ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 8

“ನಾನು ಒಬ್ಬ ಕುರುಬನನ್ನ ನೇಮಿಸ್ತೀನಿ”

“ನಾನು ಒಬ್ಬ ಕುರುಬನನ್ನ ನೇಮಿಸ್ತೀನಿ”

ಯೆಹೆಜ್ಕೇಲ 34:23

ಮುಖ್ಯ ವಿಷಯ: ಮೆಸ್ಸೀಯನ ಬಗ್ಗೆ ಇರೋ ನಾಲ್ಕು ಭವಿಷ್ಯವಾಣಿಗಳು ಮತ್ತು ಅವು ಯೇಸುವಿನಲ್ಲಿ ನೆರವೇರಿದ ವಿಧ

1-3. ಯೆಹೆಜ್ಕೇಲನಿಗೆ ಯಾಕೆ ಬೇಜಾರಾಯ್ತು? ಮತ್ತು ಯೆಹೋವ ದೇವರು ಯಾರ ಬಗ್ಗೆ ಭವಿಷ್ಯವಾಣಿಗಳನ್ನ ಬರೆಯೋಕೆ ಯೆಹೆಜ್ಕೇಲನನ್ನ ಪ್ರೇರಿಸಿದನು?

ಯೆಹೆಜ್ಕೇಲ ಕೈದಿಯಾಗಿ ಈಗ 6 ವರ್ಷ ಕಳೆದಿದೆ. * ಅವನು ತುಂಬ ಬೇಜಾರಲ್ಲಿದ್ದಾನೆ. ಅವನ ಮನಸ್ಸೆಲ್ಲಾ ನೂರಾರು ಕಿಲೋಮೀಟರ್‌ ದೂರದಲ್ಲಿರೋ ಯೆರೂಸಲೇಮಲ್ಲಿದೆ. ಯಾಕಂದ್ರೆ ಅಲ್ಲಿನ ಆಳ್ವಿಕೆ ಹದಗೆಟ್ಟಿದೆ. ಈಗಾಗ್ಲೇ ಅನೇಕ ರಾಜರು ಅಧಿಕಾರಕ್ಕೆ ಬರೋದನ್ನ ಮತ್ತು ಅವ್ರ ಅಧಿಕಾರ ಭ್ರಷ್ಟವಾಗೋದನ್ನ ಯೆಹೆಜ್ಕೇಲ ನೋಡಿದ್ದ.

2 ನಂಬಿಗಸ್ತ ರಾಜ ಯೋಷೀಯ ಆಳ್ತಿದ್ದ ಕಾಲದಲ್ಲಿ ಯೆಹೆಜ್ಕೇಲ ಹುಟ್ಟಿದ್ದ. ಯೋಷೀಯ ಶುದ್ಧ ಆರಾಧನೆ ಪುನಃಸ್ಥಾಪನೆ ಮಾಡ್ಲಿಕ್ಕಾಗಿ ಮೂರ್ತಿಗಳನ್ನ ನಾಶ ಮಾಡಿದ್ರ ಬಗ್ಗೆ ತಿಳ್ಕೊಂಡಾಗ ಯೆಹೆಜ್ಕೇಲನಿಗೆ ತುಂಬ ಖುಷಿಯಾಗಿರಬೇಕು. (2 ಪೂರ್ವ. 34:1-8) ಆದ್ರೆ ಯೋಷೀಯನು ಮಾಡಿದ ಪ್ರಯತ್ನಗಳೆಲ್ಲ ವಿಫಲ ಆದವು. ಯಾಕಂದ್ರೆ ಅವನ ನಂತ್ರ ಬಂದ ರಾಜರು ವಿಗ್ರಹಾರಾಧನೆ ಮಾಡಿದ್ರು. ಹಾಗಾಗಿ ಇಡೀ ದೇಶದಲ್ಲಿ ಅನೈತಿಕತೆ ತುಂಬಿ ತುಳುಕಿತು. ಇಸ್ರಾಯೇಲ್ಯರು ಯೆಹೋವ ದೇವರ ಜೊತೆ ಇರೋ ಸ್ನೇಹ-ಸಂಬಂಧವನ್ನ ಹಾಳು ಮಾಡಿಕೊಂಡ್ರು. ಇಷ್ಟು ಹದಗೆಟ್ಟಿರೋ ಅವ್ರ ಪರಿಸ್ಥಿತಿ ಯಾವಾಗಾದ್ರೂ ಸರಿಯಾಗಲಿತ್ತಾ? ಖಂಡಿತ!

3 ಯೆಹೋವ ದೇವರು ಮೆಸ್ಸೀಯನ ಬಗ್ಗೆ ಭವಿಷ್ಯವಾಣಿಗಳನ್ನ ಬರೆಯೋಕೆ ಯೆಹೆಜ್ಕೇಲನನ್ನ ಪ್ರೇರಿಸಿದನು. ಈ ಭವಿಷ್ಯವಾಣಿಯಲ್ಲಿ ತಿಳಿಸೋ ಹಾಗೆ ಮೆಸ್ಸೀಯನು ಶುದ್ಧ ಆರಾಧನೆಯನ್ನ ಶಾಶ್ವತವಾಗಿ ಪುನಃಸ್ಥಾಪಿಸೋ ಮತ್ತು ಯೆಹೋವನ ಕುರಿಗಳನ್ನ  ಚೆನ್ನಾಗಿ ನೋಡ್ಕೊಳ್ಳೋ ಕುರುಬ ಮತ್ತು ರಾಜನಾಗಿರುತ್ತಾನೆ. ಈ ಭವಿಷ್ಯವಾಣಿಯ ನೆರವೇರಿಕೆ ನಮ್ಮೆಲ್ಲರ ಭವಿಷ್ಯಕ್ಕೆ ಸಂಬಂಧಪಟ್ಟಿದೆ. ಹಾಗಾಗಿ ನಾವೀಗ ಯೆಹೆಜ್ಕೇಲ ಪುಸ್ತಕದಲ್ಲಿರೋ ಆ ನಾಲ್ಕು ಭವಿಷ್ಯವಾಣಿಗಳ ಬಗ್ಗೆ ನೋಡೋಣ.

‘ಎಳೇ ಚಿಗುರು ದೊಡ್ಡ ದೇವದಾರು ಮರ ಆಗುತ್ತೆ’

4. ಯಾವ ಭವಿಷ್ಯವಾಣಿಯ ಬಗ್ಗೆ ಯೆಹೆಜ್ಕೇಲ ತಿಳಿಸಬೇಕಿತ್ತು? ಮತ್ತು ಯೆಹೋವನು ಆ ಭವಿಷ್ಯವಾಣಿಯನ್ನ ಯಾವ ರೀತಿಯಲ್ಲಿ ತಿಳಿಸಿದನು?

4 ಸುಮಾರು ಕ್ರಿ.ಪೂ. 612 ರಲ್ಲಿ ಯೆಹೋವ ದೇವರು ಯೆಹೆಜ್ಕೇಲನಿಗೆ ಕೆಲವು ಭವಿಷ್ಯವಾಣಿಗಳನ್ನ ಕೊಟ್ಟನು. ಅದ್ರಲ್ಲಿ ಮೆಸ್ಸೀಯನ ಆಳ್ವಿಕೆಯ ಬಗ್ಗೆ ಮತ್ತು ಆ ಆಳ್ವಿಕೆಯನ್ನ ನಾವ್ಯಾಕೆ ಬೆಂಬಲಿಸಬೇಕು ಅನ್ನೋದ್ರ ಬಗ್ಗೆ ಇತ್ತು. ಯೆಹೋವನು ಈ ಭವಿಷ್ಯವಾಣಿಗಳನ್ನ ಒಗಟಿನ ರೀತಿಯಲ್ಲಿ ತಿಳಿಸಿದನು. ಇದ್ರಲ್ಲಿ ಯೆರೂಸಲೇಮಿನ ರಾಜರ ಧರ್ಮಭ್ರಷ್ಟತೆಯ ಬಗ್ಗೆ ಮತ್ತು ನೀತಿವಂತನಾದ ಮೆಸ್ಸೀಯನ ಅಗತ್ಯ ಯಾಕಿದೆ ಅನ್ನೋದ್ರ ಬಗ್ಗೆ ಇತ್ತು. ಆ ಒಗಟನ್ನ ಯೆಹೆಜ್ಕೇಲ ತನ್ನ ಜೊತೆಕೈದಿಗಳಿಗೆ ತಿಳಿಸಬೇಕಿತ್ತು.—ಯೆಹೆ. 17:1, 2.

5. ಯೆಹೆಜ್ಕೇಲನ ಭವಿಷ್ಯವಾಣಿಯಲ್ಲಿರೋ ಒಗಟು ಏನು?

5 ಯೆಹೆಜ್ಕೇಲ 17:3-10 ಓದಿ. ಆ ಒಗಟು ಹೀಗಿತ್ತು: “ಒಂದು ದೊಡ್ಡ ಹದ್ದು” ದೇವದಾರು ಮರದ ತುದಿಯ ಚಿಗುರನ್ನು ಕಿತ್ಕೊಂಡು “ವ್ಯಾಪಾರಿಗಳ ಒಂದು ಪಟ್ಟಣದಲ್ಲಿ ಇಡ್ತು.” ಆಮೇಲೆ “ಅದು ದೇಶದ ಸ್ವಲ್ಪ ಬೀಜ ತಗೊಂಡು . . . ತುಂಬ ನೀರಿರೋ ಜಾಗದ” ಪಕ್ಕದಲ್ಲಿದ್ದ ಚೆನ್ನಾಗಿ ಬೆಳೆ ಕೊಡೋ ಹೊಲದಲ್ಲಿ ಬಿತ್ತಿತ್ತು. ಆ ಬೀಜ ಮೊಳಕೆ ಒಡೆದು “ದಾಕ್ಷಿಬಳ್ಳಿ ಬೆಳೆಯೋಕೆ” ಶುರುವಾಯ್ತು. ಆಮೇಲೆ ಅಲ್ಲಿ ಇನ್ನೊಂದು “ದೊಡ್ಡ ಹದ್ದು” ಬಂತು. ಆಗ ದ್ರಾಕ್ಷಿಬಳ್ಳಿ ತನ್ನನ್ನ ನೀರಿರೋ ಇನ್ನೊಂದು ಜಾಗಕ್ಕೆ ಎತ್ತಿಕೊಂಡು ಹೋಗು ಅಂತ ಎರಡನೇ ಹದ್ದಿನ ‘ಕಡೆ ಚಾಚಿಕೊಳ್ತು.’ ಆ ಬಳ್ಳಿ ಮಾಡಿದ್ದು ಯೆಹೋವ ದೇವರಿಗೆ ಇಷ್ಟವಾಗ್ಲಿಲ್ಲ. ಅದಕ್ಕೇ ಯೆಹೋವ ದೇವರು, ಆ ದ್ರಾಕ್ಷಿಬಳ್ಳಿಯನ್ನ ಬೇರು ಸಮೇತ ಕೀಳಲಾಗುತ್ತೆ, ಆಮೇಲೆ ಅದು ‘ಪೂರ್ತಿ ಒಣಗಿಹೋಗುತ್ತೆ’ ಅಂದನು.

ಮೊದಲನೇ ದೊಡ್ಡ ಹದ್ದು ಬಾಬೆಲಿನ ರಾಜ ನೆಬೂಕದ್ನೆಚ್ಚರನನ್ನ ಸೂಚಿಸಿತು (ಪ್ಯಾರ 6 ನೋಡಿ)

6. ಆ ಒಗಟಿನ ಅರ್ಥವನ್ನ ವಿವರಿಸಿ.

6 ಈ ಒಗಟಿನ ಅರ್ಥವೇನು? (ಯೆಹೆಜ್ಕೇಲ 17:11-15 ಓದಿ.) ಕ್ರಿ.ಪೂ. 617 ರಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ (ಮೊದಲ “ದೊಡ್ಡ ಹದ್ದು”) ಯೆರೂಸಲೇಮಿನ ಮೇಲೆ ಮುತ್ತಿಗೆ ಹಾಕಿದನು. ಅವನು ಅಲ್ಲಿನ ರಾಜ ಯೆಹೋಯಾಖೀನನನ್ನ (‘ತುದಿಯಲ್ಲಿರೋ ಚಿಗುರನ್ನ’) ಸಿಂಹಾಸನದಿಂದ ಕಿತ್ತುಹಾಕಿ ಬಾಬೆಲಿಗೆ (‘ವ್ಯಾಪಾರಿಗಳ ಪಟ್ಟಣಕ್ಕೆ’) ಕರಕೊಂಡು ಹೋದನು. ಆಮೇಲೆ ಚಿದ್ಕೀಯನನ್ನ (‘ದೇಶದ ಒಂದು ಬೀಜವನ್ನ’) ಯೆರೂಸಲೇಮಿನಲ್ಲಿ ರಾಜನಾಗಿ ನೇಮಿಸಿದನು. ಈ ಚಿದ್ಕೀಯ ತಾನು ಬಾಬೆಲಿನ ಸಾಮಂತ ರಾಜನಾಗಿ ಇರ್ತೀನಿ ಅಂತ ಮಾತು ಕೊಟ್ಟನು. (2 ಪೂರ್ವ. 36:13) ಆದ್ರೆ ಅವನು ಕೊಟ್ಟ ಮಾತಿನಂತೆ ನಡ್ಕೊಳ್ಳಲಿಲ್ಲ. ಅವನು ಬಾಬೆಲಿನ ರಾಜನ ವಿರುದ್ಧ ದಂಗೆಯೆದ್ದು ಮಿಲಿಟರಿ ಸಹಾಯಕ್ಕಾಗಿ ಈಜಿಪ್ಟಿನ ಅರಸನಾದ ಫರೋಹನ (ಎರಡನೇ “ದೊಡ್ಡ ಹದ್ದು”) ಮೊರೆ ಹೋದ. ಕೊಟ್ಟ ಮಾತಿನಂತೆ ನಡೆಯದೇ ಇದ್ದ ಚಿದ್ಕೀಯನನ್ನ ಯೆಹೋವ ದೇವರು ಖಂಡಿಸಿದನು. (ಯೆಹೆ. 17:16-21) ಯೆಹೋವ ದೇವರ ಮಾತಿನಂತೆ ಚಿದ್ಕೀಯ ಸಿಂಹಾಸನವನ್ನ ಕಳೆದುಕೊಳ್ಳಬೇಕಾಯ್ತು ಮತ್ತು ಅವನು ಬಾಬೆಲಿನ ಜೈಲಿನಲ್ಲಿ ಸತ್ತು ಹೋದನು.—ಯೆರೆ. 52:6-11.

7. ಆ ಒಗಟಿನಿಂದ ನಾವು ಯಾವ ಪಾಠಗಳನ್ನ ಕಲಿಬಹುದು?

7 ಈ ಒಗಟಿನಿಂದ ನಾವು ಯಾವ ಪಾಠ ಕಲಿಬಹುದು? ಮೊದಲನೇದಾಗಿ, ಶುದ್ಧ ಆರಾಧಕರಾದ ನಾವು ಕೊಟ್ಟ ಮಾತಿನಂತೆ ನಡ್ಕೊಳ್ಳಬೇಕು. “ನಿಮ್ಮ ಮಾತು ಹೌದು ಅಂದ್ರೆ ಹೌದು, ಇಲ್ಲ ಅಂದ್ರೆ ಇಲ್ಲ ಅಂತಿರಲಿ” ಅಂತ ಯೇಸು ಹೇಳಿದನು. (ಮತ್ತಾ. 5:37) ನಾವು ಕೋರ್ಟಲ್ಲಿ ಅಥವಾ ಬೇರೆ ಯಾವುದೇ ಸನ್ನಿವೇಶದಲ್ಲಿ ಒಂದು ವಿಷಯದ ಬಗ್ಗೆ ದೇವರ ಹೆಸರಲ್ಲಿ ಆಣೆ ಇಟ್ಟರೆ, ಅದನ್ನ ತುಂಬ ಗಂಭೀರವಾಗಿ ನೋಡಬೇಕು.  ಎರಡನೇದಾಗಿ, ನಾವು ಯಾರ ಮೇಲೆ ಭರವಸೆ ಇಡ್ತೀವಿ ಅನ್ನೋದ್ರ ಬಗ್ಗೆ ಎಚ್ಚರವಹಿಸಬೇಕು. “ದೊಡ್ಡದೊಡ್ಡ ಅಧಿಕಾರಿಗಳ ಮೇಲಾಗಲಿ, ಮನುಷ್ಯರ ಮೇಲಾಗಲಿ ಭರವಸೆ ಇಡಬೇಡಿ, ಅವರು ರಕ್ಷಣೆ ಕೊಡೋಕೆ ಆಗಲ್ಲ” ಅಂತ ಬೈಬಲ್‌ ನಮ್ಮನ್ನ ಎಚ್ಚರಿಸುತ್ತೆ.—ಕೀರ್ತ. 146:3.

8-10. ಮೆಸ್ಸೀಯ ರಾಜನನ್ನ ಯೆಹೋವನು ಹೇಗೆ ವರ್ಣಿಸಿದ್ದಾನೆ? ಮತ್ತು ಈ ಭವಿಷ್ಯವಾಣಿ ಹೇಗೆ ನೆರವೇರಿದೆ? (“ಮೆಸ್ಸೀಯನ ಬಗ್ಗೆ ಇರೋ ಭವಿಷ್ಯವಾಣಿ—ದೊಡ್ಡ ದೇವದಾರು ಮರ” ಅನ್ನೋ ಚೌಕ ಸಹ ನೋಡಿ.)

8 ಆದ್ರೆ ನಾವು ನಂಬಬಹುದಾದ, ಭರವಸೆ ಇಡಬಹುದಾದ ಒಬ್ಬ ರಾಜನಿದ್ದಾನೆ. ಚಿಗುರನ್ನ ಕಿತ್ತು ಬೇರೆ ಕಡೆ ನೆಡುವ ಒಗಟನ್ನ ಹೇಳಿದ ಮೇಲೆ ಯೆಹೋವನು ಮುಂದೆ ಬರಲಿರೋ ಮೆಸ್ಸೀಯನ ಬಗ್ಗೆ ತಿಳಿಸೋಕೂ ಇದೇ ರೀತಿಯ ಅಲಂಕಾರವನ್ನ ಉಪಯೋಗಿಸಿದ್ದಾನೆ.

9 ಆ ಭವಿಷ್ಯವಾಣಿ ಏನು ಹೇಳುತ್ತೆ? (ಯೆಹೆಜ್ಕೇಲ 17:22-24 ಓದಿ.) ಈಗ ದೊಡ್ಡ ಹದ್ದುಗಳಲ್ಲ, ಬದ್ಲಿಗೆ ಸ್ವತಃ ಯೆಹೋವ ದೇವರೇ ‘ತುಂಬ ಎತ್ತರವಾದ ದೇವದಾರು ಮರದ ತುದಿಯಿಂದ ಒಂದು ಎಳೇ ಚಿಗುರನ್ನ ತೆಗೆಯುತ್ತಾನೆ ಮತ್ತು ಅದನ್ನ ತುಂಬ ಎತ್ತರವಾದ ಬೆಟ್ಟದ ಮೇಲೆ ನೆಡ್ತಾನೆ.’ ಆ ಚಿಗುರು ದೊಡ್ಡ ದೇವದಾರು ಮರವಾಗಿ ಬೆಳೆಯುತ್ತೆ. ಅದ್ರ ನೆರಳಲ್ಲಿ “ಎಲ್ಲಾ ಜಾತಿಯ ಪಕ್ಷಿಗಳು ವಾಸ ಮಾಡುತ್ತೆ.” ಯೆಹೋವ ದೇವರೇ ಆ ಮರವನ್ನ ಚೆನ್ನಾಗಿ ಬೆಳೆಸ್ತಿದ್ದಾನೆ ಅಂತ “ದೇಶದಲ್ಲಿರೋ ಎಲ್ಲ ಮರಗಳಿಗೆ” ಆಗ ಗೊತ್ತಾಗುತ್ತೆ.

10 ಆ ಭವಿಷ್ಯವಾಣಿ ಹೇಗೆ ನೆರವೇರಿತು? ಯೆಹೋವ ದೇವರು ತನ್ನ ಮಗನಾದ ಯೇಸು ಕ್ರಿಸ್ತನನ್ನ ದಾವೀದನ ವಂಶದಿಂದ (“ತುಂಬ ಎತ್ತರವಾದ ದೇವದಾರು ಮರ”) ತೆಗೆದು ಸ್ವರ್ಗೀಯ ಚೀಯೋನ್‌ ಬೆಟ್ಟದಲ್ಲಿ (“ತುಂಬ ಎತ್ತರವಾದ ಬೆಟ್ಟದ ಮೇಲೆ”) ನೆಟ್ಟನು. (ಕೀರ್ತ. 2:6; ಯೆರೆ. 23:5; ಪ್ರಕ. 14:1) ಯೆಹೋವ ದೇವರು ಶತ್ರುಗಳ ಕಣ್ಣಲ್ಲಿ “ಸಾಮಾನ್ಯರಲ್ಲಿ ತುಂಬ ಸಾಮಾನ್ಯನಾದ” ಯೇಸುವಿಗೆ “ದಾವೀದನ ಸಿಂಹಾಸನ” ಕೊಟ್ಟನು. ಹೀಗೆ ಯೇಸುವನ್ನ ಅತೀ ಉನ್ನತ ಸ್ಥಾನಕ್ಕೆ ಏರಿಸಿದನು. (ದಾನಿ. 4:17; ಲೂಕ 1:32, 33) ದೊಡ್ಡ ದೇವದಾರು ಮರದಂತೆ ಮೆಸ್ಸೀಯ ರಾಜನಾದ ಯೇಸು ಕ್ರಿಸ್ತ ಇಡೀ ಭೂಮಿಯ ಮೇಲೆ ಆಳ್ವಿಕೆಯನ್ನ ನಡೆಸ್ತಾನೆ ಮತ್ತು ತನ್ನ ಪ್ರಜೆಗಳಿಗೆಲ್ಲಾ ಆಶೀರ್ವಾದ ಕೊಡ್ತಾನೆ. ಅವನು ನಮ್ಮ ಭರವಸೆಗೆ ಅರ್ಹನಾಗಿದ್ದಾನೆ. ಅವನ ಆಳ್ವಿಕೆಯಲ್ಲಿ ಇಡೀ ಭೂಮಿಯಲ್ಲಿರೋ ವಿಧೇಯ ಜನರು ‘ಸುರಕ್ಷಿತರಾಗಿ, ಯಾವುದೇ ಆತಂಕ ಇಲ್ಲದೇ ಇರ್ತಾರೆ.’—ಜ್ಞಾನೋ. 1:33.

11. “ಎಳೇ ಚಿಗುರು” ಒಂದು “ದೊಡ್ಡ ದೇವದಾರು ಮರ” ಆಗುವ ಭವಿಷ್ಯವಾಣಿಯಿಂದ ಯಾವ ಮುಖ್ಯ ಪಾಠ ಕಲಿಬಹುದು?

11 ಈ ಭವಿಷ್ಯವಾಣಿಯಿಂದ ನಾವೇನು ಕಲಿಬಹುದು? “ಎಳೇ ಚಿಗುರು” ಒಂದು “ದೊಡ್ಡ ದೇವದಾರು ಮರ” ಆಗೋ ಭವಿಷ್ಯವಾಣಿಯಿಂದ ಈ ಪ್ರಾಮುಖ್ಯ ಪ್ರಶ್ನೆಗೆ ಉತ್ತರ ಸಿಗುತ್ತೆ: ನಾವು ಯಾರ ಮೇಲೆ ಭರವಸೆಯಿಡಬೇಕು? ಮಾನವನ ಸರ್ಕಾರದ ಮೇಲೆ ಮತ್ತು ಅದರ ಸೈನ್ಯಗಳ ಮೇಲೆ ಭರವಸೆಯಿಡೋದು ಮೂರ್ಖತನ. ನಮಗೆ ನಿಜವಾದ ಭದ್ರತೆ ಬೇಕಾದ್ರೆ ನಮ್ಮ ಪೂರ್ತಿ ಭರವಸೆ ನಮ್ಮ ಮೆಸ್ಸೀಯ ರಾಜನಾದ ಯೇಸು ಕ್ರಿಸ್ತನ ಮೇಲೆ ಇರಬೇಕು. ಮಾನವರ ಎಲ್ಲ ಕಷ್ಟಗಳಿಗೆ ಪರಿಹಾರ ಯೇಸುವಿನ ಈ ಸರ್ಕಾರದಿಂದ ಮಾತ್ರ ಸಾಧ್ಯ.—ಪ್ರಕ. 11:15.

“ಆಳೋ ಹಕ್ಕಿರೋನು”

12. ದಾವೀದನಿಗೆ ಕೊಟ್ಟ ಮಾತನ್ನ ಯೆಹೋವನು ಮರೆಯಲಿಲ್ಲ ಅಂತ ಹೇಗೆ ತೋರಿಸಿಕೊಟ್ಟನು?

12 ಎರಡು ಹದ್ದುಗಳ ಬಗ್ಗೆ ಇರೋ ಒಗಟಿನ ಅರ್ಥ ಗೊತ್ತಾದಾಗ ಯೆಹೆಜ್ಕೇಲನಿಗೆ ಒಂದು ವಿಷ್ಯ ಅರ್ಥ ಆಯ್ತು. ದಾವೀದನ ವಂಶದಲ್ಲಿ ಆಳ್ತಿದ್ದ ಧರ್ಮಭ್ರಷ್ಟ ರಾಜ ಚಿದ್ಕೀಯನ ಆಳ್ವಿಕೆ ಕೊನೆಗೊಳ್ಳಲಿದೆ ಮತ್ತು ಅವನನ್ನ ಬಾಬೆಲಿಗೆ ಕೈದಿಯಾಗಿ ತೆಗೆದುಕೊಂಡು ಹೋಗಲಾಗುತ್ತೆ ಅಂತ ಗೊತ್ತಾಯ್ತು. ಆಗ ಯೆಹೆಜ್ಕೇಲನ ಮನಸ್ಸಿನಲ್ಲಿ ಈ ಪ್ರಶ್ನೆ ಬಂದಿರಬಹುದು: ‘ದಾವೀದನ ವಂಶದಲ್ಲಿ ಆಡಳಿತ ಶಾಶ್ವತವಾಗಿರುತ್ತೆ ಅಂತ  ದೇವರು ಹೇಳಿದ್ದಾರಲ್ಲಾ? ಅದು ಹೇಗೆ ನೆರವೇರುತ್ತೆ?’ (2 ಸಮು. 7:12, 16) ಅವನಿಗೆ ಇಂಥ ಪ್ರಶ್ನೆ ಕಾಡಿದ್ರೆ ಉತ್ತರಕ್ಕಾಗಿ ತುಂಬ ಸಮಯ ಕಾಯಬೇಕಾಗಿರಲಿಲ್ಲ. ಸುಮಾರು ಕ್ರಿ.ಪೂ. 611 ರಲ್ಲಿ ಅಂದ್ರೆ ತನ್ನ ಬಂಧಿವಾಸದ 7 ನೇ ವರ್ಷದಲ್ಲಿ ಚಿದ್ಕೀಯ ಯೆಹೂದದ ರಾಜನಾಗಿ ಆಳ್ತಿರುವಾಗ್ಲೇ ಯೆಹೆಜ್ಕೇಲನಿಗೆ ಯೆಹೋವ ದೇವರ ವಾಕ್ಯ ಸಿಕ್ತು. (ಯೆಹೆ. 20:2) ಯೆಹೋವನು ಅವನಿಗೆ ಇನ್ನೊಂದು ಭವಿಷ್ಯವಾಣಿಯನ್ನ ನುಡಿಯೋಕೆ ಹೇಳಿದನು. ಈ ಭವಿಷ್ಯವಾಣಿಯಿಂದ ಯೆಹೋವನು ದಾವೀದನಿಗೆ ಕೊಟ್ಟ ಮಾತನ್ನ ಮರೆಯಲಿಲ್ಲ ಅಂತ ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಗೊತ್ತಾಯ್ತು. ಮೆಸ್ಸೀಯ ರಾಜನು ದಾವೀದ ವಂಶದಲ್ಲೇ ಹುಟ್ಟೋದ್ರಿಂದ ಅವನಿಗೆ ದಾವೀದನ ಸಿಂಹಾಸನದಲ್ಲಿ ಆಳ್ವಿಕೆ ಮಾಡೋ ಹಕ್ಕಿರುತ್ತೆ ಅಂತ ಈ ಭವಿಷ್ಯವಾಣಿ ತೋರಿಸಿಕೊಡ್ತು.

13, 14. ಯೆಹೆಜ್ಕೇಲ 21:25-27 ರಲ್ಲಿರೋ ಭವಿಷ್ಯವಾಣಿ ಏನು? ಆ ಭವಿಷ್ಯವಾಣಿ ಹೇಗೆ ನೆರವೇರಿತು?

13 ಆ ಭವಿಷ್ಯವಾಣಿ ಏನು? (ಯೆಹೆಜ್ಕೇಲ 21:25-27 ಓದಿ.) ಯೆಹೋವ ದೇವರು ಯೆಹೆಜ್ಕೇಲನ ಮೂಲಕ ‘ಇಸ್ರಾಯೇಲಿನ ದುಷ್ಟ ಪ್ರಧಾನನಿಗೆ’ ಶಿಕ್ಷೆ ಕೊಡೋ ಸಮಯ ಬಂದಿದೆ ಅಂತ ಸ್ಪಷ್ಟವಾಗಿ ಹೇಳಿದನು. ಆ ದುಷ್ಟ ರಾಜನ “ಪೇಟ” ಮತ್ತು ‘ಕಿರೀಟವನ್ನ’ (ಅಧಿಕಾರದ ಚಿಹ್ನೆಗಳು) ತೆಗೆದು ಹಾಕಲಾಗುತ್ತೆ ಅಂತ ಯೆಹೋವನು ಹೇಳಿದನು. ನಂತ್ರ ಅಧಿಕಾರಿಗಳ ಬಗ್ಗೆ ಹೇಳುತ್ತಾ “ಕೆಳಗಿರುವ” ವ್ಯಕ್ತಿಗಳನ್ನ ಮೇಲಕ್ಕೇರಿಸ್ತೀನಿ “ಮೇಲಿರೋ” ವ್ಯಕ್ತಿಗಳನ್ನ ಕೆಳಗಿಳಿಸ್ತೀನಿ ಅಂತ ಯೆಹೋವನು ಹೇಳಿದನು. ಹಾಗಾದ್ರೆ ಮೇಲಕ್ಕೇರಿಸಲ್ಪಟ್ಟ ವ್ಯಕ್ತಿ ಎಲ್ಲಿವರೆಗೆ ಆಳ್ವಿಕೆ ಮಾಡ್ತಾನೆ? “ಆಳೋ ಹಕ್ಕಿರೋನು”  ಬರೋ ತನಕ ಮಾತ್ರ. ಈ ಆಳೋ ಹಕ್ಕಿರೋನಿಗೆ ಯೆಹೋವನು ರಾಜ್ಯವನ್ನ ಕೊಡ್ತಾನೆ.

14 ಈ ಭವಿಷ್ಯವಾಣಿ ಹೇಗೆ ನೆರವೇರಿತು? ಕ್ರಿ.ಪೂ. 607 ರಲ್ಲಿ ಬಾಬೆಲಿನವರು ಯೆರೂಸಲೇಮನ್ನ ನಾಶಮಾಡಿ ಚಿದ್ಕೀಯನನ್ನ ರಾಜನ ಸ್ಥಾನದಿಂದ ತೆಗೆದು ಹಾಕಿದಾಗ, ಅಲ್ಲಿಯ ವರೆಗೆ ‘ಮೇಲಿನ’ ಸ್ಥಾನದಲ್ಲಿದ್ದ ಯೆಹೂದ ರಾಜ್ಯ ಕೆಳಗೆ ಬಂದ ಹಾಗಾಯ್ತು. ಆಗ ದಾವೀದನ ವಂಶದವರಲ್ಲಿ ಯಾರೂ ರಾಜನಾಗಿ ಆಳುತ್ತಾ ಇರಲಿಲ್ಲ. ಸ್ವಲ್ಪ ಸಮಯದವರೆಗೆ ಇಡೀ ಭೂಮಿಯಲ್ಲಿ ಅನ್ಯ ಜನಾಂಗದವರು ಆಳ್ವಿಕೆ ನಡೆಸುತ್ತಾ ಇದ್ರು. ಹೀಗೆ ‘ಕೆಳಗೆ ಇದ್ದ’ ಅವರು ಮೇಲಕ್ಕೆ ಏರಿಸಲ್ಪಟ್ಟರು. ಆದರೆ ಅನ್ಯಜನಾಂಗದ ಆಳ್ವಿಕೆಯ ಸಮಯ ಅಥವಾ “ಆ ದೇಶಗಳಿಗೆ ಕೊಟ್ಟಿರೋ ಸಮಯ” 1914 ರಲ್ಲಿ ಮುಗಿಯಿತು. ಆಗ ದೇವರು ಯೇಸುವನ್ನು ರಾಜನಾಗಿ ನೇಮಿಸಿದನು. (ಲೂಕ 21:24) ಯೇಸು ದಾವೀದನ ವಂಶದಲ್ಲೇ ಹುಟ್ಟಿದನು. ಹಾಗಾಗಿ ಅವನಿಗೆ ಮೆಸ್ಸೀಯ ರಾಜನಾಗಿ ‘ಆಳುವ ಹಕ್ಕಿತ್ತು.’ * (ಆದಿ. 49:10) ಹೀಗೆ ದಾವೀದನ ವಂಶದಲ್ಲಿ ಹುಟ್ಟಿದವನು ಸದಾಕಾಲ ರಾಜನಾಗಿ ಆಳುತ್ತಾನೆ ಅನ್ನೋ ಮಾತನ್ನ ದೇವರು ಯೇಸುವಿನ ಮೂಲಕ ನೆರವೇರಿಸಿದನು.—ಲೂಕ 1:32, 33.

ದೇವರ ರಾಜ್ಯದ ರಾಜನಾಗೋ ಹಕ್ಕು ಯೇಸು ಕ್ರಿಸ್ತನಿಗೆ ಮಾತ್ರ ಇದೆ (ಪ್ಯಾರ 15 ನೋಡಿ)

15. ರಾಜನಾಗಿರೋ ಯೇಸು ಕ್ರಿಸ್ತನ ಮೇಲೆ ನಾವು ಯಾಕೆ ಸಂಪೂರ್ಣ ಭರವಸೆ ಇಡಬಹುದು?

15 ಈ ಭವಿಷ್ಯವಾಣಿಯಿಂದ ನಾವೇನು ಕಲಿಬಹುದು? ರಾಜನಾಗಿರೋ ಯೇಸು ಕ್ರಿಸ್ತನ ಮೇಲೆ ನಾವು ಸಂಪೂರ್ಣ ಭರವಸೆ ಇಡಬಹುದು. ಯಾಕಂದ್ರೆ ಈ ಲೋಕದಲ್ಲಿರೋ ಅಧಿಕಾರಿಗಳನ್ನ ಮನುಷ್ಯರು ಆರಿಸಿರುತ್ತಾರೆ ಅಥವಾ ಅವರು ಅಧಿಕಾರವನ್ನು  ಬೇರೆಯವರಿಂದ ಕಿತ್ತುಕೊಂಡಿರುತ್ತಾರೆ. ಆದ್ರೆ ಯೇಸುವನ್ನ ಯೆಹೋವ ದೇವರೇ ಆರಿಸಿ ‘ಸಾಮ್ರಾಜ್ಯ ಕೊಟ್ಟಿದ್ದಾನೆ.’ ಇದನ್ನ ಪಡೆಯೋ ಹಕ್ಕು ಕೂಡ ಅವನಿಗಿತ್ತು. (ದಾನಿ. 7:13, 14) ಯೆಹೋವ ದೇವರೇ ಆರಿಸಿರೋ ಈ ರಾಜನ ಮೇಲೆ ನಾವು ನಂಬಿಕೆ ಇಡಬಹುದಲ್ವಾ? ಖಂಡಿತ.

‘ನನ್ನ ಸೇವಕ ದಾವೀದನೇ ಅವುಗಳ ಕುರುಬನಾಗಿರುತ್ತಾನೆ’

16. ಯೆಹೋವನಿಗೆ ತನ್ನ ಕುರಿಗಳ ಬಗ್ಗೆ ಹೇಗನಿಸುತ್ತೆ? ಯೆಹೆಜ್ಕೇಲನ ಸಮಯದಲ್ಲಿದ್ದ ‘ಇಸ್ರಾಯೇಲ್ಯರ ಕುರುಬರು’ ಕುರಿಗಳ ಜೊತೆ ಹೇಗೆ ನಡಕೊಂಡ್ರು?

16 ಮಹಾ ಕುರುಬನಾದ ಯೆಹೋವ ದೇವರಿಗೆ ಭೂಮಿಯಲ್ಲಿರೋ ಕುರಿಗಳಾದ ತನ್ನ ಆರಾಧಕರ ಮೇಲೆ ತುಂಬ ಕಾಳಜಿ ಇದೆ. (ಕೀರ್ತ. 100:3) ಈ ಕುರಿಗಳನ್ನು ನೋಡಿಕೊಳ್ಳೋಕೆ ಯೆಹೋವ ದೇವರು ಮನುಷ್ಯರಲ್ಲಿ ಕೆಲವರನ್ನು ಕುರುಬರಾಗಿ ಆಯ್ಕೆ ಮಾಡಿದ್ದಾನೆ. ಆದರೆ ಅವರು ಕುರಿಗಳನ್ನ ಹೇಗೆ ನೋಡ್ಕೊಳ್ತಾರೆ ಅಂತ ಯೆಹೋವನು ಸದಾ ಗಮನಿಸ್ತಾ ಇರುತ್ತಾನೆ. ಯೆಹೆಜ್ಕೇಲನ ಕಾಲದಲ್ಲಿ ಇದ್ದ ‘ಇಸ್ರಾಯೇಲ್ಯರ ಕುರುಬರು’ ಮಾಡೋದನ್ನ ನೋಡಿ ಯೆಹೋವ ದೇವರಿಗೆ ಹೇಗೆ ಅನಿಸಿರಬೇಕು ಅಂತ ಸ್ವಲ್ಪ ಯೋಚಿಸಿ! ಅವರು “ಒಂಚೂರು ಕನಿಕರ ಇಲ್ಲದೆ ದಬ್ಬಾಳಿಕೆಯಿಂದ” ಅಧಿಕಾರ ನಡೆಸುತ್ತಾ ಇದ್ರು. ಇವರು ಈ ತರ ಮಾಡಿರೋದ್ರಿಂದ ಕುರಿಗಳಿಗೆ ತುಂಬ ಕಷ್ಟವಾಯ್ತು. ಆ ಕುರಿಗಳಲ್ಲಿ ಕೆಲವು ಶುದ್ಧ ಆರಾಧನೆಯನ್ನೇ ಬಿಟ್ಟುಬಿಟ್ಟವು.—ಯೆಹೆ. 34:1-6.

17. ಯೆಹೋವನು ತನ್ನ ಕುರಿಗಳನ್ನ ಹೇಗೆ ಕಾಪಾಡಿದನು?

17 ಹಾಗಾದ್ರೆ ಯೆಹೋವ ದೇವ್ರು ಏನು ಮಾಡಲಿದ್ದನು? “ನಾನು ಅವ್ರಿಂದ ಲೆಕ್ಕ ಕೇಳ್ತೀನಿ” ಅಂತ ದೇವ್ರು ದಬ್ಬಾಳಿಕೆ ಮಾಡಿದ ಅಧಿಕಾರಿಗಳಿಗೆ ಹೇಳಿದನು. ಆಮೇಲೆ ‘ನನ್ನ ಕುರಿಗಳನ್ನ ಕಾಪಾಡ್ತೀನಿ’ ಅಂತ ಮಾತು ಕೂಡ ಕೊಟ್ಟನು. (ಯೆಹೆ. 34:10) ಯೆಹೋವ ದೇವರು ಕೊಟ್ಟ ಮಾತನ್ನು ತಪ್ಪಲಿಲ್ಲ. (ಯೆಹೋ. 21:45) ಕ್ರಿ.ಪೂ. 607 ರಲ್ಲಿ ಬಾಬೆಲಿನವರನ್ನು ಕಳಿಸೋ ಮೂಲಕ ದಬ್ಬಾಳಿಕೆ ಮಾಡೋ ಕುರುಬರಿಂದ ಯೆಹೋವ ದೇವ್ರು ತನ್ನ ಕುರಿಗಳನ್ನ ರಕ್ಷಿಸಿದನು. ಬಾಬೆಲಿನವರು ಈ ಸ್ವಾರ್ಥ ಕುರುಬರಿಗೆ ಕಠಿಣ ಶಿಕ್ಷೆ ಕೊಟ್ಟರು. ಅಲ್ಲಿಂದ 70 ವರ್ಷಗಳಾದ ಮೇಲೆ, ಕುರಿಗಳ ತರ ಇರೋ ತನ್ನ ಜನ್ರನ್ನ ಯೆಹೋವನು ಬಾಬೆಲಿಂದ ಬಿಡುಗಡೆ ಮಾಡಿ ಸ್ವಂತ ದೇಶಕ್ಕೆ ಕರಕೊಂಡು ಬಂದನು. ಅಲ್ಲಿ ಅವರು ಶುದ್ಧ ಆರಾಧನೆಯನ್ನು ಪುನಃಸ್ಥಾಪಿಸೋಕಾಯ್ತು. ಆದರೂ ಯೆಹೋವನ ಕುರಿಗಳು ಕಷ್ಟವನ್ನ ಅನುಭವಿಸ್ತಾ ಇದ್ರು. ಯಾಕೆಂದ್ರೆ ಅವರು ಆಗಲೂ ಲೋಕದ ಅಧಿಕಾರಿಗಳ ಕೆಳಗೆ ಇದ್ರು. “ದೇಶಗಳಿಗೆ ಕೊಟ್ಟಿರೋ ಸಮಯ” ಮುಗಿಯೋಕೆ ಇನ್ನೂ ನೂರಾರು ವರ್ಷ ಅವರು ಕಾಯಬೇಕಿತ್ತು.—ಲೂಕ 21:24.

18, 19. ಕ್ರಿ.ಪೂ. 606 ರಲ್ಲಿ ಯೆಹೆಜ್ಕೇಲ ಯಾವ ಭವಿಷ್ಯವಾಣಿಯನ್ನ ತಿಳಿಸಿದನು? (ಆರಂಭದ ಚಿತ್ರ ನೋಡಿ.)

18 ಇದಕ್ಕೂ ಮುಂಚೆ ಕ್ರಿ.ಪೂ. 606 ರಲ್ಲಿ ಭವಿಷ್ಯವಾಣಿಯನ್ನ ಹೇಳುವಂತೆ ಯೆಹೋವನು ಯೆಹೆಜ್ಕೇಲನನ್ನ ಪ್ರೇರೇಪಿಸಿದನು. ಆಗ ಯೆರೂಸಲೇಮ್‌ ನಾಶವಾಗಿ ಒಂದು ವರ್ಷವಾಗಿತ್ತು. ಇಸ್ರಾಯೇಲ್ಯರು ಬಿಡುಗಡೆಯಾಗೋಕೆ ಇನ್ನೂ ತುಂಬ ವರ್ಷ ಕಾಯಬೇಕಿತ್ತು. ಈ ಸಮಯದಲ್ಲೇ ಯೆಹೆಜ್ಕೇಲನು ಮಹಾ ಕುರುಬನಾದ ಯೆಹೋವನಿಗೆ ತನ್ನ ಕುರಿಗಳ ಮೇಲೆ ಎಷ್ಟು ಪ್ರೀತಿ, ಕಾಳಜಿ ಇದೆ ಅಂತ ತಿಳಿಸಿದನು. ಮೆಸ್ಸೀಯ ರಾಜ ಯೆಹೋವನ ಕುರಿಗಳನ್ನ ಹೇಗೆ ನೋಡಿಕೊಳ್ತಾನೆ ಅನ್ನೋ ಭವಿಷ್ಯವಾಣಿಯನ್ನೂ ತಿಳಿಸಿದನು.

19 ಆ ಭವಿಷ್ಯವಾಣಿ ಏನು? (ಯೆಹೆಜ್ಕೇಲ 34:22-24 ಓದಿ.) ಯೆಹೋವ ದೇವರು ನಾನು ಒಬ್ಬ ಕುರುಬನನ್ನು ನೇಮಿಸ್ತೀನಿ “ನನ್ನ ಸೇವಕ ದಾವೀದನೇ ಆ ಕುರುಬ” ಅಂತ ಹೇಳಿದನು. ಇಲ್ಲಿ “ಒಬ್ಬ ಕುರುಬ” ಮತ್ತು “ಸೇವಕ” ಅಂತ ಹೇಳಿರೋದನ್ನ ಗಮನಿಸಿ. ಕುರುಬರನ್ನ ಅಥವಾ ಸೇವಕರನ್ನ ಅಂತ ಇಲ್ಲಿ ಹೇಳಿಲ್ಲ. ಅದರ ಅರ್ಥವೇನು? ದಾವೀದನ ವಂಶದಲ್ಲಿ ಬಂದಿರೋ ಯೇಸು ಒಬ್ಬನೇ ಸದಾಕಾಲ ಆಳುತ್ತಾನೆ. ಹಿಂದಿನ ಕಾಲದಲ್ಲಿ ಇದ್ದ ಹಾಗೆ ಒಬ್ಬ ರಾಜ ಆದ ಮೇಲೆ ಇನ್ನೊಬ್ಬ, ಹೀಗೆ ರಾಜರು ಆಳುತ್ತಾ ಹೋಗಲ್ಲ. ಯೇಸು, ಯೆಹೋವ ದೇವರ ಕುರಿಗಳನ್ನ ಚೆನ್ನಾಗಿ ಮೇಯಿಸೋ ಒಳ್ಳೇ  ಕುರುಬನಾಗಿರುತ್ತಾನೆ ಮತ್ತು “ಅವುಗಳ ಪ್ರಧಾನನಾಗಿ ಇರುತ್ತಾನೆ.” ಯೆಹೋವ ದೇವ್ರು ತನ್ನ ಕುರಿಗಳ ಜೊತೆ “ಶಾಂತಿಯ ಒಪ್ಪಂದ ಮಾಡ್ಕೊತೀನಿ” ಮತ್ತು ಅವುಗಳ ಮೇಲೆ “ಆಶೀರ್ವಾದಗಳ ಸುರಿಮಳೆಯನ್ನ ಸುರಿಸ್ತೀನಿ” ಅಂತ ಹೇಳಿದ್ದನು. ಆ ಆಳ್ವಿಕೆಯಲ್ಲಿ ಕುರಿಗಳೆಲ್ಲವು ಖುಷಿಯಾಗಿರುತ್ತವೆ, ಸುರಕ್ಷಿತವಾಗಿರುತ್ತವೆ. ಅವುಗಳಿಗೆ ಏನೂ ಕಡಿಮೆ ಇರಲ್ಲ. ಆಗ ಮನುಷ್ಯರ ಮಧ್ಯೆ ಮಾತ್ರವಲ್ಲ, ಮನುಷ್ಯರ ಮತ್ತು ಪ್ರಾಣಿಗಳ ಮಧ್ಯೆನೂ ಶಾಂತಿ ಇರುತ್ತೆ.—ಯೆಹೆ. 34:25-28.

20, 21. (ಎ) ‘ನನ್ನ ಸೇವಕ ದಾವೀದನ’ ಬಗ್ಗೆ ಇರೋ ಭವಿಷ್ಯವಾಣಿ ಹೇಗೆ ನೆರವೇರಿತು? (ಬಿ) ‘ಶಾಂತಿಯ ಒಪ್ಪಂದದ’ ಭವಿಷ್ಯವಾಣಿ ದೇವರ ರಾಜ್ಯದಲ್ಲಿ ಹೇಗೆ ನೆರವೇರುತ್ತೆ?

20 ಆ ಭವಿಷ್ಯವಾಣಿ ಹೇಗೆ ನೆರವೇರಿತು? ಯೆಹೋವನು “ನನ್ನ ಸೇವಕ ದಾವೀದ” ಅಂತ ಹೇಳಿದಾಗ ಯೇಸು ಕ್ರಿಸ್ತನನ್ನೇ ಸೂಚಿಸ್ತಿದ್ದನು. ಯಾಕಂದ್ರೆ ಯೇಸು ದಾವೀದನ ವಂಶದಲ್ಲಿ ಹುಟ್ಟಿದವನಾಗಿದ್ದನು. ಅವನಿಗೆ ಆಳುವ ಹಕ್ಕಿತ್ತು. (ಕೀರ್ತ. 89:35, 36) ಯೇಸು ಭೂಮಿಯಲ್ಲಿದ್ದಾಗ ತನ್ನ “ಕುರಿಗಳಿಗೋಸ್ಕರ” ತನ್ನ ಪ್ರಾಣಾನೇ ಕೊಡೋ ಮೂಲಕ ತಾನೊಬ್ಬ “ಒಳ್ಳೇ ಕುರುಬ” ಅಂತ ತೋರಿಸಿಕೊಟ್ಟನು. (ಯೋಹಾ. 10:14, 15) ಆದ್ರೆ ಈಗ ಯೇಸು ಸ್ವರ್ಗದಿಂದ ತನ್ನ ಕುರಿಗಳನ್ನ ನೋಡ್ಕೊತಿದ್ದಾನೆ. (ಇಬ್ರಿ. 13:20) ಯೆಹೋವ ದೇವ್ರು 1914 ರಲ್ಲಿ ಯೇಸುಗೆ ರಾಜ್ಯಾಧಿಕಾರವನ್ನ ಕೊಟ್ಟನು. ತನ್ನ ಎಲ್ಲಾ ಕುರಿಗಳನ್ನ ಮೇಯಿಸುವ ಜವಾಬ್ದಾರಿಯನ್ನ ಕೂಡ ಕೊಟ್ಟನು. ಸ್ವಲ್ಪದರಲ್ಲೇ ಅಂದ್ರೆ 1919 ರಲ್ಲಿ ಯೇಸು ತನ್ನ “ಮನೆಯವ್ರಿಗೆ ಆಹಾರ ಕೊಡೋಕೆ” ‘ನಂಬಿಗಸ್ತ, ವಿವೇಕಿ ಆದ ಆಳನ್ನ’ ನೇಮಿಸಿದನು. (ಮತ್ತಾ. 24:45-47) ಈ ಮನೆಯವ್ರಲ್ಲಿ ಸ್ವರ್ಗಕ್ಕೆ ಹೋಗೋ ಮತ್ತು ಭೂಮಿಯಲ್ಲಿ ಸದಾಕಾಲ ಜೀವಿಸೋ ನಿರೀಕ್ಷೆ ಇರೋ ಎಲ್ಲರು ಸೇರಿದ್ದಾರೆ. ಯೇಸು ಕ್ರಿಸ್ತನ ಮಾರ್ಗದರ್ಶನದ ಕೆಳಗೆ ಈ ಆಳು ಯೆಹೋವ ದೇವರ ಕುರಿಗಳನ್ನ ಚೆನ್ನಾಗಿ ಪೋಷಿಸುತ್ತಾ ಇದೆ. ಈ ಆಧ್ಯಾತ್ಮಿಕ ಆಹಾರದ ಸಹಾಯದಿಂದ ಅವರ ಮಧ್ಯೆ ಪರದೈಸಿನ ವಾತಾವರಣ ಇದೆ.

21 “ಶಾಂತಿಯ ಒಪ್ಪಂದ” ಮತ್ತು ಮುಂದೆ ಬರಲಿರೋ ಆಶೀರ್ವಾದಗಳ ಸುರಿಮಳೆಯ ಬಗ್ಗೆ ಯೆಹೆಜ್ಕೇಲ ಹೇಳಿದ ಭವಿಷ್ಯವಾಣಿಯ ಅರ್ಥವೇನು? ಬಲುಬೇಗನೆ ದೇವರ ರಾಜ್ಯ ಬರುತ್ತೆ. ಆಗ ಯೆಹೋವ ದೇವರ ಶುದ್ಧ ಆರಾಧಕರೆಲ್ಲರೂ ‘ಶಾಂತಿಯ ಒಪ್ಪಂದದ’ ಎಲ್ಲಾ ಆಶೀರ್ವಾದಗಳನ್ನು ಪಡೆಯುತ್ತಾರೆ. ಆಗ ಇಡೀ ಭೂಮಿ ಸುಂದರ ತೋಟದಂತೆ ಆಗುತ್ತೆ. ಅಲ್ಲಿ ಯುದ್ಧ, ಅಪರಾಧ, ಬರಗಾಲ, ಕಾಯಿಲೆ ಇರಲ್ಲ. ಯಾವ ಪ್ರಾಣಿಗಳೂ ಹಾನಿ ಮಾಡಲ್ಲ. (ಯೆಶಾ. 11:6-9; 35:5, 6; 65:21-23) ಅಲ್ಲಿ ದೇವರ ಪ್ರತಿಯೊಂದು ಕುರಿ “ಸುರಕ್ಷಿತವಾಗಿ ಇರುತ್ತೆ, ಅವುಗಳನ್ನ ಯಾರೂ ಹೆದರಿಸಲ್ಲ.” ಆ ಸುಂದರ ತೋಟದಲ್ಲಿ ಇರೋಕೆ ನಾವೆಲ್ರೂ ಕಾಯ್ತಾ ಇದ್ದೀವಿ ಅಲ್ವಾ?—ಯೆಹೆ. 34:28.

ದೇವರ ಕುರಿಗಳನ್ನ ಹೇಗೆ ನೋಡಿಕೊಳ್ಳಲಾಗ್ತಿದೆ ಅಂತ ಸ್ವರ್ಗದಲ್ಲಿರೋ ಕುರುಬನಾದ ಯೇಸು ಕ್ರಿಸ್ತನು ಗಮನಿಸ್ತಾನೆ (ಪ್ಯಾರ 22 ನೋಡಿ)

22. ಯೇಸುಗೆ ಯೆಹೋವ ದೇವರ ಕುರಿಗಳ ಬಗ್ಗೆ ಹೇಗನಿಸುತ್ತೆ? ಹಿರಿಯರು ಯೇಸುವನ್ನ ಹೇಗೆ ಅನುಕರಿಸಬಹುದು?

22 ಈ ಭವಿಷ್ಯವಾಣಿಯಿಂದ ನಾವೇನು ಕಲಿಬಹುದು? ಯೆಹೋವನ ತರನೇ ಯೇಸುವಿಗೂ ಕುರಿಗಳ ಬಗ್ಗೆ ಅಪಾರ ಪ್ರೀತಿ, ಕಾಳಜಿ ಇದೆ. ತನ್ನ ತಂದೆಯ ಕುರಿಗಳಿಗೆ ಸಾಕಷ್ಟು ಆಧ್ಯಾತ್ಮಿಕ ಆಹಾರ ಸಿಗ್ತಿದೆಯಾ ಮತ್ತು ಅವು ಸುರಕ್ಷಿತವಾಗಿವೆಯಾ, ಶಾಂತಿ, ಸಮಾಧಾನದಿಂದ ಆನಂದಿಸ್ತಿವೆಯಾ ಅಂತ ಯೇಸು ಯಾವಾಗ್ಲೂ ಗಮನಿಸ್ತಾ ಇರುತ್ತಾನೆ. ನಮ್ಮನ್ನ ನೋಡಿಕೊಳ್ಳೋಕೆ ಇಂಥ ಕುರುಬ ಇರುವಾಗ ನಮಗೆ ತುಂಬ ಖುಷಿಯಾಗುತ್ತೆ ಅಲ್ವಾ? ಯೇಸು ನೇಮಿಸಿರೋ ಕುರುಬರಾದ ಹಿರಿಯರು ಸಹ ಅವನ ಹಾಗೇ ಕುರಿಗಳನ್ನ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳಬೇಕು ಅಂತ ಯೇಸು ಬಯಸ್ತಾನೆ. ಈ ಹಿರಿಯರು ‘ಸೇವೆ ಮಾಡೋ’ ಮನೋಭಾವದಿಂದ ಕುರಿಗಳನ್ನ “ಮನಸಾರೆ” ಪರಿಪಾಲಿಸಬೇಕು. ಜೊತೆಗೆ ಅವ್ರು ಕುರಿಗಳಿಗೆ ಮಾದರಿಯಾಗಿಯೂ ಇರಬೇಕು. (1 ಪೇತ್ರ 5:2, 3) ಯೆಹೋವ ದೇವರ ಕುರಿಗಳ ಮೇಲೆ ಯಾವತ್ತೂ ಯಾವ ಹಿರಿಯನೂ ದಬ್ಬಾಳಿಕೆ ಮಾಡಲೇಬಾರದು. ಯೆಹೋವ ದೇವರು ಯೆಹೆಜ್ಕೇಲನ ಕಾಲದಲ್ಲಿದ್ದ ಇಸ್ರಾಯೇಲಿನ ಕೆಟ್ಟ ಕುರುಬರ ಬಗ್ಗೆ, “ನಾನು ಅವ್ರಿಂದ ಲೆಕ್ಕ ಕೇಳ್ತೀನಿ” ಅಂತ ಹೇಳಿದ್ದನ್ನ ಮರೆಯಬಾರದು.  (ಯೆಹೆ. 34:10) ಕುರುಬರು ತನ್ನ ಕುರಿಗಳನ್ನ ಹೇಗೆ ನೋಡಿಕೊಳ್ತಿದ್ದಾರೆ ಅಂತ ಮಹಾ ಕುರುಬನಾದ ಯೆಹೋವ ಮತ್ತು ಯೇಸು ಕ್ರಿಸ್ತ ಜಾಗ್ರತೆಯಿಂದ ನೋಡ್ತಾ ಇದ್ದಾರೆ.

“ನನ್ನ ಸೇವಕ ದಾವೀದ ಶಾಶ್ವತಕ್ಕೂ ಅವ್ರ ಪ್ರಧಾನನಾಗಿ ಇರ್ತಾನೆ”

23. ಇಸ್ರಾಯೇಲ್ಯರನ್ನ ಐಕ್ಯಗೊಳಿಸೋ ವಿಷಯದಲ್ಲಿ ಯೆಹೋವನು ಯಾವ ಮಾತನ್ನ ಕೊಟ್ಟನು? ಆ ಮಾತು ಹೇಗೆ ನೆರವೇರಿತು?

23 ತನ್ನ ಆರಾಧಕರೆಲ್ಲರೂ ಒಗ್ಗಟ್ಟಿನಿಂದ ಹೆಗಲಿಗೆ ಹೆಗಲು ಕೊಟ್ಟು ಸೇವೆ ಮಾಡಬೇಕು ಅಂತ ಯೆಹೋವನು ಬಯಸ್ತಾನೆ. ಪುನಃಸ್ಥಾಪನೆಯ ಬಗ್ಗೆ ಇರೋ ಒಂದು ಭವಿಷ್ಯವಾಣಿಯಲ್ಲಿ ಯೆಹೋವನು, ಯೆಹೂದದ ಎರಡು ಕುಲಗಳನ್ನ ಮತ್ತು ಇಸ್ರಾಯೇಲಿನ ಹತ್ತು ಕುಲಗಳನ್ನ ಒಟ್ಟಿಗೆ ಸೇರಿಸ್ತೀನಿ ಅಂತ ಹೇಳಿದ್ದನು. ಎರಡು “ಕೋಲುಗಳು” ಹೇಗೆ ‘ಒಂದೇ ಕೋಲಾಗುತ್ತೋ’ ಹಾಗೇ ಇವರೆಲ್ಲರನ್ನ “ಒಂದೇ ಜನಾಂಗವಾಗಿ ಮಾಡ್ತೀನಿ” ಅಂತ ಯೆಹೋವನು ಮಾತು ಕೊಟ್ಟನು. (ಯೆಹೆ. 37:15-23) ಈ ಭವಿಷ್ಯವಾಣಿ ಕ್ರಿ.ಪೂ. 537 ರಲ್ಲಿ ನೆರವೇರಿತು. ಆಗ ಇಸ್ರಾಯೇಲ್ಯರು ಯೆರೂಸಲೇಮಿಗೆ ವಾಪಸ್‌ ಬಂದು ಒಂದೇ ಜನಾಂಗ ಆಗುವಂತೆ ಯೆಹೋವನು ಮಾಡಿದನು. * ಆದ್ರೆ ಆಗ ಅವ್ರು ಅನುಭವಿಸಿದ ಐಕ್ಯತೆಯು ಮುಂದೆ ದೇವರ ರಾಜ್ಯದಲ್ಲಿ ಜನರೆಲ್ಲರೂ ಸದಾ ಕಾಲ ಒಗ್ಗಟ್ಟಿನಿಂದ ಇರ್ತಾರೆ ಅನ್ನೋದಕ್ಕೆ ಬರೀ ಕಿರುನೋಟವಾಗಿತ್ತು. ಇಸ್ರಾಯೇಲ್ಯರನ್ನ ತಾನು ಒಟ್ಟುಗೂಡಿಸ್ತೀನಿ ಅಂತ ಭವಿಷ್ಯವಾಣಿ ಹೇಳಿದ ಮೇಲೆ ಯೆಹೋವ ದೇವರು ಇನ್ನೊಂದು ಭವಿಷ್ಯವಾಣಿಯನ್ನೂ ಯೆಹೆಜ್ಕೇಲನಿಗೆ ಕೊಟ್ಟನು. ಮುಂದೆ ಬರಲಿಕ್ಕಿರೋ ರಾಜ ಇಡೀ ಭೂಮಿಯಲ್ಲಿರೋ ಶುದ್ಧ ಆರಾಧಕರನ್ನ ಹೇಗೆ ಒಟ್ಟುಗೂಡಿಸ್ತಾನೆ ಮತ್ತು ಈ ಶುದ್ಧ ಆರಾಧಕರು ಹೇಗೆ ಸದಾ ಕಾಲ ಐಕ್ಯರಾಗಿರ್ತಾರೆ ಅಂತ ಈ ಭವಿಷ್ಯವಾಣಿಯ ಮೂಲಕ ಹೇಳಿದನು.

24. ಯೆಹೋವನು ಮೆಸ್ಸೀಯನನ್ನ ಹೇಗೆ ವರ್ಣಿಸಿದ್ದಾನೆ? ಆತನ ಆಳ್ವಿಕೆ ಹೇಗಿರುತ್ತೆ?

 24 ಆ ಭವಿಷ್ಯವಾಣಿ ಏನು? (ಯೆಹೆಜ್ಕೇಲ 37:24-28 ಓದಿ.) ಇಲ್ಲಿ ಸಹ ಯೆಹೋವನು ಮೆಸ್ಸೀಯನನ್ನ “ನನ್ನ ಸೇವಕ ದಾವೀದ,” “ಒಬ್ಬ ಕುರುಬ” ಮತ್ತು “ಪ್ರಧಾನ” ಅಂತ ಕರೆದಿದ್ದಾನೆ. ಅಷ್ಟೇ ಅಲ್ಲ ಆತನನ್ನ “ರಾಜ” ಅಂತ ಸಹ ಕರೆಯಲಾಗಿದೆ. (ಯೆಹೆ. 37:22) ಈ ರಾಜನ ಆಳ್ವಿಕೆ ಹೇಗಿರುತ್ತೆ? ಆತನ ಆಳ್ವಿಕೆ ಶಾಶ್ವತವಾಗಿರುತ್ತೆ. ಯೇಸುವಿನ ಆಳ್ವಿಕೆಯಲ್ಲಿ ಸಿಗೋ ಆಶೀರ್ವಾದಗಳಿಗೆ ಕೊನೆನೇ ಇರಲ್ಲ ಅಂತ “ಶಾಶ್ವತ” ಅನ್ನೋ ಪದದಿಂದ ಗೊತ್ತಾಗುತ್ತೆ. * ಆತನ ಆಳ್ವಿಕೆಯಲ್ಲಿ ಐಕ್ಯತೆ ಇರುತ್ತೆ. ಪ್ರಜೆಗಳೆಲ್ಲರೂ ಆ ‘ಒಬ್ಬನೇ ರಾಜನ’ “ತೀರ್ಪುಗಳ ಪ್ರಕಾರ ನಡೀತಾರೆ.” ಅವರೆಲ್ಲರೂ ಒಟ್ಟಾಗಿ ‘ತಮ್ಮ ದೇಶದಲ್ಲಿ ವಾಸಿಸ್ತಾರೆ.’ ಆತನ ಆಳ್ವಿಕೆಯಿಂದಾಗಿ ಪ್ರಜೆಗಳು ದೇವರಿಗೆ ಆಪ್ತರಾಗ್ತಾರೆ. ಯೆಹೋವನು ಅವರ ಜೊತೆ “ಶಾಂತಿಯ ಒಪ್ಪಂದ” ಮಾಡಿಕೊಳ್ತಾನೆ. ಯೆಹೋವನು ಅವರ ದೇವರಾಗಿ ಇರ್ತಾನೆ ಮತ್ತು ಅವರು ಆತನ ಜನರಾಗಿ ಇರ್ತಾರೆ. ಆತನ ಆರಾಧನಾ ಸ್ಥಳ “ಯಾವಾಗ್ಲೂ ಅವ್ರ ಮಧ್ಯ” ಇರುತ್ತೆ.

25. ಮೆಸ್ಸೀಯ ರಾಜನ ಬಗ್ಗೆ ಇರೋ ಭವಿಷ್ಯವಾಣಿ ಹೇಗೆ ನೆರವೇರಿದೆ?

25 ಈ ಭವಿಷ್ಯವಾಣಿ ಹೇಗೆ ನೆರವೇರಿದೆ? “ಒಬ್ಬ ಕುರುಬ” ಅಂದ್ರೆ ರಾಜನಾದ ಯೇಸು ಕ್ರಿಸ್ತ 1919 ರಲ್ಲಿ ನಂಬಿಗಸ್ತ ಅಭಿಷಿಕ್ತರನ್ನೆಲ್ಲಾ ಒಟ್ಟುಗೂಡಿಸಿದನು. ನಂತ್ರ “ಬೇರೆಬೇರೆ ದೇಶ, ಕುಲ, ಜಾತಿ, ಭಾಷೆಯಿಂದ” ಬಂದ “ಜನ್ರ ಒಂದು ದೊಡ್ಡ ಗುಂಪು” ಈ ಅಭಿಷಿಕ್ತರ ಜೊತೆ ಸೇರಿತು. (ಪ್ರಕ. 7:9) ಆ ಎರಡು ಗುಂಪು ಸೇರಿ ‘ಒಬ್ಬನೇ ಕುರುಬನ’ ಕೆಳಗೆ ‘ಒಂದೇ ಹಿಂಡಾಗಿದೆ.’ (ಯೋಹಾ. 10:16) ಅವರ ನಿರೀಕ್ಷೆ ಸ್ವರ್ಗಕ್ಕೆ ಹೋಗೋದಾಗಿರಲಿ, ಭೂಮಿಯಲ್ಲಿ ಸದಾಕಾಲ ಜೀವಿಸೋದಾಗಿರಲಿ, ಅವ್ರೆಲ್ಲರೂ ಯೆಹೋವನ ತೀರ್ಪಿನ ಪ್ರಕಾರ ನಡೀತಾರೆ. ಹಾಗಾಗಿ, ಅವ್ರೆಲ್ಲರೂ ಲೋಕದ ಬೇರೆಬೇರೆ ಕಡೆ ಇದ್ರೂ ಒಂದು ಕುಟುಂಬದಂತೆ ಇದ್ದಾರೆ. ಹೀಗೆ ಆಧ್ಯಾತ್ಮಿಕ ಪರದೈಸಿನಲ್ಲಿ ಆನಂದಿಸ್ತಿದ್ದಾರೆ.  ಯೆಹೋವನ ಆಶೀರ್ವಾದದಿಂದ ಅವರ ಮಧ್ಯ ಶಾಂತಿ ಇದೆ. ಅವರು ಒಟ್ಟಾಗಿ ಶುದ್ಧ ಆರಾಧನೆಯನ್ನ ಮಾಡ್ತಿದ್ದಾರೆ. ಇದು ಒಂದರ್ಥದಲ್ಲಿ ಆರಾಧನಾ ಸ್ಥಳನೇ ಅವರ ಮಧ್ಯ ಇದ್ದ ಹಾಗಿದೆ. ಯೆಹೋವನು ಅವರ ದೇವರಾಗಿದ್ದಾನೆ ಮತ್ತು ಅವರು ಈಗಲೂ ಸದಾಕಾಲಕ್ಕೂ ಆತನ ಆರಾಧಕರಾಗಿರೋಕೆ ಹೆಮ್ಮೆ ಪಡ್ತಾರೆ.

26. ನಮ್ಮ ಐಕ್ಯತೆಯನ್ನ ಹೆಚ್ಚು ಮಾಡೋಕೆ ನಾವೇನು ಮಾಡಬೇಕು?

26 ಈ ಭವಿಷ್ಯವಾಣಿಯಿಂದ ನಾವೇನು ಕಲಿಬಹುದು? ಲೋಕವ್ಯಾಪಕ ಕುಟುಂಬವಾಗಿ ಐಕ್ಯದಿಂದ ಯೆಹೋವ ದೇವರಿಗೆ ಶುದ್ಧ ಆರಾಧನೆ ಮಾಡೋದು ಎಂಥ ದೊಡ್ಡ ಅವಕಾಶ ಅಲ್ವಾ? ಆದ್ರೆ ಈ ಅವಕಾಶದ ಜೊತೆ ನಮಗೆ ಈ ಕುಟುಂಬದಲ್ಲಿ ಐಕ್ಯತೆಯನ್ನ ಕಾಪಾಡಿಕೊಳ್ಳುವ ಜವಾಬ್ದಾರಿನೂ ಇದೆ. ನಾವೆಲ್ಲರೂ ಒಂದೇ ರೀತಿ ನಡೆಯೋಕೆ ಮತ್ತು ಒಂದೇ ರೀತಿಯ ನಂಬಿಕೆಯನ್ನ ಇಟ್ಕೊಳ್ಳೋಕೆ ನಮ್ಮಿಂದ ಆಗೋದನ್ನೆಲ್ಲಾ ಮಾಡಬೇಕು. (1 ಕೊರಿಂ. 1:10) ಅದಕ್ಕೋಸ್ಕರ ನಾವು ಬೈಬಲಿನ ಒಂದೇ ರೀತಿಯ ಬೋಧನೆಗಳನ್ನ ಕಲಿತೇವೆ. ಒಂದೇ ರೀತಿಯ ನೀತಿ ನಿಯಮಗಳನ್ನ ಪಾಲಿಸ್ತೇವೆ ಮತ್ತು ಸಾರೋದ್ರಲ್ಲಿ ಮತ್ತು ಶಿಷ್ಯರನ್ನಾಗಿ ಮಾಡೋದ್ರಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡ್ತೇವೆ. ನಮ್ಮ ಐಕ್ಯತೆಗೆ ಮುಖ್ಯ ಕಾರಣ ಪ್ರೀತಿನೇ. ನಮ್ಮ ಸಹೋದರರಿಗೆ, ಪರಾನುಭೂತಿ, ಅನುಕಂಪ, ಕನಿಕರ, ಕ್ಷಮೆ ತೋರಿಸೋ ಮೂಲಕ ನಾವು ಈ ಪ್ರೀತಿಯನ್ನ ತೋರಿಸ್ತೇವೆ. ಇದು ನಮ್ಮ ಐಕ್ಯತೆಯನ್ನ ಇನ್ನೂ ಜಾಸ್ತಿ ಮಾಡುತ್ತೆ. ಯಾಕಂದ್ರೆ “ಎಲ್ರನ್ನೂ ಒಂದು ಮಾಡೋದು ಈ ಪ್ರೀತಿನೇ.”—ಕೊಲೊ. 3:12-14; 1 ಕೊರಿಂ. 13:4-7.

ಲೋಕವ್ಯಾಪಕವಾಗಿ ಇರೋ ತನ್ನ ಆರಾಧಕರ ಪ್ರೀತಿಯ ಕುಟುಂಬವನ್ನ ಯೆಹೋವನು ಆಶೀರ್ವದಿಸುತ್ತಾನೆ (ಪ್ಯಾರ 26 ನೋಡಿ)

27. (ಎ) ಯೆಹೆಜ್ಕೇಲ ಪುಸ್ತಕದಲ್ಲಿರೋ ಮೆಸ್ಸೀಯನ ಭವಿಷ್ಯವಾಣಿಗಳ ಬಗ್ಗೆ ನಿಮಗೇನು ಅನಿಸುತ್ತೆ? (ಬಿ) ಮುಂದಿನ ಅಧ್ಯಾಯಗಳಲ್ಲಿ ನಾವೇನು ಕಲಿಯಲಿದ್ದೇವೆ?

27 ಯೆಹೆಜ್ಕೇಲನ ಪುಸ್ತಕದಲ್ಲಿ ಮೆಸ್ಸೀಯನ ಬಗ್ಗೆ ಭವಿಷ್ಯವಾಣಿಗಳನ್ನ ಕೊಟ್ಟಿರೋದಕ್ಕೆ ನಾವು ಯೆಹೋವ ದೇವರಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ. ಇವುಗಳನ್ನ ಓದಿ ಧ್ಯಾನ ಮಾಡುವಾಗ ನಮ್ಮ ರಾಜ ಯೇಸುವಿನ ಬಗ್ಗೆ ತುಂಬ ವಿಷ್ಯಗಳನ್ನ ಕಲಿತೇವೆ. ಯೇಸು ನಮ್ಮ ಭರವಸೆಗೆ ಅರ್ಹನಾಗಿದ್ದಾನೆ. ಆಳುವ ಹಕ್ಕು ಆತನಿಗೆ ಇದೆ. ನಮ್ಮನ್ನ ಪ್ರೀತಿ ಕರುಣೆಯಿಂದ ಪರಿಪಾಲಿಸುತ್ತಾನೆ. ನಾವು ಶಾಶ್ವತವಾಗಿ ಐಕ್ಯವಾಗಿರೋ ತರ ಮಾಡ್ತಾನೆ. ಮೆಸ್ಸೀಯ ರಾಜನ ಪ್ರಜೆಗಳಾಗಿರೋದು ನಮಗೆ ಸಿಕ್ಕಿರೋ ಅಮೂಲ್ಯ ಅವಕಾಶ ಅಲ್ವಾ? ಯೆಹೆಜ್ಕೇಲ ಪುಸ್ತಕದ ಮುಖ್ಯ ವಿಷ್ಯ ಶುದ್ಧ ಆರಾಧನೆಯ ಪುನಃಸ್ಥಾಪನೆಯಾಗಿದೆ. ಅದ್ರಲ್ಲಿ ಮೆಸ್ಸೀಯನ ಬಗ್ಗೆ ಇರೋ ಭವಿಷ್ಯವಾಣಿಗಳೂ ಸೇರಿವೆ. ಯೆಹೋವ ದೇವ್ರು ಯೇಸು ಕ್ರಿಸ್ತನ ಮೂಲಕ ತನ್ನ ಜನರನ್ನ ಒಟ್ಟಿಗೆ ಸೇರಿಸ್ತಾನೆ ಮತ್ತು ಶುದ್ಧ ಆರಾಧನೆಯನ್ನ ಪುನಃಸ್ಥಾಪನೆ ಮಾಡುತ್ತಾನೆ. (ಯೆಹೆ. 20:41) ಶುದ್ಧ ಆರಾಧನೆಯ ಪುನಃಸ್ಥಾಪನೆಯ ಬಗ್ಗೆ ಯೆಹೆಜ್ಕೇಲನ ಪುಸ್ತಕದಲ್ಲಿ ಇನ್ನೂ ಏನೆಲ್ಲಾ ತಿಳಿಸಲಾಗಿದೆ ಅಂತ ಮುಂದಿನ ಅಧ್ಯಾಯಗಳಲ್ಲಿ ನೋಡೋಣ.

^ ಪ್ಯಾರ. 1 ಕ್ರಿ.ಪೂ. 617 ರಲ್ಲಿ ಇಸ್ರಾಯೇಲ್ಯರನ್ನ ಬಾಬೆಲಿಗೆ ಕೈದಿಗಳಾಗಿ ಕರ್ಕೊಂಡು ಹೋಗೋಕೆ ಶುರುಮಾಡಿದ್ರು. ಹಾಗಾಗಿ ಕ್ರಿ.ಪೂ. 612 ಕ್ಕೆ ಆರನೇ ವರ್ಷ ಶುರುವಾಗಿತ್ತು.

^ ಪ್ಯಾರ. 14 ಯೇಸು ದಾವೀದನ ವಂಶಾವಳಿಯಲ್ಲೇ ಹುಟ್ಟಿದ್ದನು ಅಂತ ತೋರಿಸುವ ದಾಖಲೆ ಸುವಾರ್ತಾ ಪುಸ್ತಕಗಳಲ್ಲಿದೆ.—ಮತ್ತಾ. 1:1-16; ಲೂಕ 3:23-31.

^ ಪ್ಯಾರ. 23 ಎರಡು ಕೋಲುಗಳ ಕುರಿತು ಇರೋ ಯೆಹೆಜ್ಕೇಲನ ಭವಿಷ್ಯವಾಣಿ ಮತ್ತು ಅದರ ನೆರವೇರಿಕೆ ಬಗ್ಗೆ ಈ ಪುಸ್ತಕದ 12 ನೇ ಅಧ್ಯಾಯದಲ್ಲಿ ನೋಡಲಿದ್ದೇವೆ.

^ ಪ್ಯಾರ. 24 ಬೈಬಲ್‌ ಬಗ್ಗೆ ವಿವರಿಸೋ ಒಂದು ಪುಸ್ತಕ, “ಶಾಶ್ವತ” ಅನ್ನೋದಕ್ಕೆ ಹೀಬ್ರು ಭಾಷೆಯಲ್ಲಿ ಉಪಯೋಗಿಸಲಾದ ಪದದ ಬಗ್ಗೆ ಹೀಗೆ ತಿಳಿಸುತ್ತೆ: “ಆ ಪದ ಶಾಶ್ವತವಾಗಿರೋದನ್ನ ಮಾತ್ರವಲ್ಲ ಸ್ಥಿರತೆಯನ್ನ, ಸದಾಕಾಲ ಬಾಳೋದನ್ನ, ಯಾವತ್ತೂ ಬದಲಾಗದೇ ಇರೋದನ್ನ ಸೂಚಿಸುತ್ತೆ.”