ಮತ್ತಾಯ 4:1-25

  • ಸೈತಾನ ಯೇಸುವನ್ನ ಪರೀಕ್ಷಿಸಿದ (1-11)

  • ಗಲಿಲಾಯದಲ್ಲಿ ಯೇಸು ಸಾರೋಕೆ ಶುರುಮಾಡಿದನು (12-17)

  • ಯೇಸುವಿನ ಮೊದಲ ಶಿಷ್ಯರು (18-22)

  • ಯೇಸು ಸಾರ್ತಾನೆ, ಕಲಿಸ್ತಾನೆ, ವಾಸಿಮಾಡ್ತಾನೆ (23-25)

4  ಆಮೇಲೆ ದೇವರ ಪವಿತ್ರಶಕ್ತಿ ಯೇಸುನ ಬರಡು ಪ್ರದೇಶಕ್ಕೆ ಕರ್ಕೊಂಡು ಹೋಯ್ತು. ಅಲ್ಲಿ ಸೈತಾನ+ ಆತನನ್ನ ಪರೀಕ್ಷಿಸಿದ.+  40 ದಿನ ಉಪವಾಸ ಮಾಡಿದ್ರಿಂದ ಯೇಸುಗೆ ತುಂಬ ಹಸಿವಾಗಿತ್ತು.  ಆಗ ಸೈತಾನ+ “ನೀನು ದೇವರ ಮಗನಾಗಿದ್ರೆ ಈ ಕಲ್ಲುಗಳಿಗೆ ರೊಟ್ಟಿ ಆಗು ಅಂತ ಹೇಳು” ಅಂದ.  ಅದಕ್ಕೆ ಯೇಸು “‘ಮನುಷ್ಯ ರೊಟ್ಟಿ* ತಿನ್ನೋದ್ರಿಂದ ಮಾತ್ರ ಅಲ್ಲ, ಯೆಹೋವನ* ಬಾಯಿಂದ ಬರೋ ಪ್ರತಿಯೊಂದು ಮಾತಿಂದ ಬದುಕಬೇಕು’ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ”+ ಅಂದನು.  ಆಮೇಲೆ ಸೈತಾನ ಆತನನ್ನ ಪವಿತ್ರ ಪಟ್ಟಣಕ್ಕೆ+ ಕರ್ಕೊಂಡು ಹೋಗಿ ದೇವಾಲಯದ ಗೋಡೆ+ ಮೇಲೆ ನಿಲ್ಲಿಸಿ  “ನೀನು ದೇವರ ಮಗನಾಗಿದ್ರೆ ಇಲ್ಲಿಂದ ಜಿಗಿ. ಯಾಕಂದ್ರೆ ‘ನಿನ್ನನ್ನ ಕಾದು ಕಾಪಾಡೋಕೆ ದೇವರು ತನ್ನ ದೂತರಿಗೆ ಹೇಳ್ತಾನೆ’ ಮತ್ತು ‘ನಿನ್ನ ಕಾಲು ಕಲ್ಲಿಗೆ ತಾಗದ ಹಾಗೆ ಅವರು ತಮ್ಮ ಕೈಯಿಂದ ನಿನ್ನನ್ನ ಎತ್ಕೊಳ್ತಾರೆ’+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ” ಅಂದ.  ಆಗ ಯೇಸು “‘ನೀನು ನಿನ್ನ ದೇವರಾದ ಯೆಹೋವನನ್ನ* ಪರೀಕ್ಷಿಸಬಾರದು’+ ಅಂತಾನೂ ಪವಿತ್ರ ಗ್ರಂಥದಲ್ಲಿ ಬರೆದಿದೆ” ಅಂದನು.  ಮತ್ತೆ ಸೈತಾನ ಆತನನ್ನ ತುಂಬ ಎತ್ರದ ಒಂದು ಬೆಟ್ಟಕ್ಕೆ ಕರ್ಕೊಂಡು ಹೋಗಿ ಲೋಕದ ಎಲ್ಲ ಸಾಮ್ರಾಜ್ಯಗಳನ್ನ, ಅವುಗಳ ಸಂಪತ್ತನ್ನ ತೋರಿಸಿದ.+  ಅವನು ಯೇಸುಗೆ “ನೀನು ನನಗೆ ಅಡ್ಡಬಿದ್ದು ನನ್ನನ್ನ ಒಂದೇ ಒಂದು ಸಾರಿ ಆರಾಧಿಸಿದ್ರೆ ಸಾಕು, ಇವೆಲ್ಲ ನಿನಗೇ ಕೊಡ್ತೀನಿ”ಅಂದ. 10  ಅದಕ್ಕೆ ಯೇಸು “ಸೈತಾನ ಇಲ್ಲಿಂದ ತೊಲಗಿ ಹೋಗು! ‘ನಿನ್ನ ದೇವರಾಗಿರೋ ಯೆಹೋವನನ್ನೇ* ಆರಾಧಿಸಬೇಕು+ ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆ ಮಾಡಬೇಕು’+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ” ಅಂದನು. 11  ಆಗ ಸೈತಾನ ಅಲ್ಲಿಂದ ಹೋದ.+ ಆಮೇಲೆ ದೇವದೂತರು ಬಂದು ಯೇಸುಗೆ ಸಹಾಯ ಮಾಡಿದ್ರು.+ 12  ಆಮೇಲೆ ಯೇಸು, ಯೋಹಾನನನ್ನ ಬಂಧಿಸಲಾದ ವಿಷ್ಯ ಕೇಳಿ+ ಗಲಿಲಾಯಕ್ಕೆ ಹೋದನು.+ 13  ಮುಂದೆ ಆತನು ನಜರೇತಿಂದ ಹೋಗಿ, ಜೆಬುಲೂನ್‌ ಮತ್ತು ನಫ್ತಾಲಿ ಪ್ರದೇಶದ ಸಮುದ್ರ ತೀರದಲ್ಲಿದ್ದ ಕಪೆರ್ನೌಮಲ್ಲಿ+ ವಾಸಮಾಡಿದನು. 14  ಇದ್ರಿಂದ ಪ್ರವಾದಿ ಯೆಶಾಯನ ಮೂಲಕ ದೇವರು ಹೇಳಿದ್ದ ಮಾತು ನಿಜ ಆಯ್ತು. ಅದೇನಂದ್ರೆ 15  “ಸಮುದ್ರಕ್ಕೆ ಹೋಗೋ ದಾರಿ ಪಕ್ಕದಲ್ಲಿರೋ ಮತ್ತು ಯೋರ್ದನಿನ ಪಶ್ಚಿಮಕ್ಕಿರೋ ಜೆಬುಲೂನ್‌, ನಫ್ತಾಲಿ ದೇಶಗಳೇ! ಬೇರೆ ಜನಾಂಗಗಳ ಗಲಿಲಾಯವೇ! 16  ಕತ್ತಲಲ್ಲಿ ಕೂತಿದ್ದ ಜನ ದೊಡ್ಡ ಬೆಳಕನ್ನ ನೋಡಿದ್ರು, ಸಾವಿನ ನೆರಳಲ್ಲಿ ಕೂತಿದ್ದ ಜನ್ರ ಮೇಲೆ ಬೆಳಕು+ ಪ್ರಕಾಶಿಸ್ತು.”+ 17  ಆ ಸಮಯದಿಂದ ಯೇಸು ಜನ್ರಿಗೆ “ಪಶ್ಚಾತ್ತಾಪಪಡಿ, ಯಾಕಂದ್ರೆ ಸ್ವರ್ಗದ ಆಳ್ವಿಕೆ ಹತ್ರ ಇದೆ” ಅಂತ ಸಾರೋಕೆ ಶುರುಮಾಡಿದನು.+ 18  ಯೇಸು ಗಲಿಲಾಯ ಸಮುದ್ರ ತೀರದಲ್ಲಿ ನಡಿತಿದ್ದಾಗ, ಪೇತ್ರ+ ಅನ್ನೋ ಹೆಸ್ರಿದ್ದ ಸೀಮೋನ ಮತ್ತು ಅವನ ತಮ್ಮ ಅಂದ್ರೆಯ ಸಮುದ್ರದಲ್ಲಿ ಬಲೆ ಬೀಸೋದನ್ನ ನೋಡಿದನು. ಅವರಿಬ್ರೂ ಬೆಸ್ತರಾಗಿದ್ರು.+ 19  ಅವ್ರಿಗೆ ಯೇಸು “ನನ್ನ ಜೊತೆ ಬನ್ನಿ, ನಾನು ನಿಮ್ಮನ್ನ ಮನುಷ್ಯರನ್ನ ಹಿಡಿಯೋ ಬೆಸ್ತರಾಗಿ ಮಾಡ್ತೀನಿ”+ ಅಂದನು. 20  ತಕ್ಷಣ ಅವರು ಬಲೆ ಬಿಟ್ಟು ಆತನ ಜೊತೆ ಹೋದ್ರು.+ 21  ಅಲ್ಲಿಂದ ಹೋಗ್ತಿರೋವಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನ ಯೇಸು ನೋಡಿದನು.+ ಅವರು ದೋಣಿಯಲ್ಲಿ ತಮ್ಮ ತಂದೆ ಜೊತೆ ಬಲೆ ಸರಿಮಾಡ್ತಿದ್ರು. ಆಗ ಯೇಸು ಅವ್ರನ್ನೂ ಕರೆದನು.+ 22  ತಕ್ಷಣ ಅವರು ದೋಣಿಯನ್ನ, ತಮ್ಮ ತಂದೆಯನ್ನ ಬಿಟ್ಟು ಆತನ ಹಿಂದೆ ಹೋದ್ರು. 23  ಆಮೇಲೆ ಯೇಸು ಗಲಿಲಾಯದಲ್ಲೆಲ್ಲ+ ಪ್ರಯಾಣ ಮಾಡಿ ಸಭಾಮಂದಿರಗಳಲ್ಲಿ*+ ಕಲಿಸ್ತಾ ದೇವರ ಆಳ್ವಿಕೆಯ ಸಿಹಿಸುದ್ದಿ ಸಾರುತ್ತಾ ಇದ್ದನು. ಅಷ್ಟೇ ಅಲ್ಲ ಜನ್ರ ಎಲ್ಲ ರೀತಿಯ ರೋಗಗಳನ್ನ, ಕಾಯಿಲೆಗಳನ್ನ ವಾಸಿಮಾಡ್ತಿದ್ದನು.+ 24  ಯೇಸುವಿನ ಬಗ್ಗೆ ಸಿರಿಯದಲ್ಲೆಲ್ಲ ಸುದ್ದಿ ಹಬ್ಬಿತು. ಹಾಗಾಗಿ ಜನ ಬೇರೆಬೇರೆ ಕಾಯಿಲೆ, ರೋಗಗಳಿಂದ ಬಳಲುತ್ತಾ ಇದ್ದವ್ರನ್ನ,+ ಕೆಟ್ಟ ದೇವದೂತರ ಹತೋಟಿಯಲ್ಲಿ ಇದ್ದವ್ರನ್ನ,+ ಮೂರ್ಛೆ ರೋಗಿಗಳನ್ನ+ ಮತ್ತು ಲಕ್ವ ಹೊಡೆದವ್ರನ್ನ ಆತನ ಹತ್ರ ಕರ್ಕೊಂಡು ಬಂದ್ರು. ಆತನು ಅವ್ರನ್ನ ವಾಸಿಮಾಡಿದನು. 25  ಇದ್ರಿಂದ ಗಲಿಲಾಯ, ದೆಕಪೊಲಿ,* ಯೆರೂಸಲೇಮ್‌, ಯೂದಾಯ ಮತ್ತು ಯೋರ್ದನಿನ ಆಕಡೆಯಿಂದಾನೂ ತುಂಬ ಜನ ಆತನನ್ನ ಹಿಂಬಾಲಿಸಿದ್ರು.

ಪಾದಟಿಪ್ಪಣಿ

ಅಥವಾ “ಆಹಾರ.”
ಅಂದ್ರೆ ಯೆಹೂದ್ಯರು ಪ್ರಾರ್ಥಿಸೋಕೆ ಮತ್ತು ಪವಿತ್ರ ಗ್ರಂಥ ಓದೋಕೆ ಕೂಡಿಬರ್ತಿದ್ದ ಸ್ಥಳ.
ಅಥವಾ “ಹತ್ತು ಪಟ್ಟಣಗಳ ಪ್ರದೇಶ.”