ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 19

ಜಗಳವಾಡುವುದು ಸರಿಯಾ?

ಜಗಳವಾಡುವುದು ಸರಿಯಾ?

ಯಾವಾಗಲೂ ಜಂಬ ಕೊಚ್ಚಿಕೊಳ್ಳುತ್ತಾ ಬೇರೆಯವರ ಜೊತೆ ಜಗಳ ಆಡುತ್ತಾ ಇರುವ ಹುಡುಗಿಯನ್ನೋ ಹುಡುಗನನ್ನೋ ನೀನು ನೋಡಿದ್ದಿಯಾ?— ಅಂಥ ಜಗಳಂಟರ ಜೊತೆ ನೀನು ಸ್ನೇಹ ಮಾಡುತ್ತೀಯಾ? ಅಥವಾ ಸಾಧು ಗುಣದ ಶಾಂತ ಸ್ವಭಾವದ ಮಕ್ಕಳೊಂದಿಗೆ ಸ್ನೇಹ ಮಾಡುತ್ತೀಯಾ?— ಶಾಂತ ಸ್ವಭಾವದವರ ಬಗ್ಗೆ ಮಹಾ ಬೋಧಕನು ಹೀಗೆ ಹೇಳಿದನು: “ಶಾಂತಿಶೀಲರು ಸಂತೋಷಿತರು; ಅವರು ‘ದೇವರ ಪುತ್ರರು’ ಎಂದು ಕರೆಯಲ್ಪಡುವರು.”—ಮತ್ತಾಯ 5:9.

ನಾವು ಸಮಾಧಾನದಿಂದ ಇದ್ದರೂ ಕೆಲವು ಜನರು ನಮಗೆ ಕೋಪ ಬರಿಸುವಂಥ ಕೆಲಸಗಳನ್ನು ಮಾಡುತ್ತಾರೆ. ನಿಜ ತಾನೆ?— ಆಗ ಅವರಿಗೆ ತಿರುಗಿ ಏನಾದರೂ ಕೇಡು ಮಾಡಿಬಿಡಬೇಕು ಅಂತ ನಮಗೆ ಅನಿಸಬಹುದು. ಒಮ್ಮೆ ಯೇಸುವಿನ ಶಿಷ್ಯರಿಗೂ ಇದೇ ರೀತಿ ಅನಿಸಿತು. ಅವರು ಯೇಸುವಿನೊಂದಿಗೆ ಯೆರೂಸಲೇಮಿಗೆ ಹೋಗುತ್ತಿದ್ದರು. ಆಗ ಏನಾಯಿತು ಅಂತ ಹೇಳ್ತೀನಿ ಕೇಳು.

ಸ್ವಲ್ಪ ದೂರ ಹೋದ ಮೇಲೆ ಯೇಸು ತನ್ನ ಕೆಲವು ಶಿಷ್ಯರನ್ನು ಮುಂದೆ ಕಳುಹಿಸಿಕೊಟ್ಟನು. ಹತ್ತಿರದಲ್ಲಿ ಇರುವ ಸಮಾರ್ಯದ ಹಳ್ಳಿಯಲ್ಲಿ ವಿಶ್ರಾಂತಿಗೆ ಏರ್ಪಾಡು ಮಾಡುವಂತೆ ಅವರನ್ನು ಮುಂದೆ ಕಳುಹಿಸಿದನು. ಸಮಾರ್ಯದವರು ಯಾರು ಅಂತ ಗೊತ್ತು ತಾನೆ? ಹೌದು, ಅವರು ಬೇರೆ ಧರ್ಮದವರು. ಅವರಿಗೆ ಯೆಹೂದ್ಯರನ್ನು ನೋಡಿದ್ರೆ ಆಗುತ್ತಿರಲಿಲ್ಲ. ಅದಕ್ಕೆ ಆ ಜನರು ಇವರಿಗೆ ತಂಗಲು ಜಾಗ ಕೊಡಲಿಲ್ಲ. ಅಷ್ಟೇ ಅಲ್ಲ, ಯೆರೂಸಲೇಮಿನ ದೇವಾಲಯಕ್ಕೆ ಆರಾಧನೆಗೆ ಹೋಗುವವರನ್ನು ನೋಡಿದರೆ ಅವರು ಕೋಪದಿಂದ ಕಿಡಿಕಾರುತ್ತಿದ್ದರು.

ಸಮಾರ್ಯದವರ ಮೇಲೆ ಕೋಪಗೊಂಡ ಯಾಕೋಬ ಯೋಹಾನರು ಏನು ಮಾಡಲು ಬಯಸಿದರು?

ಒಂದುವೇಳೆ ನಿನಗೆ ಯಾರಾದರೂ ಹೀಗೆ ಮಾಡಿದ್ದರೆ ನೀನೇನು ಮಾಡುತ್ತಿದ್ದೆ? ನಿನಗೆ ಕೋಪ ಬರುತ್ತಿತ್ತಾ? ನೀನು ಅವರ ಹತ್ತಿರ ಜಗಳ ಆಡುತ್ತಿದ್ಯಾ?— ಯಾಕೋಬ ಯೋಹಾನ ಎಂಬ ಶಿಷ್ಯರಿಗೂ ಸಿಟ್ಟು ನೆತ್ತಿಗೇರಿತ್ತು. ಅವರು ಏನು ಮಾಡಿದರು ಗೊತ್ತಾ? ‘ಆಕಾಶದಿಂದ ಬೆಂಕಿಯು ಬಿದ್ದು ಇವರನ್ನು ನಾಶಮಾಡಿಬಿಡಲಿ ಎಂದು ನಾವು ಹೇಳಬೇಕಾ?’ ಅಂತ ಯೇಸುವನ್ನು ಕೇಳಿದರು. ಅವರ ಈ ದುಡುಕು ಸ್ವಭಾವದಿಂದಲೇ ಯೇಸು ಅವರನ್ನು ‘ಗುಡುಗಿನ ಪುತ್ರರು’ ಎಂದು ಕರೆಯುತ್ತಿದ್ದನು. ಆದರೆ ಯೇಸು ಈಗ ಅವರಿಗೆ ಬುದ್ಧಿ ಹೇಳಿದನು. ಬೇರೆಯವರೊಂದಿಗೆ ಹಾಗೆ ನಡೆದುಕೊಳ್ಳುವುದು ಸರಿಯಲ್ಲ ಅಂತ ಕಲಿಸಿದನು.—ಲೂಕ 9:51-56; ಮಾರ್ಕ 3:17.

ಕೆಲವೊಮ್ಮೆ ನಮ್ಮನ್ನು ಜನರು ಕೀಳಾಗಿ ನೋಡಬಹುದು. ಉದಾಹರಣೆಗೆ, ಕೆಲವು ಮಕ್ಕಳು ನಿನ್ನನ್ನು ಆಟಕ್ಕೆ ಸೇರಿಸಿಕೊಳ್ಳದೇ ಇರಬಹುದು. “ನಮ್‌ ಜೊತೆ ಆಟಕ್ಕೆ ಬರಬೇಡ” ಅಂತ ತಿರಸ್ಕಾರದಿಂದ ಹೇಳಬಹುದು. ಆಗ ನಿನಗೆ ಹೇಗನಿಸುತ್ತೆ? ಅವರ ಮಾತು ವರ್ತನೆಯಿಂದ ನಿನ್ನ ಪುಟ್ಟ ಮನಸ್ಸಿಗೆ ನೋವಾಗುತ್ತೆ ಅಲ್ವಾ? ಅವರ ಸೊಕ್ಕು ಇಳಿಸಬೇಕು ಅಂತ ನಿನಗೆ ಮನಸ್ಸಾಗಬಹುದು. ಆದರೆ ಅದು ಸರಿನಾ?—

ಬೈಬಲ್‌ ಏನು ಹೇಳುತ್ತೆ ಅಂತ ನೋಡೋಣ. ಜ್ಞಾನೋಕ್ತಿ 24ನೇ ಅಧ್ಯಾಯದ 29ನೇ ವಚನವನ್ನು ತೆರೆಯೋಣ. ಅಲ್ಲಿ ಹೀಗಿದೆ: “ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆನು, ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿತೀರಿಸುವೆನು ಅಂದುಕೊಳ್ಳಬೇಡ.”

ಈ ವಚನದ ಅರ್ಥ ಏನು ಅಂತ ಹೇಳುತ್ತೀಯಾ?— ನಾವು ಸೇಡು ತೀರಿಸಿಕೊಳ್ಳಲಿಕ್ಕೆ ಹೋಗಲೇಬಾರದು ಅಂತ ಈ ವಚನ ಹೇಳುತ್ತಿದೆ. ಒಬ್ಬ ವ್ಯಕ್ತಿ ನಮ್ಮೊಂದಿಗೆ ಕೆಟ್ಟ ರೀತಿಯಲ್ಲಿ ವರ್ತಿಸಿದ್ದಾನೆ ಎಂಬ ಕಾರಣಕ್ಕೆ ನಾವು ಸಹ ಅವನೊಂದಿಗೆ ಕೆಟ್ಟ ರೀತಿಯಲ್ಲಿ ವರ್ತಿಸಬಾರದು. ಆದರೆ ಯಾರಾದರೂ ಕಾಲು ಕೆರೆದು ಜಗಳಕ್ಕೆ ಬಂದರೆ? ಒಂದು ವೇಳೆ ಅವನು ನಿನಗೆ ಅಡ್ಡಹೆಸರಿಟ್ಟು ಎಲ್ಲರ ಮುಂದೆ ಆ ಹೆಸರು ಹೇಳಿ ನಿನಗೆ ಕೋಪಬರಿಸಲು ಪ್ರಯತ್ನಿಸಬಹುದು. ಅಥವಾ ‘ಹೇಡಿ, ಅಂಜುಬುರುಕ, ಪುಕ್ಕಲ’ ಅಂತೆಲ್ಲಾ ಹೇಳಿ ಗೇಲಿ ಮಾಡಲೂಬಹುದು. ಆಗ ನೀನು ಏನು ಮಾಡಬೇಕು? ಅವನೊಂದಿಗೆ ಜಗಳಕ್ಕೆ ನಿಲ್ಲಬೇಕಾ?—

ಈ ಪ್ರಶ್ನೆಗೂ ಬೈಬಲೇ ಉತ್ತರ ಕೊಡುತ್ತೆ. ಈ ಬಾರಿ ಮತ್ತಾಯ 5ನೇ ಅಧ್ಯಾಯದ 39ನೇ ವಚನವನ್ನು ತೆರೆಯೋಣ. ಅಲ್ಲಿ ಯೇಸು, “ದುಷ್ಟನನ್ನು ಎದುರಿಸಬೇಡಿ; ನಿನ್ನ ಬಲಗೆನ್ನೆಯ ಮೇಲೆ ಹೊಡೆಯುವವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು” ಎಂದು ಹೇಳಿದನು. ಯೇಸುವಿನ ಮಾತುಗಳ ಅರ್ಥ ಏನಾಗಿತ್ತು? ಯಾರಾದರೂ ನಿನಗೆ ಒಂದು ಕೆನ್ನೆಗೆ ಮುಷ್ಟಿಯಿಂದ ಗುದ್ದಿದರೆ ಇನ್ನೊಂದು ಕೆನ್ನೆಯನ್ನು ತೋರಿಸಿ ಗುದ್ದಿಸಿಕೊಳ್ಳಬೇಕು ಅಂತನಾ?—

ಇಲ್ಲ, ಯೇಸುವಿನ ಮಾತಿನ ಅರ್ಥ ಖಂಡಿತ ಅದಾಗಿರಲಿಲ್ಲ. ಮುಷ್ಟಿಯಿಂದ ಗುದ್ದುವುದಕ್ಕೂ ಕೈಯಿಂದ ಹೊಡೆಯುವುದಕ್ಕೂ ವ್ಯತ್ಯಾಸವಿದೆ. ಕೈಯಿಂದ ಹೊಡೆಯುವಾಗ ಅಥವಾ ತಟ್ಟುವಾಗ ಕೆಲವೊಮ್ಮೆ ತುಂಬಾ ನೋವಾಗಲ್ಲ. ಅದು ನಮ್ನನ್ನು ಸುಮ್ಮನ್ನೇ ದೂಡಿದಂತೆ ಇರುತ್ತದೆ. ನಿನಗೆ ಕೋಪ ಬರಿಸಬೇಕು, ನೀನಾಗಿಯೇ ಅವನೊಟ್ಟಿಗೆ ಜಗಳಕ್ಕೆ ಹೋಗಬೇಕು ಅಂತಾನೇ ಒಬ್ಬನು ನಿನಗೆ ಸುಮ್ನೆ ಸುಮ್ನೆ ಹೊಡೆಯಬಹುದು. ಆಗ ನಿನಗೆ ಕೋಪ ಬಂದು ಅವನನ್ನು ನೂಕಿದರೆ ಏನಾಗುತ್ತದೆ?— ಜಗಳ ಶುರು ಆಗುತ್ತದೆ.

ತನ್ನ ಹಿಂಬಾಲಕರು ಜಗಳದಲ್ಲಿ ಸಿಕ್ಕಿಹಾಕಿಕೊಳ್ಳುವುದು ಯೇಸುವಿಗೆ ಇಷ್ಟವಿರಲಿಲ್ಲ. ಆದುದರಿಂದ ಯಾರಾದರೂ ನಮ್ಮ ಕೆನ್ನೆಗೆ ಹೊಡೆದರೆ ನಾವು ತಿರುಗಿ ಅವರ ಕೆನ್ನೆಗೆ ಹೊಡೆಯಬಾರದು ಅಂತ ಅವನು ಹೇಳಿದನು. ನಾವು ಕೋಪ ಮಾಡಿಕೊಂಡು ಜಗಳಕ್ಕೆ ಹೋಗಬಾರದು. ಒಂದುವೇಳೆ ನಾವು ಜಗಳ ಆಡಿದರೆ, ಜಗಳ ಆರಂಭಿಸಿದವನಿಗೂ ನಮಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ.

ಆದರೆ ಬೇಕೆಂದು ಜಗಳ ಶುರುಮಾಡಿದರು ಅಂತ ಇಟ್ಟುಕೋ. ಆಗ ಏನು ಮಾಡೋದು ಒಳ್ಳೇದು?— ಅಲ್ಲಿಂದ ಜಾಗ ಖಾಲಿ ಮಾಡೋದು ಒಳ್ಳೇದು. ನಿನಗೆ ಕೋಪ ಬರಿಸಲು ಎರಡು ಮೂರು ಸಲ ಅವನು ಮತ್ತೆ ಮತ್ತೆ ನಿನ್ನನ್ನು ನೂಕಬಹುದು. ಆದರೆ ನೀನು ಕೋಪ ಮಾಡಿಕೊಳ್ಳದೇ ಇದ್ದಾಗ ಅವನು ತಳ್ಳೋದನ್ನ ನಿಲ್ಲಿಸಿಬಿಡಬಹುದು. ನೀನು ಅಲ್ಲಿಂದ ಜಾಗ ಖಾಲಿ ಮಾಡಿದರೆ ನೀನೇನು ಹೇಡಿಯಾಗಿ ಬಿಡುವುದಿಲ್ಲ. ಯಾವುದು ಸರಿಯಾಗಿದೆಯೊ ಅದನ್ನು ಮಾಡಲು ನಿನಗೆ ಧೈರ್ಯವಿದೆ ಅಂತ ಅದು ತೋರಿಸಿಕೊಡುತ್ತೆ.

ಯಾರಾದರೂ ಬೇಕುಬೇಕೆಂದೇ ಜಗಳಕ್ಕೆ ಬಂದರೆ ನಾವು ಏನು ಮಾಡಬೇಕು?

ಆದರೆ ಅಲ್ಲಿಂದ ಜಾಗ ಖಾಲಿಮಾಡದೇ ಅವನೊಟ್ಟಿಗೆ ಜಗಳ ಆಡಿ ನೀನೇ ಗೆದ್ದುಬಿಟ್ಟೆ ಅಂತ ಇಟ್ಟುಕೋ. ಆಮೇಲೆ ಏನಾಗಬಹುದು?— ನಿನ್ನ ಕೈಯಲ್ಲಿ ಹೊಡೆಸಿಕೊಂಡವನು ಸುಮ್ಮನೆ ಇರುತ್ತಾನಾ. ತನ್ನ ಸ್ನೇಹಿತರೊಡನೆ ಗುಂಪುಕಟ್ಟಿಕೊಂಡು ನಿನ್ನನ್ನು ಹೊಡೆಯಲು ಬರಬಹುದು. ದೊಣ್ಣೆ ಅಥವಾ ಚೂರಿಯಿಂದ ಗಾಯ ಮಾಡಲೂಬಹುದು. ಈಗ ಅರ್ಥ ಆಯಿತಾ ನಾವು ಯಾಕೆ ಜಗಳಕ್ಕೆ ಹೋಗಬಾರದೆಂದು ಯೇಸು ಹೇಳಿದನು ಅಂತ?—

ಸರಿ, ನಾವೇನೊ ಜಗಳಕ್ಕೆ ಹೋಗಲ್ಲ. ಬೇರೆಯವರು ಜಗಳ ಆಡುತ್ತಿದ್ದರೆ ಏನು ಮಾಡಬೇಕು? ಅವರಲ್ಲಿ ಯಾರಾದರೊಬ್ಬರ ಪಕ್ಷವಹಿಸಬೇಕಾ?— ಬೈಬಲ್‌ ಏನು ಹೇಳುತ್ತದೆಂದು ನೋಡೋಣ. ಜ್ಞಾನೋಕ್ತಿ 26ನೇ ಅಧ್ಯಾಯದ 17ನೇ ವಚನವನ್ನು ತೆರೆ. ಅದು ಹೀಗೆ ಹೇಳುತ್ತದೆ: “ಒಬ್ಬನು ದಾರಿಯಲ್ಲಿ ಹೋಗುತ್ತಾ ಪರರ ವ್ಯಾಜ್ಯಕ್ಕೆ ಸೇರಿ ರೇಗಿಕೊಳ್ಳುವದು ನಾಯಿಯನ್ನು ಕಿವಿಹಿಡಿದ ಹಾಗೆ.”

ಬೇರೆಯವರು ಜಗಳ ಮಾಡುವಾಗ ಮಧ್ಯೆ ಹೋಗುವುದು ನಾಯಿಯ ಕಿವಿ ಹಿಡಿದು ಎಳೆದಂತಿರುತ್ತದೆ. ಹಾಗಾಗಿ ಅಪಾಯವನ್ನು ತಂದುಕೊಳ್ಳಬೇಡ

ನೀನು ನಾಯಿಯ ಕಿವಿ ಹಿಡಿದು ಎಳೆದರೆ ಏನಾಗುತ್ತೆ? ನಾಯಿಗೆ ನೋವಾಗುತ್ತೆ. ಅದು ನಿನ್ನನ್ನು ಗಬಕ್ಕ್‌ ಅಂತ ಕಚ್ಚಿಬಿಡುತ್ತೆ. ಹಾಗಾಗಿ ಭಯದಿಂದ ನೀನು ಅದರ ಕಿವಿಯನ್ನು ಬಿಡೋದಿಲ್ಲ ಅಲ್ವಾ. ಇನ್ನೂ ಗಟ್ಟಿಯಾಗಿ ಹಿಡಿದುಕೊಳ್ಳುತ್ತಿ. ಆದರೆ ನಾಯಿನೂ ಅಷ್ಟೇ, ನಿನ್ನ ಕೈಯಿಂದ ಬಿಡಿಸಿಕೊಳ್ಳಲಿಕ್ಕೆ ನೋಡುತ್ತೆ. ನೀನು ಬಿಟ್ಟೆ ಅಂತ ಇಟ್ಕೋ, ಮುಗಿಯಿತು. ಬಲವಾಗಿ ಕಚ್ಚಿಬಿಡುತ್ತೆ. ಹಾಗಂತ ಕಿವಿನಾ ಹಿಡಿದುಕೊಂಡೆ ಇರೋಕ್ಕಾಗುತ್ತಾ?—

ಹಾಗೆನೇ, ಬೇರೆಯವರು ಜಗಳವಾಡುವಾಗ ನಾವು ಮಧ್ಯೆ ಹೋಗಿ ಮೂಗು ತೂರಿಸಿದರೆ ನಮ್ಮ ಪರಿಸ್ಥಿತಿಯೂ ಅದೇ ರೀತಿ ಇರುತ್ತೆ. ಯಾರು ಜಗಳ ಶುರು ಮಾಡಿದರು, ಯಾಕೆ ಶುರು ಮಾಡಿದರು ಅಂತ ನಮಗೆ ಗೊತ್ತಿರಲ್ಲ. ಬಹುಶಃ ಒಬ್ಬನು ಇನ್ನೊಬ್ಬನ ವಸ್ತು ಕದ್ದಿರಬಹುದು. ಅದಕ್ಕೆ ಕದ್ದವನು ಏಟು ತಿನ್ನುತ್ತಿರಬಹುದು. ನಾವು ಹೋಗಿ ಅವನಿಗೆ ಸಹಾಯಮಾಡಿದರೆ ಹೇಗಿರುತ್ತೆ? ಒಬ್ಬ ಕಳ್ಳನಿಗೆ ಸಹಾಯಮಾಡಿದ ಹಾಗೆ ಆಗುತ್ತದೆ. ಅದು ಸರಿಯಲ್ಲ ಅಲ್ವಾ?

ಹಾಗಾದರೆ ಬೇರೆಯವರು ಜಗಳವಾಡುವುದನ್ನು ನೋಡಿದರೆ ನೀನು ಏನು ಮಾಡಬೇಕು?— ಸ್ಕೂಲ್‌ನಲ್ಲಾದರೆ ಕೂಡಲೇ ಓಡಿಹೋಗಿ ಟೀಚರ್‌ಗೆ ಹೇಳಬಹುದು. ಸ್ಕೂಲಿನಿಂದ ಹೊರಗೆಯಾದರೆ ನಿನ್ನ ಅಪ್ಪ, ಅಮ್ಮನನ್ನೊ ಅಥವಾ ಪೊಲೀಸ್‌ರನ್ನೊ ಕರೆಯಬಹುದು. ಬೇರೆಯವರು ಜಗಳವಾಡುತ್ತಿರುವಾಗ ಮಧ್ಯೆ ಹೋಗಿ ಒಬ್ಬರ ಪಕ್ಷವಹಿಸುವ ಬದಲು ನಾವು ಶಾಂತವಾಗಿರಬೇಕು.

ಬೇರೆಯವರು ಜಗಳವಾಡುವುದನ್ನು ನೀನು ನೋಡಿದರೆ ಏನು ಮಾಡಬೇಕು?

ಯೇಸುವಿನ ನಿಜ ಶಿಷ್ಯರು ಜಗಳದಿಂದ ದೂರ ಇರಲು ಪ್ರಯತ್ನಿಸುತ್ತಾರೆ. ಹಾಗೆ ಮಾಡುವುದಾದರೆ ನಾವು ಹೇಡಿಗಳಲ್ಲ ಬದಲಾಗಿ ಯಾವುದು ಸರಿಯಾಗಿದೆಯೊ ಅದನ್ನು ಮಾಡಲು ಧೈರ್ಯ ನಮಗಿದೆ ಅಂತ ತೋರಿಸಿಕೊಡುತ್ತೇವೆ. ಯೇಸುವಿನ ಶಿಷ್ಯರು ‘ಜಗಳವಾಡದೆ ಎಲ್ಲರೊಂದಿಗೆ ಸಾಧುಸ್ವಭಾವದಿಂದ ವರ್ತಿಸಬೇಕೆಂದು’ ಬೈಬಲ್‌ ಹೇಳುತ್ತದೆ.—2 ತಿಮೊಥೆಯ 2:24.

ಜಗಳದಿಂದ ದೂರವಿರಲು ನಮಗೆ ಸಹಾಯಮಾಡುವ ಹೆಚ್ಚಿನ ಸಲಹೆಗಳನ್ನು ಓದಿ ನೋಡೋಣ: ರೋಮನ್ನರಿಗೆ 12:17-21 ಮತ್ತು 1 ಪೇತ್ರ 3:10, 11.