ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಚೌಕ 1ಎ

ಆರಾಧನೆ ಅಂದ್ರೇನು?

ಆರಾಧನೆ ಅಂದ್ರೇನು?

‘ದೇವರಿಗೆ ತೋರಿಸೋ ಪ್ರೀತಿ ಮತ್ತು ಗೌರವವನ್ನ’ ಆರಾಧನೆ ಅಂತ ಹೇಳ್ತಾರೆ. ಬೈಬಲನ್ನ ಬರೆಯಲಾಗಿರೋ ಮೂಲ ಭಾಷೆಯಲ್ಲಿ “ಆರಾಧನೆ” ಅನ್ನೋದಕ್ಕಿರೋ ಪದಕ್ಕೆ ಬೇರೆಬೇರೆ ಅರ್ಥಗಳಿವೆ. ಅದು, ದೇವರು ಸೃಷ್ಟಿ ಮಾಡಿರೋ ಜೀವಿಗಳಿಗೆ ತುಂಬ ಗೌರವ ಕೊಡೋದನ್ನ ಅಥವಾ ಅಧೀನತೆಯಿಂದ ಇರೋದನ್ನ ಸೂಚಿಸುತ್ತೆ. (ಮತ್ತಾ. 28:9) ಅಷ್ಟೇ ಅಲ್ಲ ಆ ಪದ ದೇವರಿಗೆ ಅಥವಾ ದೇವತೆಗಳಿಗಾಗಿ ಧಾರ್ಮಿಕ ಆಚಾರ ಅಥವಾ ಪದ್ಧತಿಗಳನ್ನ ಮಾಡೋದನ್ನ ಕೂಡ ಸೂಚಿಸುತ್ತೆ. (ಯೋಹಾ. 4:23, 24) ಹಾಗಾಗಿ ಸನ್ನಿವೇಶವನ್ನ ನೋಡಿ ಈ ಪದದ ಅರ್ಥವನ್ನ ನಿರ್ಣಯಿಸಲಾಗುತ್ತೆ.

ವಿಶ್ವದ ರಾಜ ಮತ್ತು ಸೃಷ್ಟಿಕರ್ತನಾದ ಯೆಹೋವ ಮಾತ್ರ ನಮ್ಮ ಪೂರ್ತಿ ಭಕ್ತಿ ಪಡೆಯೋಕೆ ಅರ್ಹನಾಗಿದ್ದಾನೆ. (ಪ್ರಕ. 4:10, 11) ವಿಶ್ವದ ರಾಜನಾಗಿ ಆತನಿಗಿರೋ ಅಧಿಕಾರಕ್ಕೆ ಮತ್ತು ಆತನ ಹೆಸರಿಗೆ ಗೌರವ ಕೊಡೋ ಮೂಲಕ ನಾವು ಆತನನ್ನ ಆರಾಧಿಸ್ತೇವೆ. (ಕೀರ್ತ. 86:9; ಮತ್ತಾ. 6:9, 10) ಯೆಹೆಜ್ಕೇಲ ಪುಸ್ತಕದಲ್ಲಿ ಎರಡು ಮುಖ್ಯ ವಿಷಯಗಳಿವೆ. (1) ಯೆಹೋವನೇ ವಿಶ್ವದ ರಾಜ (2) ಆತನ ಹೆಸರು ಯೆಹೋವ. ಯೆಹೆಜ್ಕೇಲ ಪುಸ್ತಕದಲ್ಲಿ “ವಿಶ್ವದ ರಾಜ ಯೆಹೋವ” ಅಂತ ಸುಮಾರು 217 ಸಾರಿ ತಿಳಿಸಲಾಗಿದೆ ಮತ್ತು “ನಾನೇ ಯೆಹೋವ” ಅಂತ ಸುಮಾರು 55 ಸಾರಿ ತಿಳಿಸಲಾಗಿದೆ.—ಯೆಹೆ. 2:4; 6:7.

ಆರಾಧನೆ ಅಂದ್ರೆ ಅದು ಬರೀ ಒಂದು ಭಾವನೆ ಅಲ್ಲ. ಮನಸಾರೆ ಮಾಡುವ ಕೆಲ್ಸಗಳೂ ಅದ್ರಲ್ಲಿ ಸೇರಿವೆ. (ಯಾಕೋ. 2:26) ನಾವು ನಮ್ಮ ಜೀವನವನ್ನೇ ಯೆಹೋವನಿಗೆ ಸಮರ್ಪಿಸಿಕೊಳ್ಳುವಾಗ ಆತನನ್ನ ವಿಶ್ವದ ರಾಜ ಅಂತ ಒಪ್ಪಿಕೊಳ್ತೇವೆ. ನಮ್ಮ ಜೀವನವಿಡೀ ಎಲ್ಲಾ ವಿಷಯದಲ್ಲೂ ಆತನ ಮಾತು ಕೇಳ್ತೇವೆ ಮತ್ತು ಆತನ ಹೆಸ್ರಿಗೆ ತುಂಬ ಗೌರವ ತೋರಿಸ್ತೇವೆ ಅಂತ ಮಾತು ಕೊಡ್ತೇವೆ. ಯೇಸು ಸೈತಾನನಿಗೆ ಉತ್ರ ಕೊಡುವಾಗ ಆರಾಧನೆಯನ್ನ “ಪವಿತ್ರ ಸೇವೆ” ಅಂತ ಹೇಳಿದನು. (ಮತ್ತಾ. 4:10) ಯೆಹೋವನ ಆರಾಧಕರಾದ ನಾವೆಲ್ರೂ ಆತನ ಸೇವೆ ಮಾಡೋಕೆ ಇಷ್ಟಪಡ್ತೇವೆ. * (ಧರ್ಮೋ. 10:12) ನಮ್ಮ ಆರಾಧನೆಗೆ ನೇರವಾಗಿ ಸಂಬಂಧಿಸಿರೋ ಕೆಲ್ಸಗಳನ್ನ ಮಾಡುವಾಗ ಮತ್ತು ಆ ಕೆಲಸಗಳನ್ನ ಮಾಡ್ಲಿಕ್ಕಾಗಿ ತ್ಯಾಗಗಳನ್ನ ಮಾಡುವಾಗ ನಾವು ಆತನಿಗೆ ಪವಿತ್ರ ಸೇವೆ ಸಲ್ಲಿಸ್ತೇವೆ. ಆ ಕೆಲ್ಸಗಳು ಯಾವುವು?

ಪವಿತ್ರ ಸೇವೆಯಲ್ಲಿ ಅನೇಕ ರೀತಿಯ ಕೆಲ್ಸಗಳು ಸೇರಿವೆ. ಈ ಎಲ್ಲಾ ಕೆಲ್ಸಗಳನ್ನ ಯೆಹೋವ ಅಮೂಲ್ಯವಾಗಿ ನೋಡ್ತಾನೆ. ಸುವಾರ್ತೆ ಸಾರೋದು, ಕೂಟಗಳಲ್ಲಿ ಭಾಗವಹಿಸೋದು, ರಾಜ್ಯ ಸಭಾಗೃಹ ನಿರ್ಮಾಣ ಕೆಲ್ಸದಲ್ಲಿ ಭಾಗವಹಿಸೋದು, ಅವುಗಳನ್ನ ರಿಪೇರಿ ಮಾಡೋದು ಇವೆಲ್ಲಾ ಪವಿತ್ರ ಸೇವೆ ಆಗಿದೆ. ಅಷ್ಟೇ ಅಲ್ಲ ಕುಟುಂಬ ಆರಾಧನೆಯಲ್ಲಿ ಭಾಗವಹಿಸೋದು, ಕಷ್ಟದಲ್ಲಿರೋ ಸಹೋದರ ಸಹೋದರಿಯರನ್ನ ಬೆಂಬಲಿಸಲಿಕ್ಕಾಗಿ ವಿಪತ್ತು ಪರಿಹಾರ ಕೆಲ್ಸದಲ್ಲಿ ಭಾಗವಹಿಸೋದು, ಅಧಿವೇಶನದಲ್ಲಿ ಸ್ವಯಂಸೇವೆ ಮಾಡೋದು ಅಥವಾ ಬೆತೆಲಿನಲ್ಲಿ ಸೇವೆ ಮಾಡೋದು ಸಹ ಪವಿತ್ರ ಸೇವೆಯಾಗಿದೆ. (ಇಬ್ರಿ. 13:16; ಯಾಕೋ. 1:27) ನಾವು ಮನಸಾರೆ ಶುದ್ಧ ಆರಾಧನೆಗೆ ಮೊದಲನೇ ಸ್ಥಾನ ಕೊಡೋದಾದ್ರೆ “ಹಗಲೂರಾತ್ರಿ ಆತನ ಪವಿತ್ರ ಸೇವೆ” ಮಾಡ್ತೇವೆ ಮತ್ತು ಯೆಹೋವ ದೇವರ ಆರಾಧನೆ ಮಾಡೋದ್ರಲ್ಲಿ ಸಂತೋಷಪಡಿತೇವೆ.—ಪ್ರಕ. 7:15.

^ ಪ್ಯಾರ. 5 ಆರಾಧನೆ ಅನ್ನೋದಕ್ಕೆ ಹೀಬ್ರು ಭಾಷೆಯಲ್ಲಿರೋ ಒಂದು ಪದದ ಅರ್ಥ “ಸೇವೆ” ಅಂತಾಗಿದೆ. ಹಾಗಾಗಿ ಆರಾಧನೆಯಲ್ಲಿ ಸೇವೆ ಮಾಡೋದು ಕೂಡ ಸೇರಿದೆ.—ವಿಮೋ. 3:12, ಪಾದಟಿಪ್ಪಣಿ.