ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 17

“ಗೋಗನೇ, ನಾನು ನಿನಗೆ ವಿರುದ್ಧವಾಗಿದ್ದೀನಿ”

“ಗೋಗನೇ, ನಾನು ನಿನಗೆ ವಿರುದ್ಧವಾಗಿದ್ದೀನಿ”

ಯೆಹೆಜ್ಕೇಲ 38:3

ಮುಖ್ಯ ವಿಷಯ: “ಗೋಗ” ಯಾರು ಮತ್ತು ಅವನು ಆಕ್ರಮಣ ಮಾಡಲಿರೋ “ದೇಶ” ಯಾವುದು ಅನ್ನೋದ್ರ ವಿವರಣೆ

1, 2. ಮುಂದೆ ಯಾವ ದೊಡ್ಡ ಯುದ್ಧ ನಡೆಯಲಿದೆ? ಇದರ ಬಗ್ಗೆ ಯಾವ ಪ್ರಶ್ನೆಗಳು ಏಳುತ್ತವೆ? (ಆರಂಭದ ಚಿತ್ರ ನೋಡಿ.)

ಸಾವಿರಾರು ವರ್ಷಗಳಿಂದ ಲೋಕದಲ್ಲಿ ಯುದ್ಧಗಳಾಗ್ತಿವೆ. ಸಾವಿರಾರು ಜನ ಸಾಯ್ತಾ ಇದ್ದಾರೆ. ಅದ್ರಲ್ಲಿ ಎರಡು ಲೋಕ ಯುದ್ಧಗಳೂ ಸೇರಿವೆ. ಆದ್ರೆ ಹಿಂದೆಂದೂ ನಡೆಯದಷ್ಟು ದೊಡ್ಡ ಯುದ್ಧ ಮುಂದೆ ಆಗಲಿದೆ. ಈ ಯುದ್ಧ, ಮನುಷ್ಯರು ದೇಶ ದೇಶಗಳ ನಡುವೆ ಸ್ವಾರ್ಥ ಉದ್ದೇಶಕ್ಕಾಗಿ ನಡೆಸೋ ಯುದ್ಧ ಅಲ್ಲ. ಬದಲಿಗೆ “ಸರ್ವಶಕ್ತ ದೇವರ ಮಹಾ ದಿನದಲ್ಲಿ ಆಗೋ ಯುದ್ಧ” ಆಗಿದೆ. (ಪ್ರಕ. 16:14) ದೇವರ ಅಮೂಲ್ಯವಾದ ದೇಶದ ಮೇಲೆ ಆತನ ಶತ್ರು ಆಕ್ರಮಣ ಮಾಡುವಾಗ ಈ ಯುದ್ಧ ಶುರುವಾಗುತ್ತೆ. ಆಗ ವಿಶ್ವದ ರಾಜನಾಗಿರೋ ಯೆಹೋವನು ತನ್ನ ರಾಜ್ಯವನ್ನ ಉಳಿಸಲಿಕ್ಕಾಗಿ ತನ್ನ ವಿನಾಶಕಾರಿ ಶಕ್ತಿಯನ್ನ ಬಳಸ್ತಾನೆ. ಈ ರೀತಿ ಆತನು ಹಿಂದೆಂದೂ ತನ್ನ ಶಕ್ತಿಯನ್ನ ಉಪಯೋಗಿಸಿಲ್ಲ.

2 ಇದ್ರ ಬಗ್ಗೆ ಹೇಳುವಾಗ ನಮ್ಮ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಬರಬಹುದು. ಆ ಶತ್ರು ಯಾರು? ಅವನು ಯಾವ ದೇಶದ ಮೇಲೆ ಆಕ್ರಮಣ ಮಾಡ್ತಾನೆ? ಯಾವಾಗ, ಯಾಕೆ, ಮತ್ತು ಹೇಗೆ ದೇಶದ ಮೇಲೆ ಆಕ್ರಮಣ ಮಾಡ್ತಾನೆ? ಈ ಘಟನೆಗಳು ನಮ್ಮ ಮೇಲೆ ಅಂದ್ರೆ ಯೆಹೋವ ದೇವರ ಎಲ್ಲಾ ಶುದ್ಧ ಆರಾಧಕರ ಮೇಲೆ ಪ್ರಭಾವ ಬೀರಲಿವೆ. ಆದ್ರಿಂದ ನಾವು ಇದ್ರ ಉತ್ತರ ತಿಳುಕೊಂಡಿರಬೇಕು. ಆ ಪ್ರಶ್ನೆಗಳಿಗೆ ಉತ್ತರ ಯೆಹೆಜ್ಕೇಲ 38 ಮತ್ತು 39 ನೇ ಅಧ್ಯಾಯಗಳಲ್ಲಿರುವ ಭವಿಷ್ಯವಾಣಿಯಲ್ಲಿದೆ.

 ಮಾಗೋಗ್‌ ದೇಶದ ಗೋಗ ಅನ್ನೋ ಶತ್ರು

3. ಮಾಗೋಗ್‌ ದೇಶದ ಗೋಗನ ಬಗ್ಗೆ ಇರೋ ಭವಿಷ್ಯವಾಣಿಯ ಸಾರಾಂಶ ತಿಳಿಸಿ.

 3 ಯೆಹೆಜ್ಕೇಲ 38:1, 2, 8, 18; 39:4, 11 ಓದಿ. ಆ ಭವಿಷ್ಯವಾಣಿಯ ಸಾರಾಂಶ ಈ ರೀತಿ ಇದೆ. “ಕೊನೇ ವರ್ಷಗಳಲ್ಲಿ” ಶತ್ರು ಆಗಿರೋ “ಮಾಗೋಗ್‌ ದೇಶದ ಗೋಗ” ದೇವಜನರ “ದೇಶದ ಮೇಲೆ” ಆಕ್ರಮಣ ಮಾಡ್ತಾನೆ. ಇದ್ರಿಂದ ಯೆಹೋವನು ‘ರೋಷಾವೇಶದಿಂದ’ ಉರಿದು ಗೋಗನನ್ನ ಸೋಲಿಸ್ತಾನೆ. * ನಂತ್ರ ಯೆಹೋವನು ತನ್ನ ಶತ್ರುವನ್ನ ಮತ್ತು ಅವನ ಜೊತೆಯಿರೋ ಎಲ್ರನ್ನೂ “ಎಲ್ಲ ಜಾತಿಯ ಬೇಟೆ ಹಕ್ಕಿಗಳಿಗೆ, ಕಾಡುಪ್ರಾಣಿಗಳಿಗೆ ಆಹಾರವಾಗಿ” ಕೊಡ್ತಾನೆ. ಕೊನೆಗೆ ಯೆಹೋವನು “ಗೋಗನಿಗೆ ಹೂಳೋ ಜಾಗವನ್ನ” ಕೊಡ್ತಾನೆ. ಈ ಭವಿಷ್ಯವಾಣಿ ಬಲುಬೇಗನೆ ಹೇಗೆ ನೆರವೇರಲಿದೆ ಅಂತ ಅರ್ಥಮಾಡ್ಕೊಬೇಕಂದ್ರೆ ಮೊದಲು, ನಾವು ಈ ಗೋಗ ಯಾರು ಅಂತ ತಿಳುಕೊಳ್ಳಬೇಕು.

4. ಮಾಗೋಗಿನ ಗೋಗನ ಬಗ್ಗೆ ನಮಗೇನು ಗೊತ್ತಾಯ್ತು?

4 ಹಾಗಾದ್ರೆ ಮಾಗೋಗ್‌ ದೇಶದ ಗೋಗ ಯಾರು? ಗೋಗ ಶುದ್ಧ ಆರಾಧನೆಯ ಶತ್ರು ಅಂತ ಯೆಹೆಜ್ಕೇಲನ ವಿವರಣೆಯಿಂದ ಗೊತ್ತಾಗುತ್ತೆ. ಸುಮಾರು ವರ್ಷಗಳಿಂದ ನಮ್ಮ ಪ್ರಕಾಶನಗಳಲ್ಲಿ ಶುದ್ಧ ಆರಾಧನೆಯ ಪರಮ ಶತ್ರುವಾಗಿರುವ ಸೈತಾನನೇ ಗೋಗ ಅಂತ ಹೇಳಿದ್ವಿ. ಆದ್ರೆ ಯೆಹೆಜ್ಕೇಲನ ಭವಿಷ್ಯವಾಣಿ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಆಳವಾಗಿ ಅಧ್ಯಯನ ಮಾಡಿದಾಗ ನಾವು ತಿಳಿದುಕೊಂಡಿರುವ ವಿಷ್ಯಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಅಂತ ಅರ್ಥ ಆಯ್ತು. ಹಾಗಾಗಿ ಮಾಗೋಗಿನ ಗೋಗನು ಆತ್ಮಜೀವಿಯನ್ನ ಸೂಚಿಸಲ್ಲ ಬದ್ಲಿಗೆ ಶುದ್ಧ ಆರಾಧನೆಯ ಶತ್ರುವಾಗಿರೋ ಕಣ್ಣಿಗೆ ಕಾಣುವ ಮಾನವ ಜನಾಂಗಗಳನ್ನ ಸೂಚಿಸುತ್ತೆ ಅಂತ ಕಾವಲಿನಬುರುಜುವಿನಲ್ಲಿ ತಿಳಿಸಲಾಯ್ತು. * ಆದ್ರೆ ಈ ವಿಷ್ಯವನ್ನ ಕಲಿಯಕ್ಕೂ ಮುಂಚೆ ಗೋಗನು ಆತ್ಮಜೀವಿ ಅಲ್ಲ ಅನ್ನೋದಕ್ಕೆ ಎರಡು ಕಾರಣಗಳನ್ನ ನೊಡೋಣ.

5, 6. ಮಾಗೋಗಿನ ಗೋಗ ಆತ್ಮ ಜೀವಿ ಅಲ್ಲ ಅಂತ ಯೆಹೆಜ್ಕೇಲನ ಭವಿಷ್ಯವಾಣಿಯಿಂದ ಹೇಗೆ ಗೊತ್ತಾಗುತ್ತೆ?

5 “ನಾನು ನಿನ್ನನ್ನ ಎಲ್ಲ ಜಾತಿಯ ಬೇಟೆ ಹಕ್ಕಿಗಳಿಗೆ, . . . ಆಹಾರವಾಗಿ ಕೊಡ್ತೀನಿ.” (ಯೆಹೆ. 39:4) ದೇವರ ನ್ಯಾಯತೀರ್ಪಿನ ಬಗ್ಗೆ ಎಚ್ಚರಿಸಲಿಕ್ಕಾಗಿ ಬೈಬಲಲ್ಲಿ ಆಗಾಗ ಬೇಟೆ ಹಕ್ಕಿಗಳು ಶವಗಳನ್ನ ತಿನ್ನುತ್ತವೆ ಅಂತ ಹೇಳಲಾಗಿದೆ. ಯೆಹೋವನು ಈ ರೀತಿಯ ಎಚ್ಚರಿಕೆಗಳನ್ನ ಇಸ್ರಾಯೇಲ್ಯರಿಗೂ, ಅನ್ಯಜನಾಂಗದವರಿಗೂ ಕೊಟ್ಟಿದ್ದನು. (ಧರ್ಮೋ. 28:26; ಯೆರೆ. 7:33; ಯೆಹೆ. 29:3, 5) ಇಲ್ಲಿ ಈ ಎಚ್ಚರಿಕೆಗಳನ್ನ ಆತ್ಮಜೀವಿಗಳಿಗಲ್ಲ ಬದ್ಲಿಗೆ ಮಾಂಸ ಶರೀರವಿರೋ ಮನುಷ್ಯರಿಗೆ ಹೇಳಿದ್ದಾನೆ ಅನ್ನೋದನ್ನ ಗಮನಿಸಿ. ಯಾಕಂದ್ರೆ ಬೇಟೆ ಹಕ್ಕಿ ಮತ್ತು ಕಾಡು ಪ್ರಾಣಿಗಳು ಮಾಂಸವನ್ನ ತಿನ್ನುತ್ತವೆ, ಆತ್ಮಜೀವಿಯ ಶರೀರವನ್ನಲ್ಲ. ಹೀಗೆ ಗೋಗ ಆತ್ಮಜೀವಿಯಲ್ಲ ಅಂತ ಯೆಹೆಜ್ಕೇಲನ ಭವಿಷ್ಯವಾಣಿಯಿಂದ ಗೊತ್ತಾಗುತ್ತೆ.

6 “ಇಸ್ರಾಯೇಲಲ್ಲಿ . . . ನಾನು ಗೋಗನಿಗೆ ಹೂಳೋ ಜಾಗವನ್ನ ಕೊಡ್ತೀನಿ.” (ಯೆಹೆ. 39:11) ಬೈಬಲಲ್ಲಿ ಎಲ್ಲೂ ಆತ್ಮಜೀವಿಗಳನ್ನ ಭೂಮಿ ಮೇಲೆ ಹೂಳೋದ್ರ ಬಗ್ಗೆ ತಿಳಿಸಲಾಗಿಲ್ಲ. ಬದ್ಲಿಗೆ ಸೈತಾನ ಮತ್ತು ದೆವ್ವಗಳನ್ನ ಅಗಾಧ ಸ್ಥಳದಲ್ಲಿ ಸಾವಿರ ವರ್ಷ ಬಂಧಿಸಿಡಲಾಗುತ್ತೆ. ನಂತರ ಅವರನ್ನ ಬೆಂಕಿಯ ಕೆರೆಗೆ ದೊಬ್ಬಲಾಗುತ್ತೆ ಅಂತ ತಿಳಿಸಲಾಗಿದೆ. ಇದು ಅವರಿಗೆ ಶಾಶ್ವತ ನಾಶನ ಆಗುತ್ತೆ ಅನ್ನೋದನ್ನ ಸೂಚಿಸುತ್ತೆ. (ಲೂಕ 8:31; ಪ್ರಕ. 20:1-3, 10) ಆದ್ರೆ ಗೋಗನಿಗೆ ಭೂಮಿಯಲ್ಲಿ “ಹೂಳೋ ಜಾಗವನ್ನ” ಕೊಡಲಾಗುತ್ತೆ ಅಂತ ಹೇಳಿರೋದ್ರಿಂದ ಅವನು ಆತ್ಮಜೀವಿಯಲ್ಲ ಅಂತ ಗೊತ್ತಾಗುತ್ತೆ.

7, 8. ‘ಉತ್ತರದ ರಾಜನ’ ಅಂತ್ಯ ಯಾವಾಗ ಆಗುತ್ತೆ? ಇದಕ್ಕೂ ಮಾಗೋಗಿನ ಗೋಗನ ಅಂತ್ಯಕ್ಕೂ ಯಾವ ಹೋಲಿಕೆ ಇದೆ?

7 ಹಾಗಾದರೆ ಶುದ್ಧ ಆರಾಧಕರ ಮೇಲೆ ಕೊನೆಯ ಆಕ್ರಮಣ ಮಾಡೋ ಈ ಗೋಗ ಯಾರನ್ನ ಅಥ್ವಾ ಏನನ್ನ ಸೂಚಿಸ್ತಾನೆ? ಇದನ್ನ ಅರ್ಥಮಾಡಿಕೊಳ್ಳೋಕೆ ನಾವೀಗ ಬೈಬಲಿನಲ್ಲಿರೋ ಎರಡು ಭವಿಷ್ಯವಾಣಿಗಳ ಬಗ್ಗೆ ನೊಡೋಣ.

8 “ಉತ್ತರದ ರಾಜ.” (ದಾನಿಯೇಲ 11:40-45 ಓದಿ.) ದಾನಿಯೇಲನು ತನ್ನ ಕಾಲದಿಂದ ನಮ್ಮ ಕಾಲದವರೆಗೂ ಯಾವೆಲ್ಲ ಲೋಕಶಕ್ತಿಗಳು ಇರ್ತವೆ ಅನ್ನೋದನ್ನ ತಿಳಿಸಿದ್ದನು.  ಅವನು ಒಬ್ಬರಿಗೊಬ್ಬರು ಹೋರಾಡುವ “ದಕ್ಷಿಣದ ರಾಜ” ಮತ್ತು ‘ಉತ್ತರದ ರಾಜನ’ ಬಗ್ಗೆನೂ ತಿಳಿಸಿದ್ದಾನೆ. ಇತಿಹಾಸದ ಉದ್ದಕ್ಕೂ “ದಕ್ಷಿಣದ ರಾಜ” ಮತ್ತು ‘ಉತ್ತರದ ರಾಜನ’ ಸ್ಥಾನಕ್ಕೆ ಬೇರೆಬೇರೆ ದೇಶಗಳು ಬಂದಿವೆ. ಅವರು ಇಡೀ ಲೋಕದಲ್ಲಿ ತಾವೇ ಶಕ್ತಿಶಾಲಿ ಆಗಬೇಕು ಅಂತ ಒಬ್ರಿಗೊಬ್ರು ಹೋರಾಡ್ತಾನೇ ಇದ್ರು. ಉತ್ತರದ ರಾಜ “ಅಂತ್ಯದ ಸಮಯದಲ್ಲಿ” ಮಾಡುವ ಕೊನೇ ಆಕ್ರಮಣದ ಬಗ್ಗೆ ದಾನಿಯೇಲನು ಹೀಗೆ ಹೇಳಿದ್ದಾನೆ: “ಅವನು ಕೋಪದಿಂದ ತುಂಬ ಜನ್ರನ್ನ ನಾಶ ಮಾಡೋಕೆ, ಸರ್ವನಾಶ ಮಾಡೋಕೆ ಹೊರಡ್ತಾನೆ” ಉತ್ತರ ರಾಜನ ಮುಖ್ಯ ಶತ್ರುಗಳು ಯೆಹೋವನ ಆರಾಧಕರೇ ಆಗಿದ್ದಾರೆ. * ಆದರೆ ಮಾಗೋಗಿನ ಗೋಗನ ತರಾನೇ ಉತ್ತರದ ರಾಜ ಸಹ ದೇವಜನರ ಮೇಲೆ ಆಕ್ರಮಣ ಮಾಡಿ ಸೋತು ಹೋಗ್ತಾನೆ. ಆಗ “ಅವನ ಅಂತ್ಯ ಆಗುತ್ತೆ.”

9. ಮಾಗೋಗ್‌ ದೇಶದ ಗೋಗನಿಗೂ ‘ಭೂಮಿಯ ರಾಜರಿಗೂ’ ಯಾವ ಹೋಲಿಕೆಗಳಿವೆ?

9 ‘ಭೂಮೀಲಿರೋ ಎಲ್ಲ ರಾಜರು.’ (ಪ್ರಕಟನೆ 16:14, 16; 17:14; 19:19, 20 ಓದಿ.) ಪ್ರಕಟನೆ ಪುಸ್ತಕದಲ್ಲಿ ಮುಂತಿಳಿಸಲಾದಂತೆ “ರಾಜರ ರಾಜನು” ಆಗಿರುವ ಯೇಸು ಕ್ರಿಸ್ತನ ಮೇಲೆ “ಭೂಮಿಯ ರಾಜರು” ಆಕ್ರಮಣ ಮಾಡಲಿದ್ದಾರೆ. ಆದರೆ ಅವರು ಸ್ವರ್ಗಕ್ಕೆ ಹೋಗಿ ಹೋರಾಡೋಕೆ ಸಾಧ್ಯವಿಲ್ಲ. ಆದ್ರಿಂದ ಅವರು ಭೂಮಿಯಲ್ಲಿರುವ ಆತನ ಬೆಂಬಲಿಗರ ಮೇಲೆ ಆಕ್ರಮಣ ಮಾಡ್ತಾರೆ. ಆದರೆ ಹರ್ಮಗೆದ್ದೋನ್‌ ಯುದ್ಧದಲ್ಲಿ ಈ ರಾಜರು ಸೋತುಹೋಗ್ತಾರೆ. ದೇವಜನರ ಮೇಲೆ ಆಕ್ರಮಣ ಮಾಡಿದ ಮೇಲೆನೇ ಅವರು ಸೋತುಹೋಗ್ತಾರೆ ಅನ್ನೋದನ್ನ ಗಮನಿಸಿ. ಮಾಗೋಗ್‌ ದೇಶದ ಗೋಗನ ಬಗ್ಗೆನೂ ಬೈಬಲಿನಲ್ಲಿ ಹೀಗೇ ತಿಳಿಸಲಾಗಿದೆ. *

10. ಮಾಗೋಗಿನ ಗೋಗ ಯಾರು?

10 ಇದ್ರಿಂದ ಮಾಗೋಗಿನ ಗೋಗನ ಬಗ್ಗೆ ಏನು ಗೊತ್ತಾಗುತ್ತೆ? (1) ಅವನು ಒಂದು ಆತ್ಮಜೀವಿಯಲ್ಲ. (2) ಗೋಗನು, ಬಲುಬೇಗನೆ ದೇವಜನರ ಮೇಲೆ ಆಕ್ರಮಣ ಮಾಡುವ ಜನಾಂಗಗಳ ಗುಂಪನ್ನ ಸೂಚಿಸುತ್ತಾನೆ. ಈ ದೇಶಗಳೆಲ್ಲ ಸೇರಿ ಒಂದು ಗುಂಪಾಗಿ ಆಕ್ರಮಣ ಮಾಡ್ತವೆ. ನಾವದನ್ನ ಹೇಗೆ ಹೇಳಬಹುದು? ದೇವಜನರು ಇಡೀ ಭೂಮಿಯಲ್ಲಿ ವ್ಯಾಪಿಸಿರೋದ್ರಿಂದ ಅವರ ಮೇಲೆ ಆಕ್ರಮಣ ಮಾಡಬೇಕಂದ್ರೆ ಎಲ್ಲಾ ದೇಶದವರು ಒಟ್ಟಾಗಿ ಒಂದೇ ಉದ್ದೇಶದಿಂದ ಕೆಲಸ ಮಾಡಬೇಕು. (ಮತ್ತಾ. 24:9) ಇದರ ಹಿಂದೆ ಸೈತಾನನ ಕೈವಾಡ ಇರುತ್ತೆ. ಅನೇಕ ವರ್ಷಗಳಿಂದ ಶುದ್ಧ ಆರಾಧನೆಯನ್ನ ವಿರೋಧಿಸಲು ಲೋಕದ ದೇಶಗಳನ್ನ ಅವನು ಉಪಯೋಗಿಸುತ್ತಾ ಬಂದಿದ್ದಾನೆ. (1 ಯೋಹಾ. 5:19; ಪ್ರಕ. 12:17) ಆದರೆ ಯೆಹೆಜ್ಕೇಲನ ಭವಿಷ್ಯವಾಣಿಯಲ್ಲಿ ತಿಳಿಸಿರೋ ಮಾಗೋಗಿನ ಗೋಗ ಸೈತಾನನನ್ನ ಅಲ್ಲ, ಯೆಹೋವನ ಜನರ ಮೇಲೆ ಆಕ್ರಮಣ ಮಾಡುವ ಭೂಮಿಯಲ್ಲಿರುವ ಜನಾಂಗಗಳ ಗುಂಪನ್ನ ಸೂಚಿಸ್ತಾನೆ. *

“ದೇಶ” ಏನನ್ನ ಸೂಚಿಸುತ್ತೆ?

11. ಗೋಗನು ಆಕ್ರಮಣ ಮಾಡುವ ‘ದೇಶದ’ ಬಗ್ಗೆ ಯೆಹೆಜ್ಕೇಲನ ಭವಿಷ್ಯವಾಣಿ ಏನು ತಿಳಿಸುತ್ತೆ?

11  ಪ್ಯಾರ 3 ರಲ್ಲಿ ನೋಡಿದ ಹಾಗೆ ಮಾಗೋಗಿನ ಗೋಗನು ಯೆಹೋವನಿಗೆ ಅಮೂಲ್ಯವಾಗಿರುವ ದೇಶದ ಮೇಲೆ ಆಕ್ರಮಣ ಮಾಡ್ತಾನೆ. ಹೀಗೆ ಅವನು ದೇವರಿಗೆ ತುಂಬ ಕೋಪ ಬರಿಸ್ತಾನೆ. ಹಾಗಾದ್ರೆ ಆ ದೇಶ ಯಾವುದು? ಇದನ್ನ ತಿಳುಕೊಳ್ಳೋಕೆ ಯೆಹೆಜ್ಕೇಲನ ಭವಿಷ್ಯವಾಣಿಯನ್ನ ನೋಡೋಣ. (ಯೆಹೆಜ್ಕೇಲ 38:8-12 ಓದಿ.) ಅಲ್ಲಿ, ‘ಎಷ್ಟೋ ಜನಾಂಗಗಳಿಂದ ಒಟ್ಟುಸೇರಿಸಿದ’ ಮತ್ತು “ಹಿಂದೆ ಕರ್ಕೊಂಡು ಬಂದ ಜನ್ರ ದೇಶದ ಮೇಲೆ” ಮಾಗೋಗಿನ ಗೋಗ ದಾಳಿ ಮಾಡ್ತಾನೆ ಅಂತ ತಿಳಿಸಲಾಗಿದೆ. ಪುನಃಸ್ಥಾಪನೆಯಾದ ಶುದ್ಧ ಆರಾಧಕರು ವಾಸಿಸುವ ದೇಶದ ಬಗ್ಗೆ ಸಹ ಅಲ್ಲಿ ಹೀಗೆ ತಿಳಿಸಲಾಗಿದೆ: ‘ಅವ್ರೆಲ್ಲ ಸುರಕ್ಷಿತವಾಗಿ ಇರುತ್ತಾರೆ,’ “ಗೋಡೆ, ಕಂಬಿ, ಬಾಗಿಲುಗಳು ಇಲ್ಲದ ಹಳ್ಳಿಗಳಲ್ಲಿ” ವಾಸಿಸ್ತಾರೆ ಮತ್ತು ‘ಸಂಪತ್ತನ್ನೂ ಕೂಡಿಸ್ಕೊಳ್ತಾರೆ.’ ಈ ದೇಶದಲ್ಲಿ ವಾಸಿಸೋ ಜನ್ರು ಇಡೀ ಭೂಮಿಯಲ್ಲಿರೋ ಯೆಹೋವನ ಸೇವಕರನ್ನ ಸೂಚಿಸ್ತಾರೆ. ಆದ್ರೆ ಆ ದೇಶ ಏನನ್ನ ಸೂಚಿಸುತ್ತೆ? ಇದನ್ನ ನಾವು ಹೇಗೆ ತಿಳ್ಕೊಬಹುದು?

12. ಬೈಬಲ್‌ ಕಾಲದ ಇಸ್ರಾಯೇಲ್‌ ದೇಶದಲ್ಲಿ ಹೇಗೆ ಪುನಃಸ್ಥಾಪನೆ ಆಯ್ತು?

 12 ಇದಕ್ಕೆ ಉತ್ತರ ತಿಳುಕೊಳ್ಳೋಕೆ, ಹಿಂದಿನ ಕಾಲದ ಇಸ್ರಾಯೇಲಿನಲ್ಲಿ ಆದ ಪುನಃಸ್ಥಾಪನೆಯ ಬಗ್ಗೆ ನೊಡೋಣ. ಆ ದೇಶದಲ್ಲಿ ನೂರಾರು ವರ್ಷಗಳಿಂದ ದೇವಜನ್ರು ವಾಸವಾಗಿದ್ರು, ಕೆಲಸಮಾಡ್ತಿದ್ರು ಮತ್ತು ಅಲ್ಲಿ ಯೆಹೋವನನ್ನ ಒಟ್ಟಾಗಿ ಆರಾಧಿಸ್ತಿದ್ರು. ಆದ್ರೆ ಅವ್ರು ಯೆಹೋವನಿಗೆ ಅಪನಂಬಿಗಸ್ತರಾದಾಗ ಆತನು ಯೆಹೆಜ್ಕೇಲನ ಮೂಲಕ, ‘ಆ ದೇಶ ನಾಶವಾಗಿ ಹೋಗುತ್ತೆ, ಅದು ಹಾಳಾಗಿ ಹೋಗುತ್ತೆ’ ಅಂತ ತಿಳಿಸಿದನು. (ಯೆಹೆ. 33:27-29) ಅಷ್ಟೇ ಅಲ್ಲ, ಬಾಬೆಲಿನಲ್ಲಿದ್ದ ಪಶ್ಚಾತ್ತಾಪಪಟ್ಟ ಕೈದಿಗಳಲ್ಲಿ ಉಳಿದವ್ರು ವಾಪಸ್‌ ಬಂದು ತಮ್ಮ ದೇಶದಲ್ಲಿ ಶುದ್ಧ ಆರಾಧನೆಯನ್ನ ಪುನಃಸ್ಥಾಪಿಸ್ತಾರೆ ಅಂತ ಯೆಹೋವ ದೇವರು ಮುಂತಿಳಿಸಿದ್ದನು. ಯೆಹೋವನ ಆಶೀರ್ವಾದದಿಂದ ಆ ದೇಶ “ಏದೆನ್‌ ತೋಟದ ತರ” ಕಂಗೊಳಿಸುತ್ತೆ ಅಂತನೂ ತಿಳಿಸಿದ್ದನು. (ಯೆಹೆ. 36:34-36) ಯೆಹೂದಿ ಕೈದಿಗಳು ತಮ್ಮ ದೇಶದಲ್ಲಿ ಆರಾಧನೆಯನ್ನ ಮಾಡೋಕೆ ಕ್ರಿ.ಪೂ. 537 ರಲ್ಲಿ ಬಂದಾಗ ಪುನಃಸ್ಥಾಪನೆ ಶುರುವಾಯ್ತು.

13, 14. (ಎ) ಆಧ್ಯಾತ್ಮಿಕ ದೇಶ ಅಂದರೇನು? (ಬಿ) ಆ ದೇಶ ಯೆಹೋವನಿಗೆ ಅಮೂಲ್ಯವಾಗಿದೆ ಯಾಕೆ?

13 ಈಗಿನ ಕಾಲದಲ್ಲೂ ದೇವರ ಶುದ್ಧ ಆರಾಧಕರು ಪುನಃಸ್ಥಾಪನೆಯನ್ನ ಅನುಭವಿಸಿದ್ದಾರೆ. ನಾವು 9 ನೇ ಅಧ್ಯಾಯದಲ್ಲಿ ಕಲಿತ ಹಾಗೆ, ಮಹಾ ಬಾಬೆಲಿನ ಬಂಧಿವಾಸದಲ್ಲಿದ್ದ ದೇವಜನರು 1919 ರಲ್ಲಿ ಬಿಡುಗಡೆಯಾದ್ರು. ಆ ವರ್ಷ ಯೆಹೋವ ದೇವರು ಪುನಃಸ್ಥಾಪನೆಯಾದ ತನ್ನ ಆರಾಧಕರನ್ನ ಆಧ್ಯಾತ್ಮಿಕ ದೇಶಕ್ಕೆ ಕರಕೊಂಡು ಬಂದನು. ಈ ಆಧ್ಯಾತ್ಮಿಕ ದೇಶ ಒಂದು ಜಾಗ ಅಲ್ಲ. ಸತ್ಯದೇವರ ಆರಾಧಕರಾಗಿರೋ ನಾವು ಅನುಭವಿಸ್ತಿರೋ ಪರದೈಸಿನಂಥ ವಾತಾವರಣನೇ ಆ ದೇಶ. ಅಲ್ಲಿ ನಾವು ಯೆಹೋವನ ಬಗ್ಗೆ ಕಲೀತಾ, ಆತನನ್ನ ಆರಾಧಿಸ್ತಾ, ಆತನ ಕೆಲಸಗಳನ್ನ ಮಾಡ್ತೇವೆ ಮತ್ತು ಶಾಂತಿ ಐಕ್ಯತೆಯಿಂದ ಸುರಕ್ಷಿತವಾಗಿ ಇರ್ತೇವೆ. (ಜ್ಞಾನೋ. 1:33) ನಮಗೆ ಇಂದು ಬೈಬಲ್‌ ಬಗ್ಗೆ ತಿಳುಕೊಳ್ಳೋಕೆ ಸಾಕಷ್ಟು ಸಾಹಿತ್ಯಗಳು ಸಿಗ್ತಾ ಇವೆ ಮತ್ತು ದೇವರ ಆಳ್ವಿಕೆ ಬಗ್ಗೆ ಸಾರೋ ಕೆಲಸಾನೂ ಇದೆ. ಇದ್ರಿಂದ ನಮ್ಗೆ ತುಂಬ ತೃಪ್ತಿ ಸಿಗ್ತಿದೆ. ಹಾಗಾಗಿ ಜ್ಞಾನೋಕ್ತಿಯಲ್ಲಿ ಹೇಳಿರೋ ಮಾತು ಸತ್ಯ ಅಂತ ನಮಗೆ ಅನುಭವದಿಂದ ಗೊತ್ತಾಗಿದೆ. “ಯೆಹೋವನ  ಆಶೀರ್ವಾದ ಒಬ್ಬನನ್ನ ಶ್ರೀಮಂತ ಮಾಡುತ್ತೆ, ಅದ್ರ ಜೊತೆ ಯಾವುದೇ ರೀತಿಯ ನೋವನ್ನ ದೇವರು ಸೇರಿಸಲ್ಲ” ಅಂತ ಅಲ್ಲಿ ಹೇಳಲಾಗಿದೆ. (ಜ್ಞಾನೋ. 10:22) ನಾವು ಭೂಮಿಯ ಯಾವುದೇ ಮೂಲೆಯಲ್ಲಿ ಜೀವಿಸ್ತಾ ಇದ್ರೂ ನಮ್ಮ ಮಾತು ಮತ್ತು ನಡತೆಯ ಮೂಲಕ ಶುದ್ಧ ಆರಾಧನೆಯನ್ನ ಬೆಂಬಲಿಸಿದಷ್ಟು ಕಾಲ ಈ ದೇಶದಲ್ಲಿ ಅಥ್ವಾ ಆಧ್ಯಾತ್ಮಿಕ ಪರದೈಸಲ್ಲಿ ಇರ್ತೇವೆ.

14 ಆಧ್ಯಾತ್ಮಿಕ ದೇಶ ಯೆಹೋವ ದೇವರಿಗೆ ತುಂಬ ಅಮೂಲ್ಯ. ಯಾಕಂದ್ರೆ ಆ ದೇಶದಲ್ಲಿರುವ ಜನ್ರನ್ನ ಆತನು ಶುದ್ಧ ಆರಾಧನೆಗಾಗಿ ಆರಿಸಿಕೊಂಡಿದ್ದಾನೆ. ಅವರನ್ನ “ಎಲ್ಲ ರಾಷ್ಟ್ರಗಳ ಅಮೂಲ್ಯ ವಸ್ತುಗಳು” ಅಂತ ನೆನಸ್ತಾನೆ. (ಹಗ್ಗಾ. 2:7; ಯೋಹಾ. 6:44) ಅವರು ಹೊಸ ವ್ಯಕ್ತಿತ್ವವನ್ನ ಧರಿಸಿಕೊಳ್ಳೋಕೆ ಮತ್ತು ಯೆಹೋವ ದೇವರ ಉನ್ನತ ಗುಣಗಳನ್ನ ಬೆಳೆಸಿಕೊಳ್ಳೋಕೆ ತಮ್ಮಿಂದಾದ ಎಲ್ಲ ಪ್ರಯತ್ನಗಳನ್ನ ಮಾಡ್ತಿದ್ದಾರೆ. (ಎಫೆ. 4:23, 24; 5:1, 2) ಶುದ್ಧ ಆರಾಧಕರಾಗಿರುವ ಅವರು ಯೆಹೋವ ದೇವರಿಗೆ ಮಹಿಮೆ ತರೋ ಕೆಲಸಗಳನ್ನ ಮಾಡೋಕೆ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ಹೀಗೆ ಅವರು ಆತನನ್ನ ಪ್ರೀತಿಸ್ತಾರೆ ಅಂತ ತೋರಿಸಿಕೊಡ್ತಿದ್ದಾರೆ. (ರೋಮ. 12:1, 2; 1 ಯೋಹಾ. 5:3) ಯೆಹೋವನ ಆರಾಧಕರು ಆತನ ಆಧ್ಯಾತ್ಮಿಕ ದೇಶವನ್ನ ಅಲಂಕರಿಸೋಕೆ ಕಷ್ಟಪಟ್ಟು ಕೆಲಸ ಮಾಡೋದನ್ನ ನೋಡ್ವಾಗ ಯೆಹೋವನಿಗೆ ಎಷ್ಟು ಖುಷಿಯಾಗುತ್ತೆ ಅಂತ ನಮ್ಮಿಂದ ಊಹಿಸೋಕೂ ಆಗಲ್ಲ. ಶುದ್ಧ ಆರಾಧನೆಗೆ ನಾವು ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡುವಾಗ ನಾವು ಆಧ್ಯಾತ್ಮಿಕ ಪರದೈಸನ್ನ ಅಲಂಕರಿಸ್ತೇವೆ. ಅಷ್ಟೇ ಅಲ್ಲ ಯೆಹೋವನ ಮನಸ್ಸನ್ನ ಖುಷಿಪಡಿಸ್ತೇವೆ.—ಜ್ಞಾನೋ. 27:11.

ನಾವೆಲ್ಲೇ ವಾಸಿಸ್ತಿದ್ರೂ ಶುದ್ಧ ಆರಾಧನೆಯನ್ನ ಮಾಡ್ತಾ ಇರುವಷ್ಟು ಸಮಯ ಆಧ್ಯಾತ್ಮಿಕ ದೇಶದಲ್ಲಿ ಇರುತ್ತೇವೆ (ಪ್ಯಾರ 13, 14 ನೋಡಿ)

ಗೋಗನು ಯಾವಾಗ, ಯಾಕೆ ಮತ್ತು ಹೇಗೆ ಆ ದೇಶದ ಮೇಲೆ ದಾಳಿ ಮಾಡ್ತಾನೆ?

15, 16. ಮಾಗೋಗಿನ ಗೋಗನು ಪುನಃಸ್ಥಾಪನೆ ಆಗಿರೋ ಆಧ್ಯಾತ್ಮಿಕ ದೇಶದ ಮೇಲೆ ಯಾವಾಗ ದಾಳಿ ಮಾಡ್ತಾನೆ?

15 ನಮಗೆ ಅಮೂಲ್ಯವಾಗಿರುವ ಆಧ್ಯಾತ್ಮಿಕ ದೇಶದ ಮೇಲೆ ಸ್ವಲ್ಪದರಲ್ಲೇ ಜನಾಂಗಗಳ ಗುಂಪು ಆಕ್ರಮಣ ಮಾಡಲಿದೆ. ಈ ಆಕ್ರಮಣ ನಮ್ಮೆಲ್ಲರ ಮೇಲೆ ಅಂದ್ರೆ ಯೆಹೋವ  ದೇವರ ಎಲ್ಲ ಶುದ್ಧ ಆರಾಧಕರ ಮೇಲೆ ಬರೋದ್ರಿಂದ ಅದ್ರ ಬಗ್ಗೆ ನಾವು ಚೆನ್ನಾಗಿ ತಿಳುಕೊಂಡಿರಬೇಕು. ಇದಕ್ಕೆ ಸಂಬಂಧಪಟ್ಟ ಮೂರು ಪ್ರಶ್ನೆಗಳಿಗೆ ನಾವೀಗ ಉತ್ತರ ಕಂಡುಕೊಳ್ಳೋಣ.

16 ಮಾಗೋಗಿನ ಗೋಗನು ಪುನಃಸ್ಥಾಪನೆಯಾದ ಆಧ್ಯಾತ್ಮಿಕ ದೇಶದ ಮೇಲೆ ಯಾವಾಗ ದಾಳಿ ಮಾಡ್ತಾನೆ? “ದೇಶದ ಮೇಲೆ ನೀನು ಕೊನೇ ವರ್ಷಗಳಲ್ಲಿ ದಾಳಿ ಮಾಡ್ತೀಯ” ಅಂತ ಬೈಬಲ್‌ ಹೇಳುತ್ತೆ. (ಯೆಹೆ. 38:8) ಇದರ ಅರ್ಥ ಈ ಲೋಕದ ಅಂತ್ಯಕ್ಕೂ ಸ್ವಲ್ಪ ಮುಂಚೆ ಅವನು ದಾಳಿ ಮಾಡ್ತಾನೆ. ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರೋ ಮಹಾ ಬಾಬೆಲ್‌ ನಾಶ ಆಗುವಾಗ ಮಹಾ ಸಂಕಟ ಶುರುವಾಗುತ್ತೆ ಅನ್ನೋದನ್ನ ನೆನಪು ಮಾಡಿಕೊಳ್ಳಿ. ಹಾಗಾಗಿ ಸುಳ್ಳು ಧರ್ಮಗಳು ನಾಶವಾದ ಮೇಲೆ ಮತ್ತು ಹರ್ಮಗೆದ್ದೋನ್‌ ಶುರುವಾಗೋಕೂ ಮುಂಚೆ ಗೋಗನು ಶುದ್ಧ ಆರಾಧಕರ ಮೇಲೆ ಕೊನೇ ಆಕ್ರಮಣ ಮಾಡ್ತಾನೆ.

17, 18. ಮಹಾ ಸಂಕಟದ ಸಮಯದಲ್ಲಿ ಯೆಹೋವನು ಹೇಗೆ ಎಲ್ಲವೂ ತನ್ನ ಉದ್ದೇಶದಂತೆ ನಡೆಯೋ ಹಾಗೆ ಮಾಡ್ತಾನೆ?

17 ಯೆಹೋವನ ಶುದ್ಧ ಆರಾಧಕರ ಪುನಃಸ್ಥಾಪಿಸಲಾದ ದೇಶದ ಮೇಲೆ ಗೋಗನು ಯಾಕೆ ದಾಳಿ ಮಾಡ್ತಾನೆ? ಇದ್ರ ಬಗ್ಗೆ ಯೆಹೆಜ್ಕೇಲನ ಭವಿಷ್ಯವಾಣಿ ಎರಡು ಕಾರಣಗಳನ್ನ ತಿಳಿಸುತ್ತೆ. (1) ಯೆಹೋವನ ಕೈ. (2) ಗೋಗನ ಕೆಟ್ಟ ಉದ್ದೇಶಗಳು.

18 ಯೆಹೋವನ ಕೈ. (ಯೆಹೆಜ್ಕೇಲ 38:4, 16 ಓದಿ.) ಯೆಹೋವನು ಗೋಗನ ಹತ್ರ ಏನು ಹೇಳಿದನು ಅಂತ ನೋಡಿ: “ನಿನ್ನ ದವಡೆಗೆ ಕೊಕ್ಕೆಗಳನ್ನ ಹಾಕಿ . . . ನನ್ನ ದೇಶದ ಮೇಲೆ ದಾಳಿ ಮಾಡೋಕೆ ನಾನು ನಿನ್ನನ್ನ ಕರ್ಕೊಂಡು ಬರ್ತಿನಿ.” ತನ್ನ ಆರಾಧಕರ ಮೇಲೆ ದಾಳಿಮಾಡಲು ಜನಾಂಗಗಳ ಗುಂಪನ್ನ ಯೆಹೋವನು ಬಲವಂತವಾಗಿ  ಕರಕೊಂಡು ಬರ್ತಾನಾ? ಖಂಡಿತ ಇಲ್ಲ. ಯಾಕಂದ್ರೆ, ಯೆಹೋವನು ಯಾವತ್ತೂ ತನ್ನ ಜನಕ್ಕೆ ಕೆಟ್ಟದ್ದನ್ನ ಮಾಡಲ್ಲ. (ಯೋಬ 34:12) ತನ್ನ ಶತ್ರುಗಳು ಶುದ್ಧ ಆರಾಧಕರನ್ನ ದ್ವೇಷಿಸ್ತಾರೆ, ಅವ್ರನ್ನ ನಾಶ ಮಾಡೋಕೆ ಸಿಗುವ ಪ್ರತಿಯೊಂದು ಅವಕಾಶನ ಬಿಟ್ಟುಕೊಡಲ್ಲ ಅಂತ ಯೆಹೋವ ದೇವರಿಗೆ ಚೆನ್ನಾಗಿ ಗೊತ್ತು. (1 ಯೋಹಾ. 3:13) ಹಾಗಾಗಿ ಆತನು, ತಕ್ಕ ಸಮಯದಲ್ಲಿ ತನ್ನ ಉದ್ದೇಶಗಳು ನೆರವೇರೋ ಹಾಗೆ ಘಟನೆಗಳನ್ನ ನಿಯಂತ್ರಿಸ್ತಾನೆ. ಇದು, ಒಂದರ್ಥದಲ್ಲಿ ಗೋಗನ ದವಡೆಗೆ ಕೊಕ್ಕೆಗಳನ್ನ ಹಾಕಿ ಅವನನ್ನ ಎಳಕೊಂಡು ಬಂದ ಹಾಗೆ ಇರುತ್ತೆ. ಮಹಾ ಬಾಬೆಲ್‌ ನಾಶವಾದ ಮೇಲೆ ಯಾವುದೋ ಒಂದು ಸಮಯದಲ್ಲಿ ಯೆಹೋವನು ಜನಾಂಗಗಳ ಗುಂಪನ್ನ ಸೆಳೆಯುತ್ತಾನೆ. ಅಂದ್ರೆ ಅವರಿಗೆ ತಮ್ಮ ಮನಸ್ಸಲ್ಲಿರುವ ಯೋಚನೆಗಳಂತೆ ಮಾಡೋಕೆ ಒಂದು ಅವಕಾಶ ಸಿಕ್ಕಿದೆ ಅಂತ ಅನಿಸೋ ಹಾಗೆ ಮಾಡ್ತಾನೆ. ಹೀಗೆ ಯೆಹೋವ ದೇವರು ಜನಾಂಗಗಳ ಗುಂಪಿನವರು ತನ್ನ ಜನರ ಮೇಲೆ ಆಕ್ರಮಣ ಮಾಡುವಂತೆ ಒಂದು ಸನ್ನಿವೇಶವನ್ನ ಸಿದ್ಧ ಮಾಡ್ತಾನೆ. ಆಗ ಇಲ್ಲಿವರೆಗೂ ಯಾವತ್ತೂ ನಡೆಯದೇ ಇರುವ ಹರ್ಮಗೆದ್ದೋನ್‌ ಯುದ್ಧ ಶುರುವಾಗುತ್ತೆ. ಆಮೇಲೆ ಯೆಹೋವ ದೇವರು ತನ್ನ ಜನರನ್ನ ಬಿಡುಗಡೆ ಮಾಡ್ತಾನೆ, ತಾನೇ ವಿಶ್ವದ ರಾಜ ಅಂತ ಸಾಬೀತು ಮಾಡ್ತಾನೆ, ತನ್ನ ಪವಿತ್ರ ಹೆಸರನ್ನ ಮಹಿಮೆಪಡಿಸ್ತಾನೆ.—ಯೆಹೆ. 38:23.

ಜನಾಂಗಗಳು ಶುದ್ಧ ಆರಾಧನೆಯನ್ನ ಮತ್ತು ಶುದ್ಧ ಆರಾಧಕರನ್ನ ದ್ವೇಷಿಸೋದ್ರಿಂದ ಆ ಆರಾಧನೆಯನ್ನ ಲೂಟಿ ಮಾಡೋಕೆ ಪ್ರಯತ್ನಿಸ್ತವೆ

19. ಗೋಗನು ಯಾಕೆ ಶುದ್ಧ ಆರಾಧನೆಯನ್ನ ಲೂಟಿ ಮಾಡೋಕೆ ಪ್ರಯತ್ನಿಸ್ತಾನೆ?

19 ಗೋಗನ ಕೆಟ್ಟ ಉದ್ದೇಶಗಳು. ಜನಾಂಗಗಳು ‘ಕೆಟ್ಟ ಸಂಚು ಮಾಡ್ತವೆ.’ ಯೆಹೋವನ ಆರಾಧಕರು ‘ಗೋಡೆ, ಕಂಬಿ, ಬಾಗಿಲುಗಳು ಇಲ್ಲದ ಹಳ್ಳಿಗಳಲ್ಲಿ ವಾಸಿಸ್ತಿರೋ’ ತರ ಕಾಣಿಸೋದ್ರಿಂದ ಬಲಹೀನರಾಗಿದ್ದಾರೆ ಅಂತ ಜನಾಂಗಗಳು ನೆನಸ್ತವೆ. ಹಾಗಾಗಿ  ಯೆಹೋವನ ಆರಾಧಕರ ಮೇಲೆ ಎಷ್ಟೋ ವರ್ಷಗಳಿಂದ ಇರೋ ಕೋಪ ಮತ್ತು ದ್ವೇಷವನ್ನ ತೋರಿಸೋಕೆ ಇದೇ ಸರಿಯಾದ ಸಮಯ ಅಂತ ಅವು ನೆನಸ್ತವೆ. ಯೆಹೋವನ ಜನರು ‘ಸಂಪತ್ತನ್ನ ಕೂಡಿಸ್ಕೊಳ್ತಿರೋದನ್ನ’ ನೋಡಿ ಜನಾಂಗಗಳು ‘ತುಂಬ ಕೊಳ್ಳೆ ಹೊಡೀಬೇಕು, ಲೂಟಿ ಮಾಡ್ಬೇಕು’ ಅಂತ ಧಾವಿಸಿ ಬರ್ತಾರೆ. (ಯೆಹೆ. 38:10-12) ಈ “ಸಂಪತ್ತು” ಏನಾಗಿದೆ? ಇದು ಯೆಹೋವನ ಜನ್ರ ಹತ್ರ ಇರೋ ಅಪಾರವಾದ ಆಧ್ಯಾತ್ಮಿಕ ಸಂಪತ್ತು. ನಾವು ಯೆಹೋವನಿಗೆ ಮಾತ್ರ ಕೊಡುವ ಶುದ್ಧ ಆರಾಧನೆಯೇ ನಮ್ಮತ್ರ ಇರೋ ಅತ್ಯಮೂಲ್ಯವಾದ ಆಸ್ತಿಯಾಗಿದೆ. ಜನಾಂಗಗಳು ಶುದ್ಧ ಆರಾಧನೆಯನ್ನ ಲೂಟಿ ಮಾಡೋಕೆ ನೋಡೋದು ಅದನ್ನ ಅವ್ರು ಅಮೂಲ್ಯವಾಗಿ ನೆನಸೋದ್ರಿಂದ ಅಲ್ಲ. ಆ ಆರಾಧನೆಯನ್ನ ಮತ್ತು ಆರಾಧಕರನ್ನ ದ್ವೇಷಿಸೋದ್ರಿಂದನೇ.

ಗೋಗನು ಶುದ್ಧ ಆರಾಧನೆಯನ್ನ ಅಳಿಸಿಹಾಕೋಕೆ ‘ಕೆಟ್ಟ ಸಂಚನ್ನ ಮಾಡ್ತಾನೆ.’ ಆದ್ರೆ ಅದು ವಿಫಲ ಆಗುತ್ತೆ (ಪ್ಯಾರ 19 ನೋಡಿ)

20. ಆಧ್ಯಾತ್ಮಿಕ ದೇಶ ಅಥವಾ ಪರದೈಸಿನ ಮೇಲೆ ಗೋಗನು ಹೇಗೆ ದಾಳಿ ಮಾಡ್ತಾನೆ?

20 ಆಧ್ಯಾತ್ಮಿಕ ದೇಶ ಅಥ್ವಾ ಪರದೈಸಿನ ಮೇಲೆ ಗೋಗನು ಹೇಗೆ ಆಕ್ರಮಣ ಮಾಡಲಿದ್ದಾನೆ? ನಮ್ಮ ಕ್ರೈಸ್ತ ಜೀವನ ರೀತಿಗೆ ಅಡಚಣೆಯನ್ನು ಉಂಟುಮಾಡಲು ಮತ್ತು ನಮ್ಮ ಆರಾಧನೆಯನ್ನ ನಿಲ್ಲಿಸಲು ಜನಾಂಗಗಳು ಪ್ರಯತ್ನ ಹಾಕಬಹುದು. ಅದಕ್ಕಾಗಿ ಅವರು ಆಧ್ಯಾತ್ಮಿಕ ಪರದೈಸಿನ ಎಲ್ಲ ಅಂಶಗಳನ್ನ ಅಥ್ವಾ ಭಾಗಗಳನ್ನ ನಾಶ ಮಾಡೋಕೆ ಪ್ರಯತ್ನಿಸ್ತಾರೆ. ಅದಕ್ಕೆ ಅವರು ನಮಗೆ ಆಧ್ಯಾತ್ಮಿಕ ಆಹಾರ ಸಿಗದೆ ಇರೋ ತರ ಮಾಡಬಹುದು. ನಾವು ಕೂಟವಾಗಿ ಕೂಡಿ ಬರೋದನ್ನ ತಡೀಬಹುದು. ನಾವು ಆನಂದಿಸ್ತಿರೋ ಐಕ್ಯತೆನ ಮುರಿಯೋಕೆ ಪ್ರಯತ್ನಿಸಬಹುದು ಮತ್ತು ನಾವು ಖುಷಿ ಖುಷಿಯಿಂದ ಸಿಹಿಸುದ್ದಿ ಸಾರೋದನ್ನ ತಡೀಬಹುದು. ಶುದ್ಧ ಆರಾಧಕರನ್ನ ಮತ್ತು ಶುದ್ಧ ಆರಾಧನೆಯನ್ನ ಇಡೀ ಭೂಮಿಯಿಂದನೇ ಅಳಿಸಿಹಾಕೋಕೆ ಸೈತಾನನು ಜನಾಂಗಗಳನ್ನ ಪ್ರೇರಿಸ್ತಾನೆ.

21. ಮುಂದೆ ನಡೆಯಲಿರೋ ವಿಷಯಗಳ ಬಗ್ಗೆ ಯೆಹೋವನು ತಿಳಿಸಿದ್ದಕ್ಕಾಗಿ ನೀವು ಯಾಕೆ ಥ್ಯಾಂಕ್ಸ್‌ ಹೇಳುತ್ತೀರಾ?

21 ಯೆಹೋವ ದೇವರ ಆಧ್ಯಾತ್ಮಿಕ ದೇಶದಲ್ಲಿ ಇರೋ ಎಲ್ಲ ಶುದ್ಧ ಆರಾಧಕರನ್ನ ಮಾಗೋಗಿನ ಗೋಗ ಆಕ್ರಮಣ ಮಾಡಲಿದ್ದಾನೆ. ಇದರ ಬಗ್ಗೆ ನಮಗೆ ಮುಂಚೆನೇ ಹೇಳಿರೋದಕ್ಕೆ ಯೆಹೋವ ದೇವರಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ. ಮಹಾ ಸಂಕಟಕ್ಕಾಗಿ ಕಾದಿರೋ ನಾವು ಯೆಹೋವ ದೇವರ ಶುದ್ಧ ಆರಾಧನೆಯನ್ನ ಎತ್ತಿ ಹಿಡಿಯೋಕೆ ಮತ್ತು ಅದಕ್ಕೆ ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡೋಕೆ ದೃಢ ನಿರ್ಧಾರ ಮಾಡೋಣ. ಹೀಗೆ ಮಾಡೋದಾದ್ರೆ ಪುನಃಸ್ಥಾಪಿಸಲ್ಪಟ್ಟ ಆಧ್ಯಾತ್ಮಿಕ ದೇಶದ ಅಂದ ಚಂದವನ್ನ ನಾವು ಹೆಚ್ಚಿಸೋಕಾಗುತ್ತೆ. ಅಷ್ಟೇ ಅಲ್ಲ, ಮುಂದೆ ಮಹತ್ವಪೂರ್ಣ ಘಟನೆಗಳು ನಡೆಯುವಾಗ ಅದನ್ನ ನಮ್ಮ ಕಣ್ಣಾರೆ ನೋಡ್ತೇವೆ. ಯೆಹೋವ ದೇವರು ಹರ್ಮಗೆದ್ದೋನಿನಲ್ಲಿ ತನ್ನ ಜನರನ್ನ ರಕ್ಷಿಸ್ತಾನೆ ಮತ್ತು ತನ್ನ ಪವಿತ್ರ ಹೆಸರನ್ನ ಮಹಿಮೆಪಡಿಸ್ತಾನೆ. ಇದನ್ನೇ ನಾವು ಮುಂದಿನ ಅಧ್ಯಾಯದಲ್ಲಿ ನೋಡಲಿದ್ದೇವೆ.

^ ಪ್ಯಾರ. 3 ಮಾಗೋಗಿನ ಗೋಗನ ವಿರುದ್ಧ ಯೆಹೋವನು ತನ್ನ ರೋಷಾವೇಶವನ್ನ ಹೇಗೆ ಮತ್ತು ಯಾವಾಗ ತೋರಿಸ್ತಾನೆ? ಇದರಿಂದ ಶುದ್ಧ ಆರಾಧಕರಿಗೆ ಯಾವ ಪ್ರಯೋಜನ ಆಗುತ್ತೆ? ಅಂತ ಮುಂದಿನ ಅಧ್ಯಾಯದಲ್ಲಿ ಕಲಿತೇವೆ.

^ ಪ್ಯಾರ. 4 ಕಾವಲಿನಬುರುಜು, ಮೇ 15, 2015 ರ ಪುಟ 29-30 ರಲ್ಲಿರೋ “ವಾಚಕರಿಂದ ಪ್ರಶ್ನೆಗಳು” ನೋಡಿ.

^ ಪ್ಯಾರ. 8 ಉತ್ತರದ ರಾಜ ‘ಮಹಾ ಸಮುದ್ರ [ಮೆಡಿಟರೇನಿಯನ್‌] ಮತ್ತು ಅಂದವಾದ ದೇಶದ ಪವಿತ್ರ ಬೆಟ್ಟದ [ದೇವಜನರು ಆರಾಧನೆ ಮಾಡ್ತಿದ್ದ ದೇವಾಲಯ ಇದ್ದ ಸ್ಥಳದ] ಮಧ್ಯ ತನ್ನ ರಾಜಡೇರೆಗಳನ್ನ ಹಾಕ್ಕೊಳ್ತಾನೆ’ ಅಂತ ದಾನಿಯೇಲ 11:45 ತಿಳಿಸುತ್ತೆ. ಈ ರಾಜನು ದೇವಜನರ ಮೇಲೆ ಆಕ್ರಮಣ ಮಾಡ್ತಾನೆ ಅಂತ ಇದು ಸೂಚಿಸುತ್ತೆ.

^ ಪ್ಯಾರ. 9 ಈಗಿನ ಕಾಲದ “ಅಶ್ಶೂರದವನು” ಆಕ್ರಮಣ ಮಾಡಿ ದೇವ ಜನರನ್ನ ಅಳಿಸಿ ಹಾಕೋಕೆ ಪ್ರಯತ್ನಿಸ್ತಾನೆ ಅಂತ ಬೈಬಲ್‌ ಹೇಳುತ್ತೆ. (ಮೀಕ 5:5) ದೇವಜನರ ಮೇಲೆ ಮಾಗೋಗಿನ ಗೋಗ, ಉತ್ತರದ ರಾಜ, ಭೂಮಿಯ ರಾಜರು ಮತ್ತು ಅಶ್ಶೂರದವನು ಆಕ್ರಮಣ ಮಾಡ್ತಾರೆ ಅಂತ ತಿಳಿಸಲಾಗಿದೆ. ಇವೆಲ್ಲವೂ ಒಂದೇ ಆಕ್ರಮಣವನ್ನ ಸೂಚಿಸುತ್ತಿರಬಹುದು.

^ ಪ್ಯಾರ. 10 ಪ್ರಕಟನೆ 20:7-9 ರಲ್ಲಿ ತಿಳಿಸಲಾಗಿರೋ “ಮಾಗೋಗ್‌ ದೇಶದ ಗೋಗ” ಯಾರು ಅನ್ನೋದ್ರ ವಿವರಣೆ ಈ ಪುಸ್ತಕದ 22 ನೇ ಅಧ್ಯಾಯದಲ್ಲಿದೆ.