ಕೀರ್ತನೆ 119:1-176

 • ದೇವರ ಅಮೂಲ್ಯ ವಾಕ್ಯಕ್ಕೆ ಗಣ್ಯತೆ

  • “ಯುವಕರು ತಮ್ಮ ನಡತೆನ ಹೇಗೆ ಶುದ್ಧವಾಗಿ ಇಟ್ಕೊಬಹುದು?” (9)

  • “ನಿನ್ನ ಎಚ್ಚರಿಕೆಗಳು ನನಗೆ ತುಂಬ ಇಷ್ಟ” (24)

  • “ನಿನ್ನ ವಾಕ್ಯನೇ ನನ್ನ ನಿರೀಕ್ಷೆ” (74, 81, 114)

  • “ನಾನು ನಿನ್ನ ನಿಯಮಗಳನ್ನ ಎಷ್ಟು ಪ್ರೀತಿಸ್ತೀನಿ ಅಂತ ನೋಡು!” (97)

  • “ನನ್ನ ಶಿಕ್ಷಕರಿಗಿಂತ ನನಗೆ ಜಾಸ್ತಿ ತಿಳುವಳಿಕೆ ಇದೆ” (99)

  • “ನಿನ್ನ ವಾಕ್ಯ ನನ್ನ ಕಾಲಿಗೆ ದೀಪ” (105)

  • “ಸತ್ಯಾನೇ ನಿನ್ನ ವಾಕ್ಯದ ಜೀವಾಳ” (160)

  • ದೇವರ ನಿಯಮಗಳನ್ನ ಪ್ರೀತಿಸೋರಿಗೆ ಅಪಾರ ಶಾಂತಿ ಸಿಗುತ್ತೆ (165)

א [ಆಲೆಫ್‌] 119  ತಮ್ಮ ಜೀವನದಲ್ಲಿ ಕಳಂಕ ಇಲ್ಲದೆ* ನಡೆಯೋರು,ಯೆಹೋವನ ನಿಯಮ ಪುಸ್ತಕದ ಪ್ರಕಾರ ನಡೆಯೋರು ಭಾಗ್ಯವಂತರು.+   ಆತನು ಕೊಡೋ ಎಚ್ಚರಿಕೆಗಳನ್ನ* ಯಾರು ಪಾಲಿಸ್ತಾರೋ,+ಪೂರ್ಣಹೃದಯದಿಂದ ಆತನಿಗಾಗಿ ಯಾರು ಹುಡುಕ್ತಾರೋ ಅವರು ಖುಷಿಯಿಂದ ಇರ್ತಾರೆ.+   ಅವರು ಯಾವ ಕೆಟ್ಟಕೆಲಸವನ್ನೂ ರೂಢಿ ಮಾಡ್ಕೊಳ್ಳಲ್ಲ,ಅವರು ಆತನ ದಾರಿಯಲ್ಲಿ ನಡೀತಾರೆ.+   ನಿನ್ನ ಅಪ್ಪಣೆಗಳನ್ನ ಶ್ರದ್ಧೆಯಿಂದ ಪಾಲಿಸಬೇಕಂತನೀನು ಆಜ್ಞೆ ಕೊಟ್ಟಿದ್ದೀಯ.+   ನಿನ್ನ ನಿಯಮಗಳನ್ನ ಅನುಸರಿಸ್ತಾ ಇರೋ ಹಾಗೆನನ್ನ ಮನಸ್ಸು ಯಾವಾಗ್ಲೂ ದೃಢವಾಗಿರಬೇಕು ಅನ್ನೋದೇ ನನ್ನಾಸೆ!+   ಹೀಗೆ ನಾನು ನಿನ್ನ ಎಲ್ಲ ಆಜ್ಞೆಗಳ ಬಗ್ಗೆ ಯೋಚಿಸ್ತಾ ಇದ್ರೆ,ನನಗೆ ಅವಮಾನ ಆಗಲ್ಲ.+   ನಿನ್ನ ನೀತಿ ನ್ಯಾಯ ತೀರ್ಪುಗಳ ಬಗ್ಗೆ ಕಲಿಯೋವಾಗನಾನು ನಿನ್ನನ್ನ ಪ್ರಾಮಾಣಿಕ ಹೃದಯದಿಂದ ಹೊಗಳ್ತೀನಿ.   ನಾನು ನಿನ್ನ ನಿಯಮಗಳನ್ನ ಪಾಲಿಸ್ತೀನಿ. ನೀನು ನನ್ನನ್ನ ಪೂರ್ತಿ ಬಿಟ್ಟುಬಿಡಬೇಡ. ב [ಬೆತ್‌]   ಯುವಕರು ತಮ್ಮ ನಡತೆನ ಹೇಗೆ ಶುದ್ಧವಾಗಿ ಇಟ್ಕೊಬಹುದು? ನಿನ್ನ ವಾಕ್ಯದ ಪ್ರಕಾರ ನಡೆದು ತಮ್ಮನ್ನ ಕಾಪಾಡ್ಕೊಳ್ಳೋ ಮೂಲಕನೇ ಅಲ್ವಾ.+ 10  ನನ್ನ ಪೂರ್ಣಹೃದಯದಿಂದ ನಾನು ನಿನ್ನನ್ನ ಹುಡುಕ್ತೀನಿ. ನಿನ್ನ ಆಜ್ಞೆಗಳಿಂದ ದೂರ ಆಗಿ ತಪ್ಪುದಾರಿ ಹಿಡಿಯೋಕೆ ನನ್ನನ್ನ ಬಿಡಬೇಡ.+ 11  ನಿನ್ನ ವಿರುದ್ಧ ಪಾಪ ಮಾಡದ ಹಾಗೆ,+ನಾನು ನನ್ನ ಹೃದಯದಲ್ಲಿ ನಿನ್ನ ಮಾತುಗಳನ್ನ ನಿಧಿ ತರ ಕಾಪಾಡ್ಕೊಳ್ತೀನಿ.+ 12  ಯೆಹೋವನೇ, ನಿನಗೆ ಹೊಗಳಿಕೆ ಆಗಲಿ. ನಿನ್ನ ನಿಯಮಗಳನ್ನ ನನಗೆ ಕಲಿಸು. 13  ನೀನು ಹೇಳಿರೋ ಪ್ರತಿಯೊಂದು ತೀರ್ಪುಗಳನ್ನನನ್ನ ತುಟಿಗಳಿಂದ ಎಲ್ರಿಗೂ ಹೇಳ್ತೀನಿ. 14  ನೀನು ನನಗೆ ನೆನಪಿಸೋಕೆ ಹೇಳೋ ಮಾತುಗಳುಬೇರೆ ಅಮೂಲ್ಯ ವಸ್ತುಗಳಿಗಿಂತ ತುಂಬ ಖುಷಿ ತರುತ್ತೆ.+ 15  ನಿನ್ನ ಆಜ್ಞೆಗಳ ಬಗ್ಗೆ ನಾನು ತುಂಬ ಆಲೋಚಿಸ್ತೀನಿ*+ನಾನು ಹೇಗೆ ಜೀವಿಸಿದ್ರೆ ನಿನಗೆ ಇಷ್ಟ ಆಗುತ್ತೆ ಅಂತ ನಾನು ಧ್ಯಾನಿಸ್ತೀನಿ.+ 16  ನಿನ್ನ ನಿಯಮಗಳು ನಂಗೆ ತುಂಬ ಇಷ್ಟ. ನಾನು ನಿನ್ನ ವಾಕ್ಯವನ್ನ ಮರಿಯಲ್ಲ.+ ג [ಗಿಮೆಲ್‌] 17  ನಿನ್ನ ಸೇವಕನಾದ ನಾನು ಜೀವಂತವಾಗಿದ್ದು ನಿನ್ನ ವಾಕ್ಯ ಪಾಲಿಸೋಕೆ,ನನ್ನ ಜೊತೆ ದಯೆಯಿಂದ ನಡ್ಕೊ.+ 18  ನಿನ್ನ ನಿಯಮ ಪುಸ್ತಕದಲ್ಲಿರೋ ಅದ್ಭುತ ವಿಷ್ಯಗಳನ್ನಸ್ಪಷ್ಟವಾಗಿ ನೋಡೋಕೆ ಆಗೋ ತರ ನನ್ನ ಕಣ್ಣುಗಳನ್ನ ತೆಗಿ. 19  ನಾನು ಬೇರೆ ದೇಶದಲ್ಲಿರೋ ಪರದೇಶಿ ತರ ಇದ್ದೀನಿ.+ ನನ್ನಿಂದ ನಿನ್ನ ಆಜ್ಞೆಗಳನ್ನ ಮುಚ್ಚಿಡಬೇಡ. 20  ನಾನು ಯಾವಾಗ್ಲೂ ನಿನ್ನ ತೀರ್ಪಿಗಾಗಿ ಹಾತೊರಿತಾ ಇರ್ತಿನಿ,ಅದರ ಗುಂಗು ನನ್ನನ್ನ ನುಂಗಿಹಾಕ್ತಿದೆ. 21  ನೀನು ಗರ್ವಿಷ್ಠರನ್ನ,ನಿನ್ನ ಆಜ್ಞೆಗಳಿಂದ ದೂರಹೋಗಿರೋ ಶಾಪಗ್ರಸ್ತರನ್ನ ಗದರಿಸ್ತೀಯ.+ 22  ಅವಮಾನ, ಅಣಕಿಸೋ ಮಾತನ್ನ ನನ್ನಿಂದ ದೂರಮಾಡು,*ಯಾಕಂದ್ರೆ ನೀನು ನನಗೆ ನೆನಪಿಸಿದ್ದನ್ನೆಲ್ಲ ನಾನು ಪಾಲಿಸಿದ್ದೀನಿ. 23  ನಾಯಕರು ಒಟ್ಟಾಗಿ ಕೂತು, ನನ್ನ ವಿರುದ್ಧ ಮಾತಾಡ್ತಿರೋವಾಗ್ಲೂ,ನಿನ್ನ ಸೇವಕನಾದ ನಾನು ನಿನ್ನ ನಿಯಮಗಳ ಬಗ್ಗೆ ಚೆನ್ನಾಗಿ ಆಲೋಚಿಸ್ತೀನಿ.* 24  ನಿನ್ನ ಎಚ್ಚರಿಕೆಗಳು ನನಗೆ ತುಂಬ ಇಷ್ಟ,+ಅವು ನನಗೆ ಸಲಹೆಗಾರರ ತರ ಇವೆ.+ ד [ಡಾಲತ್‌] 25  ನಾನು ಧೂಳಿನಲ್ಲಿ ಮುಖ ಕೆಳಗೆ ಮಾಡ್ಕೊಂಡು ಬಿದ್ದಿದ್ದೀನಿ.+ ನಿನ್ನ ಮಾತಿನ ಪ್ರಕಾರ ನನ್ನ ಪ್ರಾಣವನ್ನ ಕಾಪಾಡು.+ 26  ನಾನು ಏನೆಲ್ಲ ಮಾಡ್ತೀನಿ ಅಂತ ನಿಂಗೆ ಹೇಳ್ದೆ, ನೀನು ನನಗೆ ಉತ್ರ ಕೊಟ್ಟೆ. ನಿನ್ನ ನಿಯಮಗಳನ್ನ ನನಗೆ ಕಲಿಸು.+ 27  ನಿನ್ನ ಆಜ್ಞೆಗಳ ಅರ್ಥವನ್ನ* ನನಗೆ ತಿಳಿಸು,ಆಗ ನಿನ್ನ ಅದ್ಭುತಗಳ ಬಗ್ಗೆ ನಾನು ತುಂಬ ಆಲೋಚಿಸೋಕೆ ಆಗುತ್ತೆ.*+ 28  ದುಃಖದಿಂದ ನನಗೆ ನಿದ್ದೆನೇ ಬರ್ತಿಲ್ಲ. ನೀನು ಮಾತು ಕೊಟ್ಟ ಹಾಗೆ ನನ್ನನ್ನ ಬಲಪಡಿಸು. 29  ಮೋಸದ ದಾರಿಯನ್ನ ನನ್ನಿಂದ ದೂರ ಮಾಡು,+ನಿನ್ನ ನಿಯಮ ಪುಸ್ತಕವನ್ನ ಕಲಿಸಿ ಕೃಪೆ ತೋರಿಸು. 30  ನಾನು ನಂಬಿಗಸ್ತಿಕೆಯ ದಾರಿ ಆರಿಸ್ಕೊಂಡೆ.+ ನಿನ್ನ ತೀರ್ಪುಗಳು ಸರಿಯಾಗೇ ಇವೆ ಅಂತ ನಾನು ತಿಳ್ಕೊಂಡೆ. 31  ನಿನ್ನ ಎಚ್ಚರಿಕೆಗಳನ್ನ ತಬ್ಬಿಕೊಳ್ತೀನಿ.+ ಯೆಹೋವ, ನನಗೆ ನಿರಾಸೆ ಆಗದ ಹಾಗೆ ನೋಡ್ಕೊ.*+ 32  ನಾನು ನಿನ್ನ ಆಜ್ಞೆಗಳ ದಾರಿಯಲ್ಲಿ ತುಂಬ ಆಸೆಪಟ್ಟು ನಡೀತೀನಿ*ಯಾಕಂದ್ರೆ ನೀನು ನನ್ನ ಹೃದಯದಲ್ಲಿ ಅದಕ್ಕಾಗಿ ಒಂದು ಮನೆ ಮಾಡಿದ್ದೀಯ.* ה [ಹೆ] 33  ಯೆಹೋವನೇ, ನಿನ್ನ ನಿಯಮಗಳ ಬಗ್ಗೆ ನನಗೆ ಕಲಿಸು,+ಕೊನೆ ತನಕ ನಾನು ಅದನ್ನ ಪಾಲಿಸ್ತೀನಿ.+ 34  ನಿನ್ನ ನಿಯಮ ಪುಸ್ತಕವನ್ನ ಪಾಲಿಸೋಕೆ,ಅದರ ಪ್ರಕಾರ ಪೂರ್ಣಹೃದಯದಿಂದ ನಡಿಯೋಕೆನನಗೆ ಬುದ್ಧಿ ಕೊಡು. 35  ನಿನ್ನ ಆಜ್ಞೆಗಳ ದಾರಿಯಲ್ಲಿ ನನ್ನನ್ನ ನಡಿಸು,*+ಯಾಕಂದ್ರೆ ಅದ್ರಲ್ಲಿ ನನಗೆ ತುಂಬ ಖುಷಿ ಸಿಗುತ್ತೆ. 36  ನನ್ನ ಹೃದಯ ಸ್ವಾರ್ಥ ಲಾಭದ ಕಡೆಗಲ್ಲ,+ನಿನ್ನ ಎಚ್ಚರಿಕೆಗಳ ಕಡೆ ವಾಲೋ ತರ ಮಾಡು. 37  ಅಯೋಗ್ಯ ವಿಷ್ಯಗಳನ್ನ ನೋಡದ ಹಾಗೆ ನನ್ನ ದೃಷ್ಟಿಯನ್ನ ಪಕ್ಕಕ್ಕೆ ತಿರುಗಿಸು,+ನಾನು ಜೀವಂತವಾಗಿರೋ ಹಾಗೆ ನಿನ್ನ ದಾರಿಗಳಲ್ಲಿ ನನ್ನನ್ನ ನಡಿಸು. 38  ನಿನ್ನ ಸೇವಕನಿಗೆ ಕೊಟ್ಟ* ಮಾತನ್ನ* ಉಳಿಸ್ಕೊ,ಆಗ ಜನ್ರು ನಿನ್ನ ಮಾತು ಕೇಳ್ತಾರೆ. 39  ನಾನು ಭಯಪಡೋ ಅಣಕಿಸೋ ಮಾತುಗಳನ್ನ ನನ್ನಿಂದ ದೂರಮಾಡು,ಯಾಕಂದ್ರೆ ನಿನ್ನ ತೀರ್ಪುಗಳು ಅತ್ಯುತ್ತಮ.+ 40  ನಿನ್ನ ಆಜ್ಞೆಗಳಿಗಾಗಿ ನಾನು ಹೇಗೆ ಹಾತೊರಿತೀನಿ ಅಂತ ನೋಡು. ನಿನ್ನ ನೀತಿಯಿಂದಾಗಿ ನನ್ನ ಪ್ರಾಣವನ್ನ ಕಾಪಾಡು. ו [ವಾವ್‌] 41  ಯೆಹೋವ, ನಿನ್ನ ಶಾಶ್ವತ ಪ್ರೀತಿಯನ್ನ,+ನೀನು ಮಾತು ಕೊಟ್ಟ ಹಾಗೆ ನೀನು ರಕ್ಷಿಸೋದನ್ನ ನನಗೆ ನೋಡೋಕೆ ಬಿಡು.+ 42  ಆಗ ನಾನು ನನ್ನನ್ನ ಕೆಣಕೋರಿಗೆ ಉತ್ರ ಕೊಡ್ತೀನಿ,ಯಾಕಂದ್ರೆ ನಾನು ನಿನ್ನ ಮಾತಲ್ಲಿ ಭರವಸೆ ಇಟ್ಟಿದ್ದೀನಿ. 43  ನನ್ನ ಬಾಯಿಂದ ಸತ್ಯದ ಮಾತುಗಳನ್ನ ಪೂರ್ತಿಯಾಗಿ ತೆಗಿದುಬಿಡಬೇಡ,ಯಾಕಂದ್ರೆ ನಾನು ನಿನ್ನ ತೀರ್ಪಲ್ಲಿ ನಿರೀಕ್ಷೆ ಇಟ್ಟಿದ್ದೀನಿ.* 44  ನಾನು ನಿನ್ನ ನಿಯಮ ಪುಸ್ತಕವನ್ನ ಯಾವಾಗ್ಲೂ ಪಾಲಿಸ್ತೀನಿ,ಸದಾಕಾಲಕ್ಕೂ ಅದ್ರ ಪ್ರಕಾರ ನಡಿತೀನಿ.+ 45  ನಿನ್ನ ಆಜ್ಞೆಗಳಿಗಾಗಿ ನಾನು ಹುಡುಕೋದ್ರಿಂದಸುರಕ್ಷಿತವಾದ* ಜಾಗದಲ್ಲಿ ನಡೆದಾಡ್ತೀನಿ.+ 46  ನಿನ್ನ ಎಚ್ಚರಿಕೆಗಳ ಬಗ್ಗೆ ನಾನು ರಾಜರ ಮುಂದೆ ಮಾತಾಡ್ತೀನಿ,ನಾಚಿಕೆಪಡಲ್ಲ.+ 47  ನನಗೆ ನಿನ್ನ ಆಜ್ಞೆಗಳು ಅಚ್ಚುಮೆಚ್ಚು,ಹೌದು, ಅವಂದ್ರೆ ನನಗೆ ತುಂಬ ಇಷ್ಟ.+ 48  ನಾನು ನನ್ನ ಕೈಯೆತ್ತಿ ನಿನಗೆ ಪ್ರಾರ್ಥಿಸ್ತೀನಿ,ಯಾಕಂದ್ರೆ ನಿನ್ನ ಆಜ್ಞೆಗಳನ್ನ ನಾನು ಪ್ರೀತಿಸ್ತೀನಿ.+ ನಾನು ನಿನ್ನ ನಿಯಮಗಳ ಬಗ್ಗೆ ಚೆನ್ನಾಗಿ ಆಲೋಚಿಸ್ತೀನಿ.+ ז [ಜಯಿನ್‌] 49  ನಿನ್ನ ಸೇವಕನಾದ ನನಗೆ ಕೊಟ್ಟ ಮಾತನ್ನ ನೆನಪಿಸ್ಕೊ,ಅದ್ರಿಂದ ನೀನು ನನಗೆ ನಿರೀಕ್ಷೆ ಕೊಟ್ಟೆ.* 50  ಕಷ್ಟಕಾರ್ಪಣ್ಯಗಳಲ್ಲಿ ಅದೇ ನನ್ನನ್ನ ಸಂತೈಸುತ್ತೆ,+ಯಾಕಂದ್ರೆ ನಿನ್ನ ಮಾತಿಂದಾನೇ ನಾನಿನ್ನೂ ಜೀವಂತವಾಗಿ ಇರೋದು. 51  ಅಹಂಕಾರಿಗಳು ನನ್ನನ್ನ ಎಷ್ಟೇ ಅಣಕಿಸಿದ್ರೂನಾನು ನಿನ್ನ ನಿಯಮ ಪುಸ್ತಕವನ್ನ ಬಿಟ್ಟು ದೂರ ಹೋಗಲ್ಲ.+ 52  ಯೆಹೋವನೇ, ಹಳೇ ಕಾಲದಲ್ಲಿ ನೀನು ಕೊಟ್ಟ ತೀರ್ಪುಗಳನ್ನೂ ನಾನು ನೆನಪಿಸಿಕೊಳ್ತೀನಿ,+ಅದ್ರಿಂದ ನನಗೆ ನೆಮ್ಮದಿ ಸಿಗುತ್ತೆ.+ 53  ನಿನ್ನ ನಿಯಮ ಪುಸ್ತಕವನ್ನ ತೊರೆದುಬಿಟ್ಟಿರೋ ಕೆಟ್ಟವರನ್ನ ನೋಡಿನಾನು ತುಂಬ ಕೋಪದಿಂದ ಕುದೀತಾ ಇದ್ದೀನಿ.+ 54  ನಾನು ಎಲ್ಲೇ ಇದ್ರೂ*ನಿನ್ನ ನಿಯಮಗಳು ನನಗೆ ಮಧುರ ಗೀತೆಗಳು. 55  ಯೆಹೋವನೇ, ನಿನ್ನ ನಿಯಮ ಪುಸ್ತಕವನ್ನ ಪಾಲಿಸಬೇಕಂತರಾತ್ರಿ ಹೊತ್ತಲ್ಲಿ ನಾನು ನಿನ್ನ ಹೆಸ್ರನ್ನ ನೆನಪಿಸ್ಕೊಳ್ತೀನಿ.+ 56  ನಾನು ನಿನ್ನ ಆಜ್ಞೆಗಳನ್ನ ಪಾಲಿಸೋದ್ರಿಂದಇದು ನನಗೆ ರೂಢಿ ಆಗಿಬಿಟ್ಟಿದೆ. ח [ಹೆತ್‌] 57  ಯೆಹೋವನೇ, ನೀನೇ ನನ್ನ ಆಸ್ತಿ.+ ನಾನು ನಿನ್ನ ಮಾತುಗಳನ್ನ ಪಾಲಿಸ್ತೀನಿ ಅಂತ ಮಾತು ಕೊಟ್ಟಿದ್ದೀನಿ.+ 58  ಪೂರ್ಣ ಹೃದಯದಿಂದ ನಾನು ನಿನ್ನ ಹತ್ರ ಮನವಿ ಮಾಡ್ಕೊಳ್ತೀನಿ,+ನೀನು ಮಾತು ಕೊಟ್ಟ ಹಾಗೆ ನನಗೆ ದಯೆ ತೋರಿಸು.+ 59  ನಾನು ನನ್ನ ದಾರಿಗಳನ್ನ ಚೆನ್ನಾಗಿ ಪರೀಕ್ಷೆ ಮಾಡ್ತೀನಿ,ಆಗ ನಿನ್ನ ಎಚ್ಚರಿಕೆಗಳ ಕಡೆ ನನ್ನ ಪಾದವನ್ನ ತಿರುಗಿಸೋಕೆ ಆಗುತ್ತೆ.+ 60  ನಾನು ನಿನ್ನ ಆಜ್ಞೆಗಳನ್ನತಕ್ಷಣ ಪಾಲಿಸ್ತೀನಿ, ತಡಮಾಡಲ್ಲ.+ 61  ದುಷ್ಟನ ಹಗ್ಗಗಳು ನನ್ನನ್ನ ಸುತ್ಕೊಂಡ್ರೂನಾನು ನಿನ್ನ ನಿಯಮ ಪುಸ್ತಕವನ್ನ ಮರಿಯಲ್ಲ.+ 62  ನಿನ್ನ ನೀತಿಯ ತೀರ್ಪುಗಳಿಗಾಗಿನಾನು ಮಧ್ಯರಾತ್ರಿ ಎದ್ದು ನಿನಗೆ ಧನ್ಯವಾದ ಹೇಳ್ತೀನಿ.+ 63  ಯಾರೆಲ್ಲ ನಿನಗೆ ಭಯಪಡ್ತಾರೋಯಾರೆಲ್ಲ ನಿನ್ನ ಆಜ್ಞೆಗಳನ್ನ ಪಾಲಿಸ್ತಾರೋ ಅವ್ರಿಗೆಲ್ಲ ನಾನು ಸ್ನೇಹಿತ.+ 64  ಯೆಹೋವ, ನಿನ್ನ ಶಾಶ್ವತ ಪ್ರೀತಿ ಇಡೀ ಭೂಮಿಯನ್ನ ತುಂಬಿಕೊಳ್ಳುತ್ತೆ.+ ನಿನ್ನ ನಿಯಮಗಳನ್ನ ನನಗೆ ಕಲಿಸು. ט [ಟೆತ್‌] 65  ಯೆಹೋವನೇ, ನೀನು ಮಾತು ಕೊಟ್ಟ ಹಾಗೆನಿನ್ನ ಸೇವಕನಾದ ನನಗೆ ಒಳ್ಳೇದನ್ನೇ ಮಾಡಿದೆ. 66  ನಾನು ನಿನ್ನ ಆಜ್ಞೆಗಳಲ್ಲಿ ಭರವಸೆ ಇಟ್ಟಿದ್ದೀನಿಹಾಗಾಗಿ ನನಗೆ ಒಳ್ಳೇ ಬುದ್ಧಿ ಕೊಡು, ಜ್ಞಾನವನ್ನ ಕಲಿಸು.+ 67  ಗೊತ್ತಿಲ್ಲದೆ ಪಾಪಮಾಡಿ ನಾನು ಕಷ್ಟಪಟ್ಟೆ,ಆದ್ರೆ ಈಗ ನಾನು ನಿನ್ನ ಮಾತುಗಳನ್ನ ಪಾಲಿಸ್ತಿದ್ದೀನಿ.+ 68  ನೀನು ಒಳ್ಳೆಯವನು,+ ನೀನು ಮಾಡೋದೆಲ್ಲ ಒಳ್ಳೇದೇ. ನಿನ್ನ ನಿಯಮಗಳನ್ನು ನನಗೆ ಕಲಿಸು.+ 69  ಗರ್ವಿಷ್ಠರು ನನ್ನ ಬಗ್ಗೆ ಸುಳ್ಳು ಹೇಳಿ ನನ್ನ ಹೆಸ್ರಿಗೆ ಮಸಿ ಬಳಿದಿದ್ದಾರೆ,ಆದ್ರೂ ನಾನು ನನ್ನ ಪೂರ್ಣ ಹೃದಯದಿಂದ ನಿನ್ನ ಆಜ್ಞೆಗಳನ್ನ ಪಾಲಿಸ್ತೀನಿ. 70  ಅವ್ರ ಹೃದಯ ಕಲ್ಲಿನ ತರ ಇದೆ,*+ಆದ್ರೆ ನನಗೆ ನಿನ್ನ ನಿಯಮ ಪುಸ್ತಕ ಅಂದ್ರೆ ತುಂಬ ಪ್ರೀತಿ.+ 71  ನನಗೆ ಕಷ್ಟಗಳು ಬಂದಿದ್ದು ಒಳ್ಳೇದೇ ಆಯ್ತು,+ಅದ್ರಿಂದ ನಾನು ನಿನ್ನ ನಿಯಮಗಳನ್ನ ಕಲಿಯೋಕಾಯ್ತು. 72  ಬೆಳ್ಳಿ ಬಂಗಾರದ ಸಾವಿರಾರು ತುಂಡುಗಳಿಗಿಂತ,+ನೀನು ಹೇಳಿರೋ ನಿಯಮಗಳೇ ನನಗೆ ಒಳ್ಳೇದು.+ י [ಯೋದ್‌] 73  ನಿನ್ನ ಕೈಗಳು ನನ್ನನ್ನ ಮಾಡಿದ್ವು, ನನ್ನನ್ನ ಸೃಷ್ಟಿಸಿದ್ವು. ನಿನ್ನ ಆಜ್ಞೆಗಳನ್ನ ಕಲಿತುಕೊಳ್ಳೋಕೆ,ನನಗೆ ಬುದ್ಧಿ ಕೊಡು.+ 74  ನಿನಗೆ ಭಯಪಡೋರು ನನ್ನನ್ನ ನೋಡಿ ಖುಷಿಪಡ್ತಾರೆ,ಯಾಕಂದ್ರೆ ನಿನ್ನ ವಾಕ್ಯನೇ ನನ್ನ ನಿರೀಕ್ಷೆ.*+ 75  ಯೆಹೋವ, ನಿನ್ನ ತೀರ್ಪುಗಳಲ್ಲಿ ನೀತಿ ಇದೆ+ ಅಂತ,ನನ್ನನ್ನ ಶಿಕ್ಷಿಸೋ ಮೂಲಕ ನೀನು ನಿನ್ನ ನಂಬಿಗಸ್ತಿಕೆಯನ್ನ ತೋರಿಸಿದ್ದೀಯ ಅಂತ ನಂಗೊತ್ತು.+ 76  ನಿನ್ನ ಸೇವಕನಾದ ನನಗೆ ನೀನು ಕೊಟ್ಟ ಮಾತಿನ ಪ್ರಕಾರ,ನಿನ್ನ ಶಾಶ್ವತ ಪ್ರೀತಿಯಿಂದ+ ದಯವಿಟ್ಟು ಸಂತೈಸು. 77  ನಾನು ಜೀವಂತವಾಗಿ ಇರೋಕೆ ನೀನು ನನಗೆ ಕರುಣೆ ತೋರಿಸು,+ಯಾಕಂದ್ರೆ ನನಗೆ ನಿನ್ನ ನಿಯಮಗಳು ಅಂದ್ರೆ ತುಂಬ ಪ್ರೀತಿ.+ 78  ಗರ್ವಿಷ್ಠರಿಗೆ ಅವಮಾನ ಆಗಲಿ,ಯಾಕಂದ್ರೆ ಸುಮ್ಮಸುಮ್ಮನೇ* ಅವರು ನನಗೆ ತೊಂದರೆ ಕೊಡ್ತಾರೆ. ಆದ್ರೆ ನಾನು ನಿನ್ನ ಆಜ್ಞೆಗಳ ಬಗ್ಗೆ ಚೆನ್ನಾಗಿ ಆಲೋಚಿಸ್ತೀನಿ.+ 79  ನಿನಗೆ ಭಯಪಡೋರು,ನಿನ್ನ ಎಚ್ಚರಿಕೆಗಳ ಬಗ್ಗೆ ತಿಳ್ಕೊಂಡಿರೋರು,ನನ್ನ ಹತ್ರ ವಾಪಸ್‌ ಬರಲಿ. 80  ನಿನ್ನ ನಿಯಮಗಳನ್ನ ಪಾಲಿಸೋದ್ರಲ್ಲಿ ನನ್ನ ಹೃದಯ ನಿಷ್ಕಂಳಕವಾಗಿರಲಿ,+ಆಗ ನನಗೆ ಅವಮಾನ ಆಗಲ್ಲ.+ כ [ಕಾಫ್‌] 81  ನೀನು ಕೊಡೋ ರಕ್ಷಣೆಗಾಗಿ ನಾನು ಹಾತೊರಿತಾ ಇದ್ದೀನಿ,+ಯಾಕಂದ್ರೆ ನಿನ್ನ ವಾಕ್ಯನೇ ನನ್ನ ನಿರೀಕ್ಷೆ. 82  ನನ್ನ ಕಣ್ಣು ನಿನ್ನ ಮಾತಿಗಾಗಿ ಕಾಯ್ತವೆ,+“ನನಗೆ ಯಾವಾಗ ಸಮಾಧಾನ ಮಾಡ್ತೀಯ?” ಅಂತ ನಾನು ನಿನ್ನನ್ನ ಕೇಳ್ತೀನಿ.+ 83  ಹೊಗೆಯಲ್ಲಿ ಒಣಗಿಸಿದ ಚರ್ಮದ ಬುದ್ದಲಿ ತರ ನಾನಿದ್ದೀನಿ,ಆದ್ರೂ ನಾನು ನಿನ್ನ ನಿಯಮಗಳನ್ನ ಮರಿಯಲ್ಲ.+ 84  ನನಗೆ ಹಿಂಸೆ ಕೊಡ್ತಾ ಇರೋರಿಗೆ ನೀನು ಯಾವಾಗ ಶಿಕ್ಷೆ ಕೊಡ್ತೀಯಾ? ನಿನ್ನ ಸೇವಕನಾದ ನಾನು ಇನ್ನೆಷ್ಟು ದಿನ ಕಾಯಬೇಕು?+ 85  ನಿನ್ನ ನಿಯಮ ಪುಸ್ತಕವನ್ನ ಮೀರಿ ನಡಿಯೋ ದುರಹಂಕಾರಿಗಳು,ನನಗೆ ಗುಂಡಿ ತೋಡ್ತಾರೆ. 86  ನಿನ್ನ ಆಜ್ಞೆಗಳಲ್ಲಿ ಭರವಸೆ ಇಡಬಹುದು. ಸುಮ್ಮಸುಮ್ಮನೇ ಜನ್ರು ನನಗೆ ಕಿರುಕುಳ ಕೊಡ್ತಾರೆ, ನನಗೆ ಸಹಾಯಮಾಡು!+ 87  ಅವರು ನನ್ನನ್ನ ಭೂಮಿಯಿಂದ ಬೇರು ಸಮೇತ ಕಿತ್ತುಹಾಕಿದ್ರೂ,ನಾನು ನಿನ್ನ ಅಪ್ಪಣೆಗಳನ್ನ ಬಿಟ್ಟುಬಿಡಲಿಲ್ಲ. 88  ನಿನ್ನ ಎಚ್ಚರಿಕೆಗಳನ್ನ ನಾನು ಪಾಲಿಸೋಕೆ ಆಗೋ ಹಾಗೆ,ನಿನ್ನ ಶಾಶ್ವತ ಪ್ರೀತಿಯಿಂದ ನನ್ನ ಪ್ರಾಣವನ್ನ ಕಾಪಾಡು. ל [ಲಾಮೆದ್‌] 89  ಯೆಹೋವ,ನಿನ್ನ ವಾಕ್ಯ ನಿಜವಾಗ್ಲೂ ಸದಾಕಾಲ ಸ್ವರ್ಗದಲ್ಲಿರುತ್ತೆ.+ 90  ನಿನ್ನ ನಂಬಿಗಸ್ತಿಕೆ ತಲತಲಾಂತರಗಳ ತನಕ ಇರುತ್ತೆ.+ ನೀನು ಭೂಮಿಯನ್ನ ಸ್ಥಿರವಾಗಿ ಸ್ಥಾಪಿಸಿದ್ದೀಯ, ಹಾಗಾಗಿ ಅದು ಇವತ್ತೂ ಕದಲದೆ ನಿಂತಿದೆ.+ 91  ನಿನ್ನ ತೀರ್ಪಿಂದಾಗಿ ನೀನು ಸೃಷ್ಟಿ ಮಾಡಿದ್ದೆಲ್ಲ ಹಾಗೇ ಇವೆ,ಯಾಕಂದ್ರೆ ಅವೆಲ್ಲ ನಿನ್ನ ಸೇವೆ ಮಾಡುತ್ತವೆ. 92  ನಿನ್ನ ನಿಯಮಗಳ ಮೇಲೆ ನನಗೆ ಪ್ರೀತಿ ಇಲ್ಲದೆ ಹೋಗಿದ್ರೆ,ನಾನು ನನ್ನ ಕಷ್ಟದಲ್ಲೇ ಸತ್ತು ಹೋಗ್ತಿದ್ದೆ.+ 93  ನಾನು ನಿನ್ನ ಆಜ್ಞೆಗಳನ್ನ ಯಾವತ್ತೂ ಮರಿಯಲ್ಲ,ಯಾಕಂದ್ರೆ ನೀನು ನನ್ನನ್ನ ಜೀವಂತವಾಗಿ ಇಟ್ಟಿರೋದು ಅವುಗಳಿಂದಾನೇ.+ 94  ನಾನು ನಿನ್ನವನು, ನನ್ನನ್ನ ರಕ್ಷಿಸು,+ಯಾಕಂದ್ರೆ ನಿನ್ನ ಆಜ್ಞೆಗಳಿಗಾಗಿ ನಾನು ಹುಡುಕಾಡಿದೆ.+ 95  ಕೆಟ್ಟವರು ನನ್ನನ್ನ ನಾಶಮಾಡೋಕೆ ಕಾಯ್ತಾ ಇದ್ದಾರೆ,ಆದ್ರೆ ನನ್ನ ಸಂಪೂರ್ಣ ಗಮನ ನಿನ್ನ ಎಚ್ಚರಿಕೆಗಳ ಮೇಲಿದೆ. 96  ಎಲ್ಲ ಪರಿಪೂರ್ಣತೆಗೂ ಒಂದು ಮಿತಿ ಇರೋದನ್ನ ನಾನು ನೋಡಿದ್ದೀನಿ,ಆದ್ರೆ ನಿನ್ನ ಆಜ್ಞೆಗಳಿಗೆ ಮಿತಿನೇ* ಇಲ್ಲ. מ [ಮೆಮ್‌] 97  ನಾನು ನಿನ್ನ ನಿಯಮಗಳನ್ನ ಎಷ್ಟು ಪ್ರೀತಿಸ್ತೀನಿ ಅಂತ ನೋಡು!+ ಇಡೀ ದಿನ ನಾನು ಅದ್ರ ಬಗ್ಗೆ ತುಂಬ ಆಲೋಚಿಸ್ತೀನಿ.+ 98  ನಿನ್ನ ಆಜ್ಞೆಗಳಿಂದಾಗಿ ನಾನು ನನ್ನ ವಿರೋಧಿಗಳಿಗಿಂತ ಹೆಚ್ಚು ವಿವೇಕಿ ಆಗಿದ್ದೀನಿ,+ಯಾಕಂದ್ರೆ ನಿನ್ನ ಆಜ್ಞೆಗಳು ಯಾವಾಗ್ಲೂ ನನ್ನ ಜೊತೆ ಇರುತ್ತೆ. 99  ನನ್ನ ಶಿಕ್ಷಕರಿಗಿಂತ ನನಗೆ ಜಾಸ್ತಿ ತಿಳುವಳಿಕೆ* ಇದೆ,+ಯಾಕಂದ್ರೆ ನಿನ್ನ ಎಚ್ಚರಿಕೆಗಳ ಬಗ್ಗೆ ನಾನು ಚೆನ್ನಾಗಿ ಆಲೋಚಿಸ್ತೀನಿ. 100  ವಯಸ್ಸಾದವರಿಗಿಂತ ಬುದ್ಧಿವಂತನಾಗಿ ನಾನು ನಡ್ಕೊತೀನಿ,ಯಾಕಂದ್ರೆ ನಾನು ನಿನ್ನ ಆಜ್ಞೆಗಳನ್ನ ಪಾಲಿಸ್ತೀನಿ. 101  ನಿನ್ನ ವಾಕ್ಯ ಪಾಲಿಸಬೇಕಂತ,ನಾನು ಯಾವ ಕೆಟ್ಟ ದಾರಿಯಲ್ಲೂ ನಡಿಯಲ್ಲ.+ 102  ನಿನ್ನ ತೀರ್ಪುಗಳಿಂದ ದೂರ ಹೋಗಲ್ಲ,ಯಾಕಂದ್ರೆ ನೀನೇ ನನಗೆ ಕಲಿಸಿದ್ದೀಯ. 103  ನಿನ್ನ ಮಾತುಗಳು ನನ್ನ ನಾಲಿಗೆಗೆ ಎಷ್ಟೋ ಸಿಹಿಯಾಗಿವೆ,ಜೇನಿಗಿಂತ ಮಧುರವಾಗಿವೆ.+ 104  ನಿನ್ನ ಆಜ್ಞೆಗಳಿಂದಾಗಿ ನಾನು ಬುದ್ಧಿವಂತನಾಗಿ ನಡ್ಕೊತೀನಿ.+ ಅದಕ್ಕೇ ಕೆಟ್ಟ ದಾರಿಯನ್ನ ದ್ವೇಷಿಸ್ತೀನಿ.+ נ [ನೂನ್‌] 105  ನಿನ್ನ ವಾಕ್ಯ ನನ್ನ ಕಾಲಿಗೆ ದೀಪ,ನನ್ನ ದಾರಿಗೆ ಬೆಳಕು.+ 106  ನಿನ್ನ ನೀತಿಯ ತೀರ್ಪುಗಳನ್ನ ಒಪ್ಕೊಳ್ತೀನಿ,ಅವನ್ನ ಪಾಲಿಸ್ತೀನಿ ಅಂತ ನಾನು ಮಾತುಕೊಟ್ಟಿದ್ದೀನಿ. 107  ನಾನು ತುಂಬ ಕಷ್ಟಪಟ್ಟಿದ್ದೀನಿ.+ ಯೆಹೋವ, ಕೊಟ್ಟ ಮಾತಿನ ಹಾಗೆ ನನ್ನ ಪ್ರಾಣ ಕಾಪಾಡು.+ 108  ಯೆಹೋವ, ಮನಸಾರೆ ನಾನು ಕೊಡೋ ಸ್ತುತಿಯ ಕಾಣಿಕೆಯಲ್ಲಿ ದಯವಿಟ್ಟು ಆನಂದಿಸು,+ನಿನ್ನ ತೀರ್ಪುಗಳನ್ನ ನನಗೆ ಕಲಿಸು.+ 109  ನನ್ನ ಜೀವಾನ ನಾನು ಯಾವಾಗ್ಲೂ ಕೈಯಲ್ಲೇ ಹಿಡ್ಕೊಂಡಿರ್ತಿನಿ,* ಆದ್ರೂ ನಾನು ನಿನ್ನ ನಿಯಮಗಳನ್ನ ಮರೆತಿಲ್ಲ.+ 110  ಕೆಟ್ಟವರು ನನಗಾಗಿ ಬಲೆ ಬೀಸಿದ್ದಾರೆ,ಆದ್ರೆ ನಾನು ನಿನ್ನ ಆಜ್ಞೆಗಳನ್ನ ಬಿಟ್ಟು ದೂರ ಸರಿದಿಲ್ಲ.+ 111  ನಿನ್ನ ಎಚ್ಚರಿಕೆಗಳನ್ನ ನಾನು ನನ್ನ ಶಾಶ್ವತ ಸೊತ್ತಾಗಿ* ಮಾಡ್ಕೊಂಡಿದ್ದೀನಿ,ಯಾಕಂದ್ರೆ ಅದ್ರಿಂದ ನನ್ನ ಮನಸ್ಸಿಗೆ ಖುಷಿ ಆಗುತ್ತೆ.+ 112  ನಿನ್ನ ನಿಯಮಗಳನ್ನ ಜೀವನಪರ್ಯಂತ ಅನುಸರಿಸಬೇಕಂತ,ಕೊನೇ ಉಸಿರು ಇರೋ ತನಕ ಪಾಲಿಸಬೇಕಂತ,ನಾನು ದೃಢನಿಶ್ಚಯ ಮಾಡಿದ್ದೀನಿ.* ס [ಸಾಮೆಕ್‌] 113  ಅರೆಮನಸ್ಸಿನ ಜನರನ್ನ* ನಾನು ದ್ವೇಷಿಸ್ತೀನಿ,+ಆದ್ರೆ ನಿನ್ನ ನಿಯಮಗಳನ್ನ ಪ್ರೀತಿಸ್ತೀನಿ.+ 114  ನೀನೇ ನನ್ನ ಆಶ್ರಯ, ನನ್ನ ಗುರಾಣಿ,+ಯಾಕಂದ್ರೆ ನಿನ್ನ ವಾಕ್ಯನೇ ನನ್ನ ನಿರೀಕ್ಷೆ.+ 115  ಕೆಟ್ಟವರೇ, ನಾನು ನನ್ನ ದೇವರ ಆಜ್ಞೆಗಳನ್ನ ಪಾಲಿಸಬೇಕು,ನನ್ನಿಂದ ದೂರ ಇರಿ.+ 116  ನಾನು ಜೀವಿಸ್ತಾ ಇರೋ ಹಾಗೆ,ನೀನು ಕೊಟ್ಟ ಮಾತಿನ ಪ್ರಕಾರ ನನಗೆ ಆಸರೆಯಾಗು,+ನನ್ನ ನಿರೀಕ್ಷೆಯನ್ನ ನಿರಾಶೆಯಾಗಿ ಮಾಡಬೇಡ.*+ 117  ನನಗೆ ರಕ್ಷಣೆ ಸಿಗೋ ಹಾಗೆ ನನಗೆ ಆಧಾರವಾಗಿ ಇರು,+ಆಗ ನಾನು ಯಾವಾಗ್ಲೂ ನಿನ್ನ ನಿಯಮಗಳಿಗೆ ಗಮನ ಕೊಡ್ತೀನಿ.+ 118  ನಿನ್ನ ನಿಯಮಗಳನ್ನ ಬಿಟ್ಟು ಅಡ್ಡದಾರಿ ಹಿಡಿದಿರೋ ಜನ್ರನ್ನ ಬಿಟ್ಟುಬಿಡು,+ಯಾಕಂದ್ರೆ ಅವರು ಸುಳ್ಳುಗಾರರು, ಮೋಸಗಾರರು ಆಗಿದ್ದಾರೆ. 119  ಕೆಲಸಕ್ಕೆ ಬಾರದ ಹೊಲಸನ್ನ ಎಸಿಯೋ ಹಾಗೆ ನೀನು ಭೂಮಿಯಲ್ಲಿರೋ ಎಲ್ಲ ಕೆಟ್ಟವರನ್ನ ಎಸೆದುಬಿಡ್ತೀಯ.+ ಅದಕ್ಕೇ ನಿನ್ನ ಎಚ್ಚರಿಕೆಗಳು ಅಂದ್ರೆ ನನಗಿಷ್ಟ. 120  ನಿನ್ನ ಭಯದಿಂದ ನನ್ನ ಶರೀರ ನಡುಗುತ್ತೆ,ನಿನ್ನ ತೀರ್ಪುಗಳ ಬಗ್ಗೆ ನಾನು ಹೆದರ್ತೀನಿ. ע [ಅಯಿನ್‌] 121  ನಾನು ನ್ಯಾಯನೀತಿಯಿಂದ ನಡ್ಕೊಂಡಿದ್ದೀನಿ. ನನ್ನ ಮೇಲೆ ದಬ್ಬಾಳಿಕೆ ಮಾಡೋ ಕೈಗೆ ನನ್ನನ್ನ ಒಪ್ಪಿಸಬೇಡ! 122  ನಿನ್ನ ಸೇವಕನಾದ ನನಗೆ ಸುಖನೆಮ್ಮದಿ ಇರುತ್ತೆ ಅಂತ ಭರವಸೆಕೊಡು,ಗರ್ವಿಷ್ಠರು ನನ್ನ ಮೇಲೆ ದಬ್ಬಾಳಿಕೆ ಮಾಡದ ಹಾಗೆ ನೋಡ್ಕೊ. 123  ನೀನು ಕೊಡೋ ರಕ್ಷಣೆಗಾಗಿ, ನಿನ್ನ ನೀತಿಯ ಮಾತಿಗಾಗಿ* ಕಾದುಕಾದು ನನ್ನ ಕಣ್ಣುಗಳು ಸೋತುಹೋಗಿವೆ.+ 124  ನಿನ್ನ ಸೇವಕನಾದ ನನಗೆ ನಿನ್ನ ಶಾಶ್ವತ ಪ್ರೀತಿಯನ್ನ ತೋರಿಸು,+ನಿನ್ನ ನಿಯಮಗಳನ್ನ ಕಲಿಸು.+ 125  ನಾನು ನಿನ್ನ ಸೇವಕ,ನಿನ್ನ ಎಚ್ಚರಿಕೆಗಳನ್ನ ತಿಳ್ಕೊಳ್ಳೋಕೆ ನನಗೆ ಬುದ್ಧಿ ಕೊಡು.+ 126  ಯೆಹೋವ, ನೀನು ಹೆಜ್ಜೆ ತಗೊಳ್ಳೋ ಸಮ್ಯ ಬಂದಿದೆ,+ಯಾಕಂದ್ರೆ ಅವರು ನಿನ್ನ ನಿಯಮಗಳನ್ನ ಮೀರಿ ನಡೆದಿದ್ದಾರೆ. 127  ಹಾಗಾಗಿ ಚಿನ್ನಕ್ಕಿಂತ, ಹೌದು ಅಪ್ಪಟ* ಚಿನ್ನಕ್ಕಿಂತ ಜಾಸ್ತಿನಾನು ನಿನ್ನ ಆಜ್ಞೆಗಳನ್ನ ಪ್ರೀತಿಸ್ತೀನಿ.+ 128  ಅದಕ್ಕೇ ನಾನು ನಿನ್ನ ಎಲ್ಲ ಮಾರ್ಗದರ್ಶನಗಳನ್ನ* ಸರಿ ಅಂತ ಒಪ್ಕೊತೀನಿ.+ ಎಲ್ಲ ತಪ್ಪು ದಾರಿಗಳನ್ನ ನಾನು ದ್ವೇಷಿಸ್ತೀನಿ.+ פ [ಪೇ] 129  ನಿನ್ನ ಎಚ್ಚರಿಕೆಗಳು ಅದ್ಭುತ,ಹಾಗಾಗೇ ನಾನು ಅವುಗಳನ್ನ ಪಾಲಿಸ್ತೀನಿ. 130  ನಿನ್ನ ವಾಕ್ಯದ ನಿಜವಾದ ಅರ್ಥ ಗೊತ್ತಾದಾಗ ಬೆಳಕು ಸಿಗುತ್ತೆ,+ಅದು ಅನುಭವ ಇಲ್ಲದವನಿಗೆ ಬುದ್ಧಿ ಕೊಡುತ್ತೆ.+ 131  ನಾನು ನನ್ನ ಬಾಯನ್ನ ಅಗಲವಾಗಿ ತೆಗೆದು ನಿಟ್ಟುಸಿರು* ಬಿಟ್ಟೆ,ಯಾಕಂದ್ರೆ ನಾನು ನಿನ್ನ ಆಜ್ಞೆಗಳಿಗಾಗಿ ಹಾತೊರಿತಾ ಇದ್ದೀನಿ.+ 132  ನಿನ್ನ ಹೆಸ್ರನ್ನ ಪ್ರೀತಿಸೋರ+ ಜೊತೆ ಹೇಗೆ ನಡ್ಕೊಬೇಕು ಅಂತ ನಿನ್ನ ನಿಯಮ ಇದೆಯೋಅದೇ ತರ ನನ್ನ ಕಡೆ ತಿರುಗಿ, ನನ್ನ ಮೇಲೆ ದಯೆ ತೋರಿಸು.+ 133  ನಿನ್ನ ಮಾತಿಂದ ನನ್ನನ್ನ ಮಾರ್ಗದರ್ಶಿಸು,*ಯಾವ ಕೆಟ್ಟ ವಿಷ್ಯಗಳೂ ನನ್ನನ್ನ ನಿಯಂತ್ರಿಸದ ಹಾಗೆ ನೋಡ್ಕೊ.+ 134  ದಬ್ಬಾಳಿಕೆ ಮಾಡೋರಿಂದ ನನ್ನನ್ನ ಬಿಡಿಸು,ಆಗ ನಾನು ನಿನ್ನ ಅಪ್ಪಣೆಗಳನ್ನ ಪಾಲಿಸ್ತೀನಿ. 135  ನಿನ್ನ ಮುಖದ ಕಾಂತಿ* ನಿನ್ನ ಸೇವಕನ ಮೇಲೆ ಪ್ರಕಾಶಿಸೋ ಹಾಗೆ ಮಾಡು,+ನಿನ್ನ ನಿಯಮಗಳನ್ನ ನನಗೆ ಕಲಿಸು. 136  ನನ್ನ ಕಣ್ಣಿಂದ ಕಣ್ಣೀರ ಧಾರೆ ಹರೀತಿದೆ. ಯಾಕಂದ್ರೆ ಜನ್ರು ನಿನ್ನ ನಿಯಮಗಳನ್ನ ಪಾಲಿಸ್ತಿಲ್ಲ.+ צ [ಸಾದೆ] 137  ಯೆಹೋವನೇ, ನೀನು ನೀತಿವಂತ,+ನಿನ್ನ ತೀರ್ಪುಗಳು ನ್ಯಾಯವಾಗಿವೆ.+ 138  ನಿನ್ನ ಎಚ್ಚರಿಕೆಗಳಲ್ಲಿ ನೀತಿ ಇದೆ,ಅವುಗಳನ್ನ ಪೂರ್ತಿ ನಂಬಬಹುದು. 139  ನಿನ್ನ ಮೇಲೆ ನನಗಿರೋ ಭಕ್ತಿ ನನ್ನೊಳಗೆ ಬೆಂಕಿ ತರ ಹೊತ್ತಿ ಉರೀತಿದೆ,+ಯಾಕಂದ್ರೆ ನನ್ನ ಶತ್ರುಗಳು ನಿನ್ನ ಮಾತನ್ನ ಮರೆತು ಹೋಗಿದ್ದಾರೆ. 140  ನಿನ್ನ ಮಾತು ತುಂಬ ಶುದ್ಧ,+ನಿನ್ನ ಸೇವಕ ಅದನ್ನ ಪ್ರೀತಿಸ್ತಾನೆ.+ 141  ನಾನು ಏನೂ ಅಲ್ಲ, ಕೀಳಾಗಿದ್ದೀನಿ,+ಆದ್ರೂ ನಾನು ನಿನ್ನ ಆಜ್ಞೆಗಳನ್ನ ಮರೆತಿಲ್ಲ. 142  ನಿನ್ನ ನೀತಿ ಯಾವಾಗ್ಲೂ ಇರುತ್ತೆ,+ನಿನ್ನ ನಿಯಮ ಪುಸ್ತಕ ಸತ್ಯ.+ 143  ಕಷ್ಟಕಾರ್ಪಣ್ಯಗಳು ನನ್ನ ಮೇಲೆ ಬಂದ್ರೂ,ನಾನು ನಿನ್ನ ಆಜ್ಞೆಗಳನ್ನ ಪ್ರೀತಿಸ್ತೀನಿ. 144  ನಿನ್ನ ಎಚ್ಚರಿಕೆಗಳಲ್ಲಿ ಯಾವಾಗ್ಲೂ ನೀತಿ ಇರುತ್ತೆ,ನಾನು ಜೀವಿಸ್ತಾ ಇರೋಕೆ ನನಗೆ ಬುದ್ಧಿ ಕೊಡು.+ ק [ಕೊಫ್‌] 145  ಯೆಹೋವನೇ, ಪೂರ್ಣಹೃದಯದಿಂದ ನಾನು ನಿನಗೆ ಪ್ರಾರ್ಥಿಸ್ತೀನಿ. ನನಗೆ ಉತ್ರಕೊಡು. ನಿನ್ನ ನಿಯಮಗಳನ್ನ ನಾನು ಪಾಲಿಸ್ತೀನಿ. 146  ನಾನು ನಿನಗೆ ಮೊರೆ ಇಡ್ತೀನಿ, ನನ್ನನ್ನ ಕಾಪಾಡು! ನಿನ್ನ ಎಚ್ಚರಿಕೆಗಳನ್ನ ನಾನು ಪಾಲಿಸ್ತೀನಿ. 147  ಸಹಾಯಕ್ಕಾಗಿ ಮೊರೆ ಇಡೋಕೆ ನಾನು ಬೆಳಗಾಗೋ ಮುಂಚೆನೇ* ಎದ್ದೆ,+ಯಾಕಂದ್ರೆ ನಿನ್ನ ಮಾತುಗಳೇ ನನ್ನ ನಿರೀಕ್ಷೆ. 148  ನಿನ್ನ ಮಾತುಗಳ ಬಗ್ಗೆ ಚೆನ್ನಾಗಿ ಆಲೋಚಿಸೋಕೆ,*ಮಧ್ಯರಾತ್ರಿನೇ ಎದ್ದು ಕೂತೆ.+ 149  ನಿನ್ನ ಶಾಶ್ವತ ಪ್ರೀತಿಯ ಕಾರಣ ನನ್ನ ಧ್ವನಿಯನ್ನ ಕೇಳಿಸ್ಕೊ.+ ಯೆಹೋವನೇ, ನಿನ್ನ ನ್ಯಾಯದ ಪ್ರಕಾರ ನನ್ನ ಪ್ರಾಣವನ್ನ ಕಾಪಾಡು. 150  ನಾಚಿಕೆಗೆಟ್ಟ ನಡತೆಯವರು* ನನ್ನ ಹತ್ರ ಬರ್ತಿದ್ದಾರೆ,ಅವರು ನಿನ್ನ ನಿಯಮಗಳಿಂದ ತುಂಬ ದೂರದಲ್ಲಿ ಇದ್ದಾರೆ. 151  ಯೆಹೋವನೇ, ನೀನು ನನಗೆ ಹತ್ರದಲ್ಲಿ ಇದ್ದೀಯ,+ನಿನ್ನ ಆಜ್ಞೆಗಳೆಲ್ಲ ಸತ್ಯ.+ 152  ನಿನ್ನ ಎಚ್ಚರಿಕೆಗಳ ಬಗ್ಗೆ ನಾನು ತುಂಬ ಹಿಂದೆನೇ ಕಲಿತ್ಕೊಂಡೆ,ಅವುಗಳನ್ನ ನೀನು ಶಾಶ್ವತವಾಗಿ ಸ್ಥಾಪಿಸಿದ್ದೀಯ.+ ר [ರೆಶ್‌] 153  ನನ್ನ ಕಷ್ಟಗಳನ್ನ ನೋಡಿ ನನ್ನನ್ನ ಕಾಪಾಡು,+ಯಾಕಂದ್ರೆ ನಾನು ನಿನ್ನ ನಿಯಮಗಳನ್ನ ಮರೆತಿಲ್ಲ. 154  ನನ್ನ ಪರ ವಾದಿಸಿ ನನ್ನನ್ನ ರಕ್ಷಿಸು,+ನೀನು ಮಾತು ಕೊಟ್ಟ ಹಾಗೆ ನನ್ನ ಪ್ರಾಣವನ್ನ ಕಾಪಾಡು. 155  ರಕ್ಷಣೆ ಕೆಟ್ಟವರಿಂದ ತುಂಬ ದೂರದಲ್ಲಿದೆ,ಯಾಕಂದ್ರೆ ಅವರು ನಿನ್ನ ನಿಯಮಗಳಿಗಾಗಿ ಹುಡುಕಲಿಲ್ಲ.+ 156  ಯೆಹೋವನೇ, ನಿನ್ನ ಕರುಣೆ ತುಂಬ ಶ್ರೇಷ್ಠ.+ ನಿನ್ನ ನ್ಯಾಯಕ್ಕೆ ತಕ್ಕ ಹಾಗೆ ನನ್ನ ಪ್ರಾಣನ ಕಾಪಾಡು. 157  ನನ್ನ ಮೇಲೆ ದಬ್ಬಾಳಿಕೆ ಮಾಡೋರು, ನನ್ನ ಶತ್ರುಗಳು ತುಂಬ ಜನ ಇದ್ರೂ,+ನಿನ್ನ ಎಚ್ಚರಿಕೆಗಳನ್ನ ಬಿಟ್ಟು ನಾನು ಕದಲಲ್ಲ. 158  ನಂಬಿಕೆ ದ್ರೋಹಿಗಳನ್ನ ನೋಡಿ ನನಗೆ ಅಸಹ್ಯ ಆಗುತ್ತೆ,ಯಾಕಂದ್ರೆ ಅವರು ನಿನ್ನ ಮಾತನ್ನ ಪಾಲಿಸಲ್ಲ.+ 159  ನಿನ್ನ ಆಜ್ಞೆಗಳನ್ನ ನಾನು ಎಷ್ಟು ಪ್ರೀತಿಸ್ತೀನಿ ಅಂತ ನೋಡು! ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯಿಂದಾಗಿ ನನ್ನ ಪ್ರಾಣವನ್ನ ಕಾಪಾಡು.+ 160  ಸತ್ಯಾನೇ ನಿನ್ನ ವಾಕ್ಯದ ಜೀವಾಳ,+ನಿನ್ನ ನೀತಿಯ ತೀರ್ಪುಗಳು ಶಾಶ್ವತವಾಗಿ ಇರುತ್ತೆ ש [ಸಿನ್‌] ಅಥವಾ [ಶಿನ್‌] 161  ಸುಮ್ಮಸುಮ್ಮನೇ ನಾಯಕರು ನನ್ನನ್ನ ಹಿಂಸಿಸ್ತಾರೆ,+ಆದ್ರೆ ನೀನು ಹೇಳಿದ ಮಾತುಗಳ ಮೇಲೆ ನನಗೆ ತುಂಬ ಗೌರವ ಇದೆ.+ 162  ಸಿಕ್ಕಾಪಟ್ಟೆ ಕೊಳ್ಳೆ ಹೊಡೆದವನ ತರ,ನಾನು ನಿನ್ನ ಮಾತುಗಳಲ್ಲಿ ಖುಷಿಪಡ್ತೀನಿ.+ 163  ಸುಳ್ಳನ್ನ ನಾನು ದ್ವೇಷಿಸ್ತೀನಿ, ಅಸಹ್ಯವಾಗಿ ನೋಡ್ತೀನಿ.+ ನಿನ್ನ ನಿಯಮಗಳನ್ನ ಪ್ರೀತಿಸ್ತೀನಿ.+ 164  ನಿನ್ನ ನೀತಿಯ ತೀರ್ಪುಗಳ ಕಾರಣದಿನಕ್ಕೆ ಏಳು ಸಲ ನಾನು ನಿನ್ನನ್ನ ಹೊಗಳ್ತೀನಿ. 165  ನಿನ್ನ ನಿಯಮಗಳನ್ನ ಪ್ರೀತಿಸೋರಿಗೆ ಅಪಾರ ಶಾಂತಿ ಸಿಗುತ್ತೆ,+ಯಾವುದೂ ಅವ್ರನ್ನ ಎಡವಿಸಲ್ಲ.* 166  ಯೆಹೋವನೇ, ನೀನು ಹೇಗೆ ರಕ್ಷಿಸ್ತೀಯ ಅಂತ ನಾನು ಆಸೆಯಿಂದ ಎದುರುನೋಡ್ತಿದ್ದೀನಿ,ನಾನು ನಿನ್ನ ಆಜ್ಞೆಗಳನ್ನು ಪಾಲಿಸ್ತೀನಿ. 167  ನಿನ್ನ ಎಚ್ಚರಿಕೆಗಳನ್ನ ಪಾಲಿಸ್ತೀನಿ,ನಾನು ಅವನ್ನ ತುಂಬ ಪ್ರೀತಿಸ್ತೀನಿ.+ 168  ನಾನು ನಿನ್ನ ಆಜ್ಞೆಗಳನ್ನ, ನಿನ್ನ ಎಚ್ಚರಿಕೆಗಳನ್ನ ಪಾಲಿಸ್ತೀನಿ. ನಾನು ಮಾಡೋದೆಲ್ಲ ನಿಂಗೊತ್ತು.+ ת [ಟಾವ್‌] 169  ಯೆಹೋವ, ಸಹಾಯಕ್ಕಾಗಿ ನಾನಿಡೋ ಮೊರೆ ನಿನಗೆ ಮುಟ್ಟಲಿ.+ ನಿನ್ನ ಮಾತಿನ ಪ್ರಕಾರ ನನಗೆ ಬುದ್ಧಿ ಕೊಡು.+ 170  ನಿನ್ನ ಕೃಪೆಗಾಗಿ ನಾನು ಮಾಡೋ ಬಿನ್ನಹ ನಿನ್ನ ಸನ್ನಿಧಿಗೆ ಸೇರಲಿ. ನೀನು ಮಾತು ಕೊಟ್ಟ ಹಾಗೆ ನನ್ನನ್ನ ರಕ್ಷಿಸು. 171  ನನ್ನ ತುಟಿಗಳಿಂದ ನಿನ್ನ ಸ್ತುತಿ ತುಂಬಿ ಹರೀಲಿ,+ಯಾಕಂದ್ರೆ ನೀನು ನನಗೆ ನಿನ್ನ ನಿಯಮಗಳನ್ನ ಕಲಿಸಿದ್ದೀಯ. 172  ನಿನ್ನ ಮಾತುಗಳ ಬಗ್ಗೆ ನನ್ನ ನಾಲಿಗೆ ಹಾಡಲಿ,+ಯಾಕಂದ್ರೆ ನಿನ್ನ ಆಜ್ಞೆಗಳೆಲ್ಲ ನೀತಿಯಿಂದ ತುಂಬಿವೆ. 173  ನಿನ್ನ ಆಜ್ಞೆಗಳನ್ನ ಪಾಲಿಸಬೇಕು ಅಂತ ನಾನು ತೀರ್ಮಾನ ಮಾಡಿರೋದ್ರಿಂದ+ನನಗೆ ಸಹಾಯಮಾಡೋಕೆ ನಿನ್ನ ಕೈ ಯಾವಾಗ್ಲೂ ಸಿದ್ಧವಾಗಿರಲಿ.+ 174  ಯೆಹೋವ, ನೀನು ಕೊಡೋ ರಕ್ಷಣೆಗಾಗಿ ನಾನು ಹಾತೊರಿತಾ ಇದ್ದೀನಿ,ನನಗೆ ನಿನ್ನ ನಿಯಮಗಳಂದ್ರೆ ತುಂಬ ಪ್ರೀತಿ.+ 175  ನಾನು ನಿನ್ನನ್ನ ಹೊಗಳೋಕೆ ಆಗೋ ಹಾಗೆ ನನ್ನ ಪ್ರಾಣವನ್ನ ಕಾಪಾಡು,+ನಿನ್ನ ತೀರ್ಪುಗಳು ನನಗೆ ಸಹಾಯಮಾಡಲಿ. 176  ನಾನು ಕಳೆದು ಹೋಗಿರೋ ಕುರಿ ತರ ಇದ್ದೀನಿ.+ ಈ ನಿನ್ನ ಸೇವಕನನ್ನ ಹುಡುಕು. ಯಾಕಂದ್ರೆ ನಾನು ನಿನ್ನ ಆಜ್ಞೆಗಳನ್ನ ಮರೆತಿಲ್ಲ.+

ಪಾದಟಿಪ್ಪಣಿ

ಅಥವಾ “ನಿಯತ್ತಿಂದ.”
ಅಂದ್ರೆ ಪದೇಪದೇ ಕೊಟ್ಟ ಆಜ್ಞೆಗಳು, ಸಲಹೆಗಳು ಅಥವಾ ನಿರ್ದೇಶನಗಳು.
ಅಥವಾ “ಅಧ್ಯಯನ ಮಾಡ್ತೀನಿ.”
ಅಕ್ಷ. “ನನ್ನ ಮೇಲಿಂದ ಉರುಳಿಸು.”
ಅಥವಾ “ಅಧ್ಯಯನ ಮಾಡ್ತೀನಿ.”
ಅಕ್ಷ. “ದಾರಿಯನ್ನ.”
ಅಥವಾ “ಅಧ್ಯಯನ ಮಾಡ್ತೀನಿ.”
ಅಥವಾ “ನನಗೆ ಅವಮಾನ ಆಗೋಕೆ ಬಿಡಬೇಡ.”
ಅಕ್ಷ. “ಓಡ್ತೀನಿ.”
ಬಹುಶಃ, “ಹೃದಯದಲ್ಲಿ ಭರವಸೆ ತುಂಬಿದ್ದೀಯ.”
ಅಥವಾ “ಮಾರ್ಗದರ್ಶಿಸು.”
ಬಹುಶಃ, “ನಿನಗೆ ಭಯಪಡೋರ ಜೊತೆ ನೀನು ಮಾಡಿರೋ.”
ಅಥವಾ “ವಾಗ್ದಾನವನ್ನ.”
ಅಥವಾ “ತೀರ್ಪಿಗಾಗಿ ಕಾಯ್ತಾ ಇದ್ದೀನಿ.”
ಅಥವಾ “ವಿಶಾಲವಾದ.”
ಅಥವಾ “ಅದು ನಿಜ ಆಗೋ ತನಕ ನಾನು ಕಾಯೋ ಹಾಗೆ ಮಾಡಿದೆ.”
ಅಥವಾ “ನಾನು ಪರದೇಶಿಯಾಗಿದ್ರೂ.”
ಅಕ್ಷ. “ಕೊಬ್ಬು ತುಂಬಿ ದಪ್ಪ ಆಗಿದೆ.”
ಅಥವಾ “ನಿನ್ನ ವಾಕ್ಯಕ್ಕಾಗಿ ಕಾಯ್ತೀನಿ.”
ಬಹುಶಃ, “ಸುಳ್ಳು ಹೇಳಿ.”
ಅಕ್ಷ. “ತುಂಬ ವಿಶಾಲ.”
ಅಕ್ಷ. “ಒಳನೋಟ.”
ಅಕ್ಷ. “ಪ್ರತಿಕ್ಷಣ ನನ್ನ ಜೀವಕ್ಕೆ ಕುತ್ತಿದೆ.”
ಅಥವಾ “ಪಿತ್ರಾರ್ಜಿತ ಸೊತ್ತಾಗಿ.”
ಅಕ್ಷ. “ಹೃದಯವನ್ನ ಅವುಗಳ ಕಡೆ ವಾಲಿಸಿದ್ದೀನಿ.”
ಅಥವಾ “ಚಂಚಲ ಹೃದಯದವರನ್ನ.”
ಅಥವಾ “ನನ್ನನ್ನ ಅವಮಾನಕ್ಕೆ ಗುರಿಮಾಡಬೇಡ.”
ಅಥವಾ “ವಾಗ್ದಾನಕ್ಕಾಗಿ.”
ಅಥವಾ “ಪರಿಷ್ಕರಿಸಿದ.”
ಅಥವಾ “ಅಪ್ಪಣೆಯನ್ನ.”
ಅಕ್ಷ. “ಏದುಸಿರು.”
ಅಥವಾ “ನನ್ನ ಹೆಜ್ಜೆಗಳನ್ನ ಸ್ಥಿರಪಡಿಸು.”
ಅಥವಾ “ಮುಗುಳ್ನಗೆಯ ಬೆಳಕು.”
ಅಥವಾ “ನಸುಕಲ್ಲೇ.”
ಅಥವಾ “ಅಧ್ಯಯನ ಮಾಡೋಕೆ.”
ಅಥವಾ “ಅಶ್ಲೀಲವಾಗಿ ನಡ್ಕೊಳ್ಳೋರು.”
ಅಥವಾ “ಅಂಥವರಿಗೆ ಯಾವುದೇ ಎಡವುಗಲ್ಲು ಇರಲ್ಲ.”