ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 6

ಮಹಾ ಬೋಧಕನು ಇತರರ ಸೇವೆಮಾಡಿದನು

ಮಹಾ ಬೋಧಕನು ಇತರರ ಸೇವೆಮಾಡಿದನು

ಯಾರಾದರೂ ನಿನಗೆ ಸಹಾಯ ಮಾಡಿದರೆ ಖುಷಿಯಾಗುತ್ತೆ ಅಲ್ವಾ?— ನಿನಗೆ ಹೇಗೆ ಖುಷಿಯಾಗುತ್ತೋ ಹಾಗೇ ಎಲ್ಲರಿಗೂ ಖುಷಿಯಾಗುತ್ತೆ. ಮಹಾ ಬೋಧಕನಾದ ಯೇಸುವಿಗೆ ಇದು ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಅವನು ಯಾವಾಗಲೂ ಜನರಿಗೆ ಸಹಾಯಮಾಡುತ್ತಿದ್ದನು. ತಾನು ‘ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಬದಲಾಗಿ ಸೇವೆಮಾಡುವುದಕ್ಕೆ ಬಂದಿದ್ದೇನೆ’ ಎಂದು ಅವನು ಹೇಳಿದನು.—ಮತ್ತಾಯ 20:28.

ಯೇಸುವಿನ ಶಿಷ್ಯರು ಯಾವುದರ ಬಗ್ಗೆ ವಾಗ್ವಾದ ನಡೆಸಿದರು?

ನಾವು ಮಹಾ ಬೋಧಕನಂತೆ ಇರಬೇಕಾದರೆ ಏನು ಮಾಡಬೇಕು?— ಇತರರ ಸೇವೆಮಾಡಬೇಕು. ಅಂದರೆ ನಾವು ಬೇರೆಯವರಿಗೆ ಸಹಾಯ ಮಾಡಬೇಕು. ಆದರೆ ಅನೇಕ ಜನರು ಹೀಗೆ ಇರುವುದಿಲ್ಲ. ಎಲ್ಲರೂ ತಮಗೆ ಸೇವೆ ಮಾಡಬೇಕೆಂದು ಅವರು ಯೋಚಿಸುತ್ತಾರೆ. ಯೇಸುವಿನ ಶಿಷ್ಯರಲ್ಲಿ ಕೂಡ ಒಮ್ಮೆ ಇದೇ ರೀತಿಯ ಯೋಚನೆ ಇತ್ತು. ಇತರರಿಗಿಂತ ನಾನೇ ಮೇಲು, ನಾನೇ ದೊಡ್ಡವನು ಎಂಬ ಭಾವನೆ ಪ್ರತಿಯೊಬ್ಬ ಶಿಷ್ಯನಲ್ಲಿ ಇತ್ತು.

ಒಂದ್ಸಲ ಯೇಸು ಮತ್ತು ಅವನ ಶಿಷ್ಯರು ಪ್ರಯಾಣ ಮಾಡುತ್ತಾ ಇದ್ದರು. ಪ್ರಯಾಣ ಮಾಡಿ ಗಲಿಲಾಯ ಸಮುದ್ರದ ಬಳಿಯಿದ್ದ ಕಪೆರ್ನೌಮ್‌ ಎಂಬ ಪಟ್ಟಣಕ್ಕೆ ಬಂದರು. ಒಂದು ಮನೆಯೊಳಗೆ ಹೋದಾಗ ಯೇಸು ಅವರಿಗೆ, “ನೀವು ದಾರಿಯಲ್ಲಿ ಯಾವುದರ ಕುರಿತು ವಾಗ್ವಾದ ಮಾಡುತ್ತಿದ್ದಿರಿ?” ಎಂದು ಕೇಳಿದನು. ಅದಕ್ಕೆ ಅವರು ಏನೂ ಹೇಳದೆ ಸುಮ್ಮನಿದ್ದರು. ಯಾಕೆ ಗೊತ್ತಾ? ಏಕೆಂದರೆ ದಾರಿಯಲ್ಲಿ ಅವರು ತಮ್ಮಲ್ಲಿ ಯಾರು ದೊಡ್ಡವರು ಎಂದು ವಾಗ್ವಾದ ಮಾಡಿದ್ದರು.—ಮಾರ್ಕ 9:33, 34.

ಈ ರೀತಿಯಲ್ಲಿ ಒಬ್ಬರಿಗಿಂತ ಇನ್ನೊಬ್ಬರು ದೊಡ್ಡವರೆಂದು ಶಿಷ್ಯರು ಭಾವಿಸುವುದು ತಪ್ಪೆಂದು ಯೇಸುವಿಗೆ ತಿಳಿದಿತ್ತು. ಆದ್ದರಿಂದ, ಯೇಸು ಒಂದು ಚಿಕ್ಕ ಮಗುವನ್ನು ಕರೆದು ಅವರ ಮಧ್ಯೆ ನಿಲ್ಲಿಸಿದನು. ಆ ಚಿಕ್ಕ ಮಗುವನ್ನು ಅವರಿಗೆ ತೋರಿಸಿ ಈ ಚಿಕ್ಕ ಮಗುವಿನಂತೆ ನೀವು ದೀನರಾಗಿರಬೇಕು ಎಂದು ಶಿಷ್ಯರಿಗೆ ಹೇಳಿದನು. ಈ ವಿಷಯವನ್ನು ನಾವು ಒಂದನೆಯ ಅಧ್ಯಾಯದಲ್ಲಿ ಓದಿದ್ದು ನಿನಗೆ ನೆನಪಿರಬಹುದು. ಇಷ್ಟಾದರೂ ಅವರು ಪಾಠ ಕಲಿಯಲಿಲ್ಲ. ಹಾಗಾಗಿ, ಅವರು ಸದಾ ನೆನಪಿನಲ್ಲಿಡುವಂತೆ ಒಂದು ಪಾಠವನ್ನು ತಾನು ಸಾವನ್ನಪ್ಪುವ ಮೊದಲು ಕಲಿಸಿದನು. ಹೇಗೆ ಕಲಿಸಿದನು?—

ಶಿಷ್ಯರೊಂದಿಗೆ ಊಟಮಾಡುತ್ತಿದ್ದಾಗ ಮಧ್ಯದಲ್ಲಿ ಯೇಸು ಎದ್ದು ಮೇಲಂಗಿಯನ್ನು ತೆಗೆದಿಟ್ಟು ಒಂದು ಟವಲನ್ನು ಸೊಂಟಕ್ಕೆ ಕಟ್ಟಿಕೊಂಡನು. ಅನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ನೀರನ್ನು ತುಂಬಿಸಿದನು. ಶಿಷ್ಯರು ಕುತೂಹಲದಿಂದ ಕಣ್ಣರಳಿಸಿ ಯೇಸು ಏನು ಮಾಡುತ್ತಿದ್ದಾನೆ ಎಂದು ನೋಡುತ್ತಿದ್ದರು. ಯೇಸು ಪಾತ್ರೆಯನ್ನು ತೆಗೆದುಕೊಂಡು ಒಬ್ಬೊಬ್ಬರ ಬಳಿ ಹೋಗಿ, ಬಾಗಿ ಅವರ ಪಾದಗಳನ್ನು ತೊಳೆದನು. ಅಷ್ಟೇ ಅಲ್ಲ ತೊಳೆದ ಪಾದಗಳನ್ನು ತಾನು ಸೊಂಟಕ್ಕೆ ಕಟ್ಟಿಕೊಂಡಿದ್ದ ಟವಲಿನಿಂದ ಒರೆಸಿದನು. ಸ್ವಲ್ಪ ಯೋಚಿಸು! ನೀನು ಆ ಜಾಗದಲ್ಲಿ ಇದ್ದಿದ್ದರೆ ನಿನಗೆ ಹೇಗನಿಸುತ್ತಿತ್ತು?—

ಯೇಸು ತನ್ನ ಹಿಂಬಾಲಕರಿಗೆ ಯಾವ ಪಾಠ ಕಲಿಸಿದನು?

ಶಿಷ್ಯರಿಗಂತೂ ತುಂಬಾ ಮುಜುಗರವಾಯಿತು. ಮಹಾ ಬೋಧಕನಾದ ಯೇಸು ತಮ್ಮ ಕಾಲುಗಳನ್ನು ತೊಳೆದು ತಮಗೆ ಸೇವೆಮಾಡುತ್ತಿರುವುದು ಸರಿಯಲ್ಲ ಎಂದು ಚಡಪಡಿಸತೊಡಗಿದರು. ಪೇತ್ರನಂತೂ ಯೇಸುವನ್ನು ತಡೆದೇಬಿಟ್ಟನು. ತನ್ನ ಕಾಲನ್ನು ತೊಳೆಯುವಂಥ ತೀರಾ ಸಾಧಾರಣ ಕೆಲಸವನ್ನು ಯೇಸು ಮಾಡುವುದು ಅವನಿಗೆ ಇಷ್ಟವಿರಲಿಲ್ಲ. ಆದರೆ ಯೇಸು ಅವನ ಪಾದಗಳನ್ನು ತೊಳೆದನು ಮತ್ತು ಹಾಗೇ ಮಾಡುವುದು ತನಗೆ ಪ್ರಾಮುಖ್ಯ ಎಂದು ತಿಳಿಸಿದನು.

ಸಾಮಾನ್ಯವಾಗಿ, ನಮ್ಮ ಮನೆಗೆ ಬರುವವರ ಪಾದಗಳನ್ನು ನಾವು ತೊಳೆಯುವುದಿಲ್ಲ ಅಲ್ವಾ? ಆದರೆ ಯೇಸುವಿನ ಕಾಲದಲ್ಲಿ ಹಾಗೇ ಮಾಡುತ್ತಿದ್ದರು. ಅದ್ಯಾಕೆ ಗೊತ್ತಾ?— ಆ ಕಾಲದಲ್ಲಿ ಜನರು ಹಾಕುತ್ತಿದ್ದ ಚಪ್ಪಲಿಗಳು ಪಾದಗಳನ್ನು ಪೂರ್ತಿಯಾಗಿ ಮುಚ್ಚುತ್ತಿರಲಿಲ್ಲ ಮತ್ತು ಅಲ್ಲಿ ಮಣ್ಣಿನ ರಸ್ತೆಗಳಿದ್ದವು. ಧೂಳು ತುಂಬಿದ ಈ ರಸ್ತೆಗಳಲ್ಲಿ ಜನರು ನಡೆದಾಡುವಾಗ ಅವರ ಪಾದಗಳಿಗೆ ಧೂಳು ಮೆತ್ತುಕೊಂಡಿರುತ್ತಿತ್ತು. ಆದ್ದರಿಂದ ಮನೆಗೆ ಬರುವವರ ಪಾದಗಳನ್ನು ತೊಳೆಯುವುದು ಸಾಮಾನ್ಯ ಪದ್ಧತಿಯಾಗಿತ್ತು. ಅತಿಥಿಗೆ ಪ್ರೀತಿ ತೋರಿಸುವ ಕಾರ್ಯವಾಗಿತ್ತು.

ಆ ದಿನ ಇದನ್ನು ಮಾಡಲು ಯೇಸುವಿನ ಶಿಷ್ಯರಲ್ಲಿ ಒಬ್ಬರೂ ಮುಂದೆ ಬರಲಿಲ್ಲ. ಹಾಗಾಗಿ ಯೇಸುವೇ ಮುಂದೆ ಬಂದು ಇದನ್ನು ಮಾಡಿದನು. ಅವರ ಕಾಲುಗಳನ್ನು ತೊಳೆಯುವ ಮೂಲಕ ಅವರಿಗೆ ಒಂದು ಮುಖ್ಯ ಪಾಠವನ್ನು ಕಲಿಸಿದನು. ಅವರು ಆ ಪಾಠವನ್ನು ಕಲಿಯುವುದು ತುಂಬಾ ಪ್ರಾಮುಖ್ಯವಾಗಿತ್ತು. ನಮಗೂ ಇಂದು ಪ್ರಾಮುಖ್ಯವಾಗಿದೆ.

ಆ ಪಾಠ ಏನು?— ಶಿಷ್ಯರ ಪಾದಗಳನ್ನು ತೊಳೆದಾದ ಮೇಲೆ ಯೇಸು ತನ್ನ ಮೇಲಂಗಿಯನ್ನು ಧರಿಸಿ ಪುನಃ ಅವರೊಂದಿಗೆ ಕುಳಿತುಕೊಂಡನು. ಆಮೇಲೆ ಶಿಷ್ಯರಿಗೆ, ‘ನಾನು ಈಗ ಮಾಡಿದ್ದು ಏನೆಂದು ನಿಮಗೆ ತಿಳಿಯಿತೊ? ನೀವು ನನ್ನನ್ನು ‘ಬೋಧಕನೇ’ ‘ಕರ್ತನೇ’ ಎಂದು ಕರೆಯುತ್ತೀರಿ; ನೀವು ಹೇಳುವುದು ಸರಿ. ನಿಮ್ಮ ಕರ್ತನೂ ಬೋಧಕನೂ ಆಗಿರುವ ನಾನೇ ನಿಮ್ಮ ಪಾದಗಳನ್ನು ತೊಳೆದಿರುವಾಗ ನೀವು ಸಹ ಒಬ್ಬರು ಇನ್ನೊಬ್ಬರ ಪಾದಗಳನ್ನು ತೊಳೆಯಲೇಬೇಕು’ ಎಂದು ಹೇಳಿದನು.—ಯೋಹಾನ 13:2-14.

ನೀನು ಯಾವೆಲ್ಲಾ ರೀತಿಯಲ್ಲಿ ಇತರರಿಗೆ ಸಹಾಯ ಮಾಡಬಹುದು?

ಈ ರೀತಿಯಲ್ಲಿ ತನ್ನ ಹಿಂಬಾಲಕರು ಒಬ್ಬರಿಗೊಬ್ಬರು ಸೇವೆಮಾಡಬೇಕು ಅಂತ ಮಹಾ ಬೋಧಕನು ತೋರಿಸಿಕೊಟ್ಟನು. ಅವನ ಶಿಷ್ಯರು ಸ್ವಾರ್ಥಿಗಳಾಗಿ ತಮ್ಮ ಬಗ್ಗೆನೇ ಯೋಚಿಸುತ್ತಾ ಇರಬಾರದಾಗಿತ್ತು. ತಾವು ತುಂಬಾ ದೊಡ್ಡ ವ್ಯಕ್ತಿಗಳು, ಯಾವಾಗಲೂ ಬೇರೆಯವರು ತಮಗೆ ಸೇವೆಮಾಡುತ್ತಾ ಇರಬೇಕು ಎಂದು ಅವರು ನೆನಸಬಾರದಾಗಿತ್ತು. ಅವರು ಬೇರೆಯವರಿಗೆ ಸೇವೆ ಮಾಡಲು ಸದಾ ಸಿದ್ಧರಿರಬೇಕಿತ್ತು.

ಎಂತಹ ಒಳ್ಳೇ ಪಾಠ ಅಲ್ವಾ?— ಮಹಾ ಬೋಧಕನಂತೆ ನೀನು ಕೂಡ ಇತರರ ಸೇವೆಮಾಡಲು ಇಷ್ಟಪಡುತ್ತೀಯಾ?— ಚಿಕ್ಕಪುಟ್ಟ ವಿಷಯಗಳಿಂದ ಹಿಡಿದು ದೊಡ್ಡ ದೊಡ್ಡ ವಿಷಯಗಳ ವರೆಗೆ ನಾವೆಲ್ಲರೂ ಇತರರಿಗೆ ಸಹಾಯಮಾಡಬಲ್ಲೆವು. ಇದರಿಂದ ಅವರಿಗೆ ಖುಷಿಯಾಗುತ್ತದೆ. ಅವರಿಗೆ ಮಾತ್ರನಾ, ಯೇಸುವಿಗೂ ಅವನ ತಂದೆಗೂ ಬಹಳ ಖುಷಿಯಾಗುತ್ತದೆ.

ಇತರರ ಸೇವೆಮಾಡುವುದು ಕಷ್ಟವೇನಲ್ಲ. ನೀನು ಸ್ವಲ್ಪ ಗಮನಿಸಿದರೆ, ಬೇರೆ ಬೇರೆ ರೀತಿಯಲ್ಲಿ ಇತರರಿಗೆ ಸಹಾಯಮಾಡುವ ಅವಕಾಶಗಳು ಸಿಗುತ್ತವೆ. ಉದಾಹರಣೆಗೆ, ನಿನ್ನ ಅಮ್ಮನಿಗೆ ನೀನು ಏನು ಸಹಾಯ ಮಾಡಬಹುದು? ಅಮ್ಮ ನಿನಗಾಗಿ ಮತ್ತು ಮನೆಯಲ್ಲಿರುವ ಇತರರಿಗಾಗಿ ಎಷ್ಟೆಲ್ಲಾ ಕೆಲಸ ಮಾಡುತ್ತಾಳೆ ಎಂದು ನಿನಗೆ ಗೊತ್ತೇ ಇದೆ. ನೀನ್ಯಾಕೆ ಅಮ್ಮನಿಗೆ ಸಹಾಯ ಮಾಡಬಾರದು?— ಏನು ಸಹಾಯ ಬೇಕೆಂದು ಅಮ್ಮನನ್ನೇ ಕೇಳಬಹುದಲ್ವಾ?

ಮನೆಯಲ್ಲಿ ಎಲ್ಲರೂ ಊಟಕ್ಕೆ ಕುಳಿತಾಗ ನೀನು ತಟ್ಟೆ, ಗ್ಲಾಸುಗಳನ್ನು ತಂದಿಡಬಹುದು. ಊಟವಾದ ಮೇಲೆ ಅವುಗಳನ್ನೆಲ್ಲಾ ತೊಳೆಯಲು ತಕ್ಕೊಂಡು ಹೋಗಬಹುದು. ಕೆಲವು ಮಕ್ಕಳು ಪ್ರತಿದಿನ ಕಸವನ್ನು ಕಸದ ತೊಟ್ಟಿಗೆ ಹಾಕಿ ಬರುತ್ತಾರೆ. ಹೀಗೆ ನಿನ್ನ ಕೈಯಲ್ಲಾದ ಚಿಕ್ಕಪುಟ್ಟ ಕೆಲಸಗಳನ್ನು ಮಾಡುವಾಗ ನೀನು ಸಹ ಯೇಸುವಿನಂತೆ ಇತರರ ಸೇವೆಮಾಡುತ್ತಿ.

ನಿನಗೆ ತಂಗಿಯೋ ತಮ್ಮನೋ ಇರುವುದಾದರೆ ನೀನು ಅವರಿಗೂ ಸಹಾಯ ಮಾಡಬಹುದು. ಮಹಾ ಬೋಧಕನಾದ ಯೇಸು ಸಹ ತನ್ನ ಶಿಷ್ಯರ ಸೇವೆ ಮಾಡಿದನಲ್ವಾ? ಯೇಸುವಿನ ಮಾದರಿಯನ್ನು ಅನುಸರಿಸುತ್ತಾ ನೀನು ಕೂಡ ನಿನ್ನ ತಮ್ಮ ತಂಗಿಗೆ ಸಹಾಯ ಮಾಡಬಹುದು. ಹೇಗೆ ಮಾಡುತ್ತಿ?— ಹೇಗೆಂದರೆ, ಅವರು ಆಟವಾಡಿದ ಮೇಲೆ ಆಟದ ಸಾಮಾನುಗಳನ್ನು ವಾಪಾಸ್ಸು ನೀಟಾಗಿ ಅದರದರ ಜಾಗದಲ್ಲಿ ಎತ್ತಿಡಲು ಅವರಿಗೆ ಕಲಿಸಬಹುದು. ಬಟ್ಟೆ ಹಾಕಿಕೊಳ್ಳಲು ಅವರಿಗೆ ಸಹಾಯಮಾಡಬಹುದು. ಅಥವಾ ಹಾಸಿಗೆ ಎತ್ತಿಡಲು ಸಹಾಯ ಮಾಡಬಹುದು. ಇನ್ನೇನ್ನೆಲ್ಲಾ ಸಹಾಯ ಮಾಡಬಹುದು ಅಂತ ಹೇಳ್ತೀಯಾ?— ಇದನ್ನೆಲ್ಲಾ ಮಾಡುವಾಗ ಅವರು ನಿನ್ನನ್ನು ತುಂಬಾ ತುಂಬಾ ಪ್ರೀತಿಸುತ್ತಾರೆ. ಯೇಸುವನ್ನು ಕೂಡ ಶಿಷ್ಯರು ಇದೇ ರೀತಿಯಲ್ಲಿ ಪ್ರೀತಿಸಿದರು.

ಶಾಲೆಯಲ್ಲೂ ನೀನು ಇತರರಿಗೆ ಸೇವೆಮಾಡಬಹುದು. ಕ್ಲಾಸಿನಲ್ಲಿ ಬೇರೆ ಮಕ್ಕಳಿಗೆ ಅಥವಾ ನಿನ್ನ ಟೀಚರ್‌ಗೆ ಸಹಾಯ ಮಾಡಬಹುದು. ಅವರ ಕೈಯಿಂದ ಪುಸ್ತಕವೇನಾದರೂ ಬಿದ್ದರೆ ಅದನ್ನು ಎತ್ತಿಕೊಡಬಹುದು. ಬೋರ್ಡ್‌ ಒರೆಸಿಕೊಡಲಾ ಅಂತ ಟೀಚರನ್ನು ಕೇಳಬಹುದು ಅಥವಾ ಬೇರೆ ಕೆಲಸ ಮಾಡಿಕೊಡಬಹುದು. ಬೇರೆ ಮಕ್ಕಳು ಪೆನ್ನೋ ಪೆನ್ಸಿಲೋ ಮರೆತು ಬಂದರೆ ಅವರಿಗೆ ಸಹಾಯ ಮಾಡಬಹುದು.

ಕೆಲವೊಮ್ಮೆ ನಾವು ಸಹಾಯ ಮಾಡುವಾಗ ಜನರು ಧನ್ಯವಾದ ಹೇಳದೇ ಇರಬಹುದು. ಅದಕ್ಕೆಂದು ನಾವು ಸಹಾಯ ಮಾಡುವುದನ್ನು ನಿಲ್ಲಿಸಬೇಕಾ?— ಇಲ್ಲ. ಯೇಸು ಎಷ್ಟೋ ಒಳ್ಳೇ ಕೆಲಸಗಳನ್ನು ಮಾಡಿದಾಗಲೂ ಅನೇಕರು ಅವನಿಗೆ ಧನ್ಯವಾದ ಹೇಳಲಿಲ್ಲ. ಆದರೂ ಯೇಸು ಒಳ್ಳೇ ಕೆಲಸಗಳನ್ನು ಮಾಡುತ್ತಲೇ ಇದ್ದನು.

ನಾವು ಇತರರಿಗೆ ಸೇವೆಮಾಡುವುದನ್ನು ಎಂದಿಗೂ ನಿಲ್ಲಿಸದಿರೋಣ. ಮಹಾ ಬೋಧಕನಾದ ಯೇಸು ಮಾಡಿದ ಕಾರ್ಯಗಳನ್ನೆಲ್ಲಾ ನೆನಪಿನಲ್ಲಿಟ್ಟು ಅವನ ಮಾದರಿಯನ್ನು ಅನುಸರಿಸಲು ಸದಾ ಪ್ರಯತ್ನಿಸೋಣ.

ಇತರರಿಗೆ ಸಹಾಯ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಲು ಕೆಲವು ವಚನಗಳನ್ನು ಓದೋಣ: ಜ್ಞಾನೋಕ್ತಿ 3: 27, 28; ರೋಮನ್ನರಿಗೆ 15:1, 2 ಮತ್ತು ಗಲಾತ್ಯ 6:2.