ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಚೌಕ  14ಎ

ಯೆಹೆಜ್ಕೇಲ ನೋಡಿದ ದೇವಾಲಯದ ದರ್ಶನದಿಂದ ಕಲಿಯೋ ಪಾಠಗಳು

ಯೆಹೆಜ್ಕೇಲ ನೋಡಿದ ದೇವಾಲಯದ ದರ್ಶನದಿಂದ ಕಲಿಯೋ ಪಾಠಗಳು

ಶುದ್ಧ ಆರಾಧನೆಯನ್ನ ಉನ್ನತಕ್ಕೇರಿಸಲಾಯ್ತು ಮತ್ತು ಸಂರಕ್ಷಿಸಲಾಯ್ತು

ದರ್ಶನದಲ್ಲಿ “ಅತಿ ಎತ್ತರದ ಬೆಟ್ಟದ ಮೇಲೆ” (1) ದೇವಾಲಯ ಇತ್ತು. ಶುದ್ಧ ಆರಾಧನೆಗೆ ನಮ್ಮ ಜೀವನದಲ್ಲಿ ಎಲ್ಲಕ್ಕಿಂತ ಉನ್ನತ ಸ್ಥಾನ ಕೊಟ್ಟಿದ್ದೇವಾ?

ದೇವಾಲಯದ ಸುತ್ತ ಗೋಡೆ (2) ಇತ್ತು. ದೇವಾಲಯ ಮತ್ತು ಗೋಡೆಯ ಮಧ್ಯ ವಿಶಾಲವಾದ ಸ್ಥಳ (3) ಇತ್ತು. ಇವುಗಳಿಂದ ನಾವು, ಯೆಹೋವನ ಆರಾಧನೆಯನ್ನ ಕಲಬೆರಕೆ ಮಾಡೋಕೆ ಯಾವುದಕ್ಕೂ ಅವಕಾಶ ಕೊಡಬಾರದು ಅಂತ ಕಲಿತೇವೆ. “ಸಾಮಾನ್ಯ ಬಳಕೆಗಾಗಿದ್ದ” ವಸ್ತುಗಳನ್ನೇ ಶುದ್ಧ ಆರಾಧನೆಯಿಂದ ದೂರ ಇಡಬೇಕಿತ್ತಂದ್ರೆ ಇವತ್ತು ಯೆಹೋವನ ಆರಾಧಕರಾಗಿರೋ ನಾವು ಅಶುದ್ಧ ಅಥವಾ ಅನೈತಿಕ ನಡತೆಯಿಂದ ಇನ್ನೆಷ್ಟು ದೂರ ಇರಬೇಕಲ್ವಾ!—ಯೆಹೆ. 42:20.

ಶಾಶ್ವತ ಆಶೀರ್ವಾದಗಳು

ದೇವಾಲಯದ ಪವಿತ್ರ ಸ್ಥಳದಿಂದ ತೊರೆ (ಝರಿ) ಹರಿದು ಬಂದು ಮುಂದೆ ಹೋಗುತ್ತಾ ನದಿ (4) ಆಯ್ತು. ಅದು ಹರಿದಲ್ಲೆಲ್ಲಾ ಜೀವಿಗಳು ಬದುಕಿದವು ಮತ್ತು ಸುತ್ತಲಿನ ಜಾಗ ಫಲವತ್ತಾಯ್ತು. ಈ ಆಶೀರ್ವಾದಗಳ ಬಗ್ಗೆ ಈ ಪುಸ್ತಕದ 19 ನೇ ಅಧ್ಯಾಯದಲ್ಲಿ ನೋಡಲಿದ್ದೇವೆ.

ಎಲ್ಲರಿಗೂ ಒಂದೇ ಮಟ್ಟ

ದೊಡ್ಡದಾಗಿರೋ ಹೊರಗಣ ಬಾಗಿಲುಗಳು (5) ಮತ್ತು ಒಳಗಣ ಬಾಗಿಲುಗಳಿಂದ (9) ಏನು ಕಲಿಬಹುದು? ಶುದ್ಧ ಆರಾಧನೆ ಮಾಡೋ ಎಲ್ಲರೂ ತನ್ನ ಅತ್ಯುನ್ನತ ಮಟ್ಟಗಳನ್ನ ಪಾಲಿಸಬೇಕು ಅಂತ ಯೆಹೋವನು ಬಯಸ್ತಾನೆ ಅನ್ನೋದನ್ನ ಇವು ನೆನಪಿಸುತ್ತವೆ. ಹೊರಗಣ ಮತ್ತು ಒಳಗಣ ಬಾಗಿಲುಗಳ ಉದ್ದ, ಅಗಲ ಎಲ್ಲವೂ ಸಮವಾಗಿದ್ವು. ಯೆಹೋವನು ತನ್ನ ಎಲ್ಲಾ ಸೇವಕರಿಗೂ ಒಂದೇ ರೀತಿಯ ಮಟ್ಟಗಳನ್ನ ಇಟ್ಟಿದ್ದಾನೆ ಅಂತ ಇದ್ರಿಂದ ಗೊತ್ತಾಗುತ್ತೆ. ಅವರು ಯಾವುದೇ ಸ್ಥಾನದಲ್ಲಿದ್ರೂ, ಯಾವುದೇ ಸೇವೆ ಮಾಡ್ತಾ ಇದ್ರೂ ಒಂದೇ ರೀತಿಯ ಮಟ್ಟಗಳು ಅನ್ವಯವಾಗುತ್ತವೆ.

ಯೆಹೋವನ ಮೇಜಿನ ಮೇಲೆ ಊಟ

ಹಿಂದಿನ ಕಾಲದಲ್ಲಿ ಜನರು ಯೆಹೋವನಿಗೆ ಕೆಲವು ಬಲಿಗಳನ್ನ ಅರ್ಪಿಸುವಾಗ ಅದ್ರಲ್ಲಿ ಒಂದು ಪಾಲನ್ನ ಹಂಚಿ ತಿನ್ನುತ್ತಿದ್ರು ಅನ್ನೋದನ್ನ ಊಟದ ಕೋಣೆಗಳು (8) ನೆನಪಿಸ್ತವೆ. ಇದು ಒಂದರ್ಥದಲ್ಲಿ ಯೆಹೋವನ ಜೊತೆ ಊಟ ಮಾಡಿದಂತಿತ್ತು. ಆದ್ರೆ ಆಧ್ಯಾತ್ಮಿಕ ಆಲಯದಲ್ಲಿ ಕ್ರೈಸ್ತರು ಆ ರೀತಿಯ ಬಲಿಗಳನ್ನ ಅರ್ಪಿಸಲ್ಲ. ಯಾಕಂದ್ರೆ ಈಗಾಗ್ಲೇ “ಒಂದೇ ಬಲಿ” ಅರ್ಪಿಸಲಾಗಿದೆ. (ಇಬ್ರಿ. 10:12) ಆದ್ರೆ ನಾವು ಸ್ತುತಿ ಅನ್ನೋ ಬಲಿಯನ್ನ ಅರ್ಪಿಸ್ತೇವೆ.—ಇಬ್ರಿ. 13:15.

ಯೆಹೋವನ ಮಾತು ಗ್ಯಾರಂಟಿ ನೆರವೇರುತ್ತೆ

ದರ್ಶನದಲ್ಲಿ ಅಳತೆಗಳ ಬಗ್ಗೆ ತುಂಬ ವಿವರಣೆ ಕೊಡಲಾಗಿದೆ. ಇದು ಯೆಹೋವನು ಶುದ್ಧ ಆರಾಧನೆಯನ್ನ ಖಂಡಿತ ಪುನಃಸ್ಥಾಪಿಸ್ತಾನೆ ಅನ್ನೋದನ್ನ ನೆನಪಿಸುತ್ತೆ. ಅಳತೆಗಳು ಹೇಗೆ ಪಕ್ಕಾ ಆಗಿದ್ದವೋ ಅದೇ ರೀತಿಯಲ್ಲಿ ಆತನ ಮಾತುಗಳು ಕೂಡ ಪಕ್ಕಾ ನೆರವೇರುತ್ತವೆ. ಯೆಹೆಜ್ಕೇಲನು ದರ್ಶನದಲ್ಲಿ ಯಾವ ಮನುಷ್ಯನನ್ನೂ ನೋಡಲಿಲ್ಲ. ಆದ್ರೂ ದೇವರು ಪುರೋಹಿತರಿಗೆ, ಪ್ರಧಾನರಿಗೆ ಮತ್ತು ಜನರಿಗೆ ಕೊಟ್ಟ ಸಲಹೆ, ಬುದ್ಧಿವಾದವನ್ನ ಅವನು ದಾಖಲಿಸಿದ್ದಾನೆ. ಯೆಹೋವ ದೇವರ ಸೇವಕರೆಲ್ಲರೂ ಯಾವಾಗ್ಲೂ ಆತನ ಉನ್ನತ ನೀತಿಯ ಮಟ್ಟಗಳನ್ನ ಪಾಲಿಸಲೇಬೇಕು.