ಮತ್ತಾಯ 6:1-34

 • ಬೆಟ್ಟದ ಭಾಷಣ (1-34)

  • ಒಳ್ಳೇ ಕೆಲಸಗಳನ್ನ ಮಾಡಿ ಡಂಗುರ ಸಾರಬೇಡಿ (1-4)

  • ಹೇಗೆ ಪ್ರಾರ್ಥನೆ ಮಾಡಬೇಕು (5-15)

   • ಮಾದರಿ ಪ್ರಾರ್ಥನೆ (9-13)

  • ಉಪವಾಸ (16-18)

  • ಭೂಮಿಯಲ್ಲಿ, ಸ್ವರ್ಗದಲ್ಲಿ ಇರೋ ಆಸ್ತಿಪಾಸ್ತಿ (19-24)

  • ಚಿಂತೆ ಮಾಡೋದನ್ನ ಬಿಟ್ಟುಬಿಡಿ (25-34)

   • ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಿ (33)

6  ಜನ ನೋಡಲಿ ಅಂತ ಒಳ್ಳೇ ಕೆಲಸ ಮಾಡಬೇಡಿ.+ ಹಾಗೆ ಮಾಡಿದ್ರೆ ಸ್ವರ್ಗದಲ್ಲಿರೋ ನಿಮ್ಮ ತಂದೆಯಿಂದ ನಿಮಗೆ ಯಾವುದೇ ಆಶೀರ್ವಾದ ಸಿಗಲ್ಲ.  ಹಾಗಾಗಿ ನೀನು ಬಡವರಿಗೆ ಸಹಾಯ ಮಾಡುವಾಗ* ಜನ್ರ ಹೊಗಳಿಕೆ ಸಿಗೋಕೆ ಸಭಾಮಂದಿರಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಪಟಿಗಳ ತರ ಡಂಗುರ ಸಾರಬೇಡ. ನಾನು ನಿಮಗೆ ನಿಜ ಹೇಳ್ತೀನಿ, ಅವ್ರಿಗೆ ಸಿಗಬೇಕಿದ್ದ ಆಶೀರ್ವಾದ ಆಗಲೇ ಸಿಕ್ಕಿರುತ್ತೆ.  ನೀನು ಸಹಾಯ ಮಾಡುವಾಗ ನಿನ್ನ ಬಲಗೈ ಮಾಡೋದು ಎಡಗೈಗೆ ಗೊತ್ತಾಗಬಾರದು.  ನೀನು ಮಾಡೋ ಸಹಾಯ ರಹಸ್ಯವಾಗಿರಲಿ. ಆಗ ರಹಸ್ಯ ಸ್ಥಳದಿಂದ ನೋಡೋ ನಿನ್ನ ತಂದೆ ನಿನ್ನನ್ನ ಆಶೀರ್ವದಿಸ್ತಾನೆ.+  ನೀವು ಪ್ರಾರ್ಥಿಸುವಾಗ ಕಪಟಿಗಳ ತರ ಪ್ರಾರ್ಥಿಸಬೇಡಿ.+ ಯಾಕಂದ್ರೆ ಜನ ನೋಡಲಿ ಅಂತ ಅವರು ಸಭಾಮಂದಿರಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಿಂತು ಪ್ರಾರ್ಥನೆ ಮಾಡೋಕೆ ಇಷ್ಟಪಡ್ತಾರೆ.+ ನಾನು ನಿಮಗೆ ನಿಜ ಹೇಳ್ತೀನಿ, ಅವ್ರಿಗೆ ಸಿಗಬೇಕಾಗಿದ್ದ ಆಶೀರ್ವಾದ ಆಗಲೇ ಸಿಕ್ಕಿರುತ್ತೆ.  ಆದ್ರೆ ನೀನು ಪ್ರಾರ್ಥನೆ ಮಾಡುವಾಗ ಕೋಣೆಯೊಳಗೆ ಹೋಗಿ ಬಾಗಿಲು ಮುಚ್ಚಿ ರಹಸ್ಯ ಸ್ಥಳದಲ್ಲಿರೋ ನಿನ್ನ ತಂದೆಗೆ ಪ್ರಾರ್ಥನೆ ಮಾಡು.+ ಆಗ ರಹಸ್ಯ ಸ್ಥಳದಿಂದ ನೋಡೋ ನಿನ್ನ ತಂದೆ ನಿನ್ನನ್ನ ಆಶೀರ್ವದಿಸ್ತಾನೆ.  ನೀನು ಪ್ರಾರ್ಥನೆ ಮಾಡುವಾಗ ಲೋಕದ ಜನ್ರ ತರ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಬೇಡ. ಯಾಕಂದ್ರೆ ತುಂಬ ಮಾತಾಡಿದ್ರೆ ದೇವರು ಪ್ರಾರ್ಥನೆ ಕೇಳ್ತಾನೆ ಅಂತ ಅವರು ನೆನಸ್ತಾರೆ.  ನೀವು ಅವ್ರ ತರ ಆಗಬೇಡಿ. ಯಾಕಂದ್ರೆ ನೀವು ಕೇಳೋ ಮುಂಚೆನೇ ನಿಮಗೆ ಏನು ಬೇಕಂತ ಸ್ವರ್ಗದಲ್ಲಿರೋ ನಿಮ್ಮ ತಂದೆಗೆ ಗೊತ್ತು.+  ನೀವು ಹೇಗೆ ಪ್ರಾರ್ಥನೆ ಮಾಡಬೇಕಂದ್ರೆ:+ ‘ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು+ ಪವಿತ್ರವಾಗಲಿ.*+ 10  ನಿನ್ನ ಆಳ್ವಿಕೆ*+ ಬರಲಿ. ನಿನ್ನ ಇಷ್ಟ+ ಸ್ವರ್ಗದಲ್ಲಿ ನೆರವೇರೋ ತರ ಭೂಮಿಯಲ್ಲೂ ನೆರವೇರಲಿ.+ 11  ಇವತ್ತಿಗೆ ಬೇಕಾಗಿರೋ ಊಟನ ದಯವಿಟ್ಟು ಕೊಡು.+ 12  ಬೇರೆಯವರ ತಪ್ಪುಗಳನ್ನ* ನಾವು ಕ್ಷಮಿಸಿರೋ ತರ ನಮ್ಮ ತಪ್ಪುಗಳನ್ನೂ* ಕ್ಷಮಿಸು.+ 13  ಪರೀಕ್ಷೆ ಬಂದಾಗ ಸೋತು ಬಿದ್ದುಹೋಗದ ಹಾಗೆ+ ಕಾಪಾಡು. ಸೈತಾನನಿಂದ ನಮ್ಮನ್ನ ರಕ್ಷಿಸು.’+ 14  ನೀವು ಬೇರೆಯವರ ತಪ್ಪನ್ನ ಕ್ಷಮಿಸಿದ್ರೆ ಸ್ವರ್ಗದಲ್ಲಿರೋ ನಿಮ್ಮ ತಂದೆನೂ ನಿಮ್ಮನ್ನ ಕ್ಷಮಿಸ್ತಾನೆ.+ 15  ನೀವು ಬೇರೆಯವರ ತಪ್ಪನ್ನ ಕ್ಷಮಿಸಿಲ್ಲ ಅಂದ್ರೆ ಸ್ವರ್ಗದಲ್ಲಿರೋ ನಿಮ್ಮ ತಂದೆನೂ ನಿಮ್ಮನ್ನ ಕ್ಷಮಿಸಲ್ಲ.+ 16  ನೀವು ಉಪವಾಸ ಮಾಡುವಾಗ+ ಕಪಟಿಗಳ ತರ ಮುಖ ಸಪ್ಪಗೆ ಮಾಡ್ಕೋಬೇಡಿ. ಯಾಕಂದ್ರೆ ಅವರು ಉಪವಾಸ ಮಾಡುವಾಗ ಜನ್ರಿಗೆ ಗೊತ್ತಾಗಲಿ ಅಂತ ಮುಖ ಬಾಡಿಸ್ಕೊಳ್ತಾರೆ.+ ನಿಮಗೆ ನಿಜ ಹೇಳ್ತೀನಿ, ಅವ್ರಿಗೆ ಸಿಗಬೇಕಾಗಿದ್ದ ಆಶೀರ್ವಾದ ಆಗಲೇ ಸಿಕ್ಕಿರುತ್ತೆ. 17  ಆದ್ರೆ ನೀನು ಉಪವಾಸ ಮಾಡುವಾಗ ತಲೆಗೆ ಎಣ್ಣೆ ಹಚ್ಚಿ, ಮುಖ ತೊಳ್ಕೊ. 18  ಹಾಗೆ ಮಾಡಿದ್ರೆ ನೀನು ಉಪವಾಸ ಮಾಡ್ತಿರೋದು ಜನ್ರಿಗೆ ಗೊತ್ತಾಗಲ್ಲ. ರಹಸ್ಯ ಸ್ಥಳದಲ್ಲಿರೋ ನಿನ್ನ ತಂದೆಗೆ ಮಾತ್ರ ಗೊತ್ತಾಗುತ್ತೆ. ಆಗ ರಹಸ್ಯ ಸ್ಥಳದಿಂದ ನೋಡೋ ನಿನ್ನ ತಂದೆ ನಿನ್ನನ್ನ ಆಶೀರ್ವದಿಸ್ತಾನೆ. 19  ಭೂಮಿಯಲ್ಲಿ ನಿಮಗೋಸ್ಕರ ಆಸ್ತಿಪಾಸ್ತಿ ಕೂಡಿಸೋದನ್ನ ಬಿಟ್ಟುಬಿಡಿ.+ ಹುಳ ತಿಂದು ತುಕ್ಕು ಹಿಡಿದು ಅದು ಹಾಳಾಗಿ ಹೋಗುತ್ತೆ. ಕಳ್ಳರು ಕನ್ನಹಾಕಿ ದೋಚ್ಕೊಂಡು ಹೋಗ್ತಾರೆ. 20  ಅದ್ರ ಬದಲಿಗೆ ಸ್ವರ್ಗದಲ್ಲಿ ಆಸ್ತಿ ಕೂಡಿಸಿಡಿ.+ ಅಲ್ಲಿ ಹುಳ ತಿನ್ನಲ್ಲ, ತುಕ್ಕು ಹಿಡಿಯಲ್ಲ,+ ಕಳ್ಳರು ಕನ್ನಹಾಕಲ್ಲ. 21  ನಿನ್ನ ಆಸ್ತಿ ಎಲ್ಲಿರುತ್ತೋ ಅಲ್ಲೇ ನಿನ್ನ ಮನಸ್ಸೂ ಇರುತ್ತೆ. 22  ಕಣ್ಣು ದೇಹದ ದೀಪ.+ ಹಾಗಾಗಿ ಒಂದೇ ವಿಷ್ಯದ ಮೇಲೆ ಕಣ್ಣು ನೆಟ್ಟಿದ್ರೆ* ನಿನ್ನ ದೇಹವೆಲ್ಲ ಪ್ರಕಾಶಿಸುತ್ತೆ. 23  ನಿನ್ನ ಕಣ್ಣು ದುರಾಸೆಯಿಂದ ತುಂಬಿದ್ರೆ+ ನಿನ್ನ ದೇಹವೆಲ್ಲ ಕತ್ತಲಾಗುತ್ತೆ. ನಿನ್ನ ದೇಹಕ್ಕೆ ಬೆಳಕಾಗಿರೋ ಕಣ್ಣು ಕತ್ತಲಾದ್ರೆ ಆ ಕತ್ತಲೆ ತುಂಬ ಭಯಂಕರ ಇರುತ್ತಲ್ವಾ? 24  ಯಾವ ಮನುಷ್ಯನಿಗೂ ಇಬ್ಬರು ಯಜಮಾನರಿಗೆ ಸೇವೆಮಾಡೋಕಾಗಲ್ಲ. ಅವನು ಒಬ್ಬನನ್ನ ದ್ವೇಷಿಸಿ ಇನ್ನೊಬ್ಬನನ್ನ ಪ್ರೀತಿಸ್ತಾನೆ.+ ಇಲ್ಲಾಂದ್ರೆ ಒಬ್ಬನಿಗೆ ನಂಬಿಗಸ್ತನಾಗಿದ್ದು ಇನ್ನೊಬ್ಬನನ್ನ ಕೀಳಾಗಿ ನೋಡ್ತಾನೆ. ನೀವು ಒಂದೇ ಸಮಯದಲ್ಲಿ ದೇವರಿಗೂ ದುಡ್ಡಿಗೂ ದಾಸರಾಗಿ ಇರೋಕಾಗಲ್ಲ.+ 25  ಅದಕ್ಕೇ ನಾನು ನಿಮಗೆ ಹೀಗೆ ಹೇಳ್ತೀನಿ ಜೀವನ ಮಾಡೋಕೆ ಏನು ತಿನ್ನಬೇಕು, ಏನು ಕುಡಿಬೇಕು, ಏನು ಹಾಕಬೇಕು+ ಅಂತ ಯಾವತ್ತೂ ಚಿಂತೆಮಾಡಬೇಡಿ.+ ಊಟಕ್ಕಿಂತ ಪ್ರಾಣ, ಬಟ್ಟೆಗಿಂತ ದೇಹ ತುಂಬ ಪ್ರಾಮುಖ್ಯ ಅಲ್ವಾ?+ 26  ಆಕಾಶದಲ್ಲಿ ಹಾರೋ ಪಕ್ಷಿಗಳನ್ನ ಚೆನ್ನಾಗಿ ನೋಡಿ.+ ಅವು ಬಿತ್ತಲ್ಲ, ಕೊಯ್ಯಲ್ಲ, ಗೋಡೌನಲ್ಲಿ ತುಂಬಿಡಲ್ಲ. ಹಾಗಿದ್ರೂ ಸ್ವರ್ಗದಲ್ಲಿರೋ ನಿಮ್ಮ ತಂದೆ ಅವುಗಳನ್ನ ನೋಡ್ಕೊಳ್ತಾನೆ. ನೀವು ಪಕ್ಷಿಗಳಿಗಿಂತ ಹೆಚ್ಚು ಅಮೂಲ್ಯ ಅಲ್ವಾ? 27  ಚಿಂತೆಮಾಡಿ ನಿಮ್ಮಲ್ಲಿ ಯಾರಾದ್ರೂ ವಯಸ್ಸನ್ನ ಸ್ವಲ್ಪ ಆದ್ರೂ* ಹೆಚ್ಚಿಸ್ಕೊಂಡಿದ್ದೀರಾ?+ 28  ಬಟ್ಟೆ ಬಗ್ಗೆ ನೀವು ಯಾಕೆ ಚಿಂತೆ ಮಾಡ್ತೀರಾ? ಹೊಲದ ಲಿಲಿ ಹೂಗಳನ್ನ ನೋಡಿ ಕಲಿರಿ. ಅವು ದುಡಿಯಲ್ಲ, ನೇಯಲ್ಲ. 29  ನಾನು ನಿಮಗೆ ಹೇಳ್ತೀನಿ, ಈ ಒಂದು ಹೂವಿಗೆ ಇರುವಷ್ಟು ಸೌಂದರ್ಯ ರಾಜ ಸೊಲೊಮೋನ+ ಹಾಕ್ತಿದ್ದ ದುಬಾರಿ ಬಟ್ಟೆಗೂ ಇರಲಿಲ್ಲ. 30  ನಂಬಿಕೆ ಕೊರತೆ ಇರುವವರೇ, ಇವತ್ತು ಇದ್ದು ನಾಳೆ ಇಲ್ಲದೆ ಹೋಗೋ* ಗಿಡಗಳಿಗೆ ದೇವರು ಈ ರೀತಿ ಅಲಂಕರಿಸಿದ್ರೆ ನಿಮಗೆ ಬೇಕಾಗಿರೋ ಬಟ್ಟೆ ಕೊಡದೆ ಇರ್ತಾನಾ? 31  ಹಾಗಾಗಿ ಏನು ತಿನ್ನಬೇಕು, ಏನು ಕುಡಿಬೇಕು, ಏನು ಹಾಕಬೇಕು ಅಂತ ಯಾವತ್ತೂ ಚಿಂತೆಮಾಡಬೇಡಿ.+ 32  ಲೋಕದ ಜನ ಈ ವಿಷ್ಯಗಳ ಹಿಂದೆನೇ ಹಗಲುರಾತ್ರಿ ಓಡ್ತಿದ್ದಾರೆ. ನಿಮಗೆ ಇವೆಲ್ಲ ಬೇಕು ಅಂತ ಸ್ವರ್ಗದಲ್ಲಿರೋ ನಿಮ್ಮ ತಂದೆಗೆ ಚೆನ್ನಾಗಿ ಗೊತ್ತು. 33  ನಿಮ್ಮ ಜೀವನದಲ್ಲಿ ದೇವರ ಆಳ್ವಿಕೆಗೆ,* ದೇವರ ಮಾತು ಕೇಳೋದಕ್ಕೆ ಯಾವಾಗ್ಲೂ ಮೊದಲ ಸ್ಥಾನ ಕೊಡಿ. ಆಗ ದೇವರೇ ನಿಮಗೆ ಬೇಕಾದ ಎಲ್ಲ ವಿಷ್ಯಗಳನ್ನ ಕೊಡ್ತಾನೆ.+ 34  ಹಾಗಾಗಿ ನಾಳೆ ಬಗ್ಗೆ ಚಿಂತೆ ಮಾಡಬೇಡಿ.+ ನಾಳೆಗೆ ನಾಳೆದೇ ಚಿಂತೆ ಇರುತ್ತೆ. ಇವತ್ತಿನ ಸಮಸ್ಯೆಗಳು ಇವತ್ತಿಗೇ ಸಾಕು.

ಪಾದಟಿಪ್ಪಣಿ

ಅಥವಾ “ದಾನಧರ್ಮ ಮಾಡುವಾಗ.” ಪದವಿವರಣೆ ನೋಡಿ.
ಅಥವಾ “ಪವಿತ್ರ ಅಂತ ಎಣಿಸಲಿ, ಪರಿಶುದ್ಧವಾಗಿ ಕಾಣಲಿ.”
ಅಥವಾ, “ರಾಜ್ಯ.”
ಅಕ್ಷ. “ಸಾಲಗಳನ್ನ.”
ಅಕ್ಷ. “ಸಾಲಗಳನ್ನ.”
ಅಕ್ಷ. “ಸರಳವಾಗಿದ್ರೆ.”
ಅಕ್ಷ. “ಒಂದು ಮೊಳ ಉದ್ದ.” ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಒಲೆಗೆ ಹಾಕಲಾಗೋ.”
ಅಥವಾ, “ರಾಜ್ಯಕ್ಕೆ.”