ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 26

ಒಳ್ಳೇದನ್ನು ಮಾಡುವುದು ಸುಲಭವಲ್ಲ

ಒಳ್ಳೇದನ್ನು ಮಾಡುವುದು ಸುಲಭವಲ್ಲ

ಸೌಲನು ದುಷ್ಟಕಾರ್ಯಗಳನ್ನು ಮಾಡುತ್ತಿದ್ದಾಗ ಯಾರಿಗೆ ತುಂಬಾ ಸಂತೋಷವಾಗುತ್ತಿತ್ತು?— ಪಿಶಾಚನಾದ ಸೈತಾನನಿಗೆ. ಅವನಿಗೆ ಮಾತ್ರ ಅಲ್ಲ ಯೆಹೂದಿ ಧಾರ್ಮಿಕ ನಾಯಕರಿಗೂ ಸಂತೋಷವಾಗುತ್ತಿತ್ತು. ಆದರೆ ಸೌಲನು ಪೌಲನೆಂಬ ಹೆಸರಿನಿಂದ ಪ್ರಖ್ಯಾತನಾಗಿ ಮಹಾ ಬೋಧಕನ ಶಿಷ್ಯನಾದಾಗ ಅದೇ ಧಾರ್ಮಿಕ ನಾಯಕರು ಅವನನ್ನು ದ್ವೇಷಿಸತೊಡಗಿದರು. ಒಳ್ಳೇದನ್ನು ಮಾಡುವುದು ಯೇಸುವಿನ ಶಿಷ್ಯರಿಗೆ ಯಾಕೆ ಅಷ್ಟು ಕಷ್ಟ ಅಂತ ಈಗ ನಿನಗೆ ತಿಳಿತಾ?—

ಒಳ್ಳೇದನ್ನು ಮಾಡಿದಕ್ಕಾಗಿ ಪೌಲನು ಯಾವ ಕಷ್ಟ ಅನುಭವಿಸಿದನು?

ಒಂದ್ಸಲ, ಅನನೀಯನೆಂಬ ಮಹಾ ಯಾಜಕನು ಪೌಲನ ಬಾಯ ಮೇಲೆ ಗುದ್ದುವಂತೆ ತನ್ನ ಜೊತೆಯಿದ್ದವರಿಗೆ ಹೇಳಿದನು. ಅಲ್ಲದೆ, ಪೌಲನನ್ನು ಜೈಲಿಗೆ ಹಾಕಿಸಲೂ ಅವನು ಪ್ರಯತ್ನಿಸಿದನು. ಯೇಸುವಿನ ಶಿಷ್ಯನಾದ ಮೇಲೆ ಪೌಲನು ತುಂಬಾ ಕಷ್ಟವನ್ನು ಅನುಭವಿಸಬೇಕಾಯಿತು. ಕೆಟ್ಟ ಜನರು ಪೌಲನನ್ನು ಹೊಡೆದರು ಹಾಗೂ ದೊಡ್ಡ ದೊಡ್ಡ ಕಲ್ಲುಗಳನ್ನು ಎಸೆದು ಕೊಲ್ಲಲೂ ಪ್ರಯತ್ನಿಸಿದರು.—ಅಪೊಸ್ತಲರ ಕಾರ್ಯಗಳು 23:1, 2; 2 ಕೊರಿಂಥ 11:24, 25.

ದೇವರಿಗೆ ಇಷ್ಟವಾಗದಂಥ ಕೆಲಸಗಳನ್ನೇ ಮಾಡುವಂತೆ ಅನೇಕ ಜನರು ನಮ್ಮನ್ನು ಒತ್ತಾಯಿಸಲು ಪ್ರಯತ್ನಿಸುತ್ತಾರೆ. ಆದರೆ ಒಳ್ಳೇ ವಿಷಯಗಳನ್ನು ಮಾಡಲು ನಿನಗೆ ಪೂರ್ತಿ ಮನಸ್ಸಿದೆಯಾ? ಇತರರು ನಿನ್ನನ್ನು ಹಗೆಮಾಡಿದರೂ ಬಿಟ್ಟುಕೊಡದೆ ನೀನು ಒಳ್ಳೇದನ್ನೇ ಮಾಡುತ್ತೀಯಾ? ಹಾಗೆ ಮಾಡಲು ಧೈರ್ಯ ಬೇಕೇ ಬೇಕು ಅಲ್ವಾ?—

ಜನರೇಕೆ ನಾವು ಒಳ್ಳೇ ಕೆಲಸಗಳನ್ನು ಮಾಡುವಾಗ ನಮ್ಮನ್ನು ಹಗೆ ಮಾಡಬೇಕು, ಅವರು ಸಂತೋಷ ಪಡಬೇಕಲ್ವಾ ಅಂತ ನೀನು ಯೋಚಿಸಬಹುದು. ಅದು ಸರಿನೇ. ಏಕೆಂದರೆ ಯೇಸು ಒಳ್ಳೇ ಕೆಲಸಗಳನ್ನು ಮಾಡಿದಾಗ ಅನೇಕ ಜನರು ಅವನನ್ನು ಇಷ್ಟಪಟ್ಟರು. ಒಂದ್ಸಲ ಅಂತೂ, ಯೇಸು ಉಳುಕೊಂಡಿದ್ದ ಮನೆಯ ಹತ್ತಿರ ಜನಸಾಗರವೇ ಸೇರಿತ್ತು. ಯಾಕೆ ಗೊತ್ತಾ? ಯಾಕೆಂದರೆ ಅಲ್ಲಿ ಯೇಸು ಜನರ ರೋಗಗಳನ್ನು ವಾಸಿಮಾಡುತ್ತಿದ್ದನು.—ಮಾರ್ಕ 1:33.

ಆದರೆ ಯೇಸು ಕಲಿಸುತ್ತಿದ್ದ ವಿಷಯಗಳನ್ನು ಕೆಲವೊಮ್ಮೆ ಜನರು ಇಷ್ಟಪಡುತ್ತಿರಲಿಲ್ಲ. ಅವನು ಯಾವಾಗಲೂ ಸರಿಯಾದದ್ದನ್ನೇ ಕಲಿಸುತ್ತಿದ್ದನಾದರೂ ಕೆಲವರಿಗೆ ಅದು ಹಿಡಿಸುತ್ತಿರಲಿಲ್ಲ. ಅವನು ಸತ್ಯವನ್ನೇ ಹೇಳುತ್ತಿದ್ದ ಕಾರಣ ಅವನನ್ನು ದ್ವೇಷಿಸಿದರು. ಇಂಥದೊಂದು ಘಟನೆ ನಜರೇತೆಂಬ ಊರಿನಲ್ಲಿ ನಡೆಯಿತು. ಆ ಊರಿನಲ್ಲೇ ಯೇಸು ಬೆಳೆದು ದೊಡ್ಡವನಾಗಿದ್ದನು. ಒಂದು ದಿನ ಅವನು ಅಲ್ಲಿನ ಸಭಾಮಂದಿರಕ್ಕೆ ಹೋದನು. ಸಭಾಮಂದಿರ ಅಂದರೆ ಯೆಹೂದ್ಯರು ದೇವರ ಆರಾಧನೆಗೆಂದು ಕೂಡಿಬರುತ್ತಿದ್ದ ಸ್ಥಳ.

ಸಭಾಮಂದಿರದಲ್ಲಿ ಯೇಸು ಶಾಸ್ತ್ರವಚನಗಳನ್ನು ವಿವರಿಸುತ್ತಾ ಒಂದು ಒಳ್ಳೇ ಭಾಷಣ ಕೊಟ್ಟನು. ಮೊದಮೊದಲಿಗೆ ಅವನ ಭಾಷಣ ಜನರಿಗೆ ಇಷ್ಟವಾಯಿತು. ಅವನಾಡಿದ ಮನಸೂರೆಗೊಳಿಸುವ ಮಾತುಗಳಿಂದ ಅವರು ಮೂಕವಿಸ್ಮಿತರಾದರು. ತಮ್ಮ ಊರಿನಲ್ಲೇ ಬೆಳೆದು ದೊಡ್ಡವನಾದ ಯುವಕ ಇವನೇನಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡರು.

ಆದರೆ ಯೇಸು ಭಾಷಣದಲ್ಲಿ ಇನ್ನೊಂದು ವಿಷಯದ ಕುರಿತು ಮಾತಾಡತೊಡಗಿದಾಗ ಅವರ ಮುಖಚರ್ಯೆ ಬದಲಾಯಿತು. ಯೆಹೂದ್ಯರಲ್ಲದ ಜನರಿಗೆ ದೇವರು ತೋರಿಸಿದ ವಿಶೇಷ ಅನುಗ್ರಹದ ಕುರಿತು ಮಾತಾಡಿದನು. ಅದನ್ನು ಕೇಳಿದೊಡನೆ ಸಭಾಮಂದಿರದಲ್ಲಿ ಇದ್ದವರಿಗೆಲ್ಲಾ ಸಿಟ್ಟು ನೆತ್ತಿಗೇರಿತು. ಏಕೆ ಗೊತ್ತಾ?— ಏಕೆಂದರೆ ತಮ್ಮ ಮೇಲೆ ಮಾತ್ರ ದೇವರ ವಿಶೇಷ ಅನುಗ್ರಹವಿದೆ ಎಂದವರು ಭಾವಿಸಿದ್ದರು. ಬೇರೆ ಜನಾಂಗದವರಿಗಿಂತಲೂ ತಾವೇ ಮೇಲು ಎಂಬ ಅನಿಸಿಕೆ ಅವರಿಗಿತ್ತು. ಹಾಗಾಗಿ ಯೇಸುವಿನ ಮಾತು ಅವರಿಗೆ ಒಂಚೂರೂ ಇಷ್ಟವಾಗಲಿಲ್ಲ. ದ್ವೇಷದ ಕಿಡಿ ಕಾರತೊಡಗಿದರು. ಕೋಪ ಆವೇಶದಿಂದ ಕೂಡಿದ ಅವರು ಯೇಸುವಿಗೆ ಏನು ಮಾಡಿದರು ಗೊತ್ತಾ?—

ಬೈಬಲ್‌ ಹೀಗೆ ತಿಳಿಸುತ್ತದೆ: ‘ಆ ಜನರು ಯೇಸುವನ್ನು ಊರ ಹೊರಗೆ ಅಟ್ಟಿ ಗುಡ್ಡದ ತುದಿಗೆ ಕರೆದುಕೊಂಡು ಹೋದರು. ಅಲ್ಲಿಂದ ಆಳವಾದ ಪ್ರಪಾತಕ್ಕೆ ದೂಡಿ ಸಾಯಿಸಬೇಕೆಂದಿದ್ದರು. ಆದರೆ ಯೇಸು ಅವರ ಕೈಯಿಂದ ತಪ್ಪಿಸಿಕೊಂಡನು.’—ಲೂಕ 4:16-30.

ಈ ಜನರು ಏಕೆ ಯೇಸುವನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ?

ಒಂದುವೇಳೆ ಆ ಜನರು ನಿನಗೆ ಹೀಗೆ ಮಾಡಿದ್ದರು ಅಂತ ಇಟ್ಟುಕೋ. ದೇವರ ಕುರಿತು ತಿಳಿಸಲು ಆ ಜನರ ಬಳಿ ಪುನಃ ಹೋಗುತ್ತಿದ್ಯಾ?— ಅದಕ್ಕೆ ಧೈರ್ಯ ಎದೆಗಾರಿಕೆ ಬೇಕಲ್ವಾ?— ಹ್ಞಂ, ಆ ಘಟನೆ ನಡೆದು ಸುಮಾರು ಒಂದು ವರ್ಷದ ನಂತರ ಯೇಸು ಪುನಃ ನಜರೇತ್‌ ಊರಿಗೆ ಹೋದನು. ಅಲ್ಲಿ “ಸಭಾಮಂದಿರದಲ್ಲಿ ಅವರಿಗೆ ಬೋಧಿಸಲಾರಂಭಿಸಿದನು” ಎಂದು ಬೈಬಲು ತಿಳಿಸುತ್ತದೆ. ದೇವರ ಮೇಲೆ ಕಿಂಚಿತ್ತೂ ಪ್ರೀತಿ ಇರದ ಜನರಿಗೆ ಭಯಪಟ್ಟು ಅವನು ದೇವರ ಕುರಿತ ಸತ್ಯ ಹೇಳುವುದನ್ನು ನಿಲ್ಲಿಸಲಿಲ್ಲ.—ಮತ್ತಾಯ 13:54.

ಈಗ ಇನ್ನೊಂದು ಘಟನೆಯನ್ನು ನೋಡೋಣ. ಅಂದು ಸಬ್ಬತ್‌ ದಿನವಾಗಿತ್ತು. ಸಬ್ಬತ್‌ ಇಸ್ರಾಯೇಲ್ಯರ ವಿಶ್ರಾಂತಿಯ ದಿನ. ಅವತ್ತು ಯೇಸು ಸಭಾಮಂದಿರಕ್ಕೆ ಹೋದಾಗ ಕೈ ಊನವಾಗಿದ್ದ ಒಬ್ಬ ಮನುಷ್ಯನು ಅಲ್ಲಿದ್ದನು. ಈ ರೋಗವನ್ನು ವಾಸಿಮಾಡುವ ಶಕ್ತಿ ಯೇಸುವಿಗಿತ್ತು. ಆದರೆ ಅಲ್ಲಿದ್ದ ಕೆಲವರು ತನ್ನನ್ನು ತೊಂದರೆಯಲ್ಲಿ ಸಿಕ್ಕಿಸಿ ಹಾಕಲು ಕಾಯುತ್ತಿರುವುದು ಯೇಸುವಿಗೆ ಗೊತ್ತಿತ್ತು. ಹಾಗಾಗಿ ಅವನು ಏನು ಮಾಡಿದನು ಗೊತ್ತಾ?— ಆ ಜನರಿಗೆ, ‘ನಿಮ್ಮ ಬಳಿ ಒಂದೇ ಒಂದು ಕುರಿಯಿದ್ದು ಅದು ಸಬ್ಬತ್‌ ದಿನದಲ್ಲಿ ದೊಡ್ಡ ಗುಂಡಿಯೊಳಗೆ ಬಿದ್ದರೆ ನೀವು ಅದನ್ನು ಮೇಲಕ್ಕೆ ಎತ್ತುತ್ತೀರೋ ಇಲ್ಲವೋ?’ ಎಂದು ಕೇಳಿದನು.

ಸಬ್ಬತ್‌ ವಿಶ್ರಾಂತಿಯ ದಿನವಾಗಿದ್ದರೂ ಅವರು ಗುಂಡಿಯಲ್ಲಿ ಬಿದ್ದಿದ್ದ ತಮ್ಮ ಕುರಿಯನ್ನು ಖಂಡಿತ ಮೇಲಕ್ಕೆ ಎತ್ತುತ್ತಿದ್ದರು. ಅದು ಯೇಸುವಿಗೂ ಗೊತ್ತಿತ್ತು. ಅವನು ಅವರಿಗೆ, ‘ಮನುಷ್ಯನು ಕುರಿಗಿಂತ ಬಹುಮೂಲ್ಯನಾಗಿದ್ದಾನೆ. ಆದುದರಿಂದ ಸಬ್ಬತ್‌ ದಿನದಲ್ಲಿ ಒಬ್ಬ ಮನುಷ್ಯನಿಗೆ ಸಹಾಯ ಮಾಡುವುದು ಒಳ್ಳೇ ಕೆಲಸವಾಗಿದೆ’ ಎಂದು ಹೇಳಿದನು. ಹೀಗೆ, ಆ ಕೈ ಊನಗೊಂಡ ಮನುಷ್ಯನಿಗೆ ಸಹಾಯ ಮಾಡುವುದರಲ್ಲಿ ಏನೂ ತಪ್ಪಿಲ್ಲ ಅಂತ ಯೇಸು ಸ್ಪಷ್ಟಪಡಿಸಿದನು.

ಆಮೇಲೆ ಆ ಮನುಷ್ಯನಿಗೆ ಕೈಚಾಚುವಂತೆ ಹೇಳಿದನು. ತಕ್ಷಣ ಅವನ ಅಂಗವಿಕಲತೆ ಮಾಯವಾಯಿತು. ಅಬ್ಬಬ್ಬಾ! ಆ ಮನುಷ್ಯನಿಗಾದ ಸಂತೋಷ ಅಷ್ಟಿಷ್ಟಲ್ಲ! ಇದನ್ನು ನೋಡಿ ಆ ಜನರು ಖುಷಿಪಟ್ಟರಾ?— ಇಲ್ಲ. ಅವರಿಗೆ ಯೇಸುವಿನ ಮೇಲೆ ಮತ್ತಷ್ಟು ದ್ವೇಷ ಉಂಟಾಯಿತು. ಹೇಗಾದರೂ ಮಾಡಿ ಅವನನ್ನು ಕೊಲ್ಲಬೇಕು ಅಂತ ಹೊರಟು ಹೋದರು.—ಮತ್ತಾಯ 12:9-14.

ಇಂದು ಕೂಡ ಅದೇ ರೀತಿಯ ಪರಿಸ್ಥಿತಿ ಇದೆ. ನಾವು ಏನೇ ಮಾಡಿದರೂ ಎಲ್ಲರನ್ನು ಮೆಚ್ಚಿಸಲು ಸಾಧ್ಯವಿಲ್ಲ. ಆದುದರಿಂದ ಯಾರನ್ನು ಮೆಚ್ಚಿಸಬೇಕೆಂದು ಮೊದಲು ನಾವು ತೀರ್ಮಾನಿಸಬೇಕು. ಯೆಹೋವ ದೇವರನ್ನು ಹಾಗೂ ಯೇಸು ಕ್ರಿಸ್ತನನ್ನು ಮೆಚ್ಚಿಸಲು ತೀರ್ಮಾನಿಸಿರುವುದಾದರೆ, ಅವರು ಕಲಿಸುವ ವಿಷಯಗಳನ್ನು ನಾವು ಯಾವಾಗಲೂ ಮಾಡಬೇಕು. ಆದರೆ ಹಾಗೆ ಮಾಡುವಾಗ ನಮ್ಮನ್ನು ಯಾರು ದ್ವೇಷಿಸುತ್ತಾರೆ ಹೇಳು? ಒಳ್ಳೇದನ್ನು ಮಾಡದಂತೆ ಯಾರು ನಮ್ಮನ್ನು ತಡೆಯುತ್ತಾರೆ?—

ಹೌದು, ಪಿಶಾಚನಾದ ಸೈತಾನ. ಪಿಶಾಚನಲ್ಲದೇ ಬೇರೆ ಯಾರು ಸಹ ನಮ್ಮನ್ನು ತಡೆಯಲು ಪ್ರಯತ್ನಿಸಬಹುದು?— ಪಿಶಾಚನಿಂದ ಮೋಸ ಹೋಗಿ ತಪ್ಪು ವಿಷಯಗಳನ್ನು ನಂಬುವಂಥ ಜನರು. ಪಿಶಾಚನ ಕೈಗೊಂಬೆಗಳಾಗಿದ್ದ ಅಂಥ ಧಾರ್ಮಿಕ ಗುರುಗಳಿಗೆ ಯೇಸು, “ನೀವು ನಿಮ್ಮ ತಂದೆಯಾದ ಪಿಶಾಚನಿಂದ ಹುಟ್ಟಿದವರಾಗಿದ್ದೀರಿ ಮತ್ತು ನಿಮ್ಮ ತಂದೆಯ ಇಚ್ಛೆಗಳನ್ನೇ ಮಾಡಬೇಕೆಂದಿದ್ದೀರಿ” ಎಂದು ಹೇಳಿದನು.—ಯೋಹಾನ 8:44.

ಪಿಶಾಚನು ಇಷ್ಟಪಡುವಂಥ ಅನೇಕ ಜನರಿದ್ದಾರೆ. ಅಂಥವರನ್ನು ಯೇಸು “ಲೋಕ” ಎಂದು ಸೂಚಿಸುತ್ತಾನೆ. ಯೇಸು ಆ ಜನರನ್ನು “ಲೋಕ” ಅಂತ ಏಕೆ ಕರೆದನು?— ಉತ್ತರಕ್ಕಾಗಿ ನಾವು ಯೋಹಾನ 15ನೇ ಅಧ್ಯಾಯದ 19ನೇ ವಚನವನ್ನು ತೆರೆದು ಓದೋಣ. ಅಲ್ಲಿ ನಾವು ಯೇಸುವಿನ ಈ ಮಾತುಗಳನ್ನು ನೋಡಬಹುದು: “ನೀವು ಲೋಕದ ಭಾಗವಾಗಿರುತ್ತಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಪ್ರೀತಿಸುತ್ತಿತ್ತು. ಆದರೆ ನೀವು ಲೋಕದ ಭಾಗವಾಗಿರದ ಕಾರಣ ಮತ್ತು ನಾನು ನಿಮ್ಮನ್ನು ಈ ಲೋಕದಿಂದ ಆರಿಸಿಕೊಂಡಿರುವ ಕಾರಣ ಲೋಕವು ನಿಮ್ಮನ್ನು ದ್ವೇಷಿಸುತ್ತದೆ.”

ಈ ವಚನದಲ್ಲಿ ಲೋಕವು ಯೇಸುವಿನ ಶಿಷ್ಯರನ್ನು ದ್ವೇಷಿಸುತ್ತದೆಂದು ತಿಳಿಸಲ್ಪಟ್ಟಿದೆ. ಹಾಗಾದರೆ ಯೇಸುವಿನ ಹಿಂಬಾಲಕರಲ್ಲದ ಉಳಿದೆಲ್ಲ ಜನರೇ ಆ ಲೋಕವಾಗಿದೆ. ಸರಿ, ಲೋಕ ಯಾಕೆ ಯೇಸುವಿನ ಶಿಷ್ಯರನ್ನು ದ್ವೇಷಿಸುತ್ತದೆ?— ಸ್ವಲ್ಪ ಇರು. ಈ ಲೋಕದ ಅಧಿಪತಿ ಯಾರು?— “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಬೈಬಲ್‌ ಹೇಳುತ್ತದೆ. ಈ ಕೆಡುಕನು ಪಿಶಾಚನಾದ ಸೈತಾನ. ಅವನೇ ಈ ಲೋಕದ ಅಧಿಪತಿ.—1 ಯೋಹಾನ 5:19.

ಒಳ್ಳೇದನ್ನು ಮಾಡುವುದು ಏಕೆ ಇಷ್ಟೊಂದು ಕಷ್ಟ ಅಂತ ನಿನಗೀಗ ಅರ್ಥ ಆಯಿತಾ?— ಸೈತಾನ ಮತ್ತು ಅವನ ಲೋಕವೇ ಅದಕ್ಕೆ ಕಾರಣ. ಇನ್ನೊಂದು ಕಾರಣವೂ ಇದೆ. ಅದೇನೆಂದು ನಿನಗೆ ನೆನಪಿದೆಯಾ?— ನಾವೆಲ್ಲರೂ ಹುಟ್ಟಿನಿಂದಲೇ ಪಾಪವನ್ನು ಪಡೆದಿದ್ದೇವೆಂದು ಅಧ್ಯಾಯ 23ರಲ್ಲಿ ಕಲಿತೆವು ತಾನೆ. ನಮ್ಮಲ್ಲಿರುವ ಪಾಪವಾಗಲಿ ಪಿಶಾಚನಾಗಲಿ ಅವನ ಲೋಕವಾಗಲಿ ಇಲ್ಲದೆ ಹೋಗುವಾಗ ಎಷ್ಟು ಚೆನ್ನಾಗಿರುತ್ತೆ ಅಲ್ವಾ?—

ಈ ಲೋಕವು ಗತಿಸಿ ಹೋಗುವಾಗ ಒಳ್ಳೇದನ್ನು ಮಾಡುವವರಿಗೆ ಯಾವ ಪ್ರತಿಫಲ ಸಿಗುವುದು?

‘ಲೋಕವು ಗತಿಸಿಹೋಗುತ್ತಿದೆ’ ಎಂದು ಬೈಬಲು ಭರವಸೆ ಕೊಡುತ್ತದೆ. ಅಂದರೆ ಯಾರು ಮಹಾ ಬೋಧಕನ ಹಿಂಬಾಲಕರಲ್ಲವೋ ಅವರೆಲ್ಲರೂ ನಾಶವಾಗಲಿದ್ದಾರೆ. ಸದಾಕಾಲ ಜೀವಿಸುವ ಅವಕಾಶ ಅವರಿಗಿಲ್ಲ. ಹಾಗಾದರೆ ಯಾರು ಈ ಭೂಮಿಯ ಮೇಲೆ ಸದಾಕಾಲ ಜೀವಿಸುತ್ತಾರೆ?— ಬೈಬಲು ಹೇಳುತ್ತದೆ: “ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು.” (1 ಯೋಹಾನ 2:17) ಹೌದು, ಯಾರು ಒಳ್ಳೇದನ್ನು ಮಾಡುತ್ತಾರೋ “ದೇವರ ಚಿತ್ತವನ್ನು” ಮಾಡುತ್ತಾರೋ ಅವರು ಮಾತ್ರ ದೇವರ ಹೊಸ ಲೋಕದಲ್ಲಿ ಸದಾಕಾಲ ಜೀವಿಸುತ್ತಾರೆ. ಆದುದರಿಂದ ಒಳ್ಳೇದನ್ನು ಮಾಡುವುದು ಕಷ್ಟವಾದರೂ ನಾವದನ್ನು ಪಟ್ಟುಹಿಡಿದು ಮಾಡಬೇಕು. ಏನಂತಿಯಾ?—

ಒಳ್ಳೇದನ್ನು ಮಾಡುವುದು ಏಕೆ ಸುಲಭವಲ್ಲ ಎಂದು ತೋರಿಸುವ ಈ ವಚನಗಳನ್ನು ನಾವು ಒಟ್ಟಿಗೆ ಓದೋಣ: ಮತ್ತಾಯ 7:13, 14; ಲೂಕ 13:23, 24 ಮತ್ತು ಅಪೊಸ್ತಲರ ಕಾರ್ಯಗಳು 14:21, 22.