ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 34

ಸತ್ತ ಮೇಲೆ ಏನಾಗುತ್ತದೆ?

ಸತ್ತ ಮೇಲೆ ಏನಾಗುತ್ತದೆ?

ನಿನಗೆ ಗೊತ್ತಿರುವಂತೆ ಜನರಿಗೆ ವಯಸ್ಸಾಗುತ್ತದೆ, ಕಾಯಿಲೆ ಬೀಳುತ್ತಾರೆ ಮತ್ತು ಸಾವನ್ನಪ್ಪುತ್ತಾರೆ. ಕೆಲವೊಮ್ಮೆ ಮಕ್ಕಳು ಕೂಡ ಮರಣ ಹೊಂದುತ್ತಾರೆ. ಸಾವಿಗಾಗಲಿ ಸತ್ತವರಿಗಾಗಲಿ ಹೆದರಬೇಕಾ?— ಸತ್ತ ಮೇಲೆ ನಮಗೆ ಏನಾಗುತ್ತದೆ ಅಂತ ನಿನಗೆ ಗೊತ್ತಿದೆಯಾ?—

ಸತ್ತ ಮೇಲೆ ಏನಾಗುತ್ತದೆಂದು ತಿಳಿಸಲು ಸತ್ತು ಬದುಕಿಬಂದ ವ್ಯಕ್ತಿ ಇಂದು ಲೋಕದಲ್ಲೇ ಇಲ್ಲ. ಆದರೆ ಮಹಾ ಬೋಧಕ ಭೂಮಿಯಲ್ಲಿ ಜೀವಿಸಿದ ಸಮಯದಲ್ಲಿ ಅಂಥ ಒಬ್ಬ ವ್ಯಕ್ತಿ ಇದ್ದನು! ಅವನ ಕುರಿತು ಓದುವಾಗ ಸತ್ತವರಿಗೆ ಏನಾಗುತ್ತದೆ ಎಂಬ ಸತ್ಯವನ್ನು ನಾವು ತಿಳಿದುಕೊಳ್ಳಬಹುದು. ಅವನ ಹೆಸರು ಲಾಜರ. ಯೇಸುವಿನ ಸ್ನೇಹಿತನಾಗಿದ್ದ ಅವನು ಯೆರೂಸಲೇಮಿನ ಸಮೀಪವೇ ಇದ್ದ ಬೇಥಾನ್ಯ ಎಂಬ ಚಿಕ್ಕ ಊರಿನಲ್ಲಿ ವಾಸಿಸುತ್ತಿದ್ದನು. ಅವನಿಗೆ ಮಾರ್ಥ ಹಾಗೂ ಮರಿಯ ಎಂಬ ಇಬ್ಬರು ಅಕ್ಕಂದಿರು. ಲಾಜರನ ಕುರಿತು ಬೈಬಲ್‌ ತಿಳಿಸುವುದನ್ನು ನಾವೀಗ ನೋಡೋಣ.

ಒಮ್ಮೆ ಲಾಜರನು ತುಂಬಾ ಕಾಯಿಲೆ ಬೀಳುತ್ತಾನೆ. ಆ ಸಮಯದಲ್ಲಿ ಯೇಸು ದೂರದಲ್ಲಿರುವ ಬೇರೊಂದು ಊರಿನಲ್ಲಿ ಇರುತ್ತಾನೆ. ಹಾಗಾಗಿ ಮಾರ್ಥ ಮರಿಯರು ತಮ್ಮ ಸಹೋದರ ಲಾಜರನು ಅಸ್ವಸ್ಥನಾಗಿದ್ದಾನೆ ಎಂಬ ಸುದ್ದಿಯನ್ನು ಯೇಸುವಿಗೆ ತಿಳಿಸುವಂತೆ ಒಬ್ಬ ವ್ಯಕ್ತಿಯನ್ನು ಕಳುಹಿಸುತ್ತಾರೆ. ಯೇಸು ಬಂದರೆ ತಮ್ಮ ಸಹೋದರನನ್ನು ವಾಸಿಮಾಡುತ್ತಾನೆ ಎಂಬ ಅಪಾರ ನಂಬಿಕೆ ಅವರಿಗಿತ್ತು. ಯೇಸು ಒಬ್ಬ ಡಾಕ್ಟರ್‌ ಅಲ್ಲ. ಆದರೆ ದೇವರು ಅವನಿಗೆ ಶಕ್ತಿ ನೀಡಿರುವ ಕಾರಣ ಎಲ್ಲಾ ರೀತಿಯ ರೋಗಗಳನ್ನು ವಾಸಿಮಾಡಬಲ್ಲನು.—ಮತ್ತಾಯ 15:30, 31.

ಯೇಸು ನೋಡಲು ಹೋಗುವಷ್ಟರಲ್ಲಿ ಲಾಜರನು ಮರಣ ಹೊಂದುತ್ತಾನೆ. ಆದರೆ ಯೇಸು ಲಾಜರನು ನಿದ್ರೆ ಮಾಡುತ್ತಿದ್ದಾನೆ, ಅವನನ್ನು ಎಬ್ಬಿಸಲಿಕ್ಕಾಗಿ ಅಲ್ಲಿಗೆ ಹೋಗುತ್ತೇನೆ ಅಂತ ಶಿಷ್ಯರಿಗೆ ಹೇಳುತ್ತಾನೆ. ಶಿಷ್ಯರಿಗೆ ಯೇಸುವಿನ ಮಾತಿನ ಅರ್ಥ ತಿಳಿಯುವುದಿಲ್ಲ. ಆದುದರಿಂದ ಯೇಸು ಅರ್ಥವಾಗುವ ಹಾಗೆ, “ಲಾಜರನು ಮೃತಪಟ್ಟಿದ್ದಾನೆ” ಎಂದು ವಿವರಿಸುತ್ತಾನೆ. ಮರಣದ ಸ್ಥಿತಿ ಹೇಗಿರುತ್ತದೆಂದು ಇದು ತಿಳಿಸುತ್ತದೆ?— ಹೌದು, ಸಾವು ಗಾಢ ನಿದ್ರೆಯಂತಿದೆ. ಎಂಥ ಗಾಢ ನಿದ್ರೆಯೆಂದರೆ ಸತ್ತ ವ್ಯಕ್ತಿಗೆ ಕನಸುಗಳೂ ಬೀಳುವುದಿಲ್ಲ.

ಯೇಸು ಮಾರ್ಥ ಮರಿಯರನ್ನು ಭೇಟಿಯಾಗಲು ಬರುತ್ತಾನೆ. ಅವರ ಅನೇಕ ಸ್ನೇಹಿತರೂ ಈಗಾಗಲೇ ಅಲ್ಲಿ ಬಂದಿದ್ದಾರೆ. ಲಾಜರನ ಮರಣವಾರ್ತೆ ಕೇಳಿ ಮಾರ್ಥ ಮರಿಯಳನ್ನು ಸಂತೈಸಲು ಅವರಲ್ಲಿ ಕೂಡಿಬಂದಿದ್ದರು. ಯೇಸು ಬರುತ್ತಿದ್ದಾನೆ ಎಂಬ ಸುದ್ದಿ ಕೇಳಿದೊಡನೆ ಮಾರ್ಥಳು ಅವನನ್ನು ಸಂಧಿಸಲು ಹೋಗುತ್ತಾಳೆ. ಸ್ವಲ್ಪ ಸಮಯದ ಬಳಿಕ ಮರಿಯಳು ಸಹ ಯೇಸುವನ್ನು ಕಾಣಲು ಹೋಗುತ್ತಾಳೆ. ಅವಳು ದುಃಖ ತಾಳಲಾರದೆ ಕಣ್ಣೀರಿಡುತ್ತಾ ಯೇಸುವಿನ ಪಾದಗಳಿಗೆ ಬೀಳುತ್ತಾಳೆ. ಮರಿಯಳ ಹಿಂದೆಯೇ ಬಂದಿದ್ದ ಇತರ ಸ್ನೇಹಿತರು ಸಹ ಅಳಲಾರಂಭಿಸುತ್ತಾರೆ.

ಲಾಜರನ ಶವವನ್ನು ಎಲ್ಲಿ ಇಡಲಾಗಿದೆ ಅಂತ ಮಹಾ ಬೋಧಕನು ಕೇಳುತ್ತಾನೆ. ಆಗ ಜನರು ಶವವನ್ನು ಇಡಲಾಗಿದ್ದ ಗುಹೆಯ ಬಳಿಗೆ ಯೇಸುವನ್ನು ಕರೆದುಕೊಂಡು ಹೋಗುತ್ತಾರೆ. ತನ್ನ ಸುತ್ತಲಿರುವವರು ಅಳುವುದನ್ನು ನೋಡಿದಾಗ ಯೇಸುವಿಗೂ ದುಃಖ ಉಮ್ಮಳಿಸಿ ಬಂದು ಅವನೂ ಅಳಲಾರಂಭಿಸುತ್ತಾನೆ. ಒಬ್ಬ ಪ್ರಿಯ ವ್ಯಕ್ತಿ ತೀರಿಕೊಂಡಾಗ ಎಷ್ಟು ನೋವಾಗುತ್ತದೆಂದು ಅವನಿಗೆ ಗೊತ್ತಿದೆ.

ಆ ಗುಹೆಯ ಬಾಯಿಯನ್ನು ಕಲ್ಲಿನಿಂದ ಮಚ್ಚಲಾಗಿತ್ತು. ಆದುದರಿಂದ ಯೇಸು, “ಆ ಕಲ್ಲನ್ನು ತೆಗೆದುಹಾಕಿರಿ” ಎಂದು ಹೇಳುತ್ತಾನೆ. ಆದರೆ ಅವರು ಅದನ್ನು ಒಪ್ಪುತ್ತಾರಾ?— ಕಲ್ಲನ್ನು ತೆಗೆದುಹಾಕುವುದು ಮಾರ್ಥಳಿಗೆ ಸರಿ ಕಾಣಿಸಲಿಲ್ಲ. ಹಾಗಾಗಿ, ‘ಕರ್ತನೇ, ಅವನು ಸತ್ತು ನಾಲ್ಕು ದಿನಗಳಾಗಿದೆ. ಈಗ ದೇಹ ಕೊಳೆತು ವಾಸನೆ ಬಂದಿರುತ್ತೆ’ ಎಂದು ಹೇಳುತ್ತಾಳೆ.

ಆಗ ಯೇಸು, “ನೀನು ನಂಬುವುದಾದರೆ ದೇವರ ಮಹಿಮೆಯನ್ನು ನೋಡುವಿ ಎಂದು ನಾನು ನಿನಗೆ ಹೇಳಲಿಲ್ಲವೊ?” ಎಂದು ಕೇಳುತ್ತಾನೆ. ದೇವರಿಗೆ ಮಹಿಮೆ ತರುವಂಥ ಒಂದು ಘಟನೆಯನ್ನು ಮಾರ್ಥಳು ನೋಡಲಿದ್ದಾಳೆ ಎಂದು ಯೇಸು ಹೇಳುತ್ತಿದ್ದಾನೆ. ಅವನು ಈಗ ಏನು ಮಾಡಲಿರುವನು? ಆ ಕಲ್ಲನ್ನು ಬದಿಗೆ ಸರಿಸಿದಾಗ ಅವನು ಎಲ್ಲರಿಗೂ ಕೇಳಿಸುವಂತೆ ಯೆಹೋವನಿಗೆ ಪ್ರಾರ್ಥಿಸುತ್ತಾನೆ. ಬಳಿಕ “ಲಾಜರನೇ, ಹೊರಗೆ ಬಾ” ಎಂದು ಗಟ್ಟಿಯಾದ ಸ್ವರದಿಂದ ಕೂಗುತ್ತಾನೆ. ನಿನಗೇನು ಅನಿಸುತ್ತೆ, ಲಾಜರನು ಹೊರಗೆ ಬರುತ್ತಾನಾ? ಬರಲು ಸಾಧ್ಯನಾ?—

ನಿದ್ರೆಮಾಡುತ್ತಿರುವ ಒಬ್ಬರನ್ನು ನಿನ್ನಿಂದ ಎಬ್ಬಿಸಲು ಆಗುತ್ತಾ?— ಹಾಂ, ಜೋರಾಗಿ ಕೂಗಿ ಕರೆದರೆ ಎದ್ದೆಳುತ್ತಾರೆ. ಆದರೆ ಮರಣಪಟ್ಟು ಗಾಢ ನಿದ್ರೆಯಲ್ಲಿರುವವರನ್ನು ನಿನ್ನಿಂದ ಎಬ್ಬಿಸಲು ಆಗುತ್ತಾ?— ಇಲ್ಲಲ್ವಾ. ನೀನು ಎಷ್ಟೇ ಜೋರಾಗಿ ಕೂಗಿದರೂ ಸತ್ತಿರುವ ವ್ಯಕ್ತಿಗೆ ಕೇಳಿಸುವುದಿಲ್ಲ. ನೀನಾಗಲಿ ನಾನಾಗಲಿ ಅಥವಾ ಇಂದು ಭೂಮಿಯಲ್ಲಿರುವ ಯಾರೇ ಆಗಲಿ, ಏನೇ ಮಾಡಿದರೂ ಸತ್ತವರನ್ನು ಎಬ್ಬಿಸಲು ಸಾಧ್ಯನೇ ಇಲ್ಲ.

ಯೇಸು ಯಾವ ಅದ್ಭುತ ಮಾಡುತ್ತಿದ್ದಾನೆ?

ಆದರೆ ಯೇಸುವಿಗೆ ಸಾಧ್ಯವಿತ್ತು. ದೇವರು ಅವನಿಗೆ ಆ ವಿಶೇಷ ಶಕ್ತಿಯನ್ನು ಕೊಟ್ಟಿದ್ದನು. ಯೇಸು ಲಾಜರನನ್ನು ಎದ್ದೇಳು ಅಂತ ಕೂಗಿ ಕರೆದಾಗ ಅಲ್ಲೊಂದು ಆಶ್ಚರ್ಯವೇ ನಡೆದು ಹೋಯಿತು. ನಾಲ್ಕು ದಿನಗಳ ಹಿಂದೆ ತೀರಿಹೋಗಿದ್ದ ಲಾಜರ ಗುಹೆಯಿಂದ ಹೊರಗೆ ಬರುತ್ತಾನೆ! ಅಂದರೆ ಅವನು ಪುನಃ ಬದುಕಿ ಬಂದನು. ಮೊದಲಿನ ಹಾಗೆ ಪುನಃ ಉಸಿರಾಡಲು, ನಡೆಯಲು, ಮಾತಾಡಲು ಆರಂಭಿಸಿದನು. ಹೌದು, ಯೇಸು ಲಾಜರನನ್ನು ಜೀವಂತಗೊಳಿಸಿದನು.—ಯೋಹಾನ 11:1-44.

ಈಗ ಹೇಳು ಲಾಜರನು ಸತ್ತಾಗ ಅವನಿಗೆ ಏನಾಯಿತು? ಅವನ ಆತ್ಮ ದೇಹದಿಂದ ಹೊರಬಂದು ಬೇರೊಂದು ಕಡೆ ವಾಸಮಾಡಿತಾ? ಅಥವಾ ಅವನ ಆತ್ಮ ಸ್ವರ್ಗಕ್ಕೆ ಏರಿ ಹೋಯ್ತಾ? ಆ ನಾಲ್ಕು ದಿನ ದೇವರೊಂದಿಗೂ ಪವಿತ್ರ ದೇವದೂತರೊಂದಿಗೂ ಇದ್ದನಾ?—

ಇಲ್ಲ. ಲಾಜರನು ನಿದ್ರೆ ಮಾಡುತ್ತಿದ್ದಾನೆಂದು ಯೇಸು ಹೇಳಿದನು. ಒಳ್ಳೇ ನಿದ್ರೆ ಮಾಡುತ್ತಿರುವಾಗ ನಿನಗೆ ಹೇಗಿರುತ್ತೆ? ಗಢದ್ದಾಗಿ ನಿದ್ರೆ ಮಾಡುತ್ತಿರುವಾಗ ಸುತ್ತಮುತ್ತ ಏನಾಗುತ್ತಿದೆ ಅಂತನೂ ನಿನಗೆ ಗೊತ್ತಿರಲ್ಲ ಅಲ್ವಾ?— ನಿದ್ರೆಯಿಂದ ಎದ್ದ ಮೇಲೂ ಎಷ್ಟು ಹೊತ್ತು ಮಲಗಿದ್ದೆ ಅಂತ ಗಡಿಯಾರ ನೋಡುವ ತನಕ ನಿನಗೆ ಗೊತ್ತೇ ಆಗುವುದಿಲ್ಲ.

ಸತ್ತವರ ಸ್ಥಿತಿಯೂ ಹಾಗೆನೇ. ಅವರಿಗೆ ಏನೂ ಗೊತ್ತಿರಲ್ಲ. ಯಾವ ಅನಿಸಿಕೆಯೂ ಇರಲ್ಲ. ಏನು ಮಾಡಲೂ ಆಗೋದಿಲ್ಲ. ಮೃತಪಟ್ಟಾಗ ಲಾಜರನ ಸ್ಥಿತಿ ಕೂಡ ಹೀಗೆಯೇ ಇತ್ತು. ಮರಣ ಗಾಢ ನಿದ್ರೆಯಂತಿದೆ. ಈ ಸ್ಥಿತಿಯಲ್ಲಿ ಒಬ್ಬನಿಗೆ ಯಾವ ನೆನಪೂ ಇರೋದಿಲ್ಲ. ಅದನ್ನೇ ಬೈಬಲ್‌, “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ತಿಳಿಸುತ್ತದೆ.—ಪ್ರಸಂಗಿ 9:5, 10.

ಮೃತಪಟ್ಟ ಲಾಜರನ ಸ್ಥಿತಿ ಹೇಗಿತ್ತು?

ಒಂದುವೇಳೆ ಲಾಜರನು ಸತ್ತು ಆ ನಾಲ್ಕು ದಿನ ಸ್ವರ್ಗದಲ್ಲಿ ಇದ್ದಿದ್ದರೆ ಬದುಕಿ ಬಂದ ನಂತರ ಅಲ್ಲಿನ ವಿಷಯವೇನಾದರೂ ಹೇಳುತ್ತಿದ್ದನು ಅಲ್ವಾ?— ಸ್ವರ್ಗದಲ್ಲಿ ಲಾಜರನು ಇದ್ದಿದ್ದರೆ ಅಂಥ ಭವ್ಯವಾದ ಜಾಗವನ್ನು ಬಿಟ್ಟು ಭೂಮಿಗೆ ಹಿಂದಿರುಗಿ ಬರುವಂತೆ ಯೇಸು ಅವನನ್ನು ಬಲವಂತ ಮಾಡುತ್ತಿದ್ದನಾ?— ಖಂಡಿತ ಇಲ್ಲ.

ನಮ್ಮೊಳಗೆ ಆತ್ಮ ಇದೆ ಎಂದು ಕೆಲವರು ನಂಬುತ್ತಾರೆ. ಸತ್ತ ಮೇಲೆ ಆ ಆತ್ಮ ದೇಹವನ್ನು ಬಿಟ್ಟು ಜೀವಂತವಾಗಿರುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಲಾಜರನು ಸತ್ತಾಗ ಅವನ ಆತ್ಮ ಬೇರೊಂದು ಕಡೆಯಲ್ಲಿ ಬದುಕಿತ್ತು ಎನ್ನುವುದು ಕೆಲವರ ವಾದ. ಆದರೆ ಬೈಬಲ್‌ ಹಾಗೆ ಹೇಳೋದಿಲ್ಲ. ದೇವರು ಮೊದಲ ಮನುಷ್ಯನಾದ ಆದಾಮನನ್ನು ‘ಬದುಕುವ ವ್ಯಕ್ತಿಯಾಗಿ’ ಉಂಟುಮಾಡಿದನೆಂದು ಬೈಬಲ್‌ ಹೇಳುತ್ತದೆ. ಆದಾಮನು ಪಾಪಮಾಡಿದ ನಂತರ ಸತ್ತುಹೋದನೆಂದೂ ಅದು ತಿಳಿಸುತ್ತದೆ. ಆದಾಮನು ಸತ್ತುಹೋದ ನಂತರ ಅವನಿಗೆ ಯಾವ ವಿಷಯದ ಅರಿವೂ ಇರಲಿಲ್ಲ. ಮಣ್ಣಿನಿಂದ ಉಂಟಾಗಿದ್ದನು ಪುನಃ ಮಣ್ಣಿಗೇ ಸೇರಿದನು. ಆದಾಮನಿಂದ ಅವನ ಸಂತಾನದವರೂ ಪಾಪ ಮತ್ತು ಮರಣವನ್ನು ಬಳುವಳಿಯಾಗಿ ಪಡೆದರೆಂದು ಬೈಬಲ್‌ ತಿಳಿಸುತ್ತದೆ.—ಆದಿಕಾಂಡ 2:7; 3:17-19; ರೋಮನ್ನರಿಗೆ 5:12.

ಸತ್ತವರಿಗೆ ಏಕೆ ಭಯಪಡಬಾರದು?

ಆದರೆ ಕೆಲವರು ಸತ್ತವರಿಗೆ ಭಯಪಡುತ್ತಾರೆ. ಅಂಥವರು ಸಮಾಧಿಯ ಹತ್ತಿರ ಕೂಡ ಹೋಗುವುದಿಲ್ಲ. ಸತ್ತವರ ಆತ್ಮ ದೇಹದಿಂದ ಹೊರಗೆ ಬಂದು ತೊಂದರೆ ಕೊಡುತ್ತದೆ ಅಂತ ಅವರು ನಂಬುತ್ತಾರೆ. ಸತ್ತಿರುವ ವ್ಯಕ್ತಿ ಬದುಕಿರುವ ವ್ಯಕ್ತಿಗೆ ತೊಂದರೆ ಕೊಡಲು ಸಾಧ್ಯನಾ?— ಅಸಾಧ್ಯ.

ಸತ್ತವರು ಬದುಕಿರುವವರನ್ನು ನೋಡಲು ಭೂತಪ್ರೇತಗಳಾಗಿ ಬರುತ್ತವೆಂದು ಕೆಲವರು ನಂಬುತ್ತಾರೆ. ಹಾಗಾಗಿ ಆತ್ಮಕ್ಕೆ ಶಾಂತಿ ಸಿಗಲೆಂದು ಸತ್ತವರಿಗಾಗಿ ಆಹಾರ ಪದಾರ್ಥವನ್ನು ಇಡುತ್ತಾರೆ. ಆ ಜನರು ಸತ್ತವರ ಕುರಿತು ದೇವರು ಹೇಳಿರುವ ನಿಜತ್ವವನ್ನು ನಂಬುವುದಿಲ್ಲ. ಆದರೆ ನಾವು ನಂಬುವಲ್ಲಿ ಸತ್ತವರಿಗೆ ಹೆದರಬೇಕಾಗಿಲ್ಲ. ದೇವರು ಕೊಟ್ಟ ಜೀವಕ್ಕಾಗಿ ನಮ್ಮಲ್ಲಿ ಕೃತಜ್ಞತೆ ಇರುವುದಾದರೆ ನಾವು ಆತನ ಮಾತನ್ನು ನಂಬಿ ಅದರಂತೆ ನಡೆದುಕೊಳ್ಳುತ್ತೇವೆ.

ಆದರೆ ನಿನ್ನ ಮನಸ್ಸಿನಲ್ಲಿ ಇನ್ನೂ ಕೆಲವು ಪ್ರಶ್ನೆಗಳಿರಬಹುದು. ‘ದೇವರು ಮೃತಪಟ್ಟಿರುವ ಚಿಕ್ಕ ಮಕ್ಕಳನ್ನು ಪುನಃ ಬದುಕಿಸುತ್ತಾನಾ? ಹೀಗೆ ಮಾಡಲು ಆತನಿಗೆ ಮನಸ್ಸಿದೆಯಾ?’ ಮುಂದಿನ ಅಧ್ಯಾಯದಲ್ಲಿ ಇದರ ಕುರಿತು ಕಲಿಯೋಣ.

ಸತ್ತವರ ಸ್ಥಿತಿಯ ಕುರಿತು ಬೈಬಲಿನಲ್ಲಿರುವ ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ವಚನಗಳಲ್ಲಿ ಓದಿ ನೋಡೋಣ: ಕೀರ್ತನೆ 115:17 ಮತ್ತು 146:3, 4.