ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 5

‘ಇವನು ನನ್ನ ಮಗ’

‘ಇವನು ನನ್ನ ಮಗ’

ಮಕ್ಕಳು ಒಳ್ಳೇ ಕೆಲಸ ಮಾಡುವಾಗ ಅಪ್ಪಅಮ್ಮನಿಗೆ ಸಂತೋಷವಾಗುತ್ತದೆ. ತನ್ನ ಮುದ್ದಿನ ಮಗಳು ಒಂದು ಕೆಲಸವನ್ನು ಚೆನ್ನಾಗಿ ಮಾಡಿದರೆ ತಂದೆ ಹೆಮ್ಮೆಯಿಂದ “ಇವಳು ನನ್ನ ಮಗಳು” ಎಂದು ಎಲ್ಲರ ಮುಂದೆ ಹೇಳಿಕೊಳ್ಳುತ್ತಾನೆ. ಮಗನು ಒಳ್ಳೇ ಕೆಲಸ ಮಾಡಿದರೆ? “ಇವನು ನನ್ನ ಮಗ” ಎಂದು ಖುಷಿಯಿಂದ ಹೇಳುತ್ತಾನೆ.

ಯೇಸು ತನ್ನ ತಂದೆಗೆ ಇಷ್ಟವಾಗುವಂಥ ವಿಷಯಗಳನ್ನೇ ಯಾವಾಗಲೂ ಮಾಡುತ್ತಿದ್ದನು. ಅದಕ್ಕೆ ಯೇಸುವನ್ನು ಕಂಡರೆ ಅವನ ತಂದೆಗೆ ತುಂಬಾ ಹೆಮ್ಮೆ. ಒಮ್ಮೆ ಯೇಸು ತನ್ನ ಮೂವರು ಗೆಳೆಯರೊಂದಿಗೆ ಇದ್ದಾಗ ಸ್ವರ್ಗದಿಂದ ಅವನ ತಂದೆ ಏನು ಹೇಳಿದನೆಂದು ನಿನಗೆ ನೆನಪಿದೆಯಾ?— “ಇವನು ಪ್ರಿಯನಾಗಿರುವ ನನ್ನ ಮಗನು, ಇವನನ್ನು ನಾನು ಮೆಚ್ಚಿದ್ದೇನೆ” ಎಂದು ಹೇಳಿದನು.—ಮತ್ತಾಯ 17:5.

ತನ್ನ ತಂದೆ ಮೆಚ್ಚುವಂಥ ಕೆಲಸಗಳನ್ನು ಯೇಸು ಯಾವಾಗಲೂ ಸಂತೋಷದಿಂದ ಮಾಡುತ್ತಿದ್ದನು. ಯಾಕೆ ಗೊತ್ತಾ? ಏಕೆಂದರೆ ತಂದೆಯೆಂದರೆ ಅವನಿಗೆ ಅಷ್ಟು ಪ್ರೀತಿ. ಯಾವುದೇ ಒಂದು ಕೆಲಸವನ್ನು ‘ಮಾಡಬೇಕಲ್ಲ’ ಎಂದು ಮನಸ್ಸಿಲ್ಲದೆ ಮಾಡುವುದಾದರೆ ಅದು ತುಂಬಾ ಕಷ್ಟವಾಗಿ ಕಾಣುತ್ತದೆ. ಆದರೆ ಅದೇ ಕೆಲಸವನ್ನು ಮನಸ್ಸಾರೆ ಮಾಡುವಾಗ ಅದು ಸುಲಭವಾಗುತ್ತದೆ. ಮನಸ್ಸಾರೆ ಮಾಡುವುದು ಅಂದರೆ ಏನು?— ಆ ಕೆಲಸವನ್ನು ಇಷ್ಟಪಟ್ಟು ಮನಸ್ಸಿಟ್ಟು ಮಾಡುವುದು.

ಸ್ವರ್ಗದಲ್ಲಿದ್ದಾಗಲೂ ಯೇಸು ತನ್ನ ತಂದೆ ಹೇಳಿದ್ದನ್ನೆಲ್ಲಾ ಮನಸ್ಸಾರೆ ಮಾಡುತ್ತಿದ್ದನು. ತನ್ನ ತಂದೆಯ ಮೇಲೆ ಪ್ರೀತಿ ಇದ್ದ ಕಾರಣದಿಂದಲೇ ಅದನ್ನೆಲ್ಲಾ ಮಾಡುತ್ತಿದ್ದನು. ಯೇಸುವಿಗೆ ಸ್ವರ್ಗದಲ್ಲಿ ಒಳ್ಳೆಯ ಸ್ಥಾನವಿತ್ತು. ಅವನು ತನ್ನ ತಂದೆಯೊಂದಿಗೆ ಇದ್ದನು. ಆದರೆ ಬೇರೊಂದು ವಿಶೇಷ ಕೆಲಸವನ್ನು ದೇವರು ಯೇಸುವಿಗೆ ವಹಿಸಿಕೊಟ್ಟನು. ಆ ಕೆಲಸವನ್ನು ಮಾಡಲಿಕ್ಕಾಗಿ ಯೇಸು ಸ್ವರ್ಗದಿಂದ ಭೂಮಿಗೆ ಬರಬೇಕಿತ್ತು. ತನ್ನ ಸ್ವರ್ಗದ ಸ್ಥಾನವನ್ನು ಬಿಟ್ಟು ಪುಟ್ಟ ಮಗುವಾಗಿ ಹುಟ್ಟಬೇಕಿತ್ತು. ಯೇಸು ಇದನ್ನೆಲ್ಲಾ ಮಾಡಲು ಮನಸ್ಸಾರೆ ಒಪ್ಪಿಕೊಂಡನು. ಯಾಕೆ ಗೊತ್ತಾ? ಏಕೆಂದರೆ ಅದು ಯೆಹೋವ ದೇವರ ಇಷ್ಟವಾಗಿತ್ತು ಎಂದು ಯೇಸುವಿಗೆ ಗೊತ್ತಿತ್ತು.

ದೇವದೂತನಾದ ಗಬ್ರಿಯೇಲನು ಮರಿಯಳಿಗೆ ಏನು ಹೇಳಿದನು?

ಯೇಸು ಭೂಮಿಯಲ್ಲಿ ಪುಟ್ಟ ಮಗುವಾಗಿ ಹುಟ್ಟಬೇಕಾದರೆ ಒಬ್ಬಳು ತಾಯಿ ಬೇಕಲ್ವಾ. ಆ ತಾಯಿಯ ಹೆಸರು ಏನೆಂದು ನಿನಗೆ ಗೊತ್ತಾ?— ಅವಳ ಹೆಸರು ಮರಿಯ. ಯೆಹೋವ ದೇವರು ಸ್ವರ್ಗದಿಂದ ಗಬ್ರಿಯೇಲ ಎಂಬ ದೇವದೂತನನ್ನು ಮರಿಯಳ ಬಳಿಗೆ ಕಳುಹಿಸಿದನು. ಆ ದೂತನು ಮರಿಯಳಿಗೆ ಒಂದು ಗಂಡುಮಗು ಹುಟ್ಟುವುದೆಂದು ಹೇಳಿದನು. ಮರಿಯಳು ಆ ಮಗುವಿಗೆ ಯೇಸುವೆಂದು ಹೆಸರಿಡಬೇಕಿತ್ತು. ಯೇಸುವಿನ ತಂದೆ ಯಾರು ಅಂತ ಹೇಳು?— ಯೆಹೋವ ದೇವರೇ ಎಂದು ದೇವದೂತನು ಹೇಳಿದನು. ಆದುದರಿಂದಲೇ ಯೇಸುವನ್ನು ‘ದೇವರ ಮಗ’ ಎಂದು ಕರೆಯಲಾಗುತ್ತದೆ.

ಮರಿಯಳಿಗೆ ಮಗು ಹುಟ್ಟುವುದೆಂದು ಗಬ್ರಿಯೇಲ ದೂತನು ಹೇಳಿದಾಗ ಅವಳಿಗೆ ಹೇಗನಿಸಿತು?— “ನನ್ನಿಂದ ಆಗಲ್ಲ” ಎಂದು ಅವಳು ಹೇಳಿದಳಾ? ಇಲ್ಲ. ದೇವರು ಹೇಳಿದ್ದನ್ನು ಮಾಡಲು ಮರಿಯಳು ಮನಸ್ಸಾರೆ ಒಪ್ಪಿಕೊಂಡಳು. ಆದರೆ ಸ್ವಲ್ಪ ಯೋಚಿಸು, ಸ್ವರ್ಗದಲ್ಲಿ ಈಗಾಗಲೇ ಜೀವಿಸುತ್ತಿದ್ದ ದೇವರ ಮಗ ಹೇಗೆ ಒಂದು ಪುಟ್ಟ ಮಗುವಾಗಿ ಭೂಮಿಯಲ್ಲಿ ಹುಟ್ಟಲು ಸಾಧ್ಯ? ಯೇಸುವಿನ ಜನನ ಬೇರೆ ಮಕ್ಕಳ ಜನನಕ್ಕಿಂತ ವ್ಯತ್ಯಾಸವಾಗಿರುವುದು ಹೇಗೆ? ನಿನಗೆ ಗೊತ್ತಾ?—

ಮೊದಲ ಮನುಷ್ಯನಾದ ಆದಾಮನನ್ನು ಮತ್ತು ಅವನ ಹೆಂಡತಿ ಹವ್ವಳನ್ನು ದೇವರು ಸೃಷ್ಟಿ ಮಾಡಿದ್ದು ನಿನಗೆ ನೆನಪಿದೆಯಲ್ವಾ? ಅವರಿಬ್ಬರು ವಿಶೇಷ ರೀತಿಯಲ್ಲಿ ಒಂದುಗೂಡುವಂತೆ ದೇವರು ಅವರನ್ನು ಸೃಷ್ಟಿಸಿದನು. ಗಂಡು ಮತ್ತು ಹೆಣ್ಣು ಒಂದುಗೂಡಿದಾಗ ಹೆಣ್ಣಿನ ಗರ್ಭದಲ್ಲಿ ಒಂದು ಮಗು ಬೆಳೆಯಲು ಆರಂಭಿಸುತ್ತದೆ. ಇದೊಂದು ಅದ್ಭುತ ಎಂದು ಜನರು ಅಚ್ಚರಿಪಡುತ್ತಾರೆ. ನಿನಗೂ ಆಶ್ಚರ್ಯ ಆಗಬಹುದು.

ಅದಕ್ಕಿಂತಲೂ ಒಂದು ದೊಡ್ಡ ಅದ್ಭುತವನ್ನು ದೇವರು ಮಾಡಿದನು. ಸ್ವರ್ಗದಲ್ಲಿದ್ದ ತನ್ನ ಮಗನ ಜೀವವನ್ನು ಮರಿಯಳ ಗರ್ಭದೊಳಗೆ ಇಟ್ಟನು. ಇಂಥ ಅದ್ಭುತ ಈ ಮುಂಚೆ ನಡೆದಿರಲಿಲ್ಲ. ಆಮೇಲೆಯೂ ನಡೆಯಲಿಲ್ಲ. ದೇವರು ಈ ದೊಡ್ಡ ಅದ್ಭುತ ಮಾಡಿದ ಕಾರಣ ಪುಟ್ಟ ಯೇಸು ಮರಿಯಳ ಗರ್ಭದಲ್ಲಿ ಬೆಳೆಯತೊಡಗಿದನು. ಸಾಮಾನ್ಯವಾಗಿ ಒಂದು ಮಗು ತಾಯಿಯ ಗರ್ಭದಲ್ಲಿ ಹೇಗೆ ಬೆಳೆಯುತ್ತದೋ ಹಾಗೆಯೇ ಪುಟಾಣಿ ಯೇಸು ಬೆಳೆಯತೊಡಗಿದನು. ಆಮೇಲೆ ಮರಿಯಳಿಗೂ ಯೋಸೇಫನಿಗೂ ಮದುವೆಯಾಯಿತು.

ಯೇಸು ಹುಟ್ಟುವ ಸಮಯದಲ್ಲಿ ಮರಿಯ ಮತ್ತು ಯೋಸೇಫ ಬೇತ್ಲೆಹೇಮ್‌ ಎಂಬ ಊರಿಗೆ ಹೋಗಿದ್ದರು. ಆ ಸಮಯದಲ್ಲಿ ಅಲ್ಲಿ ತುಂಬಾ ಜನರಿದ್ದ ಕಾರಣ ಮರಿಯ ಯೋಸೇಫರಿಗೆ ತಂಗಲು ಎಲ್ಲೂ ಮನೆ ಸಿಗಲಿಲ್ಲ. ಹುಡುಕಿ ಹುಡುಕಿ ಸುಸ್ತಾದ ಅವರಿಗೆ ಕೊನೆಗೆ ಒಂದು ಕೊಟ್ಟಿಗೆ ಸಿಕ್ಕಿತು. ಆ ಕೊಟ್ಟಿಗೆಯಲ್ಲಿ ಯೇಸು ಜನಿಸಿದನು. ಎಳೇ ಕೂಸಾದ ಯೇಸುವನ್ನು ಅವರು ಗೋದಲಿಯಲ್ಲಿ ಮಲಗಿಸಿದರು. ಮಲಗಿಸುತ್ತಿರುವುದು ಈ ಚಿತ್ರದಲ್ಲಿ ನಿನಗೆ ಕಾಣಿಸುತ್ತಿದೆಯಾ? ಅದ್ಸರಿ ಗೋದಲಿ ಅಂದರೆ ನಿನಗೆ ಅರ್ಥ ಆಯ್ತಾ? ಹಸು, ಕುರಿ, ಕತ್ತೆ ಮುಂತಾದ ಪ್ರಾಣಿಗಳಿಗೆ ತಿನ್ನಲು ಆಹಾರ ಹಾಕುವ ತೊಟ್ಟಿ.

ಪುಟ್ಟ ಯೇಸುವನ್ನು ಏಕೆ ಒಂದು ಗೋದಲಿಯಲ್ಲಿ ಮಲಗಿಸಲಾಗುತ್ತಿದೆ?

ಯೇಸು ಹುಟ್ಟಿದ ರಾತ್ರಿ ಕೆಲವು ಆಶ್ಚರ್ಯ ಸಂಗತಿಗಳು ನಡೆದವು. ಬೇತ್ಲೆಹೇಮ್‌ ಊರಿನ ಹತ್ತಿರ ಕೆಲವು ಕುರುಬರು ಕುರಿಕಾಯುತ್ತಿದ್ದಾಗ ಅವರಿಗೆ ಒಬ್ಬ ದೇವದೂತನು ಕಾಣಿಸಿಕೊಂಡನು. ಆ ದೇವದೂತನು ಕುರುಬರಿಗೆ ‘ಭಯಪಡಬೇಡಿ, ಎಲ್ಲಾ ಜನರಿಗೆ ಮಹಾ ಆನಂದವನ್ನು ಉಂಟುಮಾಡುವಂಥ ಒಳ್ಳೇ ಸುದ್ದಿಯನ್ನು ನಾನು ನಿಮಗೆ ಹೇಳುತ್ತಿದ್ದೇನೆ. ಜನರನ್ನು ರಕ್ಷಿಸಲು ಒಬ್ಬನು ಇಂದು ಹುಟ್ಟಿದ್ದಾನೆ’ ಎಂದು ಹೇಳಿದನು. ಅಂದರೆ ಯೇಸು ಬೆಳೆದು ಒಬ್ಬ ಪ್ರಾಮುಖ್ಯ ವ್ಯಕ್ತಿಯಾಗಲಿದ್ದಾನೆ ಎಂದು ಅವನು ಹೇಳುತ್ತಿದ್ದನು.—ಲೂಕ 2:10, 11.

ಈ ದೇವದೂತನು ಯಾವ ಒಳ್ಳೇ ಸುದ್ದಿಯನ್ನು ಕುರುಬರಿಗೆ ತಿಳಿಸಿದನು?

ಗೋದಲಿಯಲ್ಲಿ ಮಲಗಿಸಲಾಗಿರುವ ಯೇಸುವನ್ನು ಆ ಕುರುಬರು ಬೇತ್ಲೆಹೇಮಿನಲ್ಲಿ ನೋಡಬಹುದೆಂದು ದೇವದೂತನು ತಿಳಿಸಿದನು. ಥಟ್ಟನೆ ಆಕಾಶದಲ್ಲಿ ದೇವದೂತರ ಸಮೂಹ ಕಾಣಿಸಿತು. ಆ ದೇವದೂತರೆಲ್ಲರೂ ಸೇರಿ ಯೆಹೋವ ದೇವರನ್ನು ಸ್ತುತಿಸಿದರು. ‘ದೇವರಿಗೆ ಮಹಿಮೆಯಾಗಲಿ ಮತ್ತು ಭೂಮಿಯಲ್ಲಿ ದೇವರ ಪ್ರಸನ್ನತೆಯಿರುವ ಜನರ ಮಧ್ಯೆ ಶಾಂತಿಯಿರಲಿ’ ಎಂದು ಹಾಡಿದರು.—ಲೂಕ 2:12-14.

ದೇವದೂತರು ಹೋದ ಮೇಲೆ ಆ ಕುರುಬರು ಬೇತ್ಲೆಹೇಮಿಗೆ ಬಂದರು. ದೇವದೂತನು ಹೇಳಿದಂತೆ ಅಲ್ಲಿ ಪುಟಾಣಿ ಯೇಸುವನ್ನು ಕಂಡರು. ಯೇಸುವಿನ ಬಗ್ಗೆ ದೇವದೂತನು ಹೇಳಿದ ಎಲ್ಲಾ ವಿಷಯಗಳನ್ನು ಅವರು ಮರಿಯ ಯೋಸೇಫರಿಗೆ ತಿಳಿಸಿದರು. ಮರಿಯಳಿಗೆ ಎಷ್ಟು ಆನಂದವಾಗಿರಬೇಕಲ್ವಾ. ಯೇಸುವಿನ ತಾಯಿಯಾಗಲು ಒಪ್ಪಿಕೊಂಡದ್ದಕ್ಕಾಗಿ ಅವಳೆಷ್ಟು ಸಂತೋಷಪಟ್ಟಿರಬೇಕು!

ಮರಿಯ ಯೋಸೇಫರು ಯೇಸುವನ್ನು ಅಲ್ಲಿಂದ ನಜರೇತ್‌ ಎಂಬ ಊರಿಗೆ ಕರೆದುಕೊಂಡು ಹೋದರು. ಯೇಸು ತನ್ನ ಬಾಲ್ಯದ ದಿನಗಳನ್ನು ಕಳೆದದ್ದು ಅಲ್ಲಿಯೇ. ಅವನು ದೊಡ್ಡವನಾದಾಗ ದೇವರ ಕುರಿತು ಕಲಿಸಲು ಆರಂಭಿಸಿದನು. ದೇವರು ಯೇಸುವಿಗೆ ಭೂಮಿಯಲ್ಲಿ ಮಾಡಲು ಕೊಟ್ಟ ಕೆಲಸಗಳಲ್ಲಿ ಇದು ಒಂದಾಗಿತ್ತು. ಈ ಕೆಲಸವನ್ನು ಯೇಸು ಮನಸ್ಸಾರೆ ಮಾಡಿದನು. ಏಕೆಂದರೆ, ಅವನಿಗೆ ತನ್ನ ತಂದೆಯಾದ ಯೆಹೋವ ದೇವರ ಮೇಲೆ ಅಪಾರ ಪ್ರೀತಿ ಇತ್ತು.

ಮಹಾ ಬೋಧಕನಾದ ಯೇಸು ಯೆಹೋವನ ಕುರಿತು ಜನರಿಗೆ ಕಲಿಸಲು ಆರಂಭಿಸುವ ಮುಂಚೆ, ಸ್ನಾನಿಕನಾದ ಯೋಹಾನನಿಂದ ಯೋರ್ದನ್‌ ನದಿಯಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡನು. ಆಗ ಒಂದು ವಿಸ್ಮಯಕರ ಸಂಗತಿ ನಡೆಯಿತು! ದೀಕ್ಷಾಸ್ನಾನ ಪಡೆದು ಯೇಸು ಯೋರ್ದನ್‌ ನದಿಯ ನೀರಿನಿಂದ ಮೇಲಕ್ಕೆ ಬರುತ್ತಿರುವಾಗ ಯೆಹೋವನು ಸ್ವರ್ಗದಿಂದ, “ಇವನು ಪ್ರಿಯನಾಗಿರುವ ನನ್ನ ಮಗನು; ಇವನನ್ನು ನಾನು ಮೆಚ್ಚಿದ್ದೇನೆ” ಎಂದು ಹೇಳಿದನು. (ಮತ್ತಾಯ 3:17) ನಿನಗೆ ನಿನ್ನ ಅಪ್ಪಅಮ್ಮ, ‘ನನ್‌ ಮುದ್ದು ಮಗು ನೀನು’ ಅಂತ ಪ್ರೀತಿಯಿಂದ ಹೇಳಿದರೆ ನಿನಗೆ ಖುಷಿ ಆಗುತ್ತೆ ಅಲ್ವಾ?— ಅದೇ ರೀತಿ ಯೇಸುವಿಗೂ ಖುಷಿಯಾಯಿತು.

ಯೇಸು ಯಾವಾಗಲೂ ಸತ್ಯವನ್ನೇ ಹೇಳುತ್ತಿದ್ದನು. ತಾನೇ ದೇವರೆಂದು ಜನರಿಗೆ ಹೇಳುತ್ತಾ ಸೋಗು ಹಾಕುತ್ತಿರಲಿಲ್ಲ. ಯೆಹೋವನೇ ದೇವರಾಗಿದ್ದಾನೆಂದು ಸತ್ಯವನ್ನೇ ನುಡಿದನು. ‘ದೇವರ ಮಗ’ ಎಂದು ಯೇಸು ಕರೆಯಲ್ಪಡುವನು ಎಂದು ಗಬ್ರಿಯೇಲ ದೂತನು ಮರಿಯಳಿಗೆ ಹೇಳಿದ್ದನು. ಯೇಸು ಕೂಡ ತಾನು ದೇವರ ಮಗನಾಗಿದ್ದೇನೆ ಎಂದೇ ಜನರಿಗೆ ಹೇಳಿದನು. “ತಂದೆಯು ನನಗಿಂತಲೂ ದೊಡ್ಡವನು” ಎಂದು ಹೇಳಿದನೇ ಹೊರತು ತಂದೆಗಿಂತ ತನಗೆ ಹೆಚ್ಚು ತಿಳಿದಿದೆ ಎಂದು ನಟಿಸಲಿಲ್ಲ.—ಯೋಹಾನ 14:28.

ಭೂಮಿಗೆ ಬರುವ ಮುಂಚೇನೂ ಯೇಸು ಸ್ವರ್ಗದಲ್ಲಿ ತನ್ನ ತಂದೆ ಹೇಳಿದ ಪ್ರತಿಯೊಂದು ಕೆಲಸವನ್ನು ಚಾಚೂತಪ್ಪದೆ ಮಾಡುತ್ತಿದ್ದನು. ಆಯ್ತು ಮಾಡುತ್ತೀನಿ ಅಂತ ಹೇಳಿ ತಪ್ಪಿಸಿಕೊಳ್ಳುತ್ತಿರಲಿಲ್ಲ. ಬದಲಿಗೆ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದನು. ತಂದೆಯೆಂದರೆ ಅವನಿಗೆ ಪಂಚಪ್ರಾಣ. ಹಾಗಾಗಿ ತಂದೆ ಹೇಳಿದ ಮಾತನ್ನು ಮೀರುತ್ತಿರಲಿಲ್ಲ. ಭೂಮಿಗೆ ಬಂದಾಗಲೂ ಅಷ್ಟೇ. ತನ್ನ ತಂದೆ ಯಾವ ಕೆಲಸವನ್ನು ಮಾಡಲು ಹೇಳಿ ಕಳುಹಿಸಿದನೋ ಆ ಕೆಲಸವನ್ನು ಶ್ರದ್ಧೆಯಿಂದ ಮಾಡಿದನು. ಬೇರೆ ಯಾವುದೋ ಕೆಲಸವನ್ನು ಮಾಡುತ್ತಾ ಕಾಲಕಳೆಯಲಿಲ್ಲ. ಯೆಹೋವನಿಗೆ ಯೇಸುವೆಂದರೆ ಏಕೆ ಅಷ್ಟೊಂದು ಅಚ್ಚುಮೆಚ್ಚು ಅಂತ ಈಗ ತಿಳಿಯಿತಾ?

ನಾವು ಕೂಡ ಯೆಹೋವನಿಗೆ ಅಚ್ಚುಮೆಚ್ಚಿನವರಾಗಿರಲು ಇಷ್ಟಪಡುತ್ತೇವೆ ಅಲ್ವಾ?— ಹಾಗಾದರೆ ಯೇಸುವಿನಂತೆ ನಾವು ಸಹ ದೇವರು ಹೇಳುವ ಮಾತನ್ನು ತಪ್ಪದೇ ಕೇಳಬೇಕು. ದೇವರು ನಮ್ಮೊಂದಿಗೆ ಬೈಬಲಿನ ಮುಖಾಂತರ ಮಾತಾಡುತ್ತಾನೆ. ನಾವು ದೇವರ ಮಾತನ್ನು ಕೇಳುತ್ತಿದ್ದೇವೆ ಎಂದು ಬರೀ ಸೋಗುಹಾಕಿಕೊಂಡು ಬೈಬಲ್‌ನಲ್ಲಿ ಇಲ್ಲದ ವಿಷಯಗಳನ್ನು ನಂಬುವುದಾಗಲಿ ತಪ್ಪೆಂದು ದೇವರು ಹೇಳುವ ವಿಷಯಗಳನ್ನು ಮಾಡುವುದಾಗಲಿ ಸರಿನಾ?— ನೆನಪಿಡು, ನಾವು ನಿಜವಾಗಿಯೂ ಯೆಹೋವನನ್ನು ಪ್ರೀತಿಸಿದರೆ ಆತನನ್ನು ಸಂತೋಷಪಡಿಸಲು ನಮ್ಮಿಂದ ಆಗುವುದನ್ನೆಲ್ಲಾ ನಾವು ಮನಸ್ಸಾರೆ ಮಾಡುತ್ತೇವೆ.

ಯೇಸುವಿನ ಬಗ್ಗೆ ನಾವೇನು ತಿಳಿದುಕೊಳ್ಳಬೇಕು ಮತ್ತು ನಂಬಬೇಕು ಎಂದು ತೋರಿಸುವಂಥ ಈ ಬೈಬಲ್‌ ವಚನಗಳನ್ನು ನಾವೀಗ ಓದೋಣ: ಮತ್ತಾಯ 7:21-23; ಯೋಹಾನ 4:25, 26 ಮತ್ತು 1 ತಿಮೊಥೆಯ 2:5, 6.