ಯೆಹೆಜ್ಕೇಲ 23:1-49

  • ದ್ರೋಹ ಮಾಡಿದ ಅಕ್ಕತಂಗಿ (1-49)

    • ಒಹೊಲ ಅಶ್ಶೂರ್ಯದ ಜೊತೆ (5-10)

    • ಒಹೊಲೀಬ ಬಾಬೆಲ್‌ ಮತ್ತು ಈಜಿಪ್ಟಿನ ಜೊತೆ (11-35)

    • ಅಕ್ಕತಂಗಿಯರಿಗೆ ಶಿಕ್ಷೆ (36-49)

23  ಯೆಹೋವ ಮತ್ತೆ ನನಗೆ ಹೀಗಂದನು:  “ಮನುಷ್ಯಕುಮಾರನೇ, ಒಬ್ಬ ತಾಯಿಗೆ ಇಬ್ರು ಹೆಣ್ಣುಮಕ್ಕಳು ಇದ್ರು.+  ಅವ್ರಿಬ್ಬರು ಯೌವನದಿಂದಲೇ ಈಜಿಪ್ಟಲ್ಲಿ ವೇಶ್ಯೆಯರಾದ್ರು.+ ಅಲ್ಲಿ ಅವರು ತಮ್ಮ ಕಾಮದಾಸೆಯನ್ನ ತೀರಿಸ್ಕೊಳ್ತಾ ಶೀಲ ಕಳ್ಕೊಂಡ್ರು.  ದೊಡ್ಡವಳ ಹೆಸ್ರು ಒಹೊಲ.* ಅವಳ ತಂಗಿ ಹೆಸ್ರು ಒಹೊಲೀಬ.* ಅವರಿಬ್ರು ನನ್ನವರಾದ್ರು ಮತ್ತು ಅವ್ರಿಗೆ ಮಕ್ಕಳು ಹುಟ್ಟಿದ್ರು. ಒಹೊಲ ಸಮಾರ್ಯವನ್ನ+ ಮತ್ತು ಒಹೊಲೀಬ ಯೆರೂಸಲೇಮನ್ನ ಸೂಚಿಸ್ತಾಳೆ.  ಒಹೊಲ ನನ್ನವಳಾಗಿ ಇದ್ದಾಗಲೇ ವೇಶ್ಯೆ ಆದಳು.+ ಅವಳು ಕಾಮಾತುರದಿಂದ ಗಂಡಸ್ರ ಹಿಂದೆ ಹೋದಳು+ ಅಂದ್ರೆ ತನ್ನ ನೆರೆಯವರಾದ ಅಶ್ಶೂರ್ಯರ ಹಿಂದೆ ಹೋದಳು.+  ಅವರು ನೀಲಿ ಬಟ್ಟೆ ಹಾಕಿದ್ದ ರಾಜ್ಯಪಾಲರು ಮತ್ತು ಉಪ ಅಧಿಪತಿಗಳು ಆಗಿದ್ರು. ಅವ್ರೆಲ್ಲ ತಮ್ಮ ತಮ್ಮ ಕುದುರೆಗಳ ಮೇಲೆ ಸವಾರಿ ಮಾಡ್ತಿದ್ದ ಮೋಹಕ ಯುವಕರಾಗಿದ್ರು.  ಅವಳು ಕಾಮಾತುರದಿಂದ ಯಾರ ಹಿಂದೆ ಹೋದಳೋ ಆ ಅಶ್ಶೂರದ ಗಣ್ಯರೆಲ್ಲರ ಜೊತೆ ಮತ್ತು ಅವ್ರ ಹೊಲಸು* ಮೂರ್ತಿಗಳ ಜೊತೆ ವೇಶ್ಯಾವಾಟಿಕೆ ಮಾಡ್ತಾ ತನ್ನನ್ನ ಅಪವಿತ್ರ ಮಾಡ್ಕೊಂಡಳು.+  ಅವಳು ಈಜಿಪ್ಟಲ್ಲಿ ರೂಢಿ ಮಾಡ್ಕೊಂಡ ವೇಶ್ಯಾವಾಟಿಕೆಯನ್ನ ಬಿಡಲಿಲ್ಲ. ಅವಳ ಯೌವನದಲ್ಲಿ ಈಜಿಪ್ಟಿನವರು ಅವಳ ಜೊತೆ ಮಲಗಿದ್ರು, ಅವರು ಅವಳನ್ನ ಪೂರ್ತಿ ಕೆಡಿಸಿದ್ರು. ಅವರು ಅವಳ ಹತ್ರ ಹೋಗಿ ತಮ್ಮ ಕಾಮದಾಹ ತೀರಿಸ್ಕೊಂಡ್ರು.+  ಹಾಗಾಗಿ ಅವಳು ಕಾಮಾತುರದಿಂದ ಯಾರನ್ನ ಬಯಸಿದಳೋ ಆ ಗಂಡಸರ ಕೈಗೆ ಅಂದ್ರೆ ಅಶ್ಶೂರ್ಯರ ಕೈಗೆ ನಾನು ಅವಳನ್ನ ಕೊಟ್ಟೆ.+ 10  ಅವರು ಅವಳನ್ನ ಬೆತ್ತಲೆ ಮಾಡಿದ್ರು,+ ಅವಳ ಮಕ್ಕಳನ್ನ ಹಿಡ್ಕೊಂಡು ಹೋದ್ರು.+ ನಡತೆಗೆಟ್ಟವಳು ಅನ್ನೋ ಹೆಸ್ರಿಂದ ಸ್ತ್ರೀಯರಲ್ಲಿ ಪ್ರಸಿದ್ಧಳಾದ ಅವಳಿಗೆ ಶಿಕ್ಷೆ ಕೊಟ್ಟು ಕತ್ತಿಯಿಂದ ಕೊಂದ್ರು. 11  ಇದನ್ನ ಅವಳ ತಂಗಿ ಒಹೊಲೀಬ ನೋಡಿದ ಮೇಲೆ ಇನ್ನೂ ಜಾಸ್ತಿ ನೀಚತನಕ್ಕೆ ಇಳಿದಳು. ವೇಶ್ಯಾವಾಟಿಕೆ ಮಾಡೋದ್ರಲ್ಲಿ ಅವಳು ಅಕ್ಕನನ್ನೂ ಮೀರಿಸಿದಳು.+ 12  ಅವಳು ಕಾಮಾತುರದಿಂದ ನೆರೆಯವರಾದ ಅಶ್ಶೂರ್ಯರ ಹಿಂದೆ ಹೋದಳು+ ಅಂದ್ರೆ ಅಶ್ಶೂರದ ರಾಜ್ಯಪಾಲರೂ ಉಪ ಅಧಿಪತಿಗಳೂ ಆಗಿದ್ದು ಒಳ್ಳೊಳ್ಳೇ ಬಟ್ಟೆಗಳನ್ನ ಹಾಕೊಂಡಿದ್ದ ಮತ್ತು ಕುದುರೆಗಳ ಮೇಲೆ ಸವಾರಿ ಮಾಡ್ತಿದ್ದ ಮೋಹಕ ಯುವಕರ ಹಿಂದೆ ಹೋದಳು. 13  ಹೀಗೆ ತನ್ನನ್ನ ಅಪವಿತ್ರ ಮಾಡ್ಕೊಂಡಳು. ಆಗ, ಅಕ್ಕತಂಗಿ ಇಬ್ರೂ ಒಂದೇ ದಾರಿ ಹಿಡಿದಿದ್ದಾರೆ ಅಂತ ನನಗೆ ಗೊತ್ತಾಯ್ತು.+ 14  ಆದ್ರೆ ಒಹೊಲೀಬ ಇನ್ನೂ ಜಾಸ್ತಿ ವೇಶ್ಯಾವಾಟಿಕೆ ಮಾಡ್ತಾ ಹೋದಳು. ಅವಳು ಗೋಡೆ ಮೇಲೆ ಕಸ್ದೀಯ ಗಂಡಸ್ರ ಕೆತ್ತನೆಗಳು ಇರೋದನ್ನ, ಆ ಕೆತ್ತನೆಗಳಿಗೆ ಗಾಢ ಕೆಂಪು* ಬಣ್ಣ ಬಳಿದಿರೋದನ್ನ ನೋಡಿದಳು. 15  ಅಷ್ಟೇ ಅಲ್ಲ, ಆ ಕೆತ್ತನೆಯಲ್ಲಿದ್ದ ಗಂಡಸರು ಸೊಂಟಪಟ್ಟಿ ಕಟ್ಕೊಂಡಿರೋದನ್ನ, ತಲೆ ಮೇಲೆ ರುಮಾಲು ಹಾಕಿ ಜೋಲು ಬಿಟ್ಟಿರೋದನ್ನ, ಅವ್ರೆಲ್ಲರ ವೇಷಭೂಷಣ ವೀರರ ವೇಷಭೂಷಣದ ತರ ಇರೋದನ್ನ, ಅವರು ಕಸ್ದೀಯರ ದೇಶದಲ್ಲಿ ಹುಟ್ಟಿದ ಬಾಬೆಲಿನ ಗಂಡಸರ ತರ ಇರೋದನ್ನ ಅವಳು ನೋಡಿದಳು. 16  ಆ ಕೆತ್ತನೆಗಳನ್ನ ನೋಡಿದ ತಕ್ಷಣ ಅವಳು ಕಾಮಾತುರದಿಂದ ಕಸ್ದೀಯ ಗಂಡಸ್ರನ್ನ ಇಷ್ಟಪಟ್ಟಳು. ಕಸ್ದೀಯ ದೇಶದಲ್ಲಿದ್ದ ಗಂಡಸರ ಹತ್ರ ಸಂದೇಶವಾಹಕರನ್ನ ಕಳಿಸಿದಳು.+ 17  ಹಾಗಾಗಿ ಬಾಬೆಲಿನ ಗಂಡಸರು ಕಾಮವಿಲಾಸಕ್ಕಾಗಿ ಅವಳ ಹಾಸಿಗೆಗೆ ಬರ್ತಾ ಇದ್ರು. ತಮ್ಮ ಕಾಮದಾಹ ತೀರಿಸ್ಕೊಳ್ತಾ ಅವಳನ್ನ ಅಪವಿತ್ರ ಮಾಡಿದ್ರು. ಅವ್ರಿಂದ ಅಪವಿತ್ರಳಾದ ಮೇಲೆ ಅವಳಿಗೆ ಅವ್ರ ಮೇಲೆ ಹೇಸಿಕೆ ಹುಟ್ತು. ಹಾಗಾಗಿ ಅವ್ರಿಂದ ಅವಳು ದೂರ ಆದಳು. 18  ಅವಳು ಭಂಡತನದಿಂದ ವೇಶ್ಯಾವಾಟಿಕೆ ಮಾಡ್ತಾ ಹೋಗಿದ್ರಿಂದ ಮತ್ತು ತನ್ನ ಬೆತ್ತಲೆತನವನ್ನ ಬೇರೆಯವ್ರಿಗೆ ತೋರಿಸಿದ್ರಿಂದ+ ನನಗೆ ಅವಳಂದ್ರೆ ಅಸಹ್ಯ ಅನಿಸಿತು. ಹಾಗಾಗಿ ಅವಳ ಅಕ್ಕನ ಮೇಲೆ ನನಗೆ ಹೇಸಿಗೆ ಹುಟ್ಟಿದಾಗ ನಾನು ಅವಳನ್ನ ಹೇಗೆ ತಳ್ಳಿಬಿಟ್ಟೆನೋ ಅದೇ ತರ ಇವಳನ್ನೂ ತಳ್ಳಿಬಿಟ್ಟೆ.+ 19  ಅವಳು ಈಜಿಪ್ಟಲ್ಲಿ ಇದ್ದಾಗ ತನ್ನ ಯೌವನದಲ್ಲಿ ಮಾಡಿದ ವೇಶ್ಯಾವಾಟಿಕೆಯನ್ನ ನೆನಪು ಮಾಡ್ಕೊಳ್ತಾ+ ಇನ್ನೂ ಜಾಸ್ತಿ ವೇಶ್ಯಾವಾಟಿಕೆ ಮಾಡಿದಳು.+ 20  ಅವಳ ಹತ್ರ ಬರ್ತಿದ್ದ ಗಂಡಸರು ಕತ್ತೆ, ಕುದುರೆ ತರ ವಿಪರೀತ ಕಾಮುಕರಾಗಿದ್ರು. ಅವಳು ಅವ್ರ ಉಪಪತ್ನಿಯರ ಹಾಗೆ ಕಾಮಾತುರದಿಂದ ಅವ್ರನ್ನ ಇಷ್ಟಪಟ್ಟಳು. 21  ಈಜಿಪ್ಟಲ್ಲಿ ಇದ್ದಾಗ ನೀನು ನಿನ್ನ ಯೌವನದಲ್ಲಿ ನಿನ್ನ ಲೈಂಗಿಕ ದಾಹವನ್ನ ತೀರಿಸ್ಕೊಳ್ಳೋಕೆ+ ಅಲ್ಲಿನ ಗಂಡಸ್ರ ಜೊತೆ ಇಟ್ಕೊಂಡ ಅಶ್ಲೀಲ ಸಂಬಂಧಕ್ಕಾಗಿ ಈಗಲೂ ಹಾತೊರೆದೆ.+ 22  ಹಾಗಾಗಿ ಒಹೊಲೀಬ, ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀನು ಅಸಹ್ಯಪಟ್ಟು ಯಾರಿಂದ ದೂರ ಆದೆಯೋ ಆ ಗಂಡಸರನ್ನ ನಾನು ನಿನ್ನ ವಿರುದ್ಧ ಎಬ್ಬಿಸ್ತೀನಿ.+ ಎಲ್ಲ ದಿಕ್ಕಿಂದ ನಿನ್ನ ಮೇಲೆ ದಾಳಿ ಮಾಡೋಕೆ ಅವ್ರನ್ನ ಕರ್ಕೊಂಡು ಬರ್ತಿನಿ.+ 23  ಬಾಬೆಲಿನವರು,+ ಎಲ್ಲ ಕಸ್ದೀಯರು,+ ಪೆಕೋದದವರು,+ ಷೋಯದವರು, ಕೋಯದವರು ಮತ್ತು ಎಲ್ಲ ಅಶ್ಶೂರ್ಯರು ನಿನ್ನ ಮೇಲೆ ದಾಳಿ ಮಾಡ್ತಾರೆ. ಅವ್ರೆಲ್ಲ ಕುದುರೆ ಸವಾರಿ ಮಾಡ್ತಾ ಬರೋ ಮೋಹಕ ಯುವಕರು. ಅವರು ರಾಜ್ಯಪಾಲರು, ಉಪ ಅಧಿಪತಿಗಳು, ಯುದ್ಧಶೂರರು ಮತ್ತು ಗಣ್ಯ ವ್ಯಕ್ತಿಗಳು.* 24  ಅವರು ಎಷ್ಟೋ ಯುದ್ಧ ರಥಗಳ ಜೊತೆ, ದೊಡ್ಡ ದೊಡ್ಡ ಸೈನ್ಯದ ಜೊತೆ, ತುಂಬ ದೊಡ್ಡ ಮತ್ತು ಚಿಕ್ಕ ಗುರಾಣಿಗಳ ಜೊತೆ* ಹಾಗೂ ಶಿರಸ್ತ್ರಾಣಗಳ ಜೊತೆ ಬಂದು ನಿನ್ನ ಮೇಲೆ ದಾಳಿ ಮಾಡ್ತಾರೆ. ಅವರು ನಿನ್ನ ಸುತ್ತ ನಿಂತ್ಕೊಳ್ತಾರೆ. ನಿನಗೆ ತೀರ್ಪು ಕೊಡೋ ಅಧಿಕಾರವನ್ನ ನಾನು ಅವ್ರಿಗೆ ಕೊಡ್ತೀನಿ. ಅವ್ರಿಗೆ ಇಷ್ಟಬಂದ ಹಾಗೆ ನಿನಗೆ ಶಿಕ್ಷೆ ಕೊಡ್ತಾರೆ.+ 25  ನನ್ನ ಕೋಪವನ್ನ ನಿನ್ನ ಮೇಲೆ ತೋರಿಸ್ತೀನಿ, ಅವರು ನಿನ್ನ ಜೊತೆ ಕ್ರೋಧದಿಂದ ನಡ್ಕೊತಾರೆ. ನಿನ್ನ ಮೂಗು ಕೊಯ್ದು, ಕಿವಿ ಕತ್ತರಿಸ್ತಾರೆ. ನಿನ್ನಲ್ಲಿ ಉಳಿದವರು ಕತ್ತಿಯಿಂದ ಸಾಯ್ತಾರೆ. ನಿನ್ನ ಮಕ್ಕಳನ್ನ ಹಿಡ್ಕೊಂಡು ಹೋಗ್ತಾರೆ. ಇವುಗಳಿಂದ ಪಾರಾದವರು ಬೆಂಕಿಯಲ್ಲಿ ಸತ್ತುಹೋಗ್ತಾರೆ.+ 26  ಅವರು ನಿನ್ನ ಬಟ್ಟೆಗಳನ್ನ ಕಿತ್ತುಹಾಕ್ತಾರೆ,+ ನಿನ್ನ ಅಂದವಾದ ಒಡವೆಗಳನ್ನ ಕಿತ್ಕೊತಾರೆ.+ 27  ನೀನು ಈಜಿಪ್ಟಲ್ಲಿ ಶುರುಮಾಡಿದ+ ಅಶ್ಲೀಲ ನಡತೆಗೆ ಮತ್ತು ನಿನ್ನ ವೇಶ್ಯಾವಾಟಿಕೆಗೆ ನಾನು ಒಂದು ಅಂತ್ಯ ಹಾಡ್ತೀನಿ.+ ಇನ್ಮುಂದೆ ನೀನು ಅವ್ರನ್ನ ಕಣ್ಣೆತ್ತಿ ನೋಡಲ್ಲ, ಈಜಿಪ್ಟನ್ನ ನೆನಪಿಸ್ಕೊಳ್ಳೋದೂ ಇಲ್ಲ.’ 28  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀನು ಯಾರನ್ನ ದ್ವೇಷಿಸ್ತಿಯೋ, ಅಸಹ್ಯಪಟ್ಟು ಯಾರಿಂದ ದೂರ ಆದೆಯೋ ಅವ್ರ ಕೈಗೇ ನಾನು ನಿನ್ನನ್ನ ಕೊಡ್ತೀನಿ.+ 29  ಅವರು ನಿನ್ನನ್ನ ದ್ವೇಷಿಸ್ತಾರೆ, ನೀನು ಬೆವರು ಸುರಿಸಿ ದುಡಿದದ್ದನ್ನೆಲ್ಲ ಕಿತ್ಕೊತಾರೆ,+ ನಿನ್ನನ್ನ ಬೆತ್ತಲೆಯಾಗಿ ಮಾಡಿ ಹೋಗ್ತಾರೆ, ಎಲ್ಲರೂ ನೋಡ್ತಾರೆ. ನಿನ್ನ ನಾಚಿಗೆಗೆಟ್ಟ ಅನೈತಿಕತೆ, ನಿನ್ನ ಅಶ್ಲೀಲ ನಡತೆ ಮತ್ತು ನಿನ್ನ ವೇಶ್ಯಾವಾಟಿಕೆ ಬಟ್ಟಬಯಲಾಗುತ್ತೆ.+ 30  ನಿನಗೆ ಹೀಗೆಲ್ಲ ಯಾಕೆ ಆಗುತ್ತೆ ಅಂದ್ರೆ ನೀನು ವೇಶ್ಯೆ ತರ ಜನಾಂಗಗಳ ಹಿಂದೆ ಓಡಿದೆ,+ ಅವ್ರ ಹೊಲಸು ಮೂರ್ತಿಗಳಿಂದ ನಿನ್ನನ್ನ ಅಶುದ್ಧ ಮಾಡ್ಕೊಂಡೆ.+ 31  ನೀನು ನಿನ್ನ ಅಕ್ಕನ ಹಾಗೇ ನಡ್ಕೊಂಡೆ.+ ಹಾಗಾಗಿ ನಾನು ಅವಳ ಬಟ್ಟಲನ್ನ ನಿನ್ನ ಕೈಗೆ ಕೊಡ್ತೀನಿ.’+ 32  ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಿನ್ನ ಅಕ್ಕನ ಕೈಯಲ್ಲಿರೋ ಉದ್ದವಾದ, ಅಗಲವಾದ ಬಟ್ಟಲಿಂದ ನೀನು ದ್ರಾಕ್ಷಾಮದ್ಯ ಕುಡಿತಿಯ,+ಆ ಬಟ್ಟಲಲ್ಲಿ ಅವಮಾನ ತುಂಬಿರುತ್ತೆ, ಹಾಗಾಗಿ ಜನ ನಿನ್ನನ್ನ ನೋಡಿ ನಗ್ತಾರೆ, ಅಣಕಿಸ್ತಾರೆ.+ 33  ಸಮಾರ್ಯ ಅನ್ನೋ ನಿನ್ನ ಅಕ್ಕನ ಬಟ್ಟಲಲ್ಲಿಭಯ, ನಾಶ ತುಂಬಿದೆ,ನೀನು ಅದ್ರಲ್ಲಿರೋದನ್ನ ಕುಡಿದು ಮತ್ತಳಾಗಿ ದುಃಖದಲ್ಲಿ ಮುಳುಗಿಹೋಗ್ತೀಯ. 34  ನೀನು ಅದ್ರಲ್ಲಿ ಇರೋದನ್ನ ಒಂದು ತೊಟ್ಟೂ ಬಿಡದೆ ಕುಡಿಲೇಬೇಕಾಗುತ್ತೆ,+ ಆ ಬಟ್ಟಲು ಒಡೆದು ಹೋದ ಮೇಲೆ ಅದ್ರ ಚೂರುಗಳನ್ನ ಅಗಿತಿಯ. ಅಷ್ಟೇ ಅಲ್ಲ, ದುಃಖದಿಂದ ನಿನ್ನ ಸ್ತನಗಳನ್ನ ಕೊಯ್ದುಕೊಳ್ತೀಯ. “ನಾನೇ ಇದನ್ನ ಹೇಳಿದ್ದೀನಿ” ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.’ 35  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀನು ನನ್ನನ್ನ ಮರೆತು, ನನ್ನನ್ನ ಪೂರ್ತಿ ಬಿಟ್ಟು+ ಅಶ್ಲೀಲವಾಗಿ, ವೇಶ್ಯೆಯಾಗಿ ನಡ್ಕೊಂಡೆ. ಹಾಗಾಗಿ ನಿನ್ನ ನಡತೆಯ ಪರಿಣಾಮಗಳನ್ನ ನೀನು ಅನುಭವಿಸಲೇಬೇಕು.’” 36  ಆಮೇಲೆ ಯೆಹೋವ ನನಗೆ ಹೀಗಂದನು: “ಮನುಷ್ಯಕುಮಾರನೇ, ನೀನು ಒಹೊಲ ಮತ್ತು ಒಹೊಲೀಬಳಿಗೆ ತೀರ್ಪನ್ನ ಹೇಳ್ತೀಯಾ?+ ಅವರಿಬ್ರ ಅಸಹ್ಯ ಕೆಲಸಗಳನ್ನ ಅವ್ರ ಮುಂದೆನೇ ಹೇಳ್ತಿಯಾ? 37  ಅವರು ವ್ಯಭಿಚಾರ ಮಾಡಿದ್ದಾರೆ.*+ ಅವ್ರ ಕೈಯಲ್ಲಿ ರಕ್ತದ ಕಲೆ ಇದೆ. ಅವರು ಹೊಲಸು ಮೂರ್ತಿಗಳ ಜೊತೆ ವ್ಯಭಿಚಾರ ಮಾಡಿದ್ದಷ್ಟೇ ಅಲ್ಲ ನನ್ನ ಮಕ್ಕಳನ್ನ ಬೆಂಕಿಯಲ್ಲಿ ಬಲಿ ಕೊಟ್ಟಿದ್ದಾರೆ.+ 38  ಅದೇ ದಿನ ಅವರು ನನ್ನ ಆರಾಧನಾ ಸ್ಥಳವನ್ನ ಅಶುದ್ಧ ಮಾಡಿದ್ರು ಮತ್ತು ನಾನು ಕೊಟ್ಟ ಸಬ್ಬತ್‌ಗಳನ್ನ ಅಪವಿತ್ರ ಮಾಡಿದ್ರು. 39  ತಮ್ಮ ತಮ್ಮ ಮಕ್ಕಳನ್ನ ಸಾಯಿಸಿ ಹೊಲಸು ಮೂರ್ತಿಗಳಿಗೆ ಬಲಿ ಕೊಟ್ಟ ಮೇಲೆ+ ಅದೇ ದಿನ ನನ್ನ ಪವಿತ್ರ ಸ್ಥಳಕ್ಕೆ ಬಂದು ಅದನ್ನ ಅಪವಿತ್ರ ಮಾಡಿದ್ರು.+ ಅವರು ನನ್ನ ಆಲಯದ ಒಳಗೇ ಬಂದು ಅದನ್ನ ಅಪವಿತ್ರ ಮಾಡಿದ್ರು. 40  ಸಂದೇಶವಾಹಕನನ್ನ ಕಳಿಸಿ ದೂರ ದೂರದಿಂದ ಗಂಡಸ್ರನ್ನ ಬರೋಕೆ ಹೇಳಿದ್ರು.+ ಒಹೊಲೀಬಳೇ, ಆ ಗಂಡಸರು ಇನ್ನೂ ದಾರಿಯಲ್ಲಿ ಬರ್ತಿರ್ವಾಗ ನೀನಿಲ್ಲಿ ಸ್ನಾನ ಮಾಡ್ಕೊಂಡು, ಕಣ್ಣಿಗೆ ಕಾಡಿಗೆ ಹಚ್ಚಿ, ಆಭರಣಗಳಿಂದ ಸಿಂಗಾರ ಮಾಡ್ಕೊಂಡೆ.+ 41  ಮೇಜಿನ ಮುಂದೆ+ ಆಡಂಬರದ ಮಂಚದ ಮೇಲೆ ಒರಗಿ ಕೂತ್ಕೊಂಡೆ.+ ಆ ಮೇಜಿನ ಮೇಲೆ ನೀನು ನನ್ನ ಧೂಪ+ ಮತ್ತು ನನ್ನ ಎಣ್ಣೆಯನ್ನ ಇಟ್ಟೆ.+ 42  ಮೋಜಿನಲ್ಲಿ ತೇಲಾಡ್ತಿರೋ ಜನ್ರ ಗುಂಪಿನ ಶಬ್ದ ಅಲ್ಲಿ ಕೇಳಿಸ್ತು. ಕಾಡಿಂದ ಕರ್ಕೊಂಡು ಬಂದಿದ್ದ ಕುಡುಕರೂ ಆ ಗುಂಪಲ್ಲಿದ್ರು. ಅವರು ಆ ಅಕ್ಕತಂಗಿಯರಿಬ್ಬರ ಕೈಗಳಿಗೆ ಬಳೆಗಳನ್ನ, ತಲೆಗೆ ಸುಂದರ ಕಿರೀಟವನ್ನ ಹಾಕಿದ್ರು. 43  ವ್ಯಭಿಚಾರ ಮಾಡಿ ಮಾಡಿ ದಣಿದು ಹೋದವಳ ಬಗ್ಗೆ ‘ಅವಳು ಇನ್ನೂ ವೇಶ್ಯಾವಾಟಿಕೆ ಮಾಡ್ತಾ ಇರೋಳು’ ಅಂತ ನಾನು ಹೇಳಿದೆ. 44  ವೇಶ್ಯೆಯ ಹತ್ರ ಹೋಗ್ತಾ ಇರೋ ಹಾಗೆ ಅವರು ಅವಳ ಹತ್ರ ಹೋಗ್ತಾ ಇದ್ರು. ಅಶ್ಲೀಲವಾಗಿ ನಡ್ಕೊಳ್ತಿದ್ದ ಒಹೊಲ ಮತ್ತು ಒಹೊಲೀಬಳ ಹತ್ರ ಅವರು ಹೀಗೇ ಹೋಗ್ತಿದ್ರು. 45  ಆದ್ರೆ ಅವಳು ವ್ಯಭಿಚಾರ ಮಾಡಿದ್ದಕ್ಕಾಗಿ+ ಮತ್ತು ರಕ್ತಸುರಿಸಿದ್ದಕ್ಕಾಗಿ ನೀತಿವಂತರು ಅವಳಿಗೆ ತಕ್ಕ ಶಿಕ್ಷೆ ಕೊಡ್ತಾರೆ.+ ಅವ್ರಿಬ್ಬರೂ ವ್ಯಭಿಚಾರಿಣಿಯರು ಮತ್ತು ಅವ್ರ ಕೈಯಲ್ಲಿ ರಕ್ತದ ಕಲೆಯಿದೆ.+ 46  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಆ ಅಕ್ಕತಂಗಿಯ ವಿರುದ್ಧ ಒಂದು ಸೈನ್ಯ ಬರುತ್ತೆ. ಆ ಸೈನ್ಯ ಅವ್ರಿಗೆ ಎಂಥ ಗತಿ ಕಾಣಿಸುತ್ತೆ ಅಂದ್ರೆ ಅದನ್ನ ನೋಡಿದವ್ರ ಎದೆ ಧಸಕ್ಕನ್ನುತ್ತೆ, ಆ ಸೈನ್ಯ ಅವ್ರಿಬ್ಬರ ಹತ್ರ ಇರೋದನ್ನೆಲ್ಲ ಲೂಟಿ ಮಾಡುತ್ತೆ.+ 47  ಅವ್ರ ಮೇಲೆ ಕಲ್ಲುಗಳನ್ನ ಎಸೆದು+ ಅವ್ರನ್ನ ಕತ್ತಿಯಿಂದ ಕಡಿದುಹಾಕುತ್ತೆ, ಅವ್ರ ಮಕ್ಕಳನ್ನ ಕೊಲ್ಲುತ್ತೆ,+ ಅವ್ರ ಮನೆಗಳನ್ನ ಬೆಂಕಿಯಿಂದ ಸುಟ್ಟುಹಾಕುತ್ತೆ.+ 48  ದೇಶದಲ್ಲಿರೋ ಅಶ್ಲೀಲ ನಡತೆಗೆ ನಾನು ಒಂದು ಅಂತ್ಯ ಕಾಣಿಸ್ತೀನಿ. ಎಲ್ಲ ಹೆಂಗಸರು ನಿಮ್ಮಿಂದ ಒಂದು ಪಾಠ ಕಲಿತು ನಿಮ್ಮ ತರ ಅಶ್ಲೀಲವಾಗಿ ನಡ್ಕೊಳ್ಳಲ್ಲ.+ 49  ಆ ಸೈನ್ಯ ನಿಮ್ಮ ಅಶ್ಲೀಲ ನಡತೆಗಾಗಿ ಮತ್ತು ಹೊಲಸು ಮೂರ್ತಿಗಳ ಜೊತೆ ನೀವು ಮಾಡಿದ ಪಾಪಗಳಿಗಾಗಿ ನಿಮಗೆ ಶಿಕ್ಷೆ ಕೊಡುತ್ತೆ. ಆಗ, ನಾನೇ ವಿಶ್ವದ ರಾಜ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’”+

ಪಾದಟಿಪ್ಪಣಿ

ಅರ್ಥ “ಅವಳ ಡೇರೆ.”
ಅರ್ಥ “ನನ್ನ ಡೇರೆ ಅವಳಲ್ಲಿದೆ.”
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಥವಾ “ರಸಸಿಂಧೂರ.”
ಅಕ್ಷ. “ಶ್ರೇಷ್ಠ ಸಲಹೆಗಾರರು.”
ಇದನ್ನ ಹೆಚ್ಚಾಗಿ ಬಿಲ್ಲುಗಾರರು ಹಿಡ್ಕೊತಿದ್ರು.
ಅಂದ್ರೆ, ವೇಶ್ಯೆ ತರ ನಡ್ಕೊಂಡಿದ್ದಾರೆ.