ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 84

ಒಬ್ಬ ದೇವದೂತನು ಮರಿಯಳನ್ನು ಭೇಟಿಯಾಗುತ್ತಾನೆ

ಒಬ್ಬ ದೇವದೂತನು ಮರಿಯಳನ್ನು ಭೇಟಿಯಾಗುತ್ತಾನೆ

ಈ ಸುಂದರಿಯಾದ ಸ್ತ್ರೀಯ ಹೆಸರು ಮರಿಯ. ಅವಳು ನಜರೇತ್‌ ಎಂಬ ಊರಿನಲ್ಲಿ ಜೀವಿಸುವ ಒಬ್ಬಾಕೆ ಇಸ್ರಾಯೇಲ್ಯಳು. ಅವಳು ತುಂಬ ಒಳ್ಳೆಯ ಸ್ತ್ರೀಯೆಂದು ದೇವರಿಗೆ ತಿಳಿದದೆ. ಆದುದರಿಂದಲೇ ಆತನು ತನ್ನ ದೂತನಾದ ಗಬ್ರಿಯೇಲನನ್ನು ಅವಳ ಹತ್ತಿರ ಕಳುಹಿಸಿದ್ದಾನೆ. ಗಬ್ರಿಯೇಲನು ಮರಿಯಳಿಗೆ ಏನನ್ನು ಹೇಳಲು ಬಂದಿದ್ದಾನೆಂದು ನಿಮಗೆ ತಿಳಿದಿದೆಯೇ? ನಾವು ನೋಡೋಣ.

‘ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ. ಯೆಹೋವನು ನಿನ್ನ ಸಂಗಡ ಇದ್ದಾನೆ’ ಎಂದು ಗಬ್ರಿಯೇಲನು ಅವಳಿಗೆ ಹೇಳುತ್ತಾನೆ. ಮರಿಯಳು ಈ ವ್ಯಕ್ತಿಯನ್ನು ಹಿಂದೆಂದೂ ನೋಡಿರಲಿಲ್ಲ. ಆಕೆ ಚಿಂತಿತಳಾಗುತ್ತಾಳೆ. ಯಾಕೆಂದರೆ ಅವನ ಮಾತಿನ ಅರ್ಥವೇನೆಂದು ಅವಳಿಗೆ ತಿಳಿಯುವುದಿಲ್ಲ. ಆದರೆ ಆ ಕೂಡಲೆ ಗಬ್ರಿಯೇಲನು ಅವಳ ಹೆದರಿಕೆಯನ್ನು ಹೋಗಲಾಡಿಸುತ್ತಾನೆ.

‘ಮರಿಯಳೇ, ಹೆದರಬೇಡ. ಯೆಹೋವನು ನಿನ್ನನ್ನು ಬಲು ಮೆಚ್ಚಿದ್ದಾನೆ. ಆದುದರಿಂದಲೇ ಅವನು ನಿನಗೊಂದು ಆಶ್ಚರ್ಯಕರ ಸಂಗತಿಯನ್ನು ಮಾಡಲಿದ್ದಾನೆ. ಬಹು ಬೇಗನೆ ನಿನಗೊಂದು ಮಗುವಾಗುವುದು. ನೀನು ಅವನಿಗೆ ಯೇಸು ಎಂದು ಹೆಸರಿಡಬೇಕು’ ಎಂದು ಅವನು ಆಕೆಗೆ ತಿಳಿಸುತ್ತಾನೆ.

ಗಬ್ರಿಯೇಲನು ವಿವರಿಸುತ್ತಾ ಅನ್ನುವುದು: ‘ಈ ಮಗುವು ಮಹಾಪುರುಷನಾಗಿ ಮಹೋನ್ನತ ದೇವರ ಕುಮಾರನೆಂದು ಕರೆಯಲ್ಪಡುವನು. ಯೆಹೋವನು ಅವನನ್ನು ದಾವೀದನಂತಹ ಅರಸನನ್ನಾಗಿ ಮಾಡುವನು. ಆದರೆ ಯೇಸು ಸದಾಕಾಲ ಆಳುವನು, ಅವನ ರಾಜ್ಯಕ್ಕೆ ಅಂತ್ಯವೇ ಇಲ್ಲ!’

‘ಇದೆಲ್ಲಾ ಹೇಗಾದೀತು? ನನಗೆ ಇನ್ನು ಮದುವೆ ಕೂಡ ಆಗಿಲ್ಲ. ನಾನು ಪುರುಷನೊಂದಿಗೆ ಜೀವನ ಮಾಡಿಲ್ಲ. ಹೀಗಿರಲಾಗಿ ನನಗೆ ಮಗುವಾಗುವುದು ಹೇಗೆ ಸಾಧ್ಯ?’ ಎಂದು ಮರಿಯಳು ಕೇಳುತ್ತಾಳೆ.

ಅದಕ್ಕೆ ಗಬ್ರಿಯೇಲನು, ‘ದೇವರ ಶಕ್ತಿಯು ನಿನ್ನ ಮೇಲೆ ಬರುವುದು. ಆದುದರಿಂದ ಹುಟ್ಟುವ ಆ ಮಗುವು ದೇವರ ಮಗನೆನಿಸಿಕೊಳ್ಳುವನು’ ಎಂದುತ್ತರಿಸುತ್ತಾನೆ. ಆಮೇಲೆ ಅವನು ಮರಿಯಳಿಗೆ ಹೇಳುವುದು: ‘ನಿನ್ನ ನೆಂಟರಲ್ಲಿ ಒಬ್ಬಳಾದ ಎಲಿಸಬೇತಳನ್ನು ನೆನಪಿಸಿಕೋ. ಅವಳು ಮುದುಕಿಯಾದಳು, ಅವಳಿಗೆಲ್ಲಿ ಮಕ್ಕಳಾಗುತ್ತದೆ ಎಂದು ಜನರನ್ನುತ್ತಿದ್ದರು. ಆದರೆ ಈಗ ಬೇಗನೆ ಅವಳಿಗೊಬ್ಬ ಮಗನು ಹುಟ್ಟುವನು. ಆದುದರಿಂದ, ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ.’

ಕೂಡಲೆ ಮರಿಯಳು, ‘ಇಗೋ, ನಾನು ಯೆಹೋವನ ದಾಸಿ! ನಿನ್ನ ಮಾತಿನಂತೆ ನನಗಾಗಲಿ’ ಎಂದು ಹೇಳುತ್ತಾಳೆ. ಆಗ ದೇವದೂತನು ಹೊರಟುಹೋಗುತ್ತಾನೆ.

ಮರಿಯಳು ತ್ವರೆಯಾಗಿ ಎಲಿಸಬೇತಳನ್ನು ನೋಡಲು ಹೋಗುತ್ತಾಳೆ. ಮರಿಯಳ ಧ್ವನಿಯನ್ನು ಎಲಿಸಬೇತಳು ಕೇಳುತ್ತಲೇ, ಎಲಿಸಬೇತಳ ಗರ್ಭದಲ್ಲಿದ್ದ ಮಗುವು ಹರ್ಷದಿಂದ ಹಾರಾಡುತ್ತದೆ. ಎಲಿಸಬೇತಳು ದೇವರಾತ್ಮದಿಂದ ತುಂಬಿದವಳಾಗಿ ಮರಿಯಳಿಗೆ, ‘ಸ್ತ್ರೀಯರೊಳಗೆ ನೀನು ವಿಶೇಷ ಆಶೀರ್ವಾದ ಹೊಂದಿದವಳು’ ಎನ್ನುತ್ತಾಳೆ. ಮರಿಯಳು ಹೆಚ್ಚುಕಡಿಮೆ ಮೂರು ತಿಂಗಳು ಎಲಿಸಬೇತಳೊಂದಿಗಿದ್ದು ಅನಂತರ ನಜರೇತಿನ ತನ್ನ ಮನೆಗೆ ಹಿಂದಿರುಗಿ ಹೋಗುತ್ತಾಳೆ.

ಮರಿಯಳು ಯೋಸೇಫನೆಂಬ ಪುರುಷನನ್ನು ವಿವಾಹವಾಗಲಿದ್ದಾಳೆ. ಆದರೆ ಮರಿಯಳಿಗೆ ಮಗುವಾಗಲಿದೆಯೆಂದು ಅವನು ತಿಳಿದಾಗ, ಅವಳನ್ನು ವಿವಾಹವಾಗಬಾರದೆಂದು ಎಣಿಸುತ್ತಾನೆ. ಆಗ ದೇವದೂತನು ಅವನಿಗೆ, ‘ಮರಿಯಳನ್ನು ನಿನ್ನ ಪತ್ನಿಯಾಗಿ ತೆಗೆದುಕೊಳ್ಳುವುದಕ್ಕೆ ಅಂಜಬೇಡ. ಯಾಕೆಂದರೆ ಅವಳಿಗೆ ಮಗುವನ್ನು ಕೊಟ್ಟಾತನು ದೇವರೇ’ ಎಂದು ಹೇಳುತ್ತಾನೆ. ಆಗ ಮರಿಯ ಮತ್ತು ಯೋಸೇಫ ಮದುವೆಯಾಗುತ್ತಾರೆ. ಮತ್ತು ಯೇಸು ಹುಟ್ಟುವುದಕ್ಕಾಗಿ ಕಾಯುತ್ತಾರೆ.