ಪ್ರಸಂಗಿ 9:1-18

  • ಎಲ್ರಿಗೂ ಕೊನೆಯಲ್ಲಿ ಒಂದೇ ಗತಿ (1-3)

  • ಸಾಯ್ತೀವಂತ ಗೊತ್ತಿದ್ರೂ ಜೀವನ ಆನಂದಿಸು (4-12)

    • ಸತ್ತವರಿಗೆ ಏನೂ ಗೊತ್ತಿರಲ್ಲ (5)

    • ಸಮಾಧಿ ಸೇರಿದ ಮೇಲೆ ಯಾವ ಕೆಲಸನೂ ಇಲ್ಲ (10)

    • ನೆನಸದ ಸಮಯದಲ್ಲಿ ಎದುರು ನೋಡದ ಘಟನೆಗಳು (11)

  • ವಿವೇಕಕ್ಕೆ ಜನ ಬೆಲೆನೇ ಕೊಡಲ್ಲ (13-18)

9  ಹಾಗಾಗಿ ನಾನು ಈ ಎಲ್ಲ ವಿಷ್ಯಗಳ ಬಗ್ಗೆ ತುಂಬಾ ಯೋಚ್ನೆ ಮಾಡಿ ಒಂದು ತೀರ್ಮಾನಕ್ಕೆ ಬಂದೆ. ಏನಂದ್ರೆ ನೀತಿವಂತರೂ ವಿವೇಕಿಗಳೂ ಸತ್ಯ ದೇವರ ಕೈಯಲ್ಲಿದ್ದಾರೆ, ಅವ್ರ ಕೆಲಸಗಳೂ ಆತನ ಕೈಯಲ್ಲಿವೆ.+ ಮನುಷ್ಯರಿಗೆ ತಮ್ಮ ಕಾಲಕ್ಕಿಂತ ಮುಂಚೆ ಇದ್ದ ಜನ್ರಲ್ಲಿ ಎಷ್ಟು ಪ್ರೀತಿ ಇತ್ತು, ಎಷ್ಟು ದ್ವೇಷ ಇತ್ತು ಅಂತ ಗೊತ್ತೇ ಇಲ್ಲ.  ನೀತಿವಂತನಿಗೂ ಕೆಟ್ಟವನಿಗೂ+ ಒಳ್ಳೆಯವನಿಗೂ ಶುದ್ಧನಿಗೂ ಅಶುದ್ಧನಿಗೂ ಬಲಿ ಅರ್ಪಿಸುವವನಿಗೂ ಬಲಿ ಅರ್ಪಿಸದವನಿಗೂ ಕೊನೇಲಿ ಬರೋದು ಒಂದೇ ಗತಿ.+ ಪಾಪಿಗೆ ಬರೋ ಗತಿನೇ ಒಳ್ಳೆಯವನಿಗೂ ಬರುತ್ತೆ. ದುಡುಕಿ ಆಣೆ ಮಾಡುವವನಿಗೆ ಬರೋ ಗತಿನೇ ಆಣೆ ಮಾಡದವನಿಗೂ ಬರುತ್ತೆ.  ಭೂಮಿ ಮೇಲೆ* ನಡಿಯೋ ಒಂದು ದುಃಖದ ವಿಷ್ಯ ಏನಂದ್ರೆ, ಎಲ್ರಿಗೂ ಒಂದೇ ಗತಿ ಬರೋದ್ರಿಂದ+ ಮನುಷ್ಯರ ಮನಸ್ಸಲ್ಲಿ ಕೆಟ್ಟದ್ದೇ ತುಂಬ್ಕೊಂಡಿದೆ. ಅವರು ತಮ್ಮ ಜೀವನಪೂರ್ತಿ ಮೂರ್ಖತನದಿಂದ ನಡ್ಕೊಳ್ತಾರೆ, ಕೊನೆಗೆ ಸಾಯ್ತಾರೆ!  ಜೀವದಿಂದ ಇರುವವ್ರಿಗೆ ಮಾತ್ರ ನಿರೀಕ್ಷೆ ಇದೆ. ಯಾಕಂದ್ರೆ ಸತ್ತ ಸಿಂಹಕ್ಕಿಂತ ಬದುಕಿರೋ ನಾಯಿನೇ ಮೇಲು ಅಲ್ವಾ?+  ಬದುಕಿರುವವ್ರಿಗೆ ಒಂದಿನ ತಾವು ಸಾಯ್ತೀವಂತ ಗೊತ್ತಿರುತ್ತೆ.+ ಆದ್ರೆ ಸತ್ತವ್ರಿಗೆ ಏನೂ ಗೊತ್ತಿರಲ್ಲ.+ ಅವರಿಗೆ ಇನ್ನು ಮುಂದೆ ಯಾವ ಪ್ರತಿಫಲನೂ ಸಿಗಲ್ಲ. ಅವ್ರ ನೆನಪು ಜನ್ರ ಮನಸ್ಸಿಂದ ಅಳಿಸಿಹೋಗುತ್ತೆ.+  ಅಷ್ಟೇ ಅಲ್ಲ ಅವ್ರಲ್ಲಿದ್ದ ಪ್ರೀತಿ, ದ್ವೇಷ, ಹೊಟ್ಟೆಕಿಚ್ಚು ಸಹ ಅವ್ರ ಜೊತೆ ಮಣ್ಣಾಗುತ್ತೆ. ಭೂಮಿ ಮೇಲೆ ನಡೆಯೋ ಯಾವ ವಿಷ್ಯದಲ್ಲೂ ಅವ್ರಿಗೆ ಪಾಲಿಲ್ಲ.+  ಹೋಗು, ನಿನ್ನ ಊಟವನ್ನ ಸಂತೋಷದಿಂದ ತಿನ್ನು, ದ್ರಾಕ್ಷಾಮದ್ಯವನ್ನ ಉಲ್ಲಾಸದಿಂದ ಕುಡಿ.+ ಯಾಕಂದ್ರೆ ನಿನ್ನ ಕೆಲಸಗಳನ್ನ ಸತ್ಯ ದೇವರು ಮೆಚ್ಚಿದ್ದಾನೆ.+  ನೀನು ಹಾಕೋ ಬಟ್ಟೆಗಳು ಯಾವಾಗ್ಲೂ ಬೆಳ್ಳಗಿರಲಿ.* ನಿನ್ನ ತಲೆಗೆ ಯಾವಾಗ್ಲೂ ಎಣ್ಣೆ ಹಚ್ಕೊ.+  ದೇವರು ನಿನಗೆ ಈ ಭೂಮಿಯಲ್ಲಿ ಕೊಟ್ಟಿರೋ ಅಲ್ಪ* ಜೀವಮಾನದ ಎಲ್ಲ ದಿನಗಳನ್ನ ನಿನ್ನ ಪ್ರೀತಿಯ ಪತ್ನಿ ಜೊತೆ ಆನಂದಿಸು.+ ಯಾಕಂದ್ರೆ ನಿನ್ನ ಈ ಅಲ್ಪ* ಜೀವನದಲ್ಲಿ ನಿನಗೆ ಸಿಗೋ ಪಾಲು ಅದೇ ಮತ್ತು ಭೂಮಿ ಮೇಲೆ ನಿನ್ನ ಶ್ರಮದ ಕೆಲಸಕ್ಕೆ ಸಿಗೋ ಪ್ರತಿಫಲ ಅದೇ.+ 10  ನಿನ್ನ ಕೈಯಿಂದ ಆಗೋ ಕೆಲಸನೆಲ್ಲ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಯಾಕಂದ್ರೆ ನೀನು ಸಮಾಧಿ* ಸೇರಿದ ಮೇಲೆ ಅಲ್ಲಿ ಯಾವುದೇ ಕೆಲಸ ಮಾಡಕ್ಕಾಗಲ್ಲ, ಯೋಚ್ನೆ ಮಾಡಕ್ಕಾಗಲ್ಲ, ಜ್ಞಾನ ಆಗ್ಲಿ ವಿವೇಕ ಆಗ್ಲಿ ಪಡಿಯೋಕೆ ಆಗಲ್ಲ.+ 11  ಭೂಮಿ ಮೇಲೆ ನಾನು ಇನ್ನೊಂದು ವಿಷ್ಯನೂ ನೋಡಿದ್ದೀನಿ. ಅದೇನಂದ್ರೆ ವೇಗದ ಓಟಗಾರ ಯಾವಾಗ್ಲೂ ಗೆಲ್ಲಲ್ಲ, ಶೂರರಿಗೆ ಯಾವಾಗ್ಲೂ ಜಯ ಸಿಗಲ್ಲ,+ ವಿವೇಕಿಗಳಿಗೆ ಆಹಾರ ಯಾವಾಗ್ಲೂ ಸಿಗಲ್ಲ, ಬುದ್ಧಿವಂತರ ಹತ್ರ ಸಿರಿಸಂಪತ್ತು ಯಾವಾಗಲೂ ಇರಲ್ಲ,+ ಜ್ಞಾನಿಗಳಿಗೆ ಯಶಸ್ಸು ಯಾವಾಗ್ಲೂ ಸಿಗಲ್ಲ.+ ಯಾಕಂದ್ರೆ ನೆನಸದ ಸಮಯದಲ್ಲಿ ಅನಿರೀಕ್ಷಿತ ಘಟನೆಗಳು ಎಲ್ರ ಜೀವನದಲ್ಲೂ ನಡಿಯುತ್ತೆ. 12  ಮನುಷ್ಯನಿಗೆ ತಾನು ಯಾವಾಗ ಸಾಯ್ತೀನಂತ ಗೊತ್ತಿರಲ್ಲ.+ ಜೀವಕ್ಕೆ ಕುತ್ತು ತರೋ ಬಲೆಯಲ್ಲಿ ಮೀನುಗಳು ಸಿಕ್ಕಿಬೀಳೋ ಹಾಗೆ, ಬೋನಲ್ಲಿ ಪಕ್ಷಿಗಳು ಸಿಕ್ಕಿಬೀಳೋ ಹಾಗೆ, ಇದ್ದಕ್ಕಿದ್ದಂತೆ ಅವಗಢ ಸಂಭವಿಸಿದಾಗ ಮನುಷ್ಯರು ಸಿಕ್ಕಿಬೀಳ್ತಾರೆ, ಅದ್ರಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ. 13  ಭೂಮಿಯಲ್ಲಿ ನಾನು ವಿವೇಕದ ಬಗ್ಗೆ ಇನ್ನೊಂದು ಮನಮುಟ್ಟೋ ವಿಷ್ಯವನ್ನ ಸಹ ಗಮನಿಸಿದೆ. ಅದೇನಂದ್ರೆ 14  ಒಂದು ಚಿಕ್ಕ ಪಟ್ಟಣ ಇತ್ತು. ಕೆಲವೇ ಜನ ಅಲ್ಲಿದ್ರು. ಒಬ್ಬ ಬಲಿಷ್ಠ ರಾಜ ಆ ಪಟ್ಟಣದ ವಿರುದ್ಧ ಬಂದು ಅದಕ್ಕೆ ಮುತ್ತಿಗೆ ಹಾಕಿದ. 15  ಆ ಪಟ್ಟಣದಲ್ಲಿ ಒಬ್ಬ ಬಡವ ಇದ್ದ, ಅವನು ತುಂಬ ಬುದ್ಧಿವಂತ. ಅವನು ಬುದ್ಧಿ ಉಪಯೋಗಿಸಿ ಪಟ್ಟಣವನ್ನ ಕಾಪಾಡಿದ. ಆದ್ರೆ ಆ ಬಡವನನ್ನ ಎಲ್ರೂ ಮರೆತುಬಿಟ್ರು.+ 16  ಹಾಗಾಗಿ ನಾನು ಮನಸ್ಸಲ್ಲೇ ‘ಶೌರ್ಯಕ್ಕಿಂತ ವಿವೇಕನೇ ಶ್ರೇಷ್ಠ.+ ಹಾಗಿದ್ರೂ ಬಡವನಲ್ಲಿರೋ ವಿವೇಕನ ಕಡೆಗಣಿಸಲಾಗುತ್ತೆ. ಅವನ ಮಾತಿಗೆ ಯಾರೂ ಬೆಲೆಕೊಡಲ್ಲ’+ ಅಂದ್ಕೊಂಡೆ. 17  ಮೂರ್ಖರನ್ನ ಆಳುವವನ ಕಿರಿಚಾಟಕ್ಕೆ ಕಿವಿಗೊಡೋದಕ್ಕಿಂತ ವಿವೇಕಿಯ ಮೃದು ಮಾತಿಗೆ ಕಿವಿಗೊಡೋದೇ ಉತ್ತಮ. 18  ವಿವೇಕ ಯುದ್ಧದ ಆಯುಧಗಳಿಗಿಂತ ಶ್ರೇಷ್ಠ. ಆದ್ರೆ ತುಂಬ ಒಳ್ಳೇ ಕೆಲಸಗಳನ್ನ ಹಾಳು ಮಾಡೋಕೆ ಒಬ್ಬ ಪಾಪಿ ಸಾಕು.+

ಪಾದಟಿಪ್ಪಣಿ

ಅಕ್ಷ. “ಸೂರ್ಯನ ಕೆಳಗೆ.”
ಅದು ಶೋಕದ ಬಟ್ಟೆಯಲ್ಲ. ಉಜ್ವಲ ಬಟ್ಟೆ ಹಾಕೋದು ಸಂತೋಷವಾಗಿ ಇರೋದನ್ನ ಸೂಚಿಸುತ್ತೆ.
ಅಥವಾ “ವ್ಯರ್ಥ.”
ಅಥವಾ “ವ್ಯರ್ಥ.”
ಅದು, ಸಕಲ ಮಾನವರಿಗಾಗಿರೋ ಸಾಂಕೇತಿಕ ಸಮಾಧಿ. ಪದವಿವರಣೆ ನೋಡಿ.