ತಿಮೊತಿಗೆ ಬರೆದ ಎರಡನೇ ಪತ್ರ 3:1-17

  • ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ (1-7)

  • ಪೌಲನ ತರಾನೇ ನಡ್ಕೊ (8-13)

  • ‘ನೀನು ಕಲಿತ ವಿಷ್ಯಗಳನ್ನ ಪಾಲಿಸ್ತಾ ಇರು’ (14-17)

    • ಪವಿತ್ರ ಗ್ರಂಥ ಕೊಟ್ಟಿದ್ದು ದೇವರು (16)

3  ಆದ್ರೆ ಈ ವಿಷ್ಯ ಗೊತ್ತಿರಲಿ, ಏನಂದ್ರೆ ಕೊನೇ ದಿನಗಳಲ್ಲಿ+ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ.  ಯಾಕಂದ್ರೆ ತಮ್ಮ ಬಗ್ಗೆನೇ ಯೋಚಿಸುವವರು, ಹಣದಾಸೆ ಇರುವವರು, ತಮ್ಮ ಬಗ್ಗೆ ಕೊಚ್ಕೊಳ್ಳುವವರು, ಅಹಂಕಾರಿಗಳು, ಬೈಯೋರು, ಅಪ್ಪಅಮ್ಮನ ಮಾತು ಕೇಳದವರು, ಮಾಡಿದ ಉಪಕಾರ ಮರೆತುಬಿಡುವವರು, ನಂಬಿಕೆದ್ರೋಹ ಮಾಡುವವರು,⁠  ಕುಟುಂಬದವ್ರನ್ನ ಪ್ರೀತಿಸದವರು, ಯಾವುದಕ್ಕೂ ಒಪ್ಪದವರು, ಬೇರೆಯವ್ರ ಹೆಸ್ರು ಹಾಳು ಮಾಡುವವರು, ತಮ್ಮನ್ನ ಹತೋಟಿಯಲ್ಲಿ ಇಟ್ಕೊಳ್ಳದವರು, ಉಗ್ರರು, ಒಳ್ಳೇದನ್ನ ದ್ವೇಷಿಸುವವರು,  ಮಿತ್ರದ್ರೋಹಿಗಳು, ಹಠಮಾರಿಗಳು, ಜಂಬದಿಂದ ಉಬ್ಬಿದವರು, ದೇವರನ್ನ ಪ್ರೀತಿಸದೆ ತಮ್ಮ ಆಸೆಗಳನ್ನ ತೀರಿಸ್ಕೊಳ್ಳೋಕೆ ಇಷ್ಟಪಡುವವರು,  ಮೇಲೆ ದೇವಭಕ್ತಿಯ ವೇಷ ಹಾಕೊಂಡು ಅದಕ್ಕೆ ತಕ್ಕ ಹಾಗೆ ಜೀವನ ಮಾಡದವರು ಇರ್ತಾರೆ.+ ಇಂಥವ್ರ ಜೊತೆ ಸೇರಬೇಡ.  ಇವ್ರಲ್ಲಿ ಸ್ವಲ್ಪ ಜನ ಮೋಸದಿಂದ ಮನೆಯೊಳಗೆ ನುಗ್ತಾರೆ. ಪಾಪಿಗಳಾಗಿ ತಮ್ಮ ಆಸೆಗಳಿಗೆ ಗುಲಾಮರಾಗಿರೋ ಚಂಚಲ ಸ್ತ್ರೀಯರನ್ನ ಹಿಡ್ಕೊಂಡು ಹೋಗ್ತಾರೆ.  ಇವರು ಕಲಿತಾನೇ ಇರ್ತಾರೆ, ಆದ್ರೆ ಯಾವತ್ತೂ ಸತ್ಯದ ಸರಿಯಾದ ಜ್ಞಾನ ಪಡ್ಕೊಳಲ್ಲ.  ಯನ್ನ ಮತ್ತು ಯಂಬ್ರ ಅನ್ನುವವರು ಮೋಶೆನ ವಿರೋಧಿಸಿದ ತರ ಇವರೂ ಸತ್ಯವನ್ನ ವಿರೋಧಿಸ್ತಾರೆ. ಅವ್ರ ತಲೆ ಪೂರ್ತಿ ಕೆಟ್ಟಿದೆ, ಅವರು ಸತ್ಯದ ಪ್ರಕಾರ ನಡಿದೇ ಇರೋದ್ರಿಂದ ದೇವರು ಅವ್ರನ್ನ ಮೆಚ್ಚಲ್ಲ.  ಅವ್ರಂತೂ ಉದ್ಧಾರ ಆಗಲ್ಲ. ಯಾಕಂದ್ರೆ ಅವರಿಬ್ರೂ ಮೂರ್ಖರು* ಅಂತ ಹೇಗೆ ಎಲ್ರಿಗೆ ಗೊತ್ತಾಯ್ತೋ ಅದೇ ತರ ಇವ್ರೂ ಮೂರ್ಖರೇ ಅಂತ ಗೊತ್ತಾಗುತ್ತೆ.+ 10  ಆದ್ರೆ ನೀನು ಹಾಗಿಲ್ಲ. ನಾನು ಏನು ಕಲಿಸ್ದೆ, ನಾನು ಹೇಗೆ ನಡ್ಕೊಂಡೆ,+ ನನ್ನ ಉದ್ದೇಶ, ನಂಬಿಕೆ, ತಾಳ್ಮೆ, ಪ್ರೀತಿ, ಸಹನೆಯನ್ನ ನೀನು ಚೆನ್ನಾಗಿ ಗಮನಿಸಿದ್ದೀಯ. 11  ಅಂತಿಯೋಕ್ಯ,+ ಇಕೋನ್ಯ+ ಮತ್ತು ಲುಸ್ತ್ರದಲ್ಲಿ+ ನನಗೆ ಬಂದ ಕಷ್ಟಹಿಂಸೆ ಎಲ್ಲ ನಿಂಗೊತ್ತು. ಅದನ್ನೆಲ್ಲ ನಾನು ಸಹಿಸ್ಕೊಂಡೆ. ಒಡೆಯ ಅದೆಲ್ಲದ್ರಿಂದ ನನ್ನನ್ನ ಕಾಪಾಡಿದನು.+ 12  ನಿಜ ಹೇಳಬೇಕಂದ್ರೆ, ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರನ್ನ ಆರಾಧಿಸ್ತಾ* ಜೀವಿಸೋಕೆ ಬಯಸೋ ಎಲ್ರಿಗೂ ಹಿಂಸೆ ಬರುತ್ತೆ.+ 13  ಆದ್ರೆ ಕೆಟ್ಟವರು ಮೋಸಗಾರರು ಕೆಟ್ಟದ್ರಿಂದ ಇನ್ನೂ ಕೆಟ್ಟತನಕ್ಕೆ ಇಳಿತಾರೆ. ಅವರು ಮೋಸಮಾಡ್ತಾ ಮೋಸಹೋಗ್ತಾ ಇರ್ತಾರೆ.+ 14  ಆದ್ರೆ ನೀನು ಕಲಿತ ಮತ್ತು ನಂಬಿದ ವಿಷ್ಯಗಳನ್ನ ಪಾಲಿಸ್ತಾ ಇರು.+ ಯಾಕಂದ್ರೆ ಅದನ್ನೆಲ್ಲ ಯಾರಿಂದ ನೀನು ಕಲಿತೆ ಅಂತ ನಿಂಗೊತ್ತು. 15  ನೀನು ಹುಟ್ಟಿದಾಗಿಂದ*+ ಪವಿತ್ರ ಪುಸ್ತಕದಲ್ಲಿ ಇರೋದನ್ನ ಕಲ್ತಿದ್ದೀಯ.+ ಆ ಪುಸ್ತಕ, ಕ್ರಿಸ್ತ ಯೇಸು ಮೇಲೆ ನೀನು ಇಟ್ಟಿರೋ ನಂಬಿಕೆಯಿಂದ ರಕ್ಷಣೆ ಪಡಿಯೋಕೆ ನಿನ್ನನ್ನ ವಿವೇಕಿಯಾಗಿ ಮಾಡುತ್ತೆ.+ 16  ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು.*+ ಜನ್ರಿಗೆ ಕಲಿಸೋಕೆ,+ ತಪ್ಪನ್ನ ತೋರಿಸೋಕೆ, ಎಲ್ಲ ವಿಷ್ಯವನ್ನ ಸರಿಮಾಡೋಕೆ, ದೇವರ ಆಲೋಚನೆ ಪ್ರಕಾರ ನಮ್ಮ ಆಲೋಚನೆಗಳನ್ನ ತಿದ್ದೋಕೆ ಅದು ಸಹಾಯ ಮಾಡುತ್ತೆ.+ 17  ಇದ್ರಿಂದ ದೇವರ ಸೇವಕನಿಗೆ ಯಾವಾಗ್ಲೂ ಒಳ್ಳೇ ಕೆಲಸಗಳನ್ನ ಮಾಡೋಕೆ ಸಾಮರ್ಥ್ಯ ಸಿಗುತ್ತೆ.

ಪಾದಟಿಪ್ಪಣಿ

ಅಥವಾ “ಅವರಿಬ್ರಿಗೆ ಹುಚ್ಚುತನ.”
ಅಥವಾ “ದೇವರ ಭಕ್ತಿಯಿಂದ.”
ಅಥವಾ “ಚಿಕ್ಕಂದಿನಿಂದ; ಶೈಶವದಿಂದ.”
ಅಕ್ಷ. “ಎಲ್ಲ ಮಾತುಗಳನ್ನ ದೇವರ ಪವಿತ್ರಶಕ್ತಿಯ ಮಾರ್ಗದರ್ಶನೆ ಪ್ರಕಾರ ಬರೆಯಲಾಗಿದೆ.”