ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 31

ಯಾರು ನಮಗೆ ಸಾಂತ್ವನ ಕೊಡುತ್ತಾರೆ?

ಯಾರು ನಮಗೆ ಸಾಂತ್ವನ ಕೊಡುತ್ತಾರೆ?

ನಿನ್ನ ಮನಸ್ಸಿಗೆ ಯಾವತ್ತಾದರೂ ಬೇಜಾರಾಗಿದೆಯಾ? ಒಂಟಿ ಎಂಬ ಭಾವನೆ ಬಂದಿದೆಯಾ?— ಪ್ರೀತಿ ಕಾಳಜಿ ತೋರಿಸುವವರು ಯಾರೂ ಇಲ್ಲ ಅಂತ ನಿನಗನಿಸಿದೆಯಾ?— ಕೆಲವು ಮಕ್ಕಳಿಗೆ ಹಾಗೆ ಅನಿಸಿದೆ. ಆದರೆ ದೇವರು, ‘ನಾನು ನಿನ್ನನ್ನು ಮರೆಯುವುದಿಲ್ಲ’ ಎಂದು ವಚನ ಕೊಟ್ಟಿದ್ದಾನೆ. (ಯೆಶಾಯ 49:15) ಎಂಥ ಪ್ರೀತಿಯ ದೇವರಲ್ವಾ?— ಹೌದು, ಯೆಹೋವ ದೇವರು ನಮ್ಮನ್ನು ತುಂಬಾ ತುಂಬಾ ಪ್ರೀತಿಸುತ್ತಾನೆ.

ಕಾಣೆಯಾದ ಈ ಕುರಿಮರಿಗೆ ಹೇಗನಿಸಿರಬಹುದು?

“ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು” ಎಂದು ಬೈಬಲಿನ ಬರಹಗಾರರಲ್ಲಿ ಒಬ್ಬನು ಹೇಳಿದನು. (ಕೀರ್ತನೆ 27:10) ದೇವರು ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ ಎಂಬ ವಿಚಾರ ನಮ್ಮ ಮನಸ್ಸಿಗೆ ನಿಜಕ್ಕೂ ಸಾಂತ್ವನ ಕೊಡುತ್ತೇ ಅಲ್ವಾ?— ಹೌದು, ಯೆಹೋವನು ‘ನಾನೇ ನಿನ್ನೊಂದಿಗಿದ್ದೇನೆ, ಭಯಪಡದಿರು. ನಾನು ನಿನಗೆ ಸಹಾಯಮಾಡುತ್ತೇನೆ’ ಎಂದು ಭರವಸೆ ಕೊಡುತ್ತಾನೆ.—ಯೆಶಾಯ 41:10.

ಸೈತಾನನು ನಮಗೆ ಕಷ್ಟ ಕೊಡುವಾಗ ಕೆಲವೊಮ್ಮೆ ಯೆಹೋವನು ಅದನ್ನು ತಡೆಯುವುದಿಲ್ಲ. ತನ್ನ ಸೇವಕರು ಸೈತಾನನಿಂದ ಪರೀಕ್ಷೆಗೊಳಗಾಗುವಂತೆ ಅನುಮತಿಸುತ್ತಾನೆ. ಒಮ್ಮೆ ಸೈತಾನನು ಯೇಸುವಿಗೆ ಎಷ್ಟು ಕಷ್ಟ ಕೊಟ್ಟನೆಂದರೆ, “ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ?” ಎಂದು ಯೇಸು ದೇವರಲ್ಲಿ ಮೊರೆಯಿಟ್ಟನು. (ಮತ್ತಾಯ 27:46) ಅಷ್ಟೊಂದು ಕಷ್ಟ ಅನುಭವಿಸುತ್ತಿದ್ದರೂ ತನ್ನನ್ನು ಯೆಹೋವನು ಪ್ರೀತಿಸುತ್ತಿದ್ದಾನೆಂದು ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. (ಯೋಹಾನ 10:17) ಅಷ್ಟೇ ಅಲ್ಲ, ಸೈತಾನನು ಪರೀಕ್ಷೆಗೊಳಪಡಿಸುವಾಗ ಕೆಲವೊಮ್ಮೆ ಯೆಹೋವನು ಅದನ್ನು ತಡೆಯುವುದಿಲ್ಲವೆಂದು ಸಹ ಯೇಸುವಿಗೆ ಗೊತ್ತಿತ್ತು. ಯೆಹೋವನು ಏಕೆ ಸೈತಾನನನ್ನು ತಡೆಯುವುದಿಲ್ಲ ಅಂತ ನಾವು ಮುಂದೆ ಇನ್ನೊಂದು ಅಧ್ಯಾಯದಲ್ಲಿ ಕಲಿಯುತ್ತೇವೆ.

ಚಿಕ್ಕ ಮಕ್ಕಳು ಸಾಧಾರಣವಾಗಿ ಎಲ್ಲದ್ದಕ್ಕೂ ಭಯಬೀಳುತ್ತಾರೆ. ಉದಾಹರಣೆಗೆ, ನೀನು ಯಾವಾಗಲಾದರೂ ಜನಜಂಗುಲಿಯಲ್ಲಿ ಅಪ್ಪಅಮ್ಮನ ಕೈ ತಪ್ಪಿ ಕಾಣೆಯಾಗಿದ್ದಿಯಾ?— ಆಗ ನಿನಗೆ ಭಯವಾಗಿತ್ತಾ?— ಅನೇಕ ಮಕ್ಕಳಿಗೆ ಭಯವಾಗುತ್ತದೆ. ಸರಿ, ಈಗ ಮಹಾ ಬೋಧಕನು ಹೇಳಿದ ಒಂದು ಕಥೆಯನ್ನು ಕೇಳೋಣ. ಆ ಕಥೆಯ ಮುಖ್ಯ ವಿಷಯ ದಾರಿತಪ್ಪಿ ಕಾಣೆಯಾದ ಒಂದರ ಕುರಿತಾಗಿತ್ತು. ಕಾಣೆಯಾದದ್ದು ಮಗುವಲ್ಲ. ಒಂದು ಕುರಿ.

ಒಂದು ವಿಧದಲ್ಲಿ ನಿನ್ನನ್ನು ಕುರಿಗೆ ಹೋಲಿಸಬಹುದು. ಯಾಕೆ ಗೊತ್ತಾ? ಕುರಿಗಳು ದೊಡ್ಡ ಗಾತ್ರದ ಪ್ರಾಣಿಗಳಲ್ಲ. ತುಂಬಾ ಶಕ್ತಿಶಾಲಿನೂ ಅಲ್ಲ. ಅವುಗಳನ್ನು ನೋಡಿಕೊಳ್ಳಲು, ಸಂರಕ್ಷಿಸಲು ಯಾರಾದರೂ ಬೇಕೇ ಬೇಕು. ಆ ರೀತಿ ಅವುಗಳನ್ನು ನೋಡಿಕೊಳ್ಳುವವನನ್ನು ಕುರುಬ ಎಂದು ಕರೆಯುತ್ತಾರೆ.

ಯೇಸು ಹೇಳಿದ ಕಥೆಯನ್ನು ಈಗ ಕೇಳು. ಒಬ್ಬ ಕುರುಬನಿಗೆ ನೂರು ಕುರಿಗಳಿದ್ದವು. ಒಮ್ಮೆ ಒಂದು ಕುರಿ ಕಾಡಿನಲ್ಲಿ ಕಾಣೆಯಾಯಿತು. ಬೆಟ್ಟದ ಇನ್ನೊಂದು ಕಡೆ ಏನಿದೆ ಅಂತ ನೋಡಬೇಕೆಂದು ಹೋಯಿತ್ತೇನೋ. ಸ್ವಲ್ಪದರಲ್ಲೇ ಅದು ಇತರ ಕುರಿಗಳಿಂದ ಪ್ರತ್ಯೇಕವಾಗಿ ತುಂಬಾ ದೂರ ಹೋಗಿಬಿಟ್ಟಿತ್ತು. ಸುತ್ತಲೂ ಯಾರೂ ಇಲ್ಲ ತಾನು ಒಬ್ಬಂಟಿಯೆಂದು ಗೊತ್ತಾದಾಗ ಪಾಪ ಅದಕ್ಕೆ ಹೇಗಾಗಿರಬೇಕಲ್ವಾ?—

ಹಿಂಡಿನಿಂದ ಒಂದು ಕುರಿ ಕಾಣೆಯಾಗಿದೆ ಎಂದು ಕುರುಬನಿಗೆ ಗೊತ್ತಾದಾಗ ಏನು ಮಾಡುತ್ತಾನೆ? ‘ಹಿಂಡು ಬಿಟ್ಟು ಹೋಗಿದ್ದು ಅದರ ತಪ್ಪು. ಅದೆಲ್ಲಿ ಹೋಗಿದೆ ಅಂತ ಯಾರು ತಲೆಕೆಡಿಸಿಕೊಳ್ಳುತ್ತಾರೆ’ ಎಂದು ಯೋಚಿಸುತ್ತಾನಾ? ಅಥವಾ 99 ಕುರಿಗಳನ್ನು ಒಂದು ಸುರಕ್ಷಿತ ಸ್ಥಳದಲ್ಲಿ ಕೂಡಿಹಾಕಿ ಕಾಣೆಯಾದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುತ್ತಾನಾ? ಒಂದು ಕುರಿಗೋಸ್ಕರ ಅವನು ತುಂಬಾ ತೊಂದರೆ ತೆಗೆದುಕೊಳ್ಳಬೇಕಾ?— ನೀನೇ ಕಾಣೆಯಾದ ಆ ಕುರಿ ಎಂದಿಟ್ಟುಕೋ. ದಾರಿ ಕಾಣದೆ ದಿಗಿಲುಬಿದ್ದು ನಿಂತಿರುವ ನಿನ್ನನ್ನು ಕುರುಬನು ಹುಡುಕಿಕೊಂಡು ಬರಬೇಕೆಂದು ನೀನು ಇಷ್ಟಪಡುತ್ತೀಯಾ?—

ತನ್ನ ಕುರಿಯನ್ನು ಕಾಪಾಡಿರುವ ಈ ಕುರುಬನಂತೆ ಯಾರಿದ್ದಾರೆ?

ಆ ಕುರುಬನು ತನ್ನೆಲ್ಲಾ ಕುರಿಗಳನ್ನು ತುಂಬಾ ಪ್ರೀತಿಸುತ್ತಿದ್ದನು. ಕಾಣೆಯಾದ ಕುರಿಯ ಮೇಲೆ ಕೂಡ ಅವನಿಗೆ ಅಪಾರ ಪ್ರೀತಿಯಿತ್ತು. ಆದುದರಿಂದ ಅದನ್ನು ಹುಡುಕಿಕೊಂಡು ಹೋದನು. ಈಗ ಸ್ವಲ್ಪ ಊಹಿಸಿ ನೋಡು. ತನ್ನನ್ನು ಹುಡುಕುತ್ತಾ ದೂರದಲ್ಲಿ ಕುರುಬನು ಬರುತ್ತಿರುವುದನ್ನು ಕಂಡಾಗ ಆ ಕುರಿಗೆಷ್ಟು ಸಂತೋಷವಾಗುತ್ತದೆ. ಕಾಣೆಯಾಗಿದ್ದ ತನ್ನ ಕುರಿ ಸಿಕ್ಕಿದಾಗ ಕುರುಬನಿಗೂ ಬಹಳ ಆನಂದವಾಯಿತೆಂದು ಯೇಸು ಹೇಳಿದನು. ತನ್ನ ಬಳಿ 99 ಕುರಿಗಳಿತ್ತಾದರೂ ಅವನು ಆ ಒಂದು ಕುರಿಗಾಗಿ ತುಂಬಾ ತವಕಪಟ್ಟನು. ಅದು ಸಿಕ್ಕಿದಾಗ ಅವನಿಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಈಗ ಹೇಳು, ಆ ಅಕ್ಕರೆಯ ಕುರುಬನಂತೆ ಯಾರಿದ್ದಾರೆ? ಆ ಕುರುಬನು ತನ್ನ ಕುರಿಯ ಬಗ್ಗೆ ಕಾಳಜಿ ತೋರಿಸಿದಂತೆ ನಮ್ಮ ಕುರಿತು ಯಾರು ಕಾಳಜಿ ತೋರಿಸುತ್ತಾರೆ?— ಸ್ವರ್ಗದಲ್ಲಿರುವ ತನ್ನ ತಂದೆಯಾದ ಯೆಹೋವನು ಹಾಗೇ ಕಾಳಜಿ ತೋರಿಸುತ್ತಾನೆಂದು ಯೇಸು ಹೇಳಿದನು.

ಯೆಹೋವ ದೇವರು ತನ್ನ ಜನರಿಗೆ ಮಹಾ ಕುರುಬನಾಗಿದ್ದಾನೆ. ತನ್ನ ಸೇವೆಮಾಡುವ ಎಲ್ಲರನ್ನೂ ಆತನು ಪ್ರೀತಿಸುತ್ತಾನೆ. ಚಿಕ್ಕ ಮಕ್ಕಳ ಮೇಲೂ ಅವನಿಗೆ ತುಂಬಾ ಪ್ರೀತಿಯಿದೆ. ನಮ್ಮಲ್ಲಿ ಯಾರಿಗೇ ಆಗಲಿ ಹಾನಿಯಾದರೆ ಆತನು ಸಹಿಸುವುದಿಲ್ಲ. ನಾವು ನಾಶವಾಗುವುದು ಅವನಿಗೆ ಇಷ್ಟವೇ ಇಲ್ಲ. ದೇವರು ನಮ್ಮನ್ನು ಅಷ್ಟು ಗಾಢವಾಗಿ ಪ್ರೀತಿಸುತ್ತಾನೆಂಬ ವಿಷಯ ನಿಜಕ್ಕೂ ನಮಗೆ ಸಾಂತ್ವನ ನೀಡುತ್ತದೆ.—ಮತ್ತಾಯ 18:12-14.

ಯೆಹೋವನು ನಿಜವಾಗಿಯೂ ಇದ್ದಾನೆ ತಂದೆಯಂತೆ ನಿನ್ನ ಬಗ್ಗೆ ಕಾಳಜಿ ವಹಿಸುತ್ತಾನೆ ಅಂತ ನಿನಗನಿಸುತ್ತದಾ?

ನೀನು ನಿಜವಾಗಿಯೂ ಯೆಹೋವ ದೇವರನ್ನು ನಂಬುತ್ತೀಯಾ?— ಯೆಹೋವ ದೇವರು ಇದ್ದಾನೆಂದು ನಿನಗನಿಸಿದೆಯಾ?— ಯೆಹೋವನನ್ನು ನೋಡಲು ನಮ್ಮಿಂದ ಸಾಧ್ಯವಿಲ್ಲ ನಿಜ. ಏಕೆಂದರೆ ಆತನಿಗೆ ನಮ್ಮಂಥ ಮಾಂಸ ರಕ್ತವಿರುವ ದೇಹವಿಲ್ಲ. ನಮ್ಮ ಕಣ್ಣುಗಳಿಗೆ ಕಾಣಿಸದ ದೇಹವಿದೆ. ಆದರೆ ಆತನು ನಿಜವಾಗಿಯೂ ಇದ್ದಾನೆ. ನಮ್ಮನ್ನು ನೋಡುತ್ತಾನೆ, ಗಮನಿಸುತ್ತಾನೆ. ನಮಗೆ ಯಾವಾಗ ಸಹಾಯದ ಅಗತ್ಯವಿದೆ ಎಂದು ಆತನಿಗೆ ಚೆನ್ನಾಗಿ ಗೊತ್ತಿದೆ. ನಾವು ಬೇರೆಯವರ ಜೊತೆ ಮಾತಾಡುವಂತೆಯೇ ಯೆಹೋವನೊಂದಿಗೆ ಸಹ ಪ್ರಾರ್ಥನೆಯ ಮೂಲಕ ಮಾತಾಡಸಾಧ್ಯವಿದೆ. ಹಾಗೆ ಮಾತಾಡುವುದನ್ನು ಯೆಹೋವನೂ ಇಷ್ಟಪಡುತ್ತಾನೆ.

ಆದುದರಿಂದ ನಿನಗೆ ಬೇಸರವಾದರೆ, ಒಂಟಿಯೆಂದು ಅನಿಸುವುದಾದರೆ ಏನು ಮಾಡಬೇಕು?— ಯೆಹೋವನೊಂದಿಗೆ ಮಾತಾಡು. ಆತನೊಂದಿಗೆ ಆಪ್ತ ಗೆಳೆತನ ಬೆಳೆಸಿಕೋ. ಆತನು ನಿನಗೆ ಸಾಂತ್ವನ ನೀಡುತ್ತಾನೆ. ನಿನಗೆ ಸಹಾಯ ಮಾಡುತ್ತಾನೆ. ಒಂಟಿ ಎಂಬ ಭಾವನೆ ನಿನ್ನನ್ನು ಕಾಡಬಹುದು. ಆದರೆ ಯೆಹೋವನು ನಿನ್ನನ್ನು ಬಹಳವಾಗಿ ಪ್ರೀತಿಸುತ್ತಾನೆ ಅನ್ನೋದನ್ನ ಯಾವತ್ತೂ ಮರೆಯಬೇಡ. ಆತನು ಸದಾ ನಿನ್ನೊಂದಿಗಿರುತ್ತಾನೆ. ಈಗ ಬೈಬಲ್‌ನಲ್ಲಿ 23ನೇ ಕೀರ್ತನೆಯನ್ನು ತೆರೆಯೋಣ. ಅಲ್ಲಿ 1ನೇ ವಚನದಿಂದಲೇ ಓದೋಣ. ಅದು ಹೀಗೆ ಆರಂಭವಾಗುತ್ತದೆ: “ಯೆಹೋವನು ನನಗೆ ಕುರುಬನು; ಕೊರತೆಪಡೆನು. ಆತನು ಹಸುರುಗಾವಲುಗಳಲ್ಲಿ ನನ್ನನ್ನು ತಂಗಿಸುತ್ತಾನೆ; ವಿಶ್ರಾಂತಿಕರವಾದ ನೀರುಗಳ ಬಳಿಗೆ ಬರಮಾಡುತ್ತಾನೆ.”

ಆ ಕೀರ್ತನೆಯನ್ನು ಬರೆದವನು 4ನೇ ವಚನದಲ್ಲಿ ಏನು ತಿಳಿಸುತ್ತಾನೆಂದು ಗಮನಿಸು: “ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೆನು; ನಿನ್ನ ದೊಣ್ಣೆಯೂ ನಿನ್ನ ಕೋಲೂ ನನಗೆ ಧೈರ್ಯ ಕೊಡುತ್ತವೆ.” ಯೆಹೋವನಲ್ಲಿ ಭರವಸೆಯಿಡುವ ಪ್ರತಿಯೊಬ್ಬರಿಗೂ ಇದೇ ರೀತಿ ಅನಿಸುತ್ತದೆ. ತೊಂದರೆಯಲ್ಲಿರುವಾಗ ಅವರು ಧೈರ್ಯ ಸಾಂತ್ವನ ಪಡೆದುಕೊಳ್ಳುತ್ತಾರೆ. ನಿನಗೂ ಹಾಗೇ ಅನಿಸುತ್ತದಾ?—

ಪ್ರೀತಿ ಅಕ್ಕರೆಯಿರುವ ಕುರುಬನು ಹೇಗೆ ತನ್ನ ಮಂದೆಯನ್ನು ನೋಡಿಕೊಳ್ಳುತ್ತಾನೊ ಹಾಗೆಯೇ ಯೆಹೋವನು ತನ್ನ ಜನರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಆತನು ಅವರಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾನೆ. ಅವರೂ ಆತನನ್ನು ಸಂತೋಷದಿಂದ ಹಿಂಬಾಲಿಸುತ್ತಾರೆ. ತಮ್ಮ ಸುತ್ತಮುತ್ತಲೂ ಕಷ್ಟತೊಂದರೆಗಳೇ ತುಂಬಿರುವುದಾದರೂ ಅವರು ಭಯಪಡುವುದಿಲ್ಲ. ಕುರುಬರು ತಮ್ಮ ಕುರಿಗಳನ್ನು ಕ್ರೂರ ಮೃಗಗಳಿಂದ ರಕ್ಷಿಸಲು ದೊಣ್ಣೆ ಅಥವಾ ಕೋಲನ್ನು ಉಪಯೋಗಿಸುತ್ತಾರೆ. ಕುರುಬನಾಗಿದ್ದ ದಾವೀದನು ಯುವ ಪ್ರಾಯದವನಾಗಿದ್ದರೂ ಹೇಗೆ ಸಿಂಹ ಮತ್ತು ಕರಡಿಯಿಂದ ತನ್ನ ಕುರಿಗಳನ್ನು ರಕ್ಷಿಸಿದನು ಅಂತ ಬೈಬಲ್‌ ವಿವರಿಸುತ್ತದೆ. (1 ಸಮುವೇಲ 17:34-36) ಅದೇ ರೀತಿ ಯೆಹೋವ ದೇವರು ತಮ್ಮನ್ನು ಸಹ ಕಾಪಾಡುವನೆಂದು ದೇವಜನರಿಗೆ ಗೊತ್ತಿದೆ. ಅವರು ಯಾವುದಕ್ಕೂ ಅಂಜದೇ ಸುರಕ್ಷಿತವಾಗಿದ್ದಾರೆ. ಏಕೆಂದರೆ ಯೆಹೋವ ದೇವರೇ ಅವರೊಂದಿಗಿದ್ದಾನೆ.

ಕುರಿಗಳನ್ನು ಕಾಪಾಡುತ್ತಿರುವ ಈ ಕುರುಬನಂತೆ ಯಾರು ನಮ್ಮನ್ನು ತೊಂದರೆಗಳಿಂದ ಕಾಪಾಡುತ್ತಾರೆ?

ಯೆಹೋವನು ತನ್ನ ಕುರಿಗಳನ್ನು ನಿಜವಾಗಿಯೂ ಪ್ರೀತಿಸುತ್ತಾನೆ. ಅವುಗಳನ್ನು ಕೋಮಲವಾಗಿ ನೋಡಿಕೊಳ್ಳುತ್ತಾನೆ. ಆದುದರಿಂದಲೇ ಬೈಬಲ್‌ ಹೀಗೆ ಹೇಳುತ್ತದೆ: ‘ಆತನು ಕುರುಬನಂತೆ ತನ್ನ ಮಂದೆಯನ್ನು ಮೇಯಿಸುತ್ತಾ ಮುನ್ನಡೆಸುವನು. ಎಳೆಯ ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು.’—ಯೆಶಾಯ 40:11.

ಈ ರೀತಿ ಯೆಹೋವನು ಕಾಳಜಿ ಅಕ್ಕರೆಯಿಂದ ನಮ್ಮನ್ನು ನೋಡಿಕೊಳ್ಳುತ್ತಾನೆ ಅನ್ನೋ ವಿಷಯ ನಿನಗೆ ಸಾಂತ್ವನ ನೀಡುತ್ತೆ ತಾನೇ?— ಆತನ ಕುರಿಗಳಲ್ಲಿ ಒಬ್ಬನಾಗಿರಲು ನಿನಗೆ ಇಷ್ಟನಾ?— ಕುರಿಗಳು ತಮ್ಮ ಕುರುಬನ ಸ್ವರಕ್ಕೆ ಕಿವಿಗೊಡುತ್ತವೆ. ದೂರ ಹೋಗದೆ, ಆತನಿಗೆ ಹತ್ತಿರವಾಗಿ ಇರುತ್ತವೆ. ನೀನು ಯೆಹೋವನಿಗೆ ಕಿವಿಗೊಡುತ್ತೀಯಾ?— ಆತನಿಗೆ ಹತ್ತಿರವಾಗಿ ಇರುತ್ತೀಯಾ?— ಹಾಗಾದರೆ ಭಯಪಡಲೇ ಬೇಡ. ಯೆಹೋವನು ಸದಾ ನಿನ್ನೊಂದಿಗಿರುವನು.

ತನ್ನ ಸೇವೆಮಾಡುವವರನ್ನು ಯೆಹೋವನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ಇದರ ಬಗ್ಗೆ ಬೈಬಲ್‌ ಏನು ಹೇಳುತ್ತದೆಂದು ಓದೋಣ: ಕೀರ್ತನೆ 37:25; 55:22 ಮತ್ತು ಲೂಕ 12:29-31.