ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 12

“ನಾನು ಅವ್ರನ್ನ ಒಂದೇ ಜನಾಂಗವಾಗಿ ಮಾಡ್ತೀನಿ”

“ನಾನು ಅವ್ರನ್ನ ಒಂದೇ ಜನಾಂಗವಾಗಿ ಮಾಡ್ತೀನಿ”

ಯೆಹೆಜ್ಕೇಲ 37:22

ಮುಖ್ಯ ವಿಷಯ: ತನ್ನ ಜನರನ್ನ ಒಟ್ಟುಗೂಡಿಸ್ತೀನಿ ಅಂತ ಯೆಹೋವನು ಕೊಟ್ಟ ಮಾತು ಮತ್ತು ಎರಡು ಕೋಲುಗಳ ಭವಿಷ್ಯವಾಣಿ

1, 2. (ಎ) ಕೈದಿಗಳಾಗಿದ್ದ ಜನರಿಗೆ ಯಾಕೆ ಭಯ ಆಗಿರಬಹುದು? (ಬಿ) ಆದ್ರೆ ಅವ್ರಿಗೆ ಯಾಕೆ ಆಶ್ಚರ್ಯ ಆಗಿರುತ್ತೆ? (ಸಿ) ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

ದೇವರ ಸಹಾಯದಿಂದ ಯೆಹೆಜ್ಕೇಲನು ಕೆಲವು ವಸ್ತುಗಳನ್ನು ಉಪಯೋಗಿಸಿ ಬಾಬೆಲಿನಲ್ಲಿದ್ದ ಜನ್ರಿಗೆ ಅನೇಕ ಭವಿಷ್ಯವಾಣಿಗಳನ್ನು ತಿಳಿಸಿದನು. ಅವನು ಅಭಿನಯಿಸಿ ತೋರಿಸಿದ ಮೊದಲನೇ ಭವಿಷ್ಯವಾಣಿಯಲ್ಲಿ ನ್ಯಾಯತೀರ್ಪಿನ ಸಂದೇಶ ಇತ್ತು. ಅವನ ಎರಡನೇ ಮತ್ತು ಮೂರನೇ ಭವಿಷ್ಯವಾಣಿಯಲ್ಲೂ ಅದೇ ಸಂದೇಶ ಇತ್ತು. (ಯೆಹೆ. 3:24-26; 4:1-7; 5:1; 12:3-6) ಒಂದೇ ಮಾತಲ್ಲಿ ಹೇಳೋದಾದ್ರೆ ಅವನು ಅಭಿನಯಿಸಿ ತೋರಿಸಿದ ಎಲ್ಲ ಭವಿಷ್ಯವಾಣಿಗಳಲ್ಲೂ ಯೆಹೂದ್ಯರಿಗೆ ಕಠಿಣ ನ್ಯಾಯತೀರ್ಪು ಆಗುತ್ತೆ ಅನ್ನೋ ಸಂದೇಶ ಇತ್ತು.

2 ಯೆಹೆಜ್ಕೇಲನು ಈ ಬಾರಿ ಇನ್ನೊಂದು ಭವಿಷ್ಯವಾಣಿಯನ್ನು ಅಭಿನಯಿಸಿ ತೋರಿಸೋಕೆ ಜನ್ರ ಮುಂದೆ ಬಂದಿದ್ದನು. ಇದನ್ನು ನೋಡಿ ಜನ ‘ಈ ಸಲ ಇವನು ಯಾವ ಸಂದೇಶ ತಿಳಿಸ್ತಾನಪ್ಪಾ’ ಅಂತ ಭಯಭೀತರಾಗಿರಬೇಕು. ಆದ್ರೆ ಈ ಸಲ ಅವ್ರಿಗೆ ಆಶ್ಚರ್ಯ ಕಾದಿತ್ತು. ಯಾಕಂದ್ರೆ ಯೆಹೆಜ್ಕೇಲ ಅಭಿನಯದ ಮೂಲಕ ತೋರಿಸಿದ ಭವಿಷ್ಯವಾಣಿ ನ್ಯಾಯತೀರ್ಪಿನ ಬಗ್ಗೆ ಆಗಿರಲಿಲ್ಲ. ಬದಲಾಗಿ ಮುಂದೆ ಅವ್ರಿಗೆ ಸಿಗಲಿದ್ದ ಒಂದು ಒಳ್ಳೇ ನಿರೀಕ್ಷೆ ಬಗ್ಗೆ ಆಗಿತ್ತು. (ಯೆಹೆ. 37:23) ಯೆಹೆಜ್ಕೇಲನು ಕೈದಿಗಳಿಗೆ ಈ ಸಲ ಯಾವ ಸಂದೇಶ ತಿಳಿಸಿದನು? ಅದರ ಅರ್ಥ ಏನಾಗಿತ್ತು? ಇದ್ರಿಂದ ನಾವೇನು ಕಲೀಬಹುದು? ಅದ್ರ ಬಗ್ಗೆ ನಾವೀಗ ನೋಡೋಣ.

“ಅವೆರಡು ನನ್ನ ಕೈಯಲ್ಲಿ ಒಂದೇ ಕೋಲಾಗುತ್ತೆ”

3. (ಎ) “ಯೆಹೂದನದ್ದು” ಅಂತ ಬರೆಯಲಾಗಿದ್ದ ಕೋಲು ಏನನ್ನ ಸೂಚಿಸ್ತಿತ್ತು? (ಬಿ) “ಎಫ್ರಾಯೀಮನ ಕೋಲು” ಯಾಕೆ ಹತ್ತು ಕುಲಗಳ ರಾಜ್ಯವನ್ನ ಸೂಚಿಸ್ತಿತ್ತು?

3 ಯೆಹೋವನು ಯೆಹೆಜ್ಕೇಲನಿಗೆ ಎರಡು ಕೋಲುಗಳನ್ನು ತಗೊಳ್ಳೋಕೆ ಹೇಳಿದನು. ಒಂದರ ಮೇಲೆ “ಯೆಹೂದನದ್ದು” ಅಂತ ಬರೆಯೋಕೆ ಮತ್ತೊಂದರ ಮೇಲೆ  “ಎಫ್ರಾಯೀಮನ ಕೋಲು ಅಂದ್ರೆ ಯೋಸೇಫನದ್ದು” ಅಂತ ಬರೆಯೋಕೆ ಹೇಳಿದನು. (ಯೆಹೆಜ್ಕೇಲ 37:15, 16 ಓದಿ.) ಈ ಎರಡು ಕೋಲುಗಳು ಏನನ್ನು ಸೂಚಿಸ್ತಿದ್ದವು? ಯೆಹೂದ ಮತ್ತು ಬೆನ್ಯಾಮೀನ್‌ ಕುಲಗಳು ಸೇರಿದ ಎರಡು ಕುಲಗಳ ರಾಜ್ಯವನ್ನ “ಯೆಹೂದನದ್ದು” ಅಂತ ಬರೆಯಲಾಗಿದ್ದ ಕೋಲು ಸೂಚಿಸ್ತಿತ್ತು. ಯೆಹೂದನ ವಂಶದಲ್ಲಿ ಬಂದ ರಾಜರು ಈ ಎರಡು ಕುಲಗಳನ್ನು ಆಳಿದರು. ಅಷ್ಟೇ ಅಲ್ಲ ಪುರೋಹಿತ ವರ್ಗದ ಜನ್ರು ಸಹ ಈ ಕುಲಗಳ ಜೊತೆ ಇದ್ರು. ಇವ್ರು ಯೆರೂಸಲೇಮಿನ ದೇವಾಲಯದಲ್ಲಿ ಸೇವೆ ಮಾಡ್ತಿದ್ರು. (2 ಪೂರ್ವ. 11:13, 14; 34:30) ಒಟ್ಟಿನಲ್ಲಿ ಹೇಳೋದಾದ್ರೆ, ಯೆಹೂದ ರಾಜ್ಯದಲ್ಲಿ ದಾವೀದ ವಂಶದ ರಾಜರು ಮತ್ತು ಪುರೋಹಿತ ವರ್ಗದವರು ಇದ್ರು. “ಎಫ್ರಾಯೀಮನ ಕೋಲು” ಇಸ್ರಾಯೇಲ್ಯರ ಹತ್ತು ಕುಲಗಳ ರಾಜ್ಯವನ್ನು ಸೂಚಿಸ್ತಿತ್ತು. ಆದ್ರೆ ಈ ಕೋಲಿಗೆ ಎಫ್ರಾಯೀಮನ ಕೋಲು ಅನ್ನೋ ಹೆಸ್ರು ಯಾಕೆ ಬಂತು? ಯಾಕಂದ್ರೆ ಹತ್ತು ಕುಲಗಳ ಮೊದಲನೇ ರಾಜನಾದ ಯಾರೊಬ್ಬಾಮನು ಎಫ್ರಾಯೀಮ್‌ ಕುಲದವನಾಗಿದ್ದನು. ಅಷ್ಟೇ ಅಲ್ಲ ಸಮಯ ಹೋದ ಹಾಗೆ ಎಫ್ರಾಯೀಮ್‌ ಕುಲ ಇಸ್ರಾಯೇಲಿನಲ್ಲಿರೋ ಬೇರೆಲ್ಲಾ ಕುಲಗಳಿಗಿಂತ ಹೆಚ್ಚು ಪ್ರಬಲವಾಯ್ತು. (ಧರ್ಮೋ. 33:17; 1 ಅರ. 11:26) ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯದಲ್ಲಿ ದಾವೀದನ ವಂಶದ ರಾಜರಾಗಲಿ ಪುರೋಹಿತ ವರ್ಗದವರಾಗಲಿ ಇರಲಿಲ್ಲ ಅಂತ ಇದ್ರಿಂದ ಸ್ಪಷ್ಟ ಆಗುತ್ತೆ.

4. ಯೆಹೆಜ್ಕೇಲ ಮಾಡಿದ ಅಭಿನಯ ಏನನ್ನ ಸೂಚಿಸಿತು? (ಆರಂಭದ ಚಿತ್ರ ನೋಡಿ.)

4 ಯೆಹೋವನು ಯೆಹೆಜ್ಕೇಲನಿಗೆ “ಆ ಎರಡೂ ಕೋಲುಗಳು ಒಂದಾಗೋ ಹಾಗೆ” ಅವನ್ನ ಒಟ್ಟಿಗೆ ಸೇರಿಸು ಅಂದನು. ಇದನ್ನು ನೋಡಿದ ಕೈದಿಗಳು ಕುತೂಹಲದಿಂದ ಯೆಹೆಜ್ಕೇಲನಿಗೆ, ‘ಇದ್ರ ಅರ್ಥ ಏನಂತ ನಮಗೆ ಹೇಳು’ ಅಂತ ಕೇಳಿದ್ರು. ಅದಕ್ಕವನು, ಯೆಹೋವ ದೇವ್ರು ಏನು ಮಾಡ್ತಾನೆ ಅನ್ನೋದನ್ನು ಇದು ಸೂಚಿಸುತ್ತೆ ಅಂದನು. ಯೆಹೋವನು ಆ ಎರಡು ಕೋಲುಗಳ ಬಗ್ಗೆ ಹೀಗೆ ಹೇಳಿದನು: “ನಾನು . . . ಆ ಎರಡೂ ಕೋಲುಗಳನ್ನ ಒಂದೇ ಕೋಲಾಗಿ ಮಾಡ್ತೀನಿ. ಅವೆರಡು ನನ್ನ ಕೈಯಲ್ಲಿ ಒಂದೇ ಕೋಲಾಗುತ್ತೆ.”—ಯೆಹೆ. 37:17-19.

5. ಎರಡು ಕೋಲುಗಳನ್ನ ಒಟ್ಟು ಸೇರಿಸೋದ್ರ ಅರ್ಥ ಏನು? (“ಎರಡು ಕೋಲುಗಳನ್ನ ಒಟ್ಟು ಸೇರಿಸುವುದು” ಅನ್ನೋ ಚೌಕ ನೋಡಿ.)

5 ಆಮೇಲೆ ಯೆಹೋವನು ಎರಡು ಕೋಲುಗಳನ್ನು ಒಟ್ಟಿಗೆ ಸೇರಿಸೋದ್ರ ಅರ್ಥ ಏನಂತ ತಿಳಿಸಿದನು. (ಯೆಹೆಜ್ಕೇಲ 37:21, 22 ಓದಿ.) ಎರಡು ಕುಲಗಳ ರಾಜ್ಯದವ್ರು ಮತ್ತು ಹತ್ತು ಕುಲಗಳ ರಾಜ್ಯದವ್ರು (ಎಫ್ರಾಯೀಮ್‌) ಇಸ್ರಾಯೇಲಿಗೆ ವಾಪಸ್‌ ಬರಲಿದ್ದರು, ಅವ್ರು ‘ಒಂದೇ ಜನಾಂಗ’ ಆಗಲಿದ್ರು.—ಯೆರೆ. 30:1-3; 31:2-9; 33:7.

6. ಒಂದಕ್ಕೊಂದು ಸಂಬಂಧಿಸಿದ ಯಾವ ಭವಿಷ್ಯವಾಣಿಗಳು ಯೆಹೆಜ್ಕೇಲ ಪುಸ್ತಕದ 37 ನೇ ಅಧ್ಯಾಯದಲ್ಲಿವೆ?

6 ಯೆಹೆಜ್ಕೇಲ 37 ನೇ ಅಧ್ಯಾಯದಲ್ಲಿ ಪುನಃಸ್ಥಾಪನೆಗೆ ಸಂಬಂಧಪಟ್ಟ ಒಂದಕ್ಕೊಂದು ಸಂಬಂಧ ಇರೋ ಎರಡು ಭವಿಷ್ಯವಾಣಿಗಳ ಬಗ್ಗೆ ಇದೆ. ಅವು ಯಾವುದಂದ್ರೆ ಒಣಗಿಹೋದ ಮೂಳೆಗಳ ಭವಿಷ್ಯವಾಣಿ ಮತ್ತು ಎರಡು ಕೋಲುಗಳ ಭವಿಷ್ಯವಾಣಿ. ಯೆಹೋವ ದೇವ್ರು ಇಸ್ರಾಯೇಲ್ಯರನ್ನ ಬಂಧಿವಾಸದಿಂದ ಬಿಡುಗಡೆ ಮಾಡಿ ಪುನಃಸ್ಥಾಪಿಸ್ತಾನೆ (ವಚನ 1-14) ಮತ್ತು ಅವ್ರನ್ನ ಒಟ್ಟುಗೂಡಿಸ್ತಾನೆ. (ವಚನ 15-28) ಜನ್ರನ್ನ ಬಂಧಿವಾಸದಿಂದ ಬಿಡುಗಡೆ ಮಾಡೋಕೂ, ಚದರಿ ಹೋಗಿರೋರನ್ನ ಒಟ್ಟುಗೂಡಿಸೋಕೂ ಯೆಹೋವನಿಂದ ಸಾಧ್ಯ ಅನ್ನೋದೇ ಈ ಎರಡೂ ಭವಿಷ್ಯವಾಣಿಗಳಲ್ಲಿರೋ ಮುಖ್ಯ ವಿಷ್ಯ.

ಯೆಹೋವನು ಅವರನ್ನ ಹೇಗೆ ‘ಒಟ್ಟು ಸೇರಿಸಿದನು?’

7. “ದೇವರಿಗೆ ಎಲ್ಲಾ ಸಾಧ್ಯ” ಅಂತ 1 ಪೂರ್ವಕಾಲವೃತ್ತಾಂತ 9:2, 3 ಹೇಗೆ ತೋರಿಸಿಕೊಡುತ್ತೆ?

7 ಮನುಷ್ಯರ ದೃಷ್ಟಿಯಲ್ಲಿ, ಕೈದಿಗಳಾಗಿದ್ದ ಜನ್ರನ್ನ ಬಿಡುಗಡೆ ಮಾಡೋದು, ಅವ್ರನ್ನ ಒಟ್ಟು ಸೇರಿಸೋದು ಅಸಾಧ್ಯ ಅಂತ ಅನಿಸಿರಬಹುದು. * ಆದ್ರೆ “ದೇವರಿಗೆ ಎಲ್ಲಾ ಸಾಧ್ಯ.” (ಮತ್ತಾ. 19:26) ಯೆಹೋವನು ಆ ಭವಿಷ್ಯವಾಣಿಯನ್ನು ನೆರವೇರಿಸಿದನು. ಕ್ರಿ.ಪೂ. 537 ರಲ್ಲಿ ಯೆಹೋವನ ಜನ್ರು ಬಾಬೆಲಿನಿಂದ ಬಿಡುಗಡೆಯಾದ್ರು. ನಂತ್ರ ಶುದ್ಧ ಆರಾಧನೆಯನ್ನ ಪುನಃಸ್ಥಾಪಿಸಲಿಕ್ಕಾಗಿ ಎರಡೂ ರಾಜ್ಯಗಳಿಂದ ಜನ್ರು ಯೆರೂಸಲೇಮಿಗೆ ಬಂದ್ರು. “ಯೆಹೂದ, ಬೆನ್ಯಾಮೀನ್‌, ಎಫ್ರಾಯೀಮ್‌, ಮನಸ್ಸೆಯ ವಂಶಕ್ಕೆ ಸೇರಿದ  ಕೆಲವರು ಯೆರೂಸಲೇಮಲ್ಲೇ ಉಳ್ಕೊಂಡ್ರು” ಅಂತ ಬೈಬಲ್‌ ಹೇಳುತ್ತೆ. (1 ಪೂರ್ವ. 9:2, 3; ಎಜ್ರ 6:17) ಯೆಹೋವನು ಹೇಳಿದ ಹಾಗೆನೇ ಹತ್ತು ಕುಲಗಳ ರಾಜ್ಯವಾದ ಇಸ್ರಾಯೇಲಿನ ಜನರು, ಎರಡು ಕುಲಗಳ ರಾಜ್ಯವಾದ ಯೆಹೂದದ ಜನ್ರ ಜೊತೆ ಒಂದಾದ್ರು.

8. (ಎ) ಯೆಶಾಯನು ಏನಂತ ಪ್ರವಾದಿಸಿದನು? (ಬಿ) ಯೆಹೆಜ್ಕೇಲ 37:21 ರಲ್ಲಿ ಯಾವ ಎರಡು ಮುಖ್ಯ ವಿಷಯಗಳಿವೆ?

8 ಕೈದಿಗಳಾಗಿದ್ದ ಇಸ್ರಾಯೇಲ್ಯರಿಗೆ ಮತ್ತು ಯೆಹೂದ್ಯರಿಗೆ ಏನಾಗುತ್ತೆ ಅಂತ ಯೆಶಾಯ ಸುಮಾರು 200 ವರ್ಷಗಳ ಮುಂಚೆನೇ ಹೇಳಿದ್ದನು. ಯೆಹೋವ ದೇವ್ರು “ಚೆದರಿ ಹೋಗಿರೋ ಇಸ್ರಾಯೇಲ್‌ ಜನ್ರನ್ನ ಒಟ್ಟುಗೂಡಿಸ್ತಾನೆ,” “ಭೂಮಿಯ ನಾಲ್ಕೂ ಮೂಲೆಗಳಿಗೆ ಚೆದರಿಹೋಗಿರೋ ಯೆಹೂದದ ಜನ್ರನ್ನ ಒಟ್ಟುಗೂಡಿಸ್ತಾನೆ,” ‘ಅಶ್ಶೂರದಿಂದಲೂ’ ಒಟ್ಟುಗೂಡಿಸ್ತಾನೆ ಅಂತ ಮುಂತಿಳಿಸಿದ್ದನು. (ಯೆಶಾ. 11:12, 13, 16) ಯೆಹೋವನು ಮುಂತಿಳಿಸಿದಂತೆ “ಇಸ್ರಾಯೇಲ್ಯರನ್ನ . . . ಜನಾಂಗಗಳಿಂದ” ಒಟ್ಟುಸೇರಿಸಿದನು. (ಯೆಹೆ. 37:21) ಇಲ್ಲಿರೋ ಎರಡು ಮುಖ್ಯ ವಿಷ್ಯಗಳನ್ನ ಗಮನಿಸಿ. ಒಂದು, ಯೆಹೋವನು ಕೈದಿಗಳನ್ನ “ಯೆಹೂದ” ಮತ್ತು “ಎಫ್ರಾಯೀಮ್‌” ಅಂತ ಬೇರೆಬೇರೆಯಾಗಿ ಕರೆಯದೆ ಒಟ್ಟಾಗಿ “ಇಸ್ರಾಯೇಲ್ಯರು” ಅಂತ ಕರೆದನು. ಆಮೇಲೆ ಇಸ್ರಾಯೇಲ್ಯರು ಬಾಬೆಲಿನಿಂದ ಮಾತ್ರ ಬರ್ತಾರೆ ಅಂತ ಹೇಳದೆ ಎಲ್ಲಾ ಜನಾಂಗಗಳಿಂದ ಬರ್ತಾರೆ ಅಂದ್ರೆ “ಎಲ್ಲಾ ದಿಕ್ಕಿನಿಂದ” ಬರ್ತಾರೆ ಅಂತ ಹೇಳಿದನು.

9. ತನ್ನ ಜನರು ವಾಪಸ್‌ ಬಂದ ಮೇಲೆ ಐಕ್ಯರಾಗಿರೋಕೆ ಯೆಹೋವನು ಹೇಗೆ ಸಹಾಯ ಮಾಡಿದನು?

9 ಕೈದಿಗಳಾಗಿದ್ದ ತನ್ನ ಜನ್ರು ಇಸ್ರಾಯೇಲಿಗೆ ವಾಪಸ್‌ ಬಂದ ಮೇಲೆ ಅವ್ರು ಐಕ್ಯರಾಗಿರೋಕೆ ಯೆಹೋವನು ಹೇಗೆ ಸಹಾಯ ಮಾಡಿದನು? ಆತನು ಇಸ್ರಾಯೇಲ್ಯರಿಗೆ ಜೆರುಬ್ಬಾಬೆಲ್‌, ಮಹಾ ಪುರೋಹಿತ ಯೆಹೋಶುವ, ಎಜ್ರ ಮತ್ತು ನೆಹೆಮೀಯರಂಥ ಕುರುಬರನ್ನ ನೇಮಿಸಿದನು. ಆತನು ಹಗ್ಗಾಯ, ಜೆಕರ್ಯ, ಮಲಾಕಿಯರಂಥ ಪ್ರವಾದಿಗಳನ್ನ ಕೂಡ ನೇಮಿಸಿದನು. ದೇವರಿಗೆ ವಿಧೇಯರಾಗಿ ನಡೆಯುವಂತೆ ಈ ಎಲ್ಲಾ ನಂಬಿಗಸ್ತ ಪುರುಷರು ಇಸ್ರಾಯೇಲ್ಯರನ್ನ ಉತ್ತೇಜಿಸಲು ತುಂಬಾ ಪ್ರಯಾಸಪಟ್ರು. (ನೆಹೆ. 8:2, 3) ಶತ್ರುಗಳು ಇಸ್ರಾಯೇಲ್ಯರ ವಿರುದ್ಧ ಕುತಂತ್ರ ಮಾಡಿದಾಗಲೂ ಯೆಹೋವನು ಇಸ್ರಾಯೇಲ್‌ ಜನಾಂಗವನ್ನ ಸಂರಕ್ಷಿಸಿದನು.—ಎಸ್ತೇ. 9:24, 25; ಜೆಕ. 4:6.

ತನ್ನ ಜನರು ಐಕ್ಯರಾಗಿರಲು ಸಹಾಯ ಮಾಡೋಕೆ ಯೆಹೋವನು ಕುರುಬರನ್ನು ನೇಮಿಸಿದನು (ಪ್ಯಾರ 9 ನೋಡಿ)

10. ಸೈತಾನ ಏನು ಮಾಡೋದ್ರಲ್ಲಿ ಯಶಸ್ವಿಯಾದ?

 10 ಯೆಹೋವ ದೇವರು ಇಷ್ಟೆಲ್ಲಾ ಸಹಾಯ ಮಾಡಿದ್ರೂ ಇಸ್ರಾಯೇಲ್ಯರು ಶುದ್ಧ ಆರಾಧನೆಯನ್ನ ಮಾಡೋಕೆ ತಪ್ಪಿ ಹೋದ್ರು. ಅವ್ರು ಮಾಡಿದ ಕೆಲ್ಸಗಳನ್ನ ಬಂಧಿವಾಸದಿಂದ ಬಂದ ಮೇಲೆ ಬರೆಯಲಾದ ಪುಸ್ತಕದಲ್ಲಿ ದಾಖಲಿಸಲಾಗಿದೆ. (ಎಜ್ರ 9:1-3; ನೆಹೆ. 13:1, 2, 15) ಒಂದು ಶತಮಾನದೊಳಗೆ ಇಸ್ರಾಯೇಲಿನ ಜನ್ರು ಶುದ್ಧ ಆರಾಧನೆಯಿಂದ ಎಷ್ಟು ದೂರ ಹೋದರಂದ್ರೆ ಯೆಹೋವನು ಅವರಿಗೆ, “ನನ್ನ ಹತ್ರ ವಾಪಸ್‌ ಬನ್ನಿ” ಅಂತ ಹೇಳಬೇಕಾಯ್ತು. (ಮಲಾ. 3:7) ಯೇಸು ಭೂಮಿಗೆ ಬರೋಷ್ಟರಲ್ಲಿ ಯೆಹೂದಿ ಧರ್ಮ ಅನೇಕ ಪಂಗಡಗಳಾಗಿ ವಿಭಜಿಸಲ್ಪಟ್ಟಿತ್ತು. ಅವ್ರನ್ನ ಅಪನಂಬಿಗಸ್ತ ಕುರುಬರು ನಡೆಸ್ತಿದ್ರು. (ಮತ್ತಾ. 16:6; ಮಾರ್ಕ 7:5-8) ಸೈತಾನ ಅವರ ಒಗ್ಗಟ್ಟನ್ನ ಮುರಿಯೋದ್ರಲ್ಲಿ ಯಶಸ್ವಿಯಾಗಿದ್ದ. ಹಾಗಿದ್ರೂ ಯೆಹೋವ ದೇವ್ರು ತನ್ನ ಜನ್ರು ಐಕ್ಯವಾಗಿರ್ತಾರೆ ಅಂತ ಹೇಳಿದ ಮಾತು ನೆರವೇರಿತು. ಹೇಗೆ?

“ನನ್ನ ಸೇವಕ ದಾವೀದ ಅವರ ರಾಜನಾಗಿ ಇರ್ತಾನೆ”

11. (ಎ) ಐಕ್ಯತೆಯ ಭವಿಷ್ಯವಾಣಿ ಬಗ್ಗೆ ಯೆಹೋವನು ಏನಂತ ತಿಳಿಸಿದನು? (ಬಿ) ಸೈತಾನನು ಸ್ವರ್ಗದಿಂದ ತಳ್ಳಲ್ಪಟ್ಟ ನಂತರ ಪುನಃ ಏನು ಮಾಡೋಕೆ ಪ್ರಯತ್ನಿಸಿದನು?

11 ಯೆಹೆಜ್ಕೇಲ 37:24 ಓದಿ. ತನ್ನ “ಸೇವಕ ದಾವೀದ” ಅಂದ್ರೆ ಯೇಸು ರಾಜನಾಗಿ ಆಳೋಕೆ ಶುರು ಮಾಡಿದ ನಂತ್ರ ಐಕ್ಯತೆ ಬಗ್ಗೆ ಹೇಳಿದ ಈ ಭವಿಷ್ಯವಾಣಿ ಸಂಪೂರ್ಣವಾಗಿ ನೆರವೇರುತ್ತೆ ಅಂತ ಯೆಹೋವ ದೇವ್ರು ತೋರಿಸಿಕೊಟ್ಟನು. ಅದ್ರ ಪ್ರಕಾರನೇ ಯೇಸು 1914 ರಲ್ಲಿ ರಾಜನಾದನು. * (2 ಸಮು. 7:16; ಲೂಕ 1:32) ಆ ಸಮಯದಷ್ಟಕ್ಕೆ ಇಸ್ರಾಯೇಲ್ಯರ ಸ್ಥಾನದಲ್ಲಿ ದೇವರ ಇಸ್ರಾಯೇಲ್‌ ಅಂದ್ರೆ ಅಭಿಷಿಕ್ತರನ್ನ ನೇಮಿಸಲಾಗಿತ್ತು. (ಯೆರೆ. 31:33; ಗಲಾ. 3:29) ಸ್ವರ್ಗದಿಂದ ತಳ್ಳಲ್ಪಟ್ಟ ನಂತ್ರ ಸೈತಾನ ಪುನಃ ದೇವಜನರ ಮಧ್ಯೆ ಇರೋ ಐಕ್ಯತೆನ ಹಾಳು ಮಾಡೋಕೆ ಪ್ರಯತ್ನಿಸಿದ. (ಪ್ರಕ. 12:7-10) ಉದಾಹರಣೆಗೆ, 1916 ರಲ್ಲಿ ಸಹೋದರ ರಸಲ್‌ ತೀರಿಕೊಂಡ ನಂತ್ರ ಧರ್ಮಭ್ರಷ್ಟರನ್ನ ಉಪಯೋಗಿಸಿ ಅಭಿಷಿಕ್ತರ ಮಧ್ಯೆ ಒಡಕನ್ನ ತರಲು ಪ್ರಯತ್ನಿಸಿದ. ಆದ್ರೆ ಸ್ವಲ್ಪದರಲ್ಲೇ ಧರ್ಮಭ್ರಷ್ಟರು ಸಂಘಟನೆಯನ್ನು ಬಿಟ್ಟು ಹೋದ್ರು. ಆಗ ಮುಂದಾಳತ್ವ ವಹಿಸುತ್ತಿದ್ದ ಸಹೋದರರನ್ನ ಜೈಲಿಗೆ ಹಾಕಿಸೋದ್ರಲ್ಲಿ ಸೈತಾನ ಯಶಸ್ವಿಯಾದ. ದೇವಜನ್ರನ್ನು ಅಳಿಸಿಹಾಕೋಕೆ ಅವನು ಇಷ್ಟೆಲ್ಲಾ ಪ್ರಯತ್ನ ಹಾಕಿದ್ರೂ ಅದೆಲ್ಲಾ ನೀರು ಪಾಲಾಯ್ತು. ಆ ಅಭಿಷಿಕ್ತ ಸಹೋದರರು ಯೆಹೋವನಿಗೆ ನಂಬಿಗಸ್ತರಾಗಿದ್ದು ಐಕ್ಯರಾಗಿ ಉಳಿದ್ರು.

12. ದೇವರ ಇಸ್ರಾಯೇಲ್ಯರ ಮಧ್ಯೆ ಒಡಕನ್ನ ತರೋಕೆ ಸೈತಾನ ಮಾಡಿದ ಕುತಂತ್ರ ಯಾಕೆ ವಿಫಲವಾಯ್ತು?

12 ಇಸ್ರಾಯೇಲ್ಯರ ಮಧ್ಯೆ ಒಡಕನ್ನು ಉಂಟು ಮಾಡಿದ ತರನೇ ದೇವರ ಇಸ್ರಾಯೇಲ್ಯರ ಅಂದ್ರೆ ಅಭಿಷಿಕ್ತರ ಮಧ್ಯೆ ಒಡಕನ್ನು ಉಂಟು ಮಾಡೋಕೆ ಸೈತಾನನು ಮಾಡಿದ ಕುತಂತ್ರಗಳು ವಿಫಲವಾದವು. ಯಾಕಂದ್ರೆ ಅಭಿಷಿಕ್ತರು ಯೆಹೋವ ದೇವ್ರ ನೀತಿ ನಿಯಮಗಳಿಗೆ ಅನುಸಾರವಾಗಿ ನಡೀತಿದ್ರು. ಹಾಗಾಗಿ ಅವರ ರಾಜನಾದ ಯೇಸು ಕ್ರಿಸ್ತನು ಅವ್ರನ್ನು ಸಂರಕ್ಷಿಸ್ತಾ ಇದ್ದನು. ಯೇಸು ಶತ್ರುಗಳನ್ನ ಸೋಲಿಸ್ತಾ, ಗೆಲ್ತಾ ಹೋಗ್ತಿದ್ದಾನೆ.—ಪ್ರಕ. 6:2.

ತನ್ನ ಆರಾಧಕರು ‘ಒಂದಾಗುವಂತೆ’ ಯೆಹೋವನು ಮಾಡ್ತಾನೆ

13. ಎರಡು ಕೋಲುಗಳನ್ನ ಒಟ್ಟು ಸೇರಿಸೋ ಭವಿಷ್ಯವಾಣಿಯಿಂದ ನಾವು ಯಾವ ಪ್ರಾಮುಖ್ಯ ಸತ್ಯವನ್ನ ಕಲಿಬಹುದು?

13 ಎರಡು ಕೋಲುಗಳನ್ನು ಒಟ್ಟು ಸೇರಿಸೋದ್ರ ಬಗ್ಗೆ ಇರೋ ಭವಿಷ್ಯವಾಣಿ ನಮ್ಮ ಸಮಯದಲ್ಲಿ ಹೇಗೆ ನೆರವೇರುತ್ತಾ ಇದೆ? ಈ ಭವಿಷ್ಯವಾಣಿ ಎರಡು ಗುಂಪುಗಳು ಒಂದಾಗೋದನ್ನ ಸೂಚಿಸುತ್ತೆ ಅನ್ನೋದನ್ನ ಮನಸ್ಸಲ್ಲಿ ಇಡಿ. ಅಷ್ಟೇ ಅಲ್ಲ, ಅವುಗಳನ್ನ ಒಂದಾಗೋ ತರ ಮಾಡೋದು ಯೆಹೋವನೇ ಅಂತ ಈ ಭವಿಷ್ಯವಾಣಿ ತೋರಿಸಿಕೊಡುತ್ತೆ. ಹಾಗಾಗಿ, ಈ ಭವಿಷ್ಯವಾಣಿಯಿಂದ ಶುದ್ಧ ಆರಾಧನೆಯ ಬಗ್ಗೆ ಒಂದು ಪ್ರಾಮುಖ್ಯ ಸತ್ಯವನ್ನ ತಿಳ್ಕೊಬಹುದು. ಏನಂದ್ರೆ ಯೆಹೋವನೇ ತನ್ನ ಆರಾಧಕರನ್ನ ‘ಒಂದಾಗಿಸ್ತಾನೆ.’—ಯೆಹೆ. 37:19.

14. ಎರಡು ಕೋಲುಗಳ ಭವಿಷ್ಯವಾಣಿ 1919 ರಿಂದ ಹೇಗೆ ಮಹತ್ತಾದ ರೀತಿಯಲ್ಲಿ ನೆರವೇರುತ್ತಾ ಇದೆ?

14 ಇಸವಿ 1919 ರಿಂದ ದೇವ ಜನರನ್ನ ಸುಳ್ಳು ಆಚಾರ ವಿಚಾರಗಳಿಂದ ಬಿಡುಗಡೆ ಮಾಡಲಾಯ್ತು. ಆಗ ಅವ್ರು ಆಧ್ಯಾತ್ಮಿಕ ಪರದೈಸಿಗೆ ಹೋಗೋಕೆ ಶುರು ಮಾಡಿದ್ರು.  ಎರಡು ಕೋಲುಗಳು ಒಂದಾಗೋ ಭವಿಷ್ಯವಾಣಿ ಸಹ ಮಹತ್ತಾದ ರೀತಿಯಲ್ಲಿ ನೆರವೇರೋಕೆ ಶುರು ಆಯ್ತು. ಆ ಸಮಯದಲ್ಲಿ ಐಕ್ಯರಾಗಿದ್ದ ಹೆಚ್ಚಿನವರಿಗೆ ಯೇಸುವಿನ ಜೊತೆ ರಾಜರು ಮತ್ತು ಪುರೋಹಿತರಾಗಿರೋ ನಿರೀಕ್ಷೆ ಇತ್ತು. (ಪ್ರಕ. 20:6) ಆ ಅಭಿಷಿಕ್ತರು “ಯೆಹೂದನದ್ದು” ಅಂತ ಬರೆದ ಕೋಲಿನಂತೆ ಇದ್ರು. ಈ ಯೆಹೂದ್ಯರಲ್ಲಿ ದಾವೀದನ ವಂಶದ ರಾಜರು ಮತ್ತು ಲೇವಿ ಪುರೋಹಿತರು ಒಳಗೂಡಿದ್ದರು. ಹೋಗ್ತಾ ಹೋಗ್ತಾ ಭೂಮಿ ಮೇಲೆ ಜೀವಿಸೋ ನಿರೀಕ್ಷೆ ಇರೋ ಹೆಚ್ಚೆಚ್ಚು ಜನ್ರು ಅಭಿಷಿಕ್ತರ ಜೊತೆ ಸೇರಿದ್ರು. ಹೀಗೆ ಸೇರಿದ ಜನ್ರು “ಎಫ್ರಾಯೀಮನ ಕೋಲಿನ” ತರ ಇದ್ರು. ಅವರಲ್ಲಿ ದಾವೀದನ ವಂಶದ ರಾಜರಾಗಲಿ, ಲೇವಿ ಪುರೋಹಿತರಾಗಲಿ ಇರಲಿಲ್ಲ. ಈ ಎರಡೂ ಗುಂಪು ಒಟ್ಟು ಸೇರಿ ರಾಜನಾದ ಯೇಸು ಕ್ರಿಸ್ತನ ಕೆಳಗೆ ಯೆಹೋವನ ಸೇವೆ ಮಾಡ್ತಿದ್ದಾರೆ. —ಯೆಹೆ. 37:24.

“ಅವರು ನನ್ನ ಜನ್ರಾಗಿ ಇರ್ತಾರೆ”

15. ಯೆಹೆಜ್ಕೇಲ 37:26, 27 ರಲ್ಲಿ ತಿಳಿಸಲಾಗಿರೋ ಭವಿಷ್ಯವಾಣಿ ಇವತ್ತು ಹೇಗೆ ನೆರವೇರುತ್ತಿದೆ?

15 ಅನೇಕ ಜನರು ಅಭಿಷಿಕ್ತರ ಜೊತೆ ಸೇರಿ ಶುದ್ಧ ಆರಾಧನೆಯನ್ನು ಮಾಡ್ತಾರೆ ಅಂತ ಯೆಹೆಜ್ಕೇಲನ ಭವಿಷ್ಯವಾಣಿಯಿಂದ ಗೊತ್ತಾಗುತ್ತೆ. ಯೆಹೋವನು ತನ್ನ ಜನ್ರ ಬಗ್ಗೆ ಹೀಗೆ ಹೇಳಿದನು: “ಅವ್ರ ಸಂಖ್ಯೆ ಜಾಸ್ತಿ ಆಗೋ ಹಾಗೆ ಮಾಡ್ತೀನಿ. . . . ನನ್ನ ಡೇರೆ ಅವ್ರ ಮಧ್ಯ ಇರುತ್ತೆ.” (ಯೆಹೆ. 37:26, 27; ಪಾದಟಿಪ್ಪಣಿ) ಯೆಹೆಜ್ಕೇಲನ ಈ ಮಾತುಗಳು ಸುಮಾರು 700 ವರ್ಷಗಳ ನಂತ್ರ ಅಪೊಸ್ತಲ ಯೋಹಾನನು ತಿಳಿಸಿದ ಭವಿಷ್ಯವಾಣಿಯನ್ನ ನೆನಪಿಗೆ ತರುತ್ತವೆ. “ಸಿಂಹಾಸನದ ಮೇಲೆ ಕೂತಿರೋ ದೇವರು” ಒಂದು ದೊಡ್ಡ ಗುಂಪಿನ ಮೇಲೆ “ಡೇರೆ ಹಾಕ್ತಾನೆ” ಅಂತ ಯೋಹಾನನು ಹೇಳಿದನು. (ಪ್ರಕ. 7:9, 15; ಪಾದಟಿಪ್ಪಣಿ) ಇವತ್ತು ಅಭಿಷಿಕ್ತರು ಮತ್ತು ದೊಡ್ಡ ಗುಂಪಿನ ಜನ್ರು ಒಂದೇ ಜನಾಂಗವಾಗಿ ಅಂದ್ರೆ ದೇವರ ಜನರಾಗಿ ಯೆಹೋವನ ಡೇರೆಯಲ್ಲಿ ಅಂದ್ರೆ ಸಂರಕ್ಷಣೆಯಲ್ಲಿ ಇದ್ದಾರೆ.

16. ಅಭಿಷಿಕ್ತರ ಮತ್ತು ದೊಡ್ಡ ಗುಂಪಿನವರ ಐಕ್ಯತೆ ಬಗ್ಗೆ ಜೆಕರ್ಯನು ಯಾವ ಭವಿಷ್ಯವಾಣಿ ತಿಳಿಸಿದನು?

16 ಬಂಧಿವಾಸದಿಂದ ವಾಪಸ್‌ ಬಂದ ಪ್ರವಾದಿ ಜೆಕರ್ಯನು ಕೂಡ ಆಧ್ಯಾತ್ಮಿಕ ಯೆಹೂದ್ಯರು ಅಂದ್ರೆ ಅಭಿಷಿಕ್ತರು ದೊಡ್ಡ ಗುಂಪಿನ ಜೊತೆ ಸೇರಿ ಒಂದಾಗ್ತಾರೆ ಅಂತ ತಿಳಿಸಿದನು. ಅವನು ಹೀಗೆ ಹೇಳಿದನು: “ಎಲ್ಲ ದೇಶಗಳಿಂದ ಬಂದಂಥ 10 ಜನ ಒಬ್ಬ ಯೆಹೂದ್ಯನ ಬಟ್ಟೆಯ ತುದಿಯನ್ನ ಗಟ್ಟಿಯಾಗಿ ಹಿಡ್ಕೊಂಡು ‘ದೇವರು ನಿಮ್ಮ ಜೊತೆ ಇದ್ದಾನೆ ಅಂತ ನಾವು ಕೇಳಿಸ್ಕೊಂಡಿದ್ದೀವಿ. ಹಾಗಾಗಿ ನಾವೂ ನಿಮ್ಮ ಜೊತೆ ಬರ್ತಿವಿ’ ಅಂತಾರೆ.” (ಜೆಕ. 8:23) ಈ ವಚನದಲ್ಲಿ ನಿನ್ನ ಜೊತೆ ಅಂತ ಹೇಳದೇ ನಿಮ್ಮ ಜೊತೆ ಅಂತ ಹೇಳಿರೋದನ್ನ ಗಮನಿಸಿ. ಇದ್ರಿಂದ, “ಒಬ್ಬ ಯೆಹೂದ್ಯನು” ಅನ್ನೋದು ಒಬ್ಬ ವ್ಯಕ್ತಿಯನ್ನಲ್ಲ, ಬದಲಿಗೆ ಒಂದು ಗುಂಪನ್ನ ಸೂಚಿಸುತ್ತೆ ಅಂತ ಗೊತ್ತಾಗುತ್ತೆ. (ರೋಮ. 2:28, 29) “ಹತ್ತು ಜನ” ಅನ್ನೋದು ಭೂಮಿಯ ಮೇಲೆ ಜೀವಿಸುವ ನಿರೀಕ್ಷೆ ಇರೋರನ್ನ ಸೂಚಿಸುತ್ತೆ. ಅವ್ರು ಅಭಿಷಿಕ್ತರ “ಬಟ್ಟೆಯ ತುದಿಯನ್ನ ಗಟ್ಟಿಯಾಗಿ ಹಿಡ್ಕೊಂಡು” ನಾವೂ “ನಿಮ್ಮ ಜೊತೆ ಬರ್ತಿವಿ” ಅಂತ ಹೇಳ್ತಾರೆ. (ಯೆಶಾ. 2:2, 3; ಮತ್ತಾ. 25:40) “ಗಟ್ಟಿಯಾಗಿ ಹಿಡ್ಕೊಂಡು” ಮತ್ತು “ನಿಮ್ಮ ಜೊತೆ ಬರ್ತಿವಿ” ಅನ್ನೋ ಪದ ಈ ಎರಡೂ ಗುಂಪು ಸಂಪೂರ್ಣವಾಗಿ ಐಕ್ಯವಾಗಿರುತ್ತವೆ ಅನ್ನೋದನ್ನ ಸೂಚಿಸುತ್ತೆ.

17. ಇವತ್ತು ನಮ್ಮ ಮಧ್ಯ ಇರೋ ಐಕ್ಯತೆಯನ್ನ ಯೇಸು ಹೇಗೆ ವರ್ಣಿಸಿದ್ದಾನೆ?

17 ಯೇಸು ತನ್ನ ಕುರಿಗಳಿಗೆ (ಅಭಿಷಿಕ್ತರು) ಮತ್ತು ‘ಬೇರೆ ಕುರಿಗಳಿಗೆ’ (ಭೂಮಿಯಲ್ಲಿ ಜೀವಿಸಲು ನಿರೀಕ್ಷೆ ಇರುವವರು) ಕುರುಬನಾಗಿರ್ತೀನಿ ಮತ್ತು ಅವ್ರು “ಒಂದೇ ಹಿಂಡಾಗ್ತಾರೆ” ಅಂತ ಹೇಳಿದಾಗ ಆತನ ಮನಸ್ಸಿನಲ್ಲಿ ಯೆಹೆಜ್ಕೇಲ ತಿಳಿಸಿದ ಒಟ್ಟುಸೇರಿಸೋ ಭವಿಷ್ಯವಾಣಿ ಇದ್ದಿರಬೇಕು. (ಯೋಹಾ. 10:16; ಯೆಹೆ. 34:23; 37:24, 25) ಯೇಸು ಮತ್ತು ಹಿಂದಿನ ಕಾಲದ ಪ್ರವಾದಿಗಳು ಹೇಳಿದ ಆ ಭವಿಷ್ಯವಾಣಿಯು ಇವತ್ತು ನೆರವೇರುತ್ತಾ ಇದೆ. ನಮ್ಗೆ ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಇರಲಿ, ಭೂಮಿ ಮೇಲೆ ಜೀವಿಸೋ  ನಿರೀಕ್ಷೆ ಇರಲಿ ನಾವೆಲ್ಲರೂ ಐಕ್ಯರಾಗಿದ್ದೇವೆ. ಆದ್ರೆ ಸುಳ್ಳು ಧರ್ಮ ತುಂಬ ಪಂಗಡಗಳಾಗಿ ಒಡೆದು ಹೋಗಿದೆ. ಹಾಗಾಗಿ ನಮ್ಮ ಮಧ್ಯೆ ಇರೋ ಐಕ್ಯತೆಯನ್ನ ಒಂದು ಅದ್ಭುತ ಅಂತಾನೇ ಹೇಳಬಹುದು.

ಇವತ್ತು ಅಭಿಷಿಕ್ತರು ಮತ್ತು “ಬೇರೆ ಕುರಿಗಳು” “ಒಂದೇ ಹಿಂಡಿನಂತೆ” ಐಕ್ಯರಾಗಿ ಯೆಹೋವನನ್ನ ಆರಾಧಿಸ್ತಿದ್ದಾರೆ (ಪ್ಯಾರ 17 ನೋಡಿ)

‘ನನ್ನ ಆರಾಧನಾ ಸ್ಥಳ ಅವರ ಮಧ್ಯ ಶಾಶ್ವತಕ್ಕೂ ಇರುತ್ತೆ’

18. ದೇವಜನರು ಯಾಕೆ ‘ಲೋಕದವರ ತರ ಇರಬಾರದು’ ಅನ್ನೋದಕ್ಕೆ ಯೆಹೆಜ್ಕೇಲ 37:28 ಯಾವ ಕಾರಣ ಕೊಡುತ್ತೆ?

18 ಒಟ್ಟುಸೇರಿಸೋದ್ರ ಬಗ್ಗೆ ಯೆಹೆಜ್ಕೇಲನು ಹೇಳಿದ ಭವಿಷ್ಯವಾಣಿಯ ಕೊನೆಯ ಮಾತುಗಳಿಂದ ನಮ್ಮಲ್ಲಿ ಐಕ್ಯತೆ ಶಾಶ್ವತವಾಗಿ ಇರುತ್ತೆ ಅಂತ ಗೊತ್ತಾಗುತ್ತೆ. (ಯೆಹೆಜ್ಕೇಲ 37:28 ಓದಿ.) ಆರಾಧನಾ ಸ್ಥಳ ಅಥ್ವಾ ಶುದ್ಧ ಆರಾಧನೆ ಯೆಹೋವನ “ಜನ್ರ ಮಧ್ಯೆ ಇರೋದ್ರಿಂದನೇ” ಅವ್ರು ಐಕ್ಯರಾಗಿ ಇದ್ದಾರೆ. ಅವ್ರು ಎಲ್ಲಿವರೆಗೆ ಪವಿತ್ರರಾಗಿರ್ತಾರೋ ಅಥ್ವಾ ಸೈತಾನನ ಲೋಕದಿಂದ ದೂರ ಇರ್ತಾರೋ ಅಲ್ಲಿವರೆಗೆ ಈ ಆರಾಧನಾ ಸ್ಥಳ ಅವ್ರ ಜೊತೆ ಇರುತ್ತೆ. (1 ಕೊರಿಂ. 6:11; ಪ್ರಕ. 7:14) ಲೋಕದ ಭಾಗವಾಗದೆ ಇರೋದ್ರ ಪ್ರಾಮುಖ್ಯತೆನ ಯೇಸು ಒತ್ತಿ ಹೇಳಿದನು. ತನ್ನ ಶಿಷ್ಯರ ಪರವಾಗಿ ಪ್ರಾರ್ಥಿಸುವಾಗ ಯೇಸು “ಪವಿತ್ರನಾದ ಅಪ್ಪಾ, ಇವರನ್ನ ಕಾಪಾಡು. . . . ಇವರೂ ಆಪ್ತರಾಗಿರಬೇಕು. . . . ಇವ್ರೂ ಈ ಲೋಕದವರ ತರ ಇಲ್ಲ. . . . ಸತ್ಯದಿಂದ ಇವ್ರನ್ನ ಪವಿತ್ರ ಮಾಡು” ಅಂದನು. (ಯೋಹಾ. 17:11, 16, 17) ಯೇಸು ಇಲ್ಲಿ ತನ್ನ ಶಿಷ್ಯರು ‘ಆಪ್ತರಾಗಿರೋದ್ರ’ ಬಗ್ಗೆ ಹೇಳಿದಾಗ ‘ಅವ್ರು ಲೋಕದವ್ರ ತರ ಇಲ್ಲ’ ಅಂತ ಹೇಳಿದನು ಅನ್ನೋದನ್ನ ಗಮನಿಸಿ.

19. (ಎ) ನಾವು ದೇವರನ್ನ ಅನುಕರಿಸುತ್ತೇವೆ ಅಂತ ಹೇಗೆ ತೋರಿಸಿಕೊಡಬಹುದು? (ಬಿ) ಯೇಸು ಸಾಯೋದಕ್ಕೂ ಹಿಂದಿನ ರಾತ್ರಿ ಐಕ್ಯತೆ ಬಗ್ಗೆ ಯಾವ ಅಂಶವನ್ನ ಒತ್ತಿಹೇಳಿದನು?

19 ಬೈಬಲಿನಲ್ಲಿ ಈ ವಚನದಲ್ಲಿ ಮಾತ್ರ ಯೆಹೋವ ದೇವ್ರನ್ನ ಯೇಸು “ಪವಿತ್ರನಾದ ಅಪ್ಪಾ” ಅಂತ ಕರೆದಿರೋ ದಾಖಲೆ ಇದೆ. ಯೆಹೋವನು ಸಂಪೂರ್ಣವಾಗಿ ಶುದ್ಧನೂ ನೀತಿವಂತನೂ ಆಗಿದ್ದಾನೆ. ಅದಕ್ಕೆ ಹಿಂದಿನ ಕಾಲದ ಇಸ್ರಾಯೇಲ್ಯರಿಗೆ ಈ ರೀತಿ ಆಜ್ಞೆ ಕೊಟ್ಟನು: “ನಾನು ಪವಿತ್ರನಾಗಿ ಇರೋದ್ರಿಂದ ನೀವು ಸಹ ಪವಿತ್ರರು ಆಗಿರಬೇಕು.” (ಯಾಜ. 11:45) ‘ಯೆಹೋವನನ್ನ ಅನುಕರಿಸೋ’ ನಾವು ಆತನು ಹೇಳಿದ ಎಲ್ಲಾ  ವಿಷ್ಯಗಳಲ್ಲಿ ಪವಿತ್ರರಾಗಿರೋಕೆ ನಮ್ಮಿಂದ ಆಗೋದೆಲ್ಲಾ ಮಾಡಬೇಕು. (ಎಫೆ. 5:1; 1 ಪೇತ್ರ 1:14, 15) ಬೈಬಲಿನಲ್ಲಿ ಮನುಷ್ಯರನ್ನ “ಪವಿತ್ರರು” ಅಂತ ಹೇಳಿದ್ರೆ ಅವರನ್ನ “ಪ್ರತ್ಯೇಕಿಸಲಾಗಿದೆ” ಅಂತರ್ಥ. ಇದೇ ಅಂಶವನ್ನು ಯೇಸು ಸಾಯೋದಕ್ಕೂ ಮುಂಚಿನ ರಾತ್ರಿ ತನ್ನ ಶಿಷ್ಯರ ಬಗ್ಗೆ ಪ್ರಾರ್ಥಿಸುವಾಗ ಒತ್ತಿ ಹೇಳಿದನು. ಎಲ್ಲಿವರೆಗೆ ಆತನ ಶಿಷ್ಯರು ಈ ಲೋಕದಿಂದ ಪ್ರತ್ಯೇಕರಾಗಿರುತ್ತಾರೋ ಅಲ್ಲಿವರೆಗೆ ಅವ್ರು ಐಕ್ಯರಾಗಿರುತ್ತಾರೆ ಅಂತ ಹೇಳಿದನು.

“ಇವ್ರನ್ನ ಸೈತಾನನಿಂದ ಕಾಪಾಡು”

20, 21. (ಎ) ಯೆಹೋವನ ಸಂರಕ್ಷಣೆಯ ಮೇಲೆ ನಮಗಿರೋ ಭರವಸೆ ಹೇಗೆ ಹೆಚ್ಚಾಗುತ್ತೆ? (ಬಿ) ನಿಮ್ಮ ದೃಢ ನಿರ್ಧಾರ ಏನು?

20 ಇವತ್ತು ಯೆಹೋವನ ಜನರ ಮಧ್ಯೆ ಅದ್ಭುತವಾದ ಐಕ್ಯತೆ ಇದೆ. ಇದು, “ಇವರನ್ನ ಸೈತಾನನಿಂದ ಕಾಪಾಡು” ಅಂತ ಯೇಸು ಕ್ರಿಸ್ತನು ಮಾಡಿದ ಪ್ರಾರ್ಥನೆಗೆ ಉತ್ತರ ಆಗಿದೆ. (ಯೋಹಾನ 17:14, 15 ಓದಿ.) ದೇವ ಜನರ ಮಧ್ಯೆ ಇರೋ ಐಕ್ಯತೆನ ಮುರಿಯೋಕಾಗದೆ ಸೈತಾನ ಸೋತು ಹೋಗ್ತಾ ಇದ್ದಾನೆ. ಇದನ್ನ ನೋಡುವಾಗ ಯೆಹೋವ ದೇವರ ಸಂರಕ್ಷಣೆಯ ಮೇಲೆ ನಮ್ಮ ಭರವಸೆ ಇನ್ನೂ ಜಾಸ್ತಿ ಆಗುತ್ತೆ. ಯೆಹೆಜ್ಕೇಲನ ಭವಿಷ್ಯವಾಣಿಯಲ್ಲಿ ಯೆಹೋವ ದೇವರು ಎರಡು ಕೋಲುಗಳನ್ನ ತನ್ನ ಕೈಯಲ್ಲಿ ಒಂದು ಮಾಡ್ತೀನಿ ಅಂತ ಹೇಳಿದನು. ಯೆಹೋವನೇ ತನ್ನ ಜನ್ರನ್ನ ಅದ್ಭುತಕರವಾಗಿ ಐಕ್ಯಗೊಳಿಸಿದ್ದಾನೆ ಅಂತ ಇದ್ರಿಂದ ಗೊತ್ತಾಗುತ್ತೆ. ಅವ್ರು ಆತನ ಶಕ್ತಿಶಾಲಿ ಕೈ ಕೆಳಗೆ ಸುರಕ್ಷಿತರಾಗಿದ್ದಾರೆ. ಹಾಗಾಗಿ ಸೈತಾನನಿಗೆ ಅವ್ರನ್ನ ಏನು ಮಾಡೋಕೂ ಆಗಲ್ಲ.

21 ಹಾಗಾದ್ರೆ ನಾವೇನು ಮಾಡಬೇಕು? ಈಗ ಇರುವಂಥ ಈ ಅಮೂಲ್ಯ ಐಕ್ಯತೆನ ಕಾಪಾಡ್ಕೊಳ್ಳೋಕೆ ನಮ್ಮಿಂದಾದ ಎಲ್ಲವನ್ನ ಮಾಡೋ ದೃಢ ತೀರ್ಮಾನ ಮಾಡಬೇಕು. ಹಾಗಾದ್ರೆ ಐಕ್ಯತೆನ ಕಾಪಾಡ್ಕೊಳ್ಳೋದು ಹೇಗೆ? ಯೆಹೋವನ ಆಧ್ಯಾತ್ಮಿಕ ಆಲಯದಲ್ಲಿ ತಪ್ಪದೇ ಶುದ್ಧ ಆರಾಧನೆಯನ್ನ ಮಾಡೋ ಮೂಲಕ. ಈ ಶುದ್ಧ ಆರಾಧನೆಯಲ್ಲಿ ಏನೆಲ್ಲಾ ಸೇರಿದೆ ಅನ್ನೋದನ್ನ ನಾವು ಮುಂದಿನ ಅಧ್ಯಾಯದಲ್ಲಿ ನೋಡ್ತೇವೆ.

^ ಪ್ಯಾರ. 7 ಯೆಹೆಜ್ಕೇಲನಿಗೆ ಈ ಭವಿಷ್ಯವಾಣಿ ಸಿಗೋದಕ್ಕೂ ಸುಮಾರು ಎರಡು ಶತಮಾನಗಳ ಮುಂಚೆ ಅಶ್ಶೂರ್ಯರು ಹತ್ತು ಕುಲಗಳ ರಾಜ್ಯದ (“ಎಫ್ರಾಯೀಮನ ಕೋಲು”) ಜನರನ್ನ ಕೈದಿಗಳಾಗಿ ಕರಕೊಂಡು ಹೋದ್ರು.—2 ಅರ. 17:23.

^ ಪ್ಯಾರ. 11 ಈ ಭವಿಷ್ಯವಾಣಿಯನ್ನ 8 ನೇ ಅಧ್ಯಾಯದಲ್ಲಿ ವಿವರವಾಗಿ ಚರ್ಚಿಸಲಾಗಿದೆ.