ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 20

ಮೊದಲಿಗನಾಗಬೇಕು ಎಂದು ಆಸೆಪಡುತ್ತಿಯಾ?

ಮೊದಲಿಗನಾಗಬೇಕು ಎಂದು ಆಸೆಪಡುತ್ತಿಯಾ?

ಯಾವಾಗಲೂ ತಾನೇ ಮುಂದಿರಬೇಕೆಂದು ಆಸೆಪಡುವ ಮಕ್ಕಳನ್ನು ನೀನು ನೋಡಿದ್ದೀಯಾ?— ತಾವು ಮುಂದೆ ಹೋಗಲಿಕ್ಕಾಗಿ ಸಾಲಿನಲ್ಲಿ ನಿಂತುಕೊಂಡಿರುವ ಬೇರೆ ಮಕ್ಕಳನ್ನು ನೂಕಿಬಿಡಲು ಸಹ ಅವರು ಹಿಂದೆ ಮುಂದೆ ನೋಡೋದಿಲ್ಲ. ಈ ರೀತಿಯ ಸ್ವಭಾವವಿರುವ ಹುಡುಗನೋ ಹುಡುಗಿಯೋ ನಿನಗೆ ಗೊತ್ತಾ?— ಈ ರೀತಿ ಮಕ್ಕಳು ಮಾತ್ರ ಮಾಡೋದಿಲ್ಲ, ದೊಡ್ಡವರು ಸಹ ಮಾಡುತ್ತಾರೆ. ಬೇರೆಯವರಿಗಿಂತಲೂ ತಮಗೆ ಪ್ರಮುಖ ಸ್ಥಾನಮಾನ ಬೇಕೆಂದು ಬಯಸಿದ್ದ ಜನರನ್ನು ಮಹಾ ಬೋಧಕನು ನೋಡಿದನು. ಅದು ಅವನಿಗೆ ಒಂಚೂರು ಇಷ್ಟವಾಗಲಿಲ್ಲ.

ತಾನೇ ಮುಂದಿರಬೇಕೆಂದು ಬಯಸುವ ಜನರನ್ನು ನೀನು ನೋಡಿದ್ದೀಯಾ?

ಬೈಬಲ್‌ ಆ ಘಟನೆಯ ಕುರಿತು ತಿಳಿಸುತ್ತದೆ. ಒಂದು ದಿನ, ಒಬ್ಬ ಪ್ರಮುಖ ಧಾರ್ಮಿಕ ನಾಯಕನಾಗಿದ್ದ ಫರಿಸಾಯನ ಮನೆಯಲ್ಲಿ ಔತಣವಿತ್ತು. ಈ ಔತಣಕ್ಕೆ ಯೇಸುವಿಗೆ ಕೂಡ ಆಮಂತ್ರಣವಿತ್ತು. ಯೇಸು ಔತಣಕ್ಕೆ ಹೋದಾಗ ಅಲ್ಲಿ ಬೇರೆ ಬೇರೆ ಅತಿಥಿಗಳು ಬಂದು ಪ್ರಮುಖ ವ್ಯಕ್ತಿಗಳೆಂದು ತೋರಿಸಿಕೊಳ್ಳಲು ಶ್ರೇಷ್ಠವಾದ ಪಂಕ್ತಿಯಲ್ಲಿದ್ದ ಆಸನಗಳನ್ನು ಆರಿಸಿಕೊಂಡು ಕೂತುಕೊಳ್ಳುತ್ತಿದ್ದರು. ಅದನ್ನು ಗಮನಿಸಿದ ಯೇಸು ಅಲ್ಲಿದ್ದ ಅತಿಥಿಗಳಿಗೆ ಒಂದು ಕಥೆಯನ್ನು ಹೇಳಿದನು. ಅದನ್ನು ನಿನಗೆ ಹೇಳಲಾ?—

ಯೇಸು ಅಲ್ಲಿದ್ದವರಿಗೆ, ‘ಯಾರಾದರೂ ನಿಮ್ಮನ್ನು ಮದುವೆಯ ಔತಣಕ್ಕೆ ಆಮಂತ್ರಿಸಿದರೆ ಶ್ರೇಷ್ಠ ಪಂಕ್ತಿಯಲ್ಲಿ ಕೂತುಕೊಳ್ಳಬೇಡಿ’ ಎಂದು ಹೇಳಿದನು. ಯೇಸು ಹಾಗೇಕೆ ಹೇಳಿದನು ಗೊತ್ತಾ?— ಅದನ್ನು ಅವನೇ ವಿವರಿಸುತ್ತಾನೆ. ಔತಣಕ್ಕೆ ಬೇರೆ ಗಣ್ಯ ವ್ಯಕ್ತಿಗಳನ್ನು ಸಹ ಆಮಂತ್ರಿಸಿರಬಹುದು. ಅಂಥ ಒಬ್ಬ ಗಣ್ಯ ವ್ಯಕ್ತಿ ಬಂದಾಗ ಔತಣವನ್ನು ಏರ್ಪಡಿಸಿದವನು, ‘ಇವರು ಈ ಸ್ಥಳದಲ್ಲಿ ಕೂತುಕೊಳ್ಳಲಿ, ನೀನೆದ್ದು ಬೇರೆ ಜಾಗಕ್ಕೆ ಹೋಗು’ ಎಂದು ಹೇಳಿಬಿಡಬಹುದು. ಈ ಚಿತ್ರದಲ್ಲಿ ಅದನ್ನೇ ನೀನು ನೋಡಬಹುದು. ಮೊದಲೇ ಬಂದು ಶ್ರೇಷ್ಠ ಪಂಕ್ತಿಯಲ್ಲಿ ಕೂತುಕೊಂಡವನಿಗೆ ಎದ್ದು ಹೋಗಲು ಈಗ ಹೇಗನಿಸುತ್ತೆ?— ಅವನೆದ್ದು ಶ್ರೇಷ್ಠವಲ್ಲದ ಪಂಕ್ತಿಗೆ ಹೋಗಿ ಕೂತುಕೊಳ್ಳುವುದನ್ನು ಅಲ್ಲಿದ್ದ ಅತಿಥಿಗಳೆಲ್ಲರೂ ಗಮನಿಸುವುದರಿಂದ ತುಂಬಾ ನಾಚಿಕೆಯಾಗಬಹುದು.

ಹೀಗೆ, ಅತಿ ಶ್ರೇಷ್ಠ ಸ್ಥಾನ ಬೇಕೆಂದು ಆಸೆಪಡುವುದು ಸರಿಯಲ್ಲ ಎಂದು ಯೇಸು ತೋರಿಸಿದನು. ಯೇಸು ಇನ್ನೂ ಹೇಳಿದ್ದು: ‘ನಿಮ್ಮನ್ನು ಮದುವೆಯ ಔತಣಕ್ಕೆ ಆಮಂತ್ರಿಸಿದಾಗ ಹೋಗಿ ಶ್ರೇಷ್ಠವಲ್ಲದ ಪಂಕ್ತಿಯಲ್ಲಿ ಕುಳಿತುಕೊಳ್ಳಿ. ನಿಮ್ಮನ್ನು ಆಮಂತ್ರಿಸಿದವನು ಬಂದು, “ಸ್ನೇಹಿತನೇ, ನೀನೆದ್ದು ಶ್ರೇಷ್ಠವಾದ ಪಂಕ್ತಿಯಲ್ಲಿ ಕೂತ್ಕೊ” ಎಂದು ವಿನಂತಿಸಿಕೊಳ್ಳಬಹುದು. ಬೇರೆಲ್ಲಾ ಅತಿಥಿಗಳ ಮುಂದೆ ನೀವೆದ್ದು ಶ್ರೇಷ್ಠವಾದ ಸ್ಥಾನದಲ್ಲಿ ಕೂತುಕೊಳ್ಳುವಾಗ ನಿಮಗೆ ಗೌರವ ಉಂಟಾಗುವುದು.’—ಲೂಕ 14:1, 7-11.

ಶ್ರೇಷ್ಠ ಪಂಕ್ತಿಯಲ್ಲಿದ್ದ ಆಸನಗಳನ್ನು ಆರಿಸಿಕೊಂಡ ವ್ಯಕ್ತಿಗಳ ಕುರಿತು ಯೇಸು ತಿಳಿಸಿದಾಗ ಯಾವ ಪಾಠ ಕಲಿಸಿದನು?

ಯೇಸು ಹೇಳಿದ ಕಥೆಯ ನೀತಿಪಾಠ ಏನೆಂದು ಅರ್ಥವಾಯಿತಾ?— ಅರ್ಥವಾಯಿತಾ ಎಂದು ತಿಳಿದುಕೊಳ್ಳಲು ಒಂದು ಉದಾಹರಣೆ ನೋಡೋಣ. ನಿನ್ನ ಜೊತೆ ಬಸ್ಸಿಗಾಗಿ ತುಂಬಾ ಜನ ಕಾಯುತ್ತಿದ್ದಾರೆ ಅಂತ ಇಟ್ಟುಕೋ. ಬಸ್ಸ್‌ ಬಂದಾಗ ನೀನು ಓಡಿ ಹೋಗಿ ಸೀಟು ಹಿಡಿದು ಕುಳಿತುಕೊಂಡು, ಒಬ್ಬ ವೃದ್ಧ ವ್ಯಕ್ತಿಯನ್ನು ನಿಂತಿರಲು ಬಿಡುವುದು ಸರಿಯಾ?— ಹೀಗೆ ಮಾಡಿದರೆ ಯೇಸುವಿಗೆ ಇಷ್ಟ ಆಗುತ್ತದಾ?—

ಯೇಸು ಇದನ್ನೆಲ್ಲಾ ನೋಡೋದಿಲ್ಲ ನಾವೇನು ಮಾಡಿದರೂ ಪರವಾಗಿಲ್ಲ ಅಂತ ಯಾರಾದರೂ ನಿನಗೆ ಹೇಳಬಹುದು. ನೀನದನ್ನು ನಂಬುತ್ತೀಯಾ?— ಯೇಸು ಔತಣಕ್ಕೆ ಹೋಗಿದ್ದಾಗ, ಜನರು ಶ್ರೇಷ್ಠ ಪಂಕ್ತಿಯ ಆಸನಗಳನ್ನು ಆರಿಸಿಕೊಳ್ಳುತ್ತಾ ಇದ್ದದನ್ನು ಗಮನಿಸಿದನು. ಅದೇ ರೀತಿ, ನಾವೇನು ಮಾಡುತ್ತೇವೆಂದು ಯೇಸು ಗಮನಿಸುತ್ತಾನೆ ಎಂದು ನಿನಗೆ ಅನಿಸೋದಿಲ್ವಾ?— ಅಷ್ಟೇ ಅಲ್ಲ, ಯೇಸು ಈಗ ಸ್ವರ್ಗದಲ್ಲಿರುವುದರಿಂದ ನಾವು ಮಾಡುವ ಎಲ್ಲಾ ವಿಷಯಗಳನ್ನು ನೋಡಲು ಅವನಿಗೆ ಸಾಧ್ಯ.

ಯಾವಾಗಲೂ ಮೊದಲಿಗನಾಗಬೇಕೆಂಬ ಸ್ವಭಾವ ಇದ್ದರೆ ಸಮಸ್ಯೆಗಳು ಉಂಟಾಗಬಹುದು. ಚಿಕ್ಕ ಪುಟ್ಟ ವಿಷಯಗಳಿಗಾಗಿ ಮಾತಿಗೆ ಮಾತು ಬೆಳೆದು ಜಗಳವಾಗಬಹುದು. ಉದಾಹರಣೆಗೆ ಮಕ್ಕಳೆಲ್ಲಾ ಬಸ್ಸಿನಲ್ಲಿ ಒಟ್ಟಿಗೆ ಸ್ಕೂಲಿಗೆ ಹೋಗುತ್ತಿದ್ದಾರೆಂದು ಇಟ್ಕೋ. ಬಸ್ಸಿನ ಬಾಗಿಲು ತೆರೆದ ಕೂಡಲೇ ಮಕ್ಕಳು ಇಷ್ಟವಾದ ಸೀಟಿನಲ್ಲೊ ಕಿಟಕಿ ಪಕ್ಕದ ಸೀಟಿನಲ್ಲೊ ಕೂತುಕೊಳ್ಳಲು ನಾ ಮುಂದು ತಾ ಮುಂದು ಅಂತ ನುಗ್ಗಬಹುದು. ಆಗ ಏನಾಗಸಾಧ್ಯವಿದೆ?— ಸೀಟಿಗಾಗಿ ಒಬ್ಬರಿಗೊಬ್ಬರು ಕಿತ್ತಾಡಬಹುದು.

ಹೌದು, ನಾ ಮುಂದು ಎಂಬ ಭಾವನೆಯಿಂದ ತುಂಬಾ ಸಮಸ್ಯೆಗಳು ಬರುತ್ತವೆ. ಇದು ಯೇಸುವಿನ ಅಪೊಸ್ತಲರಲ್ಲೂ ಸಮಸ್ಯೆ ಉಂಟುಮಾಡಿತ್ತು. ನಾವು ಆರನೇ ಅಧ್ಯಾಯದಲ್ಲಿ ಕಲಿತಂತೆ, ಆ ಅಪೊಸ್ತಲರು ತಮ್ಮಲ್ಲಿ ಯಾರು ದೊಡ್ಡವನು ಎಂದು ವಾಗ್ವಾದ ಮಾಡಿಕೊಂಡಿದ್ದರು. ನೆನಪಿದೆಯಾ, ಆವಾಗ ಯೇಸು ಏನು ಮಾಡಿದನು ಅಂತ?— ಹೌದು, ಅವರನ್ನು ತಿದ್ದಿದನು. ಆದರೆ ಸ್ವಲ್ಪ ದಿನಗಳಾದ ಮೇಲೆ ಅವರು ಇನ್ನೊಮ್ಮೆ ವಾಗ್ವಾದ ಮಾಡಿಕೊಂಡರು. ಅದು ಹೇಗೆ ಆರಂಭವಾಯಿತೆಂದು ನೋಡೋಣ.

ಯೇಸುವಿನೊಂದಿಗೆ ಅಪೊಸ್ತಲರು ಹಾಗೂ ಬೇರೆ ಕೆಲವು ಜನರು ಯೆರೂಸಲೇಮ್‌ ಪಟ್ಟಣಕ್ಕೆ ಹೋಗುತ್ತಿದ್ದರು. ಯೇಸುವಿನೊಂದಿಗೆ ಇದು ಅವರ ಕೊನೆ ಪ್ರಯಾಣವಾಗಿತ್ತು. ಯೇಸು ತನ್ನ ರಾಜ್ಯಾಳಿಕೆಯ ಕುರಿತು ಅನೇಕ ವಿಷಯ ಹೇಳಿದ್ದರಿಂದ ಯಾಕೋಬ ಯೋಹಾನರು ಅವನೊಂದಿಗೆ ತಾವು ರಾಜರಾಗಿ ಆಳುವುದರ ಬಗ್ಗೆ ಯೋಚಿಸತೊಡಗಿದರು. ತಮ್ಮ ಈ ಆಸೆಯ ಕುರಿತು ಅವರು ತಮ್ಮ ತಾಯಿಯಾದ ಸಲೋಮೆಯೊಂದಿಗೂ ಮಾತಾಡಿದ್ದರು. (ಮತ್ತಾಯ 27:56; ಮಾರ್ಕ 15:40) ಆದುದರಿಂದ ಈಗ ಯೆರೂಸಲೇಮಿಗೆ ಹೋಗುತ್ತಿದ್ದಾಗ ಸಲೋಮೆಯು ತನ್ನ ಮಕ್ಕಳ ಆಸೆಯನ್ನು ಯೇಸುವಿನ ಮುಂದಿಡಲು ಅವನ ಬಳಿ ಬಂದು ಪ್ರಣಾಮಮಾಡಿದಳು.

ಯೇಸು ಅವಳಿಗೆ “ನಿನಗೇನು ಬೇಕು?” ಎಂದು ಕೇಳಿದನು. ಅದಕ್ಕವಳು, ‘ನೀನು ರಾಜನಾಗಿ ಆಳುವಾಗ ನನ್ನ ಒಬ್ಬ ಮಗನಿಗೆ ನಿನ್ನ ಬಲಗಡೆಯಲ್ಲಿ ಮತ್ತೊಬ್ಬನಿಗೆ ಎಡಗಡೆಯಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡು’ ಎಂದು ವಿನಂತಿಸಿದಳು. ತಾಯಿಯ ಮೂಲಕ ಯಾಕೋಬ ಯೋಹಾನರು ಯೇಸುವಿನ ಹತ್ತಿರ ಈ ಬೇಡಿಕೆ ಇಟ್ಟದ್ದು ಉಳಿದ ಹತ್ತು ಮಂದಿ ಅಪೊಸ್ತಲರಿಗೆ ಗೊತ್ತಾದಾಗ ಅವರಿಗೆ ಹೇಗನಿಸಿದ್ದಿರಬೇಕು?—

ಸಲೋಮೆಯು ಯೇಸುವಿನ ಬಳಿ ಏನನ್ನು ಕೇಳಿದಳು? ಆಮೇಲೆ ಏನಾಯಿತು?

ಹೌದು, ಅವರಿಗೆ ಯಾಕೋಬ ಯೋಹಾನರ ಮೇಲೆ ತುಂಬಾ ಕೋಪ ಬಂತು. ಆಗ ಯೇಸು ತನ್ನ ಎಲ್ಲಾ ಅಪೊಸ್ತಲರನ್ನು ಕರೆದು ಬುದ್ಧಿವಾದ ನೀಡುತ್ತಾನೆ. ಈ ಲೋಕದ ಅರಸರು ದೊಡ್ಡ ಅಧಿಕಾರ ಸ್ಥಾನದಲ್ಲಿ ಮೆರೆಯಲು ಇಷ್ಟಪಡುತ್ತಾರೆ. ತಮ್ಮ ಕೈಕೆಳಗೆ ಇರುವವರ ಮೇಲೆ ಅಧಿಕಾರ ಚಲಾಯಿಸಲು ಬಯಸುತ್ತಾರೆ. ಆದರೆ ತನ್ನ ಶಿಷ್ಯರು ಅವರಂತೆ ಇರಬಾರದು ಎಂದು ಯೇಸು ಅವರಿಗೆ ಬುದ್ಧಿ ಹೇಳಿದನು. ಅಷ್ಟೇ ಅಲ್ಲ, ‘ನಿಮ್ಮಲ್ಲಿ ಮೊದಲನೆಯವನಾಗಲು ಇಷ್ಟಪಡುವವನು ಆಳಿನಂತೆ ಸೇವೆ ಮಾಡಬೇಕು’ ಎಂದೂ ಹೇಳಿದನು. ಇದರ ಬಗ್ಗೆ ಸ್ವಲ್ಪ ಯೋಚಿಸು.—ಮತ್ತಾಯ 20:20-28.

ಆಳು ಏನು ಮಾಡುತ್ತಾನೆ ಗೊತ್ತಾ?— ಬೇರೆಯವರ ಸೇವೆಮಾಡುತ್ತಾನೆ. ಬೇರೆಯವರು ಬಂದು ತನ್ನ ಸೇವೆಮಾಡಬೇಕೆಂದು ಅಪೇಕ್ಷಿಸುವುದಿಲ್ಲ. ಉನ್ನತ ಸ್ಥಾನವನ್ನೋ ಪ್ರಾಮುಖ್ಯ ವ್ಯಕ್ತಿಯಾಗಿರುವುದನ್ನೋ ಅವನು ಬಯಸುವುದಿಲ್ಲ. ತಾನೊಬ್ಬ ತೀರ ಸಾಧಾರಣ ವ್ಯಕ್ತಿಯೆಂದು ಭಾವಿಸುತ್ತಾನೆ. ಯೇಸು ಹೇಳಿದ್ದನ್ನು ಈಗ ನೆನಪಿಸಿಕೊ. ಯಾರು ಮೊದಲನೆಯವರಾಗಲು ಇಷ್ಟಪಡುತ್ತಾರೊ ಅವರು ಬೇರೆಯವರಿಗೆ ಆಳಿನಂತೆ ಸೇವೆ ಮಾಡಬೇಕೆಂದು ಅವನು ಹೇಳಿದನಲ್ವಾ.

ಇದರಿಂದ ನಾವೇನು ಪಾಠ ಕಲಿಯಬಹುದು ಅಂತ ನಿನಗನಿಸುತ್ತದೆ?— ಒಬ್ಬ ಆಳು ಯಜಮಾನನು ಕೂತುಕೊಳ್ಳುವ ಕುರ್ಚಿಯಲ್ಲಿ ತಾನು ಕೂತುಕೊಳ್ಳಬೇಕೆಂದು ವಾದ ಮಾಡುತ್ತಾನಾ? ಅಥವಾ ಯಜಮಾನನಿಗಿಂತ ಮೊದಲು ತಾನು ಊಟಮಾಡಬೇಕೆಂದು ವಾದ ಮಾಡುತ್ತಾನಾ? ನೀನೇನು ಹೇಳುತ್ತಿ?— ಒಬ್ಬ ಆಳು ತನಗಿಂತಲೂ ತನ್ನ ಯಜಮಾನನಿಗೇ ಹೆಚ್ಚು ಮಹತ್ವ ಕೊಡುತ್ತಾನೆ ಎಂದು ಯೇಸು ವಿವರಿಸಿದನು.—ಲೂಕ 17:7-10.

ಹಾಗಾದರೆ, ನಾನೇ ಮುಂದಿರಬೇಕು ಮೊದಲಿಗನಾಗಬೇಕು ಎಂದು ಪ್ರಯತ್ನಿಸುವುದರ ಬದಲು ನಾವೇನು ಮಾಡಬೇಕು?— ಆಳಿನಂತೆ ಬೇರೆಯವರ ಸೇವೆಮಾಡಬೇಕು. ಅಂದರೆ ನಮಗಿಂತಲೂ ಬೇರೆಯವರಿಗೆ ಪ್ರಾಮುಖ್ಯತೆ ಕೊಡಬೇಕು. ಯಾವೆಲ್ಲಾ ರೀತಿಯಲ್ಲಿ ನಾವು ಬೇರೆಯವರಿಗೆ ಪ್ರಾಮುಖ್ಯತೆ ಕೊಡಬಹುದು ಅಂತ ಹೇಳ್ತೀಯಾ?— 40 ಮತ್ತು 41ನೇ ಪುಟವನ್ನು ಸ್ವಲ್ಪ ತೆರೆಯುತ್ತೀಯಾ. ಬೇರೆಯವರಿಗೆ ಪ್ರಾಮುಖ್ಯತೆ ಕೊಡಲಿಕ್ಕಾಗಿ ನಾವು ಯಾವೆಲ್ಲಾ ರೀತಿಯಲ್ಲಿ ಅವರ ಸೇವೆ ಮಾಡಬಹುದೆಂದು ನಾವಲ್ಲಿ ಪುನಃ ನೋಡೋಣ.

ನಿನಗೆ ನೆನಪಿರಬಹುದು, ಮಹಾ ಬೋಧಕನೂ ಬೇರೆಯವರ ಸೇವೆ ಮಾಡಿದನು. ಅಪೊಸ್ತಲರೊಂದಿಗೆ ತಾನು ಕಳೆದ ಕೊನೆಯ ಸಾಯಂಕಾಲದಂದು ಅವರ ಪಾದಗಳನ್ನು ತೊಳೆದನು. ಹೀಗೆ ಇತರರು ತನಗಿಂತಲೂ ಪ್ರಮುಖರು ಎಂದು ತೋರಿಸಿಕೊಟ್ಟನು. ನಾವು ಸಹ ಬೇರೆಯವರ ಸೇವೆ ಮಾಡುವ ಮೂಲಕ ಇತರರಿಗೆ ಮೊದಲ ಸ್ಥಾನ ಕೊಡುವಲ್ಲಿ, ಮಹಾ ಬೋಧಕನನ್ನೂ ಯೆಹೋವ ದೇವರನ್ನೂ ಸಂತೋಷಪಡಿಸುವೆವು.

ನಮಗಿಂತಲೂ ಬೇರೆಯವರಿಗೆ ಪ್ರಾಮುಖ್ಯತೆಯನ್ನು ಕೊಡುವಂತೆ ನಮ್ಮನ್ನು ಪ್ರೋತ್ಸಾಹಿಸುವ ಇನ್ನೂ ಹೆಚ್ಚಿನ ಬೈಬಲ್‌ ವಚನಗಳನ್ನು ನಾವೀಗ ಓದೋಣ: ಲೂಕ 9:48; ರೋಮನ್ನರಿಗೆ 12:3 ಮತ್ತು ಫಿಲಿಪ್ಪಿ 2:3, 4.