ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 1

“ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು”

“ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು”

ಮತ್ತಾಯ 4:10

ಮುಖ್ಯ ವಿಷಯ: ಶುದ್ಧ ಆರಾಧನೆಯನ್ನ ಯಾಕೆ ಪುನಃಸ್ಥಾಪಿಸಬೇಕು?

1, 2. (ಎ) ಕ್ರಿ.ಶ. 29 ರಲ್ಲಿ ಯೇಸು ಯೂದಾಯದ ಬರಡು ಪ್ರದೇಶಕ್ಕೆ ಹೇಗೆ ಬಂದನು? (ಬಿ) ಅಲ್ಲಿ ಏನಾಯ್ತು? (ಆರಂಭದ ಚಿತ್ರ ನೋಡಿ.)

ಕ್ರಿಸ್ತ ಶಕ 29 ರ ಶರತ್ಕಾಲ (ಅಕ್ಟೋಬರ್‌-ನವೆಂಬರ್‌). ಈಗಾಗ್ಲೇ ಯೇಸುವಿನ ದೀಕ್ಷಾಸ್ನಾನ ಮತ್ತು ಅಭಿಷೇಕ ಆಗಿತ್ತು. ಪವಿತ್ರ ಶಕ್ತಿಯ ಪ್ರೇರಣೆಯಿಂದ ಆತನು ಯೂದಾಯದ ಬರಡು ಪ್ರದೇಶಕ್ಕೆ ಹೋಗಿದ್ದನು. ಅದು ಮೃತ ಸಮುದ್ರದ ಉತ್ತರ ದಿಕ್ಕಿನಲ್ಲಿ ಇತ್ತು. ವಿಸ್ತಾರವಾದ ಈ ಬಂಜರು ಭೂಮಿ ಬಂಡೆ ಮತ್ತು ಕಣಿವೆಗಳಿಂದ ಕೂಡಿತ್ತು. ಇಲ್ಲಿ ಯೇಸು ನಲ್ವತ್ತು ದಿನಗಳನ್ನ ಕಳೆದನು. ಈ ನಿಶ್ಶಬ್ದ ವಾತಾವರಣದಲ್ಲಿ ಯೇಸು ಉಪವಾಸ, ಪ್ರಾರ್ಥನೆ ಮಾಡ್ತಾ ಧ್ಯಾನಿಸುತ್ತಿದ್ದನು. ಬಹುಶಃ ಈ ಸಮಯದಲ್ಲಿ ಯೆಹೋವನು ಯೇಸು ಜೊತೆ ಮಾತಾಡುತ್ತಿದ್ದನು. ಹೀಗೆ ಮುಂದೆ ಆತನು ನಿರ್ವಹಿಸಬೇಕಾಗಿರೋ ಜವಾಬ್ದಾರಿಗಾಗಿ ಯೆಹೋವನು ಆತನನ್ನ ಸಿದ್ಧಮಾಡಿದನು.

2 ಯೇಸು ತುಂಬ ದಿನಗಳಿಂದ ಊಟ ಮಾಡಿರಲಿಲ್ಲ. ಹಾಗಾಗಿ ಆತನಿಗೆ ತುಂಬ ಹಸಿವಾಗಿತ್ತು ಮತ್ತು ಸುಸ್ತಾಗಿತ್ತು. ಆಗ ಸೈತಾನನು ಅಲ್ಲಿ ಬಂದನು. ನಂತ್ರ ಏನಾಯ್ತು ಅನ್ನೋದನ್ನ ನಾವೀಗ ನೋಡೋಣ. ಯಾಕಂದ್ರೆ ಶುದ್ಧ ಆರಾಧನೆಯನ್ನ ಪ್ರೀತಿಸೋ ನಾವೆಲ್ರೂ ಇದ್ರಿಂದ ಪ್ರಾಮುಖ್ಯ ಪಾಠವನ್ನು ಕಲಿಬಹುದು.

“ನೀನು ದೇವರ ಮಗನಾಗಿದ್ರೆ . . . ”

3, 4. (ಎ) ಸೈತಾನ ಮೊದಲ ಎರಡು ಪರೀಕ್ಷೆಯ ಆರಂಭದಲ್ಲಿ ಏನು ಹೇಳ್ದ? (ಬಿ) ಹೀಗೆ ಹೇಳೋ ಮೂಲಕ ಅವನು ಯೇಸುವಿನ ಮನಸ್ಸಿನಲ್ಲಿ ಯಾವ ಸಂಶಯದ ಬೀಜವನ್ನು ಬಿತ್ತೋಕೆ ಪ್ರಯತ್ನಿಸಿದ? (ಸಿ) ಈ ರೀತಿಯ ಕುತಂತ್ರಗಳನ್ನ ಸೈತಾನ ಇವತ್ತೂ ಬಳಸುತ್ತಿದ್ದಾನಾ?

3 ಮತ್ತಾಯ 4:1-7 ಓದಿ. ಸೈತಾನನು ಮೊದಲ ಎರಡು ಪರೀಕ್ಷೆಗಳನ್ನು ತಂದಾಗ ಕುತಂತ್ರದಿಂದ ಆರಂಭದಲ್ಲಿ “ನೀನು ದೇವರ ಮಗನಾಗಿದ್ರೆ” ಅಂತ ಹೇಳಿದನು. ಅಂದ್ರೆ ಯೇಸು ನಿಜವಾಗಿಯೂ ದೇವರ ಮಗನಾ ಅನ್ನೋ ಸಂಶಯ ಸೈತಾನನಿಗಿತ್ತಾ? ಇಲ್ಲ. ದೇವರ ವಿರುದ್ಧ  ದಂಗೆ ಎದ್ದ ಈ ದೇವದೂತನಿಗೆ ಯೇಸು ಕ್ರಿಸ್ತನು ದೇವರ ಮೊದಲನೇ ಮಗ ಅಂತ ಚೆನ್ನಾಗಿ ಗೊತ್ತಿತ್ತು. (ಕೊಲೊ. 1:15) ಅಷ್ಟೇ ಅಲ್ಲ, ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ಸ್ವರ್ಗದಿಂದ ಯೆಹೋವ ದೇವರು ಹೇಳಿದ ಈ ಮಾತುಗಳ ಬಗ್ಗೆನೂ ಅವನಿಗೆ ಗೊತ್ತಿತ್ತು: “ಇವನು ನನ್ನ ಪ್ರೀತಿಯ ಮಗ. ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ.” (ಮತ್ತಾ. 3:17) ‘ತಂದೆ ಮೇಲೆ ಭರವಸೆ ಇಡಬಹುದಾ ಮತ್ತು ಆತನು ನಿಜವಾಗಿಯೂ ನನ್ನ ಕಾಳಜಿವಹಿಸ್ತಾನಾ’ ಅನ್ನೋ ಸಂಶಯವನ್ನ ಯೇಸುವಿನ ಮನಸ್ಸಲ್ಲಿ ತರೋದೇ ಸೈತಾನನ ಉದ್ದೇಶ ಆಗಿರಬೇಕು. ಉದಾಹರಣೆಗೆ, ಮೊದಲನೇ ಪರೀಕ್ಷೆಯಲ್ಲಿ ಸೈತಾನನು ಕಲ್ಲುಗಳನ್ನ ರೊಟ್ಟಿಗಳನ್ನಾಗಿ ಮಾಡೋಕೆ ಹೇಳಿದಾಗ ಒಂದರ್ಥದಲ್ಲಿ ಈ ರೀತಿ ಹೇಳಿದನು: ‘ನೀನು ದೇವರ ಮಗನಲ್ವಾ? ಹಾಗಿದ್ರೆ ಈ ಬರಡು ಭೂಮಿಯಲ್ಲಿ ದೇವರು ನಿನಗೆ ಯಾಕೆ ಊಟ ಕೊಟ್ಟಿಲ್ಲ?’ ಎರಡನೇ ಪರೀಕ್ಷೆಯಲ್ಲಿ ದೇವಾಲಯದ ಗೋಡೆಯಿಂದ ಹಾರೋಕೆ ಹೇಳಿದಾಗ ಸೈತಾನ ಒಂದರ್ಥದಲ್ಲಿ ಈ ರೀತಿ ಹೇಳಿದನು: ‘ನೀನು ದೇವರ ಮಗನಲ್ವಾ? ನಿನ್ನ ತಂದೆ ನಿಜವಾಗ್ಲೂ ನಿನ್ನನ್ನ ಕಾಪಾಡ್ತಾನೆ ಅನ್ನೋ ಭರವಸೆ ಇದ್ಯಾ?’

4 ಸೈತಾನ ಇವತ್ತು ಸಹ ಇಂಥದ್ದೇ ಕುತಂತ್ರಗಳನ್ನ ಬಳಸ್ತಾನೆ. (2 ಕೊರಿಂ. 2:11) ನಾವು ಯಾವಾಗ ಬಲಹೀನರಾಗ್ತೀವಿ ಮತ್ತು ನಮಗೆ ಯಾವಾಗ ನಿರುತ್ತೇಜನ ಆಗುತ್ತೆ ಅಂತ ಅವನು ನೋಡ್ತಾ ಇರ್ತಾನೆ. ಹೀಗೆ ನಾವು ಕುಗ್ಗಿ ಹೋದಾಗ ನಮಗೆ ಗೊತ್ತಾಗದ ಹಾಗೆ ದಾಳಿ ಮಾಡ್ತಾನೆ. (2 ಕೊರಿಂ. 11:14) ಯೆಹೋವನು ನಮ್ಮನ್ನ ಪ್ರೀತಿಸಲ್ಲ, ನಮ್ಮನ್ನ ಮೆಚ್ಚಲ್ಲ ಅಂತ ನಂಬೋ ರೀತಿ ಮಾಡೋಕೆ ಅವನು ಪ್ರಯತ್ನಿಸ್ತಾನೆ. ಯೆಹೋವನ ಮೇಲೆ ಭರವಸೆ ಇಡೋಕಾಗಲ್ಲ, ಆತನು ತನ್ನ ವಾಕ್ಯದಲ್ಲಿ ಕೊಟ್ಟಿರೋ ಮಾತಿನಂತೆ ನಡ್ಕೊಳ್ಳಲ್ಲ ಅಂತ ನಮಗೆ ಅನಿಸೋ ತರ ಮಾಡೋಕೂ ಪ್ರಯತ್ನಿಸ್ತಾನೆ. ಆದ್ರೆ ಇದೆಲ್ಲ ಶುದ್ಧ ಸುಳ್ಳು! (ಯೋಹಾ. 8:44) ಸೈತಾನನ ಈ ಕುತಂತ್ರದಿಂದ ನಾವು ಹೇಗೆ ತಪ್ಪಿಸಿಕೊಳ್ಳಬಹುದು?

5. ಸೈತಾನ ಮೊದಲ ಎರಡು ಪರೀಕ್ಷೆಗಳನ್ನು ತಂದಾಗ ಯೇಸು ಹೇಗೆ ಉತ್ತರಕೊಟ್ಟನು?

5 ಸೈತಾನನು ಮೊದಲ ಎರಡು ಪರೀಕ್ಷೆಗಳನ್ನ ತಂದಾಗ ಯೇಸು ಅವನಿಗೆ ಏನು ಉತ್ತರ ಕೊಟ್ಟ ಅಂತ ಗಮನಿಸಿ. ತಂದೆ ತನ್ನನ್ನ ಪ್ರೀತಿಸ್ತಾನಾ ಅಂತ ಯೇಸುಗೆ ಎಳ್ಳಷ್ಟೂ ಸಂಶಯ ಇರಲಿಲ್ಲ. ಆತನಿಗೆ ತನ್ನ ತಂದೆ ಮೇಲೆ ಪೂರ್ತಿ ಭರವಸೆ ಇತ್ತು. ಹಾಗಾಗಿ ಹಿಂದೆ ಮುಂದೆ ಯೋಚಿಸದೆ ಆತನು ಸೈತಾನನ ಪರೀಕ್ಷೆಗಳನ್ನ ತಿರಸ್ಕರಿಸಿದನು. ಹಾಗೆ ಮಾಡುವಾಗ ಆತನು ಯೆಹೋವ ಅಂತ ಹೆಸರಿರೋ ವಚನಗಳನ್ನ ಉಪಯೋಗಿಸಿದನು. (ಧರ್ಮೋ. 6:16; 8:3) ಯೆಹೋವನ ಹೆಸರನ್ನ ಉಪಯೋಗಿಸೋ ಮೂಲಕ ಯೇಸು ತನ್ನ ತಂದೆ ಮೇಲೆ ಪೂರ್ತಿ ಭರವಸೆ ಇದೆ ಅಂತ ತೋರಿಸಿಕೊಟ್ಟನು. ಯಾಕಂದ್ರೆ ಯೆಹೋವನ ಹೆಸರು ತಾನೇ ಆತನು ತಾನು ಹೇಳಿರೋ ಮಾತುಗಳನ್ನ ಖಂಡಿತ ನೆರವೇರಿಸ್ತಾನೆ ಅನ್ನೋದಕ್ಕೆ ಗ್ಯಾರಂಟಿ. *

6, 7. ಸೈತಾನನ ಕುತಂತ್ರಗಳನ್ನ ನಾವು ಹೇಗೆ ಎದುರಿಸಬಹುದು?

6 ನಾವು ಸಹ ದೇವರ ವಾಕ್ಯವನ್ನ ಉಪಯೋಗಿಸೋ ಮೂಲಕ ಮತ್ತು ಆತನ ಹೆಸರಿನ ಅರ್ಥದ ಬಗ್ಗೆ ಯೋಚಿಸೋ ಮೂಲಕ ಸೈತಾನನ ಕುತಂತ್ರಗಳನ್ನ ಎದುರಿಸಬಹುದು. ಹೇಗೆ? ಯೆಹೋವನಿಗೆ ತನ್ನ ಆರಾಧಕರ ಮೇಲೆ ಅದ್ರಲ್ಲೂ ಕುಗ್ಗಿಹೋದವ್ರ ಮೇಲೆ ಪ್ರೀತಿ, ಕಾಳಜಿ ಇದೆ ಅಂತ ತೋರಿಸುವ ವಚನಗಳನ್ನ ನಾವು ಓದಿ ಅರ್ಥ ಮಾಡಿಕೊಳ್ಳಬೇಕು. ಆಗ, ‘ಯೆಹೋವನು ನಿಮ್ಮನ್ನು ಪ್ರೀತಿಸಲ್ಲ, ಮೆಚ್ಚಲ್ಲ’ ಅಂತ ಸೈತಾನ ಹೇಳಿದ್ರೂ ಅದು ಸುಳ್ಳು ಅಂತ ನಮಗೆ ಗೊತ್ತಾಗುತ್ತೆ. (ಕೀರ್ತ. 34:18; 1 ಪೇತ್ರ 5:8) ಯೆಹೋವನು ತನ್ನ ಹೆಸರಿನ ಅರ್ಥಕ್ಕನುಸಾರ ಜೀವಿಸ್ತಾನೆ ಅನ್ನೋದನ್ನ ನಾವು ಅರ್ಥಮಾಡ್ಕೊಂಡರೆ ಆತನು ತನ್ನ ಮಾತನ್ನ ನೆರವೇರಿಸ್ತಾನಾ, ಆತನ ಮಾತಿನ ಮೇಲೆ ಭರವಸೆ ಇಡಬಹುದಾ ಅನ್ನೋ ಸಂಶಯ ಯಾವತ್ತೂ ಬರಲ್ಲ.—ಜ್ಞಾನೋ. 3:5, 6.

7 ಸೈತಾನನ ಮುಖ್ಯ ಗುರಿ ಏನು? ನಾವೇನು ಮಾಡ್ಬೇಕಂತ ಅವನು ಬಯಸ್ತಾನೆ? ಸೈತಾನನ ಉದ್ದೇಶ ಏನಂತ ಅವನು ಯೇಸುಗೆ ತಂದ ಮೂರನೇ ಪರೀಕ್ಷೆಯಿಂದ ನಮಗೆ ಚೆನ್ನಾಗಿ ಗೊತ್ತಾಗುತ್ತೆ.

 ‘ನನಗೆ ಅಡ್ಡಬಿದ್ದು ನನ್ನನ್ನ ಒಂದೇ ಒಂದು ಸಾರಿ ಆರಾಧಿಸು’

8. ಮೂರನೇ ಪರೀಕ್ಷೆಯಿಂದ ಸೈತಾನನ ನಿಜ ಉದ್ದೇಶ ಹೇಗೆ ಬಯಲಾಯ್ತು?

8 ಮತ್ತಾಯ 4:8-11 ಓದಿ. ಮೂರನೇ ಪರೀಕ್ಷೆಯನ್ನ ತಂದಾಗ ಸೈತಾನ ತನ್ನ ಉದ್ದೇಶ ಏನಾಗಿತ್ತು ಅಂತ ತೋರಿಸಿಕೊಟ್ಟ. ಅವನು (ಬಹುಶಃ ಒಂದು ದರ್ಶನದಲ್ಲಿ) ಯೇಸುಗೆ “ಲೋಕದ ಎಲ್ಲ ಸಾಮ್ರಾಜ್ಯಗಳನ್ನ ಅವುಗಳ ಸಂಪತ್ತನ್ನ ತೋರಿಸಿದ.” ಆದ್ರೆ ಅದ್ರಲ್ಲಿರೋ ಕೆಟ್ಟದ್ದನ್ನೆಲ್ಲ ಮುಚ್ಚಿಟ್ಟ. ನಂತ್ರ ಅವನು ಯೇಸುಗೆ, “ನೀನು ನನಗೆ ಅಡ್ಡಬಿದ್ದು ನನ್ನನ್ನ ಒಂದೇ ಒಂದು ಸಾರಿ ಆರಾಧಿಸಿದ್ರೆ ಸಾಕು, ಇವೆಲ್ಲ ನಿನಗೇ ಕೊಡ್ತೀನಿ” ಅಂದ. * ಆಗ ಸೈತಾನನ ಉದ್ದೇಶ ಬಯಲಾಯ್ತು. ಯೇಸು ತನ್ನನ್ನ ಆರಾಧಿಸಬೇಕು, ತಂದೆಯನ್ನ ಬಿಟ್ಟು ತನ್ನನ್ನ ದೇವ್ರು ಅಂತ ಒಪ್ಪಿಕೊಳ್ಳಬೇಕು ಅನ್ನೋದು ಸೈತಾನನ ಆಸೆಯಾಗಿತ್ತು. ಸೈತಾನ ಒಂದರ್ಥದಲ್ಲಿ ಯೇಸುಗೆ, ‘ನೀನು ಯಾವುದೇ ಕಷ್ಟ, ಹಿಂಸೆಯನ್ನ ಅನುಭವಿಸಬೇಕಾಗಿಲ್ಲ, ಸಾಯೋ ಅವಶ್ಯಕತೆನೂ ಇಲ್ಲ. ಒಂದು ಕ್ಷಣದಲ್ಲೇ ಈ ಲೋಕದ ಅಧಿಕಾರ, ಸಂಪತ್ತನ್ನ ಪಡಿಬಹುದು’ ಅಂತ ಆಸೆ ತೋರಿಸ್ತಾ ಇದ್ದ. ಸೈತಾನ ನಿಜವಾಗ್ಲೂ ಇದನ್ನೆಲ್ಲಾ ಯೇಸುಗೆ ಕೊಡೋಕೆ ಸಾಧ್ಯ ಇತ್ತಾ? ಸಾಧ್ಯ ಇತ್ತು. ಯಾಕಂದ್ರೆ ಅದೆಲ್ಲಾ ನಿಜವಾಗ್ಲೂ ಸೈತಾನನ ಕೈಯಲ್ಲೇ ಇತ್ತು. ಅದಕ್ಕೇ ಯೇಸು ಸಹ ಈ ಲೋಕದ ಮೇಲೆ ಸೈತಾನನಿಗಿರೋ ಅಧಿಕಾರದ ವಿಷಯದಲ್ಲಿ ಪ್ರಶ್ನೆ ಮಾಡಲಿಲ್ಲ. (ಯೋಹಾ. 12:31; 1 ಯೋಹಾ. 5:19) ಯೆಹೋವನ ಆರಾಧನೆಯನ್ನ ಬಿಟ್ಟುಬಿಡಲಿಕ್ಕಾಗಿ ಯೇಸುಗೆ ಸೈತಾನ ಏನು ಬೇಕಾದ್ರೂ ಕೊಡೋಕೆ ಸಿದ್ಧನಿದ್ದ.

9. (ಎ) ಸತ್ಯಾರಾಧಕರು ಏನು ಮಾಡಬೇಕೆಂದು ಸೈತಾನ ಬಯಸುತ್ತಾನೆ? ಮತ್ತು ಇದಕ್ಕೋಸ್ಕರ ಅವನು ಏನು ಮಾಡುತ್ತಾನೆ? (ಬಿ) ನಮ್ಮ ಆರಾಧನೆಯಲ್ಲಿ ಏನೆಲ್ಲಾ ಸೇರಿದೆ? (“ಆರಾಧನೆ ಅಂದ್ರೇನು?” ಅನ್ನೋ ಚೌಕ ನೋಡಿ.)

9 ಇವತ್ತು ಸಹ ಸೈತಾನ, ನಾವು ಅವನನ್ನೇ ಆರಾಧಿಸಬೇಕು ಮತ್ತು ಯೆಹೋವನ ಇಷ್ಟಕ್ಕೆ ವಿರುದ್ಧವಾಗಿ ನಡ್ಕೊಬೇಕು ಅಂತ ಬಯಸ್ತಾನೆ. ಅವನು ‘ಈ ಲೋಕದ ದೇವರಾಗಿರೋದ್ರಿಂದ’ ಮಹಾ ಬಾಬೆಲಿನ ಭಾಗವಾಗಿರೋ ಯಾವುದೇ ಧರ್ಮದ ಆರಾಧನೆ ಅವನಿಗೇ ಸೇರುತ್ತೆ. (2 ಕೊರಿಂ. 4:4) ಸೈತಾನನಿಗೆ ಕೋಟ್ಯಾಂತರ ಆರಾಧಕರಿದ್ರೂ ತೃಪ್ತಿ ಇಲ್ಲ. ಅವನು ಯೆಹೋವನ  ಆರಾಧಕರ ಹಿಂದೆ ಬಿದ್ದಿದ್ದಾನೆ. ಅವ್ರು ದೇವರ ಇಷ್ಟಕ್ಕೆ ವಿರುದ್ಧವಾಗಿ ನಡಿಬೇಕು ಅಂತ ಅವನು ಬಯಸ್ತಾನೆ. ಕ್ರೈಸ್ತರು “ನೀತಿವಂತರಾಗಿ ಇರೋದ್ರಿಂದ” ಬರೋ ಕಷ್ಟಗಳನ್ನ ಅನುಭವಿಸೋ ಬದಲಿಗೆ ಈ ಲೋಕದ ಸಂಪತ್ತು, ಅಧಿಕಾರಗಳನ್ನ ಪಡಿಯೋದ್ರ ಹಿಂದೆ ಹೋಗೋ ತರ ಮಾಡ್ಬೇಕು ಅನ್ನೋದೇ ಅವನ ಆಸೆ. (1 ಪೇತ್ರ 3:14) ನೋಡಿದ್ರಾ, ಸೈತಾನ ಯೇಸುಗೆ ಮೋಸ ಮಾಡೋಕೆ ಪ್ರಯತ್ನಿಸಿದ ಹಾಗೆ ನಮಗೂ ಮೋಸ ಮಾಡೋಕೆ ಪ್ರಯತ್ನಿಸ್ತಾನೆ. ನಾವು ಸೈತಾನನ ಕುತಂತ್ರಕ್ಕೆ ಬಲಿಬಿದ್ದು ಶುದ್ಧ ಆರಾಧನೆಯನ್ನ ಬಿಡೋದಾದ್ರೆ ಮತ್ತು ಈ ಲೋಕದ ಹಿಂದೆ ಹೋಗೋದಾದ್ರೆ ಸೈತಾನನಿಗೆ ಅಡ್ಡಬಿದ್ದು ಅವನನ್ನ ಆರಾಧಿಸಿದ ಹಾಗೆ ಆಗುತ್ತೆ. ಅವನನ್ನೇ ನಮ್ಮ ದೇವ್ರು ಅಂತ ಒಪ್ಪಿಕೊಂಡ ಹಾಗಾಗುತ್ತೆ. ಹಾಗಾದ್ರೆ ಇಂಥ ಕುತಂತ್ರಗಳನ್ನ ನಾವು ಹೇಗೆ ಎದುರಿಸಬಹುದು?

10. ಸೈತಾನನ ಮೂರನೇ ಪರೀಕ್ಷೆಗೆ ಯೇಸು ಹೇಗೆ ಉತ್ತರಕೊಟ್ಟನು? ಮತ್ತು ಯಾಕೆ?

10 ಸೈತಾನನು ಮೂರನೇ ಪರೀಕ್ಷೆ ತಂದಾಗ ಯೇಸು ಅವನಿಗೆ ಹೇಗೆ ಉತ್ತರ ಕೊಟ್ಟ ಅಂತ ಗಮನಿಸಿ. ಯೇಸು ಯೆಹೋವನಿಗೆ ನಿಷ್ಠನಾಗಿದ್ದು ತಕ್ಷಣ, “ಸೈತಾನ ಇಲ್ಲಿಂದ ತೊಲಗಿ ಹೋಗು!” ಅಂತ ಹೇಳಿದನು. ಯೇಸು ಮೊದಲ ಎರಡು ಪರೀಕ್ಷೆಯಲ್ಲಿ ಮಾಡಿದ ಹಾಗೆನೇ ಈಗಲೂ ಯೆಹೋವ ದೇವ್ರ ಹೆಸರು ಇರೋ ವಚನವನ್ನೇ ಉಪಯೋಗಿಸಿದನು. “‘ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆ ಮಾಡಬೇಕು’ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ” ಅಂದನು. (ಮತ್ತಾ. 4:10; ಧರ್ಮೋ. 6:13) ಈ ಲೋಕದ ಹಣ-ಆಸ್ತಿಯನ್ನ ಮತ್ತು ಕಷ್ಟನೇ ಇಲ್ಲದೆ ಆರಾಮಾಗಿರೋ ಜೀವನವನ್ನ ಯೇಸು ತಿರಸ್ಕರಿಸಿದನು. ಯಾಕಂದ್ರೆ ಇದು ಸ್ವಲ್ಪ ದಿನ ಮಾತ್ರ ಇರುತ್ತೆ ಅಂತ ಆತನಿಗೆ ಗೊತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ತನ್ನ ಆರಾಧನೆ ತನ್ನ ತಂದೆಯಾಗಿರೋ ಯೆಹೋವನಿಗೆ ಮಾತ್ರ ಸಲ್ಲಬೇಕು ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಸೈತಾನನನ್ನ “ಒಂದೇ ಒಂದು ಸಾರಿ ಆರಾಧಿಸಿದ್ರೂ” ಅವನನ್ನೇ ತನ್ನ ದೇವರಂತ ಒಪ್ಪಿಕೊಂಡ ಹಾಗಾಗುತ್ತೆ ಅನ್ನೋದು ಆತನಿಗೆ ಗೊತ್ತಿತ್ತು. ಹಾಗಾಗಿ, ಸೈತಾನನ ಪರೀಕ್ಷೆಯನ್ನ ಖಡಾಖಂಡಿತವಾಗಿ ತಿರಸ್ಕರಿಸಿದನು. ತನ್ನ ಪ್ರಯತ್ನ ಎಲ್ಲಾ ಮಣ್ಣುಪಾಲಾಯ್ತು ಅಂತ ಗೊತ್ತಾದಾಗ “ಸೈತಾನ ಅಲ್ಲಿಂದ ಹೋದ.” *

“ಸೈತಾನ ಇಲ್ಲಿಂದ ತೊಲಗಿ ಹೋಗು!” (ಪ್ಯಾರ 10 ನೋಡಿ)

11. ನಾವು ಸೈತಾನನನ್ನ ಮತ್ತು ಅವನ ಪರೀಕ್ಷೆಗಳನ್ನ ಹೇಗೆ ಎದುರಿಸಬಹುದು?

11 ಯೇಸು ತರನೇ ನಾವು ಸಹ ಸೈತಾನನನ್ನ ಮತ್ತು ಈ ದುಷ್ಟ ಲೋಕದಿಂದ ಬರೋ ಪರೀಕ್ಷೆಗಳನ್ನ ಎದುರಿಸೋಕಾಗುತ್ತೆ. ಯಾಕಂದ್ರೆ ನಾವೇನು ಮಾಡ್ತೀವಿ ಅನ್ನೋದು ನಮ್ಮ ಕೈಯಲ್ಲೇ ಇದೆ. ನಾವು ಏನು ಬೇಕೋ ಅದನ್ನ ಆರಿಸಿಕೊಳ್ಳೋ ಸ್ವಾತಂತ್ರ್ಯವನ್ನ ಯೆಹೋವನು ನಮಗೆ ಕೊಟ್ಟಿದ್ದಾನೆ. ಹಾಗಾಗಿ, ಶುದ್ಧ ಆರಾಧನೆಯನ್ನ ಬಿಟ್ಟುಬಿಡುವಂತೆ ನಮ್ಮನ್ನ ಶಕ್ತಿಶಾಲಿಯಾಗಿರೋ ದುಷ್ಟ ಸೈತಾನನೇ ಆಗಲಿ, ಬೇರೆ ಯಾರೇ ಆಗಲಿ ಬಲವಂತ ಮಾಡೋಕಾಗಲ್ಲ. ನಾವು ನಿಷ್ಠೆಯಿಂದ ‘ಗಟ್ಟಿ ನಂಬಿಕೆಯಿಂದ ಸೈತಾನನನ್ನ ವಿರೋಧಿಸಿದ್ರೆ’ ಒಂದರ್ಥದಲ್ಲಿ “ಸೈತಾನ ಇಲ್ಲಿಂದ ತೊಲಗಿ ಹೋಗು!” ಅಂತ ಹೇಳಿದ ಹಾಗಿರುತ್ತೆ. (1 ಪೇತ್ರ 5:9) ನೆನಪಿಡಿ, ಯೇಸು ಸೈತಾನನ ಪರೀಕ್ಷೆಗಳನ್ನ ತಿರಸ್ಕರಿಸಿದಾಗ ಅವನು ಅಲ್ಲಿಂದ ಹೋದ. ಅದೇ ರೀತಿ ನಮಗೆ ಬೈಬಲ್‌ ಹೀಗೆ ಹೇಳುತ್ತೆ: “ಸೈತಾನನನ್ನ ವಿರೋಧಿಸಿ. ಆಗ ಅವನು ನಿಮ್ಮನ್ನ ಬಿಟ್ಟು ಓಡಿಹೋಗ್ತಾನೆ.”—ಯಾಕೋ. 4:7.

ಸೈತಾನನಿಂದ ಬರುವ ಪರೀಕ್ಷೆಗಳನ್ನ ನಾವು ಎದುರಿಸೋಕೆ ಆಗುತ್ತೆ (ಪ್ಯಾರ 11, 19 ನೋಡಿ)

ಶುದ್ಧ ಆರಾಧನೆಯ ಶತ್ರು

12. ತಾನು ಶುದ್ಧ ಆರಾಧನೆಯ ಶತ್ರು ಅಂತ ಸೈತಾನ ಹೇಗೆ ಏದೆನ್‌ ತೋಟದಲ್ಲೇ ತೋರಿಸಿಕೊಟ್ಟಿದ್ದನು?

12 ಮೂರನೇ ಪರೀಕ್ಷೆಯನ್ನ ತಂದಾಗ ಸೈತಾನನು ಶುದ್ಧ ಆರಾಧನೆಯ ಮೊಟ್ಟ ಮೊದಲ ಶತ್ರು ತಾನೇ ಅನ್ನೋದನ್ನ ತೋರಿಸಿಕೊಟ್ಟನು. ಸಾವಿರಾರು ವರ್ಷಗಳ ಹಿಂದೆ ಏದೆನ್‌ ತೋಟದಲ್ಲಿ ಸೈತಾನನು ಯೆಹೋವನ ಆರಾಧನೆಯನ್ನ ದ್ವೇಷಿಸುತ್ತೇನೆ ಅಂತ ಮೊದಲ ಬಾರಿಗೆ ತೋರಿಸಿಕೊಟ್ಟಿದ್ದನು. ಅಲ್ಲಿ ಅವನು ಹವ್ವಳನ್ನ ಮೋಸಗೊಳಿಸಿದ್ದನು. ಅವಳು, ಯೆಹೋವನ ನಿಯಮವನ್ನ ಮೀರಿ ನಡೆಯುವಂತೆ ಆದಾಮನನ್ನು ಪುಸಲಾಯಿಸಿದಳು. ಹೀಗೆ ಸೈತಾನ ಅವರಿಬ್ರನ್ನೂ ತನ್ನ ಅಧಿಕಾರ ಅಥವಾ ನಿಯಂತ್ರಣದ ಕೆಳಗೆ ತಂದನು. (ಆದಿಕಾಂಡ 3:1-5 ಓದಿ; 2 ಕೊರಿಂ. 11:3; ಪ್ರಕ. 12:9) ತಮಗೆ ಯಾರು ಮೋಸ ಮಾಡ್ತಿದ್ದಾರೆ ಅಂತ ಆದಾಮ-ಹವ್ವಗೆ ಗೊತ್ತಿರಲಿಲ್ಲ. ಅವ್ರಿಗೆ ಮೋಸ ಮಾಡೋ ಮೂಲಕ ಸೈತಾನ ಅವರ ದೇವರಾದನು ಮತ್ತು ಅವರು ಅವನ ಆರಾಧಕರಾದ್ರು. ಏದೆನ್‌ ತೋಟದಲ್ಲಿ ದಂಗೆಯನ್ನ ಎಬ್ಬಿಸೋ  ಮೂಲಕ ಸೈತಾನನು ಯೆಹೋವನ ಸರ್ವಾಧಿಕಾರಕ್ಕೆ ಅಥವಾ ಆಳುವ ಹಕ್ಕಿಗೆ ಸವಾಲು ಹಾಕಿದನು. ಅಷ್ಟೇ ಅಲ್ಲ, ಶುದ್ಧ ಆರಾಧನೆಯನ್ನ ಅಳಿಸಿ ಹಾಕೋಕೂ ಪ್ರಯತ್ನಿಸಿದನು. ಅದು ಹೇಗೆ?

13. ಆಳುವ ಹಕ್ಕಿನ ಸವಾಲಿನಲ್ಲಿ ಯಾರನ್ನ ಆರಾಧಿಸಬೇಕು ಅನ್ನೋ ಸವಾಲು ಸಹ ಒಳಗೂಡಿದೆ, ಹೇಗೆ?

13 ಆಳುವ ಹಕ್ಕಿನ ಸವಾಲಿನ ಜೊತೆ ಯಾರನ್ನ ಆರಾಧಿಸಬೇಕು ಅನ್ನೋ ಸವಾಲು ಸಹ ಸೇರಿದೆ. ‘ಎಲ್ಲವನ್ನ ಸೃಷ್ಟಿ ಮಾಡಿರೋ’ ಇಡೀ ವಿಶ್ವದ ಅಧಿಕಾರಿಯೇ ಆರಾಧನೆಯನ್ನ ಪಡೆಯೋಕೆ ಅರ್ಹನಾಗಿದ್ದಾನೆ. (ಪ್ರಕ. 4:11) ಯೆಹೋವನು ಆದಾಮ, ಹವ್ವರನ್ನ ಪರಿಪೂರ್ಣರಾಗಿ ಸೃಷ್ಟಿ ಮಾಡಿ ಏದೆನ್‌ ತೋಟದಲ್ಲಿ ಇಟ್ಟನು. ಮುಂದೆ ಇಡೀ ಭೂಮಿಯಲ್ಲಿ ಪರಿಪೂರ್ಣ ಮಾನವರು ತುಂಬಬೇಕು ಮತ್ತು ಅವರು ಖುಷಿಯಿಂದ, ಶುದ್ಧ ಮನಸ್ಸಿನಿಂದ ತನ್ನನ್ನ ಆರಾಧಿಸಬೇಕು ಅನ್ನೋದು ಯೆಹೋವನ ಉದ್ದೇಶ ಆಗಿತ್ತು. (ಆದಿ. 1:28) ಇಡೀ ಭೂಮಿಯಲ್ಲಿರೋ ಎಲ್ಲರ ಆರಾಧನೆಯನ್ನ ಪಡಿಯೋಕೆ ಯೆಹೋವನೇ ಅರ್ಹನಾಗಿದ್ರೂ ಸೈತಾನ ಎಲ್ಲರ ಆರಾಧನೆಯನ್ನ ಪಡೆಯೋಕೆ ಬಯಸಿದ. ಆದ್ರಿಂದನೇ ಅವನು ಯೆಹೋವನ ಆಳುವ ಹಕ್ಕಿನ ಬಗ್ಗೆ ಸವಾಲು ಹಾಕಿದ.—ಯಾಕೋ. 1:14, 15.

14. ಶುದ್ಧ ಆರಾಧನೆಯನ್ನು ಅಳಿಸಿಹಾಕೋಕೆ ಸೈತಾನನಿಂದ ಆಯ್ತಾ?

14 ಶುದ್ಧ ಆರಾಧನೆಯನ್ನ ಅಳಿಸಿ ಹಾಕೋಕೆ ಸೈತಾನ ಮಾಡಿದ ಪ್ರಯತ್ನ ಸಫಲ ಆಯ್ತಾ? ಆದಾಮ ಮತ್ತು ಹವ್ವ ದೇವರಿಂದ ದೂರ ಹೋಗುವಂತೆ ಮಾಡೋದ್ರಲ್ಲಿ ಸೈತಾನ ಸಫಲನಾದ.  ಆಗಿನಿಂದ ಅವನು ಶುದ್ಧ ಆರಾಧನೆಯನ್ನ ಅಳಿಸಿ ಹಾಕೋಕೆ ಮತ್ತು ತನ್ನಿಂದಾದಷ್ಟು ಹೆಚ್ಚು ಜನ ಯೆಹೋವನಿಂದ ದೂರ ಹೋಗುವಂತೆ ಮಾಡೋಕೆ ಪ್ರಯತ್ನಿಸ್ತಿದ್ದಾನೆ. ಯೇಸು ಭೂಮಿಗೆ ಬರೋದಕ್ಕೂ ಮುಂಚೆ ಕೂಡ ಯಾರು ಶುದ್ಧ ಆರಾಧನೆಯನ್ನ ಮಾಡ್ತಿದ್ರೋ ಅವ್ರನ್ನ ತನ್ನ ಕಡೆಗೆ ಸೆಳೆಯೋಕೆ ಸೈತಾನ ಪ್ರಯತ್ನಿಸಿದ. ಒಂದನೇ ಶತಮಾನದಲ್ಲಿ ಕ್ರೈಸ್ತ ಸಭೆ ಶುರುವಾದ ಮೇಲೆ ಅಲ್ಲೂ ಸುಳ್ಳು ಆರಾಧನೆಯನ್ನು ಬೆಳೆಸೋ ಮೂಲಕ ಶುದ್ಧ ಆರಾಧನೆಯನ್ನ ಅಳಿಸಿ ಹಾಕೋಕೆ ಪ್ರಯತ್ನಿಸಿದ. ಇದ್ರಿಂದಾಗಿ ಶುದ್ಧ ಆರಾಧನೆ ಅಳಿದು ಹೋದಂತೆ ಇತ್ತು. (ಮತ್ತಾ. 13:24-30, 36-43; ಅ. ಕಾ. 20:29, 30) ಕ್ರಿ.ಶ. 2 ನೇ ಶತಮಾನದ ಆರಂಭದಿಂದ ಸತ್ಯ ಆರಾಧಕರು ಸುಳ್ಳು ಧರ್ಮದ ಸಾಮ್ರಾಜ್ಯ ಆಗಿರೋ ಮಹಾ ಬಾಬೆಲಿನ ಬಂಧಿಗಳಾದ್ರು. ಆದ್ರೆ ಶುದ್ಧ ಆರಾಧನೆ ಬಗ್ಗೆ ಯೆಹೋವನಿಗಿದ್ದ ಉದ್ದೇಶವನ್ನ ಅಳಿಸಿ ಹಾಕೋಕೆ ಸೈತಾನನಿಂದ ಆಗಲಿಲ್ಲ. ದೇವರು ತನ್ನ ಉದ್ದೇಶವನ್ನ ನೆರವೇರಿಸದಂತೆ ತಡಿಯೋಕೆ ಯಾರಿಂದಲೂ, ಯಾವುದರಿಂದಲೂ ಆಗಲ್ಲ. (ಯೆಶಾ. 46:10; 55:8-11) ಯಾಕಂದ್ರೆ ಇದು ಆತನ ಹೆಸರಿಗೆ ಬಂದಿರೋ ಸವಾಲಾಗಿತ್ತು. ಆತನು ಯಾವಾಗ್ಲೂ ತನ್ನ ಹೆಸರಿನ ಅರ್ಥದ ಪ್ರಕಾರನೇ ನಡ್ಕೊಳ್ತಾನೆ. ಏನೇ ಆದ್ರೂ ಯೆಹೋವನು ತನ್ನ ಉದ್ದೇಶವನ್ನ ನೆರವೇರಿಸ್ತಾನೆ.

 ಶುದ್ಧ ಆರಾಧನೆಯನ್ನ ಸಮರ್ಥಿಸಿದವರು

15. ಏದೆನ್‌ ತೋಟದಲ್ಲೆದ್ದ ಸವಾಲನ್ನು ಸರಿಪಡಿಸೋಕೆ ಮತ್ತು ತನ್ನ ಉದ್ದೇಶ ನೆರವೇರಿಸೋಕೆ ಯೆಹೋವನು ಯಾವ ಕ್ರಮ ಕೈಕೊಂಡನು?

15 ಯೆಹೋವನು ತನ್ನ ಉದ್ದೇಶ ನೆರವೇರಿಸಬೇಕಂದ್ರೆ ಏದೆನಿನಲ್ಲಿ ಎದ್ದ ಸವಾಲನ್ನ ಸರಿಪಡಿಸಬೇಕಿತ್ತು. ಹಾಗಾಗಿ ಆತನು ಅದನ್ನ ಸರಿಪಡಿಸೋಕೆ ತಕ್ಷಣ ಕ್ರಮ ತಗೊಂಡನು. (ಆದಿಕಾಂಡ 3:14-19 ಓದಿ.) ಆದಾಮ ಮತ್ತು ಹವ್ವ ಇನ್ನೂ ಏದೆನ್‌ ತೋಟದಲ್ಲಿ ಇದ್ದಾಗಲೇ ಯೆಹೋವನು ಅವರಿಗೆ ಮತ್ತು ಸೈತಾನನಿಗೆ ಶಿಕ್ಷೆಯನ್ನ ವಿಧಿಸಿದನು. ಮೊದಲು ತಪ್ಪು ಮಾಡಿದ ಸೈತಾನನಿಗೆ ಮೊದಲು ಶಿಕ್ಷೆ ವಿಧಿಸಿದನು. ಆಮೇಲೆ ಹವ್ವಗೆ ಮತ್ತು ನಂತ್ರ ಆದಾಮನಿಗೆ ಶಿಕ್ಷೆ ವಿಧಿಸಿದನು. ಯೆಹೋವನು ಸೈತಾನನಿಗೆ ವಿಧಿಸಿದ ಶಿಕ್ಷೆ ಬಗ್ಗೆ ಹೇಳುವಾಗ ಒಂದು “ಸಂತಾನ” ಬರುತ್ತೆ ಅಂತನೂ ಹೇಳಿದನು. ಈ ಮೂವರು ದಂಗೆ ಎದ್ದಿದ್ರಿಂದ ಆಗಿರೋ ಪರಿಣಾಮಗಳನ್ನ ಈ ‘ಸಂತಾನವೇ’ ಸರಿಮಾಡುತ್ತೆ ಅಂತನೂ ಹೇಳಿದನು. ಶುದ್ಧ ಆರಾಧನೆ ಬಗ್ಗೆ ಯೆಹೋವನ ಉದ್ದೇಶವನ್ನ ನೆರವೇರಿಸೋದ್ರಲ್ಲಿ ಈ ಸಂತಾನ ಮುಖ್ಯ ಪಾತ್ರ ವಹಿಸಲಿತ್ತು.

16. ಏದೆನಿನಲ್ಲಾದ ದಂಗೆಯ ನಂತರ ಯೆಹೋವ ದೇವರು ತನ್ನ ಉದ್ದೇಶವನ್ನು ನೆರವೇರಿಸೋಕೆ ಯಾವೆಲ್ಲಾ ಕ್ರಮಗಳನ್ನ ತಗೊಂಡನು?

16 ಏದೆನಿನಲ್ಲಾದ ದಂಗೆಯ ನಂತರ ಯೆಹೋವ ತನ್ನ ಉದ್ದೇಶವನ್ನ ನೆರವೇರಿಸಲಿಕ್ಕೆ ಕ್ರಮಗಳನ್ನ ಕೈಗೊಂಡನು. ಅಪರಿಪೂರ್ಣ ಮಾನವರು ತನ್ನನ್ನ ಸರಿಯಾದ ರೀತಿಯಲ್ಲಿ ಆರಾಧಿಸೋಕೆ ಬೇಕಾದ ವ್ಯವಸ್ಥೆಯನ್ನ ಕೂಡ ಮಾಡಿದನು. ಇದರ ಬಗ್ಗೆ ನಾವು ಮುಂದಿನ ಅಧ್ಯಾಯದಲ್ಲಿ ನೋಡ್ತೇವೆ. (ಇಬ್ರಿ. 11:4–12:1) ಶುದ್ಧ ಆರಾಧನೆ ಪುನಃಸ್ಥಾಪನೆ ಆಗೋದ್ರ ಬಗ್ಗೆ ಭವಿಷ್ಯವಾಣಿಗಳನ್ನ ಬರೆಯುವಂತೆ ಆತನು ಯೆಶಾಯ, ಯೆರೆಮೀಯ, ಯೆಹೆಜ್ಕೇಲರಂಥ ಬೈಬಲ್‌ ಬರಹಗಾರರನ್ನ ಪ್ರೇರೇಪಿಸಿದನು. ಈ ಶುದ್ಧ ಆರಾಧನೆಯ ಪುನಃಸ್ಥಾಪನೆ ಬೈಬಲಿನ ಒಂದು ಮುಖ್ಯ ವಿಷಯವಾಗಿದೆ. ಈ ಭವಿಷ್ಯವಾಣಿಗಳೆಲ್ಲ ಮುಂದೆ ಬರಲಿದ್ದ ಸಂತತಿಯ ಮೂಲಕ ನೆರವೇರಲಿದ್ದವು. ಆ ‘ಸಂತತಿಯ’ ಮುಖ್ಯ ಭಾಗ ಯೇಸು ಕ್ರಿಸ್ತನಾಗಿದ್ದಾನೆ. (ಗಲಾ. 3:16) ಯೇಸು ಶುದ್ಧ ಆರಾಧನೆಯನ್ನ ಸಮರ್ಥಿಸಿದ್ದಾನೆ. ಮೂರನೇ ಪರೀಕ್ಷೆ ಬಂದಾಗ ಯೇಸು ಕೊಟ್ಟ ಉತ್ತರದಿಂದ ನಮಗೆ ಈ ವಿಷಯ ಸ್ಪಷ್ಟವಾಗಿ ಗೊತ್ತಾಗುತ್ತೆ. ಶುದ್ಧ ಆರಾಧನೆಯ ಪುನಃಸ್ಥಾಪನೆ ಬಗ್ಗೆ ಇರೋ ಎಲ್ಲಾ ಭವಿಷ್ಯವಾಣಿಗಳನ್ನ ನೆರವೇರಿಸೋಕೆ ಯೆಹೋವನು ಯೇಸುವನ್ನೇ ಆರಿಸಿದ್ದಾನೆ. (ಪ್ರಕ. 19:10) ಯೇಸು ದೇವಜನರನ್ನ ಸುಳ್ಳುಧರ್ಮದ ಬಂಧಿವಾಸದಿಂದ ಬಿಡಿಸಿ ಶುದ್ಧ ಆರಾಧನೆಯನ್ನ ಪುನಃಸ್ಥಾಪಿಸ್ತಾನೆ.

 ನೀವೇನು ಮಾಡ್ತೀರಾ?

17. ಶುದ್ಧ ಆರಾಧನೆಯ ಪುನಃಸ್ಥಾಪನೆಯ ಬಗ್ಗೆ ಇರೋ ಭವಿಷ್ಯವಾಣಿಗಳ ಕುರಿತು ನಮಗೆ ಯಾಕೆ ಆಸಕ್ತಿಯಿದೆ?

17 ಶುದ್ಧ ಆರಾಧನೆಯ ಪುನಃಸ್ಥಾಪನೆಯ ಬಗ್ಗೆ ಇರೋ ಭವಿಷ್ಯವಾಣಿಗಳನ್ನ ಕಲಿಯೋದ್ರಿಂದ, ಮೈ ಜುಮ್‌ ಅನಿಸುವಂಥ ಅನೇಕ ವಿಷಯಗಳನ್ನ ತಿಳಿದುಕೊಳ್ಳುತ್ತೇವೆ. ಇದರಿಂದ ನಮ್ಮ ನಂಬಿಕೆ ಬಲವಾಗುತ್ತೆ. ಈ ಭವಿಷ್ಯವಾಣಿಗಳ ಬಗ್ಗೆ ನಮಗೆ ತುಂಬ ಆಸಕ್ತಿ ಇದೆ. ಯಾಕಂದ್ರೆ ಸ್ವರ್ಗದಲ್ಲಿರುವ ಮತ್ತು ಭೂಮಿಯಲ್ಲಿರುವ ಎಲ್ಲರೂ ಒಟ್ಟಾಗಿ ಯೆಹೋವನನ್ನ ಆರಾಧಿಸೋ ಸಮಯಕ್ಕಾಗಿ ನಾವೆಲ್ರೂ ತುದಿಗಾಲಲ್ಲಿ ನಿಂತು ಕಾಯ್ತಾ ಇದ್ದೇವೆ. ಈ ಭವಿಷ್ಯವಾಣಿಗಳಿಂದ ನಮಗೆ ಭವಿಷ್ಯದ ಬಗ್ಗೆ ನಿರೀಕ್ಷೆ ಸಿಗುತ್ತೆ. ಮುಂದೆ ನಮ್ಮ ಜೀವನ ಚೆನ್ನಾಗಾಗುತ್ತೆ ಅಂತ ಈ ಭವಿಷ್ಯವಾಣಿಗಳಿಂದ ನಮಗೆ ಗೊತ್ತಾಗುತ್ತೆ. ಯೆಹೋವನು ಹೇಳಿರೋ ಎಲ್ಲಾ ಮಾತುಗಳು ಖಂಡಿತ ನೆರವೇರುತ್ತೆ. ನಮ್ಮ ಪ್ರಿಯರಲ್ಲಿ ಯಾರು ತೀರಿಕೊಂಡಿದ್ದಾರೋ ಅವರು ಪುನಃ ಜೀವ ಪಡಿತಾರೆ. ಇಡೀ ಭೂಮಿ ಸುಂದರ ತೋಟದಂತೆ ಆಗುತ್ತೆ. ನಮ್ಮೆಲ್ಲರಿಗೂ ಒಳ್ಳೇ ಆರೋಗ್ಯ ಸಿಗುತ್ತೆ ಮತ್ತು ನಾವೆಲ್ರೂ ಶಾಶ್ವತವಾಗಿ ಜೀವಿಸ್ತೇವೆ. ಇದೆಲ್ಲಾ ನೆರವೇರೋ ದಿನಕ್ಕಾಗಿ ನಾವು ಕಾತುರದಿಂದ ಕಾಯ್ತಾ ಇದ್ದೀವಲ್ವಾ?—ಯೆಶಾ. 33:24; 35:5, 6; ಪ್ರಕ. 20:12, 13; 21:3, 4.

18. ಈ ಪುಸ್ತಕದಲ್ಲಿ ನಾವೇನನ್ನು ಕಲಿತೇವೆ?

18 ಬೈಬಲಿನ ಯೆಹೆಜ್ಕೇಲ ಪುಸ್ತಕದಲ್ಲಿರೋ ಮೈ ಜುಮ್‌ ಅನಿಸುವಂಥ ಭವಿಷ್ಯವಾಣಿಗಳ ಬಗ್ಗೆ ಈ ಪುಸ್ತಕದಲ್ಲಿ ನೋಡಲಿದ್ದೇವೆ. ಅವುಗಳಲ್ಲಿ ಅನೇಕ ಭವಿಷ್ಯವಾಣಿಗಳು ಶುದ್ಧ ಆರಾಧನೆ ಪುನಃಸ್ಥಾಪನೆ ಆಗೋದ್ರ ಬಗ್ಗೆ ಇವೆ. ಯೆಹೆಜ್ಕೇಲನ ಭವಿಷ್ಯವಾಣಿಗಳು ಬೈಬಲಿನಲ್ಲಿರೋ ಬೇರೆ ಭವಿಷ್ಯವಾಣಿಗಳಿಗೆ ಹೇಗೆ ಸಂಬಂಧಿಸಿವೆ ಅಂತನೂ ಕಲಿತೀವಿ. ಈ ಭವಿಷ್ಯವಾಣಿಗಳು ಯೇಸುವಿನ ಮೂಲಕ ಹೇಗೆ ನೆರವೇರಿದವು, ಇವುಗಳಲ್ಲಿ ನಮ್ಮ ಪಾತ್ರವೇನು ಅಂತನೂ ತಿಳಿತೀವಿ.—“ಯೆಹೆಜ್ಕೇಲ ಪುಸ್ತಕದ ಕಿರುನೋಟ” ಅನ್ನೋ ಚೌಕ ನೋಡಿ.

19. ನೀವೇನು ಮಾಡುವ ದೃಢತೀರ್ಮಾನ ಮಾಡಿದ್ದೀರಿ? ಮತ್ತು ಯಾಕೆ?

19 ಕ್ರಿ.ಶ. 29 ರಲ್ಲಿ ಯೂದಾಯದ ಬರಡು ಪ್ರದೇಶದಲ್ಲಿ ಯೇಸು ಶುದ್ಧ ಆರಾಧನೆ ಬಿಟ್ಟುಬಿಡುವಂತೆ ಸೈತಾನ ಮಾಡಿದ ಎಲ್ಲಾ ಪ್ರಯತ್ನಗಳು ಮಣ್ಣುಪಾಲಾಯ್ತು. ನಾವು ಸಹ ಶುದ್ಧ ಆರಾಧನೆಯನ್ನ ಬಿಟ್ಟುಬಿಡಬೇಕು ಅಂತ ಅವನು ತನ್ನಿಂದಾದ ಎಲ್ಲ ಪ್ರಯತ್ನವನ್ನ ಮಾಡುತ್ತಿದ್ದಾನೆ. ಆದ್ರೆ ನಾವು ಯೇಸು ತರ ಸೈತಾನನನ್ನ ಎದುರಿಸ್ತೀವಾ? (ಪ್ರಕ. 12:12, 17) ಸೈತಾನನನ್ನ ಎದುರಿಸೋಕೆ ಬೇಕಾದ ಬಲ ಈ ಪುಸ್ತಕದಿಂದ ನಿಮಗೆ ಸಿಗಲಿ ಅಂತ ನಾವು ಬಯಸುತ್ತೇವೆ. ‘ನಮ್ಮ ದೇವರಾಗಿರೋ ಯೆಹೋವನನ್ನೇ ಆರಾಧಿಸ್ತೀವಿ’ ಅಂತ ನಾವು ನಮ್ಮ ಮಾತು ಮತ್ತು ಕ್ರಿಯೆಯಲ್ಲಿ ತೋರಿಸಬೇಕು. ಹೀಗೆ ಮಾಡೋದಾದ್ರೆ ನಾವು ಯೆಹೋವನ ಉದ್ದೇಶ ನೆರವೇರುವುದನ್ನ ನೋಡ್ತೀವಿ. ಸ್ವರ್ಗದಲ್ಲಿರುವ ಮತ್ತು ಭೂಮಿಯಲ್ಲಿರುವ ಪ್ರತಿಯೊಬ್ಬರು ಶುದ್ಧ ಹೃದಯದಿಂದ ಶುದ್ಧ ಆರಾಧನೆ ಮಾಡೋದನ್ನ ನಾವು ಕಣ್ಣಾರೆ ಕಾಣ್ತೀವಿ. ಈ ಆರಾಧನೆಯನ್ನ ಪಡೆಯೋಕೆ ಯೆಹೋವ ದೇವರು ಅರ್ಹನಾಗಿದ್ದಾನೆ ಅಲ್ವಾ?

^ ಪ್ಯಾರ. 5 ಯೆಹೋವ ಅನ್ನೋ ಹೆಸರಿನ ಅರ್ಥ “ಆತನು ಆಗುವಂತೆ ಮಾಡುತ್ತಾನೆ” ಅಂತ ಕೆಲವ್ರು ಅರ್ಥ ಮಾಡ್ಕೊಂಡಿದ್ದಾರೆ. ಈ ಅರ್ಥ ಯೆಹೋವನಿಗೆ ಸೂಕ್ತವಾಗಿದೆ. ಯಾಕಂದ್ರೆ ಆತನೇ ಎಲ್ಲದ್ರ ಸೃಷ್ಟಿಕರ್ತ ಮತ್ತು ಆತನು ಏನು ಮಾಡಬೇಕು ಅಂತ ಅಂದ್ಕೊಂಡಿರುತ್ತಾನೋ ಅದನ್ನ ಖಂಡಿತ ಮಾಡ್ತಾನೆ.

^ ಪ್ಯಾರ. 8 ಬೈಬಲ್‌ ಬಗ್ಗೆ ವಿವರಿಸೋ ಒಂದು ಪುಸ್ತಕದಲ್ಲಿ ಸೈತಾನನ ಬಗ್ಗೆ ಹೀಗೆ ಹೇಳಲಾಗಿದೆ: “ಆದಾಮ ಮತ್ತು ಹವ್ವ ತಮಗೆ ಬಂದ ಮೊದಲನೇ ಪರೀಕ್ಷೆಯಲ್ಲೇ ಸೋತು ಹೋದ್ರು. . . . ಆಗ ಸೈತಾನನ ಇಷ್ಟವನ್ನ ಮಾಡಬೇಕಾ ಅಥವಾ ದೇವರ ಇಷ್ಟವನ್ನ ಮಾಡಬೇಕಾ ಅನ್ನೋ ಸವಾಲು ಬಂತು. ಈ ಸವಾಲಿನಲ್ಲಿ ಸೈತಾನನನ್ನ ಆರಾಧಿಸಬೇಕಾ ಅಥವಾ ದೇವರನ್ನ ಆರಾಧಿಸಬೇಕಾ ಅನ್ನೋದು ಕೂಡ ಸೇರಿದೆ. ಸೈತಾನ ದೇವರ ಸ್ಥಾನವನ್ನ ಪಡೆಯೋಕೆ ಬಯಸ್ತಾನೆ.”

^ ಪ್ಯಾರ. 10 ಲೂಕ ಬರೆದ ಸುವಾರ್ತಾ ಪುಸ್ತಕದಲ್ಲಿ ಯೇಸು ಕ್ರಿಸ್ತನಿಗೆ ಬಂದ ಈ ಮೂರು ಪರೀಕ್ಷೆಗಳನ್ನ ಬೇರೆ ಕ್ರಮದಲ್ಲಿ ಕೊಡಲಾಗಿದೆ. ಆದ್ರೆ ಮತ್ತಾಯ ಈ ಪರೀಕ್ಷೆಗಳು ಹೇಗೆ ನಡೆದವೋ ಅದೇ ಕ್ರಮದಲ್ಲಿ ಬರೆದಿದ್ದಾನೆ. ಇದು ನಮಗೆ ಹೇಗೆ ಗೊತ್ತಾಗುತ್ತೆ? (1) ಮತ್ತಾಯ ಎರಡನೇ ಪರೀಕ್ಷೆ ಬಗ್ಗೆ ತಿಳಿಸುವಾಗ “ಆಮೇಲೆ” ಅಂತ ಹೇಳಿದ್ದಾನೆ. ಅದ್ರ ಅರ್ಥ ಒಂದನೇ ಪರೀಕ್ಷೆ ಆದ್ಮೇಲೆ ಎರಡನೇ ಪರೀಕ್ಷೆ ಬಂತು ಅಂತ ಅರ್ಥ. (2) “ನೀನು ದೇವರ ಮಗನಾಗಿದ್ರೆ” ಅಂತ ಹೇಳ್ತಾ ಸೈತಾನ ಮಾತಾಡೋಕೆ ಶುರುಮಾಡಿದ ಪರೀಕ್ಷೆಗಳೇ ಅವನು ತಂದ ಮೊದಲ ಎರಡು ಪರೀಕ್ಷೆಗಳಾಗಿವೆ. ಸೈತಾನ ಈ ಎರಡೂ ಪರೀಕ್ಷೆಗಳಲ್ಲಿ ಕುತಂತ್ರದಿಂದ ಮಾತಾಡಿದ್ದಾನೆ. ಆ ಕುತಂತ್ರ ಮಣ್ಣುಪಾಲಾದಾಗ ನೇರವಾಗಿ ಯೇಸುವಿಗೆ ದಶಾಜ್ಞೆಯಲ್ಲಿರೋ ಮೊದಲನೇ ಆಜ್ಞೆಯನ್ನ ಮುರಿಯೋಕೆ ಹೇಳಿರುತ್ತಾನೆ. (ವಿಮೋ. 20:2, 3) (3) ಯೇಸು ಯಾವ ಪರೀಕ್ಷೆಯ ಕೊನೆಯಲ್ಲಿ “ಸೈತಾನ ಇಲ್ಲಿಂದ ತೊಲಗಿ ಹೋಗು!” ಅಂತ ಹೇಳಿದನೋ ಅದೇ ಖಂಡಿತ ಮೂರನೇ ಅಥವಾ ಕೊನೇ ಪರೀಕ್ಷೆ ಆಗಿರುತ್ತೆ.—ಮತ್ತಾ. 4:5, 10, 11.