ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 3

ನಮ್ಮೆಲ್ಲರನ್ನು ಸೃಷ್ಟಿಸಿದವರು ಯಾರು?

ನಮ್ಮೆಲ್ಲರನ್ನು ಸೃಷ್ಟಿಸಿದವರು ಯಾರು?

ಎಲ್ಲಾ ಜೀವಿಗಳನ್ನು ಉಂಟುಮಾಡಿದವರು ಯಾರು?

ಜಾಣಮರಿ ನಿನಗೆ ಒಂದು ವಿಷಯ ಗೊತ್ತಾ? ಹೇಳ್ತೀನಿ ಕೇಳ್ತಿಯಾ?— ಸ್ವಲ್ಪ ನಿನ್ನ ಕೈ ನೋಡು. ಬೆರಳುಗಳನ್ನು ಅಲ್ಲಾಡಿಸು. ಏನಾದ್ರೂ ಎತ್ತು ನೋಡೋಣ. ವ್ಹಾವ್‌! ನಿನ್ನ ಕೈಯಿಂದ ಏನೆಲ್ಲ ಮಾಡಬಹುದು. ಎಷ್ಟು ಚೆನ್ನಾಗಿ ನಿನ್ನ ಕೈ ಎಲ್ಲವನ್ನು ಮಾಡುತ್ತೆ. ಈ ನಮ್ಮ ಕೈಗಳನ್ನು ಯಾರು ಉಂಟುಮಾಡಿದರು ಗೊತ್ತಾ?—

ನಮ್ಮ ಬಾಯಿ, ಮೂಗು, ಕಣ್ಣುಗಳನ್ನು ಮಾಡಿದವನೇ ನಮ್ಮ ಕೈಗಳನ್ನೂ ಉಂಟುಮಾಡಿದ್ದಾನೆ. ಆತನು ಯಾರೆಂದರೆ ಮಹಾ ಬೋಧಕನ ತಂದೆಯಾದ ದೇವರೇ. ದೇವರು ನಮಗೆ ಕಣ್ಣು ಕೊಟ್ಟಿರುವುದರಿಂದ ನಾವು ಎಲ್ಲವನ್ನು ನೋಡಿ ಖುಷಿ ಪಡುತ್ತೇವೆ ಅಲ್ವಾ?— ಕಣ್ಣುಗಳಿಂದ ನಾವು ಬಗೆಬಗೆಯ ವಸ್ತುಗಳನ್ನು ನೋಡುತ್ತೇವೆ. ಬಣ್ಣಬಣ್ಣದ ಹೂವುಗಳು, ಹಸಿರು ಹುಲ್ಲು ಮತ್ತು ನೀಲಿ ಆಕಾಶವನ್ನು ನೋಡುತ್ತೇವೆ. ಈ ಚಿತ್ರ ನೋಡು. ಆಹಾರಕ್ಕಾಗಿ ಬಾಯಿತೆರೆದಿರುವ ಎರಡು ಪುಟ್ಟ ಪಕ್ಷಿಮರಿಗಳು ಇವೆ. ಇಂಥದೆಲ್ಲವನ್ನು ನೋಡುವುದು ಅದ್ಭುತ ಅಂತ ನಿನಗೆ ಅನಿಸಲ್ವಾ?—

ಅಂದ ಹಾಗೆ, ಇದನ್ನೆಲ್ಲ ಉಂಟುಮಾಡಿದವರು ಯಾರು? ಮನುಷ್ಯರಾ? ಅಲ್ಲ. ಮನುಷ್ಯರು ಮನೆ ಕಟ್ಟಬಲ್ಲರು. ಆದರೆ ಹುಲ್ಲು, ಪಕ್ಷಿಮರಿ, ಹೂವನ್ನು ಅವರಿಂದ ಉಂಟುಮಾಡಲು ಆಗುವುದಿಲ್ಲ. ಅವರಿಂದ ಜೀವವನ್ನು ಉಂಟುಮಾಡಲು ಸಾಧ್ಯವೇ ಇಲ್ಲ. ಇದು ನಿನಗೆ ಗೊತ್ತಿತ್ತಾ?—

ಹಾಗಾದರೆ, ಇದೆಲ್ಲವನ್ನು ಉಂಟುಮಾಡಿದಾತನು ದೇವರೇ ಎಂದು ಖಂಡಿತವಾಗಿ ಹೇಳಬಹುದು. ಆತನೇ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು. ಮನುಷ್ಯರನ್ನು ಸಹ ಅವನೇ ಸೃಷ್ಟಿಸಿದನು. ಮನುಷ್ಯರನ್ನು ಉಂಟುಮಾಡುವಾಗ ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿಸಿದನು. ಇದನ್ನು ಮಹಾ ಬೋಧಕನಾದ ಯೇಸು ನಮಗೆ ತಿಳಿಸಿದ್ದಾನೆ.—ಮತ್ತಾಯ 19:4-6.

ಯೇಸುವಿಗೆ ಈ ವಿಷಯ ಹೇಗೆ ಗೊತ್ತು? ಮೊದಲ ಗಂಡು ಹೆಣ್ಣನ್ನು ದೇವರು ಸೃಷ್ಟಿಮಾಡಿದಾಗ ಯೇಸು ಕಣ್ಣಾರೆ ನೋಡಿದನಾ?— ಹೌದು, ನೋಡಿದನು. ಆ ಸಮಯದಲ್ಲಿ ಯೇಸು ದೇವರ ಪಕ್ಕದಲ್ಲಿ ಇದ್ದನು. ಮನುಷ್ಯರನ್ನು ಉಂಟುಮಾಡುವ ಮೊದಲೇ ದೇವರು ಯೇಸುವನ್ನು ಸ್ವರ್ಗದಲ್ಲಿ ಉಂಟುಮಾಡಿದ್ದನು. ಸ್ವರ್ಗದಲ್ಲಿ ಯೇಸು ಒಬ್ಬ ದೇವದೂತನಾಗಿದ್ದನು ಮತ್ತು ತನ್ನ ತಂದೆಯೊಂದಿಗೆ ಜೀವಿಸುತ್ತಿದ್ದನು.

ಮನುಷ್ಯರನ್ನು ಸೃಷ್ಟಿಮಾಡುವ ಮುನ್ನ ದೇವರು ಯಾರೊಂದಿಗೋ ಮಾತಾಡುತ್ತಾ “ಮನುಷ್ಯರನ್ನು ಉಂಟುಮಾಡೋಣ” ಎಂದು ಹೇಳಿದ್ದನೆಂದು ಬೈಬಲ್‌ ತಿಳಿಸುತ್ತದೆ. (ಆದಿಕಾಂಡ 1:26) ದೇವರು ಯಾರ ಜೊತೆ ಮಾತಾಡುತ್ತಿದ್ದನು ಎಂದು ನೀನು ಊಹಿಸಬಲ್ಲೆಯಾ?— ತನ್ನ ಮಗನ ಹತ್ತಿರ ಅಂದರೆ ಯೇಸುವಿನೊಂದಿಗೆ ಮಾತಾಡುತ್ತಿದ್ದನು.

ಈಗ ನೀನೇ ಸ್ವಲ್ಪ ಯೋಚನೆ ಮಾಡಿ ನೋಡು. ದೇವರು ಭೂಮಿಯನ್ನೂ ಅದರಲ್ಲಿರುವ ಎಲ್ಲವನ್ನೂ ಉಂಟುಮಾಡಿದಾಗ ಆತನೊಂದಿಗೆ ಯೇಸು ಇದ್ದನು. ಅವನು ತನ್ನ ತಂದೆಯೊಂದಿಗೆ ಇದ್ದಾಗ ಬಹಳ ವಿಷಯಗಳನ್ನು ಕಲಿತುಕೊಂಡನು. ಆದುದರಿಂದ ಯೇಸುವಿನ ಮಾತನ್ನು ನಾವು ಕೇಳುವಾಗ ದೇವರ ಹತ್ತಿರ ಇದ್ದು ಎಲ್ಲಾ ವಿಷಯಗಳನ್ನು ಕಲಿತುಕೊಂಡ ಒಬ್ಬ ವ್ಯಕ್ತಿಯ ಮಾತನ್ನು ಕೇಳುತ್ತಿದ್ದೇವೆ. ಇದರ ಬಗ್ಗೆ ಯೋಚಿಸುವಾಗ ನಿನಗೆ ರೋಮಾಂಚನ ಆಗುವುದಿಲ್ಲವೇ? ಅಷ್ಟೊಂದು ಜ್ಞಾನ ಅನುಭವ ಇರುವ ಯೇಸು ನಿಜಕ್ಕೂ ಮಹಾ ಬೋಧಕನೇ ಸರಿ.

ದೇವರು ತನ್ನ ಮಗನನ್ನು ಉಂಟುಮಾಡುವ ಮೊದಲು ಒಬ್ಬನೇ ಇದ್ದಾಗ ಆತನಿಗೆ ಬೇಸರ ಆಗುತಿತ್ತೋ?— ಹಾಗೇನಿಲ್ಲ, ಆತನು ಸಂತೋಷವಾಗೇ ಇದ್ದನು. ಮತ್ತೆ ಯಾಕೆ ಅವನು ಬೇರೆ ಜೀವಿಗಳನ್ನು ಉಂಟುಮಾಡಿದನು, ಒಬ್ಬನೇ ಇರಬಹುದಾಗಿತ್ತಲ್ವಾ?— ಏಕೆಂದರೆ, ಆತನು ಪ್ರೀತಿಯ ದೇವರಾಗಿದ್ದಾನೆ. ತಾನೊಬ್ಬನೇ ಅಲ್ಲ ಬೇರೆಯವರು ಸಹ ಜೀವಿಸಬೇಕು ಸಂತೋಷದಿಂದಿರಬೇಕು ಎಂದು ಅವನು ಇಷ್ಟಪಟ್ಟನು. ಅದಕ್ಕಾಗಿ ಎಲ್ಲಾ ಜೀವಿಗಳನ್ನು ಉಂಟುಮಾಡಿದ್ದಾನೆ. ನಮಗೆ ಜೀವ ಕೊಟ್ಟಿರುವ ದೇವರಿಗೆ ನಾವೆಷ್ಟು ಧನ್ಯವಾದ ಹೇಳಿದರೂ ಸಾಲದು.

ದೇವರು ಮಾಡಿರುವ ಪ್ರತಿಯೊಂದು ವಿಷಯದಲ್ಲಿ ಆತನ ಪ್ರೀತಿಯನ್ನು ಕಾಣಬಹುದು. ಉದಾಹರಣೆಗೆ, ದೇವರು ಉಂಟುಮಾಡಿದ ಸೂರ್ಯನ ವಿಷಯವನ್ನೇ ನೋಡು. ಸೂರ್ಯನು ನಮಗೆ ಬೆಳಕು ನೀಡುತ್ತಾನೆ. ಸೂರ್ಯನ ಶಾಖ ನಮ್ಮನ್ನು ಬೆಚ್ಚಗಿಡುತ್ತದೆ. ಒಂದು ವೇಳೆ, ಸೂರ್ಯನೇ ಇಲ್ಲದಿದ್ದರೆ ಭೂಮಿ ಹೇಗಿರುತ್ತಿತ್ತು ಅಂತ ಸ್ವಲ್ಪ ಯೋಚಿಸು. ಎಲ್ಲವೂ ತಣ್ಣಗಾಗಿ ಬಿಡುತ್ತಿತ್ತು. ಭೂಮಿಯಲ್ಲಿ ಏನೂ ಜೀವಂತವಾಗಿ ಇರುತ್ತಿರಲಿಲ್ಲ. ದೇವರು ಸೂರ್ಯನನ್ನು ಉಂಟುಮಾಡಿರುವುದು ಎಷ್ಟು ಒಳ್ಳೆದಾಯ್ತಲ್ವಾ! ಏನಂತಿಯಾ?—

ಈಗ ಇನ್ನೊಂದು ಉದಾಹರಣೆ ನೋಡೋಣ. ಆಕಾಶದಿಂದ ಮಳೆ ಸುರಿಯುವಂತೆ ಮಾಡುವುದು ಕೂಡ ದೇವರೇ. ಮಳೆ ಸುರಿಯುತ್ತಿರುವಾಗ ಹೊರಗೆ ಹೋಗಿ ಆಟ ಆಡಲು ಆಗೋದಿಲ್ಲವಲ್ಲ ಅಂತ ನಿನಗೆ ಬೇಜಾರಾಗಬಹುದು. ಆದರೆ ಈ ಮಳೆಯಿಂದ ಎಷ್ಟು ಉಪಯೋಗವಿದೆ ಗೊತ್ತಾ? ಗಿಡ ಬೆಳೆದು ಹೂಬಿಡುವುದು ಮಳೆಯಿಂದಲೇ. ಹಾಗಾದರೆ, ಸುಂದರ ಹೂವುಗಳನ್ನು ನೋಡುವಾಗ ನಾವು ಯಾರಿಗೆ ಧನ್ಯವಾದ ಹೇಳಬೇಕು?— ಹೌದು, ದೇವರಿಗೆ. ಅದೇ ರೀತಿ, ರುಚಿರುಚಿಯಾದ ಹಣ್ಣುಹಂಪಲು ಕಾಯಿಪಲ್ಯ ತಿನ್ನುವಾಗ ಯಾರಿಗೆ ಧನ್ಯವಾದ ಹೇಳಬೇಕು?— ದೇವರಿಗೆ. ಏಕೆಂದರೆ ಆತನು ಕೊಟ್ಟಿರುವ ಸೂರ್ಯ ಹಾಗೂ ಮಳೆಯಿಂದಲೇ ಗಿಡಮರಗಳು ಬೆಳೆಯುತ್ತವೆ.

ಯಾರಾದರೂ ನಿನ್ನ ಹತ್ತಿರ ‘ಮನುಷ್ಯರನ್ನು ಮತ್ತು ಪ್ರಾಣಿಪಕ್ಷಿಗಳನ್ನು ಸಹ ದೇವರೇ ಸೃಷ್ಟಿಸಿದನಾ?’ ಎಂದು ಕೇಳಿದರೆ ನೀನೇನು ಉತ್ತರ ಕೊಡುತ್ತೀ?— “ಹೌದು, ಮನುಷ್ಯರನ್ನು ಮತ್ತು ಪ್ರಾಣಿಪಕ್ಷಿಗಳನ್ನು ಸೃಷ್ಟಿಸಿದವನು ದೇವರು” ಎಂಬುದು ಸರಿಯಾದ ಉತ್ತರ. ಒಂದು ವೇಳೆ ಅವರು, ಮನುಷ್ಯರನ್ನು ಸೃಷ್ಟಿ ಮಾಡಿದ್ದು ದೇವರಲ್ಲ ಎಂದು ಹೇಳಿದರೆ? ಅಥವಾ ಮನುಷ್ಯನು ಪ್ರಾಣಿಗಳಿಂದ ವಿಕಾಸವಾಗಿದ್ದಾನೆ ಎಂದು ಹೇಳಿದರೆ? ಅದು ಸರಿನಾ? ಇಲ್ಲ, ಬೈಬಲ್‌ ಆ ರೀತಿ ಕಲಿಸುವುದಿಲ್ಲ. ಎಲ್ಲಾ ಜೀವಿಗಳನ್ನು ದೇವರೇ ಸೃಷ್ಟಿಮಾಡಿದನು ಎಂದು ಅದು ಕಲಿಸುತ್ತದೆ.—ಆದಿಕಾಂಡ 1:26-31.

ಒಂದು ಮನೆಯನ್ನು ಯಾರೋ ಕಟ್ಟಿರುವಾಗ ಹೂವು, ಗಿಡಮರ, ಪ್ರಾಣಿಪಕ್ಷಿಗಳನ್ನೂ ಒಬ್ಬರು ಉಂಟುಮಾಡಿರಲೇಬೇಕು. ಅದು ಯಾರು?

ಆದರೆ, ‘ನನಗೆ ದೇವರಲ್ಲಿ ನಂಬಿಕೆ ಇಲ್ಲ’ ಎಂದು ಯಾರಾದರೂ ನಿನಗೆ ಹೇಳಿದರೆ ಆಗೇನು ಹೇಳುತ್ತಿಯಾ?— ಉತ್ತರ ಕೊಡಲು ಒಂದು ಮನೆಯ ಉದಾಹರಣೆಯನ್ನು ನೀನು ಹೇಳಬಹುದು. ಒಂದು ಮನೆಯನ್ನು ತೋರಿಸಿ, “ಈ ಮನೆ ಹೇಗೆ ಬಂತು?” ಅಂತ ಕೇಳು. ಯಾರಾದರೊಬ್ಬರು ಇದನ್ನು ಕಟ್ಟಿರಲೇ ಬೇಕಲ್ವಾ? ಒಂದು ಮನೆ ತನ್ನಷ್ಟಕ್ಕೆ ತಾನೇ ಉಂಟಾಗಲು ಸಾಧ್ಯ ಇಲ್ಲ ಎಂದು ಎಲ್ಲರಿಗೂ ಗೊತ್ತಿದೆ.—ಇಬ್ರಿಯ 3:4.

ಆಮೇಲೆ ಅವರನ್ನು ಹೂದೋಟಕ್ಕೆ ಕರೆದುಕೊಂಡು ಹೋಗಿ ಹೂವುಗಳನ್ನು ತೋರಿಸು. “ಈ ಹೂವು ಹೇಗೆ ಬಂತು, ಯಾರು ಉಂಟುಮಾಡಿದರು?” ಎಂದು ಕೇಳು. ಮನುಷ್ಯರಂತೂ ಉಂಟುಮಾಡಿಲ್ಲ. ಹೇಗೆ ಒಂದು ಮನೆ ತನ್ನಷ್ಟಕ್ಕೆ ತಾನೇ ಉಂಟಾಗಲು ಸಾಧ್ಯವಿಲ್ಲವೋ ಹಾಗೆಯೇ ಹೂವು ಕೂಡ ತನ್ನಷ್ಟಕ್ಕೆ ತಾನೇ ಉಂಟಾಗಲು ಸಾಧ್ಯವಿಲ್ಲ. ಯಾರೋ ಅದನ್ನು ಉಂಟುಮಾಡಿರಲೇ ಬೇಕು. ಅದು ಬೇರೆ ಯಾರು ಅಲ್ಲ ದೇವರೇ.

ಹೂದೋಟದಲ್ಲಿ ಸ್ವಲ್ಪ ನಿಂತು, ಪಕ್ಷಿಯ ಹಾಡನ್ನು ಆಲಿಸುವಂತೆ ಈಗ ಅವರಿಗೆ ಹೇಳು. “ಪಕ್ಷಿಗಳನ್ನು ಯಾರು ಉಂಟುಮಾಡಿದರು, ಅವುಗಳಿಗೆ ಹಾಡಲು ಕಲಿಸಿಕೊಟ್ಟವರು ಯಾರು?” ಎಂದು ಕೇಳು. ಅವುಗಳನ್ನು ಸೃಷ್ಟಿಮಾಡಿದ್ದು ದೇವರೇ. ಹಾಡಲು ಕಲಿಸಿಕೊಟ್ಟವನು ಆತನೇ. ಈ ಆಕಾಶ, ಭೂಮಿ, ಅದರಲ್ಲಿರುವ ಎಲ್ಲಾ ಜೀವಿಗಳನ್ನು ನಮ್ಮ ಪ್ರೀತಿಯ ದೇವರು ಉಂಟುಮಾಡಿದನು. ದೇವರು ಜೀವದ ಮೂಲನಾಗಿದ್ದಾನೆ.

ಇಷ್ಟೆಲ್ಲಾ ಉದಾಹರಣೆ ಕೊಟ್ಟರೂ ಕೆಲವರು, ‘ಕಣ್ಣಿಗೆ ಕಾಣುವುದನ್ನು ಮಾತ್ರ ನಾನು ನಂಬುತ್ತೇನೆ. ದೇವರು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಕಾಣದ ದೇವರನ್ನು ಹೇಗೆ ನಂಬೋದು?’ ಅಂತ ಹೇಳಬಹುದು.

ನಿಜ. ದೇವರನ್ನು ನೋಡಲು ನಮ್ಮಿಂದ ಸಾಧ್ಯವಿಲ್ಲ. ‘ಯಾವ ಮನುಷ್ಯನೂ ದೇವರನ್ನು ನೋಡಿಲ್ಲ’ ಎಂದು ಬೈಬಲ್‌ ಸಹ ತಿಳಿಸುತ್ತದೆ. ಹೌದು, ಭೂಮಿಯಲ್ಲಿರುವ ಯಾರಿಂದಲೂ ದೇವರನ್ನು ನೋಡಲು ಸಾಧ್ಯವಿಲ್ಲ. ಹಾಗಾಗಿ ನಾವು ದೇವರ ಪಟ ಅಥವಾ ಮೂರ್ತಿಯನ್ನು ಮಾಡಲು ಪ್ರಯತ್ನಿಸಬಾರದು. ಹಾಗೆ ಮಾಡಲು ಪ್ರಯತ್ನಿಸುವುದು ತನಗೆ ಇಷ್ಟವಿಲ್ಲ ಎಂದು ದೇವರೇ ಹೇಳಿದ್ದಾನೆ. ಈಗ ನೀನೇ ಹೇಳು, ಮನೆಯಲ್ಲಿ ದೇವರ ಚಿತ್ರ ಅಥವಾ ಮೂರ್ತಿಯನ್ನು ಇಟ್ಟುಕೊಳ್ಳುವುದು ದೇವರಿಗೆ ಇಷ್ಟವಾಗುತ್ತಾ?—ವಿಮೋಚನಕಾಂಡ 20:4, 5; 33:20; ಯೋಹಾನ 1:18.

ದೇವರನ್ನು ಕಣ್ಣಾರೆ ನೋಡಲು ಸಾಧ್ಯವಿಲ್ಲದಿದ್ದರೂ ಅವನಿದ್ದಾನೆ ಎಂದು ನಾವು ಹೇಳಬಹುದು. ಅದು ಹೇಗೆ? ಆಯ್ತಪ್ಪಾ, ನೀನು ಗಾಳಿಯನ್ನು ನೋಡಿದಿಯಾ?— ಇಲ್ಲ ಅಲ್ವಾ. ಗಾಳಿ ಯಾರ ಕಣ್ಣಿಗೂ ಕಾಣುವುದಿಲ್ಲ. ಆದರೆ ಗಾಳಿ ಬೀಸುವಾಗ ಏನಾಗುತ್ತದೆಂದು ನಾವು ನೋಡಬಹುದು. ಗಾಳಿ ಬೀಸುವಾಗ ಗಿಡಮರದ ಎಲೆಗಳೆಲ್ಲಾ ಅತ್ತಿತ್ತ ಅಲ್ಲಾಡುತ್ತವೆ. ಅದನ್ನು ನೋಡುವಾಗ ನಮ್ಮ ಸುತ್ತಮುತ್ತ ಗಾಳಿ ಇದೆ ಅಂತ ನೀನು ನಂಬುತ್ತೀಯಾ ತಾನೇ.

ಗಾಳಿ ಇದೆ ಎಂದು ನಿನಗೆ ಹೇಗೆ ಗೊತ್ತಾಗುತ್ತದೆ?

ಅದೇ ರೀತಿ, ದೇವರು ಮಾಡಿರುವ ವಿಷಯಗಳನ್ನು ಕಣ್ಣಾರೆ ನೋಡುವಾಗ ದೇವರಿದ್ದಾನೆ ಎಂದು ನಾವು ಹೇಳಬಹುದು. ತೋಟದಲ್ಲಿರುವ ಹೂವುಗಳನ್ನು ನೋಡುವಾಗ ಅಥವಾ ಆಕಾಶದಲ್ಲಿ ಹಾರುತ್ತಿರುವ ಪಕ್ಷಿಯನ್ನು ನೋಡುವಾಗ ದೇವರು ಸೃಷ್ಟಿಮಾಡಿದ್ದನ್ನೇ ನೀನು ನೋಡುತ್ತಿದ್ದಿಯಾ. ಇದೆಲ್ಲಾ ನಿನ್ನ ಕಣ್ಣ ಮುಂದೆ ಇರುವಾಗ ದೇವರಿದ್ದಾನೆ ಅಂತ ನಂಬದಿರಲು ಹೇಗೆ ಸಾಧ್ಯ?

ಕೆಲವರು ನಿನ್ನ ಹತ್ತಿರ, ‘ಸೂರ್ಯನನ್ನು ಮತ್ತು ಭೂಮಿಯನ್ನು ಉಂಟುಮಾಡಿದವರು ಯಾರು?’ ಎಂದು ಪ್ರಶ್ನೆ ಕೇಳಬಹುದು. ಇದಕ್ಕೆ ಬೈಬಲ್‌, “ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು” ಎಂದು ಉತ್ತರ ಕೊಡುತ್ತದೆ. (ಆದಿಕಾಂಡ 1:1) ಅಬ್ಬಾ! ದೇವರು ಏನೆನ್ನೆಲ್ಲಾ ಸೃಷ್ಟಿಮಾಡಿದ್ದಾನೆ. ಇದನ್ನೆಲ್ಲಾ ಕೊಟ್ಟಿರುವ ದೇವರ ಬಗ್ಗೆ ನಿನಗೆ ಏನು ಅನಿಸುತ್ತದೆ?—

ಈ ಸುಂದರ ಭೂಮಿಯಲ್ಲಿ ಬಾಳುವುದು ಸಂತೋಷದ ವಿಷಯ ಅಲ್ವಾ. ಪಕ್ಷಿಗಳ ಇಂಪಾದ ಹಾಡನ್ನು ಕೇಳಿಸಿಕೊಳ್ಳಬಹುದು. ಬಣ್ಣಬಣ್ಣದ ಹೂವುಗಳನ್ನು ನೋಡಬಹುದು. ಅಷ್ಟೇಕೇ, ಬಗೆಬಗೆಯ ಆಹಾರ ತಿಂಡಿತಿನಿಸು ಸವಿಯಬಹುದು.

ಓ! ದೇವರು ಏನೆಲ್ಲಾ ನಮಗೆ ಕೊಟ್ಟಿದ್ದಾನೆ. ಅದಕ್ಕೆಲ್ಲಾ ನಾವು ದೇವರಿಗೆ ಧನ್ಯವಾದ ಹೇಳಲೇಬೇಕು. ಎಲ್ಲಕ್ಕಿಂತಲೂ ಮಿಗಿಲಾಗಿ, ನಮಗೆ ಜೀವವನ್ನು ಕೊಟ್ಟಿರುವುದಕ್ಕಾಗಿ ನಾವು ಆತನಿಗೆ ಧನ್ಯವಾದ ಹೇಳಬೇಕು. ನಾವು ದೇವರಿಗೆ ಧನ್ಯವಾದವನ್ನು ಬರೀ ಮಾತಿನಲ್ಲಿ ಅಲ್ಲಾ ಬೇರೊಂದು ರೀತಿಯಲ್ಲೂ ತೋರಿಸಬಹುದು. ಹೇಗೆ ಗೊತ್ತಾ?— ಬೈಬಲಿನಲ್ಲಿ ದೇವರು ಹೇಳಿರುವ ಮಾತನ್ನು ಕೇಳಿ ಅದರಂತೆ ನಡೆಯಬೇಕು. ಈ ರೀತಿಯಲ್ಲಿ ಸಕಲವನ್ನೂ ಉಂಟುಮಾಡಿದ ದೇವರನ್ನು ನಾವು ಬಹಳವಾಗಿ ಪ್ರೀತಿಸುತ್ತೇವೆ ಎಂದು ತೋರಿಸಿಕೊಡುತ್ತೇವೆ.

ದೇವರು ನಮಗಾಗಿ ಮಾಡಿರುವ ವಿಷಯಗಳಿಗಾಗಿ ನಾವು ಹೇಗೆ ಕೃತಜ್ಞತೆ ತೋರಿಸಬಹುದು ಎಂದು ತಿಳಿದುಕೊಳ್ಳಲು ಈ ವಚನಗಳನ್ನು ಓದೋಣ. ಕೀರ್ತನೆ 139:14; ಯೋಹಾನ 4:23, 24; 1 ಯೋಹಾನ 5:21 ಮತ್ತು ಪ್ರಕಟನೆ 4:11.