ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 42

ಕೆಲಸ ಕಲಿ ನಕ್ಕು ನಲಿ

ಕೆಲಸ ಕಲಿ ನಕ್ಕು ನಲಿ

ಯಾವುದು ನಿನಗೆ ಇಷ್ಟ, ಕೆಲಸ ಮಾಡುವುದಾ ಆಟ ಆಡುವುದಾ?— ಆಟ ಆಡುವುದು ತಪ್ಪಲ್ಲ. ಏಕೆಂದರೆ ಯೆರೂಸಲೇಮ್‌ ಪಟ್ಟಣದ ‘ಚೌಕಗಳಲ್ಲಿ ಆಟವಾಡುವ ಬಾಲಕ ಬಾಲಕಿಯರು ತುಂಬಿಕೊಂಡಿದ್ದರು’ ಎಂದು ಬೈಬಲ್‌ ತಿಳಿಸುತ್ತದೆ.—ಜೆಕರ್ಯ 8:5.

ಮಹಾ ಬೋಧಕನು ಸಹ ಆಟವಾಡುತ್ತಿದ್ದ ಮಕ್ಕಳನ್ನು ನೋಡಿ ಆನಂದಿಸಿದನು. ಯೇಸು ತಾನು ಭೂಮಿಗೆ ಬರುವ ಮುಂಚೆ ‘ದೇವರ ಹತ್ತಿರ ಕುಶಲ ಕೆಲಸಗಾರನಾಗಿದ್ದುಕೊಂಡು ಯಾವಾಗಲೂ ಆತನ ಮುಂದೆ ಹರ್ಷಿಸುತ್ತಾ ಇದ್ದನೆಂದು’ ಹೇಳಿದನು. ಸ್ವರ್ಗದಲ್ಲಿದ್ದಾಗ ಅವನು ಯೆಹೋವನ ಜೊತೆ ಸೇರಿ ಕೆಲಸಮಾಡುತ್ತಿದ್ದನು ಅಂತ ಈ ವಚನವು ಹೇಳುವುದನ್ನು ಗಮನಿಸು. ಸ್ವರ್ಗದಲ್ಲಿದ್ದಾಗ ತಾನು “ಮಾನವಸಂತಾನದಲ್ಲಿ ಹರ್ಷಿಸುತ್ತಾ ಇದ್ದೆನು” ಅಂತಾನೂ ಅವನು ಹೇಳಿದನು. ಹೌದು, ನಾವು ಮುಂಚೆ ಕಲಿತಿರುವಂತೆ, ಮಹಾ ಬೋಧಕನಿಗೆ ದೊಡ್ಡವರ ಮೇಲೂ ಚಿಕ್ಕ ಮಕ್ಕಳ ಮೇಲೂ ಬಹಳ ಪ್ರೀತಿ ಆಸಕ್ತಿ ಇತ್ತು.—ಜ್ಞಾನೋಕ್ತಿ 8:30, 31.

ಭೂಮಿಗೆ ಬರುವ ಮುಂಚೆ ಮಹಾ ಬೋಧಕನು ಯಾವುದನ್ನು ನೋಡಿ ಆನಂದಿಸಿದನು?

ಭೂಮಿಯಲ್ಲಿ ಯೇಸು ಚಿಕ್ಕ ಹುಡುಗನಾಗಿದ್ದಾಗ ಆಟವಾಡಿದ್ದನಾ?— ಆಡಿದ್ದಿರಬಹುದು. ಸ್ವರ್ಗದಲ್ಲಿ ‘ಕುಶಲ ಕೆಲಸಗಾರನಾಗಿದ್ದ’ ಯೇಸು ಭೂಮಿಯಲ್ಲಿ ಇದ್ದಾಗಲೂ ಕೆಲಸ ಮಾಡಿದ್ದಿರಬೇಕಲ್ವಾ, ಏನಂತಿಯಾ?— ಯೇಸುವನ್ನು “ಬಡಗಿಯ ಮಗ” ಅಂತ ಜನರು ಕರೆಯುತ್ತಿದ್ದರು. “ಬಡಗಿ” ಅಂತನೂ ಕರೆಯುತ್ತಿದ್ದರು. ಇದರಿಂದ ಏನು ಗೊತ್ತಾಗುತ್ತದೆ?— ಯೋಸೇಫನು ಯೇಸುವಿಗೆ ಚಿಕ್ಕಂದಿನಿಂದಲೇ ಮರಗೆಲಸದ ತರಬೇತಿ ಕೊಟ್ಟಿದ್ದಿರಬೇಕು. ಹೀಗೆ ಯೇಸು ಬಡಗಿ ಕೆಲಸ ಕಲಿತನು.—ಮತ್ತಾಯ 13:55; ಮಾರ್ಕ 6:3.

ಯೇಸು ಬಡಗಿ ಕೆಲಸದಲ್ಲಿ ನಿಪುಣನಾಗಿದ್ದನಾ?— ಸ್ವರ್ಗದಲ್ಲಿ ಕುಶಲ ಕೆಲಸಗಾರನಾಗಿದ್ದ ಕಾರಣ ಬಡಗಿ ಕೆಲಸದಲ್ಲೂ ಕುಶಲ ನೈಪುಣ್ಯತೆ ಪಡೆದಿರಲೇಬೇಕಲ್ವಾ?— ಆ ಕಾಲದಲ್ಲಿ ಬಡಗಿಯ ಕೆಲಸ ತುಂಬಾ ಶ್ರಮದ ಕೆಲಸವಾಗಿತ್ತು. ಯಾಕೆಂದರೆ, ಯೇಸು ಕಾಡಿಗೆ ಹೋಗಿ ಮರ ಕಡಿದು ಹಲಗೆಗಳಾಗಿ ಕತ್ತರಿಸಿ ಹೊತ್ತುಕೊಂಡು ಬಂದು ಮೇಜು, ಬೆಂಚು ಮುಂತಾದ ಪೀಠೊಪಕರಣಗಳನ್ನು ಮಾಡಬೇಕಾಗಿತ್ತು.

ಆ ಕೆಲಸದಲ್ಲಿ ಅವನು ಸಂತೋಷಪಟ್ಟನೆಂದು ನಿನಗೆ ಅನಿಸುತ್ತದಾ?— ಸುಂದರವಾದ ಮೇಜು, ಕುರ್ಚಿ ಮುಂತಾದ ವಸ್ತುಗಳನ್ನು ಜನರ ಉಪಯೋಗಕ್ಕಾಗಿ ನೀನು ಮಾಡಿಕೊಟ್ಟರೆ ಅದರಿಂದ ನಿನಗೆ ಸಂತೋಷ ಆಗಲ್ವಾ?— ‘ಕೆಲಸಕಾರ್ಯಗಳಲ್ಲಿ ಉಲ್ಲಾಸಗೊಳ್ಳುವುದು’ ಒಳ್ಳೇದು ಎಂದು ಬೈಬಲ್‌ ಹೇಳುತ್ತದೆ. ಆಟದಲ್ಲಿ ಮಜಾ ಸಿಕ್ಕಿದ್ದರೂ ಕೆಲಸದಲ್ಲಿ ಸಿಗುವ ಉಲ್ಲಾಸನೇ ಬೇರೆ.—ಪ್ರಸಂಗಿ 3:22.

ನಿಜ, ಕೆಲಸ ಮಾಡುವುದರಿಂದ ಮನಸ್ಸಿಗಷ್ಟೇ ನೆಮ್ಮದಿಯಲ್ಲ ಶಾರೀರಿಕವಾಗಿಯೂ ಅನೇಕ ಪ್ರಯೋಜನವಿದೆ. ಅನೇಕ ಮಕ್ಕಳು ಸುಮ್ಮನೆ ಕುಳಿತು ಟಿ.ವಿ. ನೋಡುತ್ತಾ ವಿಡಿಯೋ ಗೇಮ್ಸ್‌ ಆಡುತ್ತಾ ಕಾಲಹರಣ ಮಾಡುತ್ತಾರೆ. ಹಾಗಾಗಿ ಅವರು ದಪ್ಪವಾಗುತ್ತಾರೆ. ಆರೋಗ್ಯನೂ ಕ್ಷೀಣಿಸುತ್ತೆ. ಅವರೂ ಸಂತೋಷವಾಗಿ ಇರೊಲ್ಲ. ಅವರಿಂದ ಬೇರೆಯವರಿಗೂ ಸಂತೋಷ ಸಿಗಲ್ಲ. ಹಾಗಾದರೆ, ಸಂತೋಷವಾಗಿರಲು ನಾವೇನು ಮಾಡಬೇಕು?—

ಇತರರಿಗೆ ಕೊಡುವಾಗ ಮತ್ತು ಅವರಿಗೆ ಸಹಾಯಮಾಡುವಾಗ ಸಂತೋಷ ಸಿಗುತ್ತದೆಂದು ನಾವು 17ನೇ ಅಧ್ಯಾಯದಲ್ಲಿ ಕಲಿತೆವು. (ಅಪೊಸ್ತಲರ ಕಾರ್ಯಗಳು 20:35) ಬೈಬಲಿನಲ್ಲಿ ಯೆಹೋವನನ್ನು ‘ಸಂತೋಷದ ದೇವರು’ ಎಂದು ಹೇಳಲಾಗಿದೆ. (1 ತಿಮೊಥೆಯ 1:11) ಯೇಸು ಸಹ “ಮಾನವಸಂತಾನದಲ್ಲಿ ಹರ್ಷಿಸುತ್ತಾ” ಇದ್ದನು ಎಂದು ಜ್ಞಾನೋಕ್ತಿ ಪುಸ್ತಕದಲ್ಲಿ ಓದಿದ್ದೇವೆ. ಯೇಸು ಹರ್ಷದಿಂದಿರಲು ಅಥವಾ ಸಂತೋಷವಾಗಿರಲು ಕಾರಣವೇನು?— ಒಂದು ಕಾರಣವನ್ನು ಯೇಸು ಹೀಗೆ ಹೇಳಿದನು: “ನನ್ನ ತಂದೆಯು ಇಂದಿನ ವರೆಗೂ ಕೆಲಸಮಾಡುತ್ತಾ ಇದ್ದಾನೆ ಮತ್ತು ನಾನೂ ಕೆಲಸಮಾಡುತ್ತಿದ್ದೇನೆ.”—ಯೋಹಾನ 5:17.

ಭೂಮಿಯಲ್ಲಿ ಯೇಸು ಜೀವನವಿಡೀ ಬಡಗಿ ಕೆಲಸಮಾಡಲಿಲ್ಲ. ಯೆಹೋವ ದೇವರು ಭೂಮಿಯಲ್ಲಿ ಅವನಿಗೆ ಒಂದು ವಿಶೇಷ ಕೆಲಸ ಕೊಟ್ಟಿದ್ದನು. ಯಾವ ಕೆಲಸ?— ಯೇಸು ಹೀಗೆ ಹೇಳಿದನು: “ನಾನು ದೇವರ ರಾಜ್ಯದ ಸುವಾರ್ತೆಯನ್ನು . . . ಪ್ರಕಟಿಸಬೇಕಾಗಿದೆ; ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ.” (ಲೂಕ 4:43) ಯೇಸು ಸುವಾರ್ತೆ ಸಾರಿದಾಗ ಕೆಲವರು ಅವನಲ್ಲಿ ಬಹಳ ನಂಬಿಕೆಯಿಟ್ಟು ಕಲಿತ ವಿಷಯವನ್ನು ಇತರರಿಗೂ ತಿಳಿಸಿದರು. ಅಂಥವರಲ್ಲಿ ಒಬ್ಬಾಕೆ ಸಮಾರ್ಯ ಊರಿನ ಸ್ತ್ರೀ. ಯೇಸು ಆಕೆಗೆ ಸುವಾರ್ತೆ ಸಾರುತ್ತಿರುವುದನ್ನು ನೀನು ಚಿತ್ರದಲ್ಲಿ ನೋಡಬಹುದು.—ಯೋಹಾನ 4:7-15, 27-30.

ಯಾವ ಎರಡು ರೀತಿಯ ಕೆಲಸಗಳನ್ನು ಯೇಸು ಭೂಮಿಯಲ್ಲಿದ್ದಾಗ ಮಾಡಿದನು?

ಸುವಾರ್ತೆ ಸಾರುವ ಕೆಲಸದ ಬಗ್ಗೆ ಯೇಸುವಿನ ಅಭಿಪ್ರಾಯ ಏನಾಗಿತ್ತು? ಅದನ್ನು ಮಾಡಲು ಅವನಿಗೆ ಇಷ್ಟವಿತ್ತೆಂದು ನಿನಗೆ ಅನಿಸುತ್ತದಾ?— ಯೇಸು ಹೇಳಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರವಾಗಿದೆ.” (ಯೋಹಾನ 4:34) ನಿನ್ನ ನೆಚ್ಚಿನ ತಿಂಡಿ ತಿನ್ನಲು ನಿನಗೆಷ್ಟು ಆಶೆಯಾಗುತ್ತೆ?— ದೇವರು ನೇಮಿಸಿದ ಕೆಲಸ ಮಾಡುವುದು ಯೇಸುವಿಗೆ ಎಷ್ಟು ಇಷ್ಟವಾಗಿತ್ತು ಅಂತ ನಿನಗೀಗ ಅರ್ಥವಾಗಿರಬಹುದು.

ನಾವು ಕೆಲಸ ಕಲಿತು ಅದನ್ನು ಮಾಡುವುದರಲ್ಲಿ ಆನಂದಿಸುವಂತೆ ದೇವರು ನಮ್ಮನ್ನು ಉಂಟುಮಾಡಿದ್ದಾನೆ. ಮನುಷ್ಯರು ‘ತಮ್ಮ ಪ್ರಯಾಸದಲ್ಲಿ ಸಂತೋಷವನ್ನು’ ಅನುಭವಿಸುವರೆಂದೂ ಆ ಸಂತೋಷ ತಾನು ಅವರಿಗೆ ಕೊಡುವ ಕೊಡುಗೆಯಾಗಿದೆ ಎಂದೂ ದೇವರು ತಿಳಿಸಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ನೀನು ಕೆಲಸಮಾಡಲು ಕಲಿತರೆ ನಿನ್ನ ಇಡೀ ಜೀವನ ಆನಂದಮಯವಾಗಿರುತ್ತದೆ.—ಪ್ರಸಂಗಿ 5:19.

ಅಂದರೆ ದೊಡ್ಡವರು ಮಾಡುವ ಶ್ರಮದ ಕೆಲಸವನ್ನು ನೀನು ಮಾಡಬೇಕು ಅಂತಲ್ಲ. ಆದರೆ ಒಂದಲ್ಲ ಒಂದು ಕೆಲಸವನ್ನು ಎಲ್ಲರೂ ಮಾಡಸಾಧ್ಯವಿದೆ. ನಿನ್ನ ಅಪ್ಪಅಮ್ಮ ದಿನಾಲೂ ಹೊರಗೆ ಹೋಗಿ ದುಡಿಯುತ್ತಿರಬಹುದು. ಕುಟುಂಬಕ್ಕೆ ಆಹಾರ ವಸತಿ ಒದಗಿಸಲಿಕ್ಕಾಗಿ ಸಂಪಾದನೆ ಅವಶ್ಯ. ಆದರೆ ಅದೇ ಸಮಯದಲ್ಲಿ ಮನೆಯನ್ನು ಸಹ ನೀಟಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕಲ್ವಾ. ಅದುನೂ ಕೆಲಸ ಅಲ್ವಾ.

ಹೀಗಿರುವಾಗ, ನೀನು ಮನೆಯಲ್ಲಿ ಯಾವೆಲ್ಲಾ ಕೆಲಸಗಳನ್ನು ಮಾಡಿ ಅಪ್ಪಅಮ್ಮನಿಗೆ ಸಹಾಯ ಮಾಡಬಹುದು?— ಊಟದ ಸಮಯದಲ್ಲಿ ತಟ್ಟೆ ಲೋಟಗಳನ್ನು ತಂದಿಡಬಹುದು. ಪಾತ್ರೆಪಗರೆಗಳನ್ನು ತೊಳೆಯಬಹುದು. ಕಸವನ್ನು ಅಲ್ಲಿ ಇಲ್ಲಿ ಎಸೆಯದೇ ಕಸದ ತೊಟ್ಟಿಗೆ ಹಾಕಿ ಬರಬಹುದು. ನಿನ್ನ ಕೋಣೆಯನ್ನು ಸ್ವಚ್ಛವಾಗಿಡಬಹುದು. ಆಟಿಕೆಗಳನ್ನು ನೀಟಾಗಿ ಅದರದರ ಜಾಗದಲ್ಲಿ ಎತ್ತಿಡಬಹುದು. ಇದರಲ್ಲಿ ಕೆಲವನ್ನು ನೀನು ಈಗಾಗಲೇ ಮಾಡುತ್ತಿರಬಹುದು. ಈ ಚಿಕ್ಕಪುಟ್ಟ ಕೆಲಸಗಳನ್ನು ಮಾಡುವಾಗ ತುಂಬಾ ಪ್ರಯೋಜನವಿದೆ.

ಆಟವಾಡಿದ ಮೇಲೆ ಆಟಿಕೆಗಳನ್ನು ಅದರದರ ಜಾಗದಲ್ಲಿ ಎತ್ತಿಡುವುದು ಪ್ರಾಮುಖ್ಯವೇಕೆ?

ಇಂಥ ಚಿಕ್ಕಪುಟ್ಟ ಕೆಲಸಗಳಿಂದ ಹೇಗೆ ಪ್ರಯೋಜನವಾಗುತ್ತೆ ಅಂತ ನೋಡೋಣ. ಆಟದ ನಂತರ ನಾವು ಆಟಿಕೆಗಳನ್ನು ಅದರದರ ಸ್ಥಳದಲ್ಲಿ ಎತ್ತಿಡಬೇಕು. ಯಾಕಂತ ಹೇಳ್ತಿಯಾ?— ಹಾಗೆ ಮಾಡುವಾಗ ಮನೆ ನೀಟಾಗಿ ಇರುತ್ತದೆ. ಮಾತ್ರವಲ್ಲ, ಅನಾಹುತವನ್ನೂ ತಪ್ಪಿಸುತ್ತದೆ. ಸ್ವಲ್ಪ ಯೋಚಿಸು, ಅಮ್ಮ ಕೈತುಂಬ ಸಾಮಾನುಗಳನ್ನು ಹಿಡಿದುಕೊಂಡು ಮನೆಯೊಳಗೆ ಬರುತ್ತಿದ್ದಾಳೆ. ನಿನ್ನ ಆಟಿಕೆಗಳೆಲ್ಲಾ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಪಾಪ, ಅಮ್ಮನಿಗೆ ಅದು ತಿಳಿಯದೇ ಅವುಗಳ ಮೇಲೆ ಕಾಲಿಟ್ಟು ದೊಪ್‌ ಅಂತ ಬಿದ್ದರೆ! ಕೈಕಾಲಿಗೆ ಪೆಟ್ಟಾಗಾಬಹುದು. ಆಸ್ಪತ್ರೆಗೂ ಕರೆದುಕೊಂಡು ಹೋಗಬೇಕಾಗಬಹುದು. ದೊಡ್ಡ ಅನಾಹುತನೇ ಆಗಿಬಿಡುತ್ತೆ ಅಲ್ವಾ?— ಆದುದರಿಂದ ಆಟದ ನಂತರ ಕೂಡಲೇ ಆಟಿಕೆಗಳನ್ನು ಎತ್ತಿಟ್ಟರೆ ಎಲ್ಲರಿಗೂ ಪ್ರಯೋಜನ.

ಮಕ್ಕಳು ಮಾಡಬೇಕಾದ ಬೇರೆ ವಿಷಯವೂ ಇದೆ. ಓದುಬರಹ ಕಲಿಯುವುದು. ಶಾಲೆಯಲ್ಲಿ ಓದಲು ಕಲಿಸಿಕೊಡುತ್ತಾರೆ. ಕೆಲವು ಮಕ್ಕಳಿಗೆ ಓದುವುದೆಂದರೆ ತುಂಬಾ ಇಷ್ಟ. ಇನ್ನು ಕೆಲವರಿಗೆ ಕಷ್ಟ. ಮೊದಮೊದಲಿಗೆ ಓದೋದು ನಿನಗೆ ಕಷ್ಟವಾಗಿ ಕಂಡರೂ ಚೆನ್ನಾಗಿ ಅಭ್ಯಾಸಮಾಡಿ ಓದಲು ಕಲಿತರೆ ಆಮೇಲೆ ಅದರ ಆನಂದ ಸವಿಯುತ್ತೀ. ಬೇರೆ ಬೇರೆ ಪುಸ್ತಕಗಳನ್ನು ಓದಿ ಹೊಸಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತೀ. ದೇವರ ವಾಕ್ಯವಾದ ಬೈಬಲನ್ನೂ ಯಾರ ಸಹಾಯವಿಲ್ಲದೆ ನೀನೇ ಓದಬಹುದು. ಆದುದರಿಂದ ಶಾಲೆಯಲ್ಲಿ ಕಲಿಸಿಕೊಡುವ ವಿಷಯಗಳನ್ನು ಮನೆಗೆ ಬಂದ ಮೇಲೂ ಚೆನ್ನಾಗಿ ಅಭ್ಯಾಸಮಾಡಿ ಕಲಿತರೆ ಪ್ರಯೋಜನ ಖಂಡಿತ, ಅಲ್ವಾ?—

ಕೆಲಸ ಅಂದಾಕ್ಷಣ ಜಾರಿಕೊಳ್ಳುವ ಜನರನ್ನು ನೀನು ನೋಡಿರಬಹುದು. ಆದರೆ ದೇವರು ನಮ್ಮನ್ನು ಉಂಟುಮಾಡಿದಾಗ ಕೆಲಸ ಮಾಡುವ ಸಾಮರ್ಥ್ಯವನ್ನು ಅನುಗ್ರಹಿಸಿದ್ದಾನೆ. ಹಾಗಾಗಿ, ಕೆಲಸದಲ್ಲಿ ಆನಂದಿಸಲು ನಾವು ಕಲಿಯಬೇಕು. ಮಹಾ ಬೋಧಕನು ತನ್ನ ಕೆಲಸದಲ್ಲಿ ಎಷ್ಟು ಆನಂದಿಸಿದನು ಅಂತ ನೆನಪಿದೆ ತಾನೆ?— ರುಚಿಕರ ತಿಂಡಿ ತಿಂದಂತೆಯೇ ಅಂತ ಹೇಳಿದನಲ್ವಾ. ಅವನು ಯಾವ ಕೆಲಸದ ಬಗ್ಗೆ ಮಾತಾಡುತ್ತಿದ್ದನು?— ಸಾರುವ ಕೆಲಸದ ಬಗ್ಗೆ. ಯೆಹೋವ ದೇವರ ಕುರಿತು ಹಾಗೂ ಸದಾಕಾಲ ಜೀವಿಸುವ ಅವಕಾಶವನ್ನು ಜನರು ಹೇಗೆ ಪಡೆದುಕೊಳ್ಳುವುದು ಅನ್ನುವ ಕುರಿತು ಅವನು ಸಾರಿದನು.

ಕೆಲಸದಲ್ಲಿ ಆನಂದಿಸಲು ಸಹಾಯಮಾಡುವ ಎರಡು ಪ್ರಾಮುಖ್ಯ ಅಂಶಗಳು ಹೀಗಿವೆ. ಮೊದಲು, ‘ನಾನು ಯಾಕಾಗಿ ಈ ಕೆಲಸ ಮಾಡಬೇಕು?’ ಅಂತ ನಿನ್ನನ್ನೇ ಕೇಳಿಕೋ. ಒಂದು ಕೆಲಸದ ಪ್ರಾಮುಖ್ಯತೆ ನಿನಗೆ ಗೊತ್ತಾದಾಗ ಅದನ್ನು ಮಾಡುವುದು ಕೂಡ ಸುಲಭವಾಗುತ್ತದೆ. ಆ ನಂತರ ಕೆಲಸ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಚೆನ್ನಾಗಿ ಮನಸ್ಸಿಟ್ಟು ಮಾಡಲು ಶ್ರಮಿಸು. ಆಗ ಮಹಾ ಬೋಧಕನಂತೆ ನೀನು ನಿನ್ನ ಕೆಲಸದಲ್ಲಿ ಆನಂದಿಸುವಿ.

ಉತ್ತಮ ಕೆಲಸಗಾರರಾಗಲು ಬೈಬಲ್‌ ಸಹಾಯ ಮಾಡುವುದು. ಜ್ಞಾನೋಕ್ತಿ 10:4; 22:29; ಪ್ರಸಂಗಿ 3:12, 13 ಮತ್ತು ಕೊಲೊಸ್ಸೆ 3:23 ನ್ನು ಓದೋಣ.