ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 30

ಭಯವನ್ನು ಜಯಿಸಲು ನೆರವು

ಭಯವನ್ನು ಜಯಿಸಲು ನೆರವು

ಯೆಹೋವನ ಸೇವೆಮಾಡುವುದು ಸುಲಭ ಅಂತ ನಿನಗೆ ಅನಿಸುತ್ತದಾ?— ಸುಲಭ ಅಂತ ಮಹಾ ಬೋಧಕನು ಹೇಳಲಿಲ್ಲ. ಬದಲಿಗೆ, ತಾನು ಸಾಯುವ ಮುಂಚಿನ ರಾತ್ರಿ ತನ್ನ ಅಪೊಸ್ತಲರಿಗೆ ಹೀಗೆ ಹೇಳಿದನು: ‘ಲೋಕವು ನಿಮ್ಮನ್ನು ದ್ವೇಷಿಸುವುದಾದರೆ ಅದು ನಿಮ್ಮನ್ನು ದ್ವೇಷಿಸುವುದಕ್ಕಿಂತ ಮುಂಚೆ ನನ್ನನ್ನು ದ್ವೇಷಿಸಿದೆ ಎಂದು ನಿಮಗೆ ಗೊತ್ತಿರಲಿ.’—ಯೋಹಾನ 15:18.

ಆ ಸಂದರ್ಭದಲ್ಲಿ ಪೇತ್ರನು ಜಂಬ ಕೊಚ್ಚಿಕೊಳ್ಳುತ್ತಾ ಯೇಸುವನ್ನೆಂದೂ ಬಿಟ್ಟುಹೋಗುವುದಿಲ್ಲ ಎಂದು ಹೇಳಿದನು. ಆದರೆ ತನ್ನ ಪರಿಚಯ ಇಲ್ಲವೆಂದು ಆ ರಾತ್ರಿಯೇ ಅವನು ಮೂರು ಬಾರಿ ಹೇಳುವನೆಂದು ಯೇಸು ತಿಳಿಸಿದನು. ಹಾಗೇ ನಡೆಯಿತು. (ಮತ್ತಾಯ 26:31-35, 69-75) ಪರಿಚಯವಿದ್ದರೂ ಯೇಸು ಯಾರೋ ಗೊತ್ತಿಲ್ಲವೆಂದು ಪೇತ್ರನು ಹೇಳಿದನು. ಹಾಗೆ ಹೇಳಲು ಕಾರಣವೇನು?— ಭಯ. ಪೇತ್ರನು ಜನರಿಗೆ ಭಯಪಟ್ಟನು. ಇತರ ಅಪೊಸ್ತಲರು ಸಹ ಭಯಗೊಂಡಿದ್ದರು.

ಅವರೇಕೆ ಭಯಗೊಂಡಿದ್ದರು ಗೊತ್ತಾ?— ಏಕೆಂದರೆ ಒಂದು ಮುಖ್ಯವಾದ ವಿಷಯವನ್ನು ಅವರು ಮಾಡಿರಲಿಲ್ಲ. ಅದೇನೆಂದು ನಾವು ತಿಳಿದುಕೊಳ್ಳಲೇ ಬೇಕು. ಆಗ ಬೇರೆಯವರು ಏನೇ ಹೇಳಲಿ, ಏನೇ ಮಾಡಲಿ ಯೆಹೋವನ ಸೇವೆಮಾಡುವಂತೆ ನಮಗೆ ಧೈರ್ಯ ಸಿಗುತ್ತೆ. ನಾವೀಗ ಯೇಸು ಅಪೊಸ್ತಲರೊಂದಿಗೆ ಕಳೆದ ಕೊನೆಯ ರಾತ್ರಿಯಲ್ಲಿ ನಡೆದ ಒಂದು ಘಟನೆ ಬಗ್ಗೆ ನೋಡೋಣ.

ಆ ರಾತ್ರಿ ಮೊದಲು ಅವರು ಒಟ್ಟುಗೂಡಿ ಪಸ್ಕ ಹಬ್ಬವನ್ನು ಆಚರಿಸುತ್ತಾರೆ. ಆ ಹಬ್ಬವನ್ನು ವರ್ಷ ವರ್ಷವೂ ಆಚರಿಸಲಾಗುತ್ತಿತ್ತು. ಆ ದಿನ ಒಂದು ವಿಶೇಷ ಊಟವನ್ನು ಏರ್ಪಡಿಸಲಾಗುತ್ತಿತ್ತು. ಈಜಿಪ್ಟಿನ ಗುಲಾಮಗಿರಿಯಿಂದ ಬಿಡುಗಡೆಯಾದದ್ದನ್ನು ಅದು ದೇವಜನರಿಗೆ ನೆನಪಿಸುತ್ತಿತ್ತು. ಪಸ್ಕ ಹಬ್ಬದ ಊಟವಾದ ಬಳಿಕ ಯೇಸು ಇನ್ನೊಂದು ವಿಶೇಷ ಭೋಜನವನ್ನು ಪ್ರಾರಂಭಿಸುತ್ತಾನೆ. ಇದರ ಕುರಿತ ಹೆಚ್ಚಿನ ವಿವರಗಳನ್ನು ಹಾಗೂ ಯೇಸುವನ್ನು ನೆನಪಿಸಿಕೊಳ್ಳಲು ಆ ಭೋಜನ ನಮಗೆ ಹೇಗೆ ಸಹಾಯಮಾಡುತ್ತದೆ ಎಂದು ನಾವು ಮುಂದೆ ಇನ್ನೊಂದು ಅಧ್ಯಾಯದಲ್ಲಿ ಕಲಿಯಲಿದ್ದೇವೆ. ಆ ಭೋಜನದ ನಂತರ ಯೇಸು ಅಪೊಸ್ತಲರೊಂದಿಗೆ ಸ್ವಲ್ಪ ಸಮಯ ಪ್ರೋತ್ಸಾಹದ ಮಾತುಗಳನ್ನಾಡುತ್ತಾನೆ. ಆ ನಂತರ ಅವರೆಲ್ಲರೂ ಗೆತ್ಸೇಮನೆ ತೋಟಕ್ಕೆ ಹೋಗುತ್ತಾರೆ. ಅದು ಅವರ ಅಚ್ಚುಮೆಚ್ಚಿನ ಸ್ಥಳ. ಸಮಯ ಸಿಕ್ಕಾಗೆಲ್ಲಾ ಅವರು ಅಲ್ಲಿಗೆ ಹೋಗುತ್ತಿದ್ದರು.

ಆ ತೋಟದಲ್ಲಿ ಏಕಾಂತವಾಗಿ ಪ್ರಾರ್ಥಿಸಲು ಯೇಸು ಸ್ವಲ್ಪ ದೂರ ಹೋಗುತ್ತಾನೆ. ಹೋಗುವ ಮುನ್ನ ಪೇತ್ರ, ಯಾಕೋಬ, ಯೋಹಾನರಿಗೂ ಪ್ರಾರ್ಥನೆ ಮಾಡುವಂತೆ ಹೇಳುತ್ತಾನೆ. ಆದರೆ ಅವರು ನಿದ್ರೆ ಮಾಡಿಬಿಡುತ್ತಾರೆ. ಯೇಸು ಪ್ರಾರ್ಥನೆ ಮಾಡಿ ಬಂದು ನೋಡಿದಾಗ ಅವರು ನಿದ್ರೆ ಮಾಡುತ್ತಿರುತ್ತಾರೆ. ಹೀಗೆ ಅವನು ಮೂರು ಬಾರಿ ಹೋಗಿ ಪ್ರಾರ್ಥನೆ ಮಾಡಿ ಬಂದಾಗಲೂ ಅವರು ನಿದ್ರಿಸುತ್ತಿರುತ್ತಾರೆ. ಎಚ್ಚರವಾಗಿರೋದಿಲ್ಲ. (ಮತ್ತಾಯ 26:36-47) ಆ ಸಮಯದಲ್ಲಿ ಅವರು ಎಚ್ಚರವಾಗಿದ್ದು ಪ್ರಾರ್ಥಿಸಿರಬೇಕಿತ್ತು. ಏಕೆ ಗೊತ್ತಾ?— ನೋಡೋಣ.

ಪೇತ್ರ ಯಾಕೋಬ ಯೋಹಾನರು ಏಕೆ ಎಚ್ಚರವಾಗಿರಬೇಕಿತ್ತು?

ಯೇಸು ಮತ್ತು ಅಪೊಸ್ತಲರು ಪಸ್ಕ ಹಬ್ಬ ಆಚರಿಸಿದಾಗ ಇಸ್ಕರಿಯೋತ ಯೂದನು ಅಲ್ಲಿದ್ದನು. ಅವನು ಕಳ್ಳತನ ಮಾಡುತ್ತಿದ್ದದ್ದು ನಿನಗೆ ನೆನಪಿರಬಹುದು. ಈಗ ಅವನು ಯೇಸುವಿಗೆ ದ್ರೋಹ ಮಾಡುತ್ತಾನೆ. ಯೇಸು ಗೆತ್ಸೇಮನೆ ತೋಟದಲ್ಲಿ ಎಲ್ಲಿರುತ್ತಾನೆಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಆದುದರಿಂದ, ಯೇಸುವನ್ನು ಬಂಧಿಸಲಿಕ್ಕಾಗಿ ಅವನು ಸೈನಿಕರನ್ನು ಅಲ್ಲಿಗೆ ಕರೆದುಕೊಂಡು ಬರುತ್ತಾನೆ. ಆ ಸೈನಿಕರು ಅಲ್ಲಿ ಬಂದಾಗ ಯೇಸು, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳುತ್ತಾನೆ.

ಅದಕ್ಕೆ ಸೈನಿಕರು, “ಯೇಸುವನ್ನು” ಎಂದು ಉತ್ತರಿಸುತ್ತಾರೆ. ಆಗ ಯೇಸುವೇನೂ ಭಯಪಡುವುದಿಲ್ಲ. ಧೈರ್ಯದಿಂದ ‘ನಾನೇ ಯೇಸು’ ಎಂದು ಉತ್ತರಿಸುತ್ತಾನೆ. ಯೇಸುವಿನ ಧೈರ್ಯವನ್ನು ನೋಡಿ ಸೈನಿಕರು ಹೌಹಾರಿ ಹಿಂದೆ ಸರಿದು ನೆಲಕ್ಕೆ ಬೀಳುತ್ತಾರೆ. ಆಗ ಯೇಸು, ‘ನೀವು ಹುಡುಕುತ್ತಿರುವುದು ನನ್ನನ್ನಾದರೆ ನನ್ನ ಅಪೊಸ್ತಲರನ್ನು ಹೋಗಲು ಬಿಡಿರಿ’ ಎಂದು ಹೇಳುತ್ತಾನೆ.—ಯೋಹಾನ 18:1-9.

ಸೈನಿಕರು ಯೇಸುವನ್ನು ಹಿಡಿದು ಕೈಗಳನ್ನು ಬಿಗಿಯಾಗಿ ಕಟ್ಟಿದಾಗ ಅಪೊಸ್ತಲರೆಲ್ಲರೂ ಹೆದರಿ ಅಲ್ಲಿಂದ ಪರಾರಿಯಾಗುತ್ತಾರೆ. ಆದರೆ ಪೇತ್ರ ಯೋಹಾನರು ಯೇಸುವಿಗೆ ಏನಾಗುತ್ತದೆಂದು ನೋಡಲು ಮೆತ್ತಗೆ ಸೈನಿಕರ ಹಿಂದೆನೇ ಹೋಗುತ್ತಾರೆ. ಸೈನಿಕರು ಯೇಸುವನ್ನು ಮಹಾ ಯಾಜಕನಾದ ಕಾಯಫನ ಮನೆಗೆ ಕರೆದುಕೊಂಡು ಹೋಗುತ್ತಾರೆ. ಯೋಹಾನನಿಗೆ ಮಹಾ ಯಾಜಕನ ಪರಿಚಯವಿದ್ದ ಕಾರಣ ಬಾಗಿಲು ಕಾಯುತ್ತಿದ್ದ ಸೇವಕಿಯು ಅವನನ್ನೂ ಪೇತ್ರನನ್ನೂ ಅಂಗಳದೊಳಗೆ ಹೋಗಲು ಬಿಡುತ್ತಾಳೆ.

ಯೇಸುವಿನ ವಿಚಾರಣೆ ನಡೆಸಲಿಕ್ಕಾಗಿ ಯಾಜಕರೆಲ್ಲರೂ ಈಗಾಗಲೇ ಕಾಯಫನ ಮನೆಯಲ್ಲಿ ಕೂಡಿಬಂದಿದ್ದಾರೆ. ಯೇಸುವನ್ನು ಕೊಲ್ಲಬೇಕೆಂಬ ಹಗೆ ಅವರಿಗಿತ್ತು. ಆದುದರಿಂದ ಅವನ ವಿರುದ್ಧ ಸುಳ್ಳು ಸಾಕ್ಷಿಗಳನ್ನು ಹೇಳಿಸುತ್ತಾರೆ. ಆಗ ಕೆಲವರು ಯೇಸುವನ್ನು ಮುಷ್ಟಿಗಳಿಂದ ಗುದ್ದುತ್ತಾರೆ ಮತ್ತು ಮುಖಕ್ಕೆ ಹೊಡೆಯುತ್ತಾರೆ. ಪೇತ್ರನು ಇದೆಲ್ಲವನ್ನು ಅಲ್ಲೇ ನಿಂತು ನೋಡುತ್ತಿದ್ದನು.

ಅವನನ್ನು ಅಂಗಳದೊಳಗೆ ಬಿಟ್ಟಿದ್ದ ಸೇವಕಿಯು ಅವನ ಗುರುತು ಹಿಡಿದು, ‘ನೀನು ಸಹ ಯೇಸುವಿನೊಂದಿಗೆ ಇದ್ದವನು’ ಎಂದು ಹೇಳುತ್ತಾಳೆ. ಆದರೆ ಪೇತ್ರನು, ಯೇಸು ಯಾರೋ ತನಗೆ ಗೊತ್ತಿಲ್ಲವೆಂದು ಅನ್ನುತ್ತಾನೆ. ಸ್ವಲ್ಪ ಸಮಯದ ಬಳಿಕ ಇನ್ನೊಬ್ಬ ಹುಡುಗಿ ಪೇತ್ರನ ಗುರುತು ಹಿಡಿದು, ಅಲ್ಲಿದ್ದವರಿಗೆ, ‘ಇವನು ಯೇಸುವಿನೊಂದಿಗೆ ಇದ್ದನು’ ಎಂದು ಹೇಳುತ್ತಾಳೆ. ಪುನಃ ಪೇತ್ರನು ತನಗೆ ಗೊತ್ತಿಲ್ಲವೆಂದು ನಿರಾಕರಿಸುತ್ತಾನೆ. ಬಳಿಕ ಅಲ್ಲಿದ್ದ ಜನರು ಅವನನ್ನು ನೋಡಿ, “ಖಂಡಿತವಾಗಿ ನೀನು ಸಹ ಅವರಲ್ಲಿ ಒಬ್ಬನು” ಎಂದು ಹೇಳುತ್ತಾರೆ. ಮೂರನೆಯ ಸಲವೂ ಪೇತ್ರನು ಅದನ್ನು ಅಲ್ಲಗಳೆಯುತ್ತಾ, “ಆ ಮನುಷ್ಯನನ್ನು ನಾನರಿಯೆ” ಎಂದು ಹೇಳುತ್ತಾನೆ. ಮಾತ್ರವಲ್ಲ ಯೇಸುವಿನ ಪರಿಚಯ ತನಗಿಲ್ಲವೆಂದು ಆಣೆಯನ್ನು ಸಹ ಇಡುತ್ತಾನೆ. ಆಗ ಯೇಸು ಹಿಂದೆ ತಿರುಗಿ ಪೇತ್ರನನ್ನು ನೋಡುತ್ತಾನೆ.—ಮತ್ತಾಯ 26:57-75; ಲೂಕ 22:54-62; ಯೋಹಾನ 18:15-27.

ಯೇಸುವಿನ ಪರಿಚಯವೇ ಇಲ್ಲವೆಂದು ಹೇಳುವಷ್ಟು ಪೇತ್ರನು ಭಯಪಟ್ಟದ್ದೇಕೆ?

ಪೇತ್ರನು ಏಕೆ ಸುಳ್ಳು ಹೇಳಿದ ಗೊತ್ತಾ?— ಹೌದು, ಅವನಿಗೆ ಭಯವಾಗಿತ್ತು. ಅವನೇಕೆ ಅಷ್ಟೊಂದು ಭಯಪಟ್ಟನು? ಧೈರ್ಯ ಕಳೆದುಕೊಳ್ಳಲು ಕಾರಣವೇನು? ಸ್ವಲ್ಪ ಯೋಚಿಸಿ ನೋಡು. ಧೈರ್ಯಕ್ಕಾಗಿ ಯೇಸು ಏನು ಮಾಡಿದ್ದನು?— ಅವನು ದೇವರಿಗೆ ಪ್ರಾರ್ಥಿಸಿದ್ದನು. ದೇವರು ಅವನಿಗೆ ಧೈರ್ಯ ಕೊಟ್ಟನು. ನಿನಗೆ ನೆನಪಿರಬಹುದು ಎಚ್ಚರವಾಗಿದ್ದು ಪ್ರಾರ್ಥನೆ ಮಾಡುವಂತೆ, ಯೇಸು ಒಂದಲ್ಲ ಮೂರು ಬಾರಿ ಹೇಳಿದ್ದನು. ಆದರೆ ಪೇತ್ರನು ಏನು ಮಾಡಿದನು?—

ಪ್ರತಿ ಸಾರಿನೂ ನಿದ್ರೆಮಾಡಿದನು. ಪ್ರಾರ್ಥನೆ ಮಾಡಲಿಲ್ಲ. ಎಚ್ಚರವಾಗಿಯೂ ಇರಲಿಲ್ಲ. ಹಾಗಾಗಿ ಯೇಸುವಿನ ಬಂಧನವನ್ನು ಅವನು ಎದುರುನೋಡಿರಲಿಲ್ಲ. ಅದು ಅನಿರೀಕ್ಷಿತವಾಗಿತ್ತು. ವಿಚಾರಣೆಯ ವೇಳೆಯಲ್ಲಿ ಜನರು ಯೇಸುವನ್ನು ಹೊಡೆದು ಮರಣದಂಡನೆಗೆ ಒಳಪಡಿಸಲು ಸಂಚು ಹೂಡಿದಾಗ ಪೇತ್ರನು ತುಂಬಾ ದಿಗಿಲುಬಿದ್ದನು. ಆದರೆ ನಿನಗೆ ನೆನಪಿದೆಯಾ ಇದೆಲ್ಲಾ ನಡೆಯುವ ಕೆಲವೇ ಗಂಟೆಗಳ ಮುಂಚೆ ಯೇಸು ಅಪೊಸ್ತಲರಿಗೆ ಏನನ್ನು ಎದುರುನೋಡುವಂತೆ ಹೇಳಿದ್ದನು?— ಲೋಕವು ತನ್ನನ್ನು ದ್ವೇಷಿಸಿದಂತೆಯೇ ಅವರನ್ನೂ ದ್ವೇಷಿಸುವುದು ಎಂದು ಹೇಳಿದ್ದನಲ್ವಾ.

ಪೇತ್ರನಂತೆ ನಿನಗೆ ಯಾವ ಸನ್ನಿವೇಶ ಎದುರಾಗಬಹುದು?

ಪೇತ್ರನಿಗೆ ಆದಂತೆ ಕೆಲವೊಮ್ಮೆ ನಮ್ಮಲ್ಲೂ ಭಯ ಹುಟ್ಟಿಕೊಳ್ಳಬಹುದು. ಉದಾಹರಣೆಗೆ, ನಿನ್ನ ತರಗತಿಯಲ್ಲಿರುವ ಕೆಲವು ಮಕ್ಕಳು, ಧ್ವಜ ವಂದನೆ ಮಾಡದಿರುವ ಮಕ್ಕಳ ಕುರಿತೋ ಕ್ರಿಸ್ಮಸ್‌ ಆಚರಿಸದಿರುವ ಮಕ್ಕಳ ಕುರಿತೋ ಏನೇನೋ ಗುಸುಗುಸು ಮಾತಾಡುತ್ತಿದ್ದಾರೆ ಅಂತ ಇಟ್ಟುಕೋ. ಅವರಲ್ಲೊಬ್ಬರು ನಿನಗೆ, “ಏಯ್‌, ನೀನು ಧ್ವಜ ವಂದನೆ ಮಾಡೋದಿಲ್ಲ ಅಲ್ವಾ?” ಅಂತ ಕೇಳಿಬಿಡಬಹುದು. ಅಥವಾ ಬೇರೆಯವರು, “ನೀನು ಕ್ರಿಸ್ಮಸ್‌ ಹಬ್ಬ ಮಾಡೋದಿಲ್ಲವಂತೆ ನಿಜನಾ?” ಅಂತ ಕೇಳಬಹುದು. ಆಗ ನಿಜ ಹೇಳಲು ನೀನು ಹೆದರುತ್ತೀಯಾ?— ಪೇತ್ರನಂತೆ ಥಟ್ಟನೇ ಸುಳ್ಳು ಹೇಳಿಬಿಡ್ತೀಯಾ?—

ಯೇಸುವಿನ ಪರಿಚಯವೇ ಇಲ್ಲವೆಂದು ಸುಳ್ಳು ಹೇಳಿದ್ದಕ್ಕಾಗಿ ಪೇತ್ರನು ಆಮೇಲೆ ತುಂಬಾ ದುಃಖಪಟ್ಟನು. ತಾನೇನು ಮಾಡಿಬಿಟ್ಟೆ ಎಂದು ಅರಿವಾದಾಗ ಅವನು ಅಲ್ಲಿಂದ ಹೊರಗೆ ಹೋಗಿ ಪಶ್ಚಾತ್ತಾಪಪಟ್ಟು ಅತ್ತನು. ಯೇಸುವಿನ ಮಾತನ್ನು ಮೀರದಿರುವ ದೃಢತೀರ್ಮಾನ ತೆಗೆದುಕೊಂಡನು. (ಲೂಕ 22:32) ಸ್ವಲ್ಪ ಯೋಚಿಸು, ಪೇತ್ರನಂತೆ ಹೆದರಿ ಸುಳ್ಳು ಹೇಳದಿರಲು ನಮಗೆ ಯಾವುದು ಸಹಾಯಮಾಡುತ್ತದೆ?— ಪೇತ್ರನು ಎಚ್ಚರವಾಗಿರಲೂ ಇಲ್ಲ ಪ್ರಾರ್ಥನೆಯೂ ಮಾಡಲಿಲ್ಲ ಅಲ್ವಾ. ಆದುದರಿಂದ, ಮಹಾ ಬೋಧಕನ ಶಿಷ್ಯರಾಗಿರಬೇಕಾದರೆ ನಾವೇನು ಮಾಡಬೇಕು? ನಿನಗೇನು ಅನಿಸುತ್ತದೆ?—

ನಾವು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಬೇಕು. ಯೇಸು ಪ್ರಾರ್ಥನೆ ಮಾಡಿದಾಗ ದೇವರು ಅವನಿಗೆ ಸಹಾಯಮಾಡಲಿಕ್ಕಾಗಿ ಏನು ಮಾಡಿದನು ಗೊತ್ತಾ?— ದೇವದೂತನನ್ನು ಕಳುಹಿಸಿ ಅವನನ್ನು ಬಲಪಡಿಸಿದನು. (ಲೂಕ 22:43) ದೇವದೂತರು ನಮಗೂ ಸಹಾಯ ಮಾಡುವರೋ?— ಬೈಬಲ್‌ ಉತ್ತರಿಸುವುದು: “ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ.” (ಕೀರ್ತನೆ 34:7) ದೇವರ ಸಹಾಯ ಪಡೆಯಬೇಕಾದರೆ ನಾವು ಬರೀ ಪ್ರಾರ್ಥನೆ ಮಾಡಿದರಷ್ಟೇ ಸಾಲದು. ಬೇರೇನು ಮಾಡಬೇಕು ಅಂತ ನಿನಗೆ ಗೊತ್ತಾ?— ಯೇಸು ತನ್ನ ಹಿಂಬಾಲಕರಿಗೆ ಎಚ್ಚರವಾಗಿರುವಂತೆ ಹೇಳಿದನು. ಎಚ್ಚರವಾಗಿರುವಂತೆ ನಮಗೆ ಯಾವುದು ಸಹಾಯ ಮಾಡುತ್ತದೆ?—

ಕ್ರೈಸ್ತ ಕೂಟಗಳಲ್ಲಿ ಕಲಿಸಲಾಗುವ ವಿಷಯಗಳನ್ನು ನಾವು ಗಮನಕೊಟ್ಟು ಆಲಿಸಬೇಕು. ಬೈಬಲನ್ನು ಓದುವಾಗ ಗಮನಕೊಟ್ಟು ಓದಿ ಕಲಿತುಕೊಳ್ಳಬೇಕು. ಅಷ್ಟೇ ಅಲ್ಲ, ಯಾವಾಗಲೂ ಯೆಹೋವನಿಗೆ ಪ್ರಾರ್ಥನೆಮಾಡಿ ಆತನ ಸೇವೆಮಾಡಲು ಸಹಾಯ ಮಾಡುವಂತೆ ಕೇಳಿಕೊಳ್ಳಬೇಕು. ಇದನ್ನೆಲ್ಲಾ ನಾವು ಮಾಡುವಲ್ಲಿ, ಭಯವನ್ನು ಹೋಗಲಾಡಿಸಲು ಬೇಕಾದ ಸಹಾಯ ನಾವು ಪಡೆದುಕೊಳ್ಳುತ್ತೇವೆ. ಅವಕಾಶ ಸಂದರ್ಭಗಳು ಒದಗಿದಾಗ ಮಹಾ ಬೋಧಕನ ಕುರಿತು ಮತ್ತು ಯೆಹೋವನ ಕುರಿತು ಬೇರೆಯವರಿಗೆ ಧೈರ್ಯದಿಂದ ತಿಳಿಸಿ ಆನಂದಿಸುತ್ತೇವೆ.

ಜನರಿಗೆ ಭಯಪಟ್ಟು ನಾವು ಸರಿಯಾದದ್ದನ್ನು ಮಾಡಲು ಹಿಂಜರಿಯಬಾರದು. ಆ ರೀತಿ ಹಿಂಜರಿಯದಂತೆ ಈ ವಚನಗಳು ನಮಗೆ ನೆರವು ನೀಡುತ್ತವೆ: ಜ್ಞಾನೋಕ್ತಿ 29:25; ಯೆರೆಮೀಯ 26:12-15, 20-24 ಮತ್ತು ಯೋಹಾನ 12:42, 43.