ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 25

ಕೆಟ್ಟವರು ಒಳ್ಳೆಯವರಾಗಲು ಸಾಧ್ಯನಾ?

ಕೆಟ್ಟವರು ಒಳ್ಳೆಯವರಾಗಲು ಸಾಧ್ಯನಾ?

ಎಲ್ಲರೂ ಒಳ್ಳೇದನ್ನೇ ಮಾಡಿದರೆ ಎಷ್ಟು ಚೆನ್ನಾಗಿರುತ್ತಲ್ವಾ?— ಆದರೆ ಯಾವಾಗಲೂ ಒಳ್ಳೆಯದನ್ನು ಮಾಡುವುದು ಕಷ್ಟ. ಒಳ್ಳೇದನ್ನೇ ಮಾಡಬೇಕು ಅಂತ ಅಂದುಕೊಂಡರೂ ಕೆಟ್ಟದ್ದನ್ನು ಮಾಡಿಬಿಡುತ್ತೀವಿ. ಯಾಕೆ ಗೊತ್ತಾ?— ಏಕೆಂದರೆ, ನಾವೆಲ್ಲರೂ ಹುಟ್ಟಿನಿಂದ ಪಾಪಿಗಳಾಗಿದ್ದೇವೆ. ಆದರೆ ಕೆಲವು ಜನರು ತುಂಬಾ ಕೆಟ್ಟ ಕೆಲಸಗಳನ್ನು ಮಾಡುತ್ತಾರೆ. ಬೇರೆಯವರನ್ನು ಹಗೆ ಮಾಡುತ್ತಾರೆ, ಬೇಕುಬೇಕೆಂದೇ ತೊಂದರೆ ಕೊಟ್ಟು ಹಾನಿಮಾಡುತ್ತಾರೆ. ಆ ರೀತಿ ಕೆಟ್ಟ ಕೆಲಸಮಾಡುವವರು ಜೀವನದಲ್ಲಿ ಬದಲಾಗಿ ಒಳ್ಳೆಯವರಾಗಲು ಸಾಧ್ಯ ಅಂತ ನಿನಗೆ ಅನಿಸ್ತದಾ?—

ಅಲ್ಲಿ ದೂರದಲ್ಲಿ ನಿಂತಿರುವ ಆ ಯುವಕನನ್ನು ನೋಡು. ಮಹಾ ಬೋಧಕನ ಒಬ್ಬ ಶಿಷ್ಯನಾದ ಸ್ತೆಫನನನ್ನು ಕಲ್ಲೆಸೆದು ಕೊಲ್ಲುತ್ತಿರುವ ಜನರ ಬಟ್ಟೆಗಳನ್ನು ಬೇರೆಯವರು ತೆಗೆದುಕೊಂಡು ಹೋಗದಂತೆ ಕಾಯುತ್ತಿದ್ದಾನೆ. ಅವನ ಹೆಸರು ಹೀಬ್ರೂವಿನಲ್ಲಿ ಸೌಲ, ರೋಮನ್‌ನಲ್ಲಿ ಪೌಲ. ಸ್ತೆಫನನನ್ನು ಕೊಲ್ಲುತ್ತಿರುವುದನ್ನು ನೋಡಿ ಅವನು ಸಂತೋಷ ಪಡುತ್ತಿದ್ದಾನೆ. ಸೌಲನು ಏಕೆ ಇಂಥ ಕೆಟ್ಟ ಕಾರ್ಯವನ್ನು ಮಾಡುತ್ತಿದ್ದಾನೆ ಅಂತ ನೋಡೋಣ.

ಈ ಸೌಲನು ‘ಫರಿಸಾಯರು’ ಎಂದು ಕರೆಯಲ್ಪಡುವ ಯೆಹೂದಿ ಧಾರ್ಮಿಕ ಗುಂಪಿಗೆ ಸೇರಿದವನಾಗಿದ್ದಾನೆ. ಫರಿಸಾಯರ ಬಳಿ ದೇವರ ವಾಕ್ಯವಿತ್ತಾದರೂ ಅದನ್ನು ಅವರು ಪಾಲಿಸದೇ ತಮ್ಮ ಧಾರ್ಮಿಕ ನಾಯಕರು ಬೋಧಿಸುತ್ತಿದ್ದ ವಿಷಯಗಳನ್ನು ಅನುಸರಿಸುತ್ತಿದ್ದರು. ಸೌಲನು ಕೆಟ್ಟ ಕೆಲಸಗಳನ್ನು ಮಾಡಲು ಇದೇ ಕಾರಣವಾಗಿತ್ತು.

ಸ್ತೆಫನನನ್ನು ಯೆರೂಸಲೇಮಿನಲ್ಲಿ ಬಂಧಿಸಿದಾಗ ಸೌಲನೂ ಅಲ್ಲಿದ್ದನು. ಬಂಧನಕ್ಕೊಳಗಾದ ಸ್ತೆಫನನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿದ್ದ ನ್ಯಾಯಾಧೀಶರಲ್ಲಿ ಕೆಲವರು ಫರಿಸಾಯರಾಗಿದ್ದರು. ನ್ಯಾಯಾಲಯದಲ್ಲಿ ಸ್ತೆಫನನ ವಿರುದ್ಧ ಸುಳ್ಳು ಸುಳ್ಳಾಗಿ ಆರೋಪ ಹೊರಿಸಿದ್ದರೂ ಅವನು ಸ್ವಲ್ಪವೂ ಭಯಪಡಲಿಲ್ಲ. ಧೈರ್ಯದಿಂದ ಯೆಹೋವ ದೇವರ ಬಗ್ಗೆ ಹಾಗೂ ಯೇಸುವಿನ ಬಗ್ಗೆ ನ್ಯಾಯಾಧೀಶರಿಗೆ ಸುವಾರ್ತೆ ಸಾರುತ್ತಾನೆ.

ಆದರೆ ಸ್ತೆಫನನು ಸಾರಿದ ಸುವಾರ್ತೆ ನ್ಯಾಯಾಧೀಶರಿಗೆ ಇಷ್ಟವಾಗಲಿಲ್ಲ. ಈಗಾಗಲೇ ಅವರಿಗೆ ಯೇಸುವಿನ ಬಗ್ಗೆ ಬಹಳಷ್ಟು ಗೊತ್ತಿತ್ತು. ಅಲ್ಲದೇ ಯೇಸುವನ್ನು ಅವರೇ ಕೊಲ್ಲಿಸಿದ್ದರು. ಮರಣಪಟ್ಟ ಯೇಸುವನ್ನು ಯೆಹೋವನು ಆ ನಂತರ ಸ್ವರ್ಗಕ್ಕೆ ಕರೆಸಿಕೊಂಡಿದ್ದನು. ಇದನ್ನೆಲ್ಲ ತಿಳಿದಿದ್ದ ಆ ನ್ಯಾಯಾಧೀಶರು ತಮ್ಮ ಆಲೋಚನೆ ನಡೆನುಡಿಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಹಾಗೆ ಮಾಡುವ ಬದಲು ಅವರು ಯೇಸುವಿನ ಶಿಷ್ಯರನ್ನು ಹಿಂಸಿಸತೊಡಗಿದರು.

ಅವರು ಸ್ತೆಫನನನ್ನು ಊರ ಹೊರಗೆ ಎಳೆದುಕೊಂಡು ಹೋಗಿ ಕಲ್ಲುಗಳಿಂದ ಹೊಡೆಯುತ್ತಾರೆ. ಸ್ವಲ್ಪ ಚಿತ್ರ ನೋಡು. ಸೌಲನು ಇದನ್ನೆಲ್ಲ ದೂರದಲ್ಲಿ ನಿಂತು ನೋಡುತ್ತಿದ್ದಾನೆ. ಸ್ತೆಫನನನ್ನು ಕಲ್ಲೆಸೆದು ಕೊಲ್ಲುವುದರಲ್ಲಿ ಅವನಿಗೆ ಯಾವ ತಪ್ಪೂ ಕಾಣಿಸಲಿಲ್ಲ.

ಸ್ತೆಫನನನ್ನು ಕೊಲ್ಲುವುದು ತಪ್ಪಲ್ಲವೆಂದು ಸೌಲನಿಗೆ ಅನಿಸಿದ್ದೇಕೆ?

ಸೌಲನಿಗೆ ಹಾಗೆ ಅನಿಸಲು ಕಾರಣವೇನು?— ಏಕೆಂದರೆ ಅವನು ಹುಟ್ಟಿನಿಂದ ಒಬ್ಬ ಫರಿಸಾಯನಾಗಿದ್ದನು. ಫರಿಸಾಯರ ಬೋಧನೆಗಳೇ ಸತ್ಯವೆಂದು ಅವನು ನಂಬಿದ್ದನು. ಅವನಿಗೆ ಅವರೇ ಆದರ್ಶವಾಗಿದ್ದರು. ಅವರು ಮಾಡಿದ ಕೆಲಸಗಳನ್ನೇ ಅವನೂ ಮಾಡುತ್ತಿದ್ದನು.—ಅಪೊಸ್ತಲರ ಕಾರ್ಯಗಳು 7:54-60.

ಸ್ತೆಫನನ ಕೊಲೆಯ ನಂತರ ಸೌಲನು ಏನು ಮಾಡುತ್ತಾನೆ ಗೊತ್ತಾ?— ಯೇಸುವಿನ ಇತರ ಶಿಷ್ಯರನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಅವರ ಮನೆಗಳಿಗೆ ನುಗ್ಗಿ ಗಂಡಸರು ಹೆಂಗಸರು ಅನ್ನದೇ ಅವರೆಲ್ಲರನ್ನು ಹೊರೆಗೆಳೆದು ಜೈಲಿಗೆ ಹಾಕಿಸುತ್ತಾನೆ. ಈ ಹಿಂಸೆಯ ಕಾರಣ ಅನೇಕ ಶಿಷ್ಯರು ಯೆರೂಸಲೇಮನ್ನು ಬಿಡಬೇಕಾಯಿತು. ಆದರೆ ಅವರು ಯೇಸುವಿನ ಕುರಿತು ಸಾರುವುದನ್ನು ಮಾತ್ರ ನಿಲ್ಲಿಸಲಿಲ್ಲ.—ಅಪೊಸ್ತಲರ ಕಾರ್ಯಗಳು 8:1-4.

ಇದರಿಂದ ಸೌಲನಿಗೆ ಅವರ ಮೇಲಿದ್ದ ದ್ವೇಷ ಇನ್ನೂ ಹೆಚ್ಚಾಗುತ್ತದೆ. ಹಾಗಾಗಿ ಅವನು ದಮಸ್ಕ ಪಟ್ಟಣದ ಕ್ರೈಸ್ತರನ್ನು ಬಂಧಿಸಲು ಮಹಾ ಯಾಜಕನಾದ ಕಾಯಫನ ಅನುಮತಿಯನ್ನು ಪಡೆಯುತ್ತಾನೆ. ಆ ಕ್ರೈಸ್ತರನ್ನು ಬಂದಿಗಳಾಗಿ ಯೆರೂಸಲೇಮಿಗೆ ತಂದು ಶಿಕ್ಷೆ ನೀಡಬೇಕೆಂಬುದು ಅವನ ಉದ್ದೇಶವಾಗಿತ್ತು. ಅವನು ಅನುಮತಿ ಪಡೆದು ದಮಸ್ಕಕ್ಕೆ ಹೋಗುತ್ತಿರುವಾಗ ದಾರಿಯಲ್ಲಿ ಆಶ್ಚರ್ಯವಾದ ಸಂಗತಿಯೊಂದು ನಡೆಯಿತು. ಅದೇನಂತ ನೋಡೋಣ.

ಸೌಲನೊಂದಿಗೆ ಯಾರು ಮಾತಾಡುತ್ತಿದ್ದಾರೆ?ಮತ್ತು ಏನನ್ನು ಮಾಡಲು ಸೌಲನನ್ನು ಕಳುಹಿಸಲಾಯಿತು?

ಆಕಾಶದಿಂದ ಫಕ್ಕನೆ ಮಿಂಚಿನಂಥ ಬೆಳಕೊಂದು ಬಂದು ಸೌಲನನ್ನು ಆವರಿಸಿತು. ಆಗ, “ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತಿದ್ದೀ?” ಎಂಬ ಧ್ವನಿ ಕೇಳಿಸಿತು. ಸ್ವರ್ಗದಿಂದ ಯೇಸು ಮಾತಾಡುತ್ತಿದ್ದನು. ಸೌಲನನ್ನು ಆವರಿಸಿದ್ದ ಆ ಬೆಳಕಿನ ಪ್ರಕಾಶ ಎಷ್ಟಿತ್ತೆಂದರೆ ಅವನು ಕುರುಡನಾದನು. ದೃಷ್ಟಿ ಕಳೆದುಕೊಂಡ ಅವನನ್ನು ಜನರು ಕೈಹಿಡಿದು ದಮಸ್ಕಕ್ಕೆ ಕರೆದುಕೊಂಡು ಹೋಗಬೇಕಾಯಿತು.

ಮೂರು ದಿನಗಳಾದ ಮೇಲೆ ದಮಸ್ಕದಲ್ಲಿರುವ ಅನನೀಯ ಎಂಬ ಶಿಷ್ಯನಿಗೆ ಯೇಸು ಕನಸಿನಲ್ಲಿ ಕಾಣಿಸಿಕೊಂಡನು. ಅವನು ಅನನೀಯನಿಗೆ, ಸೌಲನನ್ನು ಭೇಟಿಯಾಗಿ ಅವನ ಕುರುಡನ್ನು ಹೋಗಲಾಡಿಸಿ ಅವನೊಂದಿಗೆ ಮಾತಾಡುವಂತೆ ಹೇಳಿದನು. ಅನನೀಯನು ಯೇಸುವಿನ ಕುರಿತ ಸತ್ಯವನ್ನು ಹೇಳಿದಾಗ ಸೌಲನು ಅದನ್ನು ಅಂಗೀಕರಿಸಿದನು. ಆಗ ಸೌಲನಿಗೆ ದೃಷ್ಟಿ ಮರಳುತ್ತದೆ. ಅಲ್ಲಿಂದ ಅವನ ಜೀವನವೇ ಬದಲಾಯಿತು. ಅವನು ದೇವರ ನಂಬಿಗಸ್ತ ಸೇವಕನಾದನು.—ಅಪೊಸ್ತಲರ ಕಾರ್ಯಗಳು 9:1-22.

ಸೌಲನು ಕೆಟ್ಟ ಕೆಲಸಗಳನ್ನು ಏಕೆ ಮಾಡುತ್ತಿದ್ದನು ಅಂತ ಈಗ ನಿನಗೆ ಅರ್ಥ ಆಯ್ತಾ?— ಏಕೆಂದರೆ ಅವನಿಗೆ ತಪ್ಪು ವಿಷಯಗಳನ್ನು ಕಲಿಸಲಾಗಿತ್ತು. ದೇವರಿಗೆ ಅವಿಧೇಯರಾಗಿದ್ದ ಜನರ ಮಾದರಿಯನ್ನು ಅವನು ಅನುಕರಿಸಿದ್ದನು. ದೇವರ ವಾಕ್ಯಕ್ಕಿಂತಲೂ ಮನುಷ್ಯರ ಆಲೋಚನೆಗಳಿಗೆ ಆದ್ಯತೆ ನೀಡುತ್ತಿದ್ದ ಜನರ ಸಹವಾಸದಲ್ಲಿ ಬೆಳೆದಿದ್ದನು. ಬೇರೆಲ್ಲ ಫರಿಸಾಯರು ದೇವರ ವಿರುದ್ಧ ಕೆಟ್ಟ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದರಲ್ವಾ. ಸೌಲನು ಮಾತ್ರ ಏಕೆ ತನ್ನ ಜೀವನ ಬದಲಾಯಿಸಿಕೊಂಡು ಒಳ್ಳೆಯದನ್ನು ಮಾಡತೊಡಗಿದನು?— ಏಕೆಂದರೆ ಸೌಲನೇನೂ ಸತ್ಯವನ್ನು ದ್ವೇಷಿಸುತ್ತಿರಲಿಲ್ಲ. ಅವನು ಸತ್ಯಪ್ರಿಯನಾಗಿದ್ದನು. ಸತ್ಯ ಯಾವುದೆಂದು ತೋರಿಸಿಕೊಟ್ಟಾಗ ಅದರ ಪ್ರಕಾರ ನಡೆಯಲು ಸಿದ್ಧನಿದ್ದನು.

ಸೌಲನು ಯಾವ ಹೆಸರಿನಿಂದ ಪ್ರಖ್ಯಾತನಾದ ಗೊತ್ತಾ?— ಹೌದು, ಅಪೊಸ್ತಲ ಪೌಲನೆಂದು ಪ್ರಖ್ಯಾತನಾದ. ಯೇಸುವಿನ ಒಬ್ಬ ಅಪೊಸ್ತಲನೆನಿಸಿಕೊಂಡ. ಬೈಬಲ್‌ನಲ್ಲಿ ಹೆಚ್ಚು ಪುಸ್ತಕಗಳನ್ನು ಬರೆದಿರುವವನು ಅವನೇ.

ಸೌಲನಂಥ ಜನರು ತಮ್ಮ ಜೀವನವನ್ನು ಬದಲಾಯಿಸಿಕೊಳ್ಳಬಹುದು. ಆದರೆ ಬದಲಾವಣೆ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಕೆಟ್ಟ ಕೆಲಸಗಳನ್ನು ಮಾಡುವಂತೆ ಜನರನ್ನು ಪ್ರಚೋದಿಸಲು ಒಬ್ಬನು ಕಡು ಪ್ರಯತ್ನ ಮಾಡುತ್ತಿದ್ದಾನೆ. ಅವನು ಯಾರು ಗೊತ್ತಾ?— ಯಾರೆಂದು ದಮಸ್ಕಕ್ಕೆ ಹೋಗುತ್ತಿದ್ದ ಸೌಲನಿಗೆ ಯೇಸು ಹೇಳಿದನು. ಅವನು ಸೌಲನಿಗೆ, ‘ಜನರ ಕಣ್ಣುಗಳನ್ನು ತೆರೆದು ಅವರನ್ನು ಕತ್ತಲೆಯಿಂದ ಬೆಳಕಿನ ಕಡೆಗೂ ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಸುವಂತೆ ನಿನ್ನನ್ನು ಕಳುಹಿಸುತ್ತಿದ್ದೇನೆ’ ಎಂದು ಹೇಳಿದನು.—ಅಪೊಸ್ತಲರ ಕಾರ್ಯಗಳು 26:17, 18.

ಹೌದು, ಪಿಶಾಚನಾದ ಸೈತಾನನೇ ಪ್ರತಿಯೊಬ್ಬರನ್ನು ಕೆಟ್ಟ ವಿಷಯಗಳನ್ನು ಮಾಡುವಂತೆ ಪ್ರಚೋದಿಸುತ್ತಿರುವುದು. ಸರಿಯಾದದ್ದನ್ನು ಮಾಡುವುದು ಕೆಲವೊಮ್ಮೆ ತುಂಬಾ ಕಷ್ಟ ಅಂತ ನಿನಗೂ ಅನಿಸಿದೆಯಾ?— ಹೌದು, ಎಲ್ಲರಿಗೂ ಹಾಗನಿಸುತ್ತದೆ. ಏಕೆಂದರೆ ಸೈತಾನನು ಅದನ್ನು ಕಷ್ಟವಾಗಿ ಮಾಡುತ್ತಾನೆ. ಸರಿಯಾದುದನ್ನು ಮಾಡಲು ಕಷ್ಟ ಅಂತ ಅನಿಸಲು ಇನ್ನೊಂದು ಕಾರಣವೂ ಇದೆ. ಅದೇನು ಗೊತ್ತಾ?— ನಾವು ಹುಟ್ಟಿನಿಂದಲೇ ಪಾಪಿಗಳಾಗಿದ್ದೇವೆ.

ನಮ್ಮಲ್ಲಿರುವ ಈ ಪಾಪದಿಂದಾಗಿ ಒಳ್ಳೇದಕ್ಕಿಂತ ಕೆಟ್ಟದ್ದನ್ನು ಮಾಡುವುದು ಹೆಚ್ಚು ಸುಲಭವಾಗಿ ಕಾಣುತ್ತದೆ. ಹೀಗಿರುವಾಗ ನಾವೇನು ಮಾಡಬೇಕು?— ಹೌದು, ಸರಿಯಾದದ್ದನ್ನು ಮಾಡಲು ಶ್ರಮಿಸಬೇಕು. ಹೀಗೆ ಶ್ರಮಿಸುವಾಗ ಯೇಸು ಖಂಡಿತ ನಮಗೆ ಸಹಾಯಮಾಡುವನು.

ಕೆಟ್ಟ ಕೆಲಸ ಮಾಡುವುದನ್ನು ಬಿಟ್ಟು ಒಳ್ಳೇ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದವರ ಮೇಲೆ ಯೇಸುವಿಗೆ ಪ್ರೀತಿ ಕನಿಕರವಿತ್ತು. ಹಾಗೆ ಬದಲಾವಣೆ ಮಾಡಿಕೊಳ್ಳುವುದು ಎಷ್ಟು ಕಷ್ಟ ಅಂತ ಅವನು ಅರ್ಥಮಾಡಿಕೊಂಡಿದ್ದನು. ಉದಾಹರಣೆಗೆ, ಕೆಲವು ಸ್ತ್ರೀಯರು ತಪ್ಪಾದ ರೀತಿಯ ಲೈಂಗಿಕ ಕೃತ್ಯಗಳಲ್ಲಿ ಒಳಗೂಡಿದ್ದರು. ಈ ರೀತಿ ಬೇರೆ ಬೇರೆ ಪುರುಷರೊಂದಿಗೆ ಲೈಂಗಿಕ ಸಂಬಂಧದಲ್ಲಿ ಒಳಗೂಡಿರುವ ಸ್ತ್ರೀಯರನ್ನು ಬೈಬಲು ವೇಶ್ಯೆಯರು ಅಥವಾ ಸೂಳೆಯರು ಎಂದು ಕರೆಯುತ್ತದೆ.

ಪಾಪ ಮಾಡಿದ್ದ ಈ ಸ್ತ್ರೀಯನ್ನು ಯೇಸು ಏಕೆ ಕ್ಷಮಿಸಿದನು?

ಒಂದ್ಸಲ, ಇಂಥ ಒಬ್ಬ ಸ್ತ್ರೀಯ ಕಿವಿಗೆ ಯೇಸುವಿನ ವಿಚಾರ ಬಿತ್ತು. ಯೇಸು ಫರಿಸಾಯನ ಮನೆಗೆ ಊಟಕ್ಕೆ ಹೋಗಿದ್ದಾನೆಂದು ತಿಳಿದ ಆಕೆ ಅಲ್ಲಿಗೆ ಬಂದಳು. ಅವಳು ಯೇಸುವಿನ ಕಾಲ ಹತ್ತಿರ ಕೂತು ಅವನ ಪಾದಗಳನ್ನು ಕಣ್ಣೀರಿನಿಂದ ತೋಯಿಸಿ ತನ್ನ ಕೂದಲಿನಿಂದ ಒರೆಸಿದಳು. ನಂತರ ಸುಗಂಧ ತೈಲವನ್ನು ಅವನ ಪಾದಗಳಿಗೆ ಹಚ್ಚಿದಳು. ತನ್ನ ಪಾಪಗಳಿಗಾಗಿ ಅವಳಲ್ಲಿ ಅತೀವ ದುಃಖವಿತ್ತು. ಯೇಸು ಅವಳ ಪಶ್ಚಾತ್ತಾಪವನ್ನು ನೋಡಿ ಅವಳನ್ನು ಕ್ಷಮಿಸಿದನು. ಆದರೆ ಊಟಕ್ಕೆ ಕರೆದಿದ್ದ ಆ ಫರಿಸಾಯನು ಅವಳು ಕ್ಷಮೆಗೆ ಅರ್ಹಳಲ್ಲ ಎಂದು ನೆನಸಿದನು.—ಲೂಕ 7:36-50.

ವೇಶ್ಯೆಯರ ಕುರಿತು ಮತ್ತೊಂದು ಸಂದರ್ಭದಲ್ಲಿ ಯೇಸು ಕೆಲವು ಫರಿಸಾಯರಿಗೆ ಏನು ಹೇಳಿದನು ಗೊತ್ತಾ?— ‘ವೇಶ್ಯೆಯರು ನಿಮಗಿಂತ ಮುಂಚೆ ದೇವರ ರಾಜ್ಯದೊಳಗೆ ಹೋಗುವರು’ ಅಂತ ಅಂದನು. (ಮತ್ತಾಯ 21:31) ಯೇಸು ಹೀಗೇಕೆ ಹೇಳಿದನು? ಏಕೆಂದರೆ, ವೇಶ್ಯೆಯರು ಯೇಸುವಿನ ಮೇಲೆ ನಂಬಿಕೆ ಇಟ್ಟಿದ್ದರು. ಮಾತ್ರವಲ್ಲ ತಮ್ಮ ಕೆಟ್ಟ ಜೀವನ ರೀತಿಯನ್ನು ತೊರೆದು ಬಿಟ್ಟರು. ಆದರೆ ಫರಿಸಾಯರೋ ಯೇಸುವಿನ ಶಿಷ್ಯರಿಗೆ ಕೆಟ್ಟದ್ದನ್ನು ಮಾಡುತ್ತಲೇ ಇದ್ದರು.

ಆದುದರಿಂದ, ನಾವು ಮಾಡುತ್ತಿರುವುದು ತಪ್ಪೆಂದು ಬೈಬಲ್‌ ತೋರಿಸಿಕೊಡುವಾಗ ಕೂಡಲೇ ಬದಲಾವಣೆ ಮಾಡಿಕೊಳ್ಳಲು ಸಿದ್ಧರಿರಬೇಕು. ಮಾತ್ರವಲ್ಲ ಯೆಹೋವನು ನಮ್ಮಿಂದ ಇಷ್ಟಪಡುವ ವಿಷಯಗಳನ್ನು ಮಾಡಲು ಸದಾ ನಮ್ಮ ಮನಸ್ಸು ಹಾತೊರೆಯುತ್ತಿರಬೇಕು. ಆಗ ಯೆಹೋವನು ನಮ್ಮ ಬಗ್ಗೆ ಸಂತೋಷಗೊಳ್ಳುವನು. ಸದಾಕಾಲ ಜೀವಿಸುವಂತೆ ನಮ್ಮನ್ನು ಆಶೀರ್ವದಿಸುವನು.

ಕೆಟ್ಟದ್ದನ್ನು ಮಾಡದಿರಲು ನಮಗೆ ಕೆಲವು ವಚನಗಳು ಸಹಾಯಮಾಡುತ್ತವೆ. ಅವನ್ನು ಓದಿ ನೋಡೋಣ. ಕೀರ್ತನೆ 119:9-11; ಜ್ಞಾನೋಕ್ತಿ 3:5-7 ಮತ್ತು 12:15.