ್ಲಿ ತಿಳಿಸಲಾಗಿರೋ ವೇಶ್ಯೆಯರಿಗೆ ಯೆಹೋವ ದೇವ್ರು ನೇರವಾಗಿ ಶಿಕ್ಷೆ ಕೊಡಲಿಲ್ಲ. ಬದಲಿಗೆ ಅವಳು ಯಾವ ದೇಶದವ್ರ ಜೊತೆ ಅನೈತಿಕ ಸಂಬಂಧ ಇಟ್ಕೊಂಡಳೋ ಆ ದೇಶದವ್ರೇ ಅವಳನ್ನ ನಾಶ ಮಾಡಿದ್ರು. ಅದೇ ರೀತಿಯಲ್ಲಿ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯ ಇವತ್ತು ‘ಭೂಮಿಯ ರಾಜರ’ ಜೊತೆ ಸಂಬಂಧವನ್ನು ಇಟ್ಕೊಂಡಿದೆ. ಹಾಗಾದ್ರೆ ಅವಳಿಗೆ ಯಾರಿಂದ ನಾಶನ ಬರುತ್ತೆ? “ಭೂಮಿಯ ರಾಜರು” ಅಂದ್ರೆ ರಾಜಕೀಯ ಶಕ್ತಿಗಳು “ಆ ವೇಶ್ಯೆಯನ್ನ ದ್ವೇಷಿಸಿ ಅವಳ ಹತ್ರ ಇರೋದನ್ನೆಲ್ಲ ಕಿತ್ಕೊಂಡು ಬಟ್ಟೆ ತೆಗೆದುಹಾಕಿ ಅವಳ ಮಾಂಸವನ್ನ ತಿಂದು ಬೆಂಕಿಯಿಂದ ಅವಳನ್ನ ಪೂರ್ತಿಯಾಗಿ ಸುಟ್ಟು ಹಾಕುತ್ತೆ.” ಇಲ್ಲಿಯವರೆಗೂ ಅವಳ ಜೊತೆನೇ ಇದ್ದ ರಾಜಕೀಯ ಶಕ್ತಿಗಳು ಯಾಕೆ ಹೀಗೆ ಮಾಡ್ತವೆ? “ಯಾಕಂದ್ರೆ ದೇವರು ತನ್ನ ಯೋಚ್ನೆಯನ್ನ ಅವ್ರ ತಲೆಗೆ ಹಾಕ್ತಾನೆ.”—ಪ್ರಕ. 17:1-3, 15-17.

20. ಮಹಾ ಬಾಬೆಲಿನ ತೀರ್ಪು ಸದಾಕಾಲಕ್ಕೂ ಇರೋ ತೀರ್ಪು ಅಂತ ಹೇಗೆ ಹೇಳಬಹುದು?

20 ಯೆಹೋವನು ಭೂಮಿಯ ಎಲ್ಲಾ ಸುಳ್ಳು ಧರ್ಮಗಳನ್ನ ನಾಶ ಮಾಡೋಕೆ ರಾಜಕೀಯ ಶಕ್ತಿಗಳನ್ನ ಬಳಸ್ತಾನೆ. ಇದ್ರಲ್ಲಿ ಸುಳ್ಳು ಕ್ರೈಸ್ತ ಧರ್ಮದ ಅನೇಕ ಪಂಗಡಗಳು ಸೇರಿವೆ. ಈ ಸಲ ಯೆಹೋವನು ಅವರನ್ನ ಕ್ಷಮಿಸಲ್ಲ. ಅದೇ ಕೊನೇ ನ್ಯಾಯತೀರ್ಪಾಗಿರುತ್ತೆ, ಅವ್ರಿಗೆ ಬದಲಾಗೋಕೆ ಇನ್ನೊಂದು ಅವಕಾಶ ಸಿಗಲ್ಲ. ಪ್ರಕಟನೆ ಪುಸ್ತಕದಲ್ಲಿ ಬಾಬೆಲಿನ ಬಗ್ಗೆ, “ಅದು ಇನ್ಯಾವತ್ತೂ ಕಾಣಿಸಲ್ಲ” ಅಂತ ಹೇಳಲಾಗಿದೆ. (ಪ್ರಕ. 18:21) ದೇವದೂತರು ಅವಳ ನಾಶನದಲ್ಲಿ ಖುಷಿ ಪಡ್ತಾ ಹೀಗೆ ಹೇಳ್ತಾರೆ: “ಯಾಹುವನ್ನ ಸ್ತುತಿಸಿ! ಬಾಬೆಲ್‌ ಪಟ್ಟಣ ಸುಡ್ತಾ ಇರುವಾಗ ಆ ಹೊಗೆ ಯಾವಾಗ್ಲೂ ಮೇಲೆ ಹೋಗ್ತಾ ಇರುತ್ತೆ.” (ಪ್ರಕ. 19:3) ಈ ತೀರ್ಪು ಸದಾಕಾಲಕ್ಕೂ ಇರುವ ತೀರ್ಪು. ಮುಂದೆ ಯಾವ ಸುಳ್ಳು ಧರ್ಮನೂ ಶುದ್ಧ ಆರಾಧನೆಯನ್ನ ಭ್ರಷ್ಟ ಮಾಡೋಕೆ ಯೆಹೋವನು ಅನುಮತಿಸಲ್ಲ. ಬಾಬೆಲಿನ ನಾಶನ ಎಷ್ಟು ಭಯಂಕರ ಆಗಿರುತ್ತಂದ್ರೆ ಅದ್ರಿಂದ ದಟ್ಟವಾದ ಹೊಗೆ ಯಾವಾಗಲೂ ಬರ್ತಾನೇ ಇರುತ್ತೆ.

ಮಹಾ ಬಾಬೆಲ್‌ ಯಾವ ದೇಶಗಳ ಜೊತೆ ಸಂಬಂಧವನ್ನಿಟ್ಟುಕೊಂಡು ಅಧಿಕಾರ ಚಲಾಯಿಸ್ತಿದ್ದಾಳೋ ಆ ದೇಶಗಳೇ ಅವಳನ್ನ ನಾಶಮಾಡ್ತವೆ (ಪ್ಯಾರ 19, 20 ನೋಡಿ)

21. ಸುಳ್ಳು ಧರ್ಮಗಳು ನಾಶವಾದಾಗ ಏನು ಶುರುವಾಗುತ್ತೆ? ಆ ಸಮಯದ ಕೊನೆಯಲ್ಲಿ ಏನಾಗುತ್ತೆ?

21 ಈ ಲೋಕದ ಸರ್ಕಾರಗಳು ಸುಳ್ಳು ಧರ್ಮಗಳನ್ನ ನಾಶಮಾಡುವಾಗ ಅದ್ರ ವಿರುದ್ಧ ಯೆಹೋವನ ನ್ಯಾಯತೀರ್ಪು ಜಾರಿಯಾಗುತ್ತೆ. ಹೀಗೆ ಯೆಹೋವನ ಉದ್ದೇಶ ನೆರವೇರುತ್ತೆ. ಈ ಘಟನೆಯಿಂದ ಮಹಾಸಂಕಟ ಶುರುವಾಗುತ್ತೆ. ಆಗ ಹಿಂದೆಂದಿಗಿಂತ ಹೆಚ್ಚು ಕಷ್ಟ, ಸಂಕಟ ಇರುತ್ತೆ. (ಮತ್ತಾ. 24:21) ಇದ್ರ ಕೊನೆಯಲ್ಲಿ ಹರ್ಮಗೆದ್ದೋನ್‌ ಯುದ್ಧ ಆಗುತ್ತೆ. ಇದು ಯೆಹೋವನು ಈ ಲೋಕದ ದುಷ್ಟ ವ್ಯವಸ್ಥೆಯನ್ನ ನಾಶ ಮಾಡೋ ಯುದ್ಧ ಆಗಿದೆ. (ಪ್ರಕ. 16:14, 16) ಮಹಾಸಂಕಟ ಹೇಗೆ ಶುರುವಾಗುತ್ತೆ ಮತ್ತು ಆಗ ಏನಾಗುತ್ತೆ ಅನ್ನೋದ್ರ ಬಗ್ಗೆ ಯೆಹೆಜ್ಕೇಲನ ಪುಸ್ತಕದಲ್ಲಿ ತುಂಬ ಮಾಹಿತಿ ಇದೆ. ಅದ್ರ ಬಗ್ಗೆ ಮುಂದಿನ ಅಧ್ಯಾಯಗಳಲ್ಲಿ ನೋಡಲಿದ್ದೇವೆ. ಆದ್ರೆ ಈಗ ನಾವು ಯೆಹೆಜ್ಕೇಲ ಪುಸ್ತಕದ 16 ಮತ್ತು 23 ಅಧ್ಯಾಯದಿಂದ ಯಾವ ಪಾಠ ಕಲಿಬಹುದು ಅಂತ ನೋಡ್ತೇವೆ.

ಈ ಲೋಕದ ಸರ್ಕಾರಗಳು ಮಹಾ ಬಾಬೆಲಿನ ಮೇಲೆ ದೇವರ ನ್ಯಾಯತೀರ್ಪನ್ನ ತರಲಿವೆ (ಪ್ಯಾರ 21 ನೋಡಿ)

22, 23. ಯೆಹೆಜ್ಕೇಲ ಮತ್ತು ಪ್ರಕಟನೆ ಪುಸ್ತಕದಲ್ಲಿರೋ ವೇಶ್ಯೆಯರಿಂದ ನಾವು ಯಾವ ಪಾಠ ಕಲಿತೇವೆ?

22 ಯೆಹೋವನ ಜನರು ಶುದ್ಧ ಆರಾಧನೆಯಿಂದ ದೂರವಾಗೋ ತರ ಮಾಡೋಕೆ ಸೈತಾನ ತನ್ನಿಂದಾದ ಎಲ್ಲ ಪ್ರಯತ್ನ ಮಾಡ್ತಾನೆ. ಯಾರಾದ್ರೂ ಶುದ್ಧ ಆರಾಧನೆಯನ್ನ ಬಿಟ್ಟುಬಿಟ್ಟರೆ ಅಥವಾ ಯೆಹೆಜ್ಕೇಲ ಪುಸ್ತಕದಲ್ಲಿ ತಿಳಿಸಲಾದ ವೇಶ್ಯೆಯ ತರ ಯೆಹೋವನಿಗೆ ದ್ರೋಹ ಮಾಡಿದ್ರೆ ಸೈತಾನನಿಗೆ ಎಲ್ಲಿಲ್ಲದ ಖುಷಿ ಆಗುತ್ತೆ. ಅದಕ್ಕೇ, ಯೆಹೋವನಿಗೆ ಜನರು ತನ್ನನ್ನ ಬಿಟ್ಟು ಬೇರೆಯವರನ್ನ ಆರಾಧಿಸೋದನ್ನಾಗಲಿ, ದ್ರೋಹ ಬಗೆಯೋದನ್ನಾಗಲಿ ಸಹಿಸೋಕಾಗಲ್ಲ ಅನ್ನೋದನ್ನ ಮರೆಯಬೇಡಿ. (ಅರ. 25:11) ಹಾಗಾಗಿ ನಾವು ಸುಳ್ಳು ಧರ್ಮದಿಂದ ದೂರ ಇರಬೇಕು, ಯೆಹೋವನ ದೃಷ್ಟಿಯಲ್ಲಿ ‘ಅಶುದ್ಧವಾಗಿರೋ ಯಾವುದನ್ನೂ ಮುಟ್ಟಬಾರದು.’ (ಯೆಶಾ. 52:11) ಅಷ್ಟೇ ಅಲ್ಲ, ನಾವು ಯಾವುದೇ ರಾಜಕೀಯ ವಿಷಯಗಳಿಗೆ ತಲೆಹಾಕೋಕೆ ಹೋಗಬಾರದು. (ಯೋಹಾ. 15:19) ದೇಶಭಕ್ತಿ ಕೂಡ ಸುಳ್ಳು ಧರ್ಮದ ತರನೇ ಸೈತಾನನು ಬಳಸ್ತಿರೋ ಪಾಶವಾಗಿದೆ. ಅದಕ್ಕೇ ನಾವು ಅದ್ರ ಸಹವಾಸಕ್ಕೆ ಹೋಗಲೇಬಾರದು.

23 ಶುದ್ಧವಾದ ಆಧ್ಯಾತ್ಮಿಕ ಆಲಯದಲ್ಲಿ ಯೆಹೋವ ದೇವರನ್ನ ಆರಾಧಿಸೋದು ನಮಗೆ ಸಿಕ್ಕಿರೋ ಎಂಥ ಅಮೂಲ್ಯ ಅವಕಾಶ ಅಲ್ವಾ! ಈ ಅವಕಾಶಕ್ಕಾಗಿ ನಾವು ಎಷ್ಟು ಕೃತಜ್ಞತೆ ಹೇಳಿದ್ರೂ ಸಾಕಾಗಲ್ಲ. ಹಾಗಾಗಿ ಸುಳ್ಳು ಧರ್ಮಕ್ಕೆ ಸಂಬಂಧಪಟ್ಟ ಯಾವುದೇ ವಿಷಯಗಳಲ್ಲಿ ಯಾವತ್ತೂ ತಲೆ ಹಾಕದಿರೋಕೆ ದೃಢ ತೀರ್ಮಾನ ಮಾಡೋಣ.