ಯೋಹಾನನಿಗೆ ಕೊಟ್ಟ ಪ್ರಕಟನೆ 19:1-21

  • ಆತನ ತೀರ್ಪಿಗಾಗಿ ಯಾಹುವನ್ನ ಹೊಗಳಲಾಗುತ್ತೆ (1-10)

    • ಕುರಿಮರಿಯ ಮದುವೆ (7-9)

  • ಬಿಳಿ ಕುದುರೆ ಸವಾರ (11-16)

  • ದೇವರು ಏರ್ಪಾಡು ಮಾಡಿದ ಸಂಜೆ ಊಟ (17, 18)

  • ಕಾಡುಪ್ರಾಣಿಯ ಸೋಲು (19-21)

19  ಆಮೇಲೆ ಸ್ವರ್ಗದಿಂದ ದೇವದೂತರು ಗುಂಪಾಗಿ ಹೇಳಿದ್ರೆ ಹೇಗಿರುತ್ತೋ ಅಂಥ ಒಂದು ದೊಡ್ಡ ಧ್ವನಿ ನನಗೆ ಕೇಳಿಸ್ತು. ಅದೇನಂದ್ರೆ “ಯಾಹುವನ್ನ ಸ್ತುತಿಸಿ!*+ ನಮ್ಮ ದೇವರು ನಮ್ಮನ್ನ ರಕ್ಷಿಸ್ತಾನೆ. ಆತನಿಗೆ ತುಂಬ ಶಕ್ತಿ, ಮಹಿಮೆ ಇದೆ.  ಆತನು ನ್ಯಾಯವಾಗಿ, ಸರಿಯಾಗಿ ತೀರ್ಪು ಮಾಡ್ತಾನೆ.+ ಯಾಕಂದ್ರೆ ಪ್ರಸಿದ್ಧ ವೇಶ್ಯೆ ಲೈಂಗಿಕ ಅನೈತಿಕತೆಯಿಂದ* ಭೂಮಿಯನ್ನ ಹಾಳು ಮಾಡಿದಳು. ಅದಕ್ಕೇ ದೇವರು ಅವಳಿಗೆ ಶಿಕ್ಷೆ ಕೊಟ್ಟಿದ್ದಾನೆ. ಅವಳು ದೇವರ ಸೇವಕರ ರಕ್ತವನ್ನ ಸುರಿಸಿದಳು. ಅದಕ್ಕೇ ದೇವರು ಸೇಡು ತೀರಿಸ್ಕೊಂಡಿದ್ದಾನೆ.”+  ತಕ್ಷಣ ಎರಡನೇ ಸಾರಿ ಅವರು ಹೀಗೆ ಹೇಳಿದ್ರು: “ಯಾಹುವನ್ನ ಸ್ತುತಿಸಿ!*+ ಬಾಬೆಲ್‌ ಪಟ್ಟಣ ಸುಡ್ತಾ ಇರುವಾಗ ಆ ಹೊಗೆ ಯಾವಾಗ್ಲೂ ಮೇಲೆ ಹೋಗ್ತಾ ಇರುತ್ತೆ.”+  ಆಗ 24 ಹಿರಿಯರು,+ ನಾಲ್ಕು ಜೀವಿಗಳು+ ಅಡ್ಡಬಿದ್ದು ಸಿಂಹಾಸನದ ಮೇಲೆ ಕೂತಿದ್ದ ದೇವರನ್ನ ಆರಾಧಿಸ್ತಾ “ಆಮೆನ್‌! ಯಾಹುವನ್ನ ಸ್ತುತಿಸಿ!”*+ ಅಂತ ಹೇಳಿದ್ರು.  ಅಷ್ಟೇ ಅಲ್ಲ ಸಿಂಹಾಸನದ ಕಡೆಯಿಂದ ಬಂದ ಇನ್ನೊಂದು ಧ್ವನಿ “ದೇವರಿಗೆ ಭಯಪಡುವವ್ರೇ, ಚಿಕ್ಕವ್ರಿಂದ ಹಿಡಿದು ದೊಡ್ಡವ್ರ ತನಕ ಇರೋ+ ಆತನ ಎಲ್ಲ ಸೇವಕರೇ, ನಮ್ಮ ದೇವರನ್ನ ಸ್ತುತಿಸಿ”+ ಅಂತ ಹೇಳ್ತು.  ಆಗ ಒಂದು ಶಬ್ದ ಬಂತು. ಅದು ತುಂಬ ಜನ್ರ ಶಬ್ದದ ತರ, ಪ್ರವಾಹದ ಶಬ್ದದ ತರ, ದೊಡ್ಡ ಗುಡುಗಿನ ಶಬ್ದದ ತರ ಇತ್ತು. ಅವರು ಹೀಗೆ ಹೇಳಿದ್ರು: “ಯಾಹುವನ್ನ ಸ್ತುತಿಸಿ.*+ ನಮ್ಮ ದೇವರಾದ ಯೆಹೋವ* ಸರ್ವಶಕ್ತ.+ ಆತನು ರಾಜನಾಗಿ ಆಳೋದನ್ನ ಶುರುಮಾಡಿದ್ದಾನೆ.+  ನಾವು ಖುಷಿಪಡೋಣ. ಆನಂದದಿಂದ ಆತನಿಗೆ ಗೌರವ ಕೊಡೋಣ. ಯಾಕಂದ್ರೆ ಕುರಿಮರಿಯ ಮದುವೆ ಹತ್ರ ಆಗಿದೆ. ಆತನನ್ನ ಮದುವೆ ಆಗೋ ಹುಡುಗಿ ತಯಾರಾಗಿದ್ದಾಳೆ.  ಶುದ್ಧವಾಗಿರೋ, ಹೊಳಿಯೋ, ಚೆನ್ನಾಗಿರೋ ನಾರಿನ ಬಟ್ಟೆಯನ್ನ ಹಾಕೊಳ್ಳೋಕೆ ಅವಳಿಗೆ ಅನುಮತಿ ಸಿಕ್ಕಿದೆ. ಯಾಕಂದ್ರೆ ಒಳ್ಳೇ ನಾರಿನ ಬಟ್ಟೆ ಪವಿತ್ರ ಜನ್ರ ಒಳ್ಳೇ ಕೆಲಸಗಳನ್ನ ಸೂಚಿಸುತ್ತೆ.”+  ಆ ದೇವದೂತ ನನಗೆ ಹೀಗೆ ಹೇಳಿದ: “ಈ ಮಾತುಗಳನ್ನ ಬರಿ: ಕುರಿಮರಿಯ ಮದುವೆ ಊಟಕ್ಕೆ ಯಾರನ್ನೆಲ್ಲ ಕರೆದಿದ್ದಾರೋ+ ಅವರು ಖುಷಿಯಾಗಿ ಇರ್ತಾರೆ.” ಅಷ್ಟೇ ಅಲ್ಲ “ಇದು ದೇವರ ಮಾತು. ನಾವು ನಂಬಬಹುದು” ಅಂತಾನೂ ಹೇಳಿದ. 10  ಆಗ ನಾನು ಆ ದೇವದೂತನನ್ನ ಆರಾಧಿಸೋಕೆ ಅವನ ಕಾಲಿಗೆ ಬಿದ್ದೆ. ಆಗ ಅವನು “ಏನು ಮಾಡ್ತಾ ಇದ್ದೀಯ? ಹಾಗೆ ಮಾಡಬೇಡ!+ ನಾನು ನಿನ್ನ ತರಾನೇ ಒಬ್ಬ ಸೇವಕ ಅಷ್ಟೆ. ಯೇಸು ಬಗ್ಗೆ ಹೇಳೋಕೆ ದೇವರು ನನಗೆ ಈ ಕೆಲಸ ಕೊಟ್ಟಿದ್ದಾನೆ.+ ದೇವರನ್ನ ಆರಾಧನೆ ಮಾಡು.+ ಯಾಕಂದ್ರೆ ಯೇಸು ಬಗ್ಗೆ ಸಾಕ್ಷಿ ಕೊಡೋದೇ ಭವಿಷ್ಯವಾಣಿಗಳ ಉದ್ದೇಶ”+ ಅಂದ. 11  ಆಮೇಲೆ ಸ್ವರ್ಗ ತೆರಿತು. ಒಂದು ಬಿಳಿ ಕುದುರೆ ಕಾಣಿಸ್ತು.+ ಆ ಕುದುರೆ ಮೇಲೆ ಕೂತಿದ್ದವನಿಗೆ ನಂಬಿಗಸ್ತ+ ಮತ್ತು ಸತ್ಯವಂತ ಅನ್ನೋ ಹೆಸ್ರಿತ್ತು.+ ಆತನು ನ್ಯಾಯವಾಗಿ ತೀರ್ಪು ಮಾಡ್ತಾನೆ. ನ್ಯಾಯವಾಗಿ ಯುದ್ಧ ಮಾಡ್ತಾನೆ.+ 12  ಆತನ ಕಣ್ಣುಗಳು ಉರಿಯೋ ಬೆಂಕಿ ತರ ಇದೆ.+ ಆತನ ತಲೆ ಮೇಲೆ ತುಂಬ ಕಿರೀಟ ಇದೆ. ಆತನ ಮೇಲೆ ಒಂದು ಹೆಸ್ರು ಬರೆದಿದೆ. ಆ ಹೆಸ್ರು ಏನಂತ ಆತನಿಗೆ ಮಾತ್ರ ಗೊತ್ತು. ಬೇರೆ ಯಾರಿಗೂ ಗೊತ್ತಿಲ್ಲ. 13  ಆತನ ಬಟ್ಟೆಗೆ ರಕ್ತದ ಕಲೆ* ಆಗಿದೆ. ಆತನಿಗೆ ದೇವರ ವಾಕ್ಯ ಅನ್ನೋ ಹೆಸ್ರಿದೆ.+ 14  ಸ್ವರ್ಗದಲ್ಲಿರೋ ಸೈನ್ಯ ಆತನ ಹಿಂದೆ ಹೋಗ್ತಿದೆ. ಆ ಸೈನ್ಯದಲ್ಲಿ ಇರುವವ್ರೆಲ್ಲ ಬಿಳಿ ಕುದುರೆಗಳ ಮೇಲೆ ಕೂತಿದ್ರು. ಅವರು ಶುದ್ಧವಾಗಿರೋ, ಬೆಳ್ಳಗಿರೋ, ಒಳ್ಳೇ ನಾರಿನ ಬಟ್ಟೆ ಹಾಕೊಂಡಿದ್ರು. 15  ಆತನ ಬಾಯಿಂದ ಒಂದು ದೊಡ್ಡ ಕತ್ತಿ ಹೊರಗೆ ಬರ್ತಾ ಇತ್ತು. ಅದು ತುಂಬಾ ಉದ್ದ ಇತ್ತು,+ ಚೂಪಾಗಿತ್ತು. ಆತನು ಅದನ್ನ ದೇಶಗಳನ್ನ ನಾಶಮಾಡೋಕೆ ಬಳಸ್ತಾನೆ. ಕಬ್ಬಿಣದ ಕೋಲಿಂದ ಅವ್ರ ಮೇಲೆ ಆಳ್ವಿಕೆ ಮಾಡ್ತಾನೆ.+ ಸರ್ವಶಕ್ತನಾಗಿರೋ ದೇವರ ಕೋಪದ ದ್ರಾಕ್ಷಿತೊಟ್ಟಿಯನ್ನ ತುಳಿತಾನೆ.+ 16  ಆತನ ಬಟ್ಟೆ ಮೇಲೆ, ಆತನ ತೊಡೆ ಮೇಲೆ ಒಂದು ಹೆಸ್ರು ಬರೆದಿತ್ತು. ಅದೇನಂದ್ರೆ ರಾಜರ ರಾಜ, ಒಡೆಯರ ಒಡೆಯ.+ 17  ಅಷ್ಟೇ ಅಲ್ಲ ಒಬ್ಬ ದೇವದೂತ ಸೂರ್ಯನ ಕಿರಣಗಳಲ್ಲಿ ನಿಂತಿರೋದನ್ನ ನಾನು ನೋಡ್ದೆ. ಆಕಾಶದಲ್ಲಿ ಹಾರಾಡೋ ಎಲ್ಲ ಹಕ್ಕಿಗಳಿಗೆ ಅವನು ಜೋರಾಗಿ ಹೀಗೆ ಹೇಳಿದ: “ಇಲ್ಲಿ ಬನ್ನಿ, ದೇವರು ಏರ್ಪಾಡು ಮಾಡಿರೋ ಸಂಜೆ ಊಟಕ್ಕೆ ಬನ್ನಿ.+ 18  ರಾಜರ, ಸೇನಾಧಿಪತಿಗಳ, ಬಲಿಷ್ಠರ,+ ಕುದುರೆಗಳ, ಅದರ ಮೇಲೆ ಕೂತಿರೋ ಸವಾರರ ಮಾಂಸವನ್ನ,+ ಎಲ್ಲರ ಮಾಂಸವನ್ನ ಅಂದ್ರೆ ಸ್ವತಂತ್ರರಾಗಿರೋ ದಾಸರಾಗಿರೋ ಚಿಕ್ಕವರ ದೊಡ್ಡವರ ಮಾಂಸವನ್ನ ತಿನ್ನಿ.” 19  ಕಾಡುಪ್ರಾಣಿ, ಭೂಮಿಯ ರಾಜರು ಮತ್ತು ಅವ್ರ ಸೈನಿಕರು ಸೇರಿಬಂದಿರೋದನ್ನ ನಾನು ನೋಡಿದೆ. ಕುದುರೆ ಮೇಲೆ ಕೂತಿದ್ದವನ ಮತ್ತು ಅವನ ಸೈನ್ಯದ ವಿರುದ್ಧ ಯುದ್ಧ ಮಾಡೋಕೆ ಅವ್ರೆಲ್ಲ ಬಂದಿದ್ರು.+ 20  ಕುದುರೆ ಮೇಲೆ ಕೂತಿರುವವನು ಕಾಡುಪ್ರಾಣಿಯನ್ನ, ಸುಳ್ಳು ಪ್ರವಾದಿಯನ್ನ+ ಹಿಡಿದು ಉರಿಯೋ ಬೆಂಕಿಯ ಕೆರೆಗೆ ಜೀವಂತವಾಗಿ ಹಾಕಿದ.+ ಈ ಸುಳ್ಳು ಪ್ರವಾದಿ ಕಾಡುಪ್ರಾಣಿ ಮುಂದೆ ಅದ್ಭುತಗಳನ್ನ ಮಾಡಿದ. ಹೀಗೆ ಮಾಡಿ ಕಾಡುಪ್ರಾಣಿಯ ಗುರುತು ಇದ್ದವ್ರನ್ನ,+ ಕಾಡುಪ್ರಾಣಿಯ ಮೂರ್ತಿಯನ್ನ ಆರಾಧಿಸ್ತಿದ್ದ ಜನ್ರನ್ನ+ ಮರಳು ಮಾಡಿದ. 21  ಆದ್ರೆ ರಾಜರನ್ನ, ಸೈನಿಕರನ್ನ ಕುದುರೆ ಮೇಲೆ ಕೂತಿದ್ದವನ ಬಾಯಿಂದ ಹೊರಗೆ ಬರ್ತಿದ್ದ ಕತ್ತಿಯಿಂದ ಸಾಯಿಸಿದ್ರು.+ ಎಲ್ಲ ಪಕ್ಷಿಗಳು ಅವ್ರ ಶವಗಳನ್ನ ತಿಂದು ಹೊಟ್ಟೆ ತುಂಬಿಸಿಕೊಂಡ್ವು.+

ಪಾದಟಿಪ್ಪಣಿ

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸ್ರಿನ ಸಂಕ್ಷಿಪ್ತ ರೂಪ.
ಗ್ರೀಕ್‌ ಪದ ಪೋರ್ನಿಯ. ಪದವಿವರಣೆ ನೋಡಿ.
ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸ್ರಿನ ಸಂಕ್ಷಿಪ್ತ ರೂಪ.
ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸ್ರಿನ ಸಂಕ್ಷಿಪ್ತ ರೂಪ.
ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸ್ರಿನ ಸಂಕ್ಷಿಪ್ತ ರೂಪ.
ಬಹುಶಃ, “ರಕ್ತವನ್ನ ಚಿಮಿಕಿಸಲಾಗಿದೆ.”