ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 27

ಸರ್ವಶಕ್ತ ದೇವರು ಯಾರು?

ಸರ್ವಶಕ್ತ ದೇವರು ಯಾರು?

ಸರ್ವಶಕ್ತ ದೇವರು ಯಾರು ಎಂದು ತಿಳಿಯುವುದು ತುಂಬಾ ಪ್ರಾಮುಖ್ಯ. ಏಕೆ ಗೊತ್ತಾ?— ಏಕೆಂದರೆ ಜನರು ಬೇರೆ ಬೇರೆ ದೇವರುಗಳನ್ನು ಆರಾಧಿಸುತ್ತಾರೆ. (1 ಕೊರಿಂಥ 8:5) ಒಮ್ಮೆ ಅಪೊಸ್ತಲ ಪೌಲನು ಯೆಹೋವನ ಶಕ್ತಿಯ ಸಹಾಯದಿಂದ ಒಬ್ಬ ಹುಟ್ಟು ಕುಂಟನನ್ನು ಗುಣಪಡಿಸಿದನು. ಈ ಅದ್ಭುತ ನೋಡಿದ ಜನರು ಪೌಲ ಮತ್ತು ಅವನ ಗೆಳೆಯನಾದ ಬಾರ್ನಬನನ್ನು ದೇವರುಗಳೆಂದು ಭಾವಿಸಿದರು. ಗಟ್ಟಿಯಾಗಿ ಕೂಗುತ್ತಾ “ದೇವತೆಗಳು ಮನುಷ್ಯರ ರೂಪದಲ್ಲಿ ನಮ್ಮ ಬಳಿಗೆ ಇಳಿದು ಬಂದಿದ್ದಾರೆ!” ಅಂತ ಹೇಳಿ ಆರಾಧಿಸತೊಡಗಿದರು. ಪೌಲನನ್ನು ‘ಹರ್ಮೀಸ್‌’ ಎಂದೂ ಬಾರ್ನಬನನ್ನು ‘ಸ್ಯೂಸ್‌’ ಎಂದೂ ಕರೆದರು. ಇವೆರಡು ಸುಳ್ಳು ದೇವತೆಗಳ ಹೆಸರಾಗಿದ್ದವು.

ಆದರೆ ತಮ್ಮನ್ನು ಆರಾಧಿಸದಂತೆ ಪೌಲ ಬಾರ್ನಬರು ಆ ಜನರನ್ನು ತಡೆದರು. ಅವರು ಜನರ ಗುಂಪಿನೊಳಗೆ ನುಗ್ಗಿ, ‘ನೀವು ಈ ವ್ಯರ್ಥ ಕಾರ್ಯಗಳನ್ನು ಬಿಟ್ಟು ಜೀವವುಳ್ಳ ದೇವರ ಕಡೆಗೆ ತಿರುಗಿಕೊಳ್ಳಿರಿ’ ಎಂದು ಹೇಳಿದರು. (ಅಪೊಸ್ತಲರ ಕಾರ್ಯಗಳು 14:8-15) ಎಲ್ಲವನ್ನು ಉಂಟುಮಾಡಿದ ‘ಜೀವವುಳ್ಳ ದೇವರು’ ಯಾರು?— ಹೌದು, ‘ಭೂಲೋಕದಲ್ಲೆಲ್ಲಾ ಸರ್ವೋನ್ನತನಾದ’ ಯೆಹೋವ ದೇವರೇ. ಯೇಸು ಯೆಹೋವನೊಬ್ಬನೇ ‘ಸತ್ಯ ದೇವರು’ ಎಂದು ಹೇಳಿದನು. ಹಾಗಿರುವಾಗ, ನಾವು ಯಾರಿಗೆ ಮಾತ್ರ ಆರಾಧನೆ ಸಲ್ಲಿಸಬೇಕು?— ಶಹಬ್ಬಾಸ್‌! ಯೆಹೋವನಿಗೆ ಮಾತ್ರ.—ಕೀರ್ತನೆ 83:18; ಯೋಹಾನ 17:3; ಪ್ರಕಟನೆ 4:11.

ಜನರು ತಮಗೆ ಆರಾಧನೆ ಸಲ್ಲಿಸಲು ಬಂದಾಗ ಪೌಲ ಬಾರ್ನಬರು ಏಕೆ ತಡೆದರು?

ಆದರೆ ಹೆಚ್ಚಿನವರು ‘ಸತ್ಯ ದೇವರನ್ನು’ ಬಿಟ್ಟು ಬೇರೆ ಬೇರೆ ದೇವರುಗಳನ್ನು ಆರಾಧಿಸುತ್ತಾರೆ. ಮರ, ಕಲ್ಲು, ಲೋಹ ಮುಂತಾದವುಗಳಿಂದ ಮಾಡಿದ ವಿಗ್ರಹಗಳನ್ನು ಪೂಜಿಸುತ್ತಾರೆ. (ವಿಮೋಚನಕಾಂಡ 32:4-7; ಯಾಜಕಕಾಂಡ 26:1; ಯೆಶಾಯ 44:14-17) ಅಷ್ಟೇನಾ, ಜನಪ್ರಿಯ ವ್ಯಕ್ತಿಗಳನ್ನು ದೇವಮಾನವರೆಂದು ಸಂಬೋಧಿಸುತ್ತಾರೆ. ಸಿನೆಮಾ ತಾರೆಯರು ಸಹ ಆರಾಧ್ಯ ದೈವವಾಗಿ ಬಿಡುತ್ತಾರೆ. ಮನುಷ್ಯರಿಗೆ ಹೀಗೆ ಮಹಿಮೆ ಸಲ್ಲಿಸುವುದು ಸರಿಯಾ?—

ಸೌಲನು ಅಪೊಸ್ತಲ ಪೌಲನಾದ ಮೇಲೆ ಹೀಗೆ ಬರೆದನು: ‘ಈ ಪ್ರಪಂಚದ ದೇವರು ಅವಿಶ್ವಾಸಿ ಜನರ ಮನಸ್ಸನ್ನು ಕುರುಡುಮಾಡಿದ್ದಾನೆ.’ (2 ಕೊರಿಂಥ 4:4) ಈ ದೇವರು ಯಾರು?— ಹೌದು, ಪಿಶಾಚನಾದ ಸೈತಾನ. ಮನುಷ್ಯರನ್ನು ಮತ್ತು ವಸ್ತುಗಳನ್ನು ಆರಾಧಿಸುವಂತೆ ಸೈತಾನನು ಜನರ ಮನಸ್ಸನ್ನು ಪ್ರೇರಿಸಿದ್ದಾನೆ.

ತನ್ನನ್ನು ಆರಾಧಿಸುವಂತೆ ಸೈತಾನನು ಯೇಸುವನ್ನು ಪ್ರೇರಿಸಲು ಪ್ರಯತ್ನಿಸಿದಾಗ ಯೇಸು ಅವನಿಗೆ ಏನು ಹೇಳಿದನೆಂದು ನೆನಪಿದೆಯಾ?— “ನಿನ್ನ ದೇವರಾಗಿರುವ ಯೆಹೋವನನ್ನೇ ನೀನು ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆಯನ್ನು ಸಲ್ಲಿಸಬೇಕು” ಅಂತ ಹೇಳಿದನು. (ಮತ್ತಾಯ 4:10) ನಮ್ಮ ಆರಾಧನೆಯು ಯೆಹೋವನಿಗೆ ಮಾತ್ರ ಸಲ್ಲಬೇಕೆಂದು ಯೇಸು ಸ್ಪಷ್ಟವಾಗಿ ತಿಳಿಸಿದನು. ಯೆಹೋವನನ್ನು ಮಾತ್ರವೇ ಆರಾಧಿಸಬೇಕೆಂಬ ಸತ್ಯವನ್ನು ಅರಿತಿದ್ದ ಕೆಲವು ಯುವಕರ ಕುರಿತು ನಾವೀಗ ಕಲಿಯೋಣ. ಅವರ ಹೆಸರು ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋ.

ಈ ಇಬ್ರಿಯ ಯುವಕರು, ದೇವರು ಆರಿಸಿಕೊಂಡಿದ್ದ ಇಸ್ರಾಯೇಲ್‌ ಜನಾಂಗಕ್ಕೆ ಸೇರಿದವರು. ಇವರನ್ನು ಬಾಬೆಲೆಂಬ ದೇಶಕ್ಕೆ ಸೆರೆಯಾಳುಗಳಾಗಿ ಹಿಡಿದುಕೊಂಡು ಹೋಗಿದ್ದರು. ಅಲ್ಲಿನ ರಾಜ ನೆಬೂಕದ್ನೆಚ್ಚರನು ಒಮ್ಮೆ ಚಿನ್ನದ ಒಂದು ದೊಡ್ಡ ಪ್ರತಿಮೆಯನ್ನು ಮಾಡಿಸಿದ್ದನು. ಅಮೇಲೆ ಜನರಿಗೆಲ್ಲಾ ಡಂಗುರ ಸಾರಿಸಿ, ಸಂಗೀತ ನುಡಿಸಲ್ಪಟ್ಟಾಗ ಎಲ್ಲರೂ ಆ ಪ್ರತಿಮೆಗೆ ಅಡ್ಡಬೀಳಬೇಕೆಂದು ಆಜ್ಞೆ ಕೊಟ್ಟನು. ‘ಯಾರು ಅಡ್ಡಬಿದ್ದು ಆ ಪ್ರತಿಮೆಯನ್ನು ಪೂಜಿಸುವುದಿಲ್ಲವೋ ಅವರನ್ನು ಧಗಧಗನೆ ಉರಿಯುವ ಕುಲುಮೆಯ ಬೆಂಕಿಯೊಳಗೆ ಹಾಕಲಾಗುವುದು’ ಅಂತನೂ ಎಚ್ಚರಿಸಿದನು. ನೀನೇನಾದರು ಅಲ್ಲಿದ್ದಿದ್ರೆ ಏನು ಮಾಡ್ತಿದ್ದೆ?—

ಈ ಯುವಕರು ಪ್ರತಿಮೆಗೆ ಏಕೆ ಅಡ್ಡಬೀಳಲಿಲ್ಲ?

ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಏನು ಮಾಡಿದರು ಅಂತ ನೋಡೋಣ. ಅವರು ರಾಜನು ಆಜ್ಞಾಪಿಸುತ್ತಿದ್ದ ಎಲ್ಲಾ ಕೆಲಸಗಳನ್ನು ಚಾಚೂತಪ್ಪದೆ ಮಾಡುತ್ತಿದ್ದರು. ಆದರೆ ಆ ಪ್ರತಿಮೆಗೆ ಮಾತ್ರ ಅಡ್ಡಬೀಳಲು ನಿರಾಕರಿಸಿದರು. ಯಾಕೆ ಗೊತ್ತಾ?— ಯಾಕೆಂದರೆ ‘ನಾನಲ್ಲದೆ ನಿಮಗೆ ಬೇರೆ ಯಾವ ದೇವರುಗಳೂ ಇರಬಾರದು. ನೀವು ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಅದಕ್ಕೆ ಅಡ್ಡಬೀಳಲೂಬಾರದು’ ಅಂತ ದೇವರ ನಿಯಮವಿತ್ತು. (ವಿಮೋಚನಕಾಂಡ 20:3-5) ಅದನ್ನು ಚೆನ್ನಾಗಿ ತಿಳಿದಿದ್ದ ಶದ್ರಕ್‌, ಮೇಶಕ್‌, ಅಬೇದ್‌ನೆಗೋ ರಾಜನ ಆಜ್ಞೆಗೆ ಬದಲಾಗಿ ದೇವರ ನಿಯಮಕ್ಕೆ ವಿಧೇಯತೆ ತೋರಿಸಿದರು.

ಈ ಮೂವರು ತರುಣರು ಪ್ರತಿಮೆಗೆ ಅಡ್ಡಬೀಳಲು ನಿರಾಕರಿಸಿದ ಕಾರಣ ರಾಜನಿಗೆ ತುಂಬಾ ಕೋಪ ಬಂತು. ಅವರನ್ನು ಕರೆಯಿಸಿ, ‘ನೀವು ನನ್ನ ದೇವರನ್ನು ಆರಾಧಿಸದೇ ಇದ್ದೀರೆಂದು ನಾನು ಕೇಳಿಸಿಕೊಂಡಿದ್ದು ನಿಜವೋ? ನಿಮಗೆ ಇನ್ನೊಂದು ಅವಕಾಶ ಕೊಡುತ್ತೀನಿ. ನೀವು ಸಂಗೀತ ಕೇಳಿಸಿಕೊಂಡಾಗ ಅಡ್ಡಬಿದ್ದು ನಾನು ನಿಲ್ಲಿಸಿದ ಪ್ರತಿಮೆಯನ್ನು ಪೂಜಿಸಬೇಕು. ಇಲ್ಲವಾದರೆ ಧಗಧಗನೆ ಉರಿಯುವ ಕುಲುಮೆಗೆ ಹಾಕಿಸುತ್ತೇನೆ. ನಿಮ್ಮನ್ನು ನನ್ನ ಕೈಯಿಂದ ಬಿಡಿಸಬಲ್ಲ ದೇವರು ಯಾರು?’ ಅಂತ ತನ್ನ ಕೋಪವೆನ್ನೆಲ್ಲಾ ಕಾರಿದನು.

ಆ ಮೂವರು ಯುವಕರು ಏನು ಮಾಡಿದರು? ನೀನಾಗಿದ್ದರೆ ಏನು ಮಾಡಿರುತ್ತಿದ್ದೆ?— ಅವರು ರಾಜನಿಗೆ, ‘ನಾವು ಸೇವಿಸುವ ದೇವರು ನಮ್ಮನ್ನು ಕಾಪಾಡಶಕ್ತನು. ಒಂದುವೇಳೆ, ಆತನು ನಮ್ಮನ್ನು ಕಾಪಾಡದೇ ಹೋದರೂ ನಾವು ನಿನ್ನ ದೇವರುಗಳನ್ನು ಆರಾಧಿಸುವುದಿಲ್ಲ. ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಗೆ ಅಡ್ಡಬೀಳುವುದಿಲ್ಲ’ ಅಂತ ಧೈರ್ಯವಾಗಿ ಹೇಳಿದರು.

ಇದನ್ನು ಕೇಳಿ ರಾಜನಿಗೆ ಮತ್ತಷ್ಟು ಕೋಪ ನೆತ್ತಿಗೆ ಏರಿತು. ತನ್ನ ಸೇವಕರಿಗೆ, ‘ಕುಲುಮೆಯ ಬೆಂಕಿಯನ್ನು ಮಾಮೂಲಿಗಿಂತ ಏಳರಷ್ಟು ಹೆಚ್ಚಾಗಿ ಉರಿಸಿರಿ’ ಅಂತ ಆಜ್ಞಾಪಿಸಿದನು. ಆಮೇಲೆ ತನ್ನ ಸೈನ್ಯದಲ್ಲಿದ್ದ ಶೂರರನ್ನು ಕರೆದು ಶದ್ರಕ್‌, ಮೇಶಕ್‌, ಅಬೇದ್‌ನೆಗೋರನ್ನು ಕಟ್ಟಿ ಕುಲುಮೆಗೆ ಎತ್ತಿಹಾಕುವಂತೆ ಅಪ್ಪಣೆ ಕೊಟ್ಟನು. ಆ ಕುಲುಮೆಯ ಬಿಸಿ ಶಾಖ ಎಷ್ಟಿತ್ತೆಂದರೆ! ಅಬ್ಬಾ! ಅವರನ್ನು ಎತ್ತಿಹಾಕಲು ಹೋದ ಶೂರರೇ ಅದರ ಜ್ವಾಲೆಗೆ ಸುಟ್ಟುಹೋದರು. ಅಯ್ಯೋ, ಹಾಗಾದರೆ ಆ ಮೂವರು ತರುಣರಿಗೆ ಏನಾಯಿತು?

ಶದ್ರಕ್‌, ಮೇಶಕ್‌, ಅಬೇದ್‌ನೆಗೋರನ್ನು ಕುಲುಮೆಗೆ ಎತ್ತಿಹಾಕಿದಾಗ ಅವರು ನೇರವಾಗಿ ಬೆಂಕಿಯ ಮಧ್ಯದಲ್ಲಿ ಬಿದ್ದರು. ಆದರೆ ಬೆಂಕಿಯ ಜ್ವಾಲೆ ಅವರನ್ನು ಸುಡಲಿಲ್ಲ. ಅವರಿಗೆ ಕಟ್ಟಿದ್ದ ಕಟ್ಟುಗಳೆಲ್ಲಾ ಬಿಚ್ಚಿಹೋದವು. ಅವರು ಆರಾಮಾಗಿ ಬೆಂಕಿಯಲ್ಲಿ ತಿರುಗಾಡುತ್ತಿದ್ದರು. ಅದು ಹೇಗೆ ಸಾಧ್ಯ?— ರಾಜನು ಕುಲುಮೆಯೊಳಗೆ ಇಣುಕಿ ನೋಡಿದನು. ಅಲ್ಲಿನ ದೃಶ್ಯ ಕಂಡು ಅವನು ದಿಗಿಲುಬಿದ್ದನು. ‘ನಾವು ಬೆಂಕಿಯೊಳಗೆ ಹಾಕಿದ್ದು ಮೂವರನ್ನಲ್ವಾ?’ ಎಂದು ಕೇಳಿದನು. ಒಡನೇ ಸೇವಕರು ‘ಹೌದು ರಾಜನೇ’ ಅಂತ ಉತ್ತರಕೊಟ್ಟರು.

ಧಗಧಗನೆ ಉರಿಯುವ ಕುಲುಮೆಯೊಳಗಿಂದ ತನ್ನ ಸೇವಕರನ್ನು ಕಾಪಾಡಲು ಯೆಹೋವನು ಯಾರನ್ನು ಕಳುಹಿಸಿದನು?

ಆಗ ರಾಜನು, ‘ಅಲ್ನೋಡಿ! ನಾಲ್ಕು ಜನರು ಬೆಂಕಿಯಲ್ಲಿ ತಿರುಗಾಡುತ್ತಿರುವುದು ಕಾಣುತ್ತಿದೆ. ಬೆಂಕಿ ಅವರಿಗೆ ಏನೂ ಹಾನಿ ಮಾಡುತ್ತಿಲ್ಲ’ ಅಂದನು. ಆ ನಾಲ್ಕನೇ ವ್ಯಕ್ತಿ ಯಾರು ಗೊತ್ತಾ?— ಅವನು ಯೆಹೋವನ ದೂತನು. ಆ ಮೂವರು ಇಬ್ರಿಯರಿಗೆ ಏನೂ ಆಗದಂತೆ ಅವನು ಕಾಪಾಡಿದನು.

ಒಂಚೂರು ಹಾನಿಯಾಗದ ಆ ಯುವಕರನ್ನು ನೋಡಿದ ರಾಜನು ಕುಲುಮೆಯ ಬಾಗಿಲ ಬಳಿಗೆ ಬಂದು, “ಪರಾತ್ಪರದೇವರ ಸೇವಕರಾದ ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋ ಎಂಬವರೆ ಬನ್ನಿ, ಹೊರಗೆ ಬನ್ನಿ” ಅಂತ ಕೂಗಿದನು. ಅವರು ಹೊರಗೆ ಬಂದಾಗ ಅವರ ಮೈಯಲ್ಲಿ ಎಲ್ಲೂ ಸುಟ್ಟ ಗಾಯಗಳಿರಲಿಲ್ಲ. ಅಷ್ಟೇಕೆ ಬೆಂಕಿಯ ವಾಸನೆ ಸಹ ಇರಲಿಲ್ಲ. ಅದನ್ನು ನೋಡಿದ ಜನರೆಲ್ಲಾ ಬೆಕ್ಕಸಬೆರಗಾದರು. ಆಮೇಲೆ ರಾಜನು ಹೀಗೆಂದನು: ‘ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋರ ದೇವರಿಗೆ ಸ್ತೋತ್ರವಾಗಲಿ. ಬೇರೆ ದೇವರುಗಳನ್ನು ಪೂಜಿಸದೇ ಆತನೊಬ್ಬನನ್ನೇ ಆರಾಧಿಸುತ್ತಿದ್ದ ಕಾರಣ ತನ್ನ ದೂತನನ್ನು ಕಳುಹಿಸಿ ಅವರನ್ನು ಕಾಪಾಡಿದನು.’—ದಾನಿಯೇಲ ಅಧ್ಯಾಯ 3.

ಇಂದು ಯಾವ ರೀತಿಯ ವಿಗ್ರಹಗಳಿಗೆ ಜನರು ಮಹಿಮೆ ಸಲ್ಲಿಸುತ್ತಿದ್ದಾರೆ?

ಬಹಳ ಕಾಲದ ಹಿಂದೆ ನಡೆದ ಆ ಘಟನೆಯಿಂದ ನಾವು ಒಂದು ಪ್ರಾಮುಖ್ಯ ಪಾಠ ಕಲಿಯಬಹುದು. ನಮ್ಮ ಕಾಲದಲ್ಲೂ ಜನರು ಪ್ರತಿಮೆ ಅಥವಾ ವಿಗ್ರಹಗಳನ್ನು ಇಟ್ಟು ಅದನ್ನು ಆರಾಧಿಸುತ್ತಾರೆ. ಕ್ರಿಸ್ತನ ಶಿಲುಬೆಯಂತೆ ಧ್ವಜವನ್ನು ಸಹ ಜನರು ಪವಿತ್ರವಾಗಿ ಕಾಣುತ್ತಾರೆಂದು ದಿ ಎನ್‌ಸೈಕ್ಲೊಪೀಡಿಯ ಅಮೆರಿಕಾನ ಎಂಬ ಪುಸ್ತಕ ತಿಳಿಸುತ್ತದೆ. ಮರ, ಕಲ್ಲು, ಲೋಹ, ಬಟ್ಟೆ ಮುಂತಾದ ಯಾವುದೇ ವಸ್ತುಗಳು ವಿಗ್ರಹ ಆಗಬಹುದು. ಯೇಸುವಿನ ಶಿಷ್ಯರು ರೋಮನ್‌ ಚಕ್ರವರ್ತಿಗೆ ಆರಾಧನೆ ಸಲ್ಲಿಸಲು ನಿರಾಕರಿಸಿದರು. ಅದು ‘ಧ್ವಜ ವಂದನೆ ಮಾಡಲು ನಿರಾಕರಿಸುವುದಕ್ಕೆ ಅಥವಾ ದೇಶಭಕ್ತಿಯ ಪ್ರಮಾಣವಚನ ಸ್ವೀಕರಿಸಲು ನಿರಾಕರಿಸುವುದಕ್ಕೆ’ ಸಮ ಎಂದು ಓರ್ವ ಇತಿಹಾಸಕಾರ ಡ್ಯಾನಿಯೇಲ್‌ ಪಿ. ಮಾನಿಕ್ಸ್‌ ಹೇಳಿದರು.

ಹಾಗಾದರೆ ಬಟ್ಟೆ, ಮರ, ಕಲ್ಲು, ಲೋಹ ಅಥವಾ ಇನ್ನಾವುದೇ ವಸ್ತುಗಳಿಂದ ಮಾಡಿದ ವಿಗ್ರಹವನ್ನು ನಾವು ಆರಾಧಿಸುವಾಗ ದೇವರಿಗೆ ಹೇಗನಿಸಬಹುದು?— ಯೆಹೋವನ ಸೇವಕರು ಇಂಥ ವಿಗ್ರಹಗಳನ್ನು ಪೂಜಿಸುವುದು ಸರಿಯಾ?— ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋ ಅಂಥ ವಿಗ್ರಹವನ್ನು ಪೂಜಿಸಲಿಲ್ಲ. ಯೆಹೋವನಿಗೆ ಇದರಿಂದ ತುಂಬಾ ಸಂತೋಷವಾಯಿತು. ಆ ಮೂವರು ಯುವಕರಂತೆ ನೀನು ಹೇಗೆ ಯೆಹೋವನನ್ನು ಸಂತೋಷಪಡಿಸಬಹುದು?—

ಯೆಹೋವನಿಗೆ ಸೇವೆ ಸಲ್ಲಿಸುವವರು ಬೇರೆ ಮನುಷ್ಯರನ್ನಾಗಲಿ ವಸ್ತುಗಳನ್ನಾಗಲಿ ಆರಾಧಿಸಲು ಸಾಧ್ಯವಿಲ್ಲ. ಇದರ ಕುರಿತು ಈ ವಚನಗಳಲ್ಲಿ ಏನು ಹೇಳಲಾಗಿದೆ ಎಂದು ಓದಿ ನೋಡೋಣ: ಯೆಹೋಶುವ 24:14, 15, 19-22; ಯೆಶಾಯ 42:8; 1 ಯೋಹಾನ 5:21 ಮತ್ತು ಪ್ರಕಟನೆ 19:10.