ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 43

ನಮ್ಮ ಸಹೋದರ ಸಹೋದರಿಯರು ಯಾರು?

ನಮ್ಮ ಸಹೋದರ ಸಹೋದರಿಯರು ಯಾರು?

ಒಂದ್ಸಲ ಮಹಾ ಬೋಧಕನು ಕೇಳಿದ ಪ್ರಶ್ನೆಯೊಂದು ಜನರನ್ನು ಬೆಕ್ಕಸಬೆರಗಾಗಿಸಿತು. “ನನ್ನ ತಾಯಿ ಯಾರು? ನನ್ನ ತಮ್ಮಂದಿರು ಯಾರು?” ಅಂತ ಅವನು ಕೇಳಿದನು. (ಮತ್ತಾಯ 12:48) ಇದಕ್ಕೆ ಉತ್ತರ ನಿನಗೆ ಗೊತ್ತಿದೆಯಾ?— ಯೇಸುವಿನ ತಾಯಿಯ ಹೆಸರು ಮರಿಯ ಅಂತ ನಿನಗೆ ಗೊತ್ತಲ್ವಾ. ಅವನ ತಮ್ಮಂದಿರ ಹೆಸರುಗಳೇನೆಂದು ನಿನಗೆ ಗೊತ್ತಾ?— ಅದ್ಸರಿ, ಯೇಸುವಿಗೆ ತಂಗಿಯರು ಇದ್ದರಾ?—

ಯೇಸುವಿನ ತಮ್ಮಂದಿರ ಹೆಸರು, “ಯಾಕೋಬ, ಯೋಸೇಫ, ಸೀಮೋನ ಮತ್ತು ಯೂದ” ಎಂದು ಬೈಬಲ್‌ ತಿಳಿಸುತ್ತದೆ. ಯೇಸುವಿಗೆ ತಂಗಿಯರೂ ಇದ್ದರು. ಆ ಕುಟುಂಬದಲ್ಲಿ ಯೇಸುವೇ ಹಿರೀ ಮಗ.—ಮತ್ತಾಯ 13:55, 56; ಲೂಕ 1:34, 35.

ಯೇಸುವಿನ ತಮ್ಮಂದಿರು ಅವನ ಶಿಷ್ಯರಾಗಿದ್ರಾ?— ಮೊದಮೊದಲು ಅವರು “ಅವನಲ್ಲಿ ನಂಬಿಕೆಯಿಟ್ಟಿರಲಿಲ್ಲ” ಅಂತ ಬೈಬಲ್‌ ತಿಳಿಸುತ್ತದೆ. (ಯೋಹಾನ 7:5) ಆದರೆ ಸಮಯ ಸಂದಂತೆ ಯಾಕೋಬ ಯೂದರು ಅವನ ಶಿಷ್ಯರಾದರು. ಅವರು ಬೈಬಲಿನ ಪುಸ್ತಕಗಳನ್ನೂ ಬರೆದರು. ಅವರು ಬರೆದ ಬೈಬಲ್‌ ಪುಸ್ತಕಗಳ ಹೆಸರು ನಿನಗೆ ಗೊತ್ತಿದೆಯಾ?— ಹೌದು. ಯಾಕೋಬ ಮತ್ತು ಯೂದ.

ಯೇಸುವಿನ ತಂಗಿಯರ ಹೆಸರುಗಳು ಬೈಬಲಿನಲ್ಲಿ ಇಲ್ಲವಾದರೂ ಅವನಿಗೆ ಕಡಿಮೆಯೆಂದರೆ ಇಬ್ಬರು ತಂಗಿಯರು ಇದ್ದಿರಲೇಬೇಕು. ಹೆಚ್ಚೂ ಇದ್ದಿರಬಹುದು. ಅವರು ಯೇಸುವಿನ ಹಿಂಬಾಲಕರಾಗಿದ್ದರಾ?— ಗೊತ್ತಿಲ್ಲ. ಬೈಬಲ್‌ ಅದರ ಬಗ್ಗೆ ತಿಳಿಸುವುದಿಲ್ಲ. ಅಂದಹಾಗೆ, “ನನ್ನ ತಾಯಿ ಯಾರು? ನನ್ನ ತಮ್ಮಂದಿರು ಯಾರು?” ಎಂದು ಯೇಸು ಯಾಕೆ ಕೇಳಿದನು ಗೊತ್ತಾ?— ಯಾಕೆಂದು ನೋಡೋಣ.

ಯೇಸು ಶಿಷ್ಯರಿಗೆ ಬೋಧನೆ ಮಾಡುತ್ತಿದ್ದಾಗ ಒಬ್ಬನು ಬಂದು ಮಧ್ಯೆ ಬಾಯಿ ಹಾಕಿ, “ನಿನ್ನ ತಾಯಿಯೂ ತಮ್ಮಂದಿರೂ ನಿನ್ನೊಂದಿಗೆ ಮಾತಾಡಲು ಹೊರಗೆ ಕಾಯುತ್ತಾ ನಿಂತಿದ್ದಾರೆ” ಎಂದು ಹೇಳಿದನು. ಯೇಸು ಆ ಸೂಕ್ತ ಸಂದರ್ಭವನ್ನೇ ಸದುಪಯೋಗಿಸಿಕೊಂಡು ಅಲ್ಲಿದ್ದವರಿಗೆ ಮುಖ್ಯ ಪಾಠ ಕಲಿಸಲು ಬಯಸಿದನು. ಹಾಗಾಗಿಯೇ “ನನ್ನ ತಾಯಿ ಯಾರು? ನನ್ನ ತಮ್ಮಂದಿರು ಯಾರು?” ಎಂಬ ಪ್ರಶ್ನೆ ಹಾಕಿದನು. ನಂತರ ತಾನೇ ಉತ್ತರಕೊಡುತ್ತಾ ಶಿಷ್ಯರೆಡೆಗೆ ಕೈತೋರಿಸಿ “ಇಗೋ, ಇವರೇ ನನ್ನ ತಾಯಿ ಮತ್ತು ನನ್ನ ತಮ್ಮಂದಿರು!” ಅಂದನು.

ನಂತರ ತನ್ನ ಮಾತಿನ ಅರ್ಥವೇನೆಂದು ಯೇಸು ವಿವರಿಸುತ್ತಾ, “ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವರೇ ನನ್ನ ತಮ್ಮ, ತಂಗಿ ಮತ್ತು ತಾಯಿ” ಅಂದನು. (ಮತ್ತಾಯ 12:47-50) ತನ್ನೆಲ್ಲಾ ಶಿಷ್ಯರ ಮೇಲೆ ಯೇಸು ಎಷ್ಟು ಪ್ರೀತಿ ಮಮತೆ ಇಟ್ಟಿದ್ದನೆಂದು ಇದರಿಂದ ತಿಳಿದುಬರುತ್ತೆ. ಶಿಷ್ಯರೇ ತನ್ನ ಒಡಹುಟ್ಟಿದ ಅಣ್ಣತಮ್ಮಂದಿರಂತೆ, ಅಕ್ಕತಂಗಿಯರಂತೆ ಹಾಗೂ ತಾಯಂದಿರಂತೆ ಇದ್ದರೆಂಬ ಪಾಠವನ್ನು ಅವನು ಕಲಿಸಿದನು.

ಯೇಸು ಯಾರನ್ನು ತನ್ನ ಸಹೋದರ ಸಹೋದರಿಯರೆಂದು ಕರೆದನು?

ಸ್ವಂತ ತಮ್ಮಂದಿರಾದ ಯಾಕೋಬ, ಯೋಸೇಫ, ಸೀಮೋನ ಮತ್ತು ಯೂದರು ಆಗ ಯೇಸುವನ್ನು ದೇವರ ಮಗನೆಂದು ನಂಬಿರಲಿಲ್ಲ. ಬಹುಶಃ ಗಬ್ರಿಯೇಲ ದೇವದೂತನು ಯೇಸುವಿನ ಜನನದ ಕುರಿತು ತಾಯಿ ಮರಿಯಳಿಗೆ ಹೇಳಿದ ವಿಷಯದ ಮೇಲೆ ಅವರಿಗೆ ವಿಶ್ವಾಸವಿರಲಿಲ್ಲ ಎಂದು ಕಾಣುತ್ತದೆ. (ಲೂಕ 1:30-33) ಆದ್ದರಿಂದ ಅವರು ಯೇಸುವಿನೊಂದಿಗೆ ಒರಟಾಗಿ ನಡೆದುಕೊಂಡಿರಬೇಕು. ಹಾಗೆ ವರ್ತಿಸುವವರು ನಿಜವಾದ ಸಹೋದರ ಅಥವಾ ಸಹೋದರಿ ಆಗಿರಲು ಸಾಧ್ಯವಿಲ್ಲ ಅಲ್ವಾ. ಒಡಹುಟ್ಟಿದವರೊಂದಿಗೆ ಒರಟು ಒರಟಾಗಿ ನಡೆದುಕೊಂಡ ಯಾರದ್ದಾದರೂ ಪರಿಚಯ ನಿನಗಿದೆಯಾ?—

ಬೈಬಲ್‌ ಏಸಾವ ಯಾಕೋಬ ಎಂಬ ಅಣ್ಣತಮ್ಮಂದಿರ ಬಗ್ಗೆ ತಿಳಿಸುತ್ತದೆ. ಏಸಾವನು ಒಂದ್ಸಲ ಎಷ್ಟು ಕೋಪಗೊಂಡನೆಂದರೆ “ತಮ್ಮನಾದ ಯಾಕೋಬನನ್ನು ಕೊಲ್ಲುವೆನು” ಎಂದು ಗುಡುಗಿದನು. ಅದನ್ನು ತಿಳಿದ ತಾಯಿ ರೆಬೆಕ್ಕ ತುಂಬಾ ಹೆದರಿಹೋಗಿ ಕೂಡಲೇ ಯಾಕೋಬನನ್ನು ದೂರದೂರಿಗೆ ಕಳುಹಿಸಿಬಿಟ್ಟಳು. (ಆದಿಕಾಂಡ 27:41-46) ಕೆಲವು ವರ್ಷಗಳಾದ ಮೇಲೆ ಏಸಾವನ ಸ್ವಭಾವ ಬದಲಾಯಿತು. ಅವನು ಯಾಕೋಬನನ್ನು ಭೇಟಿಯಾದಾಗ ಅಪ್ಪಿಕೊಂಡು ಮುದ್ದಿಟ್ಟನು.—ಆದಿಕಾಂಡ 33:4.

ಈ ಯಾಕೋಬನಿಗೆ 12 ಮಂದಿ ಗಂಡು ಮಕ್ಕಳಿದ್ದರು. ಯಾಕೋಬನ ಹಿರೀ ಮಕ್ಕಳಿಗೆ ಅವರ ತಮ್ಮನಾದ ಯೋಸೇಫನನ್ನು ಕಂಡರೆ ಆಗುತ್ತಿರಲಿಲ್ಲ. ಯಾಕೆಂದರೆ ಯಾಕೋಬನು ಯೋಸೇಫನನ್ನು ತುಂಬಾ ಪ್ರೀತಿಸುತ್ತಿದ್ದನು. ಹಾಗಾಗಿ ಯೋಸೇಫನನ್ನು ಕಂಡರೆ ಅವರಿಗೆ ಹೊಟ್ಟೆಕಿಚ್ಚು. ಒಂದು ದಿನ ಈಜಿಪ್ಟಿಗೆ ಹೋಗುತ್ತಿದ್ದ ವ್ಯಾಪಾರಿಗಳಿಗೆ ಅವನನ್ನು ಮಾರಿಬಿಟ್ಟರು. ಆ ನಂತರ, ಮನೆಗೆ ಬಂದು ಕಾಡು ಮೃಗ ಯೋಸೇಫನನ್ನು ಕೊಂದುಹಾಕಿತೆಂದು ತಂದೆಗೆ ಸುಳ್ಳು ಹೇಳಿದರು. (ಆದಿಕಾಂಡ 37:23-36) ಎಂಥ ದೊಡ್ಡ ತಪ್ಪು ಅಲ್ವಾ?—

ಕಾಲಾನಂತರ ಯೋಸೇಫನ ಅಣ್ಣಂದಿರಿಗೆ ತಮ್ಮ ತಪ್ಪಿನ ಅರಿವಾಯಿತು. ಯೋಸೇಫನೂ ಅವರನ್ನು ಕ್ಷಮಿಸಿದನು. ಯೇಸುವಿನ ಯಾವ ಗುಣ ಯೋಸೇಫನಲ್ಲೂ ಇತ್ತು ಅಂತ ನಿನಗೆ ಅರ್ಥವಾಯಿತಾ?— ಯೇಸು ಕಷ್ಟದಲ್ಲಿದ್ದಾಗ ಅವನ ಸ್ವಂತ ಅಪೊಸ್ತಲರು ಅವನನ್ನು ಬಿಟ್ಟು ಓಡಿಹೋದರಲ್ವಾ. ಪೇತ್ರನಂತೂ ಯೇಸುವಿನ ಪರಿಚಯವಿಲ್ಲವೆಂದು ಅಲ್ಲಗಳೆದನು. ಆದರೂ ಯೇಸು ಯೋಸೇಫನಂತೆ ಅವರೆಲ್ಲರನ್ನೂ ಕ್ಷಮಿಸಿದನು.

ಕಾಯಿನನು ಹೇಬೆಲನೊಂದಿಗೆ ವರ್ತಿಸಿದ ರೀತಿ ನಮಗೆ ಯಾವ ಪಾಠ ಕಲಿಸುತ್ತದೆ?

ಹಾಗೂ ಹಾಗೂ ಹೇಬೆಲ ಎಂಬ ಅಣ್ಣತಮ್ಮಂದಿರ ಉದಾಹರಣೆ ನೋಡೋಣ. ನಾವು ಅವರಿಂದಲೂ ಮುಖ್ಯ ಪಾಠವೊಂದನ್ನು ಕಲಿಯಬಹುದು. ಕಾಯಿನನ ಹೃದಯದಲ್ಲಿ ತಮ್ಮನಾದ ಹೇಬೆಲನ ಬಗ್ಗೆ ದ್ವೇಷ ಹೊಗೆಯಾಡುತ್ತಿದ್ದದನ್ನು ದೇವರು ಗಮನಿಸಿದನು. ಹಾಗೂ ಅದನ್ನು ಬಿಟ್ಟುಬಿಡುವಂತೆ ಕಾಯಿನನಿಗೆ ಬುದ್ಧಿವಾದ ಹೇಳಿದನು. ಕಾಯಿನನಿಗೆ ದೇವರ ಮೇಲೆ ನಿಜವಾದ ಪ್ರೀತಿ ಇದ್ದಿದ್ದರೆ ಆತನ ಮಾತಿಗೆ ಬೆಲೆಕೊಡುತ್ತಿದ್ದನು. ಆದರೆ ಅವನಿಗೆ ದೇವರ ಮೇಲೆ ಪ್ರೀತಿಯಿರಲಿಲ್ಲ. ಒಂದು ದಿನ, ಕಾಯಿನನು ‘ಹೊಲಕ್ಕೆ ಹೋಗೋಣ ಬಾ’ ಎಂದು ಹೇಬೆಲನನ್ನು ಕರೆದನು. ಹೇಬೆಲನು ಅಣ್ಣನ ಜೊತೆ ಹೋದನು. ಹೊಲದಲ್ಲಿ ಅವರಿಬ್ಬರೇ ಇದ್ದಾಗ, ಕಾಯಿನನು ಹೇಬೆಲನನ್ನು ಜೋರಾಗಿ ಹೊಡೆದು ಸಾಯಿಸಿಬಿಟ್ಟನು.—ಆದಿಕಾಂಡ 4:2-8.

ಈ ಉದಾಹರಣೆಯಿಂದ ನಾವೊಂದು ವಿಶೇಷ ಪಾಠ ಕಲಿಯಬೇಕೆಂದು ಬೈಬಲ್‌ ಬುದ್ಧಿವಾದ ನೀಡುತ್ತದೆ. ಅದೇನು ಗೊತ್ತಾ?— ‘ಹಿಂದಿನಿಂದಲೂ ನೀವು ಕೇಳಿಸಿಕೊಂಡ ಸಂದೇಶವು ಇದೇ: ನಮ್ಮಲ್ಲಿ ಒಬ್ಬರಮೇಲೊಬ್ಬರಿಗೆ ಪ್ರೀತಿ ಇರಬೇಕು. ಕೆಡುಕನಿಂದ ಹುಟ್ಟಿದ ಕಾಯಿನನಂತೆ ನಾವಿರಬಾರದು.’ ಹೌದು, ಒಡಹುಟ್ಟಿದವರಲ್ಲಿ ಪರಸ್ಪರ ಪ್ರೀತಿಯಿರಬೇಕು. ದ್ವೇಷಪೂರಿತ ಕಾಯಿನನಂತೆ ಇರಬಾರದು.—1 ಯೋಹಾನ 3:11, 12.

ನಾವೇಕೆ ಕಾಯಿನನಂತೆ ಇರಬಾರದು?— ಏಕೆಂದರೆ ಅವನು ‘ಕೆಡುಕನಿಂದ’ ಅಂದರೆ ಪಿಶಾಚನಾದ ಸೈತಾನನಿಂದ ‘ಹುಟ್ಟಿದವನಾಗಿದ್ದನು’ ಎಂದು ಬೈಬಲ್‌ ಹೇಳುತ್ತದೆ. ಕಾಯಿನನು ಪಿಶಾಚನಂತೆ ವರ್ತಿಸಿದ್ದರಿಂದ ಪಿಶಾಚನು ಅವನ ತಂದೆಯಂತಿದ್ದನು.

ನಿನ್ನ ಅಣ್ಣತಮ್ಮ ಅಕ್ಕತಂಗಿಯನ್ನು ಪ್ರೀತಿಸುವುದು ಏಕೆ ಪ್ರಾಮುಖ್ಯ ಅಂತ ನಿನಗೀಗ ಅರ್ಥವಾಯಿತಾ?— ಅವರನ್ನು ಪ್ರೀತಿಸದಿದ್ದರೆ ನೀನು ಸಹ ಯಾರ ಮಗುವಾಗುತ್ತಿ?— ಹೌದು, ಪಿಶಾಚನ ಮಗು. ಹಾಗಾಗಲು ನೀನು ಇಷ್ಟಪಡೋದಿಲ್ಲ ತಾನೆ?— ಹಾಗಾದರೆ, ದೇವರ ಮಗುವಾಗಿರಲು ನಿನಗೆ ಇಷ್ಟ ಅಂತ ಹೇಗೆ ತೋರಿಸಬಲ್ಲೆ?— ನಿನ್ನ ಒಡಹುಟ್ಟಿದವರನ್ನು ಮನಸ್ಸಾರೆ ಪ್ರೀತಿಸುವ ಮೂಲಕ.

ಅದ್ಸರಿ ಪ್ರೀತಿ ಅಂದರೇನು?— ನಮ್ಮೊಳಗಿರುವ ಗಾಢವಾದ ಭಾವನೆಯೇ ಪ್ರೀತಿ. ಇತರರಿಗೆ ಒಳ್ಳೇದನ್ನು ಮಾಡುವಂತೆ ಆ ಭಾವನೆ ನಮ್ಮನ್ನು ಪ್ರಚೋದಿಸುತ್ತದೆ. ಇತರರ ಬಗ್ಗೆ ಆಪ್ತ ಭಾವನೆ ಇದ್ದು ಅವರಿಗಾಗಿ ಸತ್ಕಾರ್ಯಗಳನ್ನು ಮಾಡುವಾಗ ಅವರೆಡೆಗೆ ನಮಗೆ ಪ್ರೀತಿಯಿದೆ ಎಂದು ತೋರಿಸುತ್ತೇವೆ. ಅಣ್ಣತಮ್ಮ ಅಕ್ಕತಂಗಿಯನ್ನು ಪ್ರೀತಿಸಬೇಕೆಂದು ನಾವು ಕಲಿತೆವಲ್ವಾ. ನಮ್ಮ ನಿಜವಾದ ಸಹೋದರ ಸಹೋದರಿಯರು ಯಾರು?— ಯೇಸು ಕಲಿಸಿದ ಪಾಠ ನಿನಗೆ ನೆನಪಿರಬಹುದು. ಅವರು ಪ್ರಪಂಚದಾದ್ಯಂತ ಇರುವ ನಮ್ಮ ಕ್ರೈಸ್ತ ಸಹೋದರ ಸಹೋದರಿಯರೇ ಆಗಿದ್ದಾರೆ.

ಒಡಹುಟ್ಟಿದವರನ್ನು ಪ್ರೀತಿಸುತ್ತೀ ಅಂತ ಹೇಗೆ ತೋರಿಸಬಲ್ಲೆ?

ನಮ್ಮ ಈ ಕ್ರೈಸ್ತ ಸಹೋದರ ಸಹೋದರಿಯರನ್ನು ಪ್ರೀತಿಸುವುದು ತುಂಬಾ ಪ್ರಾಮುಖ್ಯವೇಕೆ?— ಬೈಬಲಿನ ಈ ಮಾತನ್ನು ಗಮನಿಸು: ‘ಕಣ್ಣ ಮುಂದೆ ಇರುವ ತನ್ನ ಸಹೋದರನನ್ನು [ಅಥವಾ ಸಹೋದರಿಯನ್ನು] ಪ್ರೀತಿಸದವನು ಕಾಣದಿರುವ ದೇವರನ್ನು ಪ್ರೀತಿಸಲಾರನು.’ (1 ಯೋಹಾನ 4:20) ಹಾಗಾಗಿ, ನಾವು ಕೇವಲ ಕೆಲವೇ ಕ್ರೈಸ್ತ ಸಹೋದರ ಸಹೋದರಿಯರನ್ನಲ್ಲ ಎಲ್ಲರನ್ನೂ ಪ್ರೀತಿಸಬೇಕು. ಯೇಸು ಕೂಡ ಹೀಗಂದನು: “ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.” (ಯೋಹಾನ 13:35) ನೀನು ಎಲ್ಲಾ ಸಹೋದರ ಸಹೋದರಿಯರನ್ನು ಪ್ರೀತಿಸುತ್ತೀಯಾ?— ಪ್ರೀತಿಸಬೇಕು. ಇಲ್ಲವಾದರೆ ನೀನು ದೇವರನ್ನು ಮನಸ್ಸಾರೆ ಪ್ರೀತಿಸುತ್ತಿಲ್ಲ ಎಂದರ್ಥ.

ಸಹೋದರ ಸಹೋದರಿಯರನ್ನು ನಾವು ನಿಜವಾಗಿಯೂ ಪ್ರೀತಿಸುತ್ತೇವೆ ಅಂತ ಹೇಗೆ ತೋರಿಸಬಲ್ಲೆವು?— ನಮಗೆ ಅವರ ಮೇಲೆ ನಿಜವಾಗಿಯೂ ಪ್ರೀತಿ ಇರೋದಾದರೆ ಅವರ ಹತ್ತಿರ ಮಾತಾಡದೇ ಇರೋಲ್ಲ. ಅವರನ್ನು ದೂರ ಮಾಡೋಲ್ಲ. ಬದಲಿಗೆ ಸ್ನೇಹಪರರಾಗಿ ವರ್ತಿಸುತ್ತೇವೆ. ಯಾವಾಗಲೂ ಒಳ್ಳೇದನ್ನು ಮಾಡುತ್ತೇವೆ. ನಮ್ಮ ಹತ್ತಿರ ಇರುವುದನ್ನು ಅವರೊಂದಿಗೆ ಹಂಚಿಕೊಳ್ಳುತ್ತೇವೆ. ತೊಂದರೆಯಲ್ಲಿರುವಾಗ ಸಹಾಯ ಹಸ್ತ ಚಾಚುತ್ತೇವೆ. ಏಕೆಂದರೆ ನಾವೆಲ್ಲರೂ ಒಂದು ದೊಡ್ಡ ಕ್ರೈಸ್ತ ಕುಟುಂಬದ ಭಾಗವಾಗಿದ್ದೇವೆ.

ನಾವು ಎಲ್ಲಾ ಸಹೋದರ ಸಹೋದರಿಯರನ್ನು ಮನಸ್ಸಾರೆ ಪ್ರೀತಿಸುವಾಗ ಅದೇನನ್ನು ತೋರಿಸಿಕೊಡುತ್ತದೆ?— ನಾವೆಲ್ಲರೂ ಯೇಸುವಿನ ಶಿಷ್ಯರೆಂದು ತೋರಿಸಿಕೊಡುತ್ತದೆ. ಯೇಸುವಿನ ಶಿಷ್ಯರಾಗಿರೋದಲ್ವಾ ನಮ್ಮೆಲ್ಲರ ಇಷ್ಟ?—

ಗಲಾತ್ಯ 6:10 ಮತ್ತು 1 ಯೋಹಾನ 4:8, 21 ರಲ್ಲಿ ಸಹೋದರ ಸಹೋದರಿಯರನ್ನು ಪ್ರೀತಿಸುವುದರ ಕುರಿತು ತಿಳಿಸಲಾಗಿದೆ. ಬೈಬಲನ್ನು ತೆರೆದು ಈ ವಚನಗಳನ್ನು ಏಕೆ ಓದಬಾರದು?