ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 22

“ದೇವರನ್ನ ಆರಾಧಿಸು”

“ದೇವರನ್ನ ಆರಾಧಿಸು”

ಪ್ರಕಟನೆ 22:9

ಮುಖ್ಯ ವಿಷಯ: ಯೆಹೆಜ್ಕೇಲ ಪುಸ್ತಕದಿಂದ ನಾವು ಯಾವ ಮುಖ್ಯ ವಿಷಯಗಳನ್ನ ಕಲಿತ್ವಿ ಮತ್ತು ಅವು ಈಗಲೂ ಮುಂದಕ್ಕೂ ಹೇಗೆ ಅನ್ವಯಿಸ್ತವೆ

1, 2. (ಎ) ನಾವು ಯಾವ ನಿರ್ಣಯ ಮಾಡಬೇಕು? (ಬಿ) ದೇವದೂತ ಯೋಹಾನನಿಗೆ ಏನು ಹೇಳಿದ?

ನಮ್ಮಲ್ಲಿ ಪ್ರತಿಯೊಬ್ಬರು ಒಂದು ಪ್ರಾಮುಖ್ಯ ಪ್ರಶ್ನೆಯನ್ನ ಕೇಳಿಕೊಳ್ಳಬೇಕು. ನಾನು ಯಾರನ್ನ ಆರಾಧಿಸಬೇಕು? ಅನೇಕರಿಗೆ ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯೋದು ಕಷ್ಟ. ತುಂಬ ಧರ್ಮಗಳಿರೋದ್ರಿಂದ ಅವರಿಗೆ ಏನು ಮಾಡ್ಬೇಕು ಅನ್ನೋ ವಿಷ್ಯದಲ್ಲಿ ಗೊಂದಲ ಇದೆ. ನಿಜ ಹೇಳಬೇಕಂದ್ರೆ ಉತ್ರ ತುಂಬ ಸುಲಭ ಮತ್ತು ಸ್ಪಷ್ಟ. ಒಂದೋ ನಾವು ಯೆಹೋವನನ್ನ ಆರಾಧಿಸಬಹುದು ಇಲ್ಲಾ ಸೈತಾನನನ್ನ ಆರಾಧಿಸಬಹುದು.

2 ಎಲ್ರೂ ತನ್ನನ್ನೇ ಆರಾಧಿಸಬೇಕಂತ ಸೈತಾನ ದುರಾಸೆಯಿಂದ ಇದ್ದಾನೆ. ಅವನು ಯೇಸುವನ್ನ ಪರೀಕ್ಷೆ ಮಾಡಿದಾಗ ಇದಂತೂ ಸ್ಪಷ್ಟವಾಗಿ ಗೊತ್ತಾಯ್ತು. ಈ ಪುಸ್ತಕದ ಒಂದನೇ ಅಧ್ಯಾಯದಲ್ಲಿ ನೋಡಿದ ಹಾಗೆ ಸೈತಾನ ಯೇಸುಗೆ ಒಂದು ದೊಡ್ಡ ಬಹುಮಾನ ಕೊಡ್ತೀನಿ ಅಂತ ಹೇಳಿದ. ಇಡೀ ಲೋಕದ ಮೇಲಿರೋ ಅಧಿಕಾರಾನೇ ಆ ಬಹುಮಾನ. ಅದನ್ನ ಪಡೆಯೋಕೆ ಯೇಸು ಏನು ಮಾಡಬೇಕಂತ ಸೈತಾನ ಹೇಳಿದ? “ನನ್ನನ್ನ ಒಂದೇ ಒಂದು ಸಾರಿ ಆರಾಧಿಸಿದ್ರೆ ಸಾಕು” ಅಂದ. (ಮತ್ತಾ. 4:9) ಆದ್ರೆ ಅಪೊಸ್ತಲ ಯೋಹಾನನಿಗೆ ಪ್ರಕಟನೆಯನ್ನ ಕೊಟ್ಟ ದೇವದೂತ ಸೈತಾನನಿಗಿಂತ ಎಷ್ಟೋ ಭಿನ್ನನಾಗಿದ್ದನು. (ಪ್ರಕಟನೆ 22:8, 9 ಓದಿ.) ಯೋಹಾನ ಅವನನ್ನ ಆರಾಧಿಸೋಕೆ ಬಂದಾಗ ಆ ದೀನ ದೇವದೂತ, “ಬೇಡ! ಹಾಗೆ ಮಾಡಬೇಡ!” ಅಂದನು. ಅವನು, ‘ನೀನು ನನ್ನನ್ನ ಆರಾಧಿಸು’ ಅಂತ ಹೇಳಲಿಲ್ಲ ಬದ್ಲಿಗೆ “ದೇವರನ್ನ ಆರಾಧಿಸು” ಅಂದನು.

3. (ಎ) ಈ ಪುಸ್ತಕದ ಉದ್ದೇಶ ಏನು? (ಬಿ) ನಾವೀಗ ಏನನ್ನ ಕಲಿಯಲಿದ್ದೇವೆ?

 3 ದೇವದೂತ ಹೇಳಿದಂತೆ, ಯೆಹೋವನನ್ನ ಮಾತ್ರ ಆರಾಧಿಸಬೇಕು ಅನ್ನೋ ನಮ್ಮ ದೃಢ ತೀರ್ಮಾನವನ್ನ ಬಲಪಡಿಸೋದೇ ಈ ಪುಸ್ತಕದ ಉದ್ದೇಶ. (ಧರ್ಮೋ. 10:20; ಮತ್ತಾ. 4:10) ಯೆಹೆಜ್ಕೇಲನ ಭವಿಷ್ಯವಾಣಿಗಳು ಮತ್ತು ದರ್ಶನಗಳಿಂದ ಶುದ್ಧ ಆರಾಧನೆ ಬಗ್ಗೆ ಏನು ಕಲಿತ್ವಿ ಅನ್ನೋದನ್ನ ನಾವೀಗ ನೋಡೋಣ. ನಂತ್ರ ಭವಿಷ್ಯದಲ್ಲಿ ಇಡೀ ಭೂಮಿಯಲ್ಲಿರೋ ಪ್ರತಿಯೊಬ್ಬರೂ ಎದುರಿಸಲಿರೋ ಕೊನೇ ಪರೀಕ್ಷೆಯ ಬಗ್ಗೆ ಬೈಬಲಿಂದ ನೋಡೋಣ. ಈ ಪರೀಕ್ಷೆಯಲ್ಲಿ ಯಾರು ಜಯಿಸ್ತಾರೋ ಅವರು ಶಾಶ್ವತವಾಗಿ ಮತ್ತು ಸಂಪೂರ್ಣವಾಗಿ ಯೆಹೋವನ ಶುದ್ಧ ಆರಾಧನೆ ಪುನಃಸ್ಥಾಪನೆ ಆಗೋದನ್ನ ನೋಡ್ತಾರೆ.

ಯೆಹೆಜ್ಕೇಲನ ಪುಸ್ತಕದಲ್ಲಿರೋ ಮೂರು ಮುಖ್ಯ ವಿಷಯಗಳು

4. ಯೆಹೆಜ್ಕೇಲನ ಪುಸ್ತಕದಲ್ಲಿ ಯಾವ ಮೂರು ಮುಖ್ಯ ವಿಷಯಗಳಿವೆ?

4 ಶುದ್ಧ ಆರಾಧನೆಯಲ್ಲಿ ಕಾಟಾಚಾರಕ್ಕಾಗಿ ಮಾಡುವ ಆಚಾರಗಳು ಒಳಗೂಡಿಲ್ಲ ಅಂತ ಯೆಹೆಜ್ಕೇಲನ ಪುಸ್ತಕದಿಂದ ಕಲಿತ್ವಿ. ಶುದ್ಧ ಆರಾಧನೆಯಲ್ಲಿ ಈ ಮೂರು ಮುಖ್ಯ ವಿಷ್ಯಗಳು ಒಳಗೂಡಿವೆ: (1) ಯೆಹೋವ ದೇವರಿಗೆ ಮಾತ್ರ ಪೂರ್ಣ ಭಕ್ತಿಯನ್ನ ಕೊಡಬೇಕು, (2) ನಾವು ಐಕ್ಯರಾಗಿದ್ದು ಶುದ್ಧ ಆರಾಧನೆಯನ್ನ ಮಾಡುತ್ತಾ ಮುಂದುವರಿಬೇಕು, (3) ಒಬ್ರಿಗೊಬ್ರು ಪ್ರೀತಿ ತೋರಿಸಬೇಕು. ಈ ಪುಸ್ತಕದಲ್ಲಿ ನಾವು ಕಲಿತ ಭವಿಷ್ಯವಾಣಿಗಳು ಮತ್ತು ದರ್ಶನಗಳು ಈ ಮೂರು ಮುಖ್ಯ ವಿಷ್ಯಗಳನ್ನ ಹೇಗೆ ಒತ್ತಿ ಹೇಳ್ತವೆ ಅಂತ ನಾವೀಗ ನೋಡೋಣ.

ಮೊದಲನೇ ವಿಷಯ: ಯೆಹೋವ ದೇವರಿಗೆ ಮಾತ್ರ ಸಂಪೂರ್ಣ ಭಕ್ತಿ ಕೊಡಬೇಕು

5-9. ಯೆಹೋವ ದೇವರಿಗೆ ಮಾತ್ರ ಸಂಪೂರ್ಣ ಭಕ್ತಿ ಕೊಡೋದ್ರ ಬಗ್ಗೆ ನಾವೇನು ಕಲಿತ್ವಿ?

5 ಅಧ್ಯಾಯ 3: * ಯೆಹೋವನ ಸುತ್ತಲಿರುವ ಒಂದು ಮಳೆಬಿಲ್ಲಿನ ಬಗ್ಗೆ ಕಲಿತ್ವಿ ಮತ್ತು ಸ್ವರ್ಗೀಯ ಜೀವಿಗಳಿರೋ ಒಂದು ರಥದಲ್ಲಿ ಆತನು ಸವಾರಿ ಮಾಡೋದರ ಬಗ್ಗೆ ನೋಡಿದ್ವಿ. ಇದ್ರಿಂದ ಯೆಹೋವನು ಮಾತ್ರ ನಮ್ಮ ಸಂಪೂರ್ಣ ಆರಾಧನೆಗೆ ಅರ್ಹನು ಅಂತ ನಾವು ಕಲಿಯುತ್ತೇವೆ.—ಯೆಹೆ. 1:4, 15-28.

6 ಅಧ್ಯಾಯ  5: ಯೆಹೋವನ ಆಲಯದಲ್ಲಿ ಎಷ್ಟು ಕೀಳಾದ ಕೆಲ್ಸಗಳು ನಡೀತಿದ್ವು ಅನ್ನೋದ್ರ ಬಗ್ಗೆ ದರ್ಶನದಲ್ಲಿ ಕಲಿತ್ವಿ. ಯೆಹೋವನಿಂದ ಏನನ್ನೂ ಮುಚ್ಚಿಡೋಕಾಗಲ್ಲ, ಆತನಿಗೆ ಎಲ್ಲಾನೂ ಕಾಣಿಸುತ್ತೆ ಅಂತ ಈ ದರ್ಶನದಿಂದ ತಿಳ್ಕೊಂಡ್ವಿ. ಜನರು ತನಗೆ ನಂಬಿಕೆದ್ರೋಹ ಮಾಡೋದಾದ್ರೆ ಅಥ್ವಾ ವಿಗ್ರಹಾರಾಧನೆ ಮಾಡೋದಾದ್ರೆ ಅದನ್ನೂ ಯೆಹೋವನು ನೋಡ್ತಾನೆ. ಅವರು ಅದನ್ನ ಮನುಷ್ಯರ ಕಣ್ಣಿಂದ ಬಚ್ಚಿಡಬಹುದು ಆದ್ರೆ ಯೆಹೋವನ ಕಣ್ಣಿಗೆ ಕಾಣದ ಹಾಗೆ ಬಚ್ಚಿಡಕ್ಕಾಗಲ್ಲ. ಇಂಥ ಕೆಲ್ಸಗಳನ್ನ ನೋಡ್ವಾಗ ಯೆಹೋವನಿಗೆ ತುಂಬ ದುಃಖ ಆಗುತ್ತೆ ಮತ್ತು ಅವರಿಗೆ ಆತನು ಖಂಡಿತ ಶಿಕ್ಷೆ ಕೊಡ್ತಾನೆ ಅಂತ ನಾವು ನೋಡಿದ್ವಿ.—ಯೆಹೆ. 8:1-18.

7 ಅಧ್ಯಾಯ 7: ಇಸ್ರಾಯೇಲ್ಯರನ್ನ ‘ಸಿಕ್ಕಾಪಟ್ಟೆ ಅಣಕಿಸಿದ’ ಜನಾಂಗಗಳಿಗೆ ಯೆಹೋವ ದೇವರು ನ್ಯಾಯತೀರಿಸಿದ್ರಿಂದ ನಾವು ಒಂದು ಪಾಠ ಕಲಿತ್ವಿ. ಅದೇನಂದ್ರೆ, ತನ್ನ ಜನ್ರಿಗೆ ಕೆಟ್ಟದ್ದು ಮಾಡಿದವ್ರನ್ನ ಯೆಹೋವ ದೇವರು ಸುಮ್ಮನೆ ಬಿಡಲ್ಲ. (ಯೆಹೆ. 25:6) ಅಷ್ಟೇ ಅಲ್ಲ, ಬೇರೆ ಜನರ ಹತ್ರ ವ್ಯವಹರಿಸಿದ ಇಸ್ರಾಯೇಲ್ಯರಿಂದನೂ ನಾವು ಪಾಠವನ್ನ ಕಲಿತ್ವಿ. ಅದೇನಂದ್ರೆ, ಬೇರೆಲ್ಲರಿಗಿಂತಲೂ ಯೆಹೋವ ದೇವರಿಗೆ ನಾವು ಜಾಸ್ತಿ ನಿಷ್ಠೆ ತೋರಿಸಬೇಕು. ಯೆಹೋವನನ್ನ ಆರಾಧಿಸದೇ ಇರೋ ಸಂಬಂಧಿಕರಿಗಾಗಿ ಆತನಿಟ್ಟಿರುವ ಉನ್ನತ ಮಟ್ಟಗಳನ್ನ ನಾವು ಯಾವತ್ತೂ ಕಡೆಗಣಿಸಬಾರದು. ನಾವು ಹಣ-ಆಸ್ತಿಯ ಮೇಲಾಗಲಿ, ಮಾನವ ಸರ್ಕಾರಗಳ ಮೇಲಾಗಲಿ ಭರವಸೆ ಇಡಲೇಬಾರದು. ಯೆಹೋವ ದೇವರಿಗೆ ಕೊಡಬೇಕಾದ ಸ್ಥಾನವನ್ನ ನಾವು ಯಾವತ್ತೂ ಇವುಗಳಿಗೆ ಕೊಡಬಾರದು.

8 ಅಧ್ಯಾಯ 13 ಮತ್ತು 14: ಉನ್ನತವಾದ ಬೆಟ್ಟದ ಮೇಲೆ ದೇವರ ಆಲಯ ಇರುವುದಾಗಿ ನೋಡಿದ್ವಿ. ಈ ದರ್ಶನದಿಂದ ನಾವು ಯೆಹೋವನ ಉನ್ನತವಾದ ಮಟ್ಟಗಳ  ಪ್ರಕಾರ ಜೀವಿಸ್ಬೇಕು, ಯಾಕಂದ್ರೆ ಆತನೊಬ್ಬನೇ ಅತ್ಯುನ್ನತ ದೇವರು ಅಂತ ಕಲಿತ್ವಿ.—ಯೆಹೆ. 40:1–48:35.

9 ಅಧ್ಯಾಯ 15: ಕೆಲವು ಭವಿಷ್ಯವಾಣಿಗಳಲ್ಲಿ ಇಸ್ರಾಯೇಲ್‌ ಮತ್ತು ಯೆಹೂದವನ್ನ ವೇಶ್ಯೆಯರಿಗೆ ಹೋಲಿಸಿರೋದ್ರ ಬಗ್ಗೆ ನೋಡಿದ್ವಿ. ಯೆಹೋವನನ್ನ ಬಿಟ್ಟು ಬೇರೆ ದೇವರುಗಳನ್ನ ಆರಾಧಿಸೋದು ವೇಶ್ಯವಾಟಿಕೆಗೆ ಸಮಾನ. ಅದು ಯೆಹೋವ ದೇವರಿಗೆ ಅಸಹ್ಯ ಅಂತ ಇದ್ರಿಂದ ನಾವು ಕಲಿತ್ವಿ.—ಯೆಹೆಜ್ಕೇಲ ಅಧ್ಯಾಯ 16, 23.

ಎರಡನೇ ವಿಷಯ: ಶುದ್ಧ ಆರಾಧನೆ ಮಾಡ್ತಾ ಐಕ್ಯರಾಗಿರಬೇಕು

10-14. ಶುದ್ಧ ಆರಾಧನೆ ಮಾಡ್ತಾ ಐಕ್ಯರಾಗಿರೋದ್ರ ಪ್ರಾಮುಖ್ಯತೆಯನ್ನ ಹೇಗೆ ಒತ್ತಿಹೇಳಲಾಗಿದೆ?

10 ಅಧ್ಯಾಯ 8: ಯೆಹೋವ ದೇವರು ತನ್ನ ಜನ್ರನ್ನ ನೋಡಿಕೊಳ್ಳೋಕೆ ‘ಒಬ್ಬ ಕುರುಬನನ್ನ’ ನೇಮಿಸ್ತೀನಿ ಅಂತ ಮಾತು ಕೊಟ್ಟಿದ್ರ ಬಗ್ಗೆ ನೋಡಿದ್ವಿ. ಇದು ಜನ್ರು ಐಕ್ಯರಾಗಿ, ಶಾಂತಿಯಿಂದ ಯೇಸು ಕ್ರಿಸ್ತನ ನಾಯಕತ್ವದ ಕೆಳಗೆ ಇರಬೇಕು ಅನ್ನೋದನ್ನ ಒತ್ತಿಹೇಳಿತು.—ಯೆಹೆ. 34:23, 24; 37:24-28.

11 ಅಧ್ಯಾಯ 9: ಬಾಬೆಲಿನಲ್ಲಿ ಕೈದಿಗಳಾಗಿದ್ದ ಯೆಹೂದ್ಯರು ತಮ್ಮ ದೇಶಕ್ಕೆ ವಾಪಸ್‌ ಹೋಗೋದ್ರ ಬಗ್ಗೆ ಯೆಹೆಜ್ಕೇಲ ನುಡಿದ ಭವಿಷ್ಯವಾಣಿಗಳನ್ನ ನಾವು ನೋಡಿದ್ವಿ. ಇದ್ರಿಂದ ಯೆಹೋವ ದೇವರನ್ನ ಮೆಚ್ಚಿಸೋಕೆ ಬಯಸೋ ನಮಗೆಲ್ಲರಿಗೂ ಒಂದು ಪಾಠ ಇದೆ. ಯೆಹೋವ ದೇವರ ಶುದ್ಧ ಆರಾಧಕರು ಸುಳ್ಳು ಆರಾಧನೆಯನ್ನ ಬಿಟ್ಟು ಹೊರಗೆ ಬರಬೇಕು ಮತ್ತು ಅದ್ರಿಂದ ಯಾವಾಗಲೂ ದೂರ ಇರಬೇಕು. ನಾವು ಯಾವುದೇ ಜಾತಿ ಧರ್ಮದಿಂದ ಬಂದಿದ್ರೂ ಮತ್ತು ಬಡವರು ಅಥ್ವಾ ಶ್ರೀಮಂತರಾಗಿದ್ರೂ ನಮ್ಮ ಮಧ್ಯೆ ಐಕ್ಯತೆ ಇರಬೇಕು ಅಂತ ಕಲಿತ್ವಿ. ಈ ಐಕ್ಯತೆ ನಾವು ಯೆಹೋವನ ಜನರು ಅನ್ನೋದಕ್ಕೆ ಗುರುತಾಗಿದೆ.—ಯೆಹೆ. 11:17, 18; 12:24; ಯೋಹಾ. 17:20-23.

12 ಅಧ್ಯಾಯ 10: ಒಣಗಿಹೋದ ಮೂಳೆಗಳು ಪುನಃ ಜೀವ ಪಡೆಯೋ ದರ್ಶನದಿಂದ ಐಕ್ಯತೆ ಬಗ್ಗೆ ಕಲಿತ್ವಿ. ಈಗಾಗಲೇ ಯೆಹೋವನ ಜನರನ್ನ ಶುದ್ಧ ಮಾಡಲಾಗಿದೆ ಮತ್ತು ಪುನಃಸ್ಥಾಪಿಸಲ್ಪಟ್ಟ ಸಭೆಯಲ್ಲಿ ಅವರು ಒಂದಾಗಿದ್ದಾರೆ. ಅಷ್ಟೇ ಅಲ್ಲ ಅವರು ಅಲ್ಲಿ ಒಂದೇ ಸೈನ್ಯದಂತೆ ಒಟ್ಟಾಗಿ ಯೆಹೋವನ ಸೇವೆ ಮಾಡ್ತಿದ್ದಾರೆ ಅಂತ ತಿಳ್ಕೊಂಡ್ವಿ. ಈ ಜನ್ರಲ್ಲಿ ನಾವು ಸಹ ಒಬ್ಬರಾಗಿರೋದಕ್ಕೆ ಕೃತಜ್ಞರಾಗಿದ್ದೇವಲ್ವಾ!—ಯೆಹೆ. 37:1-14.

13 ಅಧ್ಯಾಯ 12: ಎರಡು ಕೋಲುಗಳು ಒಂದಾಗೋದ್ರ ಬಗ್ಗೆ ಇದ್ದ ಭವಿಷ್ಯವಾಣಿಯನ್ನ ನೋಡಿದ್ವಿ. ಇದ್ರಿಂದ ಐಕ್ಯತೆಯ ಪ್ರಾಮುಖ್ಯತೆ ಬಗ್ಗೆ ಕಲಿತ್ವಿ. ಅಭಿಷಿಕ್ತರ ಮತ್ತು ಬೇರೆ ಕುರಿಗಳ ಮಧ್ಯ ಈ ಭವಿಷ್ಯವಾಣಿ ನೆರವೇರೋದನ್ನ ನೋಡುವಾಗ ನಮ್ಮ ನಂಬಿಕೆ ಬಲವಾಗುತ್ತೆ. ರಾಜಕೀಯವಾಗಿ, ಧಾರ್ಮಿಕವಾಗಿ ಐಕ್ಯತೆ ಇಲ್ಲದಿರೋ ಈ ಲೋಕದಲ್ಲಿ ನಾವೆಲ್ಲರೂ ಪ್ರೀತಿ, ನಿಷ್ಠೆಯಿಂದ ಐಕ್ಯರಾಗಿದ್ದೇವೆ. ಅದನ್ನ ನೋಡ್ವಾಗ ತುಂಬ ಖುಷಿಯಾಗುತ್ತಲ್ವಾ?—ಯೆಹೆ. 37:15-23.

14 ಅಧ್ಯಾಯ 16: ಕಾರ್ಯದರ್ಶಿಯ ಶಾಯಿಕೊಂಬು ಹಿಡಿದಿರುವ ಒಬ್ಬ ವ್ಯಕ್ತಿಯ ಬಗ್ಗೆ ಮತ್ತು ಜಜ್ಜಿಹಾಕೋ ಆಯುಧ ಹಿಡಿದಿರುವ ಗಂಡಸ್ರ ಬಗ್ಗೆ ಇರೋ ದರ್ಶನದ ಬಗ್ಗೆ ಕಲಿತ್ವಿ. ಇದ್ರಿಂದ ಒಂದು ಎಚ್ಚರಿಕೆಯ ಪಾಠವನ್ನ ನಾವು ಕಲಿತ್ವಿ. ಅದೇನಂದ್ರೆ, ಯಾರು ‘ಮಹಾ ಸಂಕಟದ’ ಸಮಯದಲ್ಲಿ ಶುದ್ಧ ಆರಾಧಕರಾಗಿರ್ತಾರೋ ಅವರು ಮಾತ್ರ ರಕ್ಷಣೆಗಾಗಿ ಗುರುತು ಹಾಕಲ್ಪಡುತ್ತಾರೆ.—ಮತ್ತಾ. 24:21; ಯೆಹೆ. 9:1-11.

ಮೂರನೇ ವಿಷಯ: ಒಬ್ಬರಿಗೊಬ್ಬರು ಪ್ರೀತಿ ತೋರಿಸಬೇಕು

15-18. ನಾವ್ಯಾಕೆ ಒಬ್ಬರಿಗೊಬ್ಬರು ಪ್ರೀತಿ ತೋರಿಸ್ತಾ ಇರಬೇಕು? ಅದನ್ನ ಹೇಗೆ ತೋರಿಸಬಹುದು?

15 ಅಧ್ಯಾಯ 4: ನಾಲ್ಕು ಜೀವಿಗಳ ಬಗ್ಗೆ ನೋಡಿದ್ವಿ. ಈ ದರ್ಶನದಿಂದ ಯೆಹೋವನ ಗುಣಗಳ ಬಗ್ಗೆ, ಅದ್ರಲ್ಲೂ ಮುಖ್ಯವಾಗಿ ಪ್ರೀತಿ ಬಗ್ಗೆ ಕಲಿತ್ವಿ. ನಾವು ಬೇರೆಯವ್ರ ಜೊತೆ ಪ್ರೀತಿಯಿಂದ ಮಾತಾಡ್ವಾಗ, ನಡ್ಕೊಳ್ವಾಗ ಯೆಹೋವನೇ ನಮ್ಮ ದೇವರು ಅಂತ ತೋರಿಸಿಕೊಡ್ತೇವೆ.—ಯೆಹೆ. 1:5-14; 1 ಯೋಹಾ. 4:8.

 16 ಅಧ್ಯಾಯ 6 ಮತ್ತು 11: ಯೆಹೋವ ದೇವರಿಗೆ ಪ್ರೀತಿ ಇರೋದ್ರಿಂದನೇ ಹಿಂದಿನ ಕಾಲದಲ್ಲಿ ಯೆಹೆಜ್ಕೇಲನಂಥ ಕಾವಲುಗಾರರನ್ನ ನೇಮಿಸಿದನು ಅಂತ ನೋಡಿದ್ವಿ. ಯೆಹೋವನು ಪ್ರೀತಿಯ ದೇವರು. ಅದಕ್ಕೇ ಸೈತಾನನ ಲೋಕ ನಾಶವಾಗುವಾಗ ಅದ್ರ ಜೊತೆ ಬೇರೆ ಯಾರೂ ನಾಶ ಆಗ್ಬಾರ್ದು ಅಂತ ಆತನು ಬಯಸ್ತಾನೆ. (2 ಪೇತ್ರ 3:9) ಇವತ್ತಿರೋ ಕಾವಲುಗಾರರಿಗೆ ಬೆಂಬಲ ಕೊಡೋ ಮೂಲಕ ನಾವು ಯೆಹೋವ ದೇವರ ಪ್ರೀತಿಯನ್ನ ಅನುಕರಿಸ್ತೇವೆ.—ಯೆಹೆ. 33:1-9.

17 ಅಧ್ಯಾಯ 17 ಮತ್ತು 18: ತನ್ನ ಕರುಣೆಯನ್ನ ತಿರಸ್ಕರಿಸುತ್ತಾ ಅನೇಕ ಜನರು ತನ್ನ ನಿಷ್ಠಾವಂತ ಸೇವಕರನ್ನ ಸಂಪೂರ್ಣವಾಗಿ ಅಳಿಸಿಹಾಕೋಕೆ ಪ್ರಯತ್ನಿಸ್ತಾರೆ ಅಂತ ಯೆಹೋವ ದೇವರಿಗೆ ಚೆನ್ನಾಗಿ ಗೊತ್ತು. ಯೆಹೋವನಿಗೆ ತನ್ನ ಜನರ ಮೇಲೆ ಪ್ರೀತಿ ಇದೆ. ಅದಕ್ಕೇ “ಮಾಗೋಗ್‌ ದೇಶದ ಗೋಗ” ದೇವಜನ್ರ ಮೇಲೆ ಆಕ್ರಮಣ ಮಾಡೋಕೆ ಬರುವಾಗ ಯೆಹೋವನು ಅವರನ್ನ ರಕ್ಷಿಸ್ತಾನೆ. ನಮಗೆ ಜನ್ರ ಮೇಲೆ ಪ್ರೀತಿಯಿದೆ. ಅದಕ್ಕೆ ನಾವು, ‘ದೇವಜನ್ರನ್ನ ದ್ವೇಷಿಸುವವ್ರನ್ನ ದೇವರು ನಾಶಮಾಡ್ತಾನೆ’ ಅಂತ ನಮ್ಮಿಂದಾದಷ್ಟು ಹೆಚ್ಚು ಜನ್ರಿಗೆ ಹೇಳ್ತಾ ಇರ್ತೀವಿ.—ಯೆಹೆ. 38:1–39:20; 2 ಥೆಸ. 1:6, 7.

18 ಅಧ್ಯಾಯ 1920 ಮತ್ತು 21: ಜೀವಜಲದ ನದಿಯ ಬಗ್ಗೆ ಮತ್ತು ದೇಶಗಳನ್ನ ಹಂಚಿಕೊಡೋ ದರ್ಶನಗಳ ಬಗ್ಗೆ ನೋಡಿದ್ವಿ. ಇದ್ರಿಂದ ಯೆಹೋವನಿಗೆ ತನ್ನ ಜನ್ರ ಮೇಲೆ ಎಷ್ಟು ಪ್ರೀತಿಯಿದೆ ಅನ್ನೋದನ್ನ ಕಲಿತ್ವಿ. ಯೆಹೋವನು ತನ್ನ ಮಗನನ್ನೇ ಕೊಟ್ಟಿದ್ರಿಂದ ನಮ್ಗೆ ಏನೆಲ್ಲಾ ಆಶೀರ್ವಾದಗಳು ಸಿಗಲಿವೆ ಅನ್ನೋದನ್ನ ಈ ದರ್ಶನಗಳಿಂದ ತಿಳ್ಕೊಂಡ್ವಿ. ಈ ರೀತಿಯಲ್ಲಿ ನಮಗೆ ಪ್ರೀತಿ ತೋರಿಸಿದ್ರಿಂದ ನಮ್ಮ ಪಾಪಗಳಿಗೆ ಕ್ಷಮೆ ಸಿಗುತ್ತೆ. ಮುಂದೆ ನಾವು ಪರಿಪೂರ್ಣರಾಗಿ ಆತನ ಕುಟುಂಬದ ಭಾಗವಾಗ್ತೇವೆ. ನಾವು ಸಹ ಬೇರೆಯವ್ರಿಗೆ ಇದೇ ರೀತಿ ಪ್ರೀತಿಯನ್ನ ತೋರಿಸಬಹುದು. ಹೇಗಂದ್ರೆ, ಯೆಹೋವನು ತನ್ನ ಮಗನ ಮೇಲೆ ನಂಬಿಕೆ ಇಡುವವ್ರಿಗೆ ಸುಂದರ ಭವಿಷ್ಯ ಕೊಡ್ತಾನೆ ಅಂತ ತಿಳಿಸೋ ಮೂಲಕನೇ.—ಯೆಹೆ. 45:1-7; 47:1–48:35; ಪ್ರಕ. 21:1-4; 22:17.

ಸಾವಿರ ವರ್ಷದ ಆಳ್ವಿಕೆಯ ನಂತರ ದೀನತೆಯ ಒಂದು ಸುಂದರ ಕ್ರಿಯೆ

19. ಸಾವಿರ ವರ್ಷದ ಆಳ್ವಿಕೆಯಲ್ಲಿ ಯೇಸು ಏನು ಮಾಡ್ತಾನೆ? (“ಕೊನೇ ಪರೀಕ್ಷೆಯ ಸಮಯದಲ್ಲಿ . . . ” ಅನ್ನೋ ಚೌಕ ನೋಡಿ.)

19 ತೀರಿಹೋಗಿರೋ ಕೋಟ್ಯಾಂತರ ಜನ್ರನ್ನ ಯೆಹೋವ ದೇವರು ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲಿ ಜೀವಂತವಾಗಿ ಎಬ್ಬಿಸಲಿದ್ದಾನೆ. ‘ಶತ್ರು ಆಗಿರೋ ಸಾವು’ ಕೊಟ್ಟಿರೋ ನೋವನ್ನ ತೆಗೆದುಹಾಕಲಿದ್ದಾನೆ. (1 ಕೊರಿಂ. 15:26; ಮಾರ್ಕ 5:38-42; ಅ. ಕಾ. 24:15) ಮನುಷ್ಯರು ತುಂಬ ಕಷ್ಟ, ನೋವು, ನರಳಾಟನ ಅನುಭವಿಸಿದ್ದಾರೆ. ಆದ್ರೆ ದೇವರ ಆಳ್ವಿಕೆಯಲ್ಲಿ ಅದೆಲ್ಲಾ ಒಂದು ಹಳೇ ಕಥೆಯಾಗುತ್ತೆ. ಯೇಸು ಕ್ರಿಸ್ತನು ಪ್ರತಿಯೊಂದು ತಲೆಮಾರಿನ ಜನ್ರನ್ನ ಜೀವಂತವಾಗಿ ಎಬ್ಬಿಸುವಾಗ ಒಂದು ಸುಂದರವಾದ ಹೊಸ ಅಧ್ಯಾಯವೇ ಶುರುವಾಗುತ್ತೆ. ಯೇಸು ಕ್ರಿಸ್ತನು ತನ್ನ ಬಿಡುಗಡೆಯ ಬಲಿಯ ಮೂಲಕ ಕಾಯಿಲೆ, ಯುದ್ಧ, ಬರಗಾಲ ಇವುಗಳಿಂದ ಆದ ಎಲ್ಲಾ ಕೆಟ್ಟ ಪರಿಣಾಮಗಳನ್ನ ತೆಗೆದುಹಾಕ್ತಾನೆ. ಅಷ್ಟೇ ಅಲ್ಲ ನಮ್ಮೆಲ್ಲರ ದುಃಖಕ್ಕೆ ಮೂಲ ಕಾರಣವಾದ ಆದಾಮನಿಂದ ಪಡ್ಕೊಂಡ ಪಾಪವನ್ನ ಬೇರು ಸಮೇತ ಕಿತ್ತು ಹಾಕ್ತಾನೆ. (ರೋಮ. 5:18, 19) ಯೇಸು ಕ್ರಿಸ್ತನು “ಸೈತಾನ ಹಾಳುಮಾಡಿರೋ ಕೆಲಸಗಳನ್ನ” ಸಂಪೂರ್ಣವಾಗಿ ಸರಿಮಾಡ್ತಾನೆ. (1 ಯೋಹಾ. 3:8) ಆಮೇಲೆ ಏನಾಗುತ್ತೆ?

ಜೀವಂತವಾಗಿ ಎದ್ದು ಬರೋರಿಗೆ ಹೊಸ ಜೀವನ ಕಾದಿದೆ

20. ಯೇಸು ಮತ್ತು 1,44,000 ರಾಜರು ಹೇಗೆ ದೀನತೆ ತೋರಿಸ್ತಾರೆ? ವಿವರಿಸಿ. (ಆರಂಭದ ಚಿತ್ರ ನೋಡಿ.)

20 ಒಂದನೇ ಕೊರಿಂಥ 15:24-28 ಓದಿ. ಯೆಹೋವ ದೇವರು ಉದ್ದೇಶಿಸಿದಂತೆ ಇಡೀ ಭೂಮಿ ಸುಂದರ ಪರದೈಸಾಗುತ್ತೆ. ಆಗ ಮಾನವರೆಲ್ಲರೂ ಪರಿಪೂರ್ಣರಾಗ್ತಾರೆ. ನಂತ್ರ ಯೇಸು ಮತ್ತು 1,44,000 ಸಹರಾಜರು, ದೀನತೆಯ ಒಂದು ಸುಂದರ ಕ್ರಿಯೆಯನ್ನ ಮಾಡ್ತಾರೆ. ಅದೇನಂದ್ರೆ ಅವರು ಆಳ್ವಿಕೆಯನ್ನ ಯೆಹೋವ ದೇವರಿಗೆ ವಾಪಸ್‌ ಕೊಡ್ತಾರೆ. ಅವರು ಸಾವಿರ ವರ್ಷ ಆಳ್ವಿಕೆ ಮಾಡಿರೋದಾದ್ರೂ ತಮಗಿರೋ ಅಧಿಕಾರವನ್ನ ಯೆಹೋವ  ದೇವರಿಗೆ ಮನಸಾರೆ ಕೊಟ್ಟುಬಿಡ್ತಾರೆ. ಆದ್ರೆ ಅವರ ಆಳ್ವಿಕೆಯಿಂದಾದ ಎಲ್ಲಾ ಪ್ರಯೋಜನಗಳೂ ಹಾಗೇ ಉಳಿಯುತ್ತವೆ.

ಕೊನೇ ಪರೀಕ್ಷೆ

21, 22. (ಎ) ಸಾವಿರ ವರ್ಷದ ಕೊನೆಯಲ್ಲಿ ಭೂಮಿ ಹೇಗಿರುತ್ತೆ ಮತ್ತು ಜನರು ಹೇಗಿರ್ತಾರೆ? (ಬಿ) ಯೆಹೋವನು ಸೈತಾನನನ್ನ ಮತ್ತು ದೆವ್ವಗಳನ್ನ ಯಾಕೆ ಬಿಡುಗಡೆ ಮಾಡ್ತಾನೆ?

21 ಆಮೇಲೆ ಯೆಹೋವನು ಏನು ಮಾಡ್ತಾನೆ ಗೊತ್ತಾ? ಆತನು ಸಾವಿರ ವರ್ಷ ಅಗಾಧ ಸ್ಥಳದಲ್ಲಿ ಬಂಧನದಲ್ಲಿದ್ದ ಸೈತಾನನನ್ನ ಮತ್ತು ಅವನ ದೆವ್ವಗಳನ್ನ ಬಿಡುಗಡೆಗೊಳಿಸ್ತಾನೆ. (ಪ್ರಕಟನೆ 20:1-3 ಓದಿ.) ಯೆಹೋವನಿಗೆ ಭೂಮಿಯಲ್ಲಿರೋ ತನ್ನ ಪ್ರಜೆಗಳ ಮೇಲೆ ಸಂಪೂರ್ಣ ಭರವಸೆ ಇರೋದ್ರಿಂದನೇ ಈ ರೀತಿ ಮಾಡ್ತಾನೆ. ಆ ಸಮಯದಲ್ಲಿ ಭೂಮಿ ಮತ್ತು ಅದ್ರಲ್ಲಿರೋ ಜನ್ರು ಸಂಪೂರ್ಣವಾಗಿ ಬದಲಾಗಿರ್ತಾರೆ. ಹರ್ಮಗೆದ್ದೋನಿಗೆ ಮುಂಚೆ ಇದ್ದ ಪರಿಸ್ಥಿತಿ ತರ ಇರಲ್ಲ. ಹರ್ಮಗೆದ್ದೋನಿಗೆ ಮುಂಚೆ ಹೆಚ್ಚಿನ ಜನ್ರು ಸೈತಾನನಿಗೆ ಮರುಳಾಗಿರ್ತಾರೆ. ಹಾಗಾಗಿ ಜನರ ಮಧ್ಯ ಐಕ್ಯತೆಯ ಬದಲು ದ್ವೇಷ ಮತ್ತು ಪೂರ್ವಾಗ್ರಹ ತುಂಬಿತುಳುಕಿರುತ್ತೆ. (ಪ್ರಕ. 12:9) ಆದ್ರೆ ಸಾವಿರ ವರ್ಷಗಳ ಆಳ್ವಿಕೆಯ ಕೊನೆಯಲ್ಲಿ ಎಲ್ಲಾ ಮಾನವರು ಐಕ್ಯರಾಗಿ ಒಂದೇ ಕುಟುಂಬದಂತೆ ಯೆಹೋವನನ್ನ ಮಾತ್ರ ಆರಾಧಿಸ್ತಾರೆ. ಇಡೀ ಭೂಮಿ ಸುಂದರ ತೋಟದ ತರ ಆಗುತ್ತೆ. ಎಲ್ಲಾ ಕಡೆ ಶಾಂತಿ ಇರುತ್ತೆ.

 22 ಇಂಥಾ ಸುಂದರ ವಾತಾವರಣದಲ್ಲಿ ಕ್ರೂರಿಯಾದ ಸೈತಾನ ಮತ್ತು ಅವನ ದೆವ್ವಗಳನ್ನ ಯಾಕೆ ಬಿಡ್ತಾರೆ? ಯಾಕಂದ್ರೆ ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲಿರೋ ತುಂಬ ಜನರಿಗೆ ಯೆಹೋವ ದೇವರ ಮೇಲೆ ನಿಷ್ಠೆ ಇದೆಯೋ ಇಲ್ವೋ ಅನ್ನೋ ಪರೀಕ್ಷೆ ಅಲ್ಲಿವರೆಗೂ ಆಗಿರಲ್ಲ. ಯೆಹೋವನ ಬಗ್ಗೆ ಗೊತ್ತಿಲ್ಲದೆನೇ ಸತ್ತುಹೋಗಿದ್ದ ಅನೇಕರು ಅಲ್ಲಿ ಜೀವಂತವಾಗಿ ಎದ್ದು ಬಂದಿರುತ್ತಾರೆ. ಯೆಹೋವನು ಅವರ ಜೀವನಕ್ಕೆ ಬೇಕಾದ ಪ್ರತಿಯೊಂದನ್ನೂ ಕೊಟ್ಟಿರ್ತಾನೆ. ಅವರ ಆಧ್ಯಾತ್ಮಿಕ ಅಗತ್ಯಗಳನ್ನ ಪೂರೈಸಿರ್ತಾನೆ. ಅವರು ಒಳ್ಳೇ ಜನ್ರ ಜೊತೆ ಇರೋದ್ರಿಂದ ಕೆಟ್ಟ ಪ್ರಭಾವವನ್ನ ಎದುರಿಸಿರಲ್ಲ. ಯೆಹೋವನನ್ನ ಆರಾಧಿಸುವ, ಆತನ ಸೇವೆ ಮಾಡುವ, ಪ್ರೀತಿಸುವ ಜನ್ರ ಜೊತೆಯಲ್ಲೇ ಇರ್ತಾರೆ. ಹಾಗಾಗಿ ಸೈತಾನ ಯೋಬನ ಮೇಲೆ ಹಾಕಿದ ಸವಾಲನ್ನೇ ಅವರ ಮೇಲೆನೂ ಹಾಕಬಹುದು. ಯೆಹೋವನು ಜನ್ರನ್ನ ಆಶೀರ್ವದಿಸಿದಕ್ಕೆ, ಸಂರಕ್ಷಿಸಿದಕ್ಕೆನೇ ಅವರು ಆತನನ್ನ ಆರಾಧಿಸ್ತಿದ್ದಾರೆ ಅಂತ ಸೈತಾನ ಹೇಳಬಹುದು. (ಯೋಬ 1:9, 10) ಹಾಗಾಗಿ ಅವರಿಗೆ ಒಂದು ಪರೀಕ್ಷೆಯಾಗಬೇಕು. ಅದಕ್ಕೆ ಯೆಹೋವನು ಜನ್ರಿಗೆ, ತಮ್ಮ ನಂಬಿಗಸ್ತಿಕೆನ ತೋರಿಸೋಕೆ ಅವಕಾಶ ಕೊಡ್ತಾನೆ. ಯಾರು ತನ್ನನ್ನ ಪ್ರೀತಿಯ ತಂದೆ, ವಿಶ್ವದ ರಾಜ ಅಂತ ಒಪ್ಪಿಕೊಂಡು ನಿಷ್ಠರಾಗಿರ್ತಾರೋ  ಅವರ ಹೆಸರನ್ನ ದೇವರು ಜೀವದ ಪುಸ್ತಕದಲ್ಲಿ ಶಾಶ್ವತವಾಗಿ ಬರಿತಾನೆ.—ಪ್ರಕ. 20:12, 15.

23. ಪ್ರತಿಯೊಬ್ಬರೂ ಯಾವ ಪರೀಕ್ಷೆಯನ್ನ ಎದುರಿಸಲಿದ್ದಾರೆ?

23 ಮನುಷ್ಯರನ್ನ ದೇವರಿಂದ ದೂರ ಮಾಡಲು ಸೈತಾನನಿಗೆ ಸ್ವಲ್ಪ ಸಮಯಕ್ಕೆ ಒಂದು ಅವಕಾಶ ಸಿಗುತ್ತೆ. ಆ ಪರೀಕ್ಷೆ ಹೇಗಿರುತ್ತೆ? ಅದು ಆದಾಮನಿಗೆ ಮತ್ತು ಹವ್ವಳಿಗೆ ಆದ ಪ್ರಲೋಭನೆ ತರನೇ ಇರುತ್ತೆ. ಆಗ, ‘ನಾನು ಯೆಹೋವ ದೇವರ ಮಟ್ಟಗಳನ್ನ ಸ್ವೀಕರಿಸಿ, ಆತನ ಆಳ್ವಿಕೆಯನ್ನ ಬೆಂಬಲಿಸಿ ಆತನನ್ನೇ ಆರಾಧಿಸ್ತೇನಾ? ಅಥ್ವಾ ಸೈತಾನನನ್ನ ಬೆಂಬಲಿಸಿ ದೇವರ ವಿರುದ್ಧ ದಂಗೆಯೇಳ್ತೇನಾ?’ ಅಂತ ತೋರಿಸೋ ಅವಕಾಶ ಪ್ರತಿಯೊಬ್ಬರಿಗೂ ಸಿಗುತ್ತೆ.

24. ದಂಗೆಯೇಳೋರನ್ನ ಯಾಕೆ ಗೋಗ್‌ ಮತ್ತು ಮಾಗೋಗ್‌ ಅಂತ ಕರೆಯಲಾಗಿದೆ?

24 ಪ್ರಕಟನೆ 20:7-10 ಓದಿ. ಸಾವಿರ ವರ್ಷದ ಕೊನೆಯಲ್ಲಿ ಯಾರು ದೇವರ ವಿರುದ್ಧ ದಂಗೆಯೇಳ್ತಾರೋ ಅವರನ್ನ “ಗೋಗ್‌ ಮತ್ತು ಮಾಗೋಗ್‌” ಅಂತ ಕರೆಯಲಾಗಿದೆ ಅನ್ನೋದನ್ನ ಗಮನಿಸಿ. ಯಾಕಂದ್ರೆ ಇವರು, ಮಹಾಸಂಕಟದ ಸಮಯದಲ್ಲಿ ದೇವಜನರ ಮೇಲೆ ಆಕ್ರಮಣ ಮಾಡುವ ‘ಮಾಗೋಗ್‌ ದೇಶದ ಗೋಗನ’ ತರನೇ ನಡ್ಕೊಳ್ತಾರೆ. ಮಹಾಸಂಕಟದ ಸಮಯದಲ್ಲಿ ಯೆಹೋವ ದೇವರ ಆಳ್ವಿಕೆಯನ್ನ ಎದುರಿಸುವ ದೇಶಗಳ ಗುಂಪೇ ಈ “ಮಾಗೋಗ್‌ ದೇಶದ ಗೋಗ” ಆಗಿದ್ದಾನೆ. (ಯೆಹೆ. 38:2) ಅದೇ ತರ, ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲಿ ದೇವರ ವಿರುದ್ಧ ದಂಗೆಯೇಳುವವರನ್ನ ‘ದೇಶಗಳು’ ಅಂತ ಕರೆಯಲಾಗಿದೆ. ಆ ಸಾವಿರ ವರ್ಷಗಳ ಸಮಯದಲ್ಲಿ ಬೇರೆಬೇರೆ ದೇಶಗಳು ಅಂತ ಇರಲ್ಲ. ಎಲ್ಲಾ ಜನ್ರು ದೇವರ ಆಳ್ವಿಕೆಯ ಅಥ್ವಾ ಸರ್ಕಾರದ ಪ್ರಜೆಗಳಾಗಿ ಒಂದೇ ದೇಶದವ್ರ  ತರ ಇರ್ತಾರೆ. ಹಾಗಿರುವಾಗ ಈ ದಂಗೆಕೋರರನ್ನ ಗೋಗ್‌, ಮಾಗೋಗ್‌ ಮತ್ತು ‘ದೇಶಗಳು’ ಅಂತ ಯಾಕೆ ಕರೆಯಲಾಗಿದೆ? ಭವಿಷ್ಯವಾಣಿಯಲ್ಲಿ ತಿಳಿಸಲಾಗಿರೋ ಈ ಹೆಸರುಗಳು ಸೈತಾನನು ಆ ಸಮಯದಲ್ಲೂ ದೇವಜನರ ಮಧ್ಯ ಒಡಕನ್ನ ತರೊದ್ರಲ್ಲಿ ಯಶಸ್ವಿಯಾಗ್ತಾನೆ ಅನ್ನೋದನ್ನ ಸೂಚಿಸುತ್ತೆ. ಹಾಗಂತ ಅಲ್ಲಿ ಯಾರನ್ನೂ ಸೈತಾನನ ಪಕ್ಷವಹಿಸಬೇಕಂತ ಒತ್ತಾಯ ಮಾಡಲಾಗಲ್ಲ. ಪ್ರತಿಯೊಬ್ಬ ಪರಿಪೂರ್ಣ ವ್ಯಕ್ತಿನೂ ತನ್ನ ಸ್ವಂತ ನಿರ್ಣಯ ಮಾಡ್ತಾನೆ.

ದಂಗೆ ಏಳುವವರನ್ನ ಗೋಗ್‌ ಮತ್ತು ಮಾಗೋಗ್‌ ಅಂತ ಕರೆಯಲಾಗಿದೆ (ಪ್ಯಾರ 24 ನೋಡಿ)

25, 26. ಎಷ್ಟು ಜನ ಸೈತಾನನ ಜೊತೆ ಸೇರ್ತಾರೆ? ಅವ್ರಿಗೆ ಏನಾಗುತ್ತೆ?

25 ಸೈತಾನನ ಜೊತೆ ಎಷ್ಟು ಜನ ಸೇರ್ತಾರೆ? ದಂಗೆಯೇಳುವವರ ಸಂಖ್ಯೆ ಸಮುದ್ರದ ಮರಳಿನಷ್ಟಿರುತ್ತೆ ಅಂತ ಬೈಬಲ್‌ ತಿಳಿಸುತ್ತೆ. ಮಾನವಕುಲದಲ್ಲಿ ಹೆಚ್ಚಿನವರು ದಂಗೆಯೇಳ್ತಾರೆ ಅನ್ನೋದು ಇದ್ರ ಅರ್ಥನಾ? ಖಂಡಿತ ಅಲ್ಲ. ಅದನ್ನ ನಾವು ಹೇಗೆ ಹೇಳ್ಬಹುದು? ನಾವೀಗ ಅಬ್ರಹಾಮನಿಗೆ ಯೆಹೋವ ದೇವರು ಕೊಟ್ಟ ಮಾತಿನ ಬಗ್ಗೆ ನೋಡೋಣ. ಯೆಹೋವನು ಅಬ್ರಹಾಮನಿಗೆ, ಅವನ ಸಂತತಿಯನ್ನ “ಸಮುದ್ರದ ತೀರದಲ್ಲಿರೋ ಮರಳಿನ ಕಣಗಳ ತರ ಲೆಕ್ಕ ಇಲ್ಲದಷ್ಟು ಮಾಡ್ತೀನಿ” ಅಂತ ಹೇಳಿದನು. (ಆದಿ. 22:17, 18) ಆದ್ರೆ ಆ ಸಂತತಿಯ ಒಟ್ಟು ಸಂಖ್ಯೆ 1,44,001 ಆಗಿದೆ. (ಗಲಾ. 3:16, 29) ಈ ಸಂಖ್ಯೆ ದೊಡ್ಡ ಸಂಖ್ಯೆ ಆಗಿದ್ರೂ, ಇಡೀ ಮಾನವಕುಲದ ಸಂಖ್ಯೆ ಮುಂದೆ ಇದು ಚಿಕ್ಕ ಸಂಖ್ಯೆಯಾಗಿದೆ. ಅದೇ ರೀತಿಯಲ್ಲಿ ಸೈತಾನನ ಜೊತೆ ಸೇರುವವರ ಸಂಖ್ಯೆ ದೊಡ್ಡದಾಗಿರಬಹುದು. ಆದ್ರೆ ನಂಬಿಗಸ್ತ ಸೇವಕರಿಗೆ ಹೋಲಿಸಿದರೆ ಅವರ ಸಂಖ್ಯೆ ಚಿಕ್ಕದಾಗಿರುತ್ತೆ. ಅವರು ನಿಷ್ಠಾವಂತ ದೇವಸೇವಕರನ್ನ ನಾಶಮಾಡೋಕೆ ಸಾಧ್ಯನೇ ಇಲ್ಲ.

 26 ಯಾರೆಲ್ಲಾ ಸೈತಾನ ಮತ್ತು ಅವನ ದೆವ್ವಗಳ ಜೊತೆ ಸೇರಿ ಅಹಂಕಾರದಿಂದ ದಂಗೆಯೇಳ್ತಾರೋ, ಅವರೆಲ್ಲರೂ ಸಂಪೂರ್ಣವಾಗಿ ನಾಶ ಆಗ್ತಾರೆ. ಅವರ ತಪ್ಪು ನಿರ್ಧಾರ ಮತ್ತು ಅದರ ಕೆಟ್ಟ ಪರಿಣಾಮಗಳು ಸದಾಕಾಲಕ್ಕೂ ಎಚ್ಚರಿಕೆಯ ಪಾಠವಾಗಿರುತ್ತವೆ.—ಪ್ರಕ. 20:10.

27-29. ಕೊನೇ ಪರೀಕ್ಷೆಯನ್ನ ಜಯಿಸಿದವ್ರಿಗೆ ಏನು ಸಿಗುತ್ತೆ?

27 ಆದ್ರೆ ಯಾರು ಕೊನೇ ಪರೀಕ್ಷೆನ ಪಾರಾಗ್ತಾರೋ ಅವರ ಹೆಸರುಗಳನ್ನ “ಜೀವದ ಪುಸ್ತಕದಲ್ಲಿ” ಶಾಶ್ವತವಾಗಿ ಬರೆಯಲಾಗುತ್ತೆ. (ಪ್ರಕ. 20:15) ನಂತ್ರ ಯೆಹೋವನ ನಿಷ್ಠಾವಂತ ಮಕ್ಕಳು ಒಂದು ಕುಟುಂಬದಂತೆ ಐಕ್ಯವಾಗಿ ನಮ್ಮೆಲ್ಲರ ಆರಾಧನೆಯನ್ನ ಪಡೆಯೋಕೆ ಅರ್ಹನಾಗಿರೋ ಯೆಹೋವನನ್ನ ಆರಾಧಿಸ್ತಾರೆ.

28 ಆ ಸುಂದರವಾದ ಭವಿಷ್ಯದ ಬಗ್ಗೆ ಸ್ವಲ್ಪ ಯೋಚಿಸಿ ನೋಡಿ. ನಮ್ಗೆ ಖುಷಿ ತರೋ ಕೆಲ್ಸ ಇರುತ್ತೆ. ನಮ್ಮನ್ನ ಪ್ರೀತಿಸುವ ಸ್ನೇಹಿತರಿರ್ತಾರೆ. ನಮಗಾಗಲಿ, ನಾವು ಪ್ರೀತಿಸುವವರಿಗಾಗಲಿ ಯಾವುದೇ ಕಷ್ಟ ಇರಲ್ಲ. ಆಗ ನಮ್ಮಲ್ಲಿ ಒಂಚೂರೂ ಪಾಪ ಇಲ್ಲದಿರೋ ಕಾರಣ ಯೆಹೋವ ದೇವರ ಮುಂದೆ ನೀತಿವಂತರಾಗಿ ನಿಲ್ಲೋಕಾಗುತ್ತೆ. ಪ್ರತಿಯೊಬ್ಬರೂ ಯೆಹೋವ ದೇವರ ಜೊತೆ ಆಪ್ತ ಸಂಬಂಧ ಬೆಳೆಸಿಕೊಳ್ಳೋಕಾಗುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿ ಶುದ್ಧ ಆರಾಧನೆ ಪರಿಪೂರ್ಣವಾಗಿ, ಮಹತ್ತಾದ ರೀತಿಯಲ್ಲಿ ಪುನಃಸ್ಥಾಪಿಸಲ್ಪಟ್ಟಿರುತ್ತೆ.

ನೀವು ಪರಿಪೂರ್ಣರಾಗುವಾಗ ನಿಮ್ಮಲ್ಲಿ ಒಂಚೂರೂ ಪಾಪ ಇರಲ್ಲ. ಯೆಹೋವನ ದೃಷ್ಟಿಯಲ್ಲಿ ನೀತಿವಂತರಾಗಿರ್ತೀರ (ಪ್ಯಾರ 28 ನೋಡಿ)

29 ಶುದ್ಧ ಆರಾಧನೆ ಸಂಪೂರ್ಣವಾಗಿ ಪುನಃಸ್ಥಾಪಿಸಲ್ಪಟ್ಟ ಆ ಮಹಾ ದಿನ ನೋಡೋಕೆ ನೀವು ಅಲ್ಲಿ ಇರ್ತೀರಾ? ಯೆಹೆಜ್ಕೇಲನ ಪುಸ್ತಕದಲ್ಲಿ ಹೇಳಿರುವ ಮೂರು ಪ್ರಾಮುಖ್ಯ ವಿಷ್ಯಗಳನ್ನ ನಾವು ಅನ್ವಯಿಸೋದಾದ್ರೆ ಖಂಡಿತ ಇರ್ತೇವೆ. ನಾವು ಯೆಹೋವನಿಗೆ ಮಾತ್ರ ಸಂಪೂರ್ಣ ಭಕ್ತಿ ತೋರಿಸಬೇಕು. ಶುದ್ಧ ಆರಾಧನೆ ಮಾಡುತ್ತಾ ಐಕ್ಯರಾಗಿರಬೇಕು. ಒಬ್ರಿಗೊಬ್ರು  ಪ್ರೀತಿ ತೋರಿಸಬೇಕು. ಯೆಹೆಜ್ಕೇಲನ ಪುಸ್ತಕದಿಂದ ನಾವು ಇನ್ನೊಂದು ಪ್ರಾಮುಖ್ಯವಾದ ವಿಷ್ಯವನ್ನ ಕೂಡ ಕಲಿಬಹುದು. ಅದೇನು?

ಸ್ವರ್ಗ ಮತ್ತು ಭೂಮಿಯಲ್ಲಿರೋ ಪ್ರತಿಯೊಂದು ಸೃಷ್ಟಿ ಒಟ್ಟಾಗಿ ಶುದ್ಧ ಆರಾಧನೆಯನ್ನ ಮಾಡುವಾಗ ಎಷ್ಟು ಖುಷಿ ಇರುತ್ತೆ ಅಂತ ಸ್ವಲ್ಪ ಯೋಚಿಸಿ! (ಪ್ಯಾರ 27-29 ನೋಡಿ)

“ನಾನೇ ಯೆಹೋವ ಅಂತ ಗೊತ್ತಾಗುತ್ತೆ”

30, 31. “ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ” ಅನ್ನೋ ಮಾತು ನೆರವೇರುವಾಗ (ಎ) ಶತ್ರುಗಳಿಗೆ ಏನಾಗುತ್ತೆ? (ಬಿ) ದೇವ ಜನರಿಗೆ ಏನಾಗುತ್ತೆ?

30 “ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ” ಅನ್ನೋ ಮಾತು ಯೆಹೆಜ್ಕೇಲನ ಪುಸ್ತಕದಲ್ಲಿ ತುಂಬ ಸಲ ಕಂಡುಬರುತ್ತೆ. (ಯೆಹೆ. 6:10; 39:28) ಯೆಹೋವನು ತನ್ನ ಶತ್ರುಗಳ ವಿರುದ್ಧ ಯುದ್ಧ ಮಾಡಿ ಅವರನ್ನ ನಾಶ ಮಾಡುವಾಗ್ಲೇ ಅವರಿಗೆ ಈ ಮಾತು ಅರ್ಥ ಆಗುತ್ತೆ. ಆಗ ಅವರು ಯೆಹೋವ ಅನ್ನೋ ದೇವ್ರಿದ್ದಾನೆ ಅಂತ ಒಪ್ಕೊಬೇಕಾಗುತ್ತೆ. ಅಷ್ಟೇ ಅಲ್ಲ, ಆತನ ಹೆಸರಿನ ಅರ್ಥವನ್ನೂ ಅವರು ತಿಳ್ಕೊಳ್ತಾರೆ. ಅದೇನಂದ್ರೆ ‘ಆತನು ಆಗುವಂತೆ ಮಾಡುತ್ತಾನೆ.’ “ಸೈನ್ಯಗಳ ದೇವರಾದ ಯೆಹೋವ” ‘ಶೂರಸೈನಿಕನಾಗಿ’ ಅವರ ವಿರುದ್ಧ ಯುದ್ಧ ಮಾಡ್ತಾನೆ. (1 ಸಮು. 17:45; ವಿಮೋ. 15:3) ಯೆಹೋವನ ಉದ್ದೇಶವನ್ನ ನೆರವೇರಿಸದಂತೆ ತಡಿಯೋಕೆ ಯಾರಿಂದಲೂ, ಯಾವುದರಿಂದಲೂ ಆಗಲ್ಲ ಅಂತ ಅವರಿಗೆ ಆಗ ಚೆನ್ನಾಗಿ ಅರ್ಥ ಆಗುತ್ತೆ. ಆದ್ರೆ ಅದ್ರಿಂದ ಅವರಿಗೆ ಏನೂ ಪ್ರಯೋಜ್ನ ಆಗಲ್ಲ. ಯಾಕಂದ್ರೆ ಕಾಲ ಮಿಂಚಿ ಹೋಗಿರುತ್ತೆ.

31 “ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ” ಅನ್ನೋ ಮಾತು ನೆರವೇರಿದಾಗ ಯೆಹೋವನ ಜನ್ರಿಗೆ ಶಾಂತಿ ಮತ್ತು ಶಾಶ್ವತ ಜೀವನ ಸಿಗುತ್ತೆ. ಯೆಹೋವ ದೇವರು ಮನುಷ್ಯರನ್ನ ಸೃಷ್ಟಿ ಮಾಡಿದಾಗ ಏನನ್ನ ಉದ್ದೇಶಿಸಿದನೋ ಅದನ್ನ ನೆರವೇರಿಸ್ತಾನೆ. ಅಂದ್ರೆ ತನ್ನ ಜನ್ರು, ಆತನ ಗುಣಗಳನ್ನ ಪರಿಪೂರ್ಣವಾಗಿ ತೋರಿಸೋ ಹಾಗೆ ಮಾಡ್ತಾನೆ. (ಆದಿ. 1:26) ಯೆಹೋವ ದೇವರು ನಮ್ಮ ಪ್ರೀತಿಯ ತಂದೆ ಮತ್ತು ನಮ್ಮನ್ನ ಸಂರಕ್ಷಿಸುವ ಕುರುಬನಾಗಿದ್ದಾನೆ. ಬಲುಬೇಗನೆ ಯೆಹೋವನು ನಮ್ಮ ರಾಜನಾಗಿ ಜಯವನ್ನ ಪಡೆಯುತ್ತಾನೆ. ಆ ದಿನ ಬರೋದಕ್ಕಿಂತ ಮುಂಚೆ ನಾವು ಯೆಹೆಜ್ಕೇಲನ ಪುಸ್ತಕದಿಂದ ಕಲಿತ ಪಾಠಗಳನ್ನ ಅನ್ವಯಿಸೋಣ. ಯೆಹೋವನು ಯಾರು? ಆತನು ಯಾವ ರೀತಿಯ ದೇವರಾಗಿದ್ದಾನೆ? ಅಂತ ನಮಗೆ ಅರ್ಥ ಆಗಿದೆ ಅಂತ ತೋರಿಸಿಕೊಡೋಣ. ಹಾಗೆ ಮಾಡೋದಾದ್ರೆ ನಾವು ಮಹಾಸಂಕಟದ ಸಮಯದಲ್ಲಿ ಬರುವ ನಾಶನದ ದಾಳಿಯನ್ನ ನೋಡಿ ಹೆದರಲ್ಲ. ಬದ್ಲಿಗೆ ನಮ್ಮ ತಲೆಯನ್ನ ಮೇಲಕ್ಕೆತ್ತಿ ನಮ್ಮ ಬಿಡುಗಡೆ ಹತ್ರ ಆಗಿದೆ ಅಂತ ಧೈರ್ಯದಿಂದ ಇರ್ತೇವೆ. (ಲೂಕ 21:28) ಅಲ್ಲಿವರೆಗೆ ನಾವು ಯೆಹೋವ ದೇವರ ಬಗ್ಗೆ ಕಲಿಸುತ್ತಾ, ಆತನನ್ನ ಪ್ರೀತಿಸೋಕೆ ಜನ್ರಿಗೆ ಸಹಾಯ ಮಾಡೋಣ. ಯಾಕಂದ್ರೆ ಆತನೊಬ್ಬನೇ ಎಲ್ಲರ ಆರಾಧನೆಗೆ ಅರ್ಹನಾಗಿದ್ದಾನೆ ಮತ್ತು ಯೆಹೋವ ಅನ್ನೋ ಹೆಸರು ಬೇರೆಲ್ಲದಕ್ಕಿಂತ ಅತ್ಯುನ್ನತವಾಗಿದೆ.—ಯೆಹೆ. 28:26.

^ ಪ್ಯಾರ. 5 ಇಲ್ಲಿ ಕೊಡಲಾಗಿರೋ ಅಧ್ಯಾಯಗಳು ಈ ಪುಸ್ತಕದ ಅಧ್ಯಾಯಗಳಾಗಿವೆ.