ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 6

“ಈಗ ನಿನ್ನ ಅಂತ್ಯ ಬಂದಿದೆ”

“ಈಗ ನಿನ್ನ ಅಂತ್ಯ ಬಂದಿದೆ”

ಯೆಹೆಜ್ಕೇಲ 7:3

ಮುಖ್ಯ ವಿಷಯ: ಯೆರೂಸಲೇಮಿನ ವಿರುದ್ಧ ಯೆಹೋವನ ನ್ಯಾಯತೀರ್ಪಿನ ಭವಿಷ್ಯವಾಣಿ ಮತ್ತು ಅದು ನೆರವೇರಿದ ವಿಧ

1, 2. (ಎ) ಯೆಹೆಜ್ಕೇಲ ಹೇಗೆ ನಡ್ಕೊಂಡ? (ಆರಂಭದ ಚಿತ್ರ ನೋಡಿ.) (ಬಿ) ಅವನು ನಡ್ಕೊಂಡ ರೀತಿ ಏನನ್ನ ಸೂಚಿಸ್ತಿತ್ತು? 

ಪ್ರವಾದಿ ಯೆಹೆಜ್ಕೇಲನು ವಿಚಿತ್ರವಾಗಿ ನಡೆದುಕೊಳ್ತಾ ಇದ್ದಾನೆ ಅನ್ನೋ ಸುದ್ದಿ ಕೈದಿಗಳಾಗಿ ಬಾಬೆಲಿಗೆ ಹೋಗಿದ್ದ ಯೆಹೂದ್ಯರೆಲ್ಲರಿಗೆ ಹಬ್ಬಿತು. ಒಂದು ವಾರದ ತನಕ ಯೆಹೆಜ್ಕೇಲನು ಏನೂ ಮಾತಾಡದೆ ಆಶ್ಚರ್ಯದಿಂದ ಕೂತಿದ್ದನು. ನಂತ್ರ ಇದ್ದಕ್ಕಿದ್ದಂತೆ ಎದ್ದು ತನ್ನ ಮನೆಗೆ ಹೋಗಿ ಬಾಗಿಲನ್ನ ಹಾಕಿಕೊಂಡನು. ಅಕ್ಕಪಕ್ಕದಲ್ಲಿರೋ ಎಲ್ಲರೂ ಆಶ್ಚರ್ಯದಿಂದ ನೋಡ್ತಾನೇ ಇದ್ದರು. ಆಮೇಲೆ ಅವನು ಮನೆಯಿಂದ ಹೊರಗೆ ಬಂದು ಇಟ್ಟಿಗೆಯನ್ನ ತಗೊಂಡು ತನ್ನ ಮುಂದೆ ಇಟ್ಟುಕೊಂಡನು ಮತ್ತು ಅದರ ಮೇಲೆ ಒಂದು ನಕ್ಷೆಯನ್ನ ಕೆತ್ತಿದನು. ಆಮೇಲೆ ಏನೂ ಮಾತಾಡದೇ ಅದರ ಸುತ್ತ ಗೋಡೆ ತರ ಬೇಲಿಯನ್ನ ಕಟ್ಟಿದನು.—ಯೆಹೆಜ್ಕೇಲ 3:10, 11, 15, 24-26; 4:1, 2.

2 ಸಮಯ ಹೋಗ್ತಿದ್ದ ಹಾಗೆನೇ ಯೆಹೆಜ್ಕೇಲ ಏನು ಮಾಡ್ತಿದ್ದಾನೆ ಅಂತ ನೋಡೋಕೆ ಹೆಚ್ಚೆಚ್ಚು ಜನ ಬಂದಿರಬೇಕು. ಅವ್ರೆಲ್ಲ ‘ಇದೆಲ್ಲದ್ರ ಅರ್ಥ ಏನು?’ ಅಂತ ಯೋಚಿಸಿರಬೇಕು. ಯೆಹೆಜ್ಕೇಲ ವಿಚಿತ್ರವಾಗಿ ನಡಕೊಳ್ತಿದ್ದ ರೀತಿ ಏನನ್ನ ಸೂಚಿಸುತ್ತೆ ಅಂತ ಈ ಯೆಹೂದ್ಯರಿಗೆ ಆಮೇಲೆ ಗೊತ್ತಾಗಲಿತ್ತು. ಯೆಹೋವ ದೇವರ ಕೋಪ ಹೊತ್ತಿ ಉರಿಯುತ್ತಿದೆ, ಇದ್ರಿಂದಾಗಿ ಒಂದು ಭಯಾನಕ ಘಟನೆ ನಡೆಯಲಿದೆ ಅನ್ನೋದನ್ನ ತೋರಿಸಿಕೊಡಲಿಕ್ಕಾಗಿ ಯೆಹೆಜ್ಕೇಲ ಆ ರೀತಿ ನಡಕೊಂಡನು. ಆ ಘಟನೆ ಯಾವುದು? ಅದು ಆಗಿನ ಕಾಲದಲ್ಲಿದ್ದ ಇಸ್ರಾಯೇಲ್ಯರ ಮೇಲೆ ಯಾವ ಪರಿಣಾಮ  ಬೀರಿತು? ಇವತ್ತಿನ ಶುದ್ಧ ಆರಾಧಕರು ಅದ್ರ ಬಗ್ಗೆ ತಿಳುಕೊಳ್ಳೋದು ಯಾಕಷ್ಟು ಪ್ರಾಮುಖ್ಯ?

“ಒಂದು ಇಟ್ಟಿಗೆ . . . ಗೋದಿ . . . ಒಂದು ಚೂಪಾದ ಕತ್ತಿ ತಗೊ”

3, 4. (ಎ) ದೇವರ ನ್ಯಾಯತೀರ್ಪಿನ ಯಾವ ಮೂರು ಅಂಶಗಳನ್ನ ಯೆಹೆಜ್ಕೇಲನು ಅಭಿನಯಿಸಿದನು? (ಬಿ) ಯೆರೂಸಲೇಮಿನ ಮುತ್ತಿಗೆಯನ್ನ ಯೆಹೆಜ್ಕೇಲನು ಹೇಗೆ ಅಭಿನಯಿಸಿ ತೋರಿಸಿದನು?

3 ಕ್ರಿ.ಪೂ. 613 ರಲ್ಲಿ ಯೆಹೋವನು ಯೆಹೆಜ್ಕೇಲನಿಗೆ ಒಂದು ನೇಮಕ ಕೊಟ್ಟನು. ತಾನು ಯೆರೂಸಲೇಮಿನ ವಿರುದ್ಧ ತರಲಿಕ್ಕಿರೋ ಮೂರು ರೀತಿಯ ನ್ಯಾಯತೀರ್ಪುಗಳನ್ನ ಅಭಿನಯಿಸಿ ತೋರಿಸುವಂತೆ ಹೇಳಿದನು. ಆ ಮೂರು ರೀತಿಯ ನ್ಯಾಯತೀರ್ಪು ಯಾವುದಂದ್ರೆ, (1) ಯೆರೂಸಲೇಮಿನ ಮೇಲೆ ಮುತ್ತಿಗೆ, (2) ಅಲ್ಲಿನ ಜನರ ಮೇಲೆ ಬರಲಿರೋ ಕಷ್ಟಗಳು ಮತ್ತು (3) ಯೆರೂಸಲೇಮ್‌ ಮತ್ತು ಅಲ್ಲಿನ ಜನರ ನಾಶನ. * ಈ ಮೂರು ವಿಷಯಗಳ ಬಗ್ಗೆ ನಾವೀಗ ನೋಡೋಣ.

4 ಯೆರೂಸಲೇಮಿನ ಮುತ್ತಿಗೆ. ಯೆಹೋವನು ಯೆಹೆಜ್ಕೇಲನಿಗೆ ಹೀಗೆ ಹೇಳಿದನು: ‘ಒಂದು ಇಟ್ಟಿಗೆ ತಗೊಂಡು ನಿನ್ನ ಮುಂದೆ ಇಡು. ಅದಕ್ಕೆ ಮುತ್ತಿಗೆ ಹಾಕ್ತಿರೋ ಹಾಗೆ ಮಾಡು.’ (ಯೆಹೆಜ್ಕೇಲ 4:1-3 ಓದಿ.) ಇಲ್ಲಿ ಇಟ್ಟಿಗೆಯು ಯೆರೂಸಲೇಮ್‌ ಪಟ್ಟಣವನ್ನು ಸೂಚಿಸ್ತಿತ್ತು. ಯೆಹೋವನು ಯೆರೂಸಲೇಮಿಗೆ ನ್ಯಾಯತೀರ್ಪನ್ನ ತರಲು ಉಪಯೋಗಿಸಲಿದ್ದ ಬಾಬೆಲಿನ ಸೈನ್ಯವನ್ನು ಯೆಹೆಜ್ಕೇಲನು ಸೂಚಿಸುತ್ತಿದ್ದನು. ಇಟ್ಟಿಗೆ ಸುತ್ತ ಗೋಡೆ ಕಟ್ಟಿ ದಿಬ್ಬ ಮಾಡೋಕೆ ಯೆಹೆಜ್ಕೇಲನಿಗೆ ಹೇಳಲಾಯ್ತು. ಆಮೇಲೆ ಗೋಡೆ ಬೀಳಿಸೋ ಯಂತ್ರಗಳನ್ನ ತಯಾರಿಸಿ ಇಟ್ಟಿಗೆಯ ಸುತ್ತ ಇಡೋಕೆ ಹೇಳಲಾಯ್ತು. ಅವು ಶತ್ರುಗಳು ಪಟ್ಟಣವನ್ನ ಮುತ್ತಿಗೆ ಹಾಕುವಾಗ ಮತ್ತು ಅದರ ಮೇಲೆ ಆಕ್ರಮಣ ಮಾಡುವಾಗ ಉಪಯೋಗಿಸುವ ಯುದ್ಧ ಸಾಮಗ್ರಿಗಳನ್ನ ಸೂಚಿಸ್ತಿತ್ತು. ಯೆಹೆಜ್ಕೇಲನಿಗೂ ಪಟ್ಟಣಕ್ಕೂ ಮಧ್ಯದಲ್ಲಿ “ಕಬ್ಬಿಣದ ಒಂದು ಹೆಂಚನ್ನ” ಇಡುವಂತೆ ಯೆಹೆಜ್ಕೇಲನಿಗೆ ಹೇಳಲಾಯ್ತು. ಶತ್ರು ಸೈನಿಕರು ಕಬ್ಬಿಣದ ತರ ಬಲಶಾಲಿ ಆಗಿದ್ದಾರೆ ಅನ್ನೋದನ್ನ ಈ ಹೆಂಚು ಸೂಚಿಸ್ತಿತ್ತು. ಕೊನೆಗೆ ಅವನು ಆ ಪಟ್ಟಣವನ್ನ ‘ಗುರಾಯಿಸಿ ನೋಡಿದನು.’ ಯೆಹೆಜ್ಕೇಲ ಮಾಡಿ ತೋರಿಸಿದ ಎಲ್ಲ ವಿಷಯಗಳು ಕನಸು ಮನಸ್ಸಲ್ಲೂ ನೆನಸದ ವಿಷಯ ನಡೆಯುತ್ತೆ ಅನ್ನೋದಕ್ಕೆ ‘ಇಸ್ರಾಯೇಲ್ಯರಿಗೆ ಒಂದು ಗುರುತಾಗಿತ್ತು.’ ಯೆಹೋವನು ಒಂದು ಶತ್ರು ಸೈನ್ಯವನ್ನ ಉಪಯೋಗಿಸಿ ದೇವಾಲಯ ಇದ್ದ ಮತ್ತು ದೇವಜನರ ಪಟ್ಟಣವಾಗಿದ್ದ ಯೆರೂಸಲೇಮಿಗೆ ಮುತ್ತಿಗೆ ಹಾಕಿಸಲಿದ್ದನು!

5. ಯೆರೂಸಲೇಮಿನ ಜನರಿಗೆ ಏನಾಗುತ್ತೆ ಅನ್ನೋದನ್ನ ಯೆಹೆಜ್ಕೇಲನು ಹೇಗೆ ಅಭಿನಯಿಸಿ ತೋರಿಸಿದನು? 

5 ಯೆರೂಸಲೇಮಿನ ಜನರಿಗೆ ಕಷ್ಟಗಳು. ಯೆಹೋವನು ಯೆಹೆಜ್ಕೇಲನಿಗೆ ಹೀಗೆ ಹೇಳಿದನು: “ಗೋದಿ, ಬಾರ್ಲಿ, ಅವರೆಕಾಳು, ಬೇಳೆಕಾಳು, ಸಿರಿಧಾನ್ಯ ಮತ್ತು ಇನ್ನೊಂದು ತರದ ಗೋದಿಯನ್ನ ಒಂದು ಪಾತ್ರೆಯಲ್ಲಿ ಹಾಕಿ ಅವುಗಳಿಂದ ರೊಟ್ಟಿ ಮಾಡ್ಕೊಬೇಕು.” ಆಮೇಲೆ “ಪ್ರತಿದಿನ 20 ಶೆಕೆಲ್‌ ರೊಟ್ಟಿಯನ್ನ ತೂಕಮಾಡಿ ತಿನ್ನಬೇಕು.” ಯಾಕಂದ್ರೆ “ನಾನು ಯೆರೂಸಲೇಮಿಗೆ ಆಹಾರ ಬರೋದನ್ನ ನಿಲ್ಲಿಸಿಬಿಡ್ತೀನಿ.” (ಯೆಹೆ. 4:9-16) ಈ ದೃಶ್ಯದಲ್ಲಿ ಯೆಹೆಜ್ಕೇಲನು ಬಾಬೆಲಿನ ಸೈನ್ಯವನ್ನು ಸೂಚಿಸುತ್ತಿರಲಿಲ್ಲ. ಬದಲಿಗೆ ಯೆರೂಸಲೇಮಿನ ಜನರನ್ನ ಸೂಚಿಸುತ್ತಿದ್ದನು. ಯೆರೂಸಲೇಮಿಗೆ ಮುತ್ತಿಗೆ ಹಾಕಲ್ಪಟ್ಟಾಗ ಅಲ್ಲಿ ಆಹಾರದ ಸರಬರಾಜು ತುಂಬ ಕಡಿಮೆ ಆಗುತ್ತೆ ಅಂತ ಯೆಹೆಜ್ಕೇಲ ಅಭಿನಯಿಸಿ ತೋರಿಸಿದ ವಿಷಯಗಳು ಸೂಚಿಸ್ತಿದ್ದವು. ಯೆಹೆಜ್ಕೇಲ ಬೇರೆ ಬೇರೆ ಧಾನ್ಯಗಳನ್ನ ಒಟ್ಟು ಹಾಕಿ ಮಾಡಿದ ರೊಟ್ಟಿ ಕೂಡ ಒಂದು ವಿಷಯವನ್ನ ಸೂಚಿಸ್ತಿತ್ತು. ಏನಂದ್ರೆ ಆ ಸಮಯದಲ್ಲಿ ಯೆರೂಸಲೇಮಿನ ಜನರು ತಮಗೇನು ಸಿಗುತ್ತೋ ಅದನ್ನೇ ತಿನ್ನಬೇಕಾದ ಪರಿಸ್ಥಿತಿ ಬರುತ್ತೆ ಅಂತ ಸೂಚಿಸ್ತಿತ್ತು. ಬರಗಾಲ ಎಷ್ಟರ ಮಟ್ಟಿಗೆ ಘೋರವಾಗಿರಲಿತ್ತು? ಆಗ ಯೆರೂಸಲೇಮಿನ ಜನರ  ಪರಿಸ್ಥಿತಿ ಹೇಗಿರುತ್ತೆ ಅನ್ನೋದ್ರ ಬಗ್ಗೆ ಯೆಹೆಜ್ಕೇಲನು ಹೀಗೆ ಹೇಳಿದ್ದಾನೆ: “ಹೆತ್ತವರು ತಮ್ಮ ಮಕ್ಕಳನ್ನ ತಿಂತಾರೆ, ಮಕ್ಕಳು ತಮ್ಮ ಹೆತ್ತವರನ್ನ ತಿಂತಾರೆ.” ಅನೇಕರು ‘ಬರಗಾಲ ಅನ್ನೋ ಬಾಣಗಳಿಂದ’ ಕಷ್ಟಗಳನ್ನ ಅನುಭವಿಸ್ತಾರೆ ಮತ್ತು ಜನರು “ಹಾಳಾಗಿ ಹೋಗ್ತಾರೆ.”—ಯೆಹೆ. 4:17; 5:10, 16.

6. (ಎ) ಯೆಹೆಜ್ಕೇಲನು ಒಂದೇ ಸಲ ಹೇಗೆ ಎರಡು ಪಾತ್ರಗಳನ್ನ ಅಭಿನಯಿಸಿ ತೋರಿಸಿದನು? (ಬಿ) ಕೂದಲನ್ನ ತೂಕ ಮಾಡಿ ಮೂರು ಭಾಗ ಮಾಡು ಅಂತ ಯೆಹೋವನು ಕೊಟ್ಟ ಆಜ್ಞೆ ಏನನ್ನ ಸೂಚಿಸ್ತಿತ್ತು?

6 ಯೆರೂಸಲೇಮ್‌ ಮತ್ತು ಅಲ್ಲಿನ ಜನರ ನಾಶನ. ಈ ಸಲ ಯೆಹೆಜ್ಕೇಲನು ಒಂದೇ ಸಲಕ್ಕೆ ಎರಡು ಪಾತ್ರಗಳನ್ನ ಅಭಿನಯಿಸಿ ತೋರಿಸಿದನು. (1) ಯೆಹೋವನು ಏನು ಮಾಡ್ತಾನೆ ಅನ್ನೋದನ್ನ ಅವನು ಅಭಿನಯಿಸಿದನು. ಯೆಹೋವನು ಅವನಿಗೆ, ‘ನೀನು ಒಂದು ಚೂಪಾದ ಕತ್ತಿ ತಗೊ. ಅದನ್ನ ಕ್ಷೌರದ ಕತ್ತಿ ತರ ಬಳಸು’ ಅಂತ ಹೇಳಿದನು. (ಯೆಹೆಜ್ಕೇಲ 5:1, 2 ಓದಿ.) ಕತ್ತಿಯನ್ನ ಹಿಡುಕೊಂಡಿದ್ದ ಯೆಹೆಜ್ಕೇಲನ ಕೈ ಯೆಹೋವನ ಕೈಯನ್ನ ಸೂಚಿಸ್ತಿತ್ತು. ಅಂದ್ರೆ ಬಾಬೆಲಿನ ಸೈನ್ಯವನ್ನ ಉಪಯೋಗಿಸಿ ಯೆಹೋವನು ತರಲಿದ್ದ ನ್ಯಾಯತೀರ್ಪನ್ನ ಸೂಚಿಸ್ತಿತ್ತು. (2) ಆ ಸಮಯದಲ್ಲಿ ಯೆಹೂದ್ಯರು ಏನೆಲ್ಲಾ ಅನುಭವಿಸ್ತಾರೆ ಅನ್ನೋದನ್ನೂ ಯೆಹೆಜ್ಕೇಲನು ಅಭಿನಯಿಸಿ ತೋರಿಸಿದನು. ಯೆಹೋವನು ಅವನಿಗೆ, “ನಿನ್ನ ಕೂದಲನ್ನ ಗಡ್ಡವನ್ನ ಬೋಳಿಸ್ಕೊ” ಅಂದನು. ಇದು ಯೆಹೂದ್ಯರ ಮೇಲೆ ಯಾವ ರೀತಿ ಆಕ್ರಮಣವಾಗುತ್ತೆ ಮತ್ತು ಅವ್ರು ಹೇಗೆ ಸಂಪೂರ್ಣ ನಾಶವಾಗ್ತಾರೆ ಅನ್ನೋದನ್ನ ಸೂಚಿಸ್ತಿತ್ತು. ಅಷ್ಟೇ ಅಲ್ಲ, ಯೆಹೋವನು ಯೆಹೆಜ್ಕೇಲನಿಗೆ, “ಒಂದು ತಕ್ಕಡಿಯಲ್ಲಿ ಆ ಕೂದಲನ್ನ ತೂಕಮಾಡಿ ಮೂರು ಭಾಗ ಮಾಡು” ಅಂತ ಹೇಳಿದನು. ಇದು ಯೆಹೋವನು ಹೇಳಿದ ಹಾಗೇ ಯೆರೂಸಲೇಮ್‌ ಸಂಪೂರ್ಣವಾಗಿ ನಾಶ ಆಗುತ್ತೆ ಅನ್ನೋದನ್ನ ಸೂಚಿಸ್ತಿತ್ತು.

7. ಯೆಹೋವನು ಯೆಹೆಜ್ಕೇಲನಿಗೆ ಕೂದಲನ್ನ ಮೂರು ಭಾಗ ಮಾಡಿ ಒಂದೊಂದನ್ನ ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸೋಕೆ ಯಾಕೆ ಹೇಳಿದನು?

 7 ಯೆಹೋವನು ಯೆಹೆಜ್ಕೇಲನಿಗೆ ಕೂದಲನ್ನ ಮೂರು ಭಾಗ ಮಾಡಿ ಒಂದೊಂದನ್ನ ಬೇರೆ ಬೇರೆ ರೀತಿ ಉಪಯೋಗಿಸೋಕೆ ಯಾಕೆ ಹೇಳಿದನು? (ಯೆಹೆಜ್ಕೇಲ 5:7-12 ಓದಿ.) ಯೆಹೆಜ್ಕೇಲನು ಆ ಕೂದಲಲ್ಲಿ ಒಂದು ಭಾಗವನ್ನ ಸುಟ್ಟುಬಿಟ್ಟನು. ಇದರರ್ಥ ಯೆರೂಸಲೇಮಿನ ಕೆಲವು ಜನರು “ಪಟ್ಟಣದ ಒಳಗೆ” ಸಾಯಲಿದ್ದರು. ಅವನು ಆ ಕೂದಲಲ್ಲಿ ಇನ್ನೊಂದು ಭಾಗವನ್ನ ಕತ್ತಿಯಿಂದ ಕತ್ತರಿಸಿಬಿಟ್ಟನು. ಅಂದ್ರೆ ಯೆರೂಸಲೇಮಿನ ಇನ್ನು ಕೆಲವು ನಿವಾಸಿಗಳು ಪಟ್ಟಣದ ಹೊರಗೆ ಕೊಲ್ಲಲ್ಪಡಲಿದ್ದರು. ಯೆಹೆಜ್ಕೇಲನು ಮೂರನೇ ಭಾಗವನ್ನು ‘ಗಾಳಿಗೆ ತೂರಿದನು.’ ಇದು, ಅಲ್ಲಿನ ನಿವಾಸಿಗಳು ಬೇರೆ ಜನಾಂಗಗಳ ಮಧ್ಯ ಚೆಲ್ಲಾಪಿಲ್ಲಿಯಾಗಿ ಹೋಗ್ತಾರೆ ಅನ್ನೋದನ್ನ ಸೂಚಿಸ್ತಿತ್ತು. ಆದ್ರೆ ಒಂದು ‘ಕತ್ತಿ ಅವ್ರನ್ನ ಅಟ್ಟಿಸ್ಕೊಂಡು ಹೋಗಲಿತ್ತು.’ ಅದರರ್ಥ ಬದುಕುಳಿದ ಜನರು ಎಲ್ಲೇ ಹೋಗಿ ಜೀವಿಸಿದ್ರೂ ಅವ್ರಿಗೆ ಶಾಂತಿ, ನೆಮ್ಮದಿ ಸಿಗಲ್ಲ ಎಂದಾಗಿತ್ತು.

8. (ಎ) ಯೆಹೆಜ್ಕೇಲನ ಭವಿಷ್ಯವಾಣಿಯಲ್ಲಿ ಯಾವ ನಿರೀಕ್ಷೆಯ ಆಶಾಕಿರಣವಿತ್ತು? (ಬಿ) ’ಸ್ವಲ್ಪ ಕೂದಲಿನ’ ಬಗ್ಗೆ ಹೇಳಿದ ಭವಿಷ್ಯವಾಣಿ ಹೇಗೆ ನೆರವೇರಿತು?

8 ಯೆಹೆಜ್ಕೇಲನ ಭವಿಷ್ಯವಾಣಿಯಲ್ಲಿ ಬರೀ ದುರಂತಗಳಲ್ಲ, ನಿರೀಕ್ಷೆಯ ಆಶಾಕಿರಣ ಕೂಡ ಇತ್ತು. ಯೆಹೆಜ್ಕೇಲ ಬೋಳಿಸಿದ ಕೂದಲಿನ ಬಗ್ಗೆ ಯೆಹೋವನು ಹೀಗೆ ಹೇಳಿದನು: “ಸ್ವಲ್ಪ ಕೂದಲು ತಗೊಂಡು ನಿನ್ನ ಅಂಗಿ ಅಂಚಲ್ಲಿ ಸುತ್ತಿಡು.” (ಯೆಹೆ. 5:3) ಇದು, ಚೆಲ್ಲಾಪಿಲ್ಲಿಯಾಗಿ ಹೋದ ಯೆಹೂದ್ಯರಲ್ಲಿ ಕೆಲವ್ರು ಬದುಕಿ ಉಳಿಯುತ್ತಾರೆ ಅನ್ನೋದನ್ನ ಸೂಚಿಸ್ತಿತ್ತು. ಅವ್ರಲ್ಲಿ ಕೆಲವ್ರು ಬಾಬೆಲಿಗೆ ಕೈದಿಗಳಾಗಿ ಹೋಗಿ 70 ವರ್ಷಗಳ ನಂತರ ಯೆರೂಸಲೇಮಿಗೆ ವಾಪಸ್‌ ಬರಲಿದ್ದರು. (ಯೆಹೆ. 6:8, 9; 11:17) ಆ ಭವಿಷ್ಯವಾಣಿ ನೆರವೇರಿತಾ? ಹೌದು. ಅನೇಕ ವರ್ಷಗಳಾದ ನಂತ್ರ ಚೆಲ್ಲಾಪಿಲ್ಲಿಯಾಗಿ ಹೋಗಿದ್ದ ಯೆಹೂದ್ಯರಲ್ಲಿ ಕೆಲವ್ರು ಯೆರೂಸಲೇಮಿಗೆ ಹಿಂದಿರುಗಿದ್ರು ಅಂತ ಪ್ರವಾದಿ ಹಗ್ಗಾಯ ತಿಳಿಸಿದ್ದಾನೆ. ಅವರು “ಮುಂಚೆ ಇದ್ದ ಆಲಯವನ್ನ” ಅಂದ್ರೆ ಸೊಲೊಮೋನ ಕಟ್ಟಿದ ಆಲಯವನ್ನ‘ಕಣ್ಣಾರೆ ನೋಡಿದ್ದ ವಯಸ್ಸಾದ  ಜನ್ರಾಗಿದ್ರು.’ (ಎಜ್ರ 3:12; ಹಗ್ಗಾ. 2:1-3) ಹೀಗೆ ಯೆಹೋವ ದೇವ್ರು ಮೊದಲೇ ತಿಳಿಸಿದ ಹಾಗೆ ಶುದ್ಧ ಆರಾಧನೆ ಅಳಿದು ಹೋಗದಂತೆ ನೋಡಿಕೊಂಡನು. ಶುದ್ಧ ಆರಾಧನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಈ ಪುಸ್ತಕದ 9 ನೇ ಅಧ್ಯಾಯದಲ್ಲಿ ನೋಡಲಿದ್ದೇವೆ.—ಯೆಹೆ. 11:17-20.

ಮುಂದೆ ನಡೆಯಲಿರೋ ಘಟನೆಗಳ ಬಗ್ಗೆ ಈ ಭವಿಷ್ಯವಾಣಿಯಿಂದ ನಾವೇನು ಕಲಿಬಹುದು?

9, 10. ಯೆಹೆಜ್ಕೇಲ ಅಭಿನಯಿಸಿದ ವಿಷಯಗಳ ಬಗ್ಗೆ ಯೋಚಿಸುವಾಗ ಮುಂದೆ ನಡೆಯಲಿರೋ ಯಾವ ವಿಷಯಗಳು ನೆನಪಾಗ್ತವೆ?

9 ಯೆಹೆಜ್ಕೇಲ ಅಭಿನಯಿಸಿದ ವಿಷಯಗಳ ಬಗ್ಗೆ ಯೋಚಿಸುವಾಗ ಮುಂದೆ ನಡೆಯುತ್ತೆ ಅಂತ ಬೈಬಲಿನಲ್ಲಿ ತಿಳಿಸಲಾಗಿರೋ ಕೆಲವು ವಿಷಯಗಳು ನೆನಪಾಗುತ್ತವೆ. ಅವು ಯಾವುವು? ಯೆರೂಸಲೇಮಿಗೆ ಆದಂತೆಯೇ ಎಲ್ಲಾ ಸುಳ್ಳು ಧರ್ಮಗಳಿಗೂ ಕನಸುಮನಸ್ಸಲ್ಲೂ ನೆನಸದ ವಿಷಯ ನಡೆಯಲಿದೆ. ಯೆಹೋವನು ರಾಜಕೀಯ ಶಕ್ತಿಗಳನ್ನ ಉಪಯೋಗಿಸಿ ಆ ಧರ್ಮಗಳ ಮೇಲೆ ಆಕ್ರಮಣ ಮಾಡಲಿದ್ದಾನೆ. (ಪ್ರಕ. 17:16-18) ಯೆರೂಸಲೇಮಿನ ನಾಶನದ ಬಗ್ಗೆ, ‘ಅದು ಇಲ್ಲಿ ತನಕ ಯಾರ ಮೇಲೂ ಬಂದಿರದ ಕಷ್ಟ’ ಅಂತ ತಿಳಿಸಲಾಗಿತ್ತು. ಅದೇ ರೀತಿ “ಮಹಾ ಸಂಕಟ” ಮತ್ತು ಹರ್ಮಗೆದ್ದೋನ್‌ ಯುದ್ಧದಲ್ಲೂ ‘ಇವತ್ತಿನ ತನಕ ಬಂದಿಲ್ಲದ ಕಷ್ಟ’ ಬರುತ್ತೆ.—ಯೆಹೆ. 5:9; 7:5; ಮತ್ತಾ. 24:21.

10 ಸುಳ್ಳು ಧರ್ಮದ ನಾಶ ಆದಾಗ ಅದನ್ನ ಬೆಂಬಲಿಸಿದ ಹೆಚ್ಚಿನ ಜನರು ಬದುಕಿ ಉಳಿಯುತ್ತಾರೆ ಅಂತ ದೇವರ ವಾಕ್ಯ ಹೇಳುತ್ತೆ. ಬಚ್ಚಿಟ್ಟುಕೊಳ್ಳೋಕೆ ಸ್ಥಳ ಹುಡುಕುತ್ತಿರೋ ಬೇರೆ ಜನರ ಜೊತೆ ಈ ಬದುಕುಳಿದ ಭಯಭೀತ ಜನರು ಸೇರಿಕೊಳ್ತಾರೆ. (ಜೆಕ. 13:4-6; ಪ್ರಕ. 6:15-17) ಅವರ ಪರಿಸ್ಥಿತಿ ಯೆರೂಸಲೇಮ್‌ ನಾಶ ಆದಾಗ ಅಲ್ಲಿ ಬದುಕುಳಿದ ಜನರ ತರನೇ ಇರುತ್ತೆ. ಅವರು ‘ಗಾಳಿಗೆ ತೂರಿದ’ ಹಾಗೆ ಚೆಲ್ಲಾಪಿಲ್ಲಿಯಾಗಿ ಹೋಗಿದ್ದರು. ನಾವು  7 ನೇ ಪ್ಯಾರದಲ್ಲಿ ನೋಡಿದ ಹಾಗೆ ಅವರ ಜೀವ ಸ್ವಲ್ಪ ಸಮಯಕ್ಕೆ ಉಳಿದ್ರೂ ಒಂದು ‘ಕತ್ತಿ ಅವ್ರನ್ನ ಅಟ್ಟಿಸ್ಕೊಂಡು ಹೋಗೋ ತರ’ ಯೆಹೋವನು ಮಾಡಿದ್ದನು. (ಯೆಹೆ. 5:2) ಅದೇ ರೀತಿ ಸುಳ್ಳು ಧರ್ಮ ನಾಶ ಆಗುವಾಗ ಬದುಕಿ ಉಳಿಯೋ ಜನರು ಎಲ್ಲೇ ಬಚ್ಚಿಟ್ಟುಕೊಂಡ್ರೂ ಯೆಹೋವನ ಕತ್ತಿಯಿಂದ ತಪ್ಪಿಸಿಕೊಳ್ಳೋಕಾಗಲ್ಲ. ಇವ್ರೆಲ್ಲರೂ ಆಡುಗಳಂತೆ ಇರೋ ಉಳಿದ ಜನರ ಜೊತೆಯಲ್ಲಿ ಹರ್ಮಗೆದ್ದೋನಿನಲ್ಲಿ ನಾಶ ಆಗ್ತಾರೆ.—ಯೆಹೆ. 7:4; ಮತ್ತಾ. 25:33, 41, 46; ಪ್ರಕ. 19:15, 18.

ಸಿಹಿಸುದ್ದಿ ಸಾರೋ ವಿಷ್ಯದಲ್ಲಿ ನಾವು ‘ಮೂಕರಾಗಿ’ ಬಿಡ್ತೇವೆ

11, 12. (ಎ) ಯೆರೂಸಲೇಮಿನ ಮುತ್ತಿಗೆಯ ಭವಿಷ್ಯವಾಣಿಯನ್ನ ಚೆನ್ನಾಗಿ ಅರ್ಥ ಮಾಡಿಕೊಂಡ್ರೆ ನಾವು ಹೇಗೆ ಸೇವೆ ಮಾಡ್ತೇವೆ? (ಬಿ) ಸಾರೋ ಕೆಲಸದಲ್ಲಿ ಮತ್ತು ನಮ್ಮ ಸಂದೇಶದಲ್ಲಿ ಯಾವ ಬದಲಾವಣೆಯಾಗುತ್ತೆ?

11 ಈ ಭವಿಷ್ಯವಾಣಿ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಳ್ಳೋದ್ರಿಂದ ಸೇವೆಯಲ್ಲಿ ನಮಗಿರೋ ಹುರುಪು ಹೆಚ್ಚಾಗುತ್ತೆ. ಹೇಗೆ? ಜನರನ್ನ ದೇವರ ಸೇವಕರನ್ನಾಗಿ ಮಾಡಲಿಕ್ಕಾಗಿ ನಾವು ಈಗಲೇ ನಮ್ಮಿಂದ ಆಗೋದನ್ನೆಲ್ಲಾ ಮಾಡಬೇಕು ಅಂತ ಇದು ನಮಗೆ ನೆನಪಿಸುತ್ತೆ. ಯಾಕಂದ್ರೆ ‘ಎಲ್ಲಾ ದೇಶಗಳ ಜನರನ್ನ ಶಿಷ್ಯರನ್ನಾಗಿ ಮಾಡೋಕೆ’ ನಮಗೆ ಉಳಿದಿರೋ ಸಮಯ ಸ್ವಲ್ಪನೇ ಆಗಿದೆ. (ಮತ್ತಾ. 28:19, 20; ಯೆಹೆ. 33:14-16) “ಕೋಲು” (ರಾಜಕೀಯ ಶಕ್ತಿಗಳು) ಧರ್ಮಗಳ ಮೇಲೆ ಆಕ್ರಮಣ ಮಾಡುವಾಗ ನಾವು ರಕ್ಷಣೆಯ ಸಂದೇಶವನ್ನು ಸಾರಲ್ಲ. (ಯೆಹೆ. 7:10) ಯೆಹೆಜ್ಕೇಲ ಪ್ರವಾದಿಯಾಗಿದ್ದಾಗ ಸ್ವಲ್ಪ ಕಾಲ “ಮೂಕನ ತರ” ಇದ್ದನು ಅಥವಾ ದೇವರ ಸಂದೇಶ ಸಾರೋದನ್ನ ನಿಲ್ಲಿಸಿದ್ದನು. ಅದೇ ರೀತಿ ನಾವು ಸಹ ಸಿಹಿಸುದ್ದಿ ಸಾರೋ ವಿಷ್ಯದಲ್ಲಿ ಮೂಕರ ತರ ಆಗ್ತೀವಿ. (ಯೆಹೆ. 3:26, 27; 33:21, 22) ಸುಳ್ಳು ಧರ್ಮ ನಾಶ ಆದ ಮೇಲೆ ಜನರು ಒಂದರ್ಥದಲ್ಲಿ ‘ಪ್ರವಾದಿಗಳ ಹತ್ರ ಹೋಗಿ ಏನಾದ್ರೂ ದರ್ಶನ  ಆಯ್ತಾ ಅಂತ ಕೇಳ್ತಾ’ ಅಲೆಯುತ್ತಾ ಇರ್ತಾರೆ. ಆದ್ರೆ ಅವ್ರಿಗೆ ಯಾರೂ ಜೀವ ಕಾಪಾಡಿಕೊಳ್ಳೋಕೆ ಬೇಕಾದ ಮಾರ್ಗದರ್ಶನ ಕೊಡಲ್ಲ. (ಯೆಹೆ. 7:26) ಯಾಕಂದ್ರೆ ಅಂಥ ಮಾರ್ಗದರ್ಶನವನ್ನ ಪಡೆಯೋಕೆ ಮತ್ತು ಕ್ರಿಸ್ತನ ಶಿಷ್ಯರಾಗೋಕೆ ಕೊಟ್ಟ ಸಮಯ ಆಗ ಮುಗಿದು ಹೋಗಿರುತ್ತೆ.

12 ಆದ್ರೂ ಸಾರೋ ಕೆಲಸ ಮುಗಿದಿರಲ್ಲ. ಯಾಕಂದ್ರೆ ಮಹಾ ಸಂಕಟದ ಸಮಯದಲ್ಲಿ ನಾವು ನ್ಯಾಯತೀರ್ಪಿನ ಸಂದೇಶವನ್ನ ಸಾರ್ತೇವೆ. ಇದು ದೊಡ್ಡ ಆಲಿಕಲ್ಲಿನ ಮಳೆ ತರ ಇರುತ್ತೆ. ಈ ಸಂದೇಶ, ದುಷ್ಟಲೋಕದ ನಾಶ ಇನ್ನೇನು ಆಗಲಿಕ್ಕಿದೆ ಅನ್ನೋದನ್ನ ಸೂಚಿಸುತ್ತೆ.—ಪ್ರಕ. 16:21.

“ನೋಡು, ಅದು ಬರ್ತಿದೆ!”

13. ಎಡಕ್ಕೆ ಮತ್ತು ಬಲಕ್ಕೆ ತಿರುಗಿ ಮಲಗು ಅಂತ ಯೆಹೋವನು ಯೆಹೆಜ್ಕೇಲನಿಗೆ ಯಾಕೆ ಹೇಳಿದನು?

13 ಯೆಹೆಜ್ಕೇಲನು ಯೆರೂಸಲೇಮ್‌ ಹೇಗೆ ನಾಶ ಆಗುತ್ತೆ ಅಂತ ಹೇಳಿದ್ದು ಮಾತ್ರವಲ್ಲ, ಯಾವಾಗ ನಾಶ ಆಗುತ್ತೆ ಅಂತನೂ ಅಭಿನಯಿಸಿ ತೋರಿಸಿದನು. ಯೆಹೋವನು ಯೆಹೆಜ್ಕೇಲನಿಗೆ 390 ದಿನ ಎಡಕ್ಕೆ ತಿರುಗಿ ಮಲಗೋಕೆ ಮತ್ತು 40 ದಿನ ಬಲಕ್ಕೆ ತಿರುಗಿ ಮಲಗೋಕೆ ಹೇಳಿದನು. ಇಲ್ಲಿ ಒಂದು ದಿನ ಒಂದು ವರ್ಷವನ್ನ ಸೂಚಿಸ್ತಿತ್ತು.  (ಯೆಹೆಜ್ಕೇಲ 4:4-6 ಓದಿ; ಅರ. 14:34) ಯೆಹೆಜ್ಕೇಲನು ಈ ಅಭಿನಯವನ್ನ ಪ್ರತಿದಿನ ಸ್ವಲ್ಪ ಸಮಯ ಮಾತ್ರ ಮಾಡಿ ತೋರಿಸಿರಬೇಕು. ಇದು ಯೆರೂಸಲೇಮ್‌ ನಾಶವಾಗುವ ವರ್ಷ ಯಾವುದು ಅಂತ ತೋರಿಸಿಕೊಡುತ್ತಿತ್ತು. ಇಸ್ರಾಯೇಲ್ಯರು ಪಾಪ ಮಾಡಿದ 390 ವರ್ಷಗಳು ಕ್ರಿ.ಪೂ. 997 ರಲ್ಲಿ ಆರಂಭವಾದವು, ಯಾಕಂದ್ರೆ ಇದೇ ವರ್ಷದಲ್ಲಿ 12 ಕುಲಗಳ ರಾಜ್ಯವು ಎರಡು ಭಾಗವಾಯ್ತು. (1 ಅರ. 12:12-20) ಯೆಹೂದ ಪಾಪ ಮಾಡಿದ 40 ವರ್ಷಗಳು ಕ್ರಿ.ಪೂ. 647 ರಲ್ಲಿ ಆರಂಭವಾದವು. ಇದೇ ವರ್ಷ ಯೆಹೂದ ರಾಜ್ಯವನ್ನ ಅದರ ನಾಶನದ ಬಗ್ಗೆ ಎಚ್ಚರಿಸಲಿಕ್ಕಾಗಿ ಯೆರೆಮೀಯನನ್ನ ಪ್ರವಾದಿಯಾಗಿ ನೇಮಿಸಲಾಯ್ತು. (ಯೆರೆ. 1:1, 2, 17-19; 19:3, 4) ಹೀಗೆ ಈ ಎರಡೂ ಕಾಲಾವಧಿಯು ಕ್ರಿ.ಪೂ. 607 ರಲ್ಲಿ ಮುಗಿಯಲಿದ್ದವು. ಯೆಹೋವನು ಹೇಳಿದ ಹಾಗೇ ಈ ವರ್ಷದಲ್ಲೇ ಯೆರೂಸಲೇಮ್‌ ನಾಶವಾಯ್ತು. *

ಯೆರೂಸಲೇಮ್‌ ಯಾವ ವರ್ಷದಲ್ಲಿ ನಾಶ ಆಗುತ್ತೆ ಅಂತ ಯೆಹೆಜ್ಕೇಲ ಹೇಗೆ ಅಭಿನಯಿಸಿ ತೋರಿಸಿದ? (ಪ್ಯಾರ 13 ನೋಡಿ)

14. (ಎ) ಯೆಹೋವನು ಹೇಳಿದ್ದನ್ನ ಸರಿಯಾದ ಸಮಯದಲ್ಲೇ ಮಾಡ್ತಾನೆ ಅನ್ನೋ ನಂಬಿಕೆ ತನಗಿದೆ ಅಂತ ಯೆಹೆಜ್ಕೇಲ ಹೇಗೆ ತೋರಿಸಿಕೊಟ್ಟ? (ಬಿ) ಯೆರೂಸಲೇಮ್‌ ನಾಶವಾಗೋಕೂ ಮುಂಚೆ ಏನಾಗಲಿತ್ತು?

14 ಯೆಹೆಜ್ಕೇಲನಿಗೆ 390 ದಿನ ಮತ್ತು 40 ದಿನ ಭವಿಷ್ಯವಾಣಿಯನ್ನ ಅಭಿನಯಿಸೋ ನೇಮಕ ಸಿಕ್ಕಿದಾಗ ಯೆರೂಸಲೇಮ್‌ ಯಾವ ವರ್ಷ ನಾಶ ಆಗುತ್ತೆ ಅಂತ ಗೊತ್ತಿರ್ಲಿಲ್ಲ. ಆದ್ರೂ ಅವನು ನಾಶ ಬರುವ ತನಕ ಯೆಹೋವನ ನ್ಯಾಯತೀರ್ಪಿನ ಬಗ್ಗೆ ಪದೇ ಪದೇ ಎಚ್ಚರಿಸ್ತಾ ಇದ್ದನು. “ಈಗ ನಿನ್ನ ಅಂತ್ಯ ಬಂದಿದೆ” ಅಂತ ಅವನು ಸಾರಿದನು. (ಯೆಹೆಜ್ಕೇಲ 7:3, 5-10 ಓದಿ.) ಯೆಹೋವನು ಹೇಳಿದ್ದನ್ನ ಸರಿಯಾದ ಸಮಯದಲ್ಲೇ ಮಾಡ್ತಾನೆ ಅಂತ ಯೆಹೆಜ್ಕೇಲನಿಗೆ ಪೂರ್ತಿ ನಂಬಿಕೆ ಇತ್ತು. (ಯೆಶಾ. 46:10) ಯೆರೂಸಲೇಮಿನ ನಾಶನಕ್ಕೂ ಮುಂಚೆ “ಒಂದಾದ ಮೇಲೊಂದು ಕಷ್ಟ ಬರುತ್ತೆ” ಅಂತನೂ ಅವನು ತಿಳಿಸಿದ್ದನು. ಇವುಗಳಿಂದಾಗಿ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆ ಬಿದ್ದುಹೋಗಲಿತ್ತು.—ಯೆಹೆ. 7:11-13, 25-27.

ಮುತ್ತಿಗೆ ಹಾಕಲ್ಪಟ್ಟ ಯೆರೂಸಲೇಮ್‌ ‘ಉರಿಯೋ ಒಲೆ ಮೇಲಿನ’ “ಅಡುಗೆ ಪಾತ್ರೆ” ತರ ಇತ್ತು (ಪ್ಯಾರ 15 ನೋಡಿ)

15. ಕ್ರಿ.ಪೂ. 609 ರಿಂದ ಯೆಹೆಜ್ಕೇಲನ ಭವಿಷ್ಯವಾಣಿಯಲ್ಲಿರೋ ಯಾವ ವಿಷಯಗಳು ನೆರವೇರೋಕೆ ಶುರುವಾದ್ವು?

15 ಯೆರೂಸಲೇಮ್‌ ನಾಶ ಆಗೋದ್ರ ಬಗ್ಗೆ ಯೆಹೆಜ್ಕೇಲ ಭವಿಷ್ಯವಾಣಿ ಹೇಳಿದ ಕೆಲವೇ ವರ್ಷಗಳ ನಂತರ ಅದು ನೆರವೇರೋಕೆ ಶುರುವಾಯ್ತು. ಕ್ರಿ.ಪೂ. 609 ರಲ್ಲಿ ಯೆರೂಸಲೇಮಿನ ಮೇಲೆ ಆಕ್ರಮಣ ಶುರುವಾಯ್ತು ಅಂತ ಯೆಹೆಜ್ಕೇಲನಿಗೆ ಗೊತ್ತಾಯ್ತು. ಆಗ ಪಟ್ಟಣದ ಪರವಾಗಿ ಯುದ್ಧ ಮಾಡೋಕೆ ಬನ್ನಿ ಅಂತ ತುತ್ತೂರಿ ಊದಿದ್ರೂ ಯೆಹೆಜ್ಕೇಲ ಹೇಳಿದ ಹಾಗೆ ‘ಒಬ್ಬರೂ ಯುದ್ಧಕ್ಕೆ ಹೋಗಲಿಲ್ಲ.’ (ಯೆಹೆ. 7:14) ಯೆರೂಸಲೇಮ್‌ ಪಟ್ಟಣದವ್ರು ಬಾಬೆಲಿನ ವಿರುದ್ಧ ಹೋರಾಡೋಕೆ ಯಾಕೆ ಹೋಗಲಿಲ್ಲ? ಯೆಹೋವ ತಮ್ಮ ಪರವಾಗಿ ಹೋರಾಡ್ತಾನೆ ಅಂತ ಕೆಲವು ಯೆಹೂದ್ಯರು ನೆನಸಿರಬಹುದು. ಯಾಕಂದ್ರೆ, ಹಿಂದೆ, ಯೆರೂಸಲೇಮಿನ ಮೇಲೆ ಆಕ್ರಮಣ ಮಾಡೋಕೆ ಅಶ್ಶೂರ್ಯರು ಬಂದಾಗ ಯೆಹೋವನು ತನ್ನ ದೂತನನ್ನ ಕಳುಹಿಸಿ ಆ ಸೈನ್ಯವನ್ನ ನಾಶಮಾಡಿದ್ದನು. (2 ಅರ. 19:32) ಆದ್ರೆ ಈ ಸಲ ಆ ತರ ಏನೂ ನಡೀಲಿಲ್ಲ. ಬೇಗನೆ, ಮುತ್ತಿಗೆ ಹಾಕಲ್ಪಟ್ಟ ಪಟ್ಟಣ ‘ಉರಿಯೋ ಒಲೆ ಮೇಲಿನ’ “ಅಡುಗೆ ಪಾತ್ರೆ” ತರ ಆಗಿ ಬಿಡ್ತು. ಆ ಪಾತ್ರೆಯಲ್ಲಿರೋ ಮಾಂಸದ ತುಂಡುಗಳ ತರ ಅಲ್ಲಿನ ಜನ ಸಿಕ್ಕಿಹಾಕಿಕೊಂಡ್ರು. (ಯೆಹೆ. 24:1-10) 18 ತಿಂಗಳ ಮುತ್ತಿಗೆಯ ನಂತರ ಯೆರೂಸಲೇಮ್‌ ನಾಶವಾಯ್ತು.

“ಸ್ವರ್ಗದಲ್ಲಿ ಆಸ್ತಿ ಕೂಡಿಸಿಡಿ”

16. ಯೆಹೋವನು ಹೇಳಿದ್ದನ್ನ ಸರಿಯಾದ ಸಮಯದಲ್ಲೇ ಮಾಡ್ತಾನೆ ಅನ್ನೋ ಭರವಸೆ ನಮಗಿದೆ ಅಂತ ಹೇಗೆ ತೋರಿಸಿಕೊಡಬಹುದು?

16 ಈ ಭವಿಷ್ಯವಾಣಿಯಿಂದ ನಾವೇನು ಕಲಿಬಹುದು? ಇದಕ್ಕೂ ನಾವು ಸಾರೋ ಸಂದೇಶ ಮತ್ತು ಜನರ ಪ್ರತಿಕ್ರಿಯೆಗೂ ಏನಾದ್ರೂ ಸಂಬಂಧ ಇದ್ಯಾ? ಯಾವಾಗ ಸುಳ್ಳು ಧರ್ಮ ನಾಶ ಆಗಬೇಕಂತ ಯೆಹೋವನು ಈಗಾಗಲೇ ತೀರ್ಮಾನ ಮಾಡಿದ್ದಾನೆ. ಆತನು ಒಂದು ದಿನ ಕೂಡ ಆಕಡೆ ಈಕಡೆ ಆಗದೆ ತೀರ್ಮಾನಿಸಿದ ಸಮಯದಲ್ಲೇ ಅದನ್ನ ಮಾಡ್ತಾನೆ. (2 ಪೇತ್ರ 3:9, 10; ಪ್ರಕ. 7:1-3) ಆದ್ರೆ ಆ ನಾಶನದ ದಿನ  ಯಾವುದಂತ ನಮಗೆ ಗೊತ್ತಿಲ್ಲ. “ಈಗ ನಿನ್ನ ಅಂತ್ಯ ಬಂದಿದೆ” ಅಂತ ಯೆಹೆಜ್ಕೇಲ ಸಾರಿದ ಹಾಗೇ ನಾವು ಕೂಡ ಜನರಿಗೆ ದೇವರ ಎಚ್ಚರಿಕೆಯನ್ನ ಪದೇ ಪದೇ ತಿಳಿಸ್ತಾ ಇರಬೇಕು. ನಾವ್ಯಾಕೆ ಇದನ್ನ ಪದೇ ಪದೇ ತಿಳಿಸಬೇಕು? ಯೆಹೆಜ್ಕೇಲ ಯಾಕೆ ಪದೇ ಪದೇ ಎಚ್ಚರಿಸಿದನು ಅಂತ ಸ್ವಲ್ಪ ನೆನಪು ಮಾಡ್ಕೊಳ್ಳಿ. * ಯೆರೂಸಲೇಮಿನ ನಾಶನದ ಬಗ್ಗೆ ಅವನು ಹೇಳಿದಾಗ ಹೆಚ್ಚಿನ ಜನರು ಅದನ್ನ ನಂಬಲಿಲ್ಲ. (ಯೆಹೆ. 12:27, 28) ಆದ್ರೆ ಬಾಬೆಲಿಗೆ ಕೈದಿಗಳಾಗಿ ಹೋದ ನಂತರ ಕೆಲವ್ರು ಅವನ ಮಾತನ್ನ ಕೇಳೋಕೆ ಶುರು ಮಾಡಿದ್ರು. ಇದ್ರಿಂದ ಅವರು ಯೆರೂಸಲೇಮಿಗೆ ವಾಪಸ್‌ ಹೋಗೋಕಾಯ್ತು. (ಯೆಶಾ. 49:8) ಅದೇ ತರ ಇವತ್ತಿರೋ ಅನೇಕ ಜನ ಈ ಲೋಕ ನಾಶ ಆಗುತ್ತೆ ಅಂತ ಹೇಳಿದ್ರೂ ನಂಬ್ತಾ ಇಲ್ಲ. (2 ಪೇತ್ರ 3:3, 4) ಆದ್ರೂ ಜೀವಕ್ಕೆ ನಡೆಸೋ ದಾರಿ ಯಾವುದಂತ ತಿಳುಕೊಳ್ಳೋಕೆ ಒಳ್ಳೇ ಜನರಿಗೆ ನಾವು ಅಂತ್ಯ ಬರೋ ತನಕ ಸಹಾಯ ಮಾಡ್ತೇವೆ.—ಮತ್ತಾ. 7:13, 14; 2 ಕೊರಿಂ. 6:2.

ತುಂಬ ಜನ ನಾವು ಸಾರುವಾಗ ಕೇಳದಿದ್ರೂ ನಾವು ಒಳ್ಳೇ ಜನರಿಗಾಗಿ ಹುಡುಕ್ತಾ ಇರ್ತೇವೆ (ಪ್ಯಾರ 16 ನೋಡಿ)

ಯೆರೂಸಲೇಮಿನ ಜನರು ಯಾಕೆ ‘ತಮ್ಮ ಬೆಳ್ಳಿಯನ್ನ ಬೀದಿಗಳಲ್ಲಿ ಬಿಸಾಡಿದ್ರು?’ (ಪ್ಯಾರ 17 ನೋಡಿ)

17. ಮಹಾ ಸಂಕಟದ ಸಮಯದಲ್ಲಿ ನಾವು ಏನೆಲ್ಲಾ ನೋಡ್ತೇವೆ?

17 ಯೆಹೆಜ್ಕೇಲನ ಭವಿಷ್ಯವಾಣಿಯಿಂದ ನಮಗೆ ಇನ್ನೊಂದು ವಿಷ್ಯ ಕೂಡ ನೆನಪಾಗಬಹುದು. ಸುಳ್ಳು ಧರ್ಮದ ಮೇಲೆ ನಾಶ ಬರುವಾಗ ಚರ್ಚಿನ ಸದಸ್ಯರಲ್ಲಿ ಒಬ್ಬರೂ ತಮ್ಮ ಧರ್ಮದ ಪರವಾಗಿ ‘ಯುದ್ಧಕ್ಕೆ ಹೋಗಲ್ಲ.’ ಅವ್ರು ‘ಸ್ವಾಮಿ, ಸ್ವಾಮಿ’ ಅಂತ  ಕೂಗಿದ್ರೂ ಅವ್ರಿಗೆ ಉತ್ರ ಸಿಗಲ್ಲ, ‘ಅವ್ರೆಲ್ಲರ ಕೈಗಳು ಬಿದ್ದುಹೋಗ್ತವೆ’ ಮತ್ತು ಅವರು “ಗಡಗಡ ಅಂತ” ನಡುಗ್ತಾರೆ. (ಯೆಹೆ. 7:3, 14, 17, 18; ಮತ್ತಾ. 7:21-23) ಅವ್ರು ಇನ್ನೇನೆಲ್ಲಾ ಮಾಡ್ತಾರೆ? (ಯೆಹೆಜ್ಕೇಲ 7:19-21 ಓದಿ.) ಯೆರೂಸಲೇಮಿನ ಜನರ ಬಗ್ಗೆ ಯೆಹೋವನು ಹೀಗೆ ಹೇಳಿದ್ದಾನೆ: “ಅವರು ತಮ್ಮ ಬೆಳ್ಳಿಯನ್ನ ಬೀದಿಗಳಲ್ಲಿ ಬಿಸಾಡ್ತಾರೆ.” ಈ ಮಾತು ಮಹಾ ಸಂಕಟದ ಸಮಯದಲ್ಲೂ ನಿಜವಾಗುತ್ತೆ. ಆಗ ಹಣ, ಸಂಪತ್ತು ತಮ್ಮನ್ನ ರಕ್ಷಿಸಲ್ಲ ಅಂತ ಜನರಿಗೆ ಗೊತ್ತಾಗುತ್ತೆ.

18. ನಾವು ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು?

18 ಯೆಹೆಜ್ಕೇಲನ ಈ ಭವಿಷ್ಯವಾಣಿಯಿಂದ ನಾವೇನು ಕಲಿಬಹುದು? ನಾವು ಯಾವುದಕ್ಕೆ ಮೊದಲ ಸ್ಥಾನ ಕೊಡಬೇಕು ಅಂತ ಕಲಿಬಹುದು. ಯೆರೂಸಲೇಮ್‌ ಪಟ್ಟಣ ಇನ್ನೇನು ನಾಶ ಆಗ್ತಾ ಇದೆ, ತಾವು ನಾಶ ಆಗ್ತೇವೆ ಅಂತ ಅಲ್ಲಿನ ಜನರಿಗೆ ಗೊತ್ತಾದ ನಂತ್ರನೇ ತಾವು ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು ಅಂತ ಅರ್ಥಮಾಡ್ಕೊಂಡ್ರು. ಆಗ ಅವ್ರು ತಮ್ಮ ಹತ್ರ ಇರೋ ಸೊತ್ತನ್ನೆಲ್ಲಾ ಬಿಸಾಡಿದ್ರು, “ಪ್ರವಾದಿ ಹತ್ರ ಹೋಗಿ ಏನಾದ್ರೂ ದರ್ಶನ ಆಯ್ತಾ” ಅಂತ ಕೇಳಿದ್ರು. ಆದ್ರೆ ಏನೂ ಪ್ರಯೋಜನ ಆಗಲಿಲ್ಲ. (ಯೆಹೆ. 7:26) ನಾವು ಯೆರೂಸಲೇಮಿನ ಜನರ ತರ ಇಲ್ಲ. ಈ ದುಷ್ಟ ಲೋಕ ಬೇಗನೆ ನಾಶ ಆಗುತ್ತೆ ಅಂತ ನಮಗೆ ಈಗಾಗಲೇ ಗೊತ್ತು. ದೇವರ ಮೇಲೆ ನಂಬಿಕೆ ಇರೋದ್ರಿಂದ ನಾವು ಈಗಲೇ ಸರಿಯಾದ ವಿಷಯಗಳಿಗೆ ಪ್ರಾಮುಖ್ಯತೆ ಕೊಡ್ತಿದ್ದೇವೆ. ನಾವು ಸ್ವರ್ಗದಲ್ಲಿ ಆಸ್ತಿ ಕೂಡಿಸಿಡೋದ್ರಲ್ಲಿ ಬಿಝಿಯಾಗಿದ್ದೇವೆ. ಯಾಕಂದ್ರೆ ಅದರ ಬೆಲೆ ಯಾವತ್ತೂ ಕಡಿಮೆ ಆಗಲ್ಲ, ಅದನ್ನ ಯಾವತ್ತೂ ‘ಬೀದಿಯಲ್ಲಿ ಬಿಸಾಡಲ್ಲ.’—ಮತ್ತಾಯ 6:19-21, 24 ಓದಿ.

19. ಯೆಹೆಜ್ಕೇಲನ ಭವಿಷ್ಯವಾಣಿಯಿಂದ ನಾವೇನು ಕಲಿತೀವಿ?

19 ಯೆರೂಸಲೇಮಿನ ನಾಶನದ ಬಗ್ಗೆ ಯೆಹೆಜ್ಕೇಲ ಹೇಳಿದ ಭವಿಷ್ಯವಾಣಿಯಿಂದ ನಾವೇನು ಕಲಿತ್ವಿ? ಜನರನ್ನ ಶಿಷ್ಯರನ್ನಾಗಿ ಮಾಡೋಕೆ ನಮಗಿರೋ ಸಮಯ ಸ್ವಲ್ಪನೇ. ಹಾಗಾಗಿ, ನಾವು ಈ ಕೆಲಸವನ್ನ ತುರ್ತಿನಿಂದ ಮಾಡಬೇಕು. ಜನರು ಯೆಹೋವನನ್ನ ಆರಾಧಿಸೋಕೆ ಶುರು ಮಾಡುವಾಗ ನಮಗೆಷ್ಟು ಖುಷಿಯಾಗುತ್ತಲ್ವಾ? ನಾವು ಹೇಳೋದನ್ನ ಕೇಳದವ್ರಿಗೆ ಸಹ ಯೆಹೆಜ್ಕೇಲನ ತರ ‘ನಿಮ್ಮ ಅಂತ್ಯ ಬರ್ತಾ ಇದೆ’ ಅಂತ ಎಚ್ಚರಿಸ್ತಾ ಇರ್ತೀವಿ. (ಯೆಹೆ. 3:19, 21; 7:3) ಜೊತೆಗೆ, ನಾವು ಯೆಹೋವನ ಮೇಲೆ ಪೂರ್ತಿ ಭರವಸೆ ಇಡ್ತೀವಿ ಮತ್ತು ಶುದ್ಧ ಆರಾಧನೆಗೆ ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡ್ತೀವಿ.—ಕೀರ್ತ. 52:7, 8; ಜ್ಞಾನೋ. 11:28; ಮತ್ತಾ. 6:33.

^ ಪ್ಯಾರ. 3 ಯೆಹೆಜ್ಕೇಲನು ಈ ಸೂಚನೆಗಳನ್ನ ಜನರ ಮುಂದೆ ಅಭಿನಯಿಸಿ ತೋರಿಸಿದನು. ಅದನ್ನ ಹೇಗೆ ಹೇಳಬಹುದು? ರೊಟ್ಟಿ ಸುಡೋದು, ಮೂಟೆ ಎತ್ತಿಕೊಂಡು ಹೋಗೋದು ಮುಂತಾದ ಕೆಲವು ಅಭಿನಯಗಳನ್ನ ಜನರ “ಕಣ್ಮುಂದೆನೇ” ಮಾಡೋಕೆ ಯೆಹೋವನು ಯೆಹೆಜ್ಕೇಲನಿಗೆ ಹೇಳಿದ್ದನು.—ಯೆಹೆ. 4:12; 12:7.

^ ಪ್ಯಾರ. 13 ಯೆರೂಸಲೇಮ್‌ ನಾಶ ಆಗೋಕೆ ಬಿಡೋ ಮೂಲಕ ಯೆಹೋವನು ಯೆಹೂದದ ಎರಡು ಕುಲಗಳಿಗೆ ಮಾತ್ರವಲ್ಲ, ಇಸ್ರಾಯೇಲಿನ ಹತ್ತು ಕುಲಗಳಿಗೂ ನ್ಯಾಯತೀರಿಸಿದನು.—ಯೆರೆ. 11:17; ಯೆಹೆ. 9:9, 10.

^ ಪ್ಯಾರ. 16 ಯೆಹೆಜ್ಕೇಲ 7:5-7 ರಲ್ಲಿ ಯೆಹೋವನು ತನ್ನ ಸಂದೇಶಕ್ಕೆ ಒತ್ತುಕೊಡಲಿಕ್ಕಾಗಿ “ಬರ್ತಾ ಇದೆ” “ಬರುತ್ತೆ”, “ಬರ್ತಿದೆ” ಮತ್ತು “ಬಂದಿದೆ” ಅನ್ನೋ ಪದಗಳನ್ನ ಉಪಯೋಗಿಸಿದ್ದಾನೆ.