ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 19

“ತೊರೆ ಎಲ್ಲೆಲ್ಲ ಹರಿಯುತ್ತೋ ಅಲ್ಲೆಲ್ಲ ಜೀವಿಗಳು ವಾಸಿಸುತ್ತೆ”

“ತೊರೆ ಎಲ್ಲೆಲ್ಲ ಹರಿಯುತ್ತೋ ಅಲ್ಲೆಲ್ಲ ಜೀವಿಗಳು ವಾಸಿಸುತ್ತೆ”

ಯೆಹೆಜ್ಕೇಲ 47:9

ಮುಖ್ಯ ವಿಷಯ: ದೇವಾಲಯದಿಂದ ಹರಿಯೋ ನದಿಯ ದರ್ಶನದ ವಿವರಣೆ; ಅದರ ಹಿಂದಿನ, ಈಗಿನ ಮತ್ತು ಮುಂದಿನ ಕಾಲದ ನೆರವೇರಿಕೆ

1, 2. ಯೆಹೆಜ್ಕೇಲ 47:1-12 ರ ಪ್ರಕಾರ ಯೆಹೆಜ್ಕೇಲ ಏನೆಲ್ಲಾ ನೋಡಿದನು? ವಿವರಿಸಿ. (ಆರಂಭದ ಚಿತ್ರ ನೋಡಿ.)

ಯೆಹೆಜ್ಕೇಲನು ದೇವಾಲಯದ ದರ್ಶನದಲ್ಲಿ ಇನ್ನೊಂದು ಸುಂದರ ವಿಷ್ಯವನ್ನ ನೋಡಿದನು. ದೇವಾಲಯದ ಪವಿತ್ರ ಸ್ಥಳದಿಂದ ಒಂದು ನದಿ ಹರಿಯುತ್ತಾ ಇತ್ತು. ಯೆಹೆಜ್ಕೇಲನು ಆ ತಿಳಿ ನೀರನ್ನು ನೋಡ್ತಾ ಮುಂದೆ ಸಾಗುತ್ತಿರೋದನ್ನ ಸ್ವಲ್ಪ ಕಲ್ಪಿಸಿಕೊಳ್ಳಿ. (ಯೆಹೆಜ್ಕೇಲ 47:1-12 ಓದಿ.) ನದಿಯು ದೇವಾಲಯದ ಪವಿತ್ರ ಸ್ಥಳದಿಂದ ಹುಟ್ಟಿ ದೇವಾಲಯದ ಪೂರ್ವ ದಿಕ್ಕಿನಲ್ಲಿರುವ ಬಾಗಿಲಿನ ಹತ್ರ ಹರಿದು ಹೋಗ್ತಾ ಇದೆ. ಯೆಹೆಜ್ಕೇಲನನ್ನ ದೇವದೂತ ಮುಂದೆ ಮುಂದೆ ಕರ್ಕೊಂಡು ಹೋಗ್ತಾ ಇದ್ದಾನೆ. ಅವರು ಎಷ್ಟು ದೂರ ಹೋಗ್ತಿದ್ದಾರೆ ಅಂತ ಅಳೆಯುತ್ತಾ ಹೋಗ್ತಿದ್ದಾರೆ. ದೇವದೂತನು ಆಗಿಂದಾಗ್ಗೆ ಯೆಹೆಜ್ಕೇಲನಿಗೆ ನದಿಯನ್ನ ದಾಟೋಕೆ ಹೇಳ್ತಾನೆ. ಯೆಹೆಜ್ಕೇಲನು ಮುಂದೆ ಹೋಗ್ತಿದ್ದಂತೆ ನದಿಯ ಆಳ ಇನ್ನೂ ಜಾಸ್ತಿ ಆಗ್ತಿದೆ. ಎಷ್ಟರ ಮಟ್ಟಿಗಂದ್ರೆ, ಕೊನೆಗೆ ಅವನಿಂದ ನಡಿಯೋಕಾಗದೆ ಈಜುತ್ತಾನೆ!

2 ಆ ನದಿ ಮೃತ ಸಮುದ್ರಕ್ಕೆ ಬಂದು ಸೇರುತ್ತೆ ಅಂತ ಯೆಹೆಜ್ಕೇಲನಿಗೆ ಗೊತ್ತಾಗುತ್ತೆ. ಆಲಯದಿಂದ ಹುಟ್ಟಿದ ನದಿ ಮೃತಸಮುದ್ರವನ್ನ ಸೇರಿದಾಗ ಅಲ್ಲಿನ ಉಪ್ಪುನೀರು ಸಿಹಿಯಾಗುತ್ತೆ. ಜೀವಿಗಳು ಬದುಕಲು ಆಗದಿದ್ದ ಆ ನೀರಲ್ಲಿ ತುಂಬ ಜೀವಿಗಳು ಬದುಕುತ್ತವೆ. ಅಲ್ಲಿ ತುಂಬ ಮೀನುಗಳೂ ಇರುತ್ತವೆ. ಆ ನದಿಯ ಎರಡು ದಡಗಳಲ್ಲಿ ಎಲ್ಲ ತರದ ಹಣ್ಣು ಕೊಡೋ ಮರಗಳು ಬೆಳೆಯುತ್ತವೆ. ಆ ಮರಗಳು ಪ್ರತಿ ತಿಂಗಳು ಹಣ್ಣುಗಳನ್ನ ಕೊಡ್ತಾನೇ ಇರುತ್ತವೆ. ಅವುಗಳ ಎಲೆಗಳನ್ನ ಔಷಧಿಯಾಗಿ ಬಳಸಬಹುದು. ಇದನ್ನೆಲ್ಲಾ ನೋಡಿದಾಗ  ಯೆಹೆಜ್ಕೇಲನ ಮನಸ್ಸಿನಲ್ಲಿ ನೆಮ್ಮದಿ ಮತ್ತು ನಿರೀಕ್ಷೆ ಮೂಡಿತು. ಆದ್ರೆ ಈ ದರ್ಶನದಿಂದ ಯೆಹೆಜ್ಕೇಲನಿಗೂ ಅವನ ಜೊತೆಕೈದಿಗಳಿಗೂ ಯಾವ ಪ್ರಯೋಜನ ಸಿಗಲಿತ್ತು? ಇದ್ರಿಂದ ಇವತ್ತು ನಮಗೇನು ಪ್ರಯೋಜನ?

ಈ ದರ್ಶನದಿಂದ ಯೆಹೂದಿ ಕೈದಿಗಳಿಗೆ ಯಾವ ಪ್ರಯೋಜನ ಸಿಗಲಿತ್ತು?

3. ದರ್ಶನದಲ್ಲಿರೋ ನದಿ ನಿಜವಾದ ನದಿ ಅಲ್ಲ ಅಂತ ಯೆಹೂದ್ಯರಿಗೆ ಹೇಗೆ ಗೊತ್ತಾಗಿರಬಹುದು?

3 ದರ್ಶನದಲ್ಲಿ ತಿಳಿಸಲಾದ ನದಿ, ನಿಜವಾಗಿ ಇರೋ ನದಿಯಲ್ಲ ಅಂತ ಹಿಂದಿನ ಕಾಲದಲ್ಲಿದ್ದ ಯೆಹೂದ್ಯರು ಅರ್ಥಮಾಡಿಕೊಂಡಿರ್ತಾರೆ. ಇದ್ರ ಬಗ್ಗೆ ತಿಳುಕೊಂಡಾಗ ಅವ್ರಿಗೆ ಪುನಃಸ್ಥಾಪನೆಯ ಬಗ್ಗೆ ತಿಳಿಸಲಾದ ಇನ್ನೊಂದು ಭವಿಷ್ಯವಾಣಿ ನೆನಪಾಗಿರುತ್ತೆ. ಅದು 200ಕ್ಕೂ ಹೆಚ್ಚು ವರ್ಷಗಳ ಹಿಂದೆ ಪ್ರವಾದಿ ಯೋವೇಲ ಬರೆದ ಭವಿಷ್ಯವಾಣಿ. (ಯೋವೇಲ 3:18 ಓದಿ.) ಯೋವೇಲನು, “ಬೆಟ್ಟಗಳಿಂದ ಸಿಹಿ ದ್ರಾಕ್ಷಾಮದ್ಯ ತೊಟ್ಟಿಕ್ಕುತ್ತೆ, ಬೆಟ್ಟಗಳಲ್ಲಿ ಹಾಲು ಹರಿಯುತ್ತೆ” ಮತ್ತು “ಯೆಹೋವನ ಆಲಯದಿಂದ ಒಂದು ಬುಗ್ಗೆ ಹರಿದು ಬರುತ್ತೆ” ಅಂತ ಬರೆದಿದ್ದನು. ಯೆಹೂದ್ಯರು ಯೋವೇಲನ ಪುಸ್ತಕವನ್ನ ಓದಿದಾಗ ಇವೆಲ್ಲಾ ನಿಜವಾಗಿ ನಡೆಯೋ ವಿಷಯಗಳಲ್ಲ ಅಂತ ಅರ್ಥಮಾಡಿಕೊಂಡಿರುತ್ತಾರೆ. ಅದೇ ತರ, ಯೆಹೆಜ್ಕೇಲನು ಭವಿಷ್ಯವಾಣಿಯಲ್ಲಿ ತಿಳಿಸಿದಂಥ ನದಿ ಕೂಡ ನಿಜವಾದ ನದಿ ಅಲ್ಲ ಅನ್ನೋದನ್ನ ಯೆಹೂದ್ಯ ಕೈದಿಗಳು ಅರ್ಥಮಾಡಿಕೊಂಡಿರ್ತಾರೆ. * ಹಾಗಾದ್ರೆ ಯೆಹೋವ ದೇವರು ಇದ್ರಿಂದ ಏನನ್ನ ಕಲಿಸೋಕೆ ಬಯಸ್ತಿದ್ದನು? ಆ ದರ್ಶನಗಳಲ್ಲಿರೋ ಕೆಲವು ವಿಷ್ಯಗಳನ್ನ ಅರ್ಥಮಾಡಿಕೊಳ್ಳೋಕೆ ನಮಗೆ ಬೈಬಲ್‌ ಸಹಾಯ ಮಾಡುತ್ತೆ. ಈ ದರ್ಶನದಲ್ಲಿರುವ ಭರವಸೆ ಮೂಡಿಸುವ ಮೂರು ವಿಷ್ಯಗಳನ್ನ ನಾವೀಗ ನೊಡೋಣ.

4. (ಎ) ಈ ದರ್ಶನದಿಂದ ಜನರು ತಮಗೆ ಯಾವ ಆಶೀರ್ವಾದಗಳು ಸಿಗುತ್ತವೆ ಅಂತ ನಿರೀಕ್ಷಿಸಿರ್ತಾರೆ? (ಬಿ) “ನದಿಗಳು” ಮತ್ತು “ನೀರು” ಏನನ್ನ ಸೂಚಿಸುತ್ತವೆ? ವಿವರಿಸಿ. (“ಯೆಹೋವನಿಂದ ಹರಿಯುವ ಆಶೀರ್ವಾದಗಳ ನದಿಗಳು” ಅನ್ನೋ ಚೌಕ ನೋಡಿ.)

4 ಆಶೀರ್ವಾದಗಳು ಉಕ್ಕಿ ಹರಿಯುತ್ತಿರೋ ನದಿ. ಬೈಬಲಿನಲ್ಲಿ ನದಿಗಳು ಮತ್ತು ನೀರು, ಯೆಹೋವನಿಂದ ಸಿಗೋ ಆಶೀರ್ವಾದಗಳನ್ನ ಸೂಚಿಸುತ್ತವೆ. ನಾವು ಶಾಶ್ವತವಾಗಿ ಜೀವಿಸೋಕೆ ಯೆಹೋವ ದೇವರು ಮಾಡಿರುವ ಎಲ್ಲ ಏರ್ಪಾಡುಗಳು ಇದ್ರಲ್ಲಿ ಸೇರಿವೆ. ಯೆಹೆಜ್ಕೇಲನ ದರ್ಶನದಲ್ಲಿದ್ದ ನದಿಯ ಬಗ್ಗೆ ಜನರು ತಿಳ್ಕೊಂಡಾಗ, ತಾವು ಎಲ್ಲಿವರೆಗೆ ಯೆಹೋವನಿಗೆ ಶುದ್ಧ ಆರಾಧನೆಯನ್ನ ಮಾಡ್ತೇವೋ ಅಲ್ಲಿವರೆಗೆ ಆತನಿಂದ ಹೇರಳವಾದ ಆಶೀರ್ವಾದಗಳನ್ನ ಪಡೀತೇವೆ ಅಂತ ಅರ್ಥಮಾಡಿಕೊಂಡಿರ್ತಾರೆ. ಯಾವ ಆಶೀರ್ವಾದಗಳು? ಅವರು ಮತ್ತೆ ಪುರೋಹಿತರಿಂದ ದೇವರ ಬಗ್ಗೆ ಇರೋ ಮಾರ್ಗದರ್ಶನಗಳನ್ನ ಪಡಿಬಹುದಿತ್ತು, ದೇವಾಲಯದಲ್ಲಿ ಬಲಿಗಳನ್ನ ಅರ್ಪಿಸಬಹುದಿತ್ತು. ಅಷ್ಟೇ ಅಲ್ಲ ತಮ್ಮ ಪಾಪಗಳಿಗೆ ಕ್ಷಮೆ ಪಡಿಬಹುದಿತ್ತು. (ಯೆಹೆ. 44:15, 23; 45:17) ಹೀಗೆ ಅವರು ತಮ್ಮ ಜೀವನವನ್ನ ಶುದ್ಧೀಕರಿಸಿಕೊಳ್ಳಬಹುದಿತ್ತು. ಒಂದರ್ಥದಲ್ಲಿ ಅವರು ದೇವಾಲಯದಿಂದ ಹರಿಯುತ್ತಿರೋ ನೀರಿನಿಂದ ತಮ್ಮನ್ನ ತೊಳೆದು ಶುದ್ಧ ಮಾಡಿಕೊಳ್ಳಬಹುದಿತ್ತು.

5. ಯೆಹೂದ್ಯರ ಸಂಖ್ಯೆ ಜಾಸ್ತಿಯಾದಾಗಲೂ ಎಲ್ರಿಗೆ ಈ ಆಶೀರ್ವಾದಗಳು ಸಿಗಲಿದ್ದವಾ?

5 ಹಾಗಂತ ಪುನಃಸ್ಥಾಪಿಸಲ್ಪಟ್ಟ ಮೇಲೆ ಯೆಹೂದ್ಯರ ಸಂಖ್ಯೆ ಜಾಸ್ತಿಯಾದಾಗಲೂ ಎಲ್ರಿಗೆ ಈ ಆಶೀರ್ವಾದಗಳೆಲ್ಲಾ ಸಿಗಲಿದ್ವಾ? ಇದಕ್ಕೆ ಉತ್ತರ ದರ್ಶನದಲ್ಲೇ ಇದೆ. ಮೊದಮೊದಲು ಆ ನದಿಯ ಆಳ ತುಂಬ ಕಮ್ಮಿ ಇತ್ತು ಆದ್ರೆ ಹೋಗ್ತಾ ಹೋಗ್ತಾ ಅದ್ರ ಆಳ ತುಂಬ ಜಾಸ್ತಿ ಆಗ್ತಾ ಹೋಯ್ತು. ಸ್ವಲ್ಪದರಲ್ಲೇ ಅದು ದೊಡ್ಡ ಪ್ರವಾಹದಂತೆ ಆಯ್ತು. (ಯೆಹೆ. 47:3-5) ಯೆಹೂದ್ಯರ ಸಂಖ್ಯೆ ಹೆಚ್ಚಾಗುವಾಗ ಯೆಹೋವನ ಆಶೀರ್ವಾದಗಳು ಸಹ ಹೆಚ್ಚಾಗಲಿದ್ದವು. ಹೀಗೆ ಆ ನದಿ ಯೆಹೋವನ ಆಶೀರ್ವಾದ ಅವರ ಮೇಲೆ ತುಂಬಿ ತುಳುಕುತ್ತೆ ಅನ್ನೋದನ್ನ ಸೂಚಿಸಿತು.

6. (ಎ) ದರ್ಶನದಿಂದ ಜನರಿಗೆ ಯಾವ ಸಾಂತ್ವನ ಸಿಕ್ತು? (ಬಿ) ಅದು ಯಾವ ಎಚ್ಚರಿಕೆ ಕೊಡ್ತು? (ಪಾದಟಿಪ್ಪಣಿ ನೋಡಿ.)

6 ಜೀವ ಕೊಡೋ ನೀರು. ದರ್ಶನದಲ್ಲಿರುವ ನದಿ ಮೃತಸಮುದ್ರವನ್ನ ಸೇರಿದಾಗ ಅಲ್ಲಿದ್ದ ಉಪ್ಪುನೀರು ಸಿಹಿಯಾಯ್ತು. ಆಗ ಅಲ್ಲಿ ಮೀನುಗಳ ಸಂಖ್ಯೆ ಹೆಚ್ಚಾಯ್ತು. ಮೆಡಿಟರೇನಿಯನ್‌ ಸಮುದ್ರದಲ್ಲಿ ಹೇಗೆ ಮೀನುಗಳು ಹೇರಳವಾಗಿದ್ದವೋ ಹಾಗೇ ಅಲ್ಲಿಯೂ ಮೀನುಗಳು ರಾಶಿ ರಾಶಿಯಾಗಿ ಸಿಕ್ಕಿದ್ದರಿಂದ ತೀರದಲ್ಲಿರುವ ಎರಡು ಪಟ್ಟಣಗಳಲ್ಲಿ ಮೀನಿನ ವ್ಯಾಪಾರ ತುಂಬ ಚೆನ್ನಾಗಿ ನಡೆಯಿತು. ಈ ಎರಡು ಪಟ್ಟಣಗಳ ಮಧ್ಯ ಅಂತರ  ತುಂಬ ಜಾಸ್ತಿ ಇತ್ತು ಅನ್ನೋದನ್ನ ಗಮನಿಸಿ. ಇದರಿಂದ, ಅಲ್ಲಿ ವ್ಯಾಪಾರ ತುಂಬ ದೂರದ ಪ್ರದೇಶಗಳವರೆಗೆ ಹರಡಿತ್ತು ಅಂತ ಗೊತ್ತಾಗುತ್ತೆ. ‘ಆ ನೀರು ಹರಿದಲ್ಲೆಲ್ಲ ತುಂಬ ಜೀವಿಗಳು ಬದುಕುತ್ತವೆ’ ಅಂತ ದೇವದೂತ ಹೇಳಿದನು. ಅದರ ಅರ್ಥ ದೇವಾಲಯದಿಂದ ಹೊರಟ ಆ ನದಿ ಮೃತಸಮುದ್ರದ ಎಲ್ಲಾ ಭಾಗಕ್ಕೂ ಹೋಗಿ ಸೇರ್ತಿತ್ತು ಅಂತನಾ? ಖಂಡಿತ ಅಲ್ಲ. ನದಿಯ ನೀರು ಎಲ್ಲೆಲ್ಲಿ ತಲುಪಲಿಲ್ಲವೋ ಆ ಜಾಗ ಕೆಸರು ಕೆಸರಾಗಿರುತ್ತೆ, “ಉಪ್ಪು ಪ್ರದೇಶವಾಗಿಯೇ ಉಳಿಯುತ್ತೆ,” ಅಲ್ಲಿ ಜೀವಿಗಳು ವಾಸಿಸಲ್ಲ ಅಂತ ದೇವದೂತ ಹೇಳಿದನು. * (ಯೆಹೆ. 47:8-11) ಈ ದರ್ಶನದಿಂದ ಸಾಂತ್ವನ ಮತ್ತು ಎಚ್ಚರಿಕೆಯ ಪಾಠಗಳನ್ನ ಕಲಿಬಹುದು. ಸಾಂತ್ವನದ ಮಾತೇನಂದ್ರೆ, ಶುದ್ಧ ಆರಾಧನೆ ಮಾಡೋದ್ರಿಂದ ಜನರಿಗೆ ಆಶೀರ್ವಾದಗಳು ಸಿಗುತ್ತವೆ. ಎಚ್ಚರಿಕೆಯ ಮಾತೇನಂದ್ರೆ, ಈ ಆಶೀರ್ವಾದಗಳು ಯೆಹೋವ ದೇವರ ಮಾತುಗಳಿಗೆ ಕಿವಿಗೊಡುವವರಿಗೆ ಮಾತ್ರ ಸಿಗುತ್ತೆ, ಎಲ್ಲರಿಗೂ ಸಿಗಲ್ಲ.

7. ನದಿಯ ದಡದಲ್ಲಿದ್ದ ಮರಗಳಿಂದ ಯೆಹೂದಿ ಕೈದಿಗಳಿಗೆ ಯಾವ ಆಶ್ವಾಸನೆ ಸಿಕ್ತು?

7 ಕಾಯಿಲೆಯನ್ನ ವಾಸಿಮಾಡುವ, ಹಣ್ಣು ಕೊಡುವ ಮರಗಳು. ನದಿ ತೀರದಲ್ಲಿ ಹಣ್ಣನ್ನ ಕೊಡೋ ಮರಗಳು ಅಲ್ಲಿನ ಸೌಂದರ್ಯವನ್ನ ಹೆಚ್ಚಿಸುತ್ತವೆ. ದರ್ಶನದಲ್ಲಿದ್ದ ಮರಗಳು ಪ್ರತಿ ತಿಂಗಳು ಹೊಸ ಬೆಳೆಯನ್ನ ಕೊಡ್ತಿದ್ದವು. ಇದ್ರ ಬಗ್ಗೆ ಯೋಚಿಸ್ದಾಗ ಯೆಹೆಜ್ಕೇಲನಿಗೆ ಮತ್ತು ಅವನ ಜೊತೆಯಲ್ಲಿದ್ದ ಕೈದಿಗಳಿಗೆ ತುಂಬನೇ ಸಂತೋಷ ಆಗಿರಬೇಕು. ಇದ್ರಿಂದ ಜನ್ರಿಗೆ ಯೆಹೋವ ದೇವರು ತಮಗೆ ಹೇರಳವಾದ ಆಧ್ಯಾತ್ಮಿಕ ಆಹಾರವನ್ನ ಕೊಡ್ತಾನೆ ಅನ್ನೋ ಆಶ್ವಾಸನೆ ಸಿಕ್ಕಿರುತ್ತೆ. ಅಷ್ಟೇ ಅಲ್ಲ ಆ ಮರದ ಎಲೆಗಳನ್ನ “ಔಷಧಿಯಾಗಿ ಬಳಸಲಾಗುತ್ತೆ” ಅನ್ನೋದನ್ನ ಗಮನಿಸಿದ್ರು. (ಯೆಹೆ. 47:12) ಬಂಧಿವಾಸದಿಂದ ವಾಪಸ್‌ ಬಂದ ಕೈದಿಗಳಿಗೆ ವಾಸಿಯಾಗೋ ಅಗತ್ಯವಿದೆ ಅಥ್ವಾ ಅವರು ಆತನ ಜೊತೆ ಆಪ್ತ ಸಂಬಂಧವನ್ನ ಪುನಃ ಬೆಳೆಸಿಕೊಳ್ಳೋ ಅಗತ್ಯ ಇದೆ ಅಂತ ಯೆಹೋವನಿಗೆ ಗೊತ್ತಿತ್ತು. ಹಾಗಾಗಿ ಆತನು ಅದನ್ನ ಕೊಡ್ತೀನಿ ಅಂತ ಮಾತು ಕೊಟ್ಟನು. ಯೆಹೋವನು ಅದನ್ನ ಹೇಗೆ ಮಾಡ್ತಾನೆ ಅನ್ನೋದನ್ನ 9 ನೇ ಅಧ್ಯಾಯದಲ್ಲಿ ನೋಡಿದ್ವಿ. ಅಲ್ಲಿ ಕೆಲವು ಪುನಃಸ್ಥಾಪನೆಯ ಭವಿಷ್ಯವಾಣಿಗಳ ಬಗ್ಗೆ ತಿಳಿಸಲಾಗಿದೆ.

8. ಯೆಹೆಜ್ಕೇಲನ ಭವಿಷ್ಯವಾಣಿಗೆ ಮಹತ್ತಾದ ನೆರವೇರಿಕೆ ಇದೆ ಅಂತ ಹೇಗೆ ಹೇಳಬಹುದು?

8 ಆದ್ರೆ ನಾವು 9 ನೇ ಅಧ್ಯಾಯದಲ್ಲಿ ನೋಡಿದ ಹಾಗೆ ಯೆಹೂದಿ ಕೈದಿಗಳು ವಾಪಸ್‌ ಬಂದ ಮೇಲೆ ಪುನಃಸ್ಥಾಪನೆಯ ಭವಿಷ್ಯವಾಣಿ ಸ್ವಲ್ಪ ಮಟ್ಟಿಗೆ ಮಾತ್ರ ನೆರವೇರಿತು. ಈ ರೀತಿ ಸ್ಪಲ್ಪ ಮಟ್ಟಿಗೆ ನೆರವೇರೋಕೆ ಕಾರಣ ಜನರೇ ಆಗಿದ್ರು. ಅವ್ರು ಪದೇಪದೇ ಹಿಂದೆ ಮಾಡಿದ ಕೆಟ್ಟ ಕೆಲಸಗಳನ್ನೇ ಮಾಡುವಾಗ, ದೇವರಿಗೆ ಅವಿಧೇಯತೆ ತೋರಿಸುವಾಗ, ಶುದ್ಧ ಆರಾಧನೆಯನ್ನ ಕಡೆಗಣಿಸುವಾಗ ಯೆಹೋವನು ಹೇಗೆ ತಾನೇ ಅವರನ್ನ ಸಂಪೂರ್ಣವಾಗಿ ಆಶೀರ್ವದಿಸೋಕೆ ಆಗುತ್ತೆ? ನಂಬಿಗಸ್ತ ಯೆಹೂದ್ಯರಿಗೆ ತಮ್ಮ ಜೊತೆ ಇದ್ದ ಬೇರೆ ಯೆಹೂದ್ಯರ ಕೆಟ್ಟ ನಡತೆಯನ್ನ ನೋಡಿ ತುಂಬ ನಿರಾಶೆಯಾಗಿರುತ್ತೆ. ಆದ್ರೂ ಅವ್ರಿಗೆ ಒಂದು ವಿಷ್ಯ ಚೆನ್ನಾಗಿ ಗೊತ್ತಿತ್ತು. ಅದೇನಂದ್ರೆ, ಯೆಹೋವನು ಹೇಳಿದ ಮಾತುಗಳು ತಪ್ಪಿಹೋಗಲ್ಲ, ಖಂಡಿತ ನೆರವೇರುತ್ತೆ. (ಯೆಹೋಶುವ 23:14 ಓದಿ.) ಹಾಗಾಗಿ ಯೆಹೆಜ್ಕೇಲನ ದರ್ಶನ ಮುಂದೆ ಮಹತ್ತಾದ ರೀತಿಯಲ್ಲಿ ನೆರವೇರಲಿತ್ತು. ಆದ್ರೆ ಅದು ಯಾವಾಗ?

ನದಿ ಇವತ್ತೂ ಹರಿಯುತ್ತಾ ಇದೆ!

9. ಯೆಹೆಜ್ಕೇಲನ ಭವಿಷ್ಯವಾಣಿ ಯಾವಾಗ ಮಹತ್ತಾದ ರೀತಿಯಲ್ಲಿ ನೆರವೇರಲಿದೆ?

9 ಅಧ್ಯಾಯ 14 ರಲ್ಲಿ ಕಲಿತ ಹಾಗೆ ಯೆಹೆಜ್ಕೇಲನ ದೇವಾಲಯದ ದರ್ಶನ “ಕೊನೇ ದಿನಗಳಲ್ಲಿ” ಮಹತ್ತಾದ ರೀತಿಯಲ್ಲಿ ನೆರವೇರಲಿತ್ತು. ಆಗ ಶುದ್ಧ ಆರಾಧನೆ ಹಿಂದೆಂದಿಗಿಂತಲೂ ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟಿರುತ್ತೆ. (ಯೆಶಾ. 2:2) ಹಾಗಾದ್ರೆ ಯೆಹೆಜ್ಕೇಲನ ಈ ಭವಿಷ್ಯವಾಣಿ ಈಗ ಯಾವ ರೀತಿಯಲ್ಲಿ ನೆರವೇರ್ತಿದೆ?

10, 11. (ಎ) ಇವತ್ತು ಯಾವ ಆಶೀರ್ವಾದಗಳು ನದಿಯಂತೆ ಹರಿಯುತ್ತಿವೆ? (ಬಿ) ಕೊನೇ ದಿನಗಳಲ್ಲಿ ಯೆಹೋವನ ಆಶೀರ್ವಾದಗಳು ಹೇಗೆ ಹೆಚ್ಚಾಗ್ತಾ ಇವೆ?

10 ಆಶೀರ್ವಾದಗಳ ನದಿ. ಯೆಹೋವ ದೇವರ ಆಲಯದಿಂದ ಹೊರಡುತ್ತಿರೋ ಆ ನೀರು ನಮ್ಮ ಕಾಲದಲ್ಲಿ ಯಾವ ಆಶೀರ್ವಾದವನ್ನ ಸೂಚಿಸುತ್ತೆ? ಯೆಹೋವನು ನಮ್ಮ ಪ್ರಯೋಜನಕ್ಕಾಗಿ ಅನೇಕ ವಿಷ್ಯಗಳನ್ನ ಕೊಟ್ಟಿದ್ದಾನೆ. ಅದ್ರಲ್ಲಿ ಪ್ರಾಮುಖ್ಯವಾದದ್ದು  ಪಾಪಗಳಿಂದ ನಮ್ಮನ್ನ ಶುದ್ಧೀಕರಿಸುವ ಯೇಸು ಕ್ರಿಸ್ತನ ಬಿಡುಗಡೆಯ ಬಲಿ. ಬೈಬಲಿನಲ್ಲಿರೋ ಸತ್ಯಗಳು ಸಹ ನಮಗೆ ಜೀವ ಕೊಡುವ ಮತ್ತು ನಮ್ಮನ್ನ ತೊಳೆದು ಶುದ್ಧೀಕರಿಸುವ ನೀರಿನಂತಿವೆ. (ಎಫೆ. 5:25-27) ನಮ್ಮ ಕಾಲದಲ್ಲಿ ಈ ಆಶೀರ್ವಾದಗಳ ನದಿ ಹೇಗೆ ಹರಿಯುತ್ತಾ ಇದೆ?

11 ಇಸವಿ 1919 ರಲ್ಲಿ ಕೆಲವೇ ಸಾವಿರದಷ್ಟು ಯೆಹೋವನ ಸಾಕ್ಷಿಗಳು ಇದ್ರು. ಅವ್ರಿಗೆ ಆಧ್ಯಾತ್ಮಿಕ ಸತ್ಯಗಳು ಗೊತ್ತಾದಾಗ ತುಂಬ ಸಂತೋಷ ಆಯ್ತು. ಮುಂದಿನ ವರ್ಷಗಳಲ್ಲಿ ಅವ್ರ ಸಂಖ್ಯೆ ಹೆಚ್ಚಾಗ್ತಾ ಹೋಯ್ತು. ಇವತ್ತು ದೇವಜನರ ಸಂಖ್ಯೆ 80 ಲಕ್ಷಕ್ಕೂ ಹೆಚ್ಚಾಗಿದೆ. ಅವರ ಸಂಖ್ಯೆ ಹೆಚ್ಚಾದಾಗ ಆಧ್ಯಾತ್ಮಿಕ ಆಹಾರ ಕಮ್ಮಿ ಆಯ್ತಾ? ಇಲ್ಲ. ಸತ್ಯದ ತಿಳುವಳಿಕೆ ಅನ್ನೋ ನೀರು ಪ್ರವಾಹದ ಹಾಗೆ ಹರಿದು ಬರ್ತಾ ಇದೆ. ಕಳೆದ 100 ವರ್ಷಗಳಲ್ಲಿ ದೇವಜನರಿಗೆ ಕೋಟ್ಯಾಂತರ ಬೈಬಲ್‌, ಪತ್ರಿಕೆ, ಪುಸ್ತಕ, ಕಿರುಹೊತ್ತಗೆ ಮತ್ತು ಟ್ರ್ಯಾಕ್ಟ್‌ಗಳು ಸಿಕ್ಕಿವೆ. ಯೆಹೆಜ್ಕೇಲನ ದರ್ಶನದಲ್ಲಿ ನೋಡಿದ ನದಿಯ ತರಾನೇ ಇವತ್ತು ಸತ್ಯದ ಪ್ರವಾಹ ಜಾಸ್ತಿಯಾಗ್ತಾನೇ ಇದೆ. ಇದ್ರಿಂದ ಲೋಕವ್ಯಾಪಕವಾಗಿ ಸತ್ಯಕ್ಕಾಗಿ ಬಾಯಾರಿದ ಜನರ ದಾಹವನ್ನ ನೀಗಿಸೋಕಾಗ್ತಿದೆ. ಎಷ್ಟೋ ವರ್ಷಗಳಿಂದ ಬೈಬಲಾಧಾರಿತ ಸಾಹಿತ್ಯಗಳನ್ನ ಮುದ್ರಿತ ರೂಪದಲ್ಲಿ ತಯಾರಿಸಲಾಗ್ತಿದೆ. ಈಗ jw.orgನಲ್ಲಿ 900ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಇಂಥ ಮಾಹಿತಿಯನ್ನ ಎಲೆಕ್ಟ್ರಾನಿಕ್‌ ರೂಪದಲ್ಲಿ ಕೊಡಲಾಗ್ತಿದೆ. ಇಂಥ ಸತ್ಯದ ನೀರಿನಿಂದ ಒಳ್ಳೇ ಹೃದಯದ ಜನರ ಮೇಲೆ ಯಾವ ಪರಿಣಾಮ ಆಗಿದೆ?

12. (ಎ) ಲಕ್ಷಾಂತರ ಜನರಿಗೆ ದೇವರ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ಯಾವುದು ಸಹಾಯ ಮಾಡ್ತು? (ಬಿ) ಈ ದರ್ಶನದಲ್ಲಿ ನಮಗೆ ಯಾವ ಎಚ್ಚರಿಕೆಯ ಸಂದೇಶವಿದೆ? (ಪಾದಟಿಪ್ಪಣಿ ನೋಡಿ.)

12 ಜೀವ ಕೊಡೋ ನೀರು. ಯೆಹೆಜ್ಕೇಲನಿಗೆ ದೇವದೂತನು, “ಆ ತೊರೆ ಎಲ್ಲೆಲ್ಲ ಹರಿಯುತ್ತೋ ಅಲ್ಲೆಲ್ಲ ಜೀವಿಗಳು ವಾಸಿಸುತ್ತೆ” ಅಂತ ಹೇಳಿದನು. ಈ ಮಾತಿನಂತೆ, ಪುನಃಸ್ಥಾಪಿಸಲ್ಪಟ್ಟ ದೇಶಕ್ಕೆ ವಾಪಸ್‌ ಬಂದವ್ರಿಗೆ ಸತ್ಯದ ಜ್ಞಾನ ಹೆಚ್ಚೆಚ್ಚು ಸಿಗ್ತಾ ಹೋಯ್ತು. ಬೈಬಲ್‌ ಸತ್ಯಗಳು ಲಕ್ಷಾಂತರ ಜನರ ಮನಮುಟ್ಟಿದವು. ಹೀಗೆ ಅವು ಯೆಹೋವ ದೇವರ ಮೇಲೆ ನಂಬಿಕೆಯನ್ನ ಬೆಳೆಸಿಕೊಳ್ಳೋಕೆ ಅವ್ರಿಗೆ ಸಹಾಯ ಮಾಡಿದವು. ಆದ್ರೆ ಆ ದರ್ಶನದಿಂದ ನಮಗೆ ಒಂದು ಎಚ್ಚರಿಕೆ ಕೂಡ ಇದೆ. ಎಲ್ಲರೂ ಸತ್ಯವನ್ನ ಸ್ವೀಕರಿಸಲ್ಲ. ಯೆಹೆಜ್ಕೇಲನ ದರ್ಶನದಲ್ಲಿ ನೋಡಿದ ಮೃತಸಮುದ್ರದ ಕೆಲವು ಭಾಗಗಳು ಕೆಸರಿನಿಂದ ಮತ್ತು ಜವುಗು ನೆಲದಿಂದ ಕೂಡಿದ್ದವು. ಅದೇ ರೀತಿಯಲ್ಲಿ ಇವತ್ತು ಕೂಡ ಅನೇಕರು ಸತ್ಯವನ್ನ ಸ್ವೀಕರಿಸಲ್ಲ ಮತ್ತು ಅದನ್ನ ತಮ್ಮ ಜೀವನದಲ್ಲಿ ಅನ್ವಯಿಸೋಕೂ ಬಯಸಲ್ಲ. * ನಾವು ಅವರ ತರ ಆಗದೇ ಇರೋಣ.—ಧರ್ಮೋಪದೇಶಕಾಂಡ 10:16-18 ಓದಿ.

13. ದರ್ಶನದಲ್ಲಿದ್ದ ಮರಗಳಿಂದ ನಾವೇನು ಕಲಿಬಹುದು?

13 ಆಹಾರ ಮತ್ತು ಔಷಧಿ ಒದಗಿಸುವ ಮರಗಳು. ದರ್ಶನದಲ್ಲಿರುವ ಮರಗಳಿಂದ ನಾವೇನು ಕಲಿಬಹುದು? ನಮಗೆ ಪ್ರೋತ್ಸಾಹ ಕೊಡುವಂತಹ ಅನೇಕ ವಿಷ್ಯಗಳನ್ನ ಅದರಿಂದ ಕಲಿಬಹುದು. ಆ ಮರ ಪ್ರತೀ ತಿಂಗಳು ರುಚಿಕರವಾದ ಹಣ್ಣುಗಳನ್ನ ಕೊಡ್ತಾ ಇತ್ತು. ಅದರ ಎಲೆಗಳಿಂದ ವಾಸಿಯಾಗ್ತಿತ್ತು ಅನ್ನೋದನ್ನ ನೆನಪಿಸಿಕೊಳ್ಳಿ. (ಯೆಹೆ. 47:12) ಇವತ್ತು ಸಹ ಯೆಹೋವನು ನಮಗೆ ಆಧ್ಯಾತ್ಮಿಕ ಆಹಾರ ಕೊಡ್ತಿದ್ದಾನೆ, ವಾಸಿ ಮಾಡ್ತಿದ್ದಾನೆ. ಇವತ್ತು ಜನರಿಗೆ ಬೈಬಲ್‌ ಸತ್ಯಗಳ ಕ್ಷಾಮ ಇದೆ. ಆದ್ರೆ ಯೆಹೋವನು ನಮಗೆ ಏನೆಲ್ಲಾ ಕೊಟ್ಟಿದ್ದಾನೆ ಅಂತ ಸ್ವಲ್ಪ ಯೋಚ್ನೆ ಮಾಡಿ. ನಮ್ಮ ಸಾಹಿತ್ಯದಲ್ಲಿರುವ ಯಾವುದಾದ್ರು ಒಂದು ಲೇಖನವನ್ನ ಓದಿ ಮುಗಿಸಿದ ಮೇಲೆ, ಒಂದು ಅಸೆಂಬ್ಲಿಯ ಅಥ್ವಾ ಕನ್ವೆನ್ಷನ್‌ನ ಹಾಡನ್ನ ಹಾಡಿದ ಮೇಲೆ, ಯಾವುದಾದ್ರು ಒಂದು ವಿಡಿಯೋ ಅಥ್ವಾ ಬ್ರಾಡ್‌ಕಾಸ್ಟಿಂಗ್‌ ಪ್ರೋಗ್ರ್ಯಾಮ್‌ ನೋಡಿದ ಮೇಲೆ ಯೆಹೋವನು ನಮಗೆ ಆಧ್ಯಾತ್ಮಿಕವಾಗಿ ಎಷ್ಟು ವಿಷ್ಯಗಳನ್ನ ಕೊಟ್ಟಿದ್ದಾನೆ ಅಂತ ಯೋಚ್ಸಿ ಕೃತಜ್ಞತೆಯಿಂದ ನಿಮ್ಮ ಕಣ್ಣಲ್ಲಿ ನೀರು ತುಂಬಿ ಬಂದಿದೆಯಾ? ನಾವೆಲ್ರೂ ಪ್ರತಿ ದಿನ ರಸದೌತಣವನ್ನ ಆನಂದಿಸ್ತಿದ್ದೇವೆ ಅಲ್ವಾ? (ಯೆಶಾ. 65:13, 14) ಬೈಬಲಿನಲ್ಲಿರೋ ವಿಷಯಗಳನ್ನ ಕಲಿತಿರೋದ್ರಿಂದ ನಮಗೆ ತುಂಬ ಪ್ರಯೋಜನ ಆಗಿದೆ. ಯೆಹೋವನಿಗೆ ಮೆಚ್ಚಿಗೆ ಆಗೋ ರೀತಿಯಲ್ಲಿ ನಡಿಯೋಕೆ ನಮಗೆ ಅದು ಸಹಾಯ ಮಾಡಿದೆ. ಬೈಬಲಾಧಾರಿತ ಸಲಹೆ ಅನೈತಿಕತೆಯಿಂದ ದೂರ ಇರೋಕೆ, ಸ್ವಾರ್ಥಿಗಳಾಗದೇ ಇರೋಕೆ ಮತ್ತು  ನಂಬಿಕೆಯನ್ನ ಕಳ್ಕೊಳ್ಳದೆ ಇರೋಕೆ ನಮಗೆ ಸಹಾಯಮಾಡುತ್ತೆ. ಯಾರಾದ್ರೂ ಗಂಭೀರ ತಪ್ಪುಗಳನ್ನ ಮಾಡಿ ಆಧ್ಯಾತ್ಮಿಕವಾಗಿ ಹುಷಾರಿಲ್ಲದಿದ್ರೆ ಅವರಿಗೆ ಸಹಾಯ ಮಾಡೋಕೂ ಯೆಹೋವನು ಏರ್ಪಾಡುಗಳನ್ನ ಮಾಡಿದ್ದಾನೆ. (ಯಾಕೋಬ 5:14 ಓದಿ.) ಯೆಹೆಜ್ಕೇಲನ ದರ್ಶನದಲ್ಲಿರೋ ಮರಗಳು ಸೂಚಿಸೋ ಹಾಗೆ ನಮಗೆ ಹೇರಳವಾದ ಆಶೀರ್ವಾದಗಳು ಸಿಗ್ತಾ ಇವೆ.

14, 15. (ಎ) ಯೆಹೆಜ್ಕೇಲನ ದರ್ಶನದಲ್ಲಿರೋ ಜವುಗು ಸ್ಥಳಗಳಿಂದ ನಾವೇನು ಕಲಿಬಹುದು? (ಬಿ) ಯೆಹೆಜ್ಕೇಲನ ದರ್ಶನದಲ್ಲಿ ತಿಳಿಸಲಾಗಿರೋ ನದಿಯಿಂದ ನಮಗೆ ಯಾವ ಪ್ರಯೋಜನ ಇದೆ?

14 ದರ್ಶನದಲ್ಲಿ ತಿಳಿಸಲಾದ ಜವುಗು ಪ್ರದೇಶಗಳಿಂದ ಸಹ ನಾವು ಪಾಠಗಳನ್ನ ಕಲಿಬಹುದು. ನಮ್ಮ ಜೀವನದಲ್ಲಿ ಯೆಹೋವನ ಆಶೀರ್ವಾದಗಳು ಹರಿದು ಬರೋದನ್ನ ನಾವು ಯಾವತ್ತೂ ತಡೀಬಾರದು. ಒಂದುವೇಳೆ ನಾವು ಈ ರೀತಿ ಮಾಡೋದಾದ್ರೆ, ನಾವು ಲೋಕದ ಜನರ ಹಾಗೆ ಕಾಯಿಲೆ ಬಿದ್ದವರ ತರ ಇರ್ತೀವಿ. (ಮತ್ತಾ. 13:15) ನಾವು ಈ ರೀತಿ ಇರೋಕೆ ಇಷ್ಟಪಡಲ್ಲ ಅಲ್ವಾ? ಬದ್ಲಿಗೆ ಯೆಹೋವನ ಆಶೀರ್ವಾದಗಳ ನದಿಯಿಂದ ಪ್ರಯೋಜನ ಪಡ್ಕೊಳ್ಳೋಕೆ ಬಯಸ್ತೇವೆ. ಇಂದು ನಾವು ದೇವರ ವಾಕ್ಯದಿಂದ ಸತ್ಯ ಅನ್ನೋ ನೀರನ್ನ ಕುಡಿತಿದ್ದೇವೆ. ಬೇರೆಯವ್ರಿಗೆ ಈ ಸತ್ಯಗಳನ್ನ ಸಾರುವ ಮತ್ತು ಕಲಿಸುವ ಅವಕಾಶ ನಮಗೆ ಸಿಕ್ಕಿದೆ. ನಂಬಿಗಸ್ತ ಆಳಿಂದ ತರಬೇತಿ ಪಡೆದ ಹಿರಿಯರಿಂದ ನಮಗೆ ಪ್ರೀತಿಯ ಮಾರ್ಗದರ್ಶನ, ಸಾಂತ್ವನ, ಸಹಾಯ ಸಿಗ್ತಿದೆ. ಹೀಗೆ ಆ ನದಿಯಿಂದ ಪ್ರಯೋಜನ ಪಡಿತಿದ್ದೇವೆ. ಆ ನದಿ ಹರಿದಲ್ಲೆಲ್ಲಾ ಜೀವ ಕೊಡುತ್ತೆ ಮತ್ತು ವಾಸಿಮಾಡುತ್ತೆ.

15 ಹಾಗಾದ್ರೆ ನದಿಯ ಈ ದರ್ಶನ ಮುಂದೆ ಹೇಗೆ ನೆರವೇರುತ್ತೆ? ಇದು ಪರದೈಸಲ್ಲಿ ಮಹತ್ತಾದ ರೀತಿಯಲ್ಲಿ ನೆರವೇರಲಿದೆ. ಅದ್ರ ಬಗ್ಗೆ ನಾವೀಗ ನೊಡೋಣ.

ಪರದೈಸಿನಲ್ಲಿ ಈ ದರ್ಶನ ಹೇಗೆ ನೆರವೇರುತ್ತೆ?

16, 17. (ಎ) ಆ ನದಿ ಪರದೈಸಿನಲ್ಲಿ ಈಗಿರೋದಕ್ಕಿಂತ ಹೆಚ್ಚು ಆಳವಾಗಿ, ವಿಶಾಲವಾಗಿ ಹೇಗೆ ಹರಿಯುತ್ತೆ? (ಬಿ) ಪರದೈಸಿನಲ್ಲಿ ನಾವು ಆಶೀರ್ವಾದಗಳ ನದಿಯಿಂದ ಯಾವ ಪ್ರಯೋಜನ ಪಡೆಯುತ್ತೇವೆ?

16 ಪರದೈಸಲ್ಲಿ ಗೆಳೆಯರ ಜೊತೆ ಮತ್ತು ಕುಟುಂಬದವ್ರ ಜೊತೆ ಜೀವನವನ್ನ ಆನಂದಿಸೋದ್ರ ಬಗ್ಗೆ ಯಾವತ್ತಾದ್ರೂ ಊಹಿಸಿದ್ದೀರಾ? ಯೆಹೆಜ್ಕೇಲನ ದರ್ಶನದಲ್ಲಿರೋ ನದಿಯ ಬಗ್ಗೆ ಕಲಿಯೋದ್ರಿಂದ ಪರದೈಸಿನ ಬಗ್ಗೆ ಇನ್ನೂ ಚೆನ್ನಾಗಿ ಚಿತ್ರಿಸಿಕೊಳ್ಳೋಕೆ ಆಗುತ್ತೆ. ಹೇಗೆ? ಇದನ್ನ ತಿಳಿಯೋಕೆ ನಾವೀಗ ಆ ದರ್ಶನದ ಮೂರು ಅಂಶಗಳ ಬಗ್ಗೆ ನೊಡೋಣ.

17 ಆಶೀರ್ವಾದಗಳ ನದಿ. ದರ್ಶನದಲ್ಲಿದ್ದ ನದಿ ಪರದೈಸಿನಲ್ಲಿ ಈಗಿರೋದಕ್ಕಿಂತ ಹೆಚ್ಚು ಆಳವಾಗಿಯೂ ವಿಶಾಲವಾಗಿಯೂ ಹರಿಯುತ್ತೆ. ಅಂದ್ರೆ ಆಗ ನಮಗೆ ಯೆಹೋವನ ಜೊತೆ ತುಂಬ ಆಪ್ತ ಸಂಬಂಧ ಇರೋದಷ್ಟೇ ಅಲ್ಲ, ಯಾವುದೇ ಕಾಯಿಲೆ, ನೋವು ಇರಲ್ಲ. ಯೇಸು ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಕೆಳಗೆ ನಂಬಿಗಸ್ತ ಜನ್ರೆಲ್ಲರೂ ಆತನ ಬಿಡುಗಡೆಯ ಬಲಿಯಿಂದ ಮಹತ್ತಾದ ಪ್ರಯೋಜನ ಪಡೆಯುತ್ತಾರೆ. ದಿನ ಕಳೆದಂತೆ ಅವ್ರು ಪರಿಪೂರ್ಣರಾಗ್ತಾ ಹೋಗ್ತಾರೆ. ಅಲ್ಲಿ ಕಾಯಿಲೆ ಇರಲ್ಲ. ಡಾಕ್ಟರ್‌ಗಳು, ನರ್ಸ್‌ಗಳು, ಆಸ್ಪತ್ರೆಗಳು ಮತ್ತು ಆರೋಗ್ಯ ವಿಮೆಯ ಅಗತ್ಯವೂ ಇರಲ್ಲ. ಅಂದ್ರೆ “ಮಹಾ ಸಂಕಟವನ್ನ” ಪಾರಾಗಿ ಬಂದ “ದೊಡ್ಡ ಗುಂಪಿನವ್ರ’ ಕಡೆಗೆ ಜೀವ ಕೊಡೋ ನದಿ ಹರಿಯುತ್ತೆ. (ಪ್ರಕ. 7:9, 14) ಈ ಆಶೀರ್ವಾದಗಳನ್ನೆಲ್ಲ ಪಡೆಯುವಾಗ ನಮಗೆ ತುಂಬ ಖುಷಿಯಾಗಬಹುದು. ಆದ್ರೆ ಇದು ನಮಗೆ ಸಿಗಲಿರೋ ಆಶೀರ್ವಾದಗಳ ಕಿರುನೋಟ ಅಷ್ಟೇ. ಮುಂದೆ ಹೋಗ್ತಾ ಹೋಗ್ತಾ ಆ ನದಿ ಪ್ರವಾಹದಂತೆ ಹರಿಯುತ್ತೆ ಅಂತ ನೋಡಿದ್ವಿ. ಹಾಗಾಗಿ ನಮಗೆ ಸಿಗೋ ಆಶೀರ್ವಾದಗಳು ಮುಂದೆ ಇನ್ನೂ ಜಾಸ್ತಿಯಾಗ್ತಾ ಹೋಗುತ್ತೆ ಅಂತ ಗೊತ್ತಾಗುತ್ತೆ.

ಪರದೈಸಿನಲ್ಲಿ ಆಶೀರ್ವಾದಗಳ ನದಿ ಎಲ್ಲರನ್ನ ಆರೋಗ್ಯವಂತ ಯುವ ಜನರನ್ನಾಗಿ ಮಾಡುತ್ತೆ (ಪ್ಯಾರ 17 ನೋಡಿ)

18. “ಜೀವ ಕೊಡೋ ನೀರಿನ ನದಿ” ಹೇಗೆ ಸಾವಿರ ವರ್ಷಗಳ ಆಳ್ವಿಕೆಯಲ್ಲಿ ದೊಡ್ಡ ಪ್ರವಾಹ ಆಗುತ್ತೆ?

18 ಜೀವ ಕೊಡೋ ನೀರು. ಸಾವಿರ ವರ್ಷದ ಆಳ್ವಿಕೆ ಸಮಯದಲ್ಲಿ “ಜೀವ ಕೊಡೋ ನೀರಿನ ನದಿ” ಪ್ರವಾಹದಂತೆ ಆಗುತ್ತೆ. (ಪ್ರಕ. 22:1) ಸತ್ತು ಹೋಗಿರೋ ಕೊಟ್ಯಾಂತರ ಜನ್ರು ಪುನಃ ಎದ್ದು ಬರ್ತಾರೆ ಮತ್ತು ಅವರಿಗೆ ಪರದೈಸಲ್ಲಿ ಶಾಶ್ವತವಾಗಿ ಜೀವಿಸೋ ಅವಕಾಶ ಕೊಡಲಾಗುತ್ತೆ. ಯೆಹೋವನು ತನ್ನ ಆಳ್ವಿಕೆಯ ಮೂಲಕ ಕೊಡೋ ಆಶೀರ್ವಾದಗಳಲ್ಲಿ ಇದೂ ಸೇರಿದೆ. ಅಲ್ಲಿ, ಎಷ್ಟೋ ವರ್ಷಗಳಿಂದ ಮಣ್ಣಲ್ಲಿ ಮಣ್ಣಾಗಿರೋ ತುಂಬ  ಜನ ಪುನಃ ಜೀವಂತವಾಗಿ ಎದ್ದು ಬರ್ತಾರೆ. (ಯೆಶಾ. 26:19) ಆದ್ರೆ ಈ ರೀತಿ ಎದ್ದು ಬಂದ ಎಲ್ರೂ ಶಾಶ್ವತವಾಗಿ ಜೀವಿಸ್ತಾರಾ?

19. (ಎ) ಪರದೈಸಿನಲ್ಲಿ ಯೆಹೋವ ದೇವರು ಕೊಡೋ ಹೊಸ ನೀರು ಏನನ್ನ ಸೂಚಿಸುತ್ತೆ? (ಬಿ) ಕೆಲವ್ರು ಪರದೈಸಿನಲ್ಲಿ ಉಪ್ಪು ಪ್ರದೇಶದಂತೆ ಇರ್ತಾರೆ ಹೇಗೆ?

19 ಅವರು ಶಾಶ್ವತವಾಗಿ ಜೀವಿಸ್ತಾರಾ ಇಲ್ಲವಾ ಅನ್ನೋದು ಅವರು ಮಾಡೋ ಆಯ್ಕೆ ಮೇಲೆ ಹೊಂದಿಕೊಂಡಿದೆ. ಆಗ ಹೊಸ ಸುರುಳಿಗಳು ತೆರೆಯಲ್ಪಡುತ್ತೆ ಅಂತ ಬೈಬಲ್‌ ಹೇಳುತ್ತೆ. ಇದ್ರ ಅರ್ಥ ಏನಂದ್ರೆ, ಹೊಸಲೋಕದಲ್ಲಿ ಸಿಗೋ ಚೈತನ್ಯದಾಯಕ ನೀರಿನಲ್ಲಿ ಹೊಸ ತಿಳುವಳಿಕೆಗಳು ಮತ್ತು ಹೊಸ ಮಾರ್ಗದರ್ಶನಗಳು ಸೇರಿದೆ. ಅದ್ರ ಬಗ್ಗೆ ಯೋಚಿಸ್ವಾಗ ನಿಮಗೆ ತುಂಬ ಖುಷಿಯಾಗ್ಬಹುದಲ್ವಾ? ಆಗ್ಲೂ ಕೆಲವರು ಆ ಹೊಸ ಮಾರ್ಗದರ್ಶನಗಳ ಪ್ರಕಾರ ನಡೆಯೋಕೆ ಇಷ್ಟಪಡಲ್ಲ, ಯೆಹೋವ ದೇವರಿಗೆ ಅವಿಧೇಯರಾಗ್ತಾರೆ. ಸಾವಿರ ವರ್ಷದ ಆಳ್ವಿಕೆಯಲ್ಲಿ ಕೆಲವ್ರು ದಂಗೆನೂ ಏಳ್ತಾರೆ. ಆದ್ರೆ ಪರದೈಸಿನ ಶಾಂತಿಯನ್ನ ಹಾಳುಮಾಡೋಕೆ ಯೆಹೋವನು ಅವ್ರಿಗೆ ಅನುಮತಿ ಕೊಡಲ್ಲ. (ಯೆಶಾ. 65:20) ಯೆಹೆಜ್ಕೇಲನ ದರ್ಶನದಲ್ಲಿ ಕೆಲವು ಪ್ರದೇಶಗಳು ಜವುಗು ಮತ್ತು ‘ಉಪ್ಪಿನ ಪ್ರದೇಶಗಳಾಗಿ’ ಉಳಿದಿದ್ದವು ಅನ್ನೋದನ್ನ ಮರೀಬೇಡಿ. ಜೀವಜಲದ ನೀರನ್ನ ಕುಡಿಯೋದೇ ಇಲ್ಲ ಅಂತ ಹಠಮಾಡೋ ಜನ್ರು ಎಂಥಾ ಮೂರ್ಖರಲ್ವಾ? ಸಾವಿರ ವರ್ಷದ ಕೊನೆಯಲ್ಲೂ ಕೆಲವು ಜನರು ಸೈತಾನನ ಜೊತೆ ಸೇರುತ್ತಾರೆ. ಆದ್ರೆ ಯೆಹೋವ ದೇವರ ನೀತಿಯ ಆಳ್ವಿಕೆಯನ್ನ ತಿರಸ್ಕರಿಸೋ ಎಲ್ರಿಗೂ ಒಂದು ಕೊನೆಯಿದೆ. ಅದೇನಂದ್ರೆ ಶಾಶ್ವತ ಮರಣ.—ಪ್ರಕ. 20:7-12.

20. ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲಿ ಸಿಗೋ ಯಾವ ಆಶೀರ್ವಾದಗಳು ಯೆಹೆಜ್ಕೇಲನ ದರ್ಶನದಲ್ಲಿರೋ ಮರಗಳನ್ನ ನೆನಪಿಸುತ್ತೆ?

20 ಆಹಾರ ಮತ್ತು ಔಷಧಿ ಒದಗಿಸುವ ಮರ. ನಮ್ಮೆಲ್ಲರಿಗೂ ಶಾಶ್ವತ ಜೀವ ಸಿಗಬೇಕನ್ನೋದೇ ಯೆಹೋವನ ಬಯಕೆ. ಇದು ಯೆಹೋವನು ನಮಗಾಗಿ ಕೊಟ್ಟಿರೋ ಒಂದು  ಅಮೂಲ್ಯ ಉಡುಗೊರೆ. ನಮ್ಮಲ್ಲಿ ಯಾರಿಗೂ ಆ ಅವಕಾಶ ಕೈತಪ್ಪಿ ಹೋಗ್ಬಾರದು ಅಂತ ಯೆಹೋವನು ಬಯಸ್ತಾನೆ. ಆದ್ರಿಂದ ಯೆಹೆಜ್ಕೇಲನ ದರ್ಶನದಲ್ಲಿದ್ದ ಮರಗಳಂತೆ ಇರೋ ಒಂದು ಏರ್ಪಾಡನ್ನ ಆತನು ಪರದೈಸಲ್ಲೂ ಮಾಡ್ತಾನೆ. ಆಗ ನಾವು ಯೆಹೋವನ ಜೊತೆ ಒಳ್ಳೇ ಸಂಬಂಧವನ್ನ ಇಟ್ಕೊಳ್ಳಬಹುದು ಮಾತ್ರವಲ್ಲ, ನಮಗೆ ಯಾವುದೇ ರೀತಿಯ ಕಾಯಿಲೆ, ಕಷ್ಟ ಬರಲ್ಲ. ಯೇಸು ಮತ್ತು 1,44,000 ರಾಜರು ಸ್ವರ್ಗದಿಂದ ಸಾವಿರ ವರ್ಷ ಆಳ್ತಾರೆ. ಆ ರಾಜರು ಪುರೋಹಿತರೂ ಆಗಿದ್ದಾರೆ. ಆದ್ರಿಂದ ಅವರು ಯೇಸು ಕ್ರಿಸ್ತನ ಬಿಡುಗಡೆಯ ಬಲಿಯಿಂದ ಪ್ರಯೋಜನ ಪಡೆಯೋಕೆ, ಪರಿಪೂರ್ಣರಾಗೋಕೆ ನಂಬಿಗಸ್ತ ಮಾನವ್ರಿಗೆ ಸಹಾಯ ಮಾಡ್ತಾರೆ. (ಪ್ರಕ. 20:6) ಅಷ್ಟೇ ಅಲ್ಲ, ಒಳ್ಳೇ ಆರೋಗ್ಯವನ್ನ ಮತ್ತು ಯೆಹೋವನ ಜೊತೆ ಒಳ್ಳೇ ಸಂಬಂಧವನ್ನ ಪಡ್ಕೊಳ್ಳೋಕೂ ಸಹಾಯ ಮಾಡ್ತಾರೆ. ನಮಗಾಗಿ ಮಾಡಲಾದ ಈ ಏರ್ಪಾಡು, ಯೆಹೆಜ್ಕೇಲನ ದರ್ಶನದಲ್ಲಿ ನೋಡಿದ ಮರಗಳನ್ನ ನೆನಪಿಸುತ್ತೆ. ಈ ಮರಗಳ ಎಲೆಗಳು ಕಾಯಿಲೆಗಳನ್ನ ವಾಸಿ ಮಾಡ್ತಿದ್ದವು ಮತ್ತು ಅದರ ಹಣ್ಣುಗಳು ಆಹಾರಕ್ಕೆ ಯೋಗ್ಯವಾಗಿದ್ದವು. ಯೆಹೆಜ್ಕೇಲ ನೋಡಿದ ಈ ದರ್ಶನಕ್ಕೂ ಅಪೊಸ್ತಲ ಯೋಹಾನ ಬರೆದ ಒಂದು ಭವಿಷ್ಯವಾಣಿಗೂ ಹೋಲಿಕೆಗಳಿವೆ. (ಪ್ರಕಟನೆ 22:1, 2 ಓದಿ.) ಯೋಹಾನನ ದರ್ಶನದಲ್ಲಿದ್ದ ಮರಗಳ “ಎಲೆಗಳಿಗೆ ದೇಶಗಳ ಜನ್ರನ್ನ ವಾಸಿಮಾಡೋ ಶಕ್ತಿ” ಇತ್ತು. 1,44,000 ಮಂದಿ ಪುರೋಹಿತರ ಸೇವೆಯಿಂದ ಕೊಟ್ಯಾಂತರ ನಂಬಿಗಸ್ತ ಜನ್ರು ಪ್ರಯೋಜನ ಪಡ್ಕೊತಾರೆ ಅಂತ ಇದು ಸೂಚಿಸುತ್ತೆ.

21. ಯೆಹೆಜ್ಕೇಲನ ದರ್ಶನದಲ್ಲಿರೋ ನದಿಯ ಬಗ್ಗೆ ಯೋಚಿಸುವಾಗ ನಿಮಗೆ ಹೇಗನಿಸುತ್ತೆ? ಮತ್ತು ಮುಂದಿನ ಅಧ್ಯಾಯದಲ್ಲಿ ಏನನ್ನ ಕಲಿಯಲಿದ್ದೇವೆ? (“ಒಂದು ತೊರೆ ಪ್ರವಾಹ ಆಗುತ್ತೆ!” ಅನ್ನೋ ಚೌಕ ನೋಡಿ.)

21 ಯೆಹೆಜ್ಕೇಲನ ದರ್ಶನದಲ್ಲಿರೋ ನದಿಯ ಬಗ್ಗೆ ಯೋಚಿಸ್ವಾಗ ನಿಮ್ಮ ಮನ್ಸಲ್ಲಿ ನೆಮ್ಮದಿ ಮತ್ತು ನಿರೀಕ್ಷೆ ಮೂಡುತ್ತಲ್ವಾ? ಮುಂದೆ ನಮಗೆ ಎಷ್ಟು ಒಳ್ಳೇ ಜೀವನ ಸಿಗಲಿಕ್ಕಿದೆ ಅಲ್ವಾ! ಆ ಜೀವನ ಹೇಗಿರುತ್ತೆ ಅಂತ ಚಿತ್ರಿಸಿಕೊಳ್ಳೋಕೆ ಯೆಹೋವನು ಸಾವಿರಾರು ವರ್ಷಗಳ ಹಿಂದೆನೇ ಅನೇಕ ಭವಿಷ್ಯವಾಣಿಗಳನ್ನ ತಿಳಿಸಿದ್ದಾನೆ. ಜನರೆಲ್ರೂ ಆ ಆಶೀರ್ವಾದಗಳನ್ನ ಪಡ್ಕೊಬೇಕಂತ ಆಮಂತ್ರಿಸ್ತಿದ್ದಾನೆ ಮತ್ತು ತಾಳ್ಮೆಯಿಂದ ಕಾಯ್ತಿದ್ದಾನೆ. ಈ ಆಶೀರ್ವಾದಗಳನ್ನ ಪಡೆಯೋಕೆ ನೀವು ಅಲ್ಲಿ ಇರ್ತೀರಾ? ನೀವು ಹೀಗೆ ನೆನಸಬಹುದು: ನಂಗೂ ಪರದೈಸಲ್ಲಿ ಜಾಗ ಸಿಗುತ್ತಾ? ಮುಂದಿನ ಅಧ್ಯಾಯದಲ್ಲಿ ನಾವು ಇದ್ರ ಬಗ್ಗೆ ನೋಡೋಣ. ಯೆಹೆಜ್ಕೇಲನ ಭವಿಷ್ಯವಾಣಿಯ ಕೊನೆಯ ಭಾಗಗಳು ನಮಗೆ ಹೇಗೆ ಆಶ್ವಾಸನೆ ಕೊಡುತ್ತವೆ ಅಂತ ಕಲಿಯೋಣ.

^ ಪ್ಯಾರ. 3 ಅಷ್ಟೇ ಅಲ್ಲ ಕೈದಿಗಳಾಗಿದ್ದ ಯೆಹೂದ್ಯರಿಗೆ ತಮ್ಮ ಸ್ವಂತ ದೇಶದ ರಚನೆ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಈ ನದಿ ನಿಜವಾದ ನದಿ ಆಗಿರಲಿಕ್ಕಿಲ್ಲ ಅಂತ ಅವರು ಅರ್ಥಮಾಡಿಕೊಂಡಿದ್ದರು. ಯಾಕಂದ್ರೆ ಇದು ಅತಿ ಎತ್ತರದ ಬೆಟ್ಟದ ಮೇಲಿದ್ದ ದೇವಾಲಯದಿಂದ ಹರಿಯೋಕೆ ಶುರುಮಾಡ್ತು ಅಂತ ಹೇಳುತ್ತೆ. ಅಂತ ಒಂದು ಜಾಗ ಆ ದೇಶದಲ್ಲಿ ಎಲ್ಲಿಯೂ ಇರಲಿಲ್ಲ. ಅಷ್ಟೇ ಅಲ್ಲ, ಆ ನದಿ ನೇರವಾಗಿ ಯಾವುದೇ ಅಡ್ಡಿತಡೆ ಇಲ್ಲದೆ ಮೃತಸಮುದ್ರ ಸೇರಿತು ಅಂತ ಆ ದರ್ಶನದಲ್ಲಿದೆ. ಅದು ಕೂಡ ಭೌಗೋಳಿಕವಾಗಿ ಅಸಾಧ್ಯವಾದ ವಿಷಯವಾಗಿತ್ತು.

^ ಪ್ಯಾರ. 6 ಉಪ್ಪು ಪ್ರದೇಶವಾಗಿಯೇ ಉಳಿಯುತ್ತೆ ಅನ್ನೋ ಪದ ಒಳ್ಳೇ ಅರ್ಥದಲ್ಲಿ ಉಪಯೋಗಿಸಲಾಗಿದೆ ಅಂತ ಕೆಲವರು ಹೇಳ್ತಾರೆ. ಯಾಕಂದ್ರೆ ತುಂಬ ಸಮಯದಿಂದ ಮೃತಸಮುದ್ರದಿಂದ ಉಪ್ಪನ್ನ ತೆಗೆದು ಜನ ವ್ಯಾಪಾರ ಮಾಡ್ತಿದ್ರು. ಈ ವ್ಯಾಪಾರ ಒಳ್ಳೇ ರೀತಿ ನಡಿತಿತ್ತು. ಅಷ್ಟೇ ಅಲ್ಲ ಆಹಾರ ವಸ್ತುಗಳು ಹಾಳಾಗದೆ ಇರೋಕೆ ಜನ ಉಪ್ಪನ್ನ ಉಪಯೋಗಿಸ್ತಿದ್ರು. ಆದ್ರೆ ಈ ವಚನದಲ್ಲಿ ಆ ಪ್ರದೇಶ ಇದ್ದ ಹಾಗೇ ಇರುತ್ತೆ ಅಂತ ಹೇಳುತ್ತೆ. ಅಂದ್ರೆ “ಅದು ವಾಸಿಯಾಗಲ್ಲ,” ಅಲ್ಲಿ ಜೀವಗಳು ಬದುಕಲ್ಲ ಅಂತ ಅರ್ಥ. ಯೆಹೋವ ದೇವರ ಮಂದಿರದಿಂದ ಬರುವ ಜೀವಜಲ ಅಲ್ಲಿ ಬಂದು ತಲುಪಲ್ಲ. ಹಾಗಾಗಿ ಆ ಜವುಗು ಪ್ರದೇಶಗಳು ಉಪ್ಪು ಪ್ರದೇಶಗಳಾಗೇ ಉಳಿಯುತ್ತವೆ ಅನ್ನೋ ಮಾತು ಒಳ್ಳೇದನ್ನಲ್ಲ, ಕೆಟ್ಟದ್ದನ್ನೇ ಸೂಚಿಸ್ತಾ ಇದೆ.—ಕೀರ್ತ. 107:33, 34; ಯೆರೆ. 17:6.

^ ಪ್ಯಾರ. 12 ಯೇಸು ದೊಡ್ಡ ಬಲೆಯ ಉದಾಹರಣೆಯ ಮೂಲಕನೂ ಇಂಥದ್ದೇ ವಿಷ್ಯವನ್ನ ತಿಳಿಸಿದನು. ಆ ಬಲೆಯಲ್ಲಿ ಎಲ್ಲ ತರದ ಮೀನುಗಳನ್ನ ಹಿಡಿಯೋಕೆ ಆಗುತ್ತೆ. ಆದ್ರೆ ಅದ್ರಲ್ಲಿರೋ ಎಲ್ಲ ಮೀನುಗಳು “ಒಳ್ಳೇ” ಮೀನುಗಳಾಗಿರಲ್ಲ ಮತ್ತು ಕೆಟ್ಟ ಮೀನುಗಳನ್ನ ಬಿಸಾಕಲಾಗುತ್ತೆ ಅಂತ ತಿಳಿಸಿದನು. ಹೀಗೆ ಯೇಸು, ಯೆಹೋವನ ಸಂಘಟನೆಗೆ ಬರೋರಲ್ಲಿ ತುಂಬ ಜನ ಸಮಯ ಹೋದಂತೆ ಅಪನಂಬಿಗಸ್ತರಾಗಬಹುದು ಅಂತ ಎಚ್ಚರಿಸಿದನು.—ಮತ್ತಾ. 13:47-50; 2 ತಿಮೊ. 2:20, 21.