ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 7

ಜನಾಂಗಗಳಿಗೆ “ನಾನೇ ಯೆಹೋವ ಅಂತ ಗೊತ್ತಾಗುತ್ತೆ”

ಜನಾಂಗಗಳಿಗೆ “ನಾನೇ ಯೆಹೋವ ಅಂತ ಗೊತ್ತಾಗುತ್ತೆ”

ಯೆಹೆಜ್ಕೇಲ 25:17

ಮುಖ್ಯ ವಿಷಯ: ಯೆಹೋವ ದೇವರ ಹೆಸರನ್ನ ಹಾಳು ಮಾಡಿದ ಜನಾಂಗಗಳ ಜೊತೆ ಸಹವಾಸ ಮಾಡಿದ ಇಸ್ರಾಯೇಲ್ಯರಿಂದ ನಾವೇನು ಕಲಿಬಹುದು

1, 2. (ಎ) ಇಸ್ರಾಯೇಲ್‌ ದೇಶ ಹೇಗೆ ತೋಳಗಳ ಮಧ್ಯೆ ಇದ್ದ ಕುರಿ ತರ ಇತ್ತು? (ಆರಂಭದ ಚಿತ್ರ ನೋಡಿ.) (ಬಿ) ಇಸ್ರಾಯೇಲ್ಯರು ಮತ್ತು ಅವರ ರಾಜರು ಏನು ಮಾಡಿದ್ರು?

ನೂರಾರು ವರ್ಷಗಳಿಂದ ಇಸ್ರಾಯೇಲ್‌ ದೇಶ ತೋಳಗಳ ಮಧ್ಯ ಇದ್ದ ಕುರಿಯ ಹಾಗಿತ್ತು. ಅವರ ಶತ್ರುಗಳಾಗಿದ್ದ ಅಮ್ಮೋನಿಯರು, ಮೋವಾಬ್ಯರು ಮತ್ತು ಎದೋಮ್ಯರು ಇಸ್ರಾಯೇಲ್ಯರ ಪೂರ್ವ ದಿಕ್ಕಿನಲ್ಲಿ ಇದ್ದರು. ಪಶ್ಚಿಮದಲ್ಲಿ ಸುಮಾರು ವರ್ಷಗಳಿಂದ ಇಸ್ರಾಯೇಲ್ಯರ ಬದ್ಧ ಶತ್ರುಗಳಾಗಿದ್ದ ಫಿಲಿಷ್ಟಿಯರು ಇದ್ದರು. ಉತ್ತರ ಭಾಗಕ್ಕೆ ತೂರ್‌ ದೇಶ ಇತ್ತು. ಅದು ಶ್ರೀಮಂತ ದೇಶವಾಗಿತ್ತು, ಮತ್ತು ವ್ಯಾಪಾರವಹಿವಾಟಿಗೆ ಹೆಸರುವಾಸಿಯಾಗಿತ್ತು. ದಕ್ಷಿಣ ಭಾಗಕ್ಕೆ ಈಜಿಪ್ಟ್‌ ದೇಶವಿತ್ತು. ಅದನ್ನ ಫರೋಹ ಅಳುತ್ತಿದ್ದ. ಈಜಿಪ್ಟಿನವರು ಅವನನ್ನು ದೇವರು ಅಂತ ನೆನಸ್ತಿದ್ರು.

2 ಇಸ್ರಾಯೇಲ್ಯರು ಯೆಹೋವನ ಮೇಲೆ ಆತುಕೊಳ್ತಿದ್ದಾಗ ಆತನು ಅವ್ರನ್ನ ಶತ್ರುಗಳಿಂದ ಕಾಪಾಡಿ ಸಂರಕ್ಷಿಸ್ತಿದ್ದನು. ಆದ್ರೆ ಆಗಿಂದಾಗ ಇಸ್ರಾಯೇಲಿನ ರಾಜರು ಮತ್ತು ಜನರು ಅನ್ಯಜನಾಂಗಗಳ ಜೊತೆ ಸಹವಾಸ ಮಾಡಿ ಧರ್ಮಭ್ರಷ್ಟರಾದ್ರು. ಇದಕ್ಕೆ ಉದಾಹರಣೆ ಧರ್ಮಭ್ರಷ್ಟ ರಾಜನಾದ ಅಹಾಬ. ಅವನು ಯೆಹೂದದ ರಾಜನಾದ ಯೆಹೋಷಾಫಾಟನ ಕಾಲದಲ್ಲಿ ಇಸ್ರಾಯೇಲಿನ ಹತ್ತು ಕುಲದ ಮೇಲೆ ಆಳ್ವಿಕೆ ನಡೆಸ್ತಿದ್ದ. ಅವನು ಸೀದೋನಿನ ರಾಜನ ಮಗಳಾದ ಈಜೆಬೆಲಳನ್ನ ಮದುವೆಯಾಗಿದ್ದ. ತೂರ್‌ ಪಟ್ಟಣ ಕೂಡ ಸೀದೋನಿನ ರಾಜನ ನಿಯಂತ್ರಣದ ಕೆಳಗಿತ್ತು. ಈಜೆಬೆಲಳು ಇಸ್ರಾಯೇಲಿನಲ್ಲಿ ಬಾಳನ ಆರಾಧನೆಯನ್ನ ಶುರುಮಾಡಿದಳು. ಇಡೀ ಇಸ್ರಾಯೇಲಿನಲ್ಲಿ ಸುಳ್ಳು ಆರಾಧನೆ ಹಬ್ಬಿಸಲು ತನ್ನ ಗಂಡನಿಗೆ ಕುಮ್ಮಕ್ಕು ನೀಡಿದಳು.—1 ಅರ. 16:30-33; 18:4, 19.

3, 4. (ಎ) ಯೆಹೆಜ್ಕೇಲ ಯಾರ ಬಗ್ಗೆ ಪ್ರವಾದಿಸೋಕೆ ಶುರು ಮಾಡಿದನು? (ಬಿ) ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

 3 ಇಸ್ರಾಯೇಲ್ಯರು ತನ್ನ ಮಾತನ್ನ ಕೇಳದಿದ್ದರೆ ಏನಾಗುತ್ತೆ ಅಂತ ಯೆಹೋವ ದೇವರು ಪದೇ ಪದೇ ಎಚ್ಚರಿಕೆ ನೀಡ್ತಾ ಇದ್ದನು. ಆದ್ರೆ ಈಗ ಯೆಹೋವನ ತಾಳ್ಮೆಯ ಕಟ್ಟೆ ಒಡೆಯಿತು. (ಯೆರೆ. 21:7, 10; ಯೆಹೆ. 5:7-9) ಕ್ರಿ.ಪೂ. 609 ರಲ್ಲಿ ಬಾಬೆಲಿನ ಸೈನ್ಯ ಇಸ್ರಾಯೇಲಿನ ಮೇಲೆ ಮೂರನೇ ಬಾರಿ ದಾಳಿ ಮಾಡ್ತು. ಸುಮಾರು ಹತ್ತು ವರ್ಷಗಳ ಹಿಂದೆ ಅವ್ರು ಎರಡನೇ ಬಾರಿ ಆಕ್ರಮಣ ಮಾಡಿದ್ರು. ಈ ಸಲ ಅವ್ರು ಯೆರೂಸಲೇಮಿನ ಗೋಡೆಗಳನ್ನ ನೆಲಸಮ ಮಾಡಲಿದ್ದರು ಮತ್ತು ನೆಬೂಕದ್ನೆಚ್ಚರನ ವಿರುದ್ಧ ದಂಗೆಯೆದ್ದವರನ್ನ ನಾಶಮಾಡಲಿದ್ರು. ಅವರು ಮುತ್ತಿಗೆ ಹಾಕಿದಾಗ ಯೆಹೆಜ್ಕೇಲನು ಹೇಳಿದ ಭವಿಷ್ಯವಾಣಿ ಚಾಚೂತಪ್ಪದೆ ನೆರವೇರೋಕೆ ಶುರುವಾಯ್ತು. ಆಗ ಯೆಹೆಜ್ಕೇಲ ಇಸ್ರಾಯೇಲಿನ ಸುತ್ತಲಿರೋ ದೇಶಗಳಿಗೆ ಏನಾಗುತ್ತೆ ಅನ್ನೋದ್ರ ಬಗ್ಗೆ ಪ್ರವಾದಿಸೋಕೆ ಶುರು ಮಾಡಿದ.

ಯೆಹೋವ ದೇವರ ಹೆಸರನ್ನ ಹಾಳುಮಾಡಿದವ್ರಿಗೆ ತಕ್ಕ ಶಿಕ್ಷೆ ಸಿಗುತ್ತೆ

4 ಯೆರೂಸಲೇಮಿನ ನಾಶನವನ್ನ ನೋಡಿ ಅದರ ಸುತ್ತಲಿರೋರು ಖುಷಿಪಡ್ತಾರೆ. ಅವರು ನಾಶನದಿಂದ ಪಾರಾದವ್ರನ್ನ ಹಿಂಸಿಸ್ತಾರೆ ಅಂತ ಯೆಹೋವನು ಯೆಹೆಜ್ಕೇಲನ ಮೂಲಕ ತಿಳಿಸಿದ್ದನು. ಯೆಹೋವನ ಹೆಸರನ್ನ ಹಾಳು ಮಾಡಿದವ್ರನ್ನ ಮತ್ತು ಆತನ ಜನರನ್ನ ಹಿಂಸಿಸಿದವ್ರನ್ನ ಅಥವಾ ಧರ್ಮಭ್ರಷ್ಟರಾಗುವಂತೆ ಮಾಡಿದವ್ರನ್ನ ಯೆಹೋವನು ಸುಮ್ಮನೆ ಬಿಡಲಿಲ್ಲ. ಅನ್ಯಜನಾಂಗಗಳ ಸಹವಾಸ ಮಾಡಿದ ಇಸ್ರಾಯೇಲ್ಯರಿಂದ ನಾವೇನು ಕಲಿಯಬಹುದು? ಆ ಅನ್ಯಜನಾಂಗಗಳ ಬಗ್ಗೆ ಯೆಹೆಜ್ಕೇಲನು ಹೇಳಿದ ಭವಿಷ್ಯವಾಣಿಗಳಿಂದ ನಮಗೆ ಯಾವ ಆಶ್ವಾಸನೆ ಸಿಗುತ್ತೆ?

ಇಸ್ರಾಯೇಲ್ಯರನ್ನ ‘ಸಿಕ್ಕಾಪಟ್ಟೆ ಅಣಕಿಸಿದ’ ಸಂಬಂಧಿಕರು

5, 6. ಅಮ್ಮೋನಿಯರು ಮತ್ತು ಇಸ್ರಾಯೇಲ್ಯರು ಯಾವ ರೀತಿಲಿ ಸಂಬಂಧಿಕರಾಗಿದ್ರು?

5 ಅಮ್ಮೋನಿಯರು, ಮೋವಾಬ್ಯರು ಮತ್ತು ಎದೋಮ್ಯರು ಇಸ್ರಾಯೇಲ್ಯರ ರಕ್ತ ಸಂಬಂಧಿಕರಾಗಿದ್ರು. ಅವ್ರ ಪೂರ್ವಜರು ಒಂದೇ ಕುಟುಂಬದವ್ರಾಗಿದ್ರು. ಆದ್ರೂ ಅವ್ರು ತುಂಬ ವರ್ಷಗಳಿಂದ ಇಸ್ರಾಯೇಲ್ಯರ ವಿರುದ್ಧ ದ್ವೇಷ ಬೆಳೆಸ್ಕೊಂಡ್ರು ಮತ್ತು ಅವರನ್ನ ‘ಸಿಕ್ಕಾಪಟ್ಟೆ ಅಣಕಿಸಿದ್ರು.’—ಯೆಹೆ. 25:6.

6 ನಾವೀಗ ಅಮ್ಮೋನಿಯರ ಬಗ್ಗೆ ನೋಡೋಣ. ಅವ್ರು ಅಬ್ರಹಾಮನ ಸಹೋದರ ಮಗನಾದ ಲೋಟನ ವಂಶದವ್ರು. ಅವ್ರು ಲೋಟನಿಗೆ ತನ್ನ ಚಿಕ್ಕ ಮಗಳಲ್ಲಿ ಹುಟ್ಟಿದ ಮಗನಿಂದ ಬಂದ ವಂಶದವ್ರು. (ಆದಿ. 19:38) ಅವ್ರ ಭಾಷೆ ಇಬ್ರಿಯ ಭಾಷೆಯ ತರ ಇತ್ತು. ಹಾಗಾಗಿ ಬಹುಶಃ ಅವ್ರ ಭಾಷೆ ಇಸ್ರಾಯೇಲ್ಯರಿಗೆ ಅರ್ಥ ಆಗ್ತಿತ್ತು. ಅಮ್ಮೋನಿಯರು ಇಸ್ರಾಯೇಲ್ಯರ ರಕ್ತ ಸಂಬಂಧಿಕರಾಗಿದ್ರಿಂದ ಅವ್ರ ಜೊತೆ ಯುದ್ಧ ಮಾಡೋಕೆ ಹೋಗಬೇಡಿ ಅಂತ ಯೆಹೋವನು ಹೇಳಿದ್ದನು. (ಧರ್ಮೋ. 2:19) ಹೀಗಿದ್ರೂ ನ್ಯಾಯಾಧೀಶರ ಕಾಲದಲ್ಲಿ ಅಮ್ಮೋನಿಯರು, ಮೋವಾಬ್ಯರ ರಾಜ ಎಗ್ಲೋನನ ಜೊತೆ ಸೇರಿ ಇಸ್ರಾಯೇಲ್ಯರನ್ನ ಪೀಡಿಸಿದ್ರು. (ನ್ಯಾಯ. 3:12-15, 27-30) ನಂತ್ರ ಸೌಲ ರಾಜನಾದಾಗ ಅಮ್ಮೋನಿಯರು ಇಸ್ರಾಯೇಲ್ಯರ ಮೇಲೆ ದಾಳಿ ಮಾಡಿದ್ರು. (1 ಸಮು. 11:1-4) ರಾಜ ಯೆಹೋಷಾಫಾಟನ ದಿನಗಳಲ್ಲಿ ಅಮ್ಮೋನಿಯರು ಮೋವಾಬ್ಯರ ಜೊತೆ ಸೇರಿ ಇಸ್ರಾಯೇಲ್ಯರ ವಿರುದ್ಧ ಯುದ್ಧಕ್ಕೆ ಬಂದ್ರು.—2 ಪೂರ್ವ. 20:1, 2.

7. ಮೋವಾಬ್ಯರು ತಮ್ಮ ಸಂಬಂಧಿಕರಾದ ಇಸ್ರಾಯೇಲ್ಯರ ಜೊತೆ ಹೇಗೆ ನಡ್ಕೊಂಡ್ರು?

7 ಮೋವಾಬ್ಯರು ಸಹ ಲೋಟನ ವಂಶದವರೇ. ಅವ್ರು ಲೋಟನಿಗೆ ತನ್ನ ದೊಡ್ಡ ಮಗಳಲ್ಲಿ ಹುಟ್ಟಿದ ಮಗನಿಂದ ಬಂದ ವಂಶದವ್ರು. (ಆದಿ. 19:36, 37) ಇಸ್ರಾಯೇಲ್ಯರು ಅವರ ಜೊತೆ ಯುದ್ಧಕ್ಕೆ ಹೋಗಬಾರದೆಂದು ಯೆಹೋವ ದೇವರು ಹೇಳಿದ್ದನು. (ಧರ್ಮೋ. 2:9) ಆದರೆ ಮೋವಾಬ್ಯರು ಇಸ್ರಾಯೇಲ್ಯರ ಜೊತೆ ಒಳ್ಳೇ ರೀತಿಲಿ ನಡ್ಕೊಳ್ಳಲಿಲ್ಲ. ಈಜಿಪ್ಟಿನ ದಾಸತ್ವದಿಂದ ಹೊರಗೆ ಬಂದ ಇಸ್ರಾಯೇಲ್ಯರಿಗೆ ಅವರು ಸಹಾಯ ಮಾಡಲಿಲ್ಲ. ಅಷ್ಟೇ ಅಲ್ಲ, ದೇವರು ಮಾತು ಕೊಟ್ಟ ದೇಶಕ್ಕೆ ಹೋಗದಂತೆ ಇಸ್ರಾಯೇಲ್ಯರನ್ನ ತಡೆದರು. ಇಸ್ರಾಯೇಲ್ಯರನ್ನ ಶಪಿಸಲಿಕ್ಕಾಗಿ ಬಾಲಾಕನು ಬಿಳಾಮನಿಗೆ ಹಣಕೊಟ್ಟು  ಕಳಿಸಿದನು. ಆದ್ರೆ ಅವನ ಈ ಉಪಾಯ ನಡೆಯಲಿಲ್ಲ. ಆಗ ಇಸ್ರಾಯೇಲ್ಯರ ಪುರುಷರು ಅನೈತಿಕತೆ ಮತ್ತು ವಿಗ್ರಹಾರಾಧನೆ ಮಾಡುವಂತೆ ಕುತಂತ್ರದಿಂದ ಪುಸಲಾಯಿಸಲು ಬಿಳಾಮನು ಬಾಲಾಕನಿಗೆ ಹೇಳಿದನು. (ಅರ. 22:1-8; 25:1-9; ಪ್ರಕ. 2:14) ನೂರಾರು ವರ್ಷ ಅಂದ್ರೆ ಯೆಹೆಜ್ಕೇಲನ ದಿನಗಳವರೆಗೆ ಮೋವಾಬ್ಯರು ಇಸ್ರಾಯೇಲ್ಯರಿಗೆ ಕಾಟ ಕೊಡ್ತಾ ಇದ್ದರು.—2 ಅರ. 24:1, 2.

8. ಎದೋಮ್ಯರು ಇಸ್ರಾಯೇಲ್ಯರ ಸಹೋದರರು ಅಂತ ಯೆಹೋವನು ಯಾಕೆ ಹೇಳಿದನು? ಮತ್ತು ಅವ್ರು ಇಸ್ರಾಯೇಲ್ಯರ ಜೊತೆ ಹೇಗೆ ನಡ್ಕೊಂಡ್ರು?

8 ನಾವೀಗ ಎದೋಮ್ಯರ ಬಗ್ಗೆ ನೋಡೋಣ. ಅವರು ಯಾಕೋಬನ ಅವಳಿ ಸಹೋದರನಾದ ಏಸಾವನ ವಂಶದವರು. ಇಸ್ರಾಯೇಲ್ಯರು ಮತ್ತು ಎದೋಮ್ಯರು ಆಪ್ತ ಸಂಬಂಧಿಕರಾಗಿದ್ದರು. ಹಾಗಾಗಿ ಯೆಹೋವ ದೇವರು ಎದೋಮ್ಯರನ್ನು ಇಸ್ರಾಯೇಲ್ಯರ ಸಹೋದರರು ಅಂತ ಕರೆದನು. (ಧರ್ಮೋ. 2:1-5; 23:7, 8) ಇಸ್ರಾಯೇಲ್ಯರು ಈಜಿಪ್ಟಿನಿಂದ ಬಿಡುಗಡೆಯಾದಾಗಿಂದ ಯೆರೂಸಲೇಮಿನ ನಾಶನದ ವರೆಗೆ, ಅಂದ್ರೆ ಕ್ರಿ.ಪೂ. 607 ರ ವರೆಗೆ ಎದೋಮ್ಯರು ಅವರನ್ನು ವಿರೋಧಿಸುತ್ತಾ ಇದ್ದರು. (ಅರ. 20:14, 18; ಯೆಹೆ. 25:12) ಯೆರೂಸಲೇಮಿನ ನಾಶನದ ಸಮಯದಲ್ಲಿ ಎದೋಮ್ಯರು ಇಸ್ರಾಯೇಲ್ಯರ ಕಷ್ಟ ನೋಡಿ ಖುಷಿಪಟ್ಟಿದ್ದು ಮಾತ್ರವಲ್ಲ, ಬಾಬೆಲಿನವ್ರಿಂದ ತಪ್ಪಿಸಿಕೊಂಡು ಓಡಿ ಹೋದಂಥ ಕೆಲವು ಇಸ್ರಾಯೇಲ್ಯರನ್ನ ಹಿಡಿದು ಶತ್ರುಗಳ ಕೈಗೆ ಒಪ್ಪಿಸಿದರು.—ಕೀರ್ತ. 137:7; ಓಬ. 11, 14.

9, 10. (ಎ) ಅಮ್ಮೋನಿಯರಿಗೆ, ಮೋವಾಬ್ಯರಿಗೆ ಮತ್ತು ಎದೋಮ್ಯರಿಗೆ ಏನಾಯ್ತು? (ಬಿ) ಆದ್ರೆ ಆ ಜನಾಂಗಗಳಲ್ಲಿದ್ದ ಕೆಲವ್ರಿಗೆ ಇಸ್ರಾಯೇಲ್ಯರ ಮೇಲೆ ದ್ವೇಷ ಇರ್ಲಿಲ್ಲ ಅಂತ ಹೇಗೆ ಹೇಳಬಹುದು?

9 ಇಸ್ರಾಯೇಲ್ಯರಿಗೆ ಅವರ ಸಂಬಂಧಿಕರು ಕಷ್ಟ ಕೊಟ್ಟಿದ್ರು. ಅದಕ್ಕೆ ಆ ಸಂಬಂಧಿಕರಿಗೆ ಶಿಕ್ಷೆ ಕೊಡ್ತೀನಿ ಅಂತ ಯೆಹೋವ ದೇವರು ಹೇಳಿದನು. ಆತನು, “ನಾನು . . . ಅಮ್ಮೋನಿಯರನ್ನ, ಪೂರ್ವದಲ್ಲಿ ವಾಸಿಸ್ತಿರೋ ಜನ್ರ ಕೈಗೆ ಕೊಡ್ತೀನಿ. ಅದಾದ್ಮೇಲೆ ಅಮ್ಮೋನಿಯರನ್ನ ಯಾವ ಜನಾಂಗಗಳೂ ನೆನಪಿಸ್ಕೊಳ್ಳಲ್ಲ. ನಾನು ಮೋವಾಬಿಗೆ ಶಿಕ್ಷೆ ಕೊಡ್ತೀನಿ. ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ” ಅಂತ ಹೇಳಿದನು. (ಯೆಹೆ. 25:10, 11) ಯೆರೂಸಲೇಮ್‌ ನಾಶವಾಗಿ ಸುಮಾರು ಐದು ವರ್ಷಗಳಾದ ನಂತ್ರ ಈ ಭವಿಷ್ಯವಾಣಿಗಳು ನೆರವೇರೋಕೆ ಶುರುವಾದ್ವು. ಆಗ ಬಾಬೆಲಿನವ್ರು ಅಮ್ಮೋನ್‌ ಮತ್ತು ಮೋವಾಬ್‌ ದೇಶವನ್ನ ವಶಪಡಿಸಿಕೊಂಡ್ರು. ಯೆಹೋವನು ಎದೋಮಿನಲ್ಲಿರೋ “ಮನುಷ್ಯರನ್ನೂ ಪ್ರಾಣಿಗಳನ್ನೂ ನಾಶಮಾಡ್ತೀನಿ ಮತ್ತು ಅದು ಹಾಳುಬೀಳೋ ಹಾಗೆ ಮಾಡ್ತೀನಿ” ಅಂತ ಹೇಳಿದನು. (ಯೆಹೆ. 25:13) ಆತನು ಹೇಳಿದ ತರನೇ ಆ ಮೂರು ದೇಶಗಳು ಹೇಳಹೆಸರಿಲ್ಲದ ಹಾಗಾದ್ವು.—ಯೆರೆ. 9:25, 26; 48:42; 49:17, 18.

10 ಆದ್ರೆ ಆ ಜನಾಂಗಗಳಲ್ಲಿದ್ದ ಕೆಲವ್ರಿಗೆ ಇಸ್ರಾಯೇಲ್ಯರ ಮೇಲೆ ದ್ವೇಷ ಇರ್ಲಿಲ್ಲ. ಉದಾಹರಣೆಗೆ, ಅಮ್ಮೋನಿಯನಾದ ಚೆಲೆಕ್‌ ಮತ್ತು ಮೋವಾಬ್ಯನಾದ ಇತ್ಮ. ಇವರು ದಾವೀದನ ವೀರ ಸೈನಿಕರಾಗಿದ್ರು. (1 ಪೂರ್ವ. 11:26, 39, 46; 12:1) ಮೋವಾಬ್ಯಳಾದ ರೂತಳು ಯೆಹೋವನನ್ನ ನಿಷ್ಠೆಯಿಂದ ಆರಾಧಿಸಿದ್ದಳು.—ರೂತ್‌ 1:4, 16, 17.

ನಾವು ಬೇರೆಯವ್ರ ಮಾತಿಗೆ ಮರುಳಾದ್ರೆ “ದೊಡ್ಡ ಬೆಟ್ಟದ” ತುದಿಯಲ್ಲಿ ನಿಂತು ಒಂದು ಹೆಜ್ಜೆ ತಪ್ಪಾಗಿ ಇಟ್ಟಂತೆ ಇರುತ್ತೆ!

11. ಅಮ್ಮೋನ್‌, ಮೋವಾಬ್‌ ಮತ್ತು ಎದೋಮ್‌ ಜನಾಂಗಗಳ ಜೊತೆ ಸಹವಾಸಮಾಡಿದ ಇಸ್ರಾಯೇಲ್ಯರಿಂದ ನಾವು ಯಾವ ಪಾಠ ಕಲಿಬಹುದು?

11 ಬೇರೆ ಜನಾಂಗಗಳ ಜೊತೆ ಸಹವಾಸಮಾಡಿದ ಇಸ್ರಾಯೇಲ್ಯರಿಂದ ನಾವು ಯಾವ ಪಾಠಗಳನ್ನ ಕಲಿಬಹುದು? ಇಸ್ರಾಯೇಲ್ಯರು ಬೇರೆ ಜನಾಂಗಗಳಿಂದ ದೂರ ಇರಬೇಕು ಅಂತ ಯೆಹೋವ ದೇವರು ಹೇಳಿದ ಮಾತನ್ನ ತಾತ್ಸಾರ ಮಾಡಿದಾಗ ಸುಳ್ಳು ಆರಾಧನೆ ನುಸುಳಿತು. ಉದಾಹರಣೆಗೆ, ಇಸ್ರಾಯೇಲ್ಯರು ಪೆಗೋರದ ಬಾಳನನ್ನ ಮತ್ತು ಅಮ್ಮೋನಿಯರ ದೇವರಾದ ಮೋಲೆಕನನ್ನ ಆರಾಧಿಸಿದ್ರು. (ಅರ. 25:1-3; 1 ಅರ. 11:7) ಇವತ್ತು ನಮಗೂ ಅದೇ ತರ ಆಗಬಹುದು. ಯೆಹೋವನ ಆರಾಧಕರಲ್ಲದ ನಮ್ಮ ಸಂಬಂಧಿಕರು ಆತನಿಗೆ ಇಷ್ಟವಿಲ್ಲದ ಕೆಲಸವನ್ನ ಮಾಡೋಕೆ ನಮಗೆ ಒತ್ತಡ ಹಾಕಬಹುದು. ನಾವು ಯಾಕೆ ಈಸ್ಟರ್‌ ಮಾಡಲ್ಲ, ಕ್ರಿಸ್‌ಮಸ್‌ ಸಂದರ್ಭದಲ್ಲಿ ಬೇರೆಯವ್ರಿಗೆ ಉಡುಗೊರೆಗಳನ್ನ ಯಾಕೆ ಕೊಡಲ್ಲ ಮತ್ತು ತೆಗೆದುಕೊಳ್ಳಲ್ಲ ಅಥವಾ ಯಾವುದೇ ಧಾರ್ಮಿಕ  ಆಚರಣೆಯಲ್ಲಿ ಯಾಕೆ ಭಾಗವಹಿಸಲ್ಲ ಅಂತ ಅವ್ರಿಗೆ ಅರ್ಥ ಆಗಲ್ಲ. ಅವ್ರು ನಮಗೆ ಒಳ್ಳೇ ಉದ್ದೇಶದಿಂದನೇ ಇದನ್ನೆಲ್ಲಾ ಮಾಡೋಕೆ ಒತ್ತಾಯ ಮಾಡಬಹುದು. ಆದ್ರೆ ನಾವು ಅವ್ರ ಒತ್ತಡಕ್ಕೆ ಯಾವತ್ತೂ ಬಗ್ಗಬಾರದು! ನಾವು ಅವ್ರ ಮಾತಿಗೆ ಒಂದೇ ಒಂದು ಸಲ ಮರುಳಾದ್ರೂ “ದೊಡ್ಡ ಬೆಟ್ಟದ” ತುದಿಯಲ್ಲಿ ನಿಂತು ಒಂದು ಹೆಜ್ಜೆ ತಪ್ಪಾಗಿ ಇಟ್ಟಂತೆ ಇರುತ್ತೆ! ಅದೆಷ್ಟು ಅಪಾಯಕಾರಿ ಅಲ್ವಾ!

12, 13. ನಮಗೆ ಯಾರಿಂದ ವಿರೋಧ ಬರಬಹುದು? ನಾವು ನಂಬಿಗಸ್ತರಾಗಿ ಇರೋದಾದ್ರೆ ಏನಾಗಬಹುದು?

12 ಅಮ್ಮೋನಿಯರು, ಮೋವಾಬ್ಯರು ಮತ್ತು ಎದೋಮ್ಯರು ಇಸ್ರಾಯೇಲ್ಯರ ಜೊತೆ ನಡ್ಕೊಂಡ ರೀತಿಯಿಂದ ನಾವು ಇನ್ನೊಂದು ಪಾಠ ಕಲಿಬಹುದು. ಸತ್ಯದಲ್ಲಿಲ್ಲದ ನಮ್ಮ ಕುಟುಂಬ ಸದಸ್ಯರಿಂದ ನಮಗೆ ಹಿಂಸೆ, ವಿರೋಧ ಬರಬಹುದು. ನಾವು ಸಾರೋ ಸಂದೇಶದಿಂದ “ಅಪ್ಪನಿಗೂ ಮಗನಿಗೂ, ಅಮ್ಮನಿಗೂ ಮಗಳಿಗೂ . . . ವಿರೋಧ” ಬರುತ್ತೆ ಅಂತ ಯೇಸು ಕ್ರಿಸ್ತ ಹೇಳಿದನು. (ಮತ್ತಾ. 10:35, 36) ಯೆಹೋವ ದೇವರು ಇಸ್ರಾಯೇಲ್ಯರಿಗೆ ಸಂಬಂಧಿಕರ ಜೊತೆ ಜಗಳ ಆಡಬೇಡಿ ಅಂತ ಹೇಳಿದ್ದನು. ಅದೇ ತರ ನಾವೂ ಸಹ ಸತ್ಯದಲ್ಲಿಲ್ಲದ ನಮ್ಮ ಸಂಬಂಧಿಕರ ಜೊತೆ ಜಗಳ ಆಡೋಕೆ ಹೋಗಲ್ಲ. ಆದ್ರೆ ಅವ್ರು ನಮಗೆ ಸಮಸ್ಯೆ, ವಿರೋಧಗಳನ್ನ ತರ್ತಾರೆ ಅಂತ ನಮಗೆ ಚೆನ್ನಾಗಿ ಗೊತ್ತು.—2 ತಿಮೊ. 3:12.

13 ಕೆಲವೊಮ್ಮೆ ನಮ್ಮ ಸಂಬಂಧಿಕರು ನಮ್ಮ ಆರಾಧನೆಗೆ ನೇರವಾಗಿ ತೊಂದ್ರೆಯನ್ನ ಕೊಡದೆ ಇರಬಹುದು. ಆದ್ರೂ ನಮಗೆ ಯೆಹೋವನಿಗಿಂತ ನಮ್ಮ ಸಂಬಂಧಿಕರೇ ಹೆಚ್ಚಾಗಬಾರದು, ಯಾಕೆ? ಯಾಕಂದ್ರೆ ಯೆಹೋವ ದೇವರು ನಮ್ಮ ಜೀವನದಲ್ಲಿ ಮೊದಲ ಸ್ಥಾನ ಪಡೆಯೋಕೆ ಅರ್ಹನಾಗಿದ್ದಾನೆ. (ಮತ್ತಾಯ 10:37 ಓದಿ.) ನಾವು ಆತನಿಗೆ ನಂಬಿಗಸ್ತರಾಗಿದ್ರೆ ನಮ್ಮ ಸಂಬಂಧಿಕರಲ್ಲಿ ಕೆಲವ್ರು ಚೆಲೆಕ್‌, ಇತ್ಮ ಮತ್ತು ರೂತ್‌ ತರ ನಮ್ಮ ಜೊತೆ ಸೇರಿ ಯೆಹೋವ ದೇವರ ಆರಾಧನೆಯನ್ನ ಮಾಡಬಹುದು. (1 ತಿಮೊ. 4:16) ಹೀಗೆ ಅವ್ರು ಕೂಡ ಯೆಹೋವ ದೇವರ ಆರಾಧನೆ ಮಾಡಿ ಖುಷಿಯಿಂದ ಇರೋಕಾಗುತ್ತೆ. ಅವ್ರಿಗೂ ಯೆಹೋವನ ಪ್ರೀತಿ, ಸಂರಕ್ಷಣೆ ಸಿಗುತ್ತೆ.

ಯೆಹೋವನ ಶತ್ರುಗಳಿಗೆ “ಕಠಿಣ ಶಿಕ್ಷೆ” ಸಿಕ್ತು

14, 15. ಫಿಲಿಷ್ಟಿಯರು ಇಸ್ರಾಯೇಲ್ಯರ ಜೊತೆ ಹೇಗೆ ನಡ್ಕೊಂಡ್ರು?

14 ಫಿಲಿಷ್ಟಿಯರು ಕ್ರೇತ ದ್ವೀಪದಿಂದ ಕಾನಾನ್‌ ದೇಶಕ್ಕೆ ಬಂದು ವಾಸ ಮಾಡಿದ್ರು. ಸಮಯಾನಂತರ ಯೆಹೋವ ದೇವರು ಅಬ್ರಹಾಮನಿಗೆ ಮತ್ತು ಅವನ ಸಂತತಿಯವ್ರಿಗೆ ಕಾನಾನ್‌ ದೇಶವನ್ನ ಕೊಡ್ತೀನಿ ಅಂತ ಮಾತುಕೊಟ್ಟಿದ್ದನು. ಅಬ್ರಹಾಮ ಮತ್ತು ಇಸಾಕ ಫಿಲಿಷ್ಟಿಯರ ಜೊತೆ ಕೆಲವು ವ್ಯವಹಾರಗಳನ್ನ ನಡೆಸ್ತಿದ್ರು. (ಆದಿ. 21:29-32; 26:1) ಇಸ್ರಾಯೇಲ್ಯರು ಕಾನಾನ್‌ ದೇಶಕ್ಕೆ ಬರೋಷ್ಟರೊಳಗೆ ಫಿಲಿಷ್ಟಿಯರು ಆ ದೇಶದಲ್ಲಿ ತುಂಬಿಕೊಂಡು ಬಲಿಷ್ಠ ಜನಾಂಗವಾದ್ರು ಮತ್ತು ದೊಡ್ಡ ಸೈನ್ಯವನ್ನ ಕಟ್ಟಿಕೊಂಡ್ರು. ಅವ್ರು ಸುಳ್ಳು ದೇವರುಗಳಾದ ಬಾಳ್ಜೆಬೂಬ ಮತ್ತು ದಾಗೋನನನ್ನ ಆರಾಧಿಸ್ತಿದ್ರು. (1 ಸಮು. 5:1-4; 2 ಅರ. 1:2, 3) ಕ್ರಮೇಣ, ಇಸ್ರಾಯೇಲ್ಯರು ಅವ್ರ ಜೊತೆ ಸೇರಿ ಸುಳ್ಳು ದೇವರುಗಳನ್ನ ಆರಾಧಿಸೋಕೆ ಶುರುಮಾಡಿದ್ರು.—ನ್ಯಾಯ. 10:6.

15 ಇಸ್ರಾಯೇಲ್ಯರು ಯೆಹೋವ ದೇವರ ಮಾತನ್ನ ಕೇಳದೆ ಹೋದಾಗ ಫಿಲಿಷ್ಟಿಯರು ಅವ್ರ ಮೇಲೆ ಅಧಿಕಾರ ನಡೆಸುವಂತೆ ಯೆಹೋವನು ಬಿಟ್ಟುಕೊಟ್ಟನು. (ನ್ಯಾಯ. 10:7, 8; ಯೆಹೆ. 25:15) ಅವ್ರು ಇಸ್ರಾಯೇಲ್ಯರ ಮೇಲೆ ನಿಬಂಧನೆಗಳನ್ನ ಹೇರಿದ್ರು * ಮತ್ತು ಕೆಲವ್ರನ್ನ ಕೊಂದು ಹಾಕಿದ್ರು. (1 ಸಮು. 4:10) ಆದ್ರೆ ಯಾವಾಗ ಇಸ್ರಾಯೇಲ್ಯರು ತಾವು ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟು ಯೆಹೋವನ ಕಡೆಗೆ ತಿರುಗಿಕೊಂಡರೋ ಆಗ ಯೆಹೋವ ಅವ್ರನ್ನ ಕಾಪಾಡಿದನು. ಸಂಸೋನ, ಸೌಲ ಮತ್ತು ದಾವೀದರಂಥ ಪುರುಷರನ್ನ ಬಳಸಿ ತನ್ನ ಜನರನ್ನ ಫಿಲಿಷ್ಟಿಯರ ಕೈಯಿಂದ ಬಿಡಿಸಿದನು. (ನ್ಯಾಯ. 13:5, 24;  1 ಸಮು. 9:15-17; 18:6, 7) ಆದ್ರೆ ಆಮೇಲೆ ಬಾಬೆಲ್‌ ದೇಶದವ್ರು ಮತ್ತು ಗ್ರೀಕರು ಫಿಲಿಷ್ಟಿಯರ ಮೇಲೆ ಆಕ್ರಮಣ ಮಾಡಿದ್ರು. ಹೀಗೆ ಯೆಹೆಜ್ಕೇಲನು ಮುಂತಿಳಿಸಿದ ಭವಿಷ್ಯವಾಣಿಯಂತೆ ಫಿಲಿಷ್ಟಿಯರು “ಕಠಿಣ ಶಿಕ್ಷೆ” ಪಡ್ಕೊಂಡ್ರು.—ಯೆಹೆ. 25:15-17.

16, 17. ಫಿಲಿಷ್ಟಿಯರ ಮತ್ತು ಇಸ್ರಾಯೇಲ್ಯರ ಬಗ್ಗೆ ಕೊಟ್ಟ ವಿವರಣೆಯಿಂದ ನಾವು ಯಾವ ಪಾಠಗಳನ್ನ ಕಲಿಬಹುದು?

16 ಫಿಲಿಷ್ಟಿಯರ ಮತ್ತು ಇಸ್ರಾಯೇಲ್ಯರ ಬಗ್ಗೆ ಕೊಟ್ಟ ಈ ವಿವರಣೆಯಿಂದ ನಾವು ಯಾವ ಪಾಠಗಳನ್ನ ಕಲಿಬಹುದು? ಈಗಿನ ಕಾಲದ ಶಕ್ತಿಶಾಲಿ ರಾಷ್ಟ್ರಗಳು ಅಥವಾ ದೇಶಗಳು ಯೆಹೋವನ ಜನರ ಮೇಲೆ ಆಕ್ರಮಣ ಮಾಡಿವೆ. ಆದ್ರೆ ನಾವು ಇಸ್ರಾಯೇಲ್ಯರ ತರ ಅಲ್ಲ, ನಾವು ಯೆಹೋವ ದೇವರಿಗೆ ತುಂಬ ವರ್ಷಗಳಿಂದ ನಂಬಿಗಸ್ತರಾಗಿದ್ದೇವೆ. ಆದ್ರೂ ಶುದ್ಧ ಆರಾಧನೆಯ ಶತ್ರುಗಳು ಕೆಲವೊಮ್ಮೆ ನಮ್ಮ ಮೇಲೆ ಜಯ ಪಡೀತಿದ್ದಾರೆ ಅಂತ ನಮಗೆ ಅನಿಸಬಹುದು. ಉದಾಹರಣೆಗೆ, 20 ನೇ ಶತಮಾನದ ಆರಂಭದಷ್ಟಕ್ಕೆ ಅಮೆರಿಕದ ಸರಕಾರ ಯೆಹೋವನ ಸಂಘಟನೆಯಲ್ಲಿ ಮೇಲ್ವಿಚಾರಣೆ ನಡೆಸ್ತಿದ್ದ ಸಹೋದರರಿಗೆ ತುಂಬ ವರ್ಷ ಜೈಲು ಶಿಕ್ಷೆ ವಿಧಿಸಿತು. ಅವ್ರ ಕೆಲಸವನ್ನ ನಿಲ್ಲಿಸೋದು ಆ ಸರಕಾರದ ಉದ್ದೇಶವಾಗಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯ ನಾಜಿ ಸರ್ಕಾರ ಯೆಹೋವ ದೇವರ ಜನರನ್ನ ಅಳಿಸಿ ಹಾಕೋಕೆ ಪ್ರಯತ್ನಿಸಿತು. ಸಾವಿರಾರು ಸಹೋದರರನ್ನ ಜೈಲಿಗೆ ಹಾಕಿದ್ರು ಮತ್ತು ನೂರಾರು ಸಹೋದರರನ್ನ ಕೊಂದು ಹಾಕಿದ್ರು. ಯುದ್ಧದ ನಂತ್ರ ಅನೇಕ ವರ್ಷಗಳ ವರೆಗೆ ಸೋವಿಯತ್‌ ಒಕ್ಕೂಟ ಯೆಹೋವನ ಸಾಕ್ಷಿಗಳ ವಿರುದ್ಧ ಒಂದು ಅಭಿಯಾನವನ್ನ ನಡೆಸ್ತು. ಇದ್ರ ಪರಿಣಾಮವಾಗಿ ಅನೇಕ ಸಹೋದರರನ್ನ ಸೆರೆ ಶಿಬಿರಕ್ಕೆ ಹಾಕಲಾಯ್ತು ಮತ್ತು ಇನ್ನೂ ಕೆಲವ್ರನ್ನ ಸೈಬೀರಿಯಕ್ಕೆ ಗಡಿಪಾರು ಮಾಡಲಾಯ್ತು.

17 ಸರ್ಕಾರಗಳು ಸಿಹಿಸುದ್ದಿ ಸಾರೋದನ್ನ ನಿಷೇಧಿಸಬಹುದು. ನಮ್ಮನ್ನ ಜೈಲಿಗೆ ಹಾಕಬಹುದು, ಕೆಲವ್ರನ್ನ ಕೊಂದು ಹಾಕಬಹುದು. ಆದ್ರೆ ನಾವು ಇದಕ್ಕೆ ಹೆದರಬೇಕಾ? ನಮ್ಮ ನಂಬಿಕೆಯನ್ನ ಕಳ್ಕೊಬೇಕಾ? ಖಂಡಿತ ಇಲ್ಲ. ಯಾಕಂದ್ರೆ ಯೆಹೋವ ದೇವರು ತನ್ನ ನಂಬಿಗಸ್ತ ಸೇವಕರನ್ನ ಕಾಪಾಡೇ ಕಾಪಾಡ್ತಾನೆ. (ಮತ್ತಾಯ 10:28-31 ಓದಿ.) ನಾವೀಗಾಗ್ಲೇ ನೋಡಿದಂತೆ ಅನೇಕ ಶಕ್ತಿಶಾಲಿ ಸರ್ಕಾರಗಳು ಹೇಳಹೆಸರಿಲ್ಲದಂತೆ ಆಗಿವೆ. ಆದ್ರೆ ಯೆಹೋವನ ಜನರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಾ ಇದೆ. ಆದಷ್ಟು ಬೇಗನೇ ಮಾನವ ಸರ್ಕಾರಗಳಿಗೆ ಫಿಲಿಷ್ಟಿಯರ ತರನೇ ಆಗ್ಲಿಕ್ಕಿದೆ. ಅವ್ರೆಲ್ಲರಿಗೂ ಯೆಹೋವನೇ ದೇವರು ಅಂತ ಗೊತ್ತಾಗ್ಲಿಕ್ಕಿದೆ. ಫಿಲಿಷ್ಟಿಯರ ತರನೇ ಅವ್ರೂ ಕೂಡ ಹೇಳಹೆಸರಿಲ್ಲದಂತೆ ಆಗ್ತಾರೆ!

 “ಸಂಪತ್ತು” ಸಂರಕ್ಷಣೆ ಕೊಡ್ಲಿಲ್ಲ

18. ತೂರ್‌ ಯಾವ ರೀತಿಯ ಸಾಮ್ರಾಜ್ಯವಾಗಿತ್ತು?

18 ಹಿಂದಿನ ಕಾಲದ ತೂರ್‌ * ಪಟ್ಟಣವು ವ್ಯಾಪಾರ ವಹಿವಾಟುಗಳ ಸಾಮ್ರಾಜ್ಯವಾಗಿತ್ತು. ಈ ಪಟ್ಟಣ ಪಶ್ಚಿಮದಲ್ಲಿ ಮೆಡಿಟರೇನಿಯನ್‌ ಸಮುದ್ರದಿಂದಾಚೆ ಇರೋ ದೇಶಗಳ ಜೊತೆ ಹಡಗಿನ ಮೂಲಕ ವ್ಯಾಪಾರ ನಡೆಸ್ತಿತ್ತು. ಪೂರ್ವದಲ್ಲಿ ನೆಲಮಾರ್ಗದ ಮೂಲಕ ದೂರ ದೂರದ ಸಾಮ್ರಾಜ್ಯಗಳ ಜೊತೆ ವ್ಯವಹಾರಗಳನ್ನ ಮಾಡ್ತಿತ್ತು. ನೂರಾರು ವರ್ಷಗಳಿಂದ ಈ ದೇಶಗಳವ್ರಿಂದ ರಾಶಿ ರಾಶಿ ಸಂಪತ್ತನ್ನ ಕೂಡಿಸಿಟ್ಟುಕೊಂಡಿತ್ತು. ಅದ್ರ ವ್ಯಾಪಾರಿಗಳು ಎಷ್ಟು ಶ್ರೀಮಂತರಾದರಂದ್ರೆ ಅವ್ರು ತಮ್ಮನ್ನೇ ರಾಜಕುಮಾರರು ಅಂತ ನೆನಸ್ತಿದ್ರು.—ಯೆಶಾ. 23:8.

19, 20. ತೂರಿನ ಜನ್ರಿಗೂ ಗಿಬ್ಯೋನ್ಯರಿಗೂ ಯಾವ ವ್ಯತ್ಯಾಸ ಇತ್ತು?

19 ರಾಜ ದಾವೀದ ಮತ್ತು ಸೊಲೊಮೋನನ ಕಾಲದಲ್ಲಿ ಇಸ್ರಾಯೇಲ್ಯರು ತೂರ್‌ ದೇಶದವ್ರ ಜೊತೆ ಒಳ್ಳೇ ಸಂಬಂಧವನ್ನು ಇಟ್ಟುಕೊಂಡಿದ್ದರು. ಅವರು ದಾವೀದನ ಅರಮನೆಯನ್ನು ಕಟ್ಟೋಕೆ ಮತ್ತು ಸೊಲೊಮೋನನ ಆಲಯವನ್ನು ಕಟ್ಟೋಕೆ ತೂರಿನವ್ರಿಂದ ಕೆತ್ತನೆ ಕೆಲಸಗಾರರನ್ನ ಮತ್ತು ಬೇಕಾದ ಸಾಮಗ್ರಿಗಳನ್ನ ತರಿಸಿಕೊಂಡ್ರು. (2 ಪೂರ್ವ. 2:1, 3, 7-16) ಈ ಸಮಯದಲ್ಲಿ ಇಸ್ರಾಯೇಲ್ಯರು ಯೆಹೋವ ದೇವರಿಗೆ ನಂಬಿಗಸ್ತರಾಗಿದ್ದರು ಮತ್ತು ಯೆಹೋವನು ಅವರನ್ನು ಆಶೀರ್ವದಿಸುತ್ತಾ ಇದ್ದನು. ಇದನ್ನ ತೂರ್‌ ದೇಶದವರು ಕಣ್ಣಾರೆ ನೋಡಿದರು. (1 ಅರ. 3:10-12; 10:4-9) ಅವ್ರಿಗೆ ಯೆಹೋವ ದೇವರ ಬಗ್ಗೆ, ಶುದ್ಧ ಆರಾಧನೆಯ ಬಗ್ಗೆ ಮತ್ತು ಯೆಹೋವನನ್ನ ಆರಾಧಿಸೋದ್ರಿಂದ ಎಷ್ಟು ಪ್ರಯೋಜನ ಸಿಗುತ್ತೆ ಅನ್ನೋದ್ರ ಬಗ್ಗೆ ನೋಡಿ ಕಲಿಯೋ ಅವಕಾಶ ಸಿಕ್ಕಿತ್ತು!

20 ತೂರ್‌ ದೇಶದವ್ರಿಗೆ ಇಷ್ಟೊಂದು ಒಳ್ಳೇ ಅವಕಾಶ ಸಿಕ್ಕಿದ್ರೂ ಅವ್ರು ಅದನ್ನ ಚೆನ್ನಾಗಿ ಉಪಯೋಗಿಸಿಕೊಳ್ಳಲಿಲ್ಲ. ಬದ್ಲಿಗೆ ಆಸ್ತಿ ಅಂತಸ್ತು ಮಾಡೋದ್ರ ಹಿಂದೆನೇ ಹೋದ್ರು. ಅವ್ರು ಕಾನಾನ್‌ ದೇಶದಲ್ಲಿದ್ದ ಗಿಬ್ಯೋನ್ಯರ ಮಾದರಿಯನ್ನ ಅನುಕರಿಸಲಿಲ್ಲ. ಗಿಬ್ಯೋನ್ಯರು ಯೆಹೋವ ದೇವರ ಅದ್ಭುತ ಕಾರ್ಯಗಳ ಬಗ್ಗೆ ಬರೀ ಕೇಳಿಸಿಕೊಂಡಿದ್ದಕ್ಕೇ ಆತನ ಸೇವಕರಾಗೋಕೆ ಬಯಸಿದ್ರು. (ಯೆಹೋ. 9:2, 3, 22–10:2) ಆಮೇಲೆ ತೂರ್‌ ದೇಶದವ್ರು ಯೆಹೋವನ ಜನರನ್ನ ವಿರೋಧಿಸೋಕೆ ಶುರುಮಾಡಿದ್ರು. ಅಷ್ಟೇ ಅಲ್ಲ, ಅವ್ರಲ್ಲಿ ಕೆಲವ್ರನ್ನ ಗುಲಾಮರಾಗಿ ಮಾರಿಬಿಟ್ರು.—ಕೀರ್ತ. 83:2, 7; ಯೋವೇ. 3:4, 6; ಆಮೋ. 1:9.

ನಾವು ಯಾವತ್ತೂ ಸಂಪತ್ತು ಸಂರಕ್ಷಣೆ ಕೊಡುತ್ತೆ ಅಂತ ಅಂದ್ಕೊಳ್ಳಬಾರದು

21, 22. ತೂರ್‌ ಪಟ್ಟಣಕ್ಕೆ ಏನಾಯ್ತು? ಮತ್ತು ಯಾಕೆ?

21 ಯೆಹೆಜ್ಕೇಲನ ಮೂಲಕ ಯೆಹೋವ ಆ ವಿರೋಧಿಗಳಿಗೆ ಹೀಗಂದನು: “ತೂರ್‌ ಅನ್ನೋಳೇ, ನಾನು ನಿನಗೆ ವಿರುದ್ಧವಾಗಿ ಇದ್ದೀನಿ. ಸಮುದ್ರ ಅಲೆಗಳನ್ನ ಎಬ್ಬಿಸೋ ಹಾಗೆ  ನಿನ್ನ ಮೇಲೆ ದಾಳಿ ಮಾಡೋಕೆ ನಾನು ತುಂಬ ಜನಾಂಗಗಳನ್ನ ಎಬ್ಬಿಸ್ತೀನಿ. ಅವರು ನಿನ್ನ ಗೋಡೆಗಳನ್ನ ನೆಲಸಮ ಮಾಡ್ತಾರೆ, ನಿನ್ನ ಗೋಪುರಗಳನ್ನ ನಾಶ ಮಾಡ್ತಾರೆ. ನಾನು ನಿನ್ನಲ್ಲಿರೋ ಮಣ್ಣನ್ನ ಕೆರೆದು ನಿನ್ನನ್ನ ಹೊಳೆಯೋ ಬೋಳು ಬಂಡೆಯಾಗಿ ಮಾಡ್ತೀನಿ.” (ಯೆಹೆ. 26:1-5) ತೂರ್‌ ದ್ವೀಪದವ್ರು ಸಂರಕ್ಷಣೆಗಾಗಿ 46 ಮೀಟರ್‌ ಎತ್ತರವಿರೋ ಗೋಡೆ ಮೇಲೆ ಮತ್ತು ತಮ್ಮಲ್ಲಿರೋ ಅಪಾರ ಸಂಪತ್ತಿನ ಮೇಲೆ ಭರವಸೆಯಿಟ್ಟಿದ್ರು. “ಶ್ರೀಮಂತನ ಆಸ್ತಿನೇ ಅವನಿಗೆ ಭದ್ರಕೋಟೆ, ಅದು ಅವನಿಗೆ ರಕ್ಷಣೆ ಕೊಡೋ ಗೋಡೆ ಅಂದ್ಕೊಳ್ತಾನೆ” ಅನ್ನೋ ಸೊಲೊಮೋನನ ಎಚ್ಚರಿಕೆ ಮಾತನ್ನ ಅವ್ರು ಮರೆಯಬಾರದಿತ್ತು.—ಜ್ಞಾನೋ. 18:11.

22 ತೂರ್‌ ದೇಶದ ಮೇಲೆ ಬಾಬೆಲಿನವರು ಮತ್ತು ಗ್ರೀಕ್‌ ದೇಶದವರು ಆಕ್ರಮಣಮಾಡಿದಾಗ ತಮಗಿರೋ ಅತಿ ಎತ್ತರವಾದ ಗೋಡೆ, ಅಪಾರವಾದ ಸಂಪತ್ತು ತಮ್ಮನ್ನ ಸಂರಕ್ಷಿಸಲ್ಲ ಅಂತ ಅವರಿಗೆ ಅರ್ಥವಾಯ್ತು. ಯೆರೂಸಲೇಮನ್ನ ನಾಶಮಾಡಿದ ನಂತರ ಬಾಬೆಲಿನವರು ತೂರ್‌ ದೇಶದವರೊಂದಿಗೆ ಯುದ್ಧಮಾಡಿದರು. 13 ವರ್ಷ ಹೋರಾಡಿದ ನಂತರ ತೂರ್‌ ದೇಶವನ್ನ ನಾಶಮಾಡಿದ್ರು. (ಯೆಹೆ. 29:17, 18) ಕ್ರಿ.ಪೂ. 332 ರಲ್ಲಿ ಮಹಾ ಅಲೆಕ್ಸಾಂಡರನು ಯೆಹೆಜ್ಕೇಲನ ಭವಿಷ್ಯವಾಣಿಯ ಮುಖ್ಯ ಅಂಶಗಳನ್ನ ನೆರವೇರಿಸಿದನು. * ಅವನ ಸೈನ್ಯ ಹಾಳು ಬಿದ್ದ ತೂರ್‌ ಪಟ್ಟಣದ ಕಲ್ಲುಗಳನ್ನ, ಮರದ ವಸ್ತುಗಳನ್ನ, ಮಣ್ಣನ್ನ ಸಮುದ್ರದಲ್ಲಿ ಹಾಕಿ ತೂರಿನ ದ್ವೀಪಕ್ಕೆ ಹೋಗೋಕೆ ದಾರಿ ಮಾಡ್ತು. (ಯೆಹೆ. 26:4, 12) ಅಲೆಕ್ಸಾಂಡರನು ಗೋಡೆಗಳನ್ನ ಒಡೆದು ಹಾಕಿ, ಪಟ್ಟಣವನ್ನ ಹಾಳುಮಾಡಿ ಸಾವಿರಾರು ಸೈನಿಕರನ್ನ ಮತ್ತು ಪ್ರಜೆಗಳನ್ನ ಕೊಂದು ಹಾಕಿದನು. ಹತ್ತಾರು ಸಾವಿರ ಜನರನ್ನ ಗುಲಾಮರಾಗಿ ಮಾರಿದನು. ಆಗ ತೂರ್‌ ಪಟ್ಟಣದವ್ರಿಗೆ ಯೆಹೋವನ ಶಕ್ತಿ ಏನಂತ ಗೊತ್ತಾಯ್ತು ಮತ್ತು ಅವ್ರಿಗೆ “ಸಂಪತ್ತು” ಸಂರಕ್ಷಣೆ ಕೊಡಲ್ಲ ಅಂತ ಅರ್ಥವಾಯ್ತು.—ಯೆಹೆ. 27:33, 34.

ತೂರ್‌ ಪಟ್ಟಣ ಎಷ್ಟೇ ಸುರಕ್ಷಿತವಾಗಿ ಕಾಣಿಸಿದ್ರೂ ಯೆಹೆಜ್ಕೇಲನ ಭವಿಷ್ಯವಾಣಿಯಲ್ಲಿ ತಿಳಿಸಲಾದಂತೆ ಅದು ನಾಶವಾಯ್ತು (ಪ್ಯಾರ 22 ನೋಡಿ)

23. ತೂರ್‌ ಪಟ್ಟಣದವ್ರಿಂದ ನಾವು ಯಾವ ಪಾಠ ಕಲಿಬಹುದು?

23 ತೂರ್‌ ಪಟ್ಟಣದವ್ರಿಂದ ನಾವು ಯಾವ ಪಾಠ ಕಲಿಬಹುದು? ‘ಹಣ’ ಮತ್ತು ಆಸ್ತಿ ಅಂತಸ್ತು ನಮ್ಮನ್ನ ಸಂರಕ್ಷಿಸುತ್ತೆ ಅನ್ನೋ ಭರವಸೆ ನಮ್ಮಲ್ಲಿ ಯಾವತ್ತೂ ಇರಬಾರದು. (ಮತ್ತಾ. 13:22) ನಾವು ‘ದೇವರಿಗೂ ದುಡ್ಡಿಗೂ ದಾಸರಾಗಿರೋಕೆ’ ಆಗಲ್ಲ. (ಮತ್ತಾಯ 6:24 ಓದಿ.) ಯೆಹೋವ ದೇವರನ್ನ ಪೂರ್ಣ ಮನಸ್ಸಿಂದ ಆರಾಧಿಸೋವ್ರು ಮಾತ್ರ ಸುರಕ್ಷಿತವಾಗಿ ಇರ್ತಾರೆ. (ಮತ್ತಾ. 6:31-33; ಯೋಹಾ. 10:27-29) ತೂರಿನ ಬಗ್ಗೆ ನುಡಿಯಲಾದ ಭವಿಷ್ಯವಾಣಿಗಳು ಹೇಗೆ ಚಾಚೂತಪ್ಪದೆ ನೆರವೇರಿದವೋ ಅದೇ ತರ ಈ ದುಷ್ಟ ಲೋಕದ ಬಗ್ಗೆ ಇರೋ ಭವಿಷ್ಯವಾಣಿಗಳು ಸಹ ಖಂಡಿತ ನೆರವೇರುತ್ತವೆ. ಈ ದುಷ್ಟ ಲೋಕದ ಸ್ವಾರ್ಥ ವಾಣಿಜ್ಯ ವ್ಯವಸ್ಥೆಯನ್ನ ದೇವರು ನಾಶಮಾಡುವಾಗ ಯೆಹೋವನೇ ದೇವರು ಅಂತ ಜನ್ರಿಗೆ ಗೊತ್ತಾಗುತ್ತೆ.

“ಒಣಗಿದ ಹುಲ್ಲುಕಡ್ಡಿ” ತರ ಇರೋ ರಾಜಕೀಯ ಶಕ್ತಿ

24-26. (ಎ) ಯೆಹೋವ ದೇವರು ಯಾಕೆ ಈಜಿಪ್ಟ್‌ ಅನ್ನು “ಒಣಗಿದ ಹುಲ್ಲುಕಡ್ಡಿ” ಅಂತ ಕರೆದನು? (ಬಿ) ರಾಜ ಚಿದ್ಕೀಯ ಹೇಗೆ ಯೆಹೋವ ದೇವರ ಮಾತನ್ನು ಮೀರಿ ನಡೆದನು ಮತ್ತು ಅದರ ಪರಿಣಾಮ ಏನಾಯ್ತು?

24 ಯೋಸೇಫನ ಕಾಲಕ್ಕೂ ಮುಂಚಿನಿಂದ ಹಿಡಿದು ಬಾಬೆಲಿನವ್ರು ಯೆರೂಸಲೇಮನ್ನ ನಾಶ ಮಾಡೋ ತನಕ ಈಜಿಪ್ಟ್‌ ಶಕ್ತಿಶಾಲಿ ದೇಶವಾಗಿತ್ತು. ದೇವರು ಮಾತು ಕೊಟ್ಟ ದೇಶದ ಮೇಲೆ ಅದು ತನ್ನ ಪ್ರಭಾವವನ್ನ ಬೀರ್ತಿತ್ತು. ತುಂಬ ವರ್ಷಗಳಿಂದ ಅಧಿಕಾರದಲ್ಲಿ ಇದ್ದಿದ್ರಿಂದ ತಾನು ಆಳವಾಗಿ ಬೇರು ಬಿಟ್ಟಿರೋ ದೊಡ್ಡ ಮರದ ತರ ಯಾವತ್ತೂ ಬಿದ್ದು ಹೋಗಲ್ಲ ಅಂತ ಅಂದ್ಕೊಳ್ತಿತ್ತು. ಆದ್ರೆ ಅದು ಯೆಹೋವ ದೇವರ ಮುಂದೆ “ಒಣಗಿದ ಹುಲ್ಲುಕಡ್ಡಿ” ತರ ಬಲಹೀನವಾಗಿತ್ತು.—ಯೆಹೆ. 29:6.

25 ಈಜಿಪ್ಟಿನವ್ರು ಯೆಹೋವ ದೇವರ ಮುಂದೆ ಏನೂ ಅಲ್ಲ ಅಂತ ಧರ್ಮಭ್ರಷ್ಟ ಚಿದ್ಕೀಯನಿಗೆ ಅರ್ಥವಾಗ್ಲಿಲ್ಲ. ಪ್ರವಾದಿ ಯೆರೆಮೀಯನ ಮೂಲಕ ಯೆಹೋವನು  ಚಿದ್ಕೀಯನಿಗೆ, ‘ಬಾಬೆಲಿನ ರಾಜನಿಗೆ ಅಧೀನನಾಗು’ ಅಂತ ಹೇಳಿದ್ದನು. (ಯೆರೆ. 27:12) ಆಗ ಚಿದ್ಕೀಯನು ಬಾಬೆಲಿನ ರಾಜ ನೆಬೂಕದ್ನೆಚ್ಚರನ ವಿರುದ್ಧ ದಂಗೆಯೇಳಲ್ಲ ಅಂತ ಯೆಹೋವ ದೇವರ ಹೆಸರಿನಲ್ಲಿ ಆಣೆಯಿಟ್ಟಿದ್ದನು. ಆದ್ರೆ ಅವನು ಯೆಹೋವನ ಮಾತನ್ನ ಕೇಳಲಿಲ್ಲ. ತಾನು ಕೊಟ್ಟ ಮಾತಿನಂತೆನೂ ನಡ್ಕೊಳ್ಳಲಿಲ್ಲ. ಬದ್ಲಿಗೆ ಅವನು ಬಾಬೆಲಿನ ಜೊತೆ ಹೋರಾಡೋಕೆ ಈಜಿಪ್ಟಿನ ಸಹಾಯವನ್ನ ಕೇಳಿದನು. (2 ಪೂರ್ವ. 36:13; ಯೆಹೆ. 17:12-20) ಈಜಿಪ್ಟ್‌ ದೇಶದ ಮೇಲೆ ಭರವಸೆಯಿಟ್ಟ ಇಸ್ರಾಯೇಲ್ಯರು ತಮಗೆ ತಾವೇ ನಾಶನವನ್ನ ತಂದುಕೊಂಡ್ರು. (ಯೆಹೆ. 29:7) ಈಜಿಪ್ಟ್‌ ನೋಡೋಕೆ “ಸಮುದ್ರದ ದೊಡ್ಡ ಪ್ರಾಣಿ” ತರ ಬಲಶಾಲಿಯಾಗಿತ್ತು. (ಯೆಹೆ. 29:3, 4) ಆದ್ರೆ ಬೇಟೆಗಾರನು ಮೊಸಳೆಯ ದವಡೆಗೆ ಕೊಕ್ಕೆ ಹಾಕಿ ಅದನ್ನ ಬಿಗಿಯೋ ತರನೇ ‘ನಾನು ಈಜಿಪ್ಟಿನವ್ರನ್ನ ಹಿಡಿದು ನಾಶಮಾಡುತ್ತೇನೆ’ ಅಂತ ಯೆಹೋವನು ಹೇಳಿದನು. ಈ ಮಾತು ಬಾಬೆಲಿನವ್ರು ಈಜಿಪ್ಟನ್ನು ವಶಪಡಿಸಿಕೊಂಡಾಗ ನೆರವೇರಿತು.—ಯೆಹೆ. 29:9-12, 19.

26 ಕೊಟ್ಟ ಮಾತಿನಂತೆ ನಡೆಯದೇ ಇದ್ದ ಚಿದ್ಕೀಯನಿಗೆ ಏನಾಯ್ತು? ಈ ‘ದುಷ್ಟ ಪ್ರಧಾನನು’ ಯೆಹೋವನ ವಿರುದ್ಧ ದಂಗೆ ಎದ್ದಿದ್ರಿಂದ ತನ್ನ ಕಿರೀಟವನ್ನ ಕಳ್ಕೊಳ್ತಾನೆ ಮತ್ತು ಅವನ ಆಳ್ವಿಕೆ ಕೊನೆಯಾಗುತ್ತೆ ಅಂತ ಯೆಹೆಜ್ಕೇಲ ಹೇಳಿದನು. ಇದ್ರ ಜೊತೆಗೆ ಒಂದು ಆಶಾಕಿರಣವನ್ನೂ ಕೊಟ್ಟನು. (ಯೆಹೆ. 21:25-27) ರಾಜವಂಶದಿಂದ “ಆಳೋ ಹಕ್ಕಿರೋನು” ಅಧಿಕಾರಕ್ಕೆ ಬರ್ತಾನೆ ಅಂತ ಯೆಹೋವ ದೇವರು ಯೆಹೆಜ್ಕೇಲನ ಮೂಲಕ ಹೇಳಿದನು. ಈ ರಾಜ ಯಾರು ಅಂತ ನಾವು ಮುಂದಿನ ಅಧ್ಯಾಯದಲ್ಲಿ ನೋಡುತ್ತೇವೆ.

27. ಈಜಿಪ್ಟಿನವ್ರ ಮೇಲೆ ಭರವಸೆ ಇಟ್ಟ ಇಸ್ರಾಯೇಲ್ಯರಿಂದ ನಾವು ಯಾವ ಪಾಠ ಕಲಿಬಹುದು?

27 ಈಜಿಪ್ಟಿನ ಮೇಲೆ ಭರವಸೆಯಿಟ್ಟ ಇಸ್ರಾಯೇಲ್ಯರಿಂದ ನಾವು ಯಾವ ಪಾಠ ಕಲಿಬಹುದು? ಯೆಹೋವನ ಜನರಾದ ನಾವು ಯಾವುದೇ ರಾಜಕೀಯ ಶಕ್ತಿಗಳ ಮೇಲೆ ಭರವಸೆಯಿಡಬಾರದು. ಅವು ನಮಗೆ ಸಂರಕ್ಷಣೆ ಕೊಡುತ್ತೆ ಅಂತ ಯಾವತ್ತೂ ಅಂದ್ಕೊಳ್ಳಬಾರದು. ನಾವು ನಮ್ಮ ಯೋಚನೆಯಲ್ಲೂ “ಲೋಕದ ಜನ್ರ” ತರ ಇರಬಾರದು. (ಯೋಹಾ.  15:19; ಯಾಕೋ. 4:4) ರಾಜಕೀಯ ಶಕ್ತಿಗಳು ಎಷ್ಟೇ ಬಲಶಾಲಿಯಾಗಿ ಕಂಡ್ರೂ ಅವರು ಈಜಿಪ್ಟಿನ ತರ ಬರೀ ಹುಲ್ಲು ಕಡ್ಡಿಯಂತೆ ಇದ್ದಾರೆ. ವಿಶ್ವದ ರಾಜನಾಗಿರೋ ಯೆಹೋವನ ಮೇಲೆ ಭರವಸೆಯಿಡೋ ಬದ್ಲು ಇವತ್ತು ಇದ್ದು ನಾಳೆ ಇಲ್ಲದೇ ಹೋಗೋ ಮನುಷ್ಯರ ಮೇಲೆ ಭರವಸೆಯಿಡೋದು ಎಂಥ ಮೂರ್ಖತನ ಅಲ್ವಾ!—ಕೀರ್ತನೆ 146:3-6 ಓದಿ.

ಬೇರೆ ಯಾರೂ ನಮ್ಮನ್ನ ನೋಡದೆ ಇದ್ದಾಗಲೂ ನಾವು ಯಾವುದೇ ರಾಜಕೀಯ ಪಕ್ಷದ ಪರವಹಿಸಬಾರದು (ಪ್ಯಾರ 27 ನೋಡಿ)

ಜನಾಂಗಗಳಿಗೆ “ಗೊತ್ತಾಗುತ್ತೆ”

28-30. ಜನಾಂಗಗಳಿಗೆ ಯೆಹೋವ ಯಾರು ಅಂತ ಗೊತ್ತಾಗೋದಕ್ಕೂ ನಾವು ಯೆಹೋವನನ್ನ ತಿಳ್ಕೊಂಡಿರೋದಕ್ಕೂ ಯಾವ ವ್ಯತ್ಯಾಸ ಇದೆ?

28 ಯೆಹೆಜ್ಕೇಲ ಪುಸ್ತಕದಲ್ಲಿ “ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ” ಅಂತ ತುಂಬ ಸಲ ಯೆಹೋವ ಹೇಳಿದ್ದಾನೆ. (ಯೆಹೆ. 25:17) ಯೆಹೋವ ದೇವರು ತನ್ನ ಜನರ ಶತ್ರುಗಳಿಗೆ ಶಿಕ್ಷೆ ಕೊಟ್ಟಾಗ ಈ ಮಾತು ನಿಜ ಆಯ್ತು. ಈ ಮಾತು ನಮ್ಮ ದಿನಗಳಲ್ಲೂ ನೆರವೇರಲಿಕ್ಕಿದೆ. ಅದು ಹೇಗೆ?

29 ಹಿಂದಿನ ಕಾಲದ ದೇವ ಜನರ ತರನೇ ನಾವೂ ಕೂಡ ಜನಾಂಗಗಳಿಂದ ಸುತ್ತುವರಿಯಲ್ಪಟ್ಟಿದ್ದೇವೆ. ಅವ್ರ ಕಣ್ಣಿಗೆ ನಾವು ಬಲಹೀನರಾಗಿ, ಸಿಕ್ಕಿಹಾಕಿಕೊಂಡಿರೋ ಕುರಿ ತರ ಕಾಣಬಹುದು. (ಯೆಹೆ. 38:10-13) ಕೂಡಲೇ ಜನಾಂಗಗಳು ದೇವಜನರಾದ ನಮ್ಮನ್ನ ಸರ್ವನಾಶ ಮಾಡೋಕೆ ಆಕ್ರಮಣ ಮಾಡಲಿದ್ದಾರೆ. ಇದ್ರ ಬಗ್ಗೆ ಅಧ್ಯಾಯ 17 ಮತ್ತು 18 ರಲ್ಲಿ ಕಲಿಯಲಿದ್ದೇವೆ. ದೇವ ಜನರಾದ ನಮ್ಮ ಮೇಲೆ ಆಕ್ರಮಣ ಮಾಡುವಾಗ ಯೆಹೋವನ ಶಕ್ತಿ ಏನು ಅಂತ ಅವ್ರು ತಿಳ್ಕೊಳ್ತಾರೆ. ಯೆಹೋವ ದೇವರು ಅವರನ್ನ ಹರ್ಮಗೆದ್ದೋನ್‌ ಯುದ್ಧದಲ್ಲಿ ನಾಶ ಮಾಡುವಾಗ ವಿಶ್ವದ ರಾಜ ಯೆಹೋವನೇ ಅಂತ ಅವ್ರಿಗೆ ಗೊತ್ತಾಗುತ್ತೆ.—ಪ್ರಕ. 16:16; 19:17-21.

30 ನಮ್ಮ ಜೀವನದ ಪ್ರತಿ ಕ್ಷಣದಲ್ಲೂ ನಾವು ಯೆಹೋವನ ಮೇಲೆ ಭರವಸೆಯಿಟ್ಟಿರೋದ್ರಿಂದ, ಆತನ ಮಾತು ಕೇಳಿ ನಡಿತಿರೋದ್ರಿಂದ ಮತ್ತು ಆತನಿಗೇ ಶುದ್ಧ ಆರಾಧನೆಯನ್ನ ಮಾಡ್ತಿರೋದ್ರಿಂದ ಯೆಹೋವ ದೇವರು ನಮ್ಮನ್ನ ಕಾಪಾಡ್ತಾನೆ. ನಮ್ಮನ್ನ ಆಶೀರ್ವದಿಸ್ತಾನೆ.—ಯೆಹೆಜ್ಕೇಲ 28:26 ಓದಿ.

^ ಪ್ಯಾರ. 15 ಉದಾಹರಣೆಗೆ, ಇಸ್ರಾಯೇಲಿನಲ್ಲಿ ಕುಲುಮೆ ಕೆಲಸ ಮಾಡೋದನ್ನ ಫಿಲಿಷ್ಟಿಯರು ನಿಷೇಧಿಸಿದ್ರು. ಇಸ್ರಾಯೇಲ್ಯರು ಕೃಷಿಗಾಗಿ ಬಳಸುವ ಸಲಕರಣೆಗಳನ್ನ ಹರಿತ ಮಾಡಬೇಕಂದ್ರೆ ಫಿಲಿಷ್ಟಿಯರ ದೇಶಕ್ಕೆ ಹೋಗಬೇಕಿತ್ತು. ಅದಕ್ಕಾಗಿ ಅವ್ರು ತುಂಬ ದಿನಗಳ ಕೂಲಿಯನ್ನ ಕೊಡಬೇಕಾಗಿತ್ತು.—1 ಸಮು. 13:19-22.

^ ಪ್ಯಾರ. 18 ಸಮುದ್ರದಲ್ಲಿರೋ ಬಂಡೆಯ ಮೇಲೆ ತೂರ್‌ ಪಟ್ಟಣವನ್ನ ಕಟ್ಟಲಾಗಿತ್ತು. ಅದು ಕರ್ಮೆಲ್‌ ಬೆಟ್ಟದಿಂದ ಉತ್ತರದ ಕಡೆಗೆ ಸುಮಾರು 50 ಕಿಲೋಮೀಟರ್‌ ದೂರದಲ್ಲಿತ್ತು. ನಂತ್ರ ತೂರಿನವ್ರು ತಮ್ಮ ಪಟ್ಟಣವನ್ನ ತೀರಪ್ರದೇಶದಲ್ಲೂ ವಿಸ್ತರಿಸಿದ್ರು. ಹೀಬ್ರು ಭಾಷೆಯಲ್ಲಿ ತೂರ್‌ ಅನ್ನು ಸುರ್‌ ಅಂತ ಕರೆಯಲಾಗಿದೆ. ಇದರ ಅರ್ಥ “ಬಂಡೆ” ಅಂತಾಗಿದೆ.”

^ ಪ್ಯಾರ. 22 ತೂರ್‌ ಪಟ್ಟಣದ ಬಗ್ಗೆ ಯೆಶಾಯ, ಯೆರೆಮೀಯ, ಯೋವೇಲ, ಆಮೋಸ ಮತ್ತು ಜೆಕರ್ಯ ಹೇಳಿದ ಭವಿಷ್ಯವಾಣಿಗಳು ಚಾಚೂತಪ್ಪದೆ ನೆರವೇರಿದವು.—ಯೆಶಾ. 23:1-8; ಯೆರೆ. 25:15, 22, 27; ಯೋವೇ. 3:4; ಆಮೋ. 1:10; ಜೆಕ. 9:3, 4.