ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 47

ಅರ್ಮಗೆದೋನ್‌ ಬಲು ಹತ್ತಿರವಿದೆ!

ಅರ್ಮಗೆದೋನ್‌ ಬಲು ಹತ್ತಿರವಿದೆ!

ದೇವರು ಇನ್ನೆಂದೂ ಲೋಕವನ್ನು ಜಲಪ್ರಳಯದಿಂದ ನಾಶಮಾಡುವುದಿಲ್ಲ ಅಂತ ಒಂದು ಗುರುತು ನೀಡಿದ ಬಗ್ಗೆ ಹಿಂದಿನ ಅಧ್ಯಾಯದಲ್ಲಿ ಕಲಿತೇವಲ್ವಾ. ಆ ಗುರುತೇನೆಂದು ನಿನಗೆ ನೆನಪಿದೆಯಾ?— ಅದೇ ರೀತಿ ಅಪೊಸ್ತಲರು ಯೇಸುವಿನ ಬಳಿ ಗುರುತು ಅಥವಾ ಸೂಚನೆಯೊಂದನ್ನು ಕೇಳಿದ್ದರು. ಯೇಸು ಯಾವಾಗ ಹಿಂದಿರುಗುವನು ಮತ್ತು ಲೋಕದ ಅಂತ್ಯ ಯಾವಾಗ ಆಗುವುದು ಅಂತ ತಿಳಿದುಕೊಳ್ಳಲು ಅದನ್ನು ಕೇಳಿದರು.—ಮತ್ತಾಯ 24:3.

ಯೇಸು ರಾಜ್ಯಭಾರ ವಹಿಸಿಕೊಳ್ಳುವುದು ಸ್ವರ್ಗದಲ್ಲಿ ಅಲ್ವಾ. ಅವನು ಅಲ್ಲಿ ಆಳ್ವಿಕೆ ಆರಂಭಿಸಿದ್ದಾನೆಂದು ಭೂಮಿಯಲ್ಲಿರುವ ಜನರಿಗೆ ಹೇಗೆ ಗೊತ್ತಾಗುತ್ತದೆ? ಅದಕ್ಕಾಗಿ ಯೇಸು ತನ್ನ ಶಿಷ್ಯರಿಗೆ ಸೂಚನೆಯೊಂದನ್ನು ಕೊಟ್ಟನು. ಭೂಮಿಯಲ್ಲಿ ಕೆಲವು ಘಟನೆಗಳು ನಡೆಯುತ್ತವೆಂದೂ ಅವರದಕ್ಕೆ ಗಮನಕೊಡಬೇಕೆಂದೂ ಅವನು ಹೇಳಿದನು. ಆ ಘಟನೆಗಳೆಲ್ಲ ಸಂಭವಿಸುವಾಗ ಸ್ವರ್ಗದಲ್ಲಿ ಯೇಸು ರಾಜನಾಗಿ ಆಳ್ವಿಕೆ ಆರಂಭಿಸಿದ್ದಾನೆ ಅಂತ ತಿಳಿದುಕೊಳ್ಳಬಹುದಿತ್ತು.

ಸೂಚನೆಯಲ್ಲಿನ ಘಟನೆಗಳು ಯಾವಾಗ ಸಂಭವಿಸುವುದು ಎಂದು ಶಿಷ್ಯರು ಎಚ್ಚರವಾಗಿದ್ದು ಗಮನಿಸುವುದು ತುಂಬಾ ಪ್ರಾಮುಖ್ಯವಾಗಿತ್ತು. ಅದನ್ನು ಕಲಿಸಲು ಯೇಸು ಒಂದು ಉದಾಹರಣೆ ಬಳಸಿದನು. “ಅಂಜೂರ ಮರವನ್ನೂ ಇತರ ಎಲ್ಲ ಮರಗಳನ್ನೂ ಗಮನಿಸಿರಿ. ಅವು ಚಿಗುರಿರುವುದನ್ನು ನೋಡುವಾಗ ಬೇಸಿಗೆಯು ಸಮೀಪಿಸಿದೆ ಎಂದು ನೀವಾಗಿಯೇ ತಿಳಿದುಕೊಳ್ಳುತ್ತೀರಿ” ಎಂದು ಹೇಳಿದನು. ಮರಗಳಲ್ಲಿ ಎಲೆಗಳು ಚಿಗುರುವಾಗ ಬೇಸಿಗೆಕಾಲ ಬಂತು ಅಂತ ನಿನಗೆ ಗೊತ್ತಾಗುತ್ತದೆ ಅಲ್ವಾ. ಅದೇ ರೀತಿ, ಯೇಸು ಹೇಳಿದ ವಿಷಯಗಳು ಸಂಭವಿಸುವುದನ್ನು ನೋಡುವಾಗ ಅರ್ಮಗೆದೋನ್‌ ಬಲು ಹತ್ತಿರವಿದೆ ಅಂತ ನೀನು ತಿಳಿದುಕೊಳ್ಳಬಹುದು.—ಲೂಕ 21:29, 30.

ಅಂಜೂರ ಮರದ ಉದಾಹರಣೆಯಿಂದ ಯೇಸು ಯಾವ ಪಾಠ ಕಲಿಸಿದನು?

ಈ ಪುಟ ಮತ್ತು ಮುಂದಿನ ಪುಟದಲ್ಲಿರುವ ಚಿತ್ರಗಳನ್ನು ನೋಡಿದೆಯಾ. ಅವು ದೇವರ ರಾಜ್ಯ ಹತ್ತಿರವಿದೆ ಅನ್ನೋದಕ್ಕೆ ಯೇಸು ಕೊಟ್ಟ ಸೂಚನೆಯಲ್ಲಿನ ಘಟನೆಗಳನ್ನು ವಿವರಿಸುತ್ತವೆ. ಈ ಘಟನೆಗಳು ಸಂಭವಿಸುವಾಗ, ಹಿಂದಿನ ಅಧ್ಯಾಯದಲ್ಲಿ ನಾವು ಕಲಿತಂತೆ ದೇವರ ರಾಜ್ಯದ ರಾಜ ಯೇಸು ಕ್ರಿಸ್ತನು ಎಲ್ಲಾ ಮಾನವ ಸರಕಾರಗಳನ್ನು ನಾಶಮಾಡುವನು.

ಆದುದರಿಂದ ಆ ಎರಡು ಪುಟಗಳಲ್ಲಿರುವ ಚಿತ್ರಗಳನ್ನು ಗಮನವಿಟ್ಟು ನೋಡು. ಅವುಗಳ ಬಗ್ಗೆ ನಾವು ಚರ್ಚಿಸೋಣ. ಈ ಚಿತ್ರಗಳಲ್ಲಿರುವ ಘಟನೆಗಳ ವಿವರವನ್ನು ಮತ್ತಾಯ 24:6-14 ಮತ್ತು ಲೂಕ 21:9-11⁠ರಲ್ಲಿ ನಾವು ಓದಬಹುದು. ಪ್ರತಿಯೊಂದು ಚಿತ್ರವನ್ನು ಸಂಖ್ಯೆಯಿಂದ ಗುರುತಿಸಲಾಗಿರುವುದನ್ನು ಸಹ ಗಮನಿಸು. ಆ ಚಿತ್ರವನ್ನು ವಿವರಿಸುವ ಪ್ಯಾರಗ್ರಾಫ್‌ಗೂ ಅದೇ ಸಂಖ್ಯೆ ಕೊಡಲಾಗಿದೆ. ಯೇಸು ಸೂಚನೆಯಾಗಿ ಕೊಟ್ಟ ಘಟನೆಗಳೆಲ್ಲಾ ಇಂದು ಸಂಭವಿಸುತ್ತಿವೆಯಾ ಅಂತ ನೋಡೋಣ.

(1) ಯೇಸು ಹೇಳಿದ್ದು: “ನೀವು ಯುದ್ಧಗಳಾಗುವುದನ್ನೂ ಯುದ್ಧಗಳ ಸುದ್ದಿಯನ್ನೂ ಕೇಳಿಸಿಕೊಳ್ಳುವಿರಿ. . . . ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು.” ಯುದ್ಧ ನಡೆಯುತ್ತಿದೆ, ಯುದ್ಧ ನಡೆಯಲಿದೆ ಎಂಬ ಸುದ್ದಿ, ವಾರ್ತೆಗಳನ್ನು ನೀನು ಕೇಳಿದ್ದೀಯಾ?— ಇಸವಿ 1914ರಿಂದ 1918ರ ವರೆಗೆ ಒಂದನೇ ಮಹಾಯುದ್ಧ ನಡೆಯಿತು. ಇಸವಿ 1939ರಿಂದ 1945ರ ವರೆಗೆ ಎರಡನೇ ಮಹಾಯುದ್ಧ ನಡೆಯಿತು. ಇದಕ್ಕೆ ಮುಂಚೆ ಈ ರೀತಿಯ ಮಹಾಯುದ್ಧಗಳು ನಡೆದಿರಲಿಲ್ಲ! ಈಗಂತೂ ಪ್ರಪಂಚದ ಮೂಲೆಮೂಲೆಗಳಲ್ಲಿ ಯುದ್ಧಗಳು ನಡೆಯುತ್ತಿವೆ. ಟಿವಿ, ರೇಡಿಯೋ ಹಾಗೂ ಪೇಪರ್‌ಗಳಲ್ಲಿ ಕಣ್ಣಾಯಿಸುವುದಾದರೆ ಯುದ್ಧಗಳ ಬಗ್ಗೆ ಹೆಚ್ಚುಕಡಿಮೆ ದಿನಾಲೂ ಸುದ್ದಿಗಳು ಕಾಣಬರುತ್ತವೆ.

(2) ಯೇಸು ಹೇಳಿದ ಮತ್ತೊಂದು ವಿಷಯ: ‘ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆ ಇರುವುದು.’ ನಿನಗೆ ಗೊತ್ತಿರೋ ಹಾಗೆ ಪ್ರಪಂಚದಲ್ಲಿ ತುಂಬಾ ಜನರಿಗೆ ಒಂದುಹೊತ್ತು ಆಹಾರವೂ ಸಿಗುತ್ತಿಲ್ಲ. ಆಹಾರದ ಕೊರತೆಯಿಂದಾಗಿ ದಿನಾಲೂ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

(3) ಯೇಸು ಮುಂದುವರಿಸುತ್ತಾ ಹೇಳಿದ್ದು: ‘ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಅಂಟುರೋಗಗಳು ಬರುವವು.’ ಅಂಟುರೋಗ ಅಂದರೇನು ನಿನಗೆ ಗೊತ್ತಾ?— ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ರೋಗ. ಇಂಥ ಕೆಲವು ರೋಗ ಜನರ ಜೀವವನ್ನು ಬಲಿತೆಗೆದುಕೊಳ್ಳುತ್ತದೆ. ಸ್ಪ್ಯಾನಿಷ್‌ ಫ್ಲೂ ಎಂಬ ಅಂಟುರೋಗ ಒಂದು ವರ್ಷದ ಅವಧಿಯಲ್ಲಿ ಸುಮಾರು 20 ಲಕ್ಷ ಜನರನ್ನು ಬಲಿತೆಗೆದುಕೊಂಡಿತು. ಅದಕ್ಕಿಂತಲೂ ಹೆಚ್ಚು ಜನ ಇಂದು ಏಡ್ಸ್‌ಗೆ ಬಲಿಯಾಗಿದ್ದಾರೆ. ಅಷ್ಟೇ ಅಲ್ಲ, ಕ್ಯಾನ್ಸರ್‌, ಹೃದ್ರೋಗ ಮುಂತಾದ ಕಾಯಿಲೆಗಳು ಸಹ ಪ್ರತಿವರ್ಷ ಸಾವಿರಾರು ಜೀವಗಳನ್ನು ಬಲಿತೆಗೆದುಕೊಳ್ಳುತ್ತಿವೆ.

(4) ಸೂಚನೆಯ ಇನ್ನೊಂದು ಘಟನೆಯನ್ನು ಯೇಸು ಹೀಗೆ ತಿಳಿಸಿದನು: ‘ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಮಹಾ ಭೂಕಂಪಗಳಾಗುವವು.’ ಭೂಕಂಪವೆಂದರೆ ಏನು ಗೊತ್ತಾ?— ಭೂಕಂಪ ಉಂಟಾದರೆ ನೆಲ ಅಲುಗಾಡುತ್ತದೆ. ಮನೆ ಕಟ್ಟಡಗಳು ಕುಸಿದು ಬೀಳುತ್ತವೆ. ಕೆಲವೊಮ್ಮೆ ಸಾವುನೋವು ಸಂಭವಿಸುತ್ತದೆ. ಇಸವಿ 1914ರಿಂದ ಪ್ರತಿವರ್ಷ ತುಂಬಾ ಭೂಕಂಪಗಳು ಸಂಭವಿಸುತ್ತಿವೆ. ಭೂಕಂಪ ಆದ ಬಗ್ಗೆ ಕೇಳಿದ್ದೀಯಾ?—

(5) ಯೇಸು ಸೂಚನೆಯ ಇನ್ನೊಂದು ಅಂಶವನ್ನು ತಿಳಿಸುತ್ತಾ ‘ಕೆಟ್ಟತನ ಹೆಚ್ಚಾಗುವುದು’ ಎಂದು ಹೇಳಿದನು. ಅದಕ್ಕೇ ದಿನದಿಂದ ದಿನಕ್ಕೆ ಕಳ್ಳತನ ಮತ್ತು ಹಿಂಸಾಚಾರ ಹೆಚ್ಚಾಗುತ್ತಿರೋದು. ಕಳ್ಳಕಾಕರು ಮನೆಗಳಿಗೆ ಕನ್ನಹಾಕಬಹುದು ಎಂಬ ಭೀತಿ ಜನರನ್ನು ಕಾಡುತ್ತಿದೆ. ಈಗಿರುವ ಅಪರಾಧ ಹಿಂಸಾಚಾರಗಳನ್ನು ಲೋಕ ಹಿಂದೆಂದೂ ಕಂಡಿರಲಿಲ್ಲ.

(6) ಸೂಚನೆಯ ಒಂದು ಮುಖ್ಯ ಅಂಶವನ್ನು ಯೇಸು ಈ ಮಾತುಗಳಲ್ಲಿ ವಿವರಿಸಿದನು: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.” (ಮತ್ತಾಯ 24:14) ‘ರಾಜ್ಯದ ಸುವಾರ್ತೆಯನ್ನು’ ನೀನು ನಂಬುವುದಾದರೆ ಅದನ್ನು ಇತರರಿಗೆ ತಿಳಿಸಬೇಕು. ಹಾಗೆ ಮಾಡುವಲ್ಲಿ ಸೂಚನೆಯ ಈ ಅಂಶದ ನೆರವೇರಿಕೆಯಲ್ಲಿ ನೀನೂ ಭಾಗಿಯಾಗಬಲ್ಲೆ.

ಯೇಸು ತಿಳಿಸಿದ ಈ ಸೂಚನೆಯ ಎಲ್ಲಾ ಘಟನೆಗಳು ಹಿಂದಿನಿಂದಲೂ ನಡೆಯುತ್ತಿವೆ ಎಂದು ಕೆಲವರು ವಾದಿಸಬಹುದು. ಆದರೆ ಈ ಎಲ್ಲಾ ಘಟನೆಗಳು ಏಕಕಾಲದಲ್ಲಿ ಪ್ರಪಂಚದ ವಿವಿಧೆಡೆಗಳಲ್ಲಿ ಎಂದೂ ಸಂಭವಿಸಿರಲಿಲ್ಲ. ಹಾಗಾದರೆ, ಸೂಚನೆಯಲ್ಲಿರುವ ಘಟನೆಗಳೆಲ್ಲಾ ಯಾವುದರೆಡೆಗೆ ಬೊಟ್ಟುಮಾಡುತ್ತಿವೆ?— ನಮ್ಮ ಕಣ್ಮುಂದೆ ನಡೆಯುತ್ತಿರುವ ಈ ಘಟನೆಗಳು ದುಷ್ಟ ಲೋಕದ ಅಂತ್ಯ ಹಾಗೂ ದೇವರ ಹೊಸ ಲೋಕದ ಆಗಮನ ತೀರಾ ಸಮೀಪದಲ್ಲಿದೆ ಅಂತ ತೋರಿಸುತ್ತಿವೆ.

ಯೇಸು ಈ ಸೂಚನೆಯನ್ನು ಕೊಟ್ಟಾಗ ಇನ್ನೊಂದು ವಿಷಯದ ಕುರಿತೂ ಹೇಳಿದನು. “ನಿಮ್ಮ ಪಲಾಯನವು ಚಳಿಗಾಲದಲ್ಲಿ . . . ಆಗದಂತೆ ಪ್ರಾರ್ಥಿಸುತ್ತಾ ಇರಿ” ಎಂದು ಅವನು ಹೇಳಿದನು. (ಮತ್ತಾಯ 24:20) ಅವನೇಕೆ ಹಾಗೆ ಹೇಳಿದನೆಂದು ಗೊತ್ತಾ?—

ಸ್ವಲ್ಪ ಯೋಚಿಸು. ಚಳಿಗಾಲದಲ್ಲಿ ಒಬ್ಬನು ಯಾವುದೋ ವಿಪತ್ತಿನಿಂದ ತಪ್ಪಿಸಿಕೊಳ್ಳಲು ಬೇರೊಂದು ಊರಿಗೆ ಪಲಾಯನ ಮಾಡುವಲ್ಲಿ ಏನಾಗಬಹುದು?— ಅದು ಅಷ್ಟೊಂದು ಸುಲಭವಲ್ಲ. ಮೈಕೊರೆಯುವ ಚಳಿಯಲ್ಲಿ ಹೊರಗೆ ಕಾಲಿಡುವುದಾಗಲಿ ಪ್ರಯಾಣ ಮಾಡುವುದಾಗಲಿ ತುಂಬಾ ಅಪಾಯಕಾರಿ. ಒಂದು ವೇಳೆ ಪ್ರಯತ್ನಿಸಿದರೂ ಜೀವ ಕಾಪಾಡಲು ದೊಡ್ಡಸಾಹಸವನ್ನೇ ಮಾಡಬೇಕಾಗಬಹುದು. ಅಪಾಯ ಬಂದಾಗ ಮುಂಜಾಗ್ರತೆ ವಹಿಸದೇ ಬೇರೆ ಕೆಲಸದಲ್ಲಿ ಮಗ್ನನಾಗಿದ್ದು ನಂತರ ತಡವಾಗಿ ಪಲಾಯನ ಮಾಡಲು ಪ್ರಯತ್ನಿಸುವಾಗ ಹಿಮಗಾಳಿಗೆ ಸಿಕ್ಕಿಕೊಂಡು ಪ್ರಾಣ ಕಳೆದುಕೊಂಡರೆ ಎಷ್ಟು ವಿಷಾದಕರ ಅಲ್ವಾ?—

ಚಳಿಗಾಲದಲ್ಲಿ ಪಲಾಯನ ಮಾಡಲು ಪ್ರಯತ್ನಿಸುವುದರ ಕುರಿತು ಯೇಸು ಹೇಳಿದ ಮಾತಿನಲ್ಲಿ ಯಾವ ಪಾಠವಿದೆ?

ಚಳಿಗಾಲದ ಮುಂಚೆನೇ ಪಲಾಯನಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಯೇಸು ಹೇಳಿದಾಗ ಆ ಮಾತಿನಲ್ಲಿದ್ದ ಒಳಾರ್ಥ ಏನೆಂದು ನಿನಗೆ ತಿಳಿತಾ?— ಅರ್ಮಗೆದೋನ್‌ ಹತ್ತಿರವಿದೆ ಅಂತ ನಮಗೆ ಗೊತ್ತಿದೆ ಅಲ್ವಾ. ಹಾಗಾಗಿ ದೇವರ ಸೇವೆಮಾಡುವ ಮೂಲಕ ಆತನ ಮೇಲೆ ನಮಗೆ ಪ್ರೀತಿಯಿದೆ ಅಂತ ರುಜುಪಡಿಸಲು ಈಗಲೇ ನಾವು ಹೆಜ್ಜೆ ತಗೊಳ್ಳಬೇಕು. ನಾವೇನಾದರೂ ತಡಮಾಡಿದರೆ ಕಾಲ ಮಿಂಚಿಹೋಗಿರುತ್ತದೆ ಅಷ್ಟೆ. ಜಲಪ್ರಳಯದ ಸಮಯದಲ್ಲಿ ನಾಶವಾದ ಜನರಿಗೂ ನಮಗೂ ಯಾವ ವ್ಯತ್ಯಾಸ ಇರೋದಿಲ್ಲ. ಅವರು ನೋಹ ಕೊಟ್ಟ ಎಚ್ಚರಿಕೆಯನ್ನು ಕಿವಿಯಾರೆ ಕೇಳಿದರೂ ನಾವೆಯೊಳಗೆ ಹೋಗಲು ಹೆಜ್ಜೆ ತಕ್ಕೊಳ್ಳಲಿಲ್ಲ.

ಅರ್ಮಗೆದೋನ್‌ ಯುದ್ಧದ ನಂತರ ಈ ಭೂಮಿಯಲ್ಲಿ ಪರಿಸ್ಥಿತಿ ಹೇಗಿರುತ್ತದೆ? ಅದನ್ನು ಮುಂದಿನ ಅಧ್ಯಾಯದಲ್ಲಿ ನೋಡೋಣ. ದೇವರ ಸೇವಕರಾದ ನಮ್ಮೆಲ್ಲರಿಗೆ ಯಾವೆಲ್ಲಾ ಆಶೀರ್ವಾದಗಳು ಸಿಗಲಿವೆ ಅಂತನೂ ಕಲಿಯಲಿದ್ದೇವೆ.

ಅರ್ಮಗೆದೋನ್‌ ಹತ್ತಿರವಿದೆ ಎಂದು ತೋರಿಸುವ ಇತರ ವಚನಗಳು ಯಾವುವೆಂದರೆ, 2 ತಿಮೊಥೆಯ 3:1-5 ಮತ್ತು 2 ಪೇತ್ರ 3:3, 4.