ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 14

“ಇದೇ ಆಲಯದ ನಿಯಮ”

“ಇದೇ ಆಲಯದ ನಿಯಮ”

ಯೆಹೆಜ್ಕೇಲ 43:12

ಮುಖ್ಯ ವಿಷಯ: ದೇವಾಲಯದ ದರ್ಶನದಿಂದ ಯೆಹೆಜ್ಕೇಲನ ಕಾಲದಲ್ಲಿದ್ದ ಜನರಿಗಿದ್ದ ಪಾಠ ಮತ್ತು ನಮಗಿರೋ ಪಾಠ

1, 2. (ಎ) ನಾವು ಹಿಂದಿನ ಅಧ್ಯಾಯದಲ್ಲಿ ಯೆಹೆಜ್ಕೇಲನ ದರ್ಶನದ ಬಗ್ಗೆ ಏನನ್ನ ಕಲಿತ್ವಿ? (ಬಿ) ಈ ಅಧ್ಯಾಯದಲ್ಲಿ ಯಾವ ಎರಡು ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

ಯೆಹೆಜ್ಕೇಲ ದರ್ಶನದಲ್ಲಿ ನೋಡಿದ್ದು ಪೌಲನು ನೂರಾರು ವರ್ಷಗಳ ನಂತರ ತಿಳಿಸಿದ ಆಧ್ಯಾತ್ಮಿಕ ಆಲಯವನ್ನಲ್ಲ ಅಂತ ಹಿಂದಿನ ಅಧ್ಯಾಯದಲ್ಲಿ ಕಲಿತ್ವಿ. ಯೆಹೋವ ದೇವರು ಶುದ್ಧ ಆರಾಧನೆಗಾಗಿ ಇಟ್ಟಿರುವ ಮಟ್ಟಗಳನ್ನ ದೇವಜನರು ಪಾಲಿಸೋದು ಯಾಕೆ ತುಂಬ ಪ್ರಾಮುಖ್ಯ ಅಂತ ಕಲಿಸಲಿಕ್ಕಾಗಿ ಯೆಹೋವನು ಈ ದರ್ಶನವನ್ನ ಕೊಟ್ಟನು ಅಂತಾನೂ ನೋಡಿದ್ವಿ. ಜನರು ಯೆಹೋವನ ಮಟ್ಟಗಳನ್ನ ಪಾಲಿಸೋದಾದ್ರೆ ಮಾತ್ರ ಪುನಃ ಆತನ ಜೊತೆ ಆಪ್ತ ಸಂಬಂಧವನ್ನ ಪಡೆಯೋಕೆ ಸಾಧ್ಯ ಇತ್ತು. ಅದಕ್ಕೆ ಯೆಹೋವನು “ಇದೇ ಆಲಯದ ನಿಯಮ” ಅಂತ ಎರಡು ಸಲ ಒತ್ತಿ ಹೇಳಿದನು.—ಯೆಹೆಜ್ಕೇಲ 43:12 ಓದಿ.

2 ನಾವೀಗ ಇದ್ರ ಬಗ್ಗೆ ಇನ್ನೂ ಎರಡು ಪ್ರಶ್ನೆಗಳಿಗೆ ಉತ್ತರವನ್ನ ತಿಳ್ಕೊತೇವೆ. (1) ಶುದ್ಧ ಆರಾಧನೆಗಾಗಿ ಯೆಹೋವನು ಇಟ್ಟಿರೋ ಮಟ್ಟಗಳ ಬಗ್ಗೆ ಈ ದರ್ಶನದಿಂದ ಯೆಹೆಜ್ಕೇಲನ ಕಾಲದಲ್ಲಿದ್ದ ಯೆಹೂದ್ಯರು ಯಾವ ಪಾಠ ಕಲಿತಿರಬಹುದು? (2) ಕಷ್ಟಕರ ದಿನಗಳಲ್ಲಿ ಜೀವಿಸ್ತಿರೋ ನಾವು ಈ ದರ್ಶನದಿಂದ ಯಾವ ಪಾಠ ಕಲಿಬಹುದು? ನಾವು ಮೊದಲನೇ ಪ್ರಶ್ನೆಗೆ ಉತ್ರ ತಿಳ್ಕೊಂಡ್ರೆ ಎರಡನೇ ಪ್ರಶ್ನೆಗೆ ಉತ್ರ ತಿಳ್ಕೊಳ್ಳೋದು ಸುಲಭ.

 ದರ್ಶನದಿಂದ ಯೆಹೆಜ್ಕೇಲನ ಕಾಲದವ್ರಿಗಿದ್ದ ಪಾಠ

3. ದರ್ಶನದಲ್ಲಿ ದೇವರ ಆಲಯ ಎತ್ತರದ ಬೆಟ್ಟದ ಮೇಲೆ ಇರೋದ್ರ ಬಗ್ಗೆ ತಿಳುಕೊಂಡಾಗ ಜನರಿಗೆ ಯಾಕೆ ನಾಚಿಕೆಯಾಗಿರಬೇಕು?

3 ಮೊದಲನೇ ಪ್ರಶ್ನೆಗೆ ಉತ್ರ ತಿಳುಕೊಳ್ಳೋಕೆ ನಾವು ದರ್ಶನದಲ್ಲಿ ಇದ್ದ ಗಮನ ಸೆಳೆಯೋ ವಿಷ್ಯಗಳ ಬಗ್ಗೆ ನೋಡೋಣ. ಎತ್ತರವಾದ ಬೆಟ್ಟ. ಯೆಹೆಜ್ಕೇಲನ ದರ್ಶನದಲ್ಲಿದ್ದ ಬೆಟ್ಟದ ಬಗ್ಗೆ ತಿಳುಕೊಂಡಾಗ ಜನ್ರಿಗೆ ಯೆಶಾಯನು ಮುಂತಿಳಿಸಿದ ಪುನಃಸ್ಥಾಪನೆಯ ಭವಿಷ್ಯವಾಣಿ ನೆನಪಿಗೆ ಬಂದಿರಬೇಕು. (ಯೆಶಾ. 2:2) ಎತ್ತರವಾದ ಬೆಟ್ಟದ ಮೇಲಿರೋ ಯೆಹೋವನ ಆಲಯದಿಂದ ಜನರು ಏನನ್ನ ಕಲಿತಿರಬಹುದು? ಶುದ್ಧ ಆರಾಧನೆ ಬೇರೆಲ್ಲ ಆರಾಧನೆಗಿಂತ ಉನ್ನತವಾದದ್ದು, ಶ್ರೇಷ್ಠವಾದದ್ದು ಅಂತ ಕಲಿತಿರಬಹುದು. ಶುದ್ಧ ಆರಾಧನೆ ಎಲ್ಲದಕ್ಕಿಂತ ಉನ್ನತವಾಗಿದೆ. ಯಾಕಂದ್ರೆ ಅದನ್ನು ಏರ್ಪಾಡು ಮಾಡಿದ ದೇವರು ‘ಬೇರೆಲ್ಲ ದೇವರುಗಳಿಗಿಂತ ಎಷ್ಟೋ ಉನ್ನತನಾಗಿದ್ದಾನೆ.’ (ಕೀರ್ತ. 97:9) ಆದ್ರೆ ಜನ್ರು ಶುದ್ಧ ಆರಾಧನೆಗೆ ಉನ್ನತ ಸ್ಥಾನ ಕೊಡ್ತಿರಲಿಲ್ಲ. ನೂರಾರು ವರ್ಷಗಳಿಂದ ಜನ್ರು ಪದೇಪದೇ ಶುದ್ಧ ಆರಾಧನೆಯನ್ನ ತಿರಸ್ಕರಿಸಿದ್ರು, ಅದನ್ನ ಭ್ರಷ್ಟಗೊಳಿಸಿದ್ರು. ಅದಕ್ಕೆ ಯಾವುದೇ ಪ್ರಾಮುಖ್ಯತೆಯನ್ನ ಕೊಡದೇ ಅದ್ರ ಹೆಸ್ರಿನಲ್ಲಿ ಕೆಟ್ಟ ಕೆಲಸಗಳನ್ನ ಮಾಡಿದ್ರು. ಆದ್ರೆ ಈಗ ಯೆಹೋವನ ಆಲಯ ಅದಕ್ಕೆ ಸಿಗಬೇಕಾದ ಎಲ್ಲ ಮಹಿಮೆ, ಗೌರವದಿಂದ ಉನ್ನತಕ್ಕೆ ಏರಿಸಲ್ಪಡೋದನ್ನ ನೋಡುವಾಗ ಒಳ್ಳೇ ಹೃದಯದ ಜನ್ರಿಗೆ ಹಿಂದಿನ ವಿಷ್ಯಗಳು ನೆನಪಾಗಿ ಖಂಡಿತ ನಾಚಿಕೆ ಆಗಿರಬೇಕು.

4, 5. ದೇವಾಲಯದ ಎತ್ತರವಾದ ಬಾಗಿಲುಗಳಿಂದ ಜನರು ಯಾವ ಪಾಠ ಕಲಿತಿರಬೇಕು?

4 ದೊಡ್ಡ ಬಾಗಿಲುಗಳು. ದರ್ಶನದ ಆರಂಭದಲ್ಲಿ ಒಬ್ಬ ದೇವದೂತನು ಬಾಗಿಲುಗಳನ್ನ ಅಳೆಯೋದನ್ನ ಯೆಹೆಜ್ಕೇಲ ನೋಡಿದನು. ಆ ಬಾಗಿಲುಗಳು ಸುಮಾರು 100 ಅಡಿ ಎತ್ತರ ಇದ್ವು. (ಯೆಹೆ. 40:14) ಆ ಬಾಗಿಲುಗಳ ಹತ್ರ ಕಾವಲುಗಾರರ ಕೋಣೆಗಳಿದ್ದವು. ಆ ಬಾಗಿಲು ಮತ್ತು ಕೋಣೆಗಳ ಬಗ್ಗೆ ಜನ್ರು ಆಳವಾಗಿ ಯೋಚಿಸಿದಾಗ ಅದ್ರಿಂದ ಏನು ಕಲಿತ್ರು? ಇದ್ರ ಉತ್ರ ತಿಳ್ಕೊಳ್ಳೋಕೆ ಯೆಹೋವನು ಯೆಹೆಜ್ಕೇಲನಿಗೆ ಏನು ಹೇಳಿದನು ಅಂತ ಗಮನಿಸಿ. ಆತನು “ದೇವಾಲಯದ ಬಾಗಿಲಿಗೆ . . . ಜಾಗ್ರತೆಯಿಂದ ಗಮನಕೊಡು” ಅಂದನು. ಯಾಕೆ? ಯಾಕಂದ್ರೆ ಜನ್ರು ‘ಹೃದಯದಲ್ಲೂ ದೇಹದಲ್ಲೂ ಸುನ್ನತಿ ಆಗಿರದವರನ್ನ’ ದೇವರ ಪವಿತ್ರ ಆಲಯಕ್ಕೆ ಕರ್ಕೊಂಡು ಬರುತ್ತಿದ್ದರು. ಇದ್ರಿಂದ ‘ಅವರು ಯೆಹೋವನ ಆರಾಧನಾ ಸ್ಥಳವನ್ನ ಅಪವಿತ್ರ ಮಾಡಿದ್ರು.’—ಯೆಹೆ. 44:5, 7.

5 ‘ದೇಹದಲ್ಲಿ ಸುನ್ನತಿ ಆಗಿರದ’ ಜನ್ರು ಅಬ್ರಹಾಮನ ಕಾಲದಲ್ಲಿ ಯೆಹೋವನು ಕೊಟ್ಟ ನಿಯಮವನ್ನ ಪಾಲಿಸಲಿಲ್ಲ. (ಆದಿ. 17:9, 10; ಯಾಜ. 12:1-3) ಆದ್ರೆ ‘ಹೃದಯದಲ್ಲಿ ಸುನ್ನತಿ ಆಗಿರದ’ ಜನ್ರು ಅದಕ್ಕಿಂತ ದೊಡ್ಡ ತಪ್ಪನ್ನ ಮಾಡಿದ್ರು. ಅವ್ರು ಯೆಹೋವನ ಸಲಹೆ, ಮಾರ್ಗದರ್ಶನಗಳಿಗೆ ಕಿವಿಗೊಡದೆ ಹಠಮಾರಿಗಳಾಗಿ ದಂಗೆಯೆದ್ರು. ಇಂಥ ಜನ್ರನ್ನ ಯಾವತ್ತೂ ಪವಿತ್ರ ಆಲಯದೊಳಗೆ ಪ್ರವೇಶಿಸೋಕೆ ಬಿಡಬಾರದಿತ್ತು. ಯೆಹೋವನು ಕಪಟತನವನ್ನ ದ್ವೇಷಿಸ್ತಾನೆ. ಹಾಗಿದ್ರೂ ಆತನ ಜನರು ದೇವಾಲಯದಲ್ಲೇ ಕಪಟತನ ತುಂಬಿತುಳುಕೋಕೆ ಅವಕಾಶ ಮಾಡಿಕೊಟ್ಟಿದ್ರು. ಆದ್ರೆ ಇನ್ನು ಮುಂದೆ ಇಂಥ ಕೆಟ್ಟ ಕೆಲಸಗಳಿಗೆ ದೇವಾಲಯದಲ್ಲಿ ಯಾವುದೇ ಅವಕಾಶ ಇರಲ್ಲ ಅಂತ ದರ್ಶನದಲ್ಲಿದ್ದ ಬಾಗಿಲುಗಳು ಮತ್ತು ಕಾವಲು ಕೋಣೆಗಳು ತೋರಿಸಿಕೊಡುತ್ತಿದ್ದವು. ಯಾರು ಯೆಹೋವನ ಉನ್ನತ ಮಟ್ಟಗಳನ್ನ ಪಾಲಿಸ್ತಾರೋ ಅವರು ಮಾತ್ರ ದೇವಾಲಯದೊಳಗೆ ಪ್ರವೇಶಿಸಬೇಕಿತ್ತು. ಆಗ ಮಾತ್ರ ಯೆಹೋವನು ಜನರ ಆರಾಧನೆಯನ್ನ ಆಶೀರ್ವದಿಸಲಿದ್ದನು.

6, 7. (ಎ) ದೇವಾಲಯದ ಸುತ್ತ ಇದ್ದ ವಿಶಾಲ ಸ್ಥಳ ಮತ್ತು ಗೋಡೆಯನ್ನ ತೋರಿಸೋ ಮೂಲಕ ಯೆಹೋವನು ತನ್ನ ಜನರಿಗೆ ಯಾವ ಸಂದೇಶ ತಿಳಿಸಿದನು? (ಬಿ) ಯೆಹೋವನ ಜನರು ಆತನ ಆಲಯವನ್ನ ಹಿಂದೆ ಯಾವ ರೀತಿಯಲ್ಲಿ ಅಶುದ್ಧ ಮಾಡಿದ್ರು? (ಪಾದಟಿಪ್ಪಣಿ ನೋಡಿ.)

6 ಸುತ್ತಲಿನ ಗೋಡೆ. ದೇವಾಲಯದ ದರ್ಶನದಲ್ಲಿ ಕಾಣಿಸಿದ ಇನ್ನೊಂದು ಗಮನಾರ್ಹ ವಿಷ್ಯ ಏನಂದ್ರೆ, ಅದ್ರ ಸುತ್ತಲಿನ ಗೋಡೆ. ನಾಲ್ಕೂ ಬದಿಗಳಲ್ಲೂ 500 ಅಳತೆ ಕೋಲು ಅಂದ್ರೆ 5,100 ಅಡಿ ಅಥ್ವಾ ಸುಮಾರು 1.6 ಕಿ.ಮೀ. ಉದ್ದದ ಗೋಡೆಗಳಿದ್ವು ಅಂತ ಯೆಹೆಜ್ಕೇಲ ಹೇಳಿದ್ದಾನೆ. (ಯೆಹೆ. 42:15-20) ಆದ್ರೆ ದೇವಾಲಯದ ಕಟ್ಟಡ ಮತ್ತು ಅಂಗಳಗಳಿದ್ದ ಜಾಗ ಒಟ್ಟಾಗಿ ಚೌಕಾಕಾರದಲ್ಲಿತ್ತು. ಅದು ಯಾವುದೇ ದಿಕ್ಕಿನಿಂದ  ನೋಡಿದ್ರೂ 500 ಮೊಳ ಅಥ್ವಾ 850 ಅಡಿ ಉದ್ದ ಇತ್ತು. ಹಾಗಾದ್ರೆ ದೇವಾಲಯದ ಸುತ್ತ ವಿಸ್ತಾರವಾದ ಜಾಗ ಇತ್ತು ಮತ್ತು ಅದ್ರಿಂದಾಚೆ ಗೋಡೆ ಇತ್ತು. * ಆದ್ರೆ ಯಾಕೆ ಈ ರೀತಿ ಮಾಡಲಾಗಿತ್ತು?

7 ಯೆಹೋವನು, “ಈಗ ಅವರು ನನಗೆ ನಂಬಿಕೆ ದ್ರೋಹ ಮಾಡದಿರಲಿ ಮತ್ತು ಅವ್ರ ರಾಜರ ಶವಗಳನ್ನ ನನ್ನ ಮುಂದಿಂದ ತೆಗೆದು ದೂರ ಬಿಸಾಡಲಿ. ಆಗ ನಾನು ಅವ್ರ ಜೊತೆ ಶಾಶ್ವತವಾಗಿ ವಾಸಿಸ್ತೀನಿ” ಅಂತ ಹೇಳಿದನು. (ಯೆಹೆ. 43:9) ಇಲ್ಲಿ ರಾಜರ ಶವಗಳು ಅನ್ನೋದು ವಿಗ್ರಹಾರಾಧನೆಯನ್ನ ಸೂಚಿಸ್ತಿರಬೇಕು. ಹಾಗಾಗಿ ದರ್ಶನದಲ್ಲಿ ದೇವಾಲಯದ ಸುತ್ತಲಿರುವ ಆ ವಿಶಾಲವಾದ ಸ್ಥಳವನ್ನ ತೋರಿಸೋ ಮೂಲಕ ಯೆಹೋವ ದೇವರು ಒಂದರ್ಥದಲ್ಲಿ, ‘ಇಂಥ ಕೆಟ್ಟ ವಿಷ್ಯಗಳಿಂದ ದೂರವಾಗಿರಿ, ಅವುಗಳನ್ನ ನನ್ನ ದೇವಾಲಯದ ಹತ್ರ ತರಲೇಬೇಡಿ’ ಅಂತ ಹೇಳಿದ ಹಾಗಿತ್ತು. ಅವ್ರು ಯೆಹೋವ ದೇವರ ಮಾತಿನಂತೆ ಅವುಗಳಿಂದ ದೂರವಿದ್ರೆ ಯೆಹೋವನು ಅವ್ರ ಜೊತೆಯಲ್ಲಿದ್ದು ಅವ್ರನ್ನ ಆಶೀರ್ವದಿಸಲಿದ್ದನು.

8, 9. ಜವಾಬ್ದಾರಿ ಸ್ಥಾನದಲ್ಲಿದ್ದವ್ರಿಗೆ ಯೆಹೋವನು ಕೊಟ್ಟ ಬುದ್ಧಿವಾದದಿಂದ ಜನರು ಏನನ್ನ ಕಲಿತಿರಬಹುದು?

8 ಜವಾಬ್ದಾರಿ ಸ್ಥಾನದಲ್ಲಿದ್ದವ್ರಿಗೆ ಹೇಳಿದ ಬುದ್ಧಿಮಾತು. ಜವಾಬ್ದಾರಿ ಸ್ಥಾನದಲ್ಲಿರುವ ಪುರುಷರಿಗೆ ಯೆಹೋವನು ಪ್ರೀತಿಯಿಂದ ಆದ್ರೆ ಖಡಕ್ಕಾಗಿ ಬುದ್ಧಿವಾದ ಹೇಳಿದನು. ದೇವರು ಲೇವಿಯರನ್ನ ಖಂಡಿಸಿದನು. ಯಾಕಂದ್ರೆ ಜನ್ರು ಮೂರ್ತಿಗಳನ್ನ ಆರಾಧಿಸಿದಾಗ, ಲೇವಿಯರು ಸಹ ಯೆಹೋವನನ್ನ ಬಿಟ್ಟು ದೂರ ಹೋಗಿದ್ರು. ಆದ್ರೆ ಯೆಹೋವನು ಚಾದೋಕನ ವಂಶದವ್ರನ್ನ ಮೆಚ್ಚಿಕೊಂಡನು. ಯಾಕಂದ್ರೆ ‘ಇಸ್ರಾಯೇಲ್ಯರು ಯೆಹೋವನಿಂದ ದೂರ ಹೋಗಿದ್ದಾಗ ಅವ್ರು ಆರಾಧನಾ ಸ್ಥಳದ ಜವಾಬ್ದಾರಿಗಳನ್ನ ನೋಡಿಕೊಂಡಿದ್ರು.’ ಹೀಗೆ ಆತನು ಲೇವಿಯರ ಮತ್ತು ಚಾದೋಕನ ವಂಶದವ್ರ ನಡತೆಗೆ ತಕ್ಕಂತೆ ನ್ಯಾಯದಿಂದ, ಕರುಣೆಯಿಂದ ವ್ಯವಹರಿಸಿದನು. (ಯೆಹೆ. 44:10, 12-16) ಅಷ್ಟೇ ಅಲ್ಲ ಯೆಹೋವನು ಇಸ್ರಾಯೇಲ್ಯರ ಪ್ರಧಾನರನ್ನ ತಿದ್ದಿ, ಬುದ್ಧಿವಾದ ಹೇಳಿದನು.—ಯೆಹೆ. 45:9.

9 ಇದ್ರಿಂದ ಯೆಹೋವನು ಜವಾಬ್ದಾರಿ ಸ್ಥಾನದಲ್ಲಿ ಇರೋರಿಗೆ ಮತ್ತು ಮೇಲ್ವಿಚಾರಣೆಯನ್ನ ನಡೆಸ್ತಿರೋರಿಗೆ ಒಂದು ವಿಷ್ಯವನ್ನ ಸ್ಪಷ್ಟಪಡಿಸಿದನು. ಅದೇನಂದ್ರೆ ಅವ್ರು ತಮಗೆ ಕೊಟ್ಟ ಜವಾಬ್ದಾರಿಯನ್ನ ನಿರ್ವಹಿಸೋ ವಿಷ್ಯದಲ್ಲಿ ಯೆಹೋವನಿಗೆ ಲೆಕ್ಕ ಕೊಡಬೇಕಾಗಿತ್ತು. ಅವ್ರು ಸಹ ಯೆಹೋವನಿಂದ ಸಲಹೆ, ತಿದ್ದುಪಾಟು, ಶಿಸ್ತನ್ನ ಪಡ್ಕೊಳ್ಳೋ ಅಗತ್ಯ ಇತ್ತು. ಅಷ್ಟೇ ಅಲ್ಲ, ಅವರು ಯೆಹೋವನ ಮಟ್ಟಗಳನ್ನ ಪಾಲಿಸೋದ್ರಲ್ಲಿ ಎಲ್ರಿಗಿಂತ ಮುಂದೆ ಇರಬೇಕಿತ್ತು.

10, 11. ಯೆಹೆಜ್ಕೇಲನ ದರ್ಶನದಲ್ಲಿ ಸಿಗೋ ಪಾಠಗಳನ್ನ ಬಾಬೆಲಿನಿಂದ ವಾಪಸ್‌ ಬಂದ ಕೆಲವ್ರು ಅನ್ವಯಿಸಿದ್ರು ಅಂತ ಹೇಗೆ ಹೇಳಬಹುದು?

10 ಯೆಹೆಜ್ಕೇಲನ ದರ್ಶನದಿಂದ ಸಿಗೋ ಪಾಠಗಳನ್ನ ಬಾಬೆಲಿಂದ ವಾಪಸ್‌ ಬಂದ ಜನ್ರು ಅನ್ವಯಿಸ್ಕೊಂಡ್ರಾ? ಈ ದರ್ಶನಗಳ ಬಗ್ಗೆ ನಂಬಿಗಸ್ತ ಸ್ತ್ರೀ ಪುರುಷರು ಏನ್‌ ಯೋಚಿಸಿದ್ರು ಅಂತ ನಮಗೆ ನಿಖರವಾಗಿ ಗೊತ್ತಿಲ್ಲ. ಆದ್ರೆ ಬಾಬೆಲಿಂದ ವಾಪಸ್‌ ಬಂದ ಅವ್ರು ಏನ್‌ ಮಾಡಿದ್ರು ಮತ್ತು ಅವ್ರಿಗೆ ಯೆಹೋವನ ಶುದ್ಧ ಆರಾಧನೆ ಬಗ್ಗೆ ಯಾವ ದೃಷ್ಟಿಕೋನ ಇತ್ತು ಅನ್ನೋದ್ರ ಬಗ್ಗೆ ಬೈಬಲ್‌ ತುಂಬ ವಿವರಗಳನ್ನ ಕೊಟ್ಟಿದೆ. ಅವರು ಯೆಹೆಜ್ಕೇಲನ ದರ್ಶನದಿಂದ ಸಿಗೋ ತತ್ವಗಳನ್ನ ಸ್ವಲ್ಪ ಮಟ್ಟಿಗೆ ಅನ್ವಯಿಸ್ಕೊಂಡ್ರು. ಬಾಬೆಲಿಗೆ ಕೈದಿಗಳಾಗಿ ಹೋಗೋ ಮುಂಚೆ ಇದ್ದ ಅವರ ಪೂರ್ವಜರಿಗೆ ಹೋಲಿಸಿದ್ರೆ ಇವರು ಎಷ್ಟೋ ಚೆನ್ನಾಗಿ ನಡ್ಕೊಂಡ್ರು.

11 ಪ್ರವಾದಿಗಳಾದ ಹಗ್ಗಾಯ, ಜೆಕರ್ಯ, ಪುರೋಹಿತ ಹಾಗೂ ನಕಲುಗಾರನಾದ ಎಜ್ರ, ರಾಜ್ಯಪಾಲನಾದ ನೆಹೆಮೀಯರಂಥ ನಂಬಿಗಸ್ತ ಪುರುಷರು ಯೆಹೆಜ್ಕೇಲನ ದರ್ಶನದಲ್ಲಿದ್ದ ತತ್ವಗಳನ್ನ ಜನ್ರಿಗೆ ಕಲಿಸೋಕೆ ತುಂಬ ಪ್ರಯಾಸ ಪಟ್ರು. (ಎಜ್ರ 5:1, 2) ಶುದ್ಧ ಆರಾಧನೆಗೆ ಅತೀ ಶ್ರೇಷ್ಠ ಸ್ಥಾನ ಕೊಡಬೇಕು ಮತ್ತು ತಮ್ಮ ಸ್ವಂತ ಮನೆ ಆಸ್ತಿಪಾಸ್ತಿಗಿಂತ  ಶುದ್ಧ ಆರಾಧನೆಗೆ ಪ್ರಾಮುಖ್ಯತೆ ಕೊಡಬೇಕು ಅಂತ ಕಲಿಸಿದ್ರು. (ಹಗ್ಗಾ. 1:3, 4) ಶುದ್ಧ ಆರಾಧನೆಗಿರುವ ಅತ್ಯುತ್ತಮ ಮಟ್ಟಗಳನ್ನ ಪಾಲಿಸಬೇಕು, ಗೌರವಿಸಬೇಕು ಅಂತ ಅವ್ರಿಗೆ ಅರ್ಥಮಾಡಿಸಿದ್ರು. ಉದಾಹರಣೆಗೆ, ಅನ್ಯ ದೇಶದ ಹೆಂಡತಿಯರನ್ನ ಬಿಟ್ಟುಬಿಡಬೇಕು ಅಂತ ಇಸ್ರಾಯೇಲ್ಯ ಪುರುಷರಿಗೆ ಎಜ್ರ ಮತ್ತು ನೆಹೆಮೀಯ ಸಲಹೆ ಮತ್ತು ಎಚ್ಚರಿಕೆ ಕೊಟ್ಟಿದ್ರು. ಯಾಕಂದ್ರೆ ಈ ಸ್ತ್ರೀಯರು ಇಸ್ರಾಯೇಲ್ಯರನ್ನ ಯೆಹೋವನಿಂದ ದೂರ ಮಾಡ್ತಿದ್ರು. (ಎಜ್ರ 10:10, 11 ಓದಿ; ನೆಹೆ. 13:23-27, 30) ತುಂಬಾ ವರ್ಷಗಳಿಂದ ಅವ್ರಿಗೆ ಎಡವುಗಲ್ಲಾಗಿದ್ದ ವಿಗ್ರಹಾರಾಧನೆಯನ್ನ ಬಂಧಿವಾಸದಿಂದ ವಾಪಸ್‌ ಬಂದಂಥ ಜನ್ರು ದ್ವೇಷಿಸಿದ್ರು ಅಂತ ಕಾಣುತ್ತೆ. ಯೆಹೆಜ್ಕೇಲನ ದರ್ಶನದಲ್ಲಿ ನೋಡಿದಂತೆ ಯೆಹೋವ ದೇವ್ರು ಪುರೋಹಿತರಿಗೆ, ಪ್ರಧಾನರಿಗೆ ಮತ್ತು ಅಧಿಕಾರಿಗಳಿಗೆ ಸಲಹೆಗಳನ್ನ, ತಿದ್ದುಪಾಟುಗಳನ್ನ ಕೊಟ್ಟನು. (ನೆಹೆ. 13:22, 28) ಅವ್ರಲ್ಲಿ ಅನೇಕರು ದೀನತೆಯಿಂದ ತಮಗೆ ಸಿಕ್ಕ ಸಲಹೆಯನ್ನ ಪಾಲಿಸಿದ್ರು.—ಎಜ್ರ 10:7-9, 12-14; ನೆಹೆ. 9:1-3, 38.

ನೆಹೆಮೀಯ ಜನರೊಂದಿಗೆ ಕೆಲ್ಸ ಮಾಡ್ತಾ ಕಲಿಸ್ತಿದ್ದಾನೆ (ಪ್ಯಾರ 11 ನೋಡಿ)

12. ಕೈದಿಗಳಾಗಿದ್ದ ಯೆಹೂದ್ಯರು ವಾಪಸ್‌ ಬಂದ ಮೇಲೆ ಯೆಹೋವನು ಅವರನ್ನ ಹೇಗೆಲ್ಲಾ ಆಶೀರ್ವದಿಸಿದನು?

12 ತನ್ನ ಜನ್ರು ಬದಲಾಗೋದನ್ನ ನೋಡಿ ಯೆಹೋವನು ಅವ್ರನ್ನ ಆಶೀರ್ವದಿಸಿದನು. ಜನ್ರಿಗೆ ಯೆಹೋವನ ಜೊತೆ ಆಪ್ತ ಸಂಬಂಧ ಸಿಕ್ತು, ಒಳ್ಳೇ ಆರೋಗ್ಯ ಸಿಕ್ತು ಮತ್ತು ಆಗ ಅವ್ರ ದೇಶದಲ್ಲಿ ಎಲ್ಲನೂ ವ್ಯವಸ್ಥಿತವಾಗಿ ನಡೀತಿತ್ತು. ಇಂಥಾ ಜೀವ್ನ ಅವ್ರಿಗೆ ತುಂಬಾ ವರ್ಷಗಳಿಂದ ಸಿಕ್ಕಿರಲಿಲ್ಲ. (ಎಜ್ರ 6:19-22; ನೆಹೆ. 8:9-12; 12:27-30, 43) ಶುದ್ಧ ಆರಾಧನೆಯ ಬಗ್ಗೆ ಯೆಹೋವನ ನೀತಿಯ ಮಟ್ಟಗಳನ್ನ ಜನ್ರು ಪಾಲಿಸೋಕೆ ಶುರು ಮಾಡಿದ್ರಿಂದ ಯೆಹೋವನು ಅವ್ರನ್ನ ಈ ರೀತಿ ಆಶೀರ್ವದಿಸಿದನು. ಯೆಹೆಜ್ಕೇಲನ ದರ್ಶನದಿಂದ ಸಿಗೋ ಪಾಠಗಳನ್ನ ಒಳ್ಳೇ ಜನ್ರು ಮನಸ್ಸಲ್ಲಿ ಇಟ್ಕೊಂಡ್ರು. ಚುಟುಕಾಗಿ ಹೇಳೋದಾದ್ರೆ, ಯೆಹೆಜ್ಕೇಲನ ದರ್ಶನದಿಂದ ಬಾಬೆಲಿನಲ್ಲಿದ್ದ ಕೈದಿಗಳಿಗೆ ಎರಡು  ರೀತಿಯಲ್ಲಿ ಪ್ರಯೋಜ್ನ ಆಯ್ತು. (1) ಶುದ್ಧ ಆರಾಧನೆಯ ಮಟ್ಟಗಳ ಬಗ್ಗೆ ಪಾಠಗಳನ್ನ ಕಲಿತ್ರು ಮತ್ತು ಆ ಮಟ್ಟಗಳಿಗೆ ಹೇಗೆ ಪ್ರಾಮುಖ್ಯತೆ ಕೊಡಬೇಕು ಅಂತ ತಿಳ್ಕೊಂಡ್ರು. (2) ಶುದ್ಧ ಆರಾಧನೆ ಮುಂದೆ ಪುನಃಸ್ಥಾಪನೆ ಆಗುತ್ತೆ ಮತ್ತು ಜನ್ರು ಎಲ್ಲಿವರೆಗೆ ಶುದ್ಧ ಆರಾಧನೆ ಮಾಡ್ತಾರೋ ಅಲ್ಲಿವರೆಗೆ ಯೆಹೋವನು ಅವ್ರನ್ನ ಆಶೀರ್ವದಿಸ್ತಾನೆ ಅನ್ನೋ ಆಶ್ವಾಸನೆ ಸಿಕ್ತು. ಹಾಗಾದ್ರೆ ಈ ಭವಿಷ್ಯವಾಣಿ ನಮ್ಮ ಕಾಲದಲ್ಲೂ ನೆರವೇರುತ್ತಾ ಇದ್ಯಾ?

ಯೆಹೆಜ್ಕೇಲನ ದರ್ಶನದಿಂದ ನಾವೇನು ಕಲಿಬಹುದು?

13, 14. (ಎ) ಯೆಹೆಜ್ಕೇಲನ ದರ್ಶನ ನಮ್ಮ ಕಾಲದಲ್ಲೂ ನೆರವೇರುತ್ತಿದೆ ಅಂತ ಹೇಗೆ ಹೇಳಬಹುದು? (ಬಿ) ಈ ದರ್ಶನದಿಂದ ನಮಗೆ ಯಾವ ಎರಡು ಪ್ರಯೋಜನಗಳಿವೆ? (“ಎರಡು ಆಲಯಗಳು ಮತ್ತು ಅವುಗಳಿಂದ ಕಲಿಯೋ ಪಾಠಗಳು” ಅನ್ನೋ 13ಎ ಚೌಕ ಸಹ ನೋಡಿ.)

13 ಯೆಹೆಜ್ಕೇಲನ ದರ್ಶನ ನಮ್ಮ ಕಾಲದಲ್ಲೂ ನೆರವೇರುತ್ತಿದ್ಯಾ? ಹೌದು. ಯೆಹೆಜ್ಕೇಲನು ನೋಡಿದಂಥ ವಿಷ್ಯಗಳನ್ನೇ ಯೆಶಾಯನು ತನ್ನ ಭವಿಷ್ಯವಾಣಿಯಲ್ಲಿ ತಿಳಿಸಿದ. ಯೆಹೆಜ್ಕೇಲನು ದರ್ಶನದಲ್ಲಿ ಯೆಹೋವನ ಪವಿತ್ರ ಆಲಯವು “ಅತೀ ಎತ್ತರದ ಒಂದು ಬೆಟ್ಟದ ಮೇಲೆ” ಇರೋದನ್ನ ನೋಡಿದ. ಯೆಶಾಯನು ಭವಿಷ್ಯವಾಣಿಯಲ್ಲಿ, “ಯೆಹೋವನ ಆಲಯ ಇರೋ ಬೆಟ್ಟನ ಎಲ್ಲ ಬೆಟ್ಟಗಳಿಗಿಂತ ಎತ್ರದಲ್ಲಿ ದೃಢವಾಗಿ ಸ್ಥಾಪಿಸಲಾಗುತ್ತೆ” ಅಂತ ತಿಳಿಸಿದ. ಈ ಭವಿಷ್ಯವಾಣಿ “ಕೊನೇ ದಿನಗಳಲ್ಲಿ” ನೆರವೇರಲಿದೆ ಅಂತನೂ ತಿಳಿಸಿದ. (ಯೆಹೆ. 40:2; ಯೆಶಾ. 2:2-4; ಪಾದಟಿಪ್ಪಣಿ; ಮೀಕ 4:1-4 ಕೂಡ ನೋಡಿ.) ಈ ಭವಿಷ್ಯವಾಣಿಗಳು ಕೊನೇ ದಿನಗಳಲ್ಲಿ ಅಂದ್ರೆ 1919 ರಿಂದ ನೆರವೇರುತ್ತಾ ಇದೆ. ಆಗ ಶುದ್ಧ ಆರಾಧನೆ ಪುನಃಸ್ಥಾಪಿಸಲ್ಪಟ್ಟು, ಉನ್ನತ ಸ್ಥಾನಕ್ಕೆ ಏರಿಸಲ್ಪಡ್ತು. ಅದು ಎತ್ತರವಾದ ಬೆಟ್ಟದ ಮೇಲೆ ಸ್ಥಾಪಿಸಿದಂತೆ ಇತ್ತು. *

14 ಹಾಗಾಗಿ ಯೆಹೆಜ್ಕೇಲನ ಈ ದರ್ಶನ ನಾವು ಮಾಡೋ ಶುದ್ಧ ಆರಾಧನೆಗೂ ಖಂಡಿತ ಅನ್ವಯ ಆಗುತ್ತೆ. ಹಿಂದೆ ಕೈದಿಗಳಾಗಿದ್ದ ಯೆಹೂದ್ಯರಿಗೆ ಈ ಭವಿಷ್ಯವಾಣಿಯಿಂದ ಪ್ರಯೋಜ್ನ ಆದಂತೆ ನಮ್ಗೂ ಎರಡು ರೀತಿಯಲ್ಲಿ ಪ್ರಯೋಜ್ನ ಆಗುತ್ತೆ. (1) ಶುದ್ಧ ಆರಾಧನೆಯ ಮಟ್ಟಗಳನ್ನ ಎತ್ತಿ ಹಿಡಿಯೋದು ಹೇಗೆ ಅಂತ ಕಲಿಬಹುದು, (2) ಶುದ್ಧ ಆರಾಧನೆಯ ಪುನಃಸ್ಥಾಪನೆಯಾಗುತ್ತೆ ಮತ್ತು ಯೆಹೋವನ ಆಶೀರ್ವಾದ ಸಿಗುತ್ತೆ ಅನ್ನೋ ಆಶ್ವಾಸನೆ ಸಿಗುತ್ತೆ.

ಇವತ್ತು ಶುದ್ಧ ಆರಾಧನೆಗಿರೋ ಮಟ್ಟಗಳು

15. ಯೆಹೆಜ್ಕೇಲನ ದೇವಾಲಯದ ದರ್ಶನದಿಂದ ಪಾಠಗಳನ್ನ ಕಲಿಬೇಕಂದ್ರೆ ನಾವೇನನ್ನ ನೆನಪಲ್ಲಿಡಬೇಕು?

15 ಯೆಹೆಜ್ಕೇಲನ ದರ್ಶನದಲ್ಲಿರೋ ಕೆಲವು ವಿಶೇಷತೆಗಳನ್ನ ನಾವೀಗ ನೋಡೋಣ. ನಾವು ಯೆಹೆಜ್ಕೇಲನ ಜೊತೆ ದೇವಾಲಯವನ್ನ ಸುತ್ತಿ ನೋಡ್ತಾ ಇದ್ದೀವಿ ಅಂತ ನೆನಸೋಣ. ಆದ್ರೆ ನಾವು ನೋಡ್ತಿರೋದು ಆಧ್ಯಾತ್ಮಿಕ ಆಲಯವನ್ನಲ್ಲ ಅನ್ನೋದನ್ನ ನೆನಪಲ್ಲಿ ಇಟ್ಟುಕೊಳ್ಳೋಣ. ನಾವು ಈ ದರ್ಶನದಿಂದ ಇವತ್ತು ನಮ್ಮ ಆರಾಧನೆಗೆ ಅನ್ವಯಿಸುವ ಕೆಲ್ವು ಪಾಠಗಳನ್ನ ಕಲಿಯಲಿದ್ದೇವೆ. ಆ ಪಾಠಗಳು ಯಾವುವು?

16. ಯೆಹೆಜ್ಕೇಲನ ದರ್ಶನದಲ್ಲಿರೋ ಅಳತೆಗಳಿಂದ ನಾವೇನು ಕಲಿಬಹುದು? (ಆರಂಭದ ಚಿತ್ರ ನೋಡಿ.)

16 ಮೊದ್ಲು ನಾವು ಇಷ್ಟೊಂದು ಅಳತೆಗಳನ್ನ ಯಾಕೆ ಕೊಟ್ಟಿದ್ದಾರೆ ಅಂತ ನೋಡೋಣ. ತಾಮ್ರದಂತೆ ಹೊಳೀತಿದ್ದ ಒಬ್ಬ ದೇವದೂತ ಇಡೀ ದೇವಾಲಯವನ್ನ ಅಂದ್ರೆ ಅದ್ರ ಗೋಡೆಗಳನ್ನ, ಬಾಗಿಲುಗಳನ್ನ, ಕಾವಲು ಕೋಣೆಗಳನ್ನ, ಅಂಗಳಗಳನ್ನ ಮತ್ತು ಯಜ್ಞವೇದಿಯನ್ನ ಅಳತೆ ಮಾಡ್ತಿರೋದನ್ನ ಯೆಹೆಜ್ಕೇಲ ನೋಡಿದ. ಅಳತೆಯ ಬಗ್ಗೆ ಇಷ್ಟೆಲ್ಲಾ ವಿವರಣೆ ನೋಡುವಾಗ ಓದುಗರಿಗೆ ಇದನ್ನ ಅರ್ಥ ಮಾಡ್ಕೊಳ್ಳೋಕೆ ಕಷ್ಟ ಅಂತ ಅನಿಸಬಹುದು. (ಯೆಹೆ. 40:1–42:20; 43:13, 14) ಆದ್ರೆ ಈ ನಿರ್ದಿಷ್ಟ ಮಾಹಿತಿಯಿಂದ ನಾವು ಕೆಲವು ಪ್ರಾಮುಖ್ಯ ಅಂಶಗಳನ್ನ ಕಲಿಬಹುದು. ಏನಂದ್ರೆ ತನ್ನ ಮಟ್ಟಗಳನ್ನ ಪಾಲಿಸೋದು ತುಂಬಾ ಪ್ರಾಮುಖ್ಯ ಅಂತ ಯೆಹೋವನು ಒತ್ತಿ ಹೇಳ್ತಿದ್ದಾನೆ. ಆ ಮಟ್ಟಗಳನ್ನ ಇಡೋದು ಆತನೇ ಹೊರತು ಮನುಷ್ಯರಲ್ಲ. ದೇವ್ರನ್ನ ಹೇಗೆ ಆರಾಧಿಸಿದ್ರೂ ಪರವಾಗಿಲ್ಲ ಅಂತ ತುಂಬಾ ಜನ ಹೇಳ್ತಾರೆ, ಆದ್ರೆ ಇದು ತಪ್ಪು ಅಂತ ಈ ದರ್ಶನದಿಂದ ಗೊತ್ತಾಗುತ್ತೆ. ಅಷ್ಟೇ ಅಲ್ಲ, ದೇವಾಲಯವನ್ನ ಪೂರ್ತಿಯಾಗಿ ಅಳತೆ ಮಾಡೋ  ಮೂಲಕ ಶುದ್ಧ ಆರಾಧನೆ ಖಂಡಿತ ಪುನಃಸ್ಥಾಪನೆ ಆಗುತ್ತೆ ಅಂತ ಯೆಹೋವನು ಆಶ್ವಾಸನೆಯನ್ನ ಕೊಡ್ತಿದ್ದಾನೆ. ಹೇಗೆ? ಆ ಅಳತೆಗಳು ಪಕ್ಕಾ ಆಗಿರೋ ತರನೇ ಯೆಹೋವನ ಮಾತುಗಳು ಕೂಡ ಪಕ್ಕಾ ನೆರವೇರುತ್ತೆ. ಹೀಗೆ ಕೊನೇ ದಿನಗಳಲ್ಲಿ ಶುದ್ಧ ಆರಾಧನೆ ಖಂಡಿತ ಪುನಃಸ್ಥಾಪನೆ ಆಗುತ್ತೆ ಅಂತ ಯೆಹೆಜ್ಕೇಲನ ದರ್ಶನ ತಿಳಿಸುತ್ತೆ!

ದೇವಾಲಯವನ್ನ ನಿಖರವಾಗಿ ಅಳತೆ ಮಾಡಿದ್ರಿಂದ ನಾವೇನು ಕಲಿಯಬಹುದು? (ಪ್ಯಾರ 16 ನೋಡಿ)

17. ದೇವಾಲಯದ ಸುತ್ತ ಇದ್ದ ಗೋಡೆಯಿಂದ ನಾವೇನು ಕಲಿತೇವೆ?

17 ಸುತ್ತಲಿರೋ ಗೋಡೆ. ಯೆಹೆಜ್ಕೇಲನು ದರ್ಶನದಲ್ಲಿ ದೇವಾಲಯದ ಸುತ್ತಲೂ ದೊಡ್ಡ ಗೋಡೆ ಇರೋದನ್ನ ನೋಡ್ದ. ದೇವಜನ್ರು ಶುದ್ಧ ಆರಾಧನೆಯಿಂದ ಎಲ್ಲಾ ರೀತಿಯ ಅಶುದ್ಧತೆಯನ್ನ, ಧಾರ್ಮಿಕ ಆಚಾರಗಳನ್ನ ದೂರ ಇಡಬೇಕಿತ್ತು ಮತ್ತು ದೇವರ ಆಲಯವನ್ನ ಪವಿತ್ರವಾಗಿ ಇಡಬೇಕಿತ್ತು ಅಂತ ಇದ್ರಿಂದ ಕಲಿತ್ವಿ. (ಯೆಹೆಜ್ಕೇಲ 43:7-9 ಓದಿ.) ಇದೇ ಸಲಹೆ ನಮ್ಗೂ ಅನ್ವಯಿಸುತ್ತೆ. ನೂರಾರು ವರ್ಷಗಳಿಂದ ಮಹಾ ಬಾಬೆಲಿನ ಬಂಧಿವಾಸದಲ್ಲಿದ್ದ ದೇವಜನ್ರನ್ನ ಬಿಡಿಸಲಾಯ್ತು. 1919 ರಲ್ಲಿ ಯೇಸು ಕ್ರಿಸ್ತನು ನಂಬಿಗಸ್ತ ವಿವೇಕಿ ಆದ ಆಳನ್ನ ನೇಮಿಸಿದನು. ಅವತ್ತಿಂದ ದೇವ ಜನ್ರು ತಮ್ಮಲ್ಲಿದ್ದ ಎಲ್ಲಾ ರೀತಿಯ ಸುಳ್ಳು ಬೋಧನೆಗಳನ್ನ, ಆಚರಣೆಗಳನ್ನ ಮತ್ತು ಸುಳ್ಳು ಧರ್ಮಕ್ಕೆ ಸಂಬಂಧಪಟ್ಟ ಎಲ್ಲಾ ವಿಷ್ಯಗಳನ್ನ ತೆಗೆದುಹಾಕೋಕೆ ತುಂಬಾ ಪ್ರಯತ್ನ ಹಾಕಿದ್ರು. ಶುದ್ಧ ಆರಾಧನೆಯಲ್ಲಿ ಯಾವುದೇ ಅಶುದ್ಧತೆಯನ್ನ ಬೆರೆಸದೆ ಇರೋಕೆ ನಾವು ಜಾಗ್ರತೆ ವಹಿಸಬೇಕು. ಅಷ್ಟೇ ಅಲ್ಲ ನಾವು ರಾಜ್ಯ ಸಭಾಗೃಹಗಳಲ್ಲಿ ವ್ಯಾಪಾರಕ್ಕೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನ ಮಾತಾಡಬಾರದು. ನಮ್ಮ ಆರಾಧನೆಯಲ್ಲಿ ಈ ಲೋಕಕ್ಕೆ ಸಂಬಂಧಪಟ್ಟ ಯಾವ್ದೇ ವಿಷ್ಯಗಳನ್ನ ಸೇರಿಸದೆ ಇರೋ ಹಾಗೆ ಎಚ್ಚರವಹಿಸಬೇಕು.—ಮಾರ್ಕ 11:15, 16.

18, 19. (ಎ) ದರ್ಶನದಲ್ಲಿ ಕಾಣಿಸಿದ ದೇವಾಲಯದ ದೊಡ್ಡ ಬಾಗಿಲುಗಳಿಂದ ನಾವೇನು ಕಲಿಬಹುದು? (ಬಿ) ನಮ್ಮ ಯೋಚನೆಗಳನ್ನ ಯಾರಾದ್ರೂ ಬದಲಾಯಿಸೋಕೆ ಪ್ರಯತ್ನಿಸಿದ್ರೆ ನಾವೇನು ಮಾಡಬೇಕು? ಉದಾಹರಣೆ ಕೊಡಿ.

18 ದೊಡ್ಡ ಬಾಗಿಲುಗಳು. ಯೆಹೆಜ್ಕೇಲನ ಕಾಲದಲ್ಲಿದ್ದ ಯೆಹೂದಿ ಕೈದಿಗಳಿಗೆ ಈ ಬಾಗಿಲುಗಳು ಯೆಹೋವ ದೇವರ ನೈತಿಕ ಮಟ್ಟಗಳು ಅತ್ಯುನ್ನತವಾದದ್ದು ಅಂತ ನೆನಪಿಸಿದ್ವು. ಹಾಗಾದ್ರೆ ನಾವು ಅದ್ರಿಂದ ಯಾವ ಪಾಠ ಕಲಿತೇವೆ? ನಾವು ಯೆಹೋವ ದೇವರನ್ನ ಆತನ ಆಧ್ಯಾತ್ಮಿಕ ಆಲಯದಲ್ಲಿ ಆರಾಧಿಸ್ತಾ ಇದ್ದೇವೆ. ಹಾಗಾದ್ರೆ ಕಪಟದಿಂದ ದೂರ ಇರೋದು, ನೈತಿಕವಾಗಿ ಶುದ್ಧರಾಗಿರೋದು ಹಿಂದೆಂದಿಗಿಂತಲೂ ಈಗ ತುಂಬ ಪ್ರಾಮುಖ್ಯ ಅಲ್ವಾ? (ರೋಮ. 12:9; 1 ಪೇತ್ರ 1:14, 15) ಈ ಕೊನೇ ದಿನಗಳಲ್ಲಿ ಯೆಹೋವ ದೇವರು ನಮಗೆ ತನ್ನ ಅತ್ಯುನ್ನತ ನೈತಿಕ ಮಟ್ಟಗಳನ್ನು ಪಾಲಿಸೋದು ಹೇಗೆ ಅಂತ ಹೇಳಿ ಕೊಡ್ತಾ ಬಂದಿದ್ದಾನೆ. * ಉದಾಹರಣೆಗೆ, ಪಶ್ಚಾತ್ತಾಪಪಡದ ತಪ್ಪಿತಸ್ಥರನ್ನ ಸಭೆಯಿಂದ ಹೊರ ಹಾಕಲಾಗ್ತಿದೆ. (1 ಕೊರಿಂ. 5:11-13) ಅಷ್ಟೇ ಅಲ್ಲ, ದೇವಾಲಯದ ಬಾಗಿಲಿನ ಹತ್ರ ಇದ್ದ ಕಾವಲುಗಾರರ ಕೋಣೆಯಿಂದನೂ ನಾವೊಂದು ಪಾಠ ಕಲಿಬಹುದು. ಯೆಹೋವ ದೇವರ ನೈತಿಕ ಮಟ್ಟಗಳನ್ನ ಪಾಲಿಸದೇ ಇರೋ ಯಾರಿಗೂ ಆತನ ಆಧ್ಯಾತ್ಮಿಕ ಆಲಯದ ಒಳಗೆ ಬರೋಕ್ಕಾಗಲ್ಲ! ಉದಾಹರಣೆಗೆ, ಇಬ್ಬಗೆಯ ಜೀವ್ನ ನಡೆಸೋ ವ್ಯಕ್ತಿ, ಅಂದ್ರೆ ಒಳಗೊಂದು ಹೊರಗೊಂದು ರೀತಿಯಲ್ಲಿ ನಡ್ಕೊಳ್ಳೋ ವ್ಯಕ್ತಿ ರಾಜ್ಯ ಸಭಾಗೃಹದ ಒಳಗೆ ಬರಬಹುದು. ಆದ್ರೆ ಅವನು ತಿದ್ದಿಕೊಳ್ಳದಿದ್ರೆ ಯೆಹೋವ ದೇವ್ರ ಮೆಚ್ಚಿಗೆ ಪಡ್ಕೊಳ್ಳೋಕೆ ಆಗೋದೇ ಇಲ್ಲ. (ಯಾಕೋ. 4:8) ಹಾಗಾಗಿ ನೈತಿಕವಾಗಿ ಕೊಳೆತ ಕಸದಂತಿರುವ ಈ ಲೋಕದಲ್ಲಿ, ಯೆಹೋವ ದೇವರ ಆರಾಧನೆ ಶುದ್ಧವಾಗಿಯೇ ಉಳಿದಿದೆ.

19 ಕೊನೇ ದಿನಗಳಲ್ಲಿ ಕೆಟ್ಟತನ ತುಂಬಾ ಜಾಸ್ತಿ ಆಗುತ್ತೆ ಅಂತ ಬೈಬಲಿನಲ್ಲಿ ಮೊದಲೇ ತಿಳಿಸಲಾಗಿದೆ. “ಕೆಟ್ಟವರು ಮೋಸಗಾರರು ಕೆಟ್ಟದ್ರಿಂದ ಇನ್ನೂ ಕೆಟ್ಟತನಕ್ಕೆ ಇಳಿತಾರೆ. ಅವರು ಮೋಸಮಾಡ್ತಾ ಮೋಸಹೋಗ್ತಾ ಇರ್ತಾರೆ” ಅಂತ ಅದು ತಿಳಿಸುತ್ತೆ. (2 ತಿಮೊ. 3:13) ಯೆಹೋವನ ಉನ್ನತ ನೈತಿಕ ಮಟ್ಟಗಳು ತುಂಬ ಕಟ್ಟುನಿಟ್ಟು, ಈಗಿನ ಕಾಲಕ್ಕೆ ಅನ್ವಯಿಸಲ್ಲ ಅಥವಾ ಅವು ತಪ್ಪು ಅಂತ ಹೆಚ್ಚಿನ ಜನ  ಯೋಚಿಸ್ತಾರೆ. ನಿಮ್ಮ ಬಗ್ಗೆ ಏನು? ಸಲಿಂಗ ಕಾಮದ ಬಗ್ಗೆ ಯೆಹೋವನ ಮಟ್ಟಗಳು ತಪ್ಪು ಅಂತ ನಿಮ್ಗೆ ಯಾರಾದ್ರೂ ಮನವರಿಕೆ ಮಾಡೋಕೆ ಪ್ರಯತ್ನಿಸೋದಾದ್ರೆ ನೀವು ಅವ್ರು ಹೇಳೋದನ್ನ ಒಪ್ಕೊತೀರಾ ಅಥವಾ ಯೆಹೋವ ದೇವರು ತನ್ನ ವಾಕ್ಯದಲ್ಲಿ ಸ್ಪಷ್ಟವಾಗಿ ಹೇಳಿರೋ ತರನೇ ಇದೆಲ್ಲಾ “ಅಶ್ಲೀಲವಾದದ್ದು” ಅಂತ ನೆನಸ್ತೀರಾ? ಇಂಥ ಅನೈತಿಕ ನಡತೆಯನ್ನ ಒಪ್ಕೊಳ್ಳೋದು ತಪ್ಪು ಅಂತ ಯೆಹೋವನು ಎಚ್ಚರಿಸಿದ್ದಾನೆ. (ರೋಮ. 1:24-27, 32) ಒಂದುವೇಳೆ ನಮ್ಮ ಯೋಚ್ನೆಯನ್ನ ಬದ್ಲಾಯಿಸೋಕೆ ಯಾರಾದ್ರೂ ಪ್ರಯತ್ನಿಸೋದಾದ್ರೆ ನಾವು ಯೆಹೆಜ್ಕೇಲನ ದರ್ಶನದಲ್ಲಿ ನೋಡಿದ ದೇವಾಲಯದ ದೊಡ್ಡ ಬಾಗಿಲುಗಳನ್ನ ನೆನಪಿಸಿಕೊಳ್ಳಬೇಕು. ಈ ಕೆಟ್ಟ ಲೋಕದಿಂದ ಎಷ್ಟೇ ಒತ್ತಡ ಬಂದ್ರೂ ಯೆಹೋವನು ತನ್ನ ಉನ್ನತ ಮಟ್ಟಗಳನ್ನ ಕೆಳಗೆ ಇಳಿಸೋದಿಲ್ಲ. ಆತನು ಯಾವತ್ತೂ ಈ ಕೆಟ್ಟ ಲೋಕದ ತಾಳಕ್ಕೆ ತಕ್ಕಂತೆ ಕುಣಿಯಲ್ಲ. ಹಾಗಾಗಿ ಇಂಥ ಸಮಯದಲ್ಲಿ ನಾವು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನ ಪರ ನಿಂತು ಸರಿಯಾದದ್ದನ್ನೇ ಮಾಡ್ತೇವಾ?

ನಾವು ಶುದ್ಧ ಆರಾಧನೆಯನ್ನ ಮಾಡುವಾಗ ‘ಸ್ತುತಿ ಅನ್ನೋ ಬಲಿಯನ್ನ’ ಕೊಟ್ಟಹಾಗಿರುತ್ತೆ

20. ‘ದೊಡ್ಡ ಗುಂಪಿನವರಿಗೆ’ ಯೆಹೆಜ್ಕೇಲನ ದರ್ಶನದಿಂದ ಯಾವ ಪ್ರೋತ್ಸಾಹ ಸಿಗುತ್ತೆ?

20 ಅಂಗಳಗಳು. ಯೆಹೆಜ್ಕೇಲನು ದರ್ಶನದಲ್ಲಿ ದೇವಾಲಯದ ಹೊರಗೆ ವಿಶಾಲವಾದ ಅಂಗಳ ಇರೋದನ್ನ ನೋಡ್ತಾನೆ. ಅಲ್ಲಿ ಯೆಹೋವನ ಆರಾಧಕರು ದೊಡ್ಡ ಸಂಖ್ಯೆಯಲ್ಲಿ ಸೇರಿಬರಬಹುದು ಅಂತ ನೆನಸಿದಾಗ ಅವ್ನಿಗೆ ತುಂಬಾ ಖುಷಿ ಆಗಿರುತ್ತೆ. ಇವತ್ತು ಯೆಹೋವನ ಆರಾಧಕರು ಅದಕ್ಕಿಂತಲೂ ಶ್ರೇಷ್ಠವಾದ ಪವಿತ್ರ ಸ್ಥಳದಲ್ಲಿ ಇದ್ದಾರೆ. ಯೆಹೋವನ ಆಧ್ಯಾತ್ಮಿಕ ಆಲಯದ ಹೊರಗಣ ಅಂಗಳದಲ್ಲಿರುವ ‘ದೊಡ್ಡ ಗುಂಪಿನ’ ಆರಾಧಕರು ಯೆಹೆಜ್ಕೇಲನ ದರ್ಶನದಿಂದ ಪ್ರೋತ್ಸಾಹ ಪಡ್ಕೊತಾರೆ. (ಪ್ರಕ. 7:9, 10, 14, 15) ಯೆಹೆಜ್ಕೇಲನು ದೇವಾಲಯದ ಅಂಗಳದಲ್ಲಿ ಊಟದ ಕೋಣೆಗಳನ್ನ ನೋಡ್ದ. ಅಲ್ಲಿ ಆರಾಧಕರು ಸಮಾಧಾನ ಬಲಿಯ ಭಾಗವನ್ನ ಹಂಚಿ ತಿನ್ನಬಹುದಿತ್ತು. (ಯೆಹೆ. 40:17) ಅಲ್ಲಿ ಅವ್ರು ಒಂದರ್ಥದಲ್ಲಿ ಯೆಹೋವ ದೇವರ ಜೊತೆ  ಊಟ ಮಾಡಬಹುದಿತ್ತು. ಇದು ಯೆಹೋವನ ಜೊತೆ ಅವ್ರಿಗಿರೋ ಸಮಾಧಾನ ಸಂಬಂಧವನ್ನ ಸೂಚಿಸ್ತಿತ್ತು. ನಾವು ಇವತ್ತು ಯೆಹೂದ್ಯರ ತರ ಪ್ರಾಣಿ ಬಲಿಗಳನ್ನ ಅರ್ಪಿಸಲ್ಲ. ಬದಲಿಗೆ ‘ಸ್ತುತಿ ಅನ್ನೋ ಬಲಿಯನ್ನ’ ಅರ್ಪಿಸ್ತೇವೆ. ನಾವು ಶುದ್ಧ ಆರಾಧನೆಯನ್ನ ಮಾಡುವಾಗ ಅಂದ್ರೆ ಕೂಟಗಳಲ್ಲಿ ಉತ್ರ ಕೊಡುವಾಗ, ನಮ್ಮ ನಂಬಿಕೆ ವ್ಯಕ್ತಪಡಿಸುವಾಗ, ಸಿಹಿಸುದ್ದಿ ಸಾರುವಾಗ ಸ್ತುತಿ ಅನ್ನೋ ಬಲಿಯನ್ನ ಕೊಡ್ತೇವೆ. (ಇಬ್ರಿ. 13:15) ನಾವು ಊಟದಿಂದ ಹೇಗೆ ಶಕ್ತಿ ಪಡೀತೀವೋ ಅದೇ ರೀತಿ ಯೆಹೋವನು ಕೊಡೋ ಶಿಕ್ಷಣದಿಂದ ಪ್ರಯೋಜನವನ್ನ, ಶಕ್ತಿಯನ್ನ ಪಡೀತೇವೆ. ನಮ್ಗೂ ಕೋರಹನ ಮಕ್ಕಳ ತರನೇ ಅನ್ಸುತ್ತೆ. ಅವ್ರು ಯೆಹೋವನಿಗೆ ಹೀಗೆ ಹಾಡಿದ್ರು: “ಬೇರೆಲ್ಲೋ ಸಾವಿರ ದಿನ ಕಳೆಯೋದಕ್ಕಿಂತ ನಿನ್ನ ಅಂಗಳದಲ್ಲಿ ಒಂದು ದಿನ ಕಳೆದ್ರೂ ಸಾಕು.”—ಕೀರ್ತ. 84:10.

21. ಯೆಹೆಜ್ಕೇಲನ ದರ್ಶನದಲ್ಲಿದ್ದ ಪುರೋಹಿತರಿಂದ ಅಭಿಷಿಕ್ತ ಕ್ರೈಸ್ತರು ಏನನ್ನ ಕಲಿಬಹುದು?

21 ಪುರೋಹಿತರು. ಪುರೋಹಿತರು ಮತ್ತು ಲೇವಿಯರು ಒಳಗಣ ಅಂಗಳಕ್ಕೆ ಹೋಗೋಕೆ ಬಾಗಿಲುಗಳಿದ್ದವು. ಇವು ಬೇರೆ ಕುಲಗಳವರು ಹೊರಗಣ ಅಂಗಳವನ್ನ ಪ್ರವೇಶಿಸುವ ಬಾಗಿಲುಗಳ ತರನೇ ಇದ್ದವು. ಶುದ್ಧ ಆರಾಧನೆಗಾಗಿ ಯೆಹೋವನು ಇಟ್ಟಿರೋ ಉನ್ನತ ಮಟ್ಟಗಳನ್ನ ಪುರೋಹಿತರು ಸಹ ಪಾಲಿಸಬೇಕು ಅಂತ ಇದ್ರಿಂದ ಗೊತ್ತಾಗುತ್ತೆ. ಇವತ್ತು ದೇವರ ಸೇವಕರ ಮಧ್ಯೆ ಪುರೋಹಿತ ವರ್ಗದವ್ರು ಅಂತ ಯಾವುದೇ ಒಂದು ಕುಲವನ್ನ ಆರಿಸಿಲಾಗಿಲ್ಲ. ಆದ್ರೆ ಅಭಿಷಿಕ್ತ ಕ್ರೈಸ್ತರ ಬಗ್ಗೆ ಹೀಗೆ ತಿಳಿಸಲಾಗಿದೆ: “ನೀವು ‘ಆರಿಸ್ಕೊಂಡಿರೋ ಕುಲಕ್ಕೆ ಸೇರಿದವರು. ನೀವು ಪುರೋಹಿತರು ಆಗಿರೋ ರಾಜರು.’” (1 ಪೇತ್ರ 2:9) ಹಿಂದಿನ ಕಾಲದಲ್ಲಿದ್ದ ಪುರೋಹಿತರು ಯೆಹೋವನನ್ನ ಪ್ರತ್ಯೇಕವಾದ ಅಂಗಳದಲ್ಲಿ ಆರಾಧಿಸ್ತಿದ್ರು. ಇವತ್ತಿರೋ ಅಭಿಷಿಕ್ತ ಕ್ರೈಸ್ತರು ಆ ರೀತಿ ಮಾಡಲ್ಲ. ಅವ್ರು ಯೆಹೋವನ ಎಲ್ಲಾ ಆರಾಧಕರ ಜೊತೆ ಸೇರಿ ಯೆಹೋವನನ್ನ ಆರಾಧಿಸ್ತಾರೆ. ಅವ್ರಿಗೆ ಯೆಹೋವನ ಜೊತೆ ಒಂದು ವಿಶೇಷ ಸಂಬಂಧ ಇದೆ. ಅವ್ರು ಆತನ ದತ್ತು ಮಕ್ಕಳಾಗಿದ್ದಾರೆ. (ಗಲಾ. 4:4-6) ಆದ್ರೆ ಯೆಹೆಜ್ಕೇಲನ ದರ್ಶನದಿಂದ ಅಭಿಷಿಕ್ತರಿಗೆ ಒಂದು ಪಾಠ ಸಹ ಇದೆ. ಹಿಂದಿನ ಕಾಲದಲ್ಲಿದ್ದ ಪುರೋಹಿತರಿಗೆ ಸಹ ಯೆಹೋವನು ಸಲಹೆ, ಶಿಸ್ತನ್ನ ನೀಡಿದನು. ಹಾಗಾಗಿ ಅಭಿಷಿಕ್ತರೇ ಆಗಿರಲಿ ಬೇರೆ ಕುರಿಗಳೇ ಆಗಿರಲಿ ನಾವೆಲ್ಲರೂ ‘ಒಂದೇ ಹಿಂಡಿನ’ ಭಾಗವಾಗಿದ್ದು ‘ಒಬ್ಬನೇ ಕುರುಬನ’ ಕೈಕೆಳಗೆ ಯೆಹೋವನ ಸೇವೆ ಮಾಡ್ತೇವೆ ಅನ್ನೋದನ್ನ ಮರೆಯಬಾರದು.—ಯೋಹಾನ 10:16 ಓದಿ.

22, 23. (ಎ) ಯೆಹೆಜ್ಕೇಲನ ದರ್ಶನದಲ್ಲಿ ತಿಳಿಸಲಾದ ಪ್ರಧಾನರಿಂದ ಇಂದಿನ ಕ್ರೈಸ್ತ ಹಿರಿಯರು ಯಾವ ಪಾಠ ಕಲಿಬಹುದು? (ಬಿ) ಮುಂದೆ ಏನೆಲ್ಲಾ ಆಗುತ್ತೆ?

22 ಪ್ರಧಾನರು. ಯೆಹೆಜ್ಕೇಲನ ದರ್ಶನದಲ್ಲಿ ಪ್ರಧಾನರಿಗೂ ಒಂದು ಮುಖ್ಯ ಸ್ಥಾನ ಇತ್ತು. ಅವ್ರು ಪುರೋಹಿತರ ಕುಲದವರಾಗಿರಲಿಲ್ಲ. ಜನರಿಗೆ ಮೇಲ್ವಿಚಾರಕರಾಗಿದ್ದ ಇವರು ದೇವಾಲಯದ ವಿಷಯದಲ್ಲಿ ಪುರೋಹಿತರ ಮಾರ್ಗದರ್ಶನವನ್ನ ಪಾಲಿಸಬೇಕಿತ್ತು. ಅವರು ಬಲಿಗಳನ್ನ ಅರ್ಪಿಸೋಕೆ ಜನರಿಗೆ ಸಹಾಯ ಮಾಡ್ತಿದ್ರು. ಇವ್ರು ಸಭೆಯ ಜವಾಬ್ದಾರಿಯನ್ನ ನೋಡ್ಕೊತಿರೋ ಪುರುಷರಿಗೆ ಮಾದರಿಯಾಗಿದ್ದಾರೆ. (ಯೆಹೆ. 44:2, 3; 45:16, 17; 46:2) ಹಿಂದಿನ ಕಾಲದ ಪ್ರಧಾನರ ತರನೇ ಹಿರಿಯರು ಮತ್ತು ಸರ್ಕಿಟ್‌ ಮೇಲ್ವಿಚಾರಕರು ನಂಬಿಗಸ್ತ ಆಳಿಗೆ ಅಧೀನತೆಯನ್ನ ತೋರಿಸಬೇಕು. (ಇಬ್ರಿ. 13:17) ದೇವಜನ್ರು ಸೇವೆಯಲ್ಲಿ ಮತ್ತು ಕೂಟಗಳಲ್ಲಿ ಯೆಹೋವನಿಗೆ ಸ್ತುತಿ ಅನ್ನೋ ಬಲಿಯನ್ನ ಅರ್ಪಿಸೋಕೆ ಹಿರಿಯರು ಸಹಾಯ ಮಾಡ್ತಾರೆ. (ಎಫೆ. 4:11, 12) ಇಸ್ರಾಯೇಲ್ಯ ಪ್ರಧಾನರು ತಮ್ಮ ಅಧಿಕಾರವನ್ನ ದುರುಪಯೋಗಿಸಿದ್ದಕ್ಕೆ ಯೆಹೋವನು ಅವ್ರನ್ನ ಖಂಡಿಸಿದ್ದನ್ನ ಹಿರಿಯರು ನೆನಪು ಮಾಡಿಕೊಳ್ತಾರೆ. (ಯೆಹೆ. 45:9) ತಮಗೆ ಸಲಹೆ ಮತ್ತು ತಿದ್ದುಪಾಟಿನ ಅವಶ್ಯಕತೆ ಇಲ್ಲ ಅಂತ ಹಿರಿಯರು ನೆನಸಲ್ಲ, ಬದಲಿಗೆ ಒಳ್ಳೆ ಕುರುಬರಾಗೋಕೆ ಮತ್ತು ಮೇಲ್ವಿಚಾರಕರಾಗೋಕೆ ಯೆಹೋವನು ಕೊಡೋ ಶಿಕ್ಷಣವನ್ನ ಸ್ವೀಕರಿಸೋಕೆ ಯಾವಾಗಲೂ ಸಿದ್ಧರಾಗಿರ್ತಾರೆ.—1 ಪೇತ್ರ 5:1-3 ಓದಿ.

 23 ಮುಂದೆ ಇಡೀ ಭೂಮಿ ಸುಂದರ ತೋಟವಾಗುವಾಗ ಕೂಡ ಯೆಹೋವನು ತನ್ನ ಜನ್ರನ್ನ ನೋಡ್ಕೊಳ್ಳೋಕೆ ಪ್ರೀತಿಯ, ಸಮರ್ಥ ಕುರುಬರನ್ನ ನೇಮಿಸ್ತಾನೆ. ಒಳ್ಳೇ ಕುರುಬರಾಗೋಕೆ ಈಗಿಂದನೇ ಅನೇಕ ಹಿರಿಯರಿಗೆ ತರಬೇತಿ ಸಿಕ್ತಾ ಇದೆ. (ಕೀರ್ತ. 45:16) ಹೊಸ ಲೋಕದಲ್ಲಿ ಈ ಸಮರ್ಥ ಪುರುಷರು ನಮ್ಮನ್ನ ನೋಡಿಕೊಳ್ಳೋದ್ರಿಂದ ನಮ್ಗೆ ತುಂಬ ಆಶೀರ್ವಾದ ಸಿಗುತ್ತೆ. ಇದ್ರ ಬಗ್ಗೆ ಯೋಚಿಸುವಾಗ ನಮಗೆಷ್ಟು ಖುಷಿ ಆಗುತ್ತೆ ಅಲ್ವಾ? ಯೆಹೋವನ ತಕ್ಕ ಸಮಯ ಬಂದಾಗ ನಮಗೆ ಯೆಹೆಜ್ಕೇಲನ ದರ್ಶನದ ಮತ್ತು ಪುನಃಸ್ಥಾಪನೆಯ ಬಗ್ಗೆ ಇರೋ ಬೇರೆ ಭವಿಷ್ಯವಾಣಿಗಳ ಅರ್ಥ ಸ್ಪಷ್ಟವಾಗಿ ಗೊತ್ತಾಗುತ್ತೆ. ಬಹುಶಃ ಈ ಭವಿಷ್ಯವಾಣಿಯ ಕೆಲವು ವಿಷ್ಯಗಳು ರೋಮಾಂಚನಕರವಾದ ರೀತಿಯಲ್ಲಿ ನೆರವೇರೋದನ್ನ ನಾವು ಭವಿಷ್ಯದಲ್ಲಿ ನೋಡ್ತೇವೆ. ಅದ್ರ ಬಗ್ಗೆ ನಮಗೆ ಈಗ ಊಹಿಸೋಕೂ ಆಗಲ್ಲ.

ದೊಡ್ಡ ಬಾಗಿಲುಗಳು ಮತ್ತು ಅಂಗಳಗಳಿಂದ ಆರಾಧನೆ ಬಗ್ಗೆ ನಾವೇನು ಕಲಿಬಹುದು? (ಪ್ಯಾರ 18-21 ನೋಡಿ)

ಶುದ್ಧ ಆರಾಧನೆಯ ಮೇಲೆ ಯೆಹೋವನ ಆಶೀರ್ವಾದ

24, 25. ಯೆಹೋವನಿಂದ ಸಿಗೋ ಆಶೀರ್ವಾದಗಳನ್ನ ಯೆಹೆಜ್ಕೇಲನ ದರ್ಶನದಲ್ಲಿ ಹೇಗೆ ವರ್ಣಿಸಲಾಗಿದೆ?

24 ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ಒಂದು ಪ್ರಾಮುಖ್ಯ ಘಟನೆಯನ್ನ ನಾವೀಗ ನೋಡೋಣ. ಯೆಹೋವ ದೇವ್ರು ದೇವಾಲಯಕ್ಕೆ ಬರ್ತಾನೆ. ಎಲ್ಲಿಯವರೆಗೆ ಜನ್ರು ನಂಬಿಗಸ್ತರಾಗಿ ಆತನ ಶುದ್ಧ ಆರಾಧನೆಯ ಮಟ್ಟಗಳನ್ನ ಪಾಲಿಸ್ತಾರೋ ಅಲ್ಲಿವರೆಗೆ ಆತನು ಅಲ್ಲಿ ಇರ್ತಾನೆ ಅಂತ ಮಾತುಕೊಟ್ಟಿದ್ದಾನೆ. (ಯೆಹೆ. 43:4-9) ಯೆಹೋವ ದೇವ್ರು ಅಲ್ಲೇ ಇರೋದ್ರಿಂದ ಆ ದೇಶಕ್ಕೆ ಏನು ಪ್ರಯೋಜ್ನ ಆಗುತ್ತೆ?

25 ಯೆಹೋವನ ಆಶೀರ್ವಾದಗಳನ್ನ ವರ್ಣಿಸಲಿಕ್ಕಾಗಿ ಈ ದರ್ಶನದಲ್ಲಿ ಎರಡು ವಿಷ್ಯಗಳನ್ನ ತೋರಿಸಲಾಗಿದೆ. (1) ದೇವಾಲಯದ ಪವಿತ್ರ ಸ್ಥಳದಿಂದ ಒಂದು ನದಿ ಹರಿಯುತ್ತೆ, ಇದ್ರಿಂದ ಜೀವಿಗಳು ಬದುಕುತ್ತೆ ಮತ್ತು ಇಡೀ ದೇಶ ಫಲವತ್ತಾಗುತ್ತೆ. (2) ಆ ದೇಶವನ್ನ ಸಮಾನವಾಗಿ ವ್ಯವಸ್ಥಿತವಾಗಿ ವಿಭಾಗಿಸಲಾಗುತ್ತೆ, ಅದ್ರ ಮಧ್ಯದಲ್ಲಿ ಒಂದು ದೇವಾಲಯ ಇದೆ ಮತ್ತು ಅದರ ಸುತ್ತಲು ಜಾಗವನ್ನ ಬಿಡಲಾಗಿದೆ. ಈ ವಿಷ್ಯಗಳನ್ನ ನಾವು ಹೇಗೆ ಅರ್ಥಮಾಡ್ಕೊಬೇಕು? ಯೆಹೋವನು ಈಗಾಗಲೇ ಆಧ್ಯಾತ್ಮಿಕ ಆಲಯದೊಳಕ್ಕೆ ಬಂದು ಅದನ್ನ ಶುದ್ಧ ಮಾಡಿದ್ದಾನೆ ಮತ್ತು ಮೆಚ್ಚಿಕೊಂಡಿದ್ದಾನೆ. ಮೇಲೆ ತಿಳಿಸಲಾದ ಎರಡು ವಿಷ್ಯಗಳ ಅರ್ಥವನ್ನ ನಾವು ತಿಳಿದುಕೊಳ್ಳೋದು ತುಂಬಾ ಪ್ರಾಮುಖ್ಯ. (ಮಲಾ. 3:1-4) ಈ ಎರಡು ವಿಷ್ಯಗಳ ಅರ್ಥ ಏನು ಅಂತ ಈ ಪುಸ್ತಕದ ಅಧ್ಯಾಯ 19 ರಿಂದ 21 ರಲ್ಲಿ ನೋಡಲಿದ್ದೇವೆ.

^ ಪ್ಯಾರ. 6 ಹೀಗೆ ಹೇಳೋ ಮೂಲಕ ಯೆಹೋವನು, ತನ್ನ ಆಲಯ ಹಿಂದಿನಂತೆ ಇರಲ್ಲ ಅಂತ ತಿಳಿಸಿದನು. “ಈ ಹಿಂದೆ ಅವರು ನನ್ನ ಆಲಯದ ಹೊಸ್ತಿಲ ಪಕ್ಕದಲ್ಲಿ ಅವ್ರ ಮಂದಿರದ ಹೊಸ್ತಿಲನ್ನ ಇಟ್ರು, ನನ್ನ ಆಲಯದ ಬಾಗಿಲಿನ ಚೌಕಟ್ಟಿನ ಪಕ್ಕದಲ್ಲಿ ಅವ್ರ ಮಂದಿರದ ಬಾಗಿಲಿನ ಚೌಕಟ್ಟನ್ನ ಇಟ್ರು. ನನ್ನ ಮತ್ತು ಅವ್ರ ಮಧ್ಯ ಗೋಡೆ ಮಾತ್ರ ಅಡ್ಡ ಇತ್ತು. ಇಂಥ ಅಸಹ್ಯ ಕೆಲಸಗಳನ್ನ ಮಾಡಿ ಅವರು ನನ್ನ ಪವಿತ್ರ ಹೆಸ್ರನ್ನ ಅಶುದ್ಧ ಮಾಡಿದ್ರು” ಅಂತ ಯೆಹೋವನು ಹೇಳಿದನು. (ಯೆಹೆ. 43:8) ಯೆರೂಸಲೇಮಿನಲ್ಲಿದ್ದ ಜನರ ಮನೆಗಳ ಮತ್ತು ಯೆಹೋವನ ಆಲಯದ ಮಧ್ಯ ಒಂದು ಗೋಡೆ ಮಾತ್ರ ಇತ್ತು. ಜನರು ಯೆಹೋವನ ನೀತಿಯ ಮಟ್ಟಗಳನ್ನ ಮುರಿದಾಗ ಅಶುದ್ಧ ಕೆಲಸ ಮತ್ತು ಮೂರ್ತಿ ಪೂಜೆಗಳನ್ನ ಯೆಹೋವನ ಆಲಯದ ಪಕ್ಕದಲ್ಲೇ ಮಾಡ್ತಿದ್ರು. ಯಾಕಂದ್ರೆ ಅವ್ರ ಮನೆಗಳು ಆಲಯದ ಪಕ್ಕದಲ್ಲೇ ಇದ್ವು. ಇದನ್ನ ನೋಡಿ ಯೆಹೋವನಿಗೆ ಸಹಿಸೋಕಾಗಲಿಲ್ಲ.

^ ಪ್ಯಾರ. 13 ಯೆಹೆಜ್ಕೇಲನ ಆಲಯದ ದರ್ಶನ ಈ ಕೊನೇ ದಿನಗಳಲ್ಲಿ ನೆರವೇರುತ್ತಿರೋ ಪುನಃಸ್ಥಾಪನೆಯ ಬಗ್ಗೆ ಇರೋ ಇತರ ಭವಿಷ್ಯವಾಣಿಗಳಿಗೆ ಹೊಂದಿಕೆಯಲ್ಲಿದೆ. ಉದಾಹರಣೆಗೆ, ಯೆಹೆಜ್ಕೇಲ 43:1-9ನ್ನ ಮಲಾಕಿ 3:1-5 ರ ಜೊತೆ ಹೋಲಿಸಿ ಮತ್ತು ಯೆಹೆಜ್ಕೇಲ 47:1-12ನ್ನ ಯೋವೇಲ 3:18 ರ ಜೊತೆ ಹೋಲಿಸಿ.

^ ಪ್ಯಾರ. 18 ಯೇಸು ಕ್ರಿಸ್ತನು ಕ್ರಿ.ಶ. 29 ರಲ್ಲಿ ದೀಕ್ಷಾಸ್ನಾನ ಪಡೆದು ಮಹಾ ಪುರೋಹಿತನಾಗಿ ಕೆಲಸ ಶುರು ಮಾಡಿದಾಗ ಆಧ್ಯಾತ್ಮಿಕ ಆಲಯ ಅಸ್ತಿತ್ವಕ್ಕೆ ಬಂತು. ಆಮೇಲೆ ಯೇಸುವಿನ ಅಪೊಸ್ತಲರು ಸತ್ತ ನಂತರ ಅನೇಕ ಶತಮಾನಗಳ ವರೆಗೆ ಶುದ್ಧ ಆರಾಧನೆ ಅಸ್ತಿತ್ವದಲ್ಲೇ ಇಲ್ಲದಂತಾಯ್ತು. ಆದ್ರೆ 1919 ರಿಂದ ಶುದ್ಧ ಆರಾಧನೆಯನ್ನ ಉನ್ನತ ಸ್ಥಾನಕ್ಕೆ ಏರಿಸಲಾಯ್ತು.