ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 18

“ನನ್ನ ರೋಷಾವೇಶ ಭಗ್ಗಂತ ಉರಿಯುತ್ತೆ”

“ನನ್ನ ರೋಷಾವೇಶ ಭಗ್ಗಂತ ಉರಿಯುತ್ತೆ”

ಯೆಹೆಜ್ಕೇಲ 38:18

ಮುಖ್ಯ ವಿಷಯ: ಗೋಗನು ಆಕ್ರಮಣ ಮಾಡಿದಾಗ ಯೆಹೋವ ದೇವರು ರೋಷದಿಂದ ಉರಿಯುತ್ತಾನೆ ಮತ್ತು ಹರ್ಮಗೆದ್ದೋನಿನಲ್ಲಿ ತನ್ನ ಜನರ ಪರವಾಗಿ ಹೋರಾಡ್ತಾನೆ

1-3. (ಎ) ಯೆಹೋವನು ‘ರೋಷಾವೇಶದಿಂದ ಉರಿದಾಗ’ ಏನಾಗುತ್ತೆ? (ಆರಂಭದ ಚಿತ್ರ ನೋಡಿ.) (ಬಿ) ನಾವೀಗ ಯಾವ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿತೇವೆ?

ಸ್ತ್ರೀ ಪುರುಷರು ಮತ್ತು ಮಕ್ಕಳೆಲ್ಲ ಒಟ್ಟಿಗೆ ಸೇರಿ ರಾಜ್ಯ ಗೀತೆಗಳನ್ನ ಹಾಡ್ತಿದ್ದಾರೆ. ಒಬ್ಬ ಹಿರಿಯ ಮನದಾಳದಿಂದ ಸಂರಕ್ಷಣೆಗಾಗಿ ಬೇಡಿಕೊಳ್ತಿದ್ದಾನೆ. ಯೆಹೋವನು ತಮ್ಮನ್ನ ಕಾಪಾಡ್ತಾರೆ ಅಂತ ಸಭೆಲಿರೋ ಎಲ್ರೂ ಭರವಸೆಯಿಂದ ಇದ್ದಾರೆ. ಆದ್ರೆ ಅವ್ರಿಗೆ ಸಾಂತ್ವನದ, ನಿರೀಕ್ಷೆಯ ಅಗತ್ಯ ಇದೆ. ಹೊರಗೆ ಜನ ಗಲಾಟೆ ಮಾಡ್ತಿರೋ ಶಬ್ದ ಕೇಳಿಸ್ತಿದೆ. ಹರ್ಮಗೆದ್ದೋನ್‌ ಶುರು ಆಗಿದೆ!—ಪ್ರಕ. 16:14, 16.

2 ಹರ್ಮಗೆದ್ದೋನ್‌ ಯುದ್ಧದ ಸಮಯದಲ್ಲಿ ಯೆಹೋವ ದೇವ್ರು ಕೆಟ್ಟ ಜನ್ರನ್ನ ‘ರೋಷಾವೇಶದಿಂದ’ ನಾಶ ಮಾಡ್ತಾನೆ. (ಯೆಹೆಜ್ಕೇಲ 38:18 ಓದಿ.) ಯಾವುದೋ ಒಂದು ದೇಶ ಅಥವಾ ಸೈನ್ಯದ ಮೇಲಲ್ಲ, ಭೂಮಿಯ ಮೇಲೆ ಇರೋ ಎಲ್ಲ ಕೆಟ್ಟ ಜನ್ರ ಮೇಲೆ ಆತನ ರೋಷ ಹೊತ್ತಿ ಉರಿಯುತ್ತೆ. ಆ ದಿನದಲ್ಲಿ ಯೆಹೋವನಿಂದ ಸತ್ತವ್ರು “ಭೂಮಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆ ತನಕ ಬಿದ್ದಿರ್ತಾರೆ.”—ಯೆರೆ. 25:29, 33.

3 ಪ್ರೀತಿ, “ಕರುಣೆ ಮತ್ತು ಕನಿಕರ ಇರೋ,” ‘ತಟ್ಟಂತ ಕೋಪ ಮಾಡ್ಕೊಳ್ಳದ’ ಯೆಹೋವ ದೇವ್ರು ‘ರೋಷಾವೇಶದಿಂದ’ ಹೊತ್ತಿ ಉರಿದು ಈ ರೀತಿ ನಾಶ ಮಾಡೋಕೆ ಏನ್‌ ಕಾರಣ? (ವಿಮೋ. 34:6; 1 ಯೋಹಾ. 4:16) ಈ ಪ್ರಶ್ನೆಗೆ ನಾವೀಗ ಉತ್ರ ತಿಳ್ಕೊಳ್ಳೋಣ. ಇದ್ರಿಂದ ನಮ್ಗೆ ತುಂಬ ಸಾಂತ್ವನ ಮತ್ತು ಧೈರ್ಯ ಸಿಗುತ್ತೆ. ಸಾರೋ ಕೆಲ್ಸನ ಇನ್ನಷ್ಟು ಮಾಡೋಕೆ ಪ್ರೇರೇಪಣೆ ಸಿಗುತ್ತೆ.

 ಯೆಹೋವನು ಯಾಕೆ ‘ರೋಷಾವೇಶದಿಂದ’ ಉರಿಯುತ್ತಾನೆ?

4, 5. ಯೆಹೋವನ ಕೋಪಕ್ಕೂ ಮನುಷ್ಯರ ಕೋಪಕ್ಕೂ ಇರೋ ವ್ಯತ್ಯಾಸ ಏನು?

4 ಯೆಹೋವನ ಕೋಪ ಅಪರಿಪೂರ್ಣ ಮಾನವನ ತರ ಅಲ್ಲ ಅನ್ನೋದನ್ನ ಮನಸ್ಸಲ್ಲಿಡಿ. ಮನುಷ್ಯನ ಕೋಪ ನೆತ್ತಿಗೇರಿದಾಗ ಅವನು ಲಂಗು ಲಗಾಮಿಲ್ಲದೇ ವರ್ತಿಸ್ತಾನೆ. ಹೆಚ್ಚಿನ ಸಲ ಅವನು ತಪ್ಪನ್ನೇ ಮಾಡ್ತಾನೆ. ಉದಾಹರಣೆಗೆ, ಕಾಯಿನನ ಬಲಿಯನ್ನು ಯೆಹೋವನು ತಿರಸ್ಕರಿಸಿ ಹೇಬೆಲನ ಬಲಿಯನ್ನ ಸ್ವೀಕರಿಸಿದಾಗ ಕಾಯಿನನ “ಕೋಪ ನೆತ್ತಿಗೇರಿತು.” ಅದ್ರ ಪರಿಣಾಮ ಏನಾಯ್ತು? ನೀತಿವಂತನಾಗಿದ್ದ ಒಡಹುಟ್ಟಿದ ತಮ್ಮನನ್ನೇ ಅವನು ಕೊಂದು ಹಾಕ್ದ. (ಆದಿ. 4:3-8; ಇಬ್ರಿ. 11:4) ನಾವೀಗ ಇನ್ನೊಂದು ಉದಾಹರಣೆಯನ್ನ ನೋಡೋಣ. ಅದು ದಾವೀದನದ್ದು. ಅವನು ಯೆಹೋವ ದೇವ್ರ ಮನಸ್ಸಿಗೆ ತುಂಬ ಇಷ್ಟ ಆಗಿದ್ದನು. (ಅ. ಕಾ. 13:22) ಶ್ರೀಮಂತನಾದ ನಾಬಾಲ ಅವನನ್ನ ಮತ್ತು ಅವನ ಜೊತೆಲಿದ್ದವ್ರನ್ನ ಅವಮಾನ ಮಾಡ್ದಾಗ ಅವನ ಕೋಪ ನೆತ್ತಿಗೇರಿತು. ದಾವೀದನಿಗೆ ಎಷ್ಟು ಸಿಟ್ಟು ಬಂತು ಅಂದ್ರೆ ಅವನು ಮತ್ತವನ ಸೈನಿಕರು ‘ತಮ್ಮತಮ್ಮ ಕತ್ತಿಗಳನ್ನ ಸೊಂಟಕ್ಕೆ ಕಟ್ಕೊಂಡು’ ಕೃತಜ್ಞತೆ ಇಲ್ಲದ ನಾಬಾಲನನ್ನ ಮಾತ್ರವಲ್ಲ ಅವನ ಕುಟುಂಬದಲ್ಲಿರೋ ಎಲ್ಲಾ ಗಂಡಸರನ್ನ ಸಾಯಿಸಿಬಿಡೋಕೆ ಹೊರಟ್ರು. ಆದ್ರೆ ದಾವೀದ ಮತ್ತು ಅವನ ಜೊತೆ ಇದ್ದ ಗಂಡಸರು ಸೇಡನ್ನ ತೀರಿಸದಂತೆ ನಾಬಾಲನ ಹೆಂಡ್ತಿ ಅಬೀಗೈಲಳು ಅವ್ರ ಮನ ಒಲಿಸೋ ತರ ಮಾತಾಡಿದಳು. (1 ಸಮು. 25:9-14, 32, 33) “ಮನುಷ್ಯ ಕೋಪ ಮಾಡ್ಕೊಂಡ್ರೆ ದೇವರ ದೃಷ್ಟಿಯಲ್ಲಿ ಸರಿಯಾಗಿ ಇರೋದನ್ನ ಮಾಡಕ್ಕಾಗಲ್ಲ” ಅಂತ ಬರೆಯಲು ಯೆಹೋವನು ಯಾಕೋಬನನ್ನ ಪ್ರೇರಿಸಿದನು. ಇದು ಎಷ್ಟು ಸೂಕ್ತವಾಗಿದೆ ಅಲ್ವಾ?—ಯಾಕೋ. 1:20.

ಯೆಹೋವನ ಕೋಪ ಯಾವಾಗ್ಲೂ ಆತನ ನಿಯಂತ್ರಣದಲ್ಲಿರುತ್ತೆ ಮತ್ತು ತನ್ನ ಕೋಪವನ್ನ ತೋರಿಸೋ ಮುಂಚೆ ಎಚ್ಚರಿಕೆ ಕೊಡ್ತಾನೆ

5 ಆದ್ರೆ ಯೆಹೋವ ದೇವ್ರು ಮನುಷ್ಯರ ತರ ಅಲ್ಲ. ಯೆಹೋವನಿಗೆ ತನ್ನ ಕೋಪದ ಮೇಲೆ ಯಾವಾಗ್ಲೂ ನಿಯಂತ್ರಣ ಇದೆ. ಆತನು ಕೋಪ ಮಾಡ್ಕೊಳ್ಳುವಾಗ ಅದ್ರ ಕಾರಣ ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತೆ. ಕೋಪದಿಂದ ಹೊತ್ತಿ ಉರಿಯುವಾಗ ಕೂಡ ಯೆಹೋವನು ನ್ಯಾಯವಾಗಿ ವರ್ತಿಸ್ತಾನೆ. ಶತ್ರುಗಳನ್ನು ನಾಶ ಮಾಡುವಾಗಲೂ ಯೆಹೋವ ಯಾವತ್ತೂ “ಕೆಟ್ಟವರ ಜೊತೆ ನೀತಿವಂತರನ್ನೂ” ನಾಶಮಾಡಲ್ಲ. (ಆದಿ. 18:22-25) ಅಷ್ಟೇ ಅಲ್ಲ ಯೆಹೋವ ದೇವ್ರು ಕೋಪಿಸುವಾಗ ಅದ್ರ ಹಿಂದೆ ಯಾವಾಗ್ಲೂ ನ್ಯಾಯವಾದ ಕಾರಣಗಳಿರುತ್ತೆ. ಅಂಥ ಎರಡು ಕಾರಣಗಳನ್ನ, ಅದ್ರಿಂದ ಕಲಿಯೋ ಪಾಠಗಳನ್ನ ನಾವೀಗ ನೋಡೋಣ.

6. ತನ್ನ ಹೆಸರಿಗೆ ಕಳಂಕ ಬಂದಾಗ ಯೆಹೋವನು ಏನು ಮಾಡ್ತಾನೆ?

6 ಕಾರಣ: ಯೆಹೋವನ ಹೆಸ್ರಿಗೆ ಮಸಿ ಬಳಿದಾಗ ಆತನ ರೋಷಾಗ್ನಿ ಹೊತ್ತಿ ಉರಿಯುತ್ತೆ. ಯೆಹೋವನ ಜನ್ರು ಅಂತ ಹೇಳ್ಕೊಂಡು ಕೆಟ್ಟದಾಗಿ ನಡ್ಕೊಳ್ಳುವವರು ಆತನ ಹೆಸರಿಗೆ ಕಳಂಕ ತರುತ್ತಾರೆ. ಆಗ ಆತನಿಗೆ ಕೋಪ ಬರುತ್ತೆ. ಇದು ನ್ಯಾಯವಾಗೇ ಇದೆ. (ಯೆಹೆ. 36:23) ನಾವು ಹಿಂದಿನ ಅಧ್ಯಾಯಗಳಲ್ಲಿ ನೋಡಿದ ಹಾಗೆ ಇಸ್ರಾಯೇಲ್ಯರು ಯೆಹೋವನ ಹೆಸ್ರನ್ನ ತುಂಬಾ ಹಾಳು ಮಾಡಿದ್ರು. ಅವ್ರ ಸ್ವಭಾವ, ನಡ್ಕೊಂಡ ರೀತಿ ನೋಡಿ ಯೆಹೋವನಿಗೆ ಕೋಪ ಬಂತು. ಆದ್ರೆ ಆತನ ಕೋಪ ಯಾವತ್ತೂ ನಿಯಂತ್ರಣ ಮೀರಿ ಹೋಗಲಿಲ್ಲ. ಯಾವಾಗ್ಲೂ ನಿಯಂತ್ರಣದಲ್ಲೇ ಇತ್ತು. ತನ್ನ ಜನ್ರಿಗೆ ಎಷ್ಟು ಶಿಕ್ಷೆ ಕೊಡಬೇಕೋ ಅಷ್ಟನ್ನೇ ಕೊಟ್ಟನು. ಮಿತಿಮೀರಿ ಶಿಕ್ಷೆ ಕೊಡಲಿಲ್ಲ. (ಯೆರೆ. 30:11) ಮತ್ತೆ ಅವ್ರಿಗೆ ಶಿಕ್ಷೆ ಕೊಟ್ಟ ನಂತ್ರ ಕೋಪವನ್ನ ಬಿಟ್ಟುಬಿಟ್ಟನು, ಮುನಿಸಿಕೊಂಡು ಕೋಪವನ್ನ ಶಾಶ್ವತವಾಗಿ ಇಟ್ಕೊಳ್ಳಲಿಲ್ಲ.—ಕೀರ್ತ. 103:9.

7, 8. ಇಸ್ರಾಯೇಲ್ಯರ ಜೊತೆ ಯೆಹೋವ ದೇವರು ವರ್ತಿಸಿದ ರೀತಿಯಿಂದ ನಮಗೆ ಯಾವ ಪಾಠಗಳಿವೆ?

7 ಪಾಠಗಳು: ಯೆಹೋವ ದೇವ್ರು ಇಸ್ರಾಯೇಲ್ಯರ ಜೊತೆ ವ್ಯವಹರಿಸಿದ ರೀತಿಯಿಂದ ಒಂದು ಎಚ್ಚರಿಕೆ ಪಾಠವನ್ನ ಕಲಿಬಹುದು. ಹಿಂದಿನ ಕಾಲದ ಇಸ್ರಾಯೇಲ್ಯರ ತರನೇ ಯೆಹೋವನು ನಮ್ಗೂ ತನ್ನ ಜನರಾಗಿರೋ ಅವಕಾಶ ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಯೆಹೋವನ ಸಾಕ್ಷಿಗಳು ಅನ್ನೋ ಹೆಸ್ರೂ ಕೊಟ್ಟಿದ್ದಾನೆ. (ಯೆಶಾ. 43:10) ನಮ್ಮ ಮಾತು  ಮತ್ತು ನಡತೆ ಒಂದೋ ಯೆಹೋವನ ಹೆಸ್ರಿಗೆ ಮಹಿಮೆ ತರುತ್ತೆ ಇಲ್ಲ ಕಳಂಕ ತರುತ್ತೆ. ಹಾಗಾಗಿ ನಾವು ಯಾವತ್ತೂ ಕೆಟ್ಟ ಕೆಲ್ಸ ಮಾಡಬಾರದು, ಯೆಹೋವನ ಹೆಸ್ರಿಗೆ ಕಳಂಕ ತರಬಾರದು. ಯೆಹೋವನ ಸಾಕ್ಷಿಗಳಾದ ನಾವು ಆತನಿಗೆ ಕೆಟ್ಟ ಹೆಸರು ತರೋದಾದ್ರೆ ಆತನ ಕೋಪ ಖಂಡಿತ ಹೊತ್ತಿ ಉರಿಯುತ್ತೆ. ಇವತ್ತಲ್ಲ ನಾಳೆ ಆತನು ತನ್ನ ಹೆಸ್ರನ್ನ ಪವಿತ್ರೀಕರಿಸೋಕೆ ಖಂಡಿತ ಕ್ರಿಯೆಗೈತಾನೆ.—ಇಬ್ರಿ. 3:13, 15; 2 ಪೇತ್ರ 2:1, 2.

8 ಯೆಹೋವ ದೇವ್ರು ‘ರೋಷಾವೇಶದಿಂದ’ ಹೊತ್ತಿ ಉರಿಯುತ್ತಾನೆ ಅಂತ ಯೋಚಿಸಿ ನಾವು ಆತನಿಗೆ ಆಪ್ತರಾಗೋಕೆ ಭಯಪಡಬೇಕಾ? ಇಲ್ಲ. ಯೆಹೋವ ದೇವ್ರು ತಾಳ್ಮೆ ಇರೋನು ಮತ್ತು ಕ್ಷಮಿಸುವವನು ಅಂತ ನಮ್ಗೆ ಗೊತ್ತು. (ಯೆಶಾ. 55:7; ರೋಮ. 2:4) ಆದ್ರೆ ಅಗತ್ಯ ಬರುವಾಗ ನಮ್ಮನ್ನು ಶಿಕ್ಷಿಸುತ್ತಾನೆ ಅಷ್ಟೇ. ತಪ್ಪು ದಾರಿ ಹಿಡಿದು ಸ್ವಲ್ಪನೂ ಬದಲಾಗದವರ ಮೇಲೆ ಯೆಹೋವನ ರೋಷಾವೇಶ ಹೊತ್ತಿ ಉರಿಯುತ್ತೆ, ಅಂಥವ್ರನ್ನ ಆತನು ತನ್ನ ಜನ್ರಲ್ಲಿ ಒಬ್ಬರಾಗಿರಲು ಬಿಡಲ್ಲ ಅಂತ ತಿಳಿಯುವಾಗ ನಮ್ಗೆ ದೇವ್ರ ಮೇಲಿರೋ ಗೌರವ ಇನ್ನಷ್ಟು ಹೆಚ್ಚಾಗಬೇಕು. (1 ಕೊರಿಂ. 5:11-13) ನಾವು ಏನು ಮಾಡಿದ್ರೆ ತನಗೆ ಕೋಪ ಬರುತ್ತೆ ಅಂತ ಯೆಹೋವನೇ ಸ್ಪಷ್ಟವಾಗಿ ಹೇಳಿದ್ದಾನೆ. ಅದನ್ನ ಬಿಟ್ಟುಬಿಡಬೇಕಾ ಬೇಡ್ವಾ ಅನ್ನೋ ತೀರ್ಮಾನ ಮಾಡೋದು ನಮ್ಗೆ ಬಿಟ್ಟ ವಿಷ್ಯ.—ಯೋಹಾ. 3:36; ರೋಮ. 1:26-32; ಯಾಕೋ. 4:8.

9, 10. ತನ್ನ ಜನರ ಮೇಲೆ ಯಾರಾದ್ರೂ ಆಕ್ರಮಣ ಮಾಡಿದಾಗ ಯೆಹೋವನು ಏನು ಮಾಡ್ತಾನೆ? ಉದಾಹರಣೆ ಕೊಡಿ.

9 ಕಾರಣ: ತನ್ನ ನಂಬಿಗಸ್ತ ಜನ್ರ ಮೇಲೆ ಯಾರಾದ್ರೂ ಆಕ್ರಮಣ ಮಾಡಿದಾಗ ಯೆಹೋವನ ಕೋಪ ಹೊತ್ತಿ ಉರಿಯುತ್ತೆ. ಉದಾಹರಣೆಗೆ, ಇಸ್ರಾಯೇಲ್ಯರು ಈಜಿಪ್ಟನ್ನ ಬಿಟ್ಟು ಹೋದಾಗ ಫರೋಹ ಮತ್ತವನ ಸೈನ್ಯ ಅವ್ರ ಮೇಲೆ ಆಕ್ರಮಣ ಮಾಡೋಕೆ ಬಂತು. ಇಸ್ರಾಯೇಲ್ಯರು ಕೆಂಪು ಸಮುದ್ರದ ಹತ್ರ ಸಿಕ್ಕಿಹಾಕಿಕೊಂಡಿದ್ದಾರೆ, ಅವ್ರು ನಿಸ್ಸಹಾಯಕರಾಗಿದ್ದಾರೆ, ಅವ್ರನ್ನ ಆರಾಮಾಗಿ ಹಿಡಿದುಬಿಡಬಹುದು, ಅವ್ರ ಮೇಲೆ ಸುಲಭವಾಗಿ ಆಕ್ರಮಣ ಮಾಡಿಬಿಡಬಹುದು ಅಂತ ಫರೋಹ ನೆನಸಿದನು. ಆದ್ರೆ ಇಸ್ರಾಯೇಲ್ಯರು ಕೆಂಪು ಸಮುದ್ರದ ಮಧ್ಯೆ ಒಣ ನೆಲದ ಮೇಲೆ ನಡ್ಕೊಂಡು ಹೋದ್ರು. ಅವ್ರು ಹೋಗ್ತಿದ್ದಾಗ ಈಜಿಪ್ಟಿನವ್ರು ಅವ್ರ ಹಿಂದೆನೇ ಬಂದ್ರು. ಆದ್ರೆ ಯೆಹೋವನು ಅವ್ರ ರಥಗಳ ಚಕ್ರಗಳನ್ನ ತೆಗೆದನು. ಅವ್ರೆಲ್ಲರನ್ನ ಸಮುದ್ರದ ಮಧ್ಯೆ ಮುಳುಗಿಸಿಬಿಟ್ಟನು. “ಈಜಿಪ್ಟಿನವರಲ್ಲಿ ಒಬ್ಬನೂ ಉಳಿಲಿಲ್ಲ.” (ವಿಮೋ. 14:25-28) ಯೆಹೋವನಿಗೆ ತನ್ನ ಜನ್ರ ಮೇಲೆ “ಶಾಶ್ವತ ಪ್ರೀತಿ” ಇದ್ದಿದ್ರಿಂದ ಈಜಿಪ್ಟಿನವ್ರ ಮೇಲೆ ಆತನ ಕೋಪ ಹೊತ್ತಿ ಉರಿಯಿತು.—ವಿಮೋಚನಕಾಂಡ 15:9-13 ಓದಿ.

ಹಿಜ್ಕೀಯನ ದಿನಗಳಲ್ಲಿ ದೇವದೂತನು ದೇವಜನರನ್ನ ಅಶ್ಶೂರದವರಿಂದ ಕಾಪಾಡಿದನು. ಹಾಗೆಯೇ ನಮ್ಮನ್ನೂ ದೇವದೂತರು ಕಾಪಾಡ್ತಾರೆ (ಪ್ಯಾರ 10, 23 ನೋಡಿ)

10 ತನ್ನ ಜನ್ರನ್ನ ಪ್ರೀತಿಸ್ತೀನಿ ಅಂತ ಯೆಹೋವನು ಹಿಜ್ಕೀಯನ ದಿನಗಳಲ್ಲೂ ತೋರಿಸಿದನು. ತನ್ನ ಜನ್ರ ಪರವಾಗಿ ಹೋರಾಡಿದನು. ಅಶ್ಶೂರ್ಯ ಆಗಿನ ಕಾಲದ ಶಕ್ತಿಶಾಲಿ ದೇಶವಾಗಿತ್ತು. ಅವ್ರಿಗೆ ಬಲಶಾಲಿಯಾದ ಮಿಲಿಟರಿ ಸೈನ್ಯ ಸಹ ಇತ್ತು. ಅವ್ರು ಯೆರೂಸಲೇಮಿನ ಮೇಲೆ ದಾಳಿ ಮಾಡಿದ್ರು. ಅಶ್ಶೂರ್ಯರು ಮುತ್ತಿಗೆ ಹಾಕಿದ್ರಿಂದ ‘ನಾವು ನರಳಿ ನರಳಿ ಸಾಯಬೇಕಾಗುತ್ತೆ’ ಅಂತ ಯೆಹೋವನ ನಿಷ್ಠಾವಂತ ಸೇವಕರು ಭಯದಿಂದ ಕಂಗಾಲಾದ್ರು. (2 ಅರ. 18:27) ಆಗ ಯೆಹೋವನು ಏನು ಮಾಡಿದನು? ಆತನು ತನ್ನ ದೇವದೂತನನ್ನ ಕಳುಹಿಸಿ 1,85,000 ಅಶ್ಶೂರ್ಯ ಸೈನಿಕರನ್ನ ಒಂದೇ ರಾತ್ರಿ ಸಂಹರಿಸಿದನು. (2 ಅರ. 19:34, 35) ಮಾರನೇ ದಿನ ಅಶ್ಶೂರ್ಯರ ಕ್ಯಾಂಪ್‌ ಹೇಗಿದ್ದಿರಬಹುದು ಅಂತ ಸ್ವಲ್ಪ ಊಹಿಸಿ ನೋಡಿ. ಎಲ್ಲಾ ಕಡೆ ಕತ್ತಿ, ಬರ್ಜಿ, ಗುರಾಣಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೊಂಬನ್ನ ಊದೋಕಾಗಲಿ, ಸೈನ್ಯವನ್ನ ಸಜ್ಜುಗೊಳಿಸೋಕಾಗಲಿ ಅಲ್ಲಿ ಯಾರೂ ಇರಲಿಲ್ಲ. ಎಲ್ಲಾ ಕಡೆ ಹೆಣದ ರಾಶಿಗಳು ಬಿದ್ದಿದ್ದವು, ಸ್ಮಶಾನ ಮೌನ ಆವರಿಸಿತ್ತು!

11. ಯೆಹೋವನು ತನ್ನ ಜನರನ್ನ ಸಂರಕ್ಷಿಸಿದ ಉದಾಹರಣೆಗಳಿಂದ ನಮಗೆ ಹೇಗೆ ಧೈರ್ಯ, ಸಾಂತ್ವನ ಸಿಗುತ್ತೆ?

11 ಪಾಠಗಳು: ಆ ಘಟನೆಗಳು ಯೆಹೋವನ ಜನ್ರ ಶತ್ರುಗಳಿಗೆ ಇರುವ ಎಚ್ಚರಿಕೆಯ ಗಂಟೆಯಾಗಿದೆ. ತನ್ನ ಜನ್ರ ಮೇಲೆ ಆಕ್ರಮಣ ಮಾಡಿದ್ರೆ ಯೆಹೋವನು ಸುಮ್ಮನಿರಲ್ಲ.  “ಜೀವ ಇರೋ ದೇವರ ಕೈಯಲ್ಲಿ ಸಿಕ್ಕಿಹಾಕೊಳ್ಳೋದು ಭಯಂಕರವಾಗಿ ಇರುತ್ತೆ.” (ಇಬ್ರಿ. 10:31) ಆದ್ರೆ ಇದೇ ಘಟನೆಗಳು ನಮ್ಗೆ ಧೈರ್ಯ ಮತ್ತು ಸಾಂತ್ವನ ಕೊಡ್ತವೆ. ನಮ್ಮ ಮುಖ್ಯ ಶತ್ರುವಾದ ಸೈತಾನ ಯಾವತ್ತೂ ಜಯಗಳಿಸಲ್ಲ ಅನ್ನೋ ಸಾಂತ್ವನ ಕೊಡುತ್ತವೆ. ಅವನಿಗಿರೋ “ಸಮಯ ತುಂಬಾ ಕಮ್ಮಿ.” (ಪ್ರಕ. 12:12) ಬೇಗನೆ ಅವನ ಆಳ್ವಿಕೆ ಕೊನೆಯಾಗಲಿದೆ. ಅಲ್ಲಿವರೆಗೂ ನಾವು ಧೈರ್ಯದಿಂದ ಯೆಹೋವನ ಸೇವೆ ಮಾಡ್ತಾ ಮುಂದುವರಿಯಬಹುದು. ಯಾಕಂದ್ರೆ ಯಾವ ವ್ಯಕ್ತಿಯಾಗಲಿ, ಸಂಘಟನೆಯಾಗಲಿ, ಸರ್ಕಾರವಾಗಲಿ ನಮ್ಮನ್ನ ದೇವರ ಇಷ್ಟ ಮಾಡೋದ್ರಿಂದ ತಡೆಯೋಕಾಗಲ್ಲ. (ಕೀರ್ತನೆ 118:6-9 ಓದಿ.) ನಮಗಿರೋ ಭರವಸೆ ಬಗ್ಗೆ ಅಪೊಸ್ತಲ ಪೌಲ ಹೀಗೆ ಹೇಳಿದನು: “ದೇವರು ನಮ್ಮ ಕಡೆ ಇದ್ರೆ ನಮ್ಮನ್ನ ಎದುರಿಸೋಕೆ ಯಾರಿಂದಾಗುತ್ತೆ?”—ರೋಮ. 8:31.

12. ಮಹಾಸಂಕಟದ ಸಮಯದಲ್ಲಿ ಯೆಹೋವನ ಕೋಪ ಯಾಕೆ ಹೊತ್ತಿ ಉರಿಯುತ್ತೆ?

12 ಇಸ್ರಾಯೇಲ್ಯರು ಈಜಿಪ್ಟಿನವ್ರ ಕೈಯಲ್ಲಿ ಸಿಕ್ಕಿಹಾಕಿಕೊಂಡಾಗ ಮತ್ತು ಅಶ್ಶೂರ್ಯರು ಯೆರೂಸಲೇಮನ್ನ ಮುತ್ತಿಗೆ ಹಾಕಿದಾಗ ಯೆಹೋವನು ಅವ್ರನ್ನ ಹೇಗೆ ಕಾಪಾಡಿದನೋ ಅದೇ ರೀತಿ ಮಹಾಸಂಕಟದ ಸಮಯದಲ್ಲಿ ನಮ್ಮನ್ನೂ ಕಾಪಾಡ್ತಾನೆ. ಶತ್ರುಗಳು ನಮ್ಮ ಮೇಲೆ ಆಕ್ರಮಣ ಮಾಡುವಾಗ ಯೆಹೋವನ ಕೋಪ ಅವ್ರ ವಿರುದ್ಧ ಹೊತ್ತಿ ಉರಿಯುತ್ತೆ. ಯಾಕಂದ್ರೆ ಆತನು ನಮ್ಮನ್ನು ತುಂಬಾ ಪ್ರೀತಿಸ್ತಾನೆ. ನಮ್ಮ ಮೇಲೆ ಶತ್ರುಗಳು ಆಕ್ರಮಣ ಮಾಡ್ದಾಗ ಅದು ಯೆಹೋವ ದೇವರ ಕಣ್ಣುಗುಡ್ಡೆಯನ್ನ ಮುಟ್ಟಿದಂತೆ  ಇರುತ್ತೆ. ಅದು ಎಂಥಾ ಮೂರ್ಖ ಕೆಲ್ಸ ಅಲ್ವಾ! (ಜೆಕ. 2:8, 9) ಆಗ, ಹಿಂದೆಂದೂ ನಡೆದಿರದಂಥ ಮಹಾ ಸಂಹಾರ ಆಗುತ್ತೆ. ಆದ್ರೆ ಯೆಹೋವ ದೇವ್ರು ತನ್ನ ಶತ್ರುಗಳ ಮೇಲೆ ಕೋಪಾಗ್ನಿಯನ್ನ ಸುರಿಸುವಾಗ ತಮಗೆ ಯಾಕೆ ಹೀಗ್ತಾಗ್ತಿದೆ ಅಂತ ಕೇಳೋ ಹಕ್ಕು ಅವ್ರಿಗಿರಲ್ಲ. ಯಾಕೆ?

ಯೆಹೋವನು ಯಾವ ಎಚ್ಚರಿಕೆಯನ್ನ ಕೊಟ್ಟಿದ್ದಾನೆ?

13. ಯೆಹೋವನು ಯಾವ ಎಚ್ಚರಿಕೆಯನ್ನ ಕೊಟ್ಟಿದ್ದಾನೆ?

13 ಯೆಹೋವನು “ತಟ್ಟಂತ ಕೋಪ ಮಾಡ್ಕೊಳ್ಳಲ್ಲ.” ತನ್ನನ್ನ ವಿರೋಧಿಸಿದವ್ರನ್ನ, ತನ್ನ ಜನರ ಮೇಲೆ ಆಕ್ರಮಣ ಮಾಡೋಕೆ ಪ್ರಯತ್ನಿಸಿದವ್ರನ್ನ ನಾಶ ಮಾಡ್ತೀನಿ ಅಂತ ಆತನು ಸಾಕಷ್ಟು ಎಚ್ಚರಿಕೆಗಳನ್ನ ಕೊಟ್ಟಿದ್ದಾನೆ. (ವಿಮೋ. 34:6, 7) ಕೊನೆಯಲ್ಲಿ ನಡೆಯಲಿರೋ ಮಹಾ ಯುದ್ಧದ ಬಗ್ಗೆ ಎಚ್ಚರಿಸಲಿಕ್ಕಾಗಿ ಯೆಹೋವನು ಪ್ರವಾದಿಗಳಾದ ಯೆರೆಮೀಯ, ಯೆಹೆಜ್ಕೇಲ, ದಾನಿಯೇಲರನ್ನ, ಯೇಸು ಕ್ರಿಸ್ತನನ್ನ ಮತ್ತು ಅಪೊಸ್ತಲರಾದ ಪೇತ್ರ, ಪೌಲ, ಯೋಹಾನರನ್ನ ಉಪಯೋಗಿಸಿದ್ದಾನೆ.—“ಬರಲಿರೋ ಮಹಾ ಯುದ್ಧದ ಬಗ್ಗೆ ಯೆಹೋವನು ಎಚ್ಚರಿಸಿದ್ದಾನೆ” ಅನ್ನೋ ಚೌಕ ನೋಡಿ.

14, 15. ಯೆಹೋವ ದೇವರು ಯಾವೆಲ್ಲಾ ಕೆಲ್ಸವನ್ನ ಮಾಡಿದ್ದಾನೆ ಮತ್ತು ಯಾಕೆ?

14 ಯೆಹೋವನು ಈ ಎಚ್ಚರಿಕೆಗಳನ್ನ ಬೈಬಲಿನಲ್ಲಿ ಬರೆಸಿಟ್ಟಿದ್ದಾನೆ. ಬೈಬಲ್‌ ಹೆಚ್ಚು ಭಾಷೆಗಳಲ್ಲಿ ಭಾಷಾಂತರ ಆಗುವಂತೆ ಮತ್ತು ಆದಷ್ಟು ಹೆಚ್ಚು ಜನರ ಕೈ ಸೇರುವಂತೆ  ಮಾಡಿದ್ದಾನೆ. ಆತನು ತನ್ನ ಸೇವಕರನ್ನ ಬಳಸಿ ಇಡೀ ಭೂಮಿಯಲ್ಲಿರೋ ಜನರಿಗೆ ತನ್ನ ಜೊತೆ ಆಪ್ತ ಸ್ನೇಹ ಬೆಳೆಸಿಕೊಳ್ಳೋಕೆ ಸಹಾಯ ಮಾಡ್ತಿದ್ದಾನೆ. ‘ಯೆಹೋವನ ಮಹಾ ದಿನದ’ ಬಗ್ಗೆ ಎಚ್ಚರಿಕೆಯನ್ನ ಕೊಡ್ತಿದ್ದಾನೆ. (ಚೆಫ. 1:14; ಕೀರ್ತ. 2:10-12; 110:3) ಬೈಬಲ್‌ ಆಧಾರಿತ ಪ್ರಕಾಶನಗಳನ್ನ ನೂರಾರು ಭಾಷೆಗಳಲ್ಲಿ ಭಾಷಾಂತರಿಸಲು ತನ್ನ ಜನರನ್ನ ಪ್ರೇರಿಸಿದ್ದಾನೆ. ಯೆಹೋವನ ಸೇವಕರು ಬೈಬಲಿನಲ್ಲಿರೋ ಆಶೀರ್ವಾದಗಳನ್ನ ಮತ್ತು ಎಚ್ಚರಿಕೆಯ ಸಂದೇಶವನ್ನ ಜನರಿಗೆ ತಿಳಿಸಲು ಪ್ರತಿ ವರ್ಷ ಕೋಟ್ಯಾಂತರ ತಾಸುಗಳನ್ನ ಕಳೆಯುತ್ತಿದ್ದಾರೆ. ಇದಕ್ಕೂ ಯೆಹೋವನೇ ಕಾರಣ.

15 ಯೆಹೋವನು ಯಾಕೆ ಈ ಎಲ್ಲಾ ಕೆಲಸಗಳನ್ನ ಮಾಡಿಸ್ತಿದ್ದಾನೆ? ಯಾಕಂದ್ರೆ, ‘ಯಾರೂ ನಾಶ ಆಗಬಾರದು . . . ಎಲ್ರಿಗೂ ತಮ್ಮ ತಪ್ಪನ್ನ ತಿದ್ದಿಕೊಳ್ಳೋಕೆ ಅವಕಾಶ ಸಿಗಬೇಕು ಅನ್ನೋದೇ ಆತನ ಆಸೆ.’ (2 ಪೇತ್ರ 3:9) ನಮ್ಮನ್ನ ತುಂಬ ಪ್ರೀತಿಸುವ, ತಾಳ್ಮೆಯ ದೇವರ ಪರವಾಗಿ ನಾವು ಜನರಿಗೆ ಆತನ ಸಂದೇಶವನ್ನ ತಿಳಿಸೋದು ನಮಗೆ ಸಿಕ್ಕಿರೋ ದೊಡ್ಡ ಅವಕಾಶ! ಆದ್ರೆ ಯಾರು ಈ ಎಚ್ಚರಿಕೆಗೆ ಕಿವಿಗೊಡಲ್ವೋ ಅವ್ರಿಗೆ ಬದಲಾಗೋಕೆ ಕೊಟ್ಟಿರೋ ಸಮಯ ಬಲುಬೇಗನೇ ಮುಗಿದುಹೋಗುತ್ತೆ.

ಯೆಹೋವನ ಕೋಪ ಯಾವಾಗ “ಭಗ್ಗಂತ ಉರಿಯುತ್ತೆ”?

16, 17. ಕೊನೇ ಯುದ್ಧಕ್ಕಾಗಿ ಯೆಹೋವನು ಒಂದು ದಿನವನ್ನ ನಿರ್ಧರಿಸಿದ್ದಾನಾ? ವಿವರಿಸಿ.

16 ಯೆಹೋವನು ಯಾವ ದಿನದಲ್ಲಿ ಕೊನೇ ಯುದ್ಧ ಮಾಡಬೇಕು ಅಂತ ಈಗಾಗಲೇ ನಿರ್ಧಾರ ಮಾಡಿದ್ದಾನೆ. ತನ್ನ ಜನ್ರ ಮೇಲೆ ಯಾವಾಗ ಆಕ್ರಮಣ ಆಗುತ್ತೆ  ಅಂತ ಆತನಿಗೆ ಚೆನ್ನಾಗಿ ಗೊತ್ತಿದೆ. (ಮತ್ತಾ. 24:36) ಯೆಹೋವನಿಗೆ ಅದು ಹೇಗೆ ಗೊತ್ತು?

17 ಕಳೆದ ಅಧ್ಯಾಯದಲ್ಲಿ ನಾವು ನೋಡಿದ ಹಾಗೆ ಯೆಹೋವ ದೇವರು ಗೋಗನಿಗೆ, ‘ನಾನು ನಿನ್ನ ದವಡೆಗೆ ಕೊಕ್ಕೆಗಳನ್ನ ಹಾಕ್ತೀನಿ’ ಅಂತ ಹೇಳಿದನು. (ಯೆಹೆ. 38:4) ಯೆಹೋವ ದೇವ್ರು ಎಲ್ಲಾ ಜನಾಂಗಗಳನ್ನ ಒಂದು ಯುದ್ಧಕ್ಕಾಗಿ ಒಟ್ಟುಸೇರಿಸ್ತಾನೆ. ಆದ್ರೆ ಇದ್ರ ಅರ್ಥ ಜನಾಂಗಗಳನ್ನ ಯೆಹೋವನೇ ಕೆಣಕಿ ಯುದ್ಧ ಮಾಡಿಸ್ತಾನೆ ಅಂತಲ್ಲ, ಜನಾಂಗಗಳ ಕೈಯಲ್ಲಿ ಬಲವಂತವಾಗಿ ಯುದ್ಧ ಮಾಡಿಸ್ತಾನೆ ಅಂತನೂ ಅಲ್ಲ. ಬದಲಿಗೆ ಯೆಹೋವ ದೇವ್ರಿಗೆ ಶತ್ರುಗಳ ಮನಸ್ಸಲ್ಲಿರೋ ಆಲೋಚನೆಗಳು ಗೊತ್ತಿವೆ ಮತ್ತು ಆ ಸನ್ನಿವೇಶಗಳಲ್ಲಿ ಅವ್ರು ಹೇಗೆ ನಡ್ಕೊಳ್ತಾರೆ ಅಂತ ಚೆನ್ನಾಗಿ ಗೊತ್ತಿದೆ ಅಂತ ಇದು ಸೂಚಿಸುತ್ತೆ.—ಕೀರ್ತ. 94:11; ಯೆಶಾ. 46:9, 10; ಯೆರೆ. 17:10.

18. ಜನರು ಯಾಕೆ ಸರ್ವಶಕ್ತನಾದ ಯೆಹೋವನ ವಿರುದ್ಧ ಯುದ್ಧ ಮಾಡ್ತಾರೆ?

18 ಈ ಯುದ್ಧವನ್ನ ಯೆಹೋವನು ಶುರು ಮಾಡಲ್ಲ ಮತ್ತು ಈ ಯುದ್ಧ ಮಾಡೋಕೆ ತನ್ನ ವಿರೋಧಿಗಳಿಗೆ ಬಲವಂತ ಮಾಡಲ್ಲ ಅಂದ್ಮೇಲೆ ಅವ್ರು ಯಾಕೆ ಸರ್ವಶಕ್ತ ದೇವ್ರ ವಿರುದ್ಧ ಯುದ್ಧ ಮಾಡೋಕೆ ಹೋಗ್ತಾರೆ? ಒಂದು ಕಾರಣ ಏನಂದ್ರೆ ಬಹುಶಃ ಅವ್ರು ದೇವರಿಲ್ಲ ಅಂತನೋ ಅಥವಾ ಮನುಷ್ಯರ ವಿಷ್ಯದಲ್ಲಿ ಅವನು ತಲೆ ಹಾಕೋಕೆ ಹೋಗಲ್ಲ ಅಂತಾನೋ ಅಂದ್ಕೊಂಡಿರುತ್ತಾರೆ. ಯಾಕೆ ಅವ್ರು ಹೀಗೆ ನೆನಸ್ತಾರೆ? ಯಾಕಂದ್ರೆ ಈಗಾಗಲೆ ಅವ್ರು ಭೂಮಿಯಲ್ಲಿರೋ ಎಲ್ಲಾ ಸುಳ್ಳು ಧರ್ಮಗಳನ್ನ ನಾಶ  ಮಾಡಿರ್ತಾರೆ. ಒಂದುವೇಳೆ ದೇವರಿದ್ರೆ ತನ್ನನ್ನ ಪ್ರತಿನಿಧಿಸ್ತಿದ್ದ ಧರ್ಮಗಳ ಪರವಾಗಿ ಏನಾದ್ರೂ ಮಾಡ್ತಿದ್ದನು ಅಂತ ಅವ್ರು ಯೋಚ್ನೆ ಮಾಡ್ತಾರೆ. ತನ್ನ ಹೆಸ್ರನ್ನ ಹಾಳು ಮಾಡಿದ ಎಲ್ಲಾ ಸುಳ್ಳು ಧರ್ಮಗಳನ್ನ ನಾಶ ಮಾಡೋ ಯೋಚ್ನೆನ ಅವ್ರ ತಲೆಯಲ್ಲಿ ಹಾಕಿರೋದು ಯೆಹೋವನೇ ಅಂತ ಅವ್ರಿಗೆ ಅರ್ಥ ಆಗಲ್ಲ.—ಪ್ರಕ. 17:16, 17.

19. ಸುಳ್ಳುಧರ್ಮಗಳು ನಾಶವಾದ ಮೇಲೆ ಏನಾಗಬಹುದು?

19 ಸುಳ್ಳು ಧರ್ಮ ನಾಶ ಆದ್ಮೇಲೆ ಯೆಹೋವ ದೇವ್ರು ತನ್ನ ಸೇವಕರಿಗೆ ಕಠಿಣ ಸಂದೇಶವೊಂದನ್ನ ಸಾರೋಕೆ ಹೇಳ್ತಾನೆ. ಪ್ರಕಟನೆ ಪುಸ್ತಕದಲ್ಲಿ ಆ ಸಂದೇಶವನ್ನ ಆಲಿಕಲ್ಲಿನ ಮಳೆಗೆ ಹೋಲಿಸಲಾಗಿದೆ. ಒಂದು ಆಲಿಕಲ್ಲು ಸುಮಾರು 20 ಕೆ.ಜಿ ಇರುತ್ತೆ ಅಂತ ಅಲ್ಲಿ ತಿಳಿಸಲಾಗಿದೆ. (ಪ್ರಕ. 16:21, ಪಾದಟಿಪ್ಪಣಿ) ಅಷ್ಟು ಘೋರವಾದ ಸಂದೇಶವನ್ನು ಅವ್ರು ಸಾರ್ತಾರೆ. ಬಹುಶಃ ಅದು ರಾಜಕೀಯ ಮತ್ತು ವಾಣಿಜ್ಯ ವ್ಯವಸ್ಥೆಗಳು ನಾಶವಾಗುತ್ತೆ ಅನ್ನೋ ಸಂದೇಶ ಆಗಿರಬಹುದು. ಅದನ್ನ ಕೇಳಿದಾಗ ಜನ್ರು ದೇವ್ರನ್ನ ಬಯ್ಯೋಕೆ ಶುರುಮಾಡ್ತಾರೆ. ಬಹುಶಃ ದೇವಜನ್ರನ್ನ ಸಂಪೂರ್ಣವಾಗಿ ನಾಶ ಮಾಡೋಕೆ ಜನಾಂಗಗಳನ್ನ ಪ್ರೇರಿಸೋದು ಈ ಸಂದೇಶನೇ ಇರಬಹುದು. ಅವ್ರ ಕಣ್ಣಿಗೆ ನಾವು ಬಲಹೀನರು, ನಿಸ್ಸಹಾಯಕರು ಆಗಿರೋದ್ರಿಂದ ಸುಲಭವಾಗಿ ಆಕ್ರಮಣ ಮಾಡಬಹುದು ಅಂತ ನೆನಸ್ತಾರೆ. ಅವ್ರು ಎಂಥ ದೊಡ್ಡ ತಪ್ಪನ್ನ ಮಾಡ್ತಾರಲ್ವಾ!

ಯೆಹೋವನು ತನ್ನ ಕೋಪವನ್ನ ಹೇಗೆ ತೋರಿಸ್ತಾನೆ?

20, 21. ಗೋಗನು ಯಾರು? ಮತ್ತು ಅವನಿಗೆ ಏನಾಗುತ್ತೆ?

20 ನಮ್ಮ ಮೇಲೆ ಆಕ್ರಮಣ ಮಾಡುವ ಜನಾಂಗಗಳ ಗುಂಪೇ “ಮಾಗೋಗ್‌ ದೇಶದ ಗೋಗ” ಅಂತ ಈ ಪುಸ್ತಕದ 17 ನೇ ಅಧ್ಯಾಯದಲ್ಲಿ ನಾವು ಕಲಿತ್ವಿ. (ಯೆಹೆ. 38:2) ನಮ್ಮನ್ನ ನಾಶ ಮಾಡೋಕೆ ಅವ್ರು ಗುಂಪು ಕಟ್ಟಿಕೊಂಡಿದ್ರೂ ಅವ್ರ ಒಗ್ಗಟ್ಟು ಹೆಸ್ರಿಗೆ ಮಾತ್ರ ಅಷ್ಟೇ. ಅದ್ರ ಸದಸ್ಯರ ಮಧ್ಯೆ ಸಹಕಾರದ ಮುಖವಾಡ ಇರುತ್ತೆ. ಆದ್ರೆ ಒಳಗೊಳಗೆ ಅಹಂಕಾರ ಹೊಟ್ಟೆಕಿಚ್ಚು, ಅತಿಯಾದ ದೇಶಾಭಿಮಾನ ಕಿಡಿಕಾರುತ್ತಾ ಇರುತ್ತೆ. ಹಾಗಾಗಿ ಯೆಹೋವನಿಗೆ ಅವ್ರನ್ನ ಗಲಿಬಿಲಿ ಮಾಡೋಕೆ ಅಂದ್ರೆ ‘ಒಬ್ರು ಇನ್ನೊಬ್ರ ವಿರುದ್ಧ ಕತ್ತಿ ಎತ್ತುವಂತೆ’ ಮಾಡೋಕೆ ತುಂಬಾ ಸುಲಭ. (ಯೆಹೆ. 38:21) ಹಾಗಂತ ಇದರರ್ಥ ಜನಾಂಗಗಳ ನಾಶ ಮಾನವರ ಕೈಯಿಂದ ಆಗುತ್ತೆ ಅಂತಲ್ಲ.

21 ನಮ್ಮ ಶತ್ರುಗಳು ನಾಶ ಆಗೋದಕ್ಕೂ ಮುಂಚೆ ಮನುಷ್ಯಕುಮಾರನ ಸೂಚನೆಯನ್ನ ನೋಡ್ತಾರೆ. (ಮತ್ತಾ. 24:30) ಬಹುಶಃ ಅವ್ರು ಯೆಹೋವ ಮತ್ತು ಯೇಸು ತಮ್ಮ ಅದ್ಭುತ ಶಕ್ತಿ ತೋರಿಸೋದನ್ನ ನೋಡಬಹುದು. ಅವ್ರು ಏನನ್ನ ನೋಡ್ತಾರೋ ಅದ್ರಿಂದ ಅವ್ರಿಗೆ ತುಂಬಾ ಭಯ ಆಗುತ್ತೆ. ಇದ್ರ ಬಗ್ಗೆ ಯೇಸು ಹೀಗೆ ಹೇಳಿದನು: “ಭೂಮಿ ಮೇಲೆ ಏನೇನು ಆಗುತ್ತೋ ಅಂತ ಒಂದು ಕಡೆ ಚಿಂತೆ ಇನ್ನೊಂದು ಕಡೆ ಭಯದಿಂದ ಜನ ತಲೆ ತಿರುಗಿ ಬೀಳ್ತಾರೆ.” (ಲೂಕ 21:25-27) ಆಗ ಅವ್ರಿಗೆ ಯೆಹೋವನ ಜನ್ರ ಮೇಲೆ ಆಕ್ರಮಣ ಮಾಡಿ ದೊಡ್ಡ ತಪ್ಪು ಮಾಡಿದ್ವಿ ಅಂತ ಅರ್ಥ ಆಗುತ್ತೆ. ಅವ್ರು ಯೆಹೋವನೇ ಸೃಷ್ಟಿಕರ್ತ ಅಂತ ಒಪ್ಕೊಬೇಕಾಗುತ್ತೆ. ಜೊತೆಗೆ ಯೆಹೋವನು ಸೈನ್ಯಗಳ ದೇವ್ರು, ಆತನ ಕೈ ಕೆಳಗೆ ತುಂಬಾ ದೊಡ್ಡ ಸ್ವರ್ಗೀಯ ಸೈನ್ಯ ಇದೆ ಅಂತ ಅವ್ರಿಗೆ ಅರ್ಥ ಆಗುತ್ತೆ. (ಕೀರ್ತ. 46:6-11; ಯೆಹೆ. 38:23) ಆಗ ಯೆಹೋವನು ತನ್ನ ಸ್ವರ್ಗೀಯ ಸೈನ್ಯವನ್ನು ಮತ್ತು ಪ್ರಕೃತಿಯಲ್ಲಿರೋ ಶಕ್ತಿಗಳನ್ನ ಉಪಯೋಗಿಸಿ ತನ್ನ ನಂಬಿಗಸ್ತ ಸೇವಕರನ್ನ ಕಾಪಾಡ್ತಾನೆ ಮತ್ತು ತನ್ನ ಎಲ್ಲಾ ಶತ್ರುಗಳನ್ನ ಸಂಪೂರ್ಣವಾಗಿ ನಾಶ ಮಾಡ್ತಾನೆ.—2 ಪೇತ್ರ 2:9 ಓದಿ.

ತನ್ನ ಜನರ ಮೇಲೆ ಯಾರಾದ್ರೂ ಆಕ್ರಮಣ ಮಾಡಿದ್ರೆ ಯೆಹೋವನು ತನ್ನ ಸ್ವರ್ಗೀಯ ಸೈನ್ಯವನ್ನ ಬಳಸಿ ಕೋಪ ತೋರಿಸ್ತಾನೆ (ಪ್ಯಾರ 21 ನೋಡಿ)

22, 23. ದೇವರ ಜನರನ್ನ ಯಾರು ಕಾಪಾಡ್ತಾರೆ? ಮತ್ತು ಆ ಕೆಲಸದ ಬಗ್ಗೆ ಅವ್ರಿಗೆ ಹೇಗನಿಸುತ್ತೆ?

ನಾವು ಯೆಹೋವನ ದಿನದ ಬಗ್ಗೆ ತಿಳ್ಕೊಂಡಿರೋದ್ರಿಂದ ಏನು ಮಾಡಬೇಕು?

22 ಯೆಹೋವ ದೇವ್ರ ಶತ್ರುಗಳನ್ನ ಯೇಸು ನಾಶ ಮಾಡ್ತಾನೆ. ಯೆಹೋವ ದೇವ್ರನ್ನ ಪ್ರೀತಿಸುವ ಆತನ ಸೇವೆ ಮಾಡೋ ಆರಾಧಕರನ್ನ ಯೇಸು ರಕ್ಷಿಸ್ತಾನೆ. ಇದನ್ನ ಮಾಡೋಕೆ ಯೇಸು ಕ್ರಿಸ್ತನಿಗೆ ತುಂಬಾ ಖುಷಿ ಆಗುತ್ತೆ. ಆಗ ಅಭಿಷಿಕ್ತರಿಗೆ ಹೇಗೆ ಅನಿಸಬಹುದು ಅಂತ ಸ್ವಲ್ಪ ಊಹಿಸಿಕೊಳ್ಳಿ. ಹರ್ಮಗೆದ್ದೋನ್‌ ಯುದ್ಧ ಆಗೋಕೂ ಮುಂಚೆ  ಯಾವುದೋ ಒಂದು ಸಮಯದಲ್ಲಿ ಭೂಮಿಲಿ ಉಳಿದಿರೋ ಅಭಿಷಿಕ್ತರನ್ನ ಸ್ವರ್ಗಕ್ಕೆ ಕರಕೊಂಡು ಹೋಗಲಾಗುತ್ತೆ ಮತ್ತು ಅವ್ರು ಯೇಸು ಕ್ರಿಸ್ತನ ಜೊತೆ ಕೊನೇ ಯುದ್ಧದಲ್ಲಿ ಭಾಗವಹಿಸ್ತಾರೆ. (ಪ್ರಕ. 17:12-14) ಕೊನೇ ದಿನಗಳಲ್ಲಿ ಬೇರೆ ಕುರಿಗಳ ಜೊತೆ ಒಟ್ಟಿಗೆ ಕೆಲ್ಸ ಮಾಡಿದ ಅಭಿಷಿಕ್ತರಲ್ಲಿ ಕೆಲವ್ರು ಅವ್ರ ಜೊತೆ ಆಪ್ತವಾದ ಸಂಬಂಧವನ್ನು ಬೆಳೆಸಿಕೊಂಡಿರ್ತಾರೆ ಅನ್ನೋದ್ರಲ್ಲಿ ಯಾವುದೇ ಸಂಶಯ ಇಲ್ಲ. ಕಷ್ಟಕರ ಸನ್ನಿವೇಶಗಳಲ್ಲಿ ತಮಗೆ ನಿಷ್ಠೆಯಿಂದ ಬೆಂಬಲ ನೀಡಿದ ಸಹೋದರ ಸಹೋದರಿಯರ ಪರವಾಗಿ ಹೋರಾಡೋಕೆ ಆಗ ಅವ್ರಿಗೆ ಅಧಿಕಾರ ಮತ್ತು ಶಕ್ತಿ ಇರುತ್ತೆ.—ಮತ್ತಾ. 25:31-40.

23 ಯೇಸುವಿನ ಈ ಸೈನ್ಯದಲ್ಲಿ ದೇವದೂತರೂ ಇರ್ತಾರೆ. (2 ಥೆಸ. 1:7; ಪ್ರಕ. 19:14) ಸೈತಾನ ಮತ್ತವನ ದೆವ್ವಗಳನ್ನ ಸ್ವರ್ಗದಿಂದ ಎಸೆಯೋಕೆ ಈ ದೇವದೂತರು ಈಗಾಗಲೇ ಯೇಸುವಿಗೆ ಸಹಾಯ ಮಾಡಿದ್ದಾರೆ. (ಪ್ರಕ. 12:7-9) ಯೆಹೋವ ದೇವ್ರನ್ನ ಆರಾಧಿಸಲು ಇಷ್ಟಪಡುವ ಜನ್ರನ್ನ ಒಟ್ಟುಸೇರಿಸೋದ್ರಲ್ಲಿ ಇವ್ರು ಕೈಜೋಡಿಸ್ತಾರೆ. (ಪ್ರಕ. 14:6, 7) ಹಾಗಾಗಿ ತನ್ನ ನಂಬಿಗಸ್ತ ಸೇವಕರನ್ನ ಕಾಪಾಡೋಕೆ ಯೆಹೋವ ದೇವ್ರು ಇವ್ರನ್ನ ಉಪಯೋಗಿಸೋದು ಎಷ್ಟು ಸೂಕ್ತ ಅಲ್ವಾ? ಯೆಹೋವ ದೇವ್ರ ಶತ್ರುಗಳನ್ನ ನಾಶ ಮಾಡೋ ಮೂಲಕ ಆತನ ಹೆಸ್ರಿಗೆ ಬಂದಿರೋ ಕಳಂಕನ ತೆಗೆಯೋ ಅವಕಾಶ ಸಿಕ್ಕಿದ್ದಕ್ಕೆ ಈ ದೇವದೂತರಿಗೆ ತುಂಬಾ ಖುಷಿ ಅನ್ಸುತ್ತೆ.—ಮತ್ತಾ. 6:9, 10.

24. ಬೇರೆ ಕುರಿಗಳ ದೊಡ್ಡ ಗುಂಪಿನವ್ರು ಹೇಗೆ ಪ್ರತಿಕ್ರಿಯಿಸ್ತಾರೆ?

24 ಬೇರೆ ಕುರಿಗಳ ದೊಡ್ಡ ಗುಂಪಿನವ್ರಲ್ಲಿ ಯಾರೂ ಭಯಪಡಬೇಕಾಗಿಲ್ಲ. ಯಾಕಂದ್ರೆ ಅವ್ರನ್ನ ಕಾಪಾಡೋಕೆ ತುಂಬ ಬಲಶಾಲಿಯಾಗಿರೋ ಹುರುಪಿನಿಂದ ಕೆಲ್ಸ ಮಾಡೋ ಸೈನ್ಯ ತಯಾರಾಗಿದೆ. ದೊಡ್ಡ ಗುಂಪಿನವ್ರು ತಮ್ಮ ‘ತಲೆ ಮೇಲಕ್ಕೆತ್ತಿ ಸ್ಥಿರವಾಗಿ ನಿಂತ್ಕೊತಾರೆ. ಯಾಕಂದ್ರೆ ಅವರ ಬಿಡುಗಡೆ ಹತ್ರ ಆಗಿರುತ್ತೆ.’ (ಲೂಕ 21:28) ಹಾಗಾಗಿ ಯೆಹೋವನ ದಿನ ಬರೋಕೂ ಮುಂಚೆ ನಮ್ಮಿಂದ ಆದಷ್ಟು ಹೆಚ್ಚು ಜನ್ರಿಗೆ ಆತನ ಬಗ್ಗೆ ತಿಳಿಸೋದು ತುಂಬ ಪ್ರಾಮುಖ್ಯ ಅಲ್ವಾ? ನಾವು ಹಾಗೆ ಮಾಡಿದ್ರೆನೇ ಜನ್ರು ಕರುಣೆಯ ಮಹಾ ರಕ್ಷಕನಾದ ನಮ್ಮ ತಂದೆಯ ಬಗ್ಗೆ ತಿಳ್ಕೊಂಡು ಆತನನ್ನ ಪ್ರೀತಿಸೋಕಾಗುತ್ತೆ.—ಚೆಫನ್ಯ 2:2, 3 ಓದಿ.

ಹರ್ಮಗೆದ್ದೋನಿನಲ್ಲಿ ನಾವು ಹೋರಾಡಲ್ಲ. ಶತ್ರುಗಳೇ ಒಬ್ಬರ ಮೇಲೊಬ್ಬರು ಹೋರಾಡ್ತಾರೆ ಆಗ ದೇವದೂತರು ನಮ್ಮನ್ನ ಕಾಪಾಡ್ತಾರೆ.—ಯೆಹೆ. 38:21 (ಪ್ಯಾರ 22-24 ನೋಡಿ)

25. ಮುಂದಿನ ಅಧ್ಯಾಯದಲ್ಲಿ ನಾವೇನು ಕಲಿಯಲಿದ್ದೇವೆ?

25 ಇಲ್ಲಿವರೆಗೆ ನಡೆದ ಯುದ್ಧಗಳು ಮನುಷ್ಯರಿಗೆ ದುಃಖ, ಕಷ್ಟ, ಕಣ್ಣೀರನ್ನೇ ತಂದುಕೊಟ್ಟಿವೆ. ಆದ್ರೆ ಹರ್ಮಗೆದ್ದೋನ್‌ ಯುದ್ಧದಿಂದ ಇಡೀ ಭೂಮಿ ಮೇಲೆ ಶಾಂತಿ-ಸಮಾಧಾನ, ಸಂತೋಷ ತುಂಬಿಕೊಳ್ಳುತ್ತೆ. ಹಾಗಾಗಿ, ಆ ಯುದ್ಧ ಆದ ಮೇಲೆ ಯೆಹೋವ ದೇವ್ರ ಕೋಪ ತಣ್ಣಗಾಗಿ ಹೋಗುತ್ತೆ. ಆತನ ಸೈನಿಕರು ತಮ್ಮ ಕತ್ತಿಗಳನ್ನ ಒರೆಗಳಲ್ಲಿ ಸೇರಿಸ್ತಾರೆ. ಈ ಮಹಾಯುದ್ಧದ ನಂತ್ರ ಭೂಮಿಯ ಮೇಲೆ ಪರಿಸ್ಥಿತಿ ಹೇಗಿರುತ್ತೆ? ಆ ಸುಂದರ ಪರಿಸ್ಥಿತಿಯ ಬಗ್ಗೆ ಮುಂದಿನ ಅಧ್ಯಾಯದಲ್ಲಿ ನೋಡೋಣ.