ಯೋಹಾನ 15:1-27

  • ದ್ರಾಕ್ಷಿಗಿಡದ ನೈಜ ಉದಾಹರಣೆ (1-10)

  • ಕ್ರಿಸ್ತನ ತರ ಪ್ರೀತಿ ತೋರಿಸಬೇಕು ಅನ್ನೋ ಆಜ್ಞೆ (11-17)

    • ‘ಇದಕ್ಕಿಂತ ದೊಡ್ಡ ಪ್ರೀತಿ ಇಲ್ಲ’ (13)

  • ಲೋಕ ಯೇಸುವಿನ ಶಿಷ್ಯರನ್ನ ದ್ವೇಷಿಸುತ್ತೆ (18-27)

15  ನನ್ನ ಅಪ್ಪ ದ್ರಾಕ್ಷಿತೋಟ ನೋಡ್ಕೊಳ್ಳೋ ರೈತ. ಆತನು ಬೆಳೆಸೋ ದ್ರಾಕ್ಷಿಗಿಡನೇ ನಾನು.  ಹಣ್ಣು ಕೊಡದಿರೋ ಪ್ರತಿಯೊಂದು ಬಳ್ಳಿಯನ್ನ ಆತನು ಕತ್ತರಿಸಿ ಬಿಸಾಡ್ತಾನೆ. ಹಣ್ಣು ಕೊಡೋ ಪ್ರತಿಯೊಂದು ಬಳ್ಳಿ ಇನ್ನೂ ಜಾಸ್ತಿ ಹಣ್ಣು ಕೊಡೋ ತರ ಅದನ್ನ ಶುದ್ಧ ಮಾಡ್ತಾನೆ.+  ನಾನು ಹೇಳಿದ ಮಾತುಗಳಿಂದ ನೀವು ಈಗಾಗಲೇ ಶುದ್ಧರಾಗಿದ್ದೀರ.+  ನೀವು ನನಗೆ ಆಪ್ತರಾಗೇ ಇರಿ. ಆಗ ನಾನು ಆಪ್ತನಾಗಿ ಇರ್ತಿನಿ. ಒಂದು ಬಳ್ಳಿ ಹಣ್ಣು ಕೊಡಬೇಕಂದ್ರೆ ಆ ಬಳ್ಳಿ ದ್ರಾಕ್ಷಿಗಿಡದಲ್ಲಿ ಇರಬೇಕು. ಅದೇ ತರ ನೀವು ಒಳ್ಳೇ ಕೆಲಸ* ಮಾಡಬೇಕಂದ್ರೆ ನನಗೆ ಆಪ್ತರಾಗಿ ಇರ್ಬೇಕು.+  ನಾನೇ ದ್ರಾಕ್ಷಿಗಿಡ, ನೀವೇ ಬಳ್ಳಿ. ಯಾರು ನನ್ನ ಜೊತೆ ಆಪ್ತವಾಗಿ ಇರ್ತಾರೋ, ನಾನು ಯಾರ ಜೊತೆ ಆಪ್ತವಾಗಿ ಇರ್ತಿನೋ ಅವರು ಜಾಸ್ತಿ ಒಳ್ಳೇ ಕೆಲಸಗಳನ್ನ ಮಾಡ್ತಾರೆ.+ ನನ್ನಿಂದ ಬೇರೆಯಾದ್ರೆ ನಿಮಗೇನೂ ಮಾಡೋಕಾಗಲ್ಲ.  ನನ್ನ ಜೊತೆ ಆಪ್ತವಾಗಿ ಇಲ್ಲದ ವ್ಯಕ್ತಿ ಬಿಸಾಡಿರೋ ಒಣಗಿದ ಬಳ್ಳಿ ತರ ಆಗ್ತಾನೆ. ಜನ ಅಂಥ ಬಳ್ಳಿಗಳನ್ನ ಬೆಂಕಿಗೆ ಹಾಕ್ತಾರೆ. ಅವು ಸುಟ್ಟು ಹೋಗುತ್ತೆ.  ನೀವು ನನಗೆ ಆಪ್ತರಾಗಿದ್ರೆ ಮತ್ತು ನನ್ನ ಮಾತುಗಳು ನಿಮ್ಮ ಮನಸ್ಸಲ್ಲಿದ್ರೆ ನೀವೇನೇ ಕೇಳಿದ್ರೂ ಅದು ಸಿಗುತ್ತೆ.+  ನೀವು ಇನ್ನೂ ಒಳ್ಳೇ ಕೆಲಸಗಳನ್ನ ಮಾಡ್ತಾ ನನ್ನ ಶಿಷ್ಯರು ಅಂತ ಸಾಬೀತು ಮಾಡಿದ್ರೆ ಜನ ನನ್ನ ಅಪ್ಪನನ್ನ ಒಳ್ಳೇ ರೈತ ಅಂತ ಹೊಗಳ್ತಾರೆ.+  ಅಪ್ಪ ನನ್ನನ್ನ ಪ್ರೀತಿಸಿದ ಹಾಗೆ+ ನಾನೂ ನಿಮ್ಮನ್ನ ಪ್ರೀತಿಸ್ತೀನಿ. ನನ್ನ ಪ್ರೀತಿಯನ್ನ ಉಳಿಸ್ಕೊಳ್ಳಿ. 10  ನಾನು ಅಪ್ಪನ ಆಜ್ಞೆಗಳನ್ನ ಪಾಲಿಸಿ ಆತನ ಪ್ರೀತಿಯನ್ನ ಉಳಿಸ್ಕೊಂಡ ಹಾಗೆ ನೀವೂ ನನ್ನ ಆಜ್ಞೆಗಳನ್ನ ಪಾಲಿಸಿ ನನ್ನ ಪ್ರೀತಿಯನ್ನ ಉಳಿಸ್ಕೊಳ್ಳಿ. 11  ನನಗಿರೋ ಆನಂದಾನೇ ನಿಮಗೂ ಇರಬೇಕು, ಆ ಆನಂದವನ್ನ ಪೂರ್ತಿಯಾಗಿ ಅನುಭವಿಸಬೇಕು ಅಂತ ಈ ವಿಷ್ಯಗಳನ್ನ ನಿಮಗೆ ಹೇಳ್ತಾ ಇದ್ದೀನಿ.+ 12  ನಾನು ನಿಮ್ಮನ್ನ ಪ್ರೀತಿಸಿದ ಹಾಗೆ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದೇ ನಾನು ಕೊಡೋ ಆಜ್ಞೆ.+ 13  ಸ್ನೇಹಿತರಿಗೋಸ್ಕರ ಪ್ರಾಣ ಕೊಡೋದಕ್ಕಿಂತ ದೊಡ್ಡ ಪ್ರೀತಿ ಯಾವುದೂ ಇಲ್ಲ.+ 14  ನಾನು ಕೊಟ್ಟಿರೋ ಆಜ್ಞೆ ಪ್ರಕಾರ ನಡೆದ್ರೆ ನೀವು ನನ್ನ ಸ್ನೇಹಿತರಾಗಿ ಇರ್ತಿರ.+ 15  ಇವತ್ತಿಂದ ನಾನು ನಿಮ್ಮನ್ನ ಸೇವಕರು ಅಂತ ಕರಿಯಲ್ಲ. ಯಾಕಂದ್ರೆ ಯಜಮಾನ ಏನು ಮಾಡ್ತಾನೋ ಅದು ಸೇವಕನಿಗೆ ಗೊತ್ತಿರಲ್ಲ. ಆದ್ರೆ ನಿಮ್ಮನ್ನ ಸ್ನೇಹಿತರಂತ ಕರಿದಿದ್ದೀನಿ. ಯಾಕಂದ್ರೆ ಅಪ್ಪನ ಹತ್ರ ನಾನು ಕೇಳಿಸ್ಕೊಂಡ ಎಲ್ಲ ವಿಷ್ಯ ನಿಮಗೆ ಹೇಳಿದ್ದೀನಿ. 16  ನೀವು ನನ್ನನ್ನ ಆರಿಸ್ಕೊಳ್ಳಲಿಲ್ಲ. ನಾನು ನಿಮ್ಮನ್ನ ಆರಿಸ್ಕೊಂಡೆ. ನೀವು ಒಳ್ಳೇ ಕೆಲಸಗಳನ್ನ ಮಾಡ್ಬೇಕು, ಮಾಡ್ತಾ ಇರಬೇಕು ಅಂತ ಆರಿಸ್ಕೊಂಡೆ. ಹಾಗಾಗಿ ನೀವು ನನ್ನ ಹೆಸ್ರಲ್ಲಿ ಅಪ್ಪನ ಹತ್ರ ಏನೇ ಕೇಳಿದ್ರೂ ಆತನು ಅದನ್ನ ಕೊಡ್ತಾನೆ.+ 17  ನೀವು ಒಬ್ಬರನ್ನೊಬ್ರು ಪ್ರೀತಿಸ್ತಾ ಇರಬೇಕಂತ ನಾನು ಈ ವಿಷ್ಯಗಳನ್ನ ನಿಮಗೆ ಹೇಳ್ತಾ ಇದ್ದೀನಿ.+ 18  ಲೋಕ ನಿಮ್ಮನ್ನ ದ್ವೇಷಿಸಿದ್ರೆ ಅದು ನಿಮ್ಮನ್ನ ದ್ವೇಷಿಸೋ ಮುಂಚೆ ನನ್ನನ್ನ ದ್ವೇಷಿಸಿತು ಅಂತ ನೆನಪಿಸ್ಕೊಳ್ಳಿ.+ 19  ನೀವು ಲೋಕದ ಜನ್ರ ತರ ಇದ್ದಿದ್ರೆ ಈ ಲೋಕ ನಿಮ್ಮನ್ನ ತನ್ನವರು ಅಂತ ಪ್ರೀತಿಸ್ತಾ ಇತ್ತು. ಆದ್ರೆ ನೀವು ಲೋಕದ ಜನ್ರ ತರ ಇಲ್ಲದೇ ಇರೋದ್ರಿಂದ+ ಮತ್ತು ನಾನು ನಿಮ್ಮನ್ನ ಈ ಲೋಕದಿಂದ ಆರಿಸ್ಕೊಂಡಿರೋದ್ರಿಂದ ಲೋಕ ನಿಮ್ಮನ್ನ ದ್ವೇಷಿಸುತ್ತೆ.+ 20  ಒಬ್ಬ ಸೇವಕ ತನ್ನ ಯಜಮಾನನಿಗಿಂತ ದೊಡ್ಡವನಲ್ಲ ಅಂತ ನಾನು ಹೇಳಿದ್ದನ್ನ ನೆನಪಿಟ್ಟುಕೊಳ್ಳಿ. ಜನ ನನಗೇ ಹಿಂಸೆ ಕೊಟ್ಟಿರುವಾಗ ನಿಮಗೂ ಹಿಂಸೆ ಕೊಡ್ತಾರೆ.+ ಜನ ನನ್ನ ಮಾತು ಕೇಳಿದ್ರೆ ನಿಮ್ಮ ಮಾತೂ ಕೇಳ್ತಾರೆ. 21  ಆದ್ರೆ ನೀವು ನನ್ನ ಶಿಷ್ಯರಾಗಿರೋ ಕಾರಣ ಅವರು ಹೀಗೆಲ್ಲ ಮಾಡ್ತಾರೆ. ಯಾಕಂದ್ರೆ ನನ್ನನ್ನ ಕಳಿಸಿದ ದೇವರ ಬಗ್ಗೆ ಅವ್ರಿಗೆ ಗೊತ್ತಿಲ್ಲ.+ 22  ನಾನು ಬಂದು ಅವ್ರಿಗೆ ಕಲಿಸದೇ ಇದ್ದಿದ್ರೆ ಅವ್ರ ಮೇಲೆ ಯಾವ ಪಾಪನೂ ಇರ್ತಾ ಇರಲಿಲ್ಲ.+ ಆದ್ರೆ ಈಗ ಅವರು ತಮ್ಮ ಪಾಪಕ್ಕೆ ಯಾವುದೇ ನೆಪ ಕೊಡೋಕಾಗಲ್ಲ.+ 23  ನನ್ನನ್ನ ದ್ವೇಷಿಸೋ ವ್ಯಕ್ತಿ ನನ್ನ ಅಪ್ಪನನ್ನೂ ದ್ವೇಷಿಸ್ತಾನೆ.+ 24  ಯಾರೂ ಮಾಡದ ಅದ್ಭುತಗಳನ್ನ ನಾನು ಅವ್ರ ಮುಂದೆ ಮಾಡದೇ ಇದ್ದಿದ್ರೆ ಅವ್ರ ಮೇಲೆ ಯಾವ ಪಾಪನೂ ಇರ್ತಾ ಇರ್ಲಿಲ್ಲ.+ ಆದ್ರೆ ಈಗ ಅವರು ನನ್ನನ್ನ ನೋಡಿದ್ದಾರೆ ಮತ್ತು ನನ್ನನ್ನೂ ನನ್ನ ಅಪ್ಪನನ್ನೂ ದ್ವೇಷಿಸಿದ್ದಾರೆ. 25  ಹೀಗೆ ‘ಯಾವುದೇ ಕಾರಣ ಇಲ್ಲದೆ ಅವರು ನನ್ನನ್ನ ದ್ವೇಷಿಸಿದ್ರು’ ಅಂತ ನಿಯಮ ಪುಸ್ತಕದಲ್ಲಿ ಬರೆದ ಮಾತು ನಿಜ ಆಗೋಕೆ ಇದೆಲ್ಲ ನಡಿತು.+ 26  ನಾನು ಅಪ್ಪನ ಹತ್ರದಿಂದ ಒಬ್ಬ ಸಹಾಯಕನನ್ನ ಅಂದ್ರೆ ಸತ್ಯವನ್ನ ತೋರಿಸೋ ಪವಿತ್ರಶಕ್ತಿಯನ್ನ ಕಳಿಸ್ತೀನಿ.+ ಅಪ್ಪನಿಂದ ಬರೋ ಸಹಾಯಕ ನನ್ನ ಬಗ್ಗೆ ಎಲ್ಲ ಹೇಳ್ತಾನೆ.+ 27  ನೀವು ಸಹ ನನ್ನ ಬಗ್ಗೆ ಬೇರೆಯವ್ರಿಗೆ ಕಲಿಸಬೇಕು.+ ಯಾಕಂದ್ರೆ ನೀವು ಮುಂಚೆಯಿಂದ ನನ್ನ ಜೊತೆ ಇದ್ದೀರ.

ಪಾದಟಿಪ್ಪಣಿ

ಅಕ್ಷ. “ಫಲ.”