ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 2

ಪ್ರೀತಿಯ ದೇವರಿಂದ ಬಂದ ಒಂದು ಪತ್ರ

ಪ್ರೀತಿಯ ದೇವರಿಂದ ಬಂದ ಒಂದು ಪತ್ರ

ನಿನಗೆ ಯಾವ ಪುಸ್ತಕ ತುಂಬಾ ಇಷ್ಟ?— ಕೆಲವು ಮಕ್ಕಳಿಗೆ ಪ್ರಾಣಿಗಳ ಕುರಿತ ಪುಸ್ತಕವೆಂದರೆ ತುಂಬಾ ಇಷ್ಟ. ಬೇರೆ ಮಕ್ಕಳು ಚಿತ್ರಗಳು ತುಂಬಿರುವ ಪುಸ್ತಕವನ್ನು ಇಷ್ಟಪಡುತ್ತಾರೆ. ಈ ರೀತಿಯ ಪುಸ್ತಕವನ್ನು ಓದಲು ತುಂಬಾ ಚೆನ್ನಾಗಿರುತ್ತದೆ, ಮಜಾ ಸಿಗುತ್ತದೆ.

ಆದರೆ, ಆ ಎಲ್ಲಾ ಪುಸ್ತಕಗಳಿಗಿಂತಲೂ ದೇವರ ಕುರಿತು ಸತ್ಯವನ್ನು ಕಲಿಸುವ ಪುಸ್ತಕಗಳು ಉತ್ತಮವಾದವು. ಇವುಗಳಲ್ಲಿ ಒಂದು ಪುಸ್ತಕ ತುಂಬ ಅಮೂಲ್ಯವಾಗಿದೆ. ಅದು ಯಾವುದು ಅಂತ ನಿನಗೆ ಗೊತ್ತಾ?— ಬೈಬಲ್‌.

ಬೈಬಲ್‌ ಇಷ್ಟೊಂದು ಅಮೂಲ್ಯವಾಗಿರುವುದು ಏಕೆ?— ಏಕೆಂದರೆ, ಅದು ದೇವರಿಂದ ಬಂದ ಪುಸ್ತಕವಾಗಿದೆ. ಬೈಬಲ್‌ ದೇವರ ಬಗ್ಗೆ ಮತ್ತು ಆತನು ನಮಗೆ ಕೊಡುವ ಆಶೀರ್ವಾದಗಳ ಬಗ್ಗೆ ತಿಳಿಸುತ್ತದೆ. ದೇವರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ನಾವು ನಡೆದುಕೊಳ್ಳಲು ಏನು ಮಾಡಬೇಕೆಂದು ಸಹ ಈ ಪುಸ್ತಕ ಹೇಳುತ್ತದೆ. ಒಂದು ರೀತಿಯಲ್ಲಿ, ಬೈಬಲ್‌ ದೇವರಿಂದ ಬಂದಿರುವ ಪತ್ರವಾಗಿದೆ.

ದೇವರು ಬೈಬಲನ್ನು ಸ್ವರ್ಗದಲ್ಲಿಯೇ ಬರೆದು ಅದನ್ನು ಮನುಷ್ಯರಿಗೆ ಕೊಡಬಹುದಿತ್ತು. ಆದರೆ ಅವನು ಹಾಗೆ ಮಾಡಲಿಲ್ಲ. ಬೈಬಲನ್ನು ಬರೆಯುವಂತೆ ಭೂಮಿಯಲಿದ್ದ ತನ್ನ ಆರಾಧಕರನ್ನು ಉಪಯೋಗಿಸಿದನು. ಈ ಆರಾಧಕರು ಬೈಬಲನ್ನು ಬರೆದಿರುವುದಾದರೂ ಅದರಲ್ಲಿರುವ ವಿಚಾರಗಳು ಮಾತ್ರ ದೇವರದ್ದೇ.

ದೇವರು ಇರುವುದು ಸ್ವರ್ಗದಲ್ಲಿ. ಹಾಗಾದರೆ ಭೂಮಿಯಲ್ಲಿರುವ ಮನುಷ್ಯರನ್ನು ಉಪಯೋಗಿಸಿ ಬೈಬಲನ್ನು ಬರೆಸಿದ್ದು ಹೇಗೆ?— ಒಂದು ಉದಾಹರಣೆಯ ಮೂಲಕ ಇದನ್ನು ಅರ್ಥಮಾಡಿಕೊಳ್ಳೋಣ. ರೇಡಿಯೋ ನಮ್ಮ ಹತ್ತಿರ ಇರುವುದಾದರೂ ಅದರಲ್ಲಿ ಕೇಳಿಬರುವ ಧ್ವನಿ ತುಂಬಾ ದೂರದಲ್ಲಿರುವ ವ್ಯಕ್ತಿಯ ಧ್ವನಿಯಾಗಿದೆ. ಅದೇ ರೀತಿಯಲ್ಲಿ, ನಾವು ಟಿವಿಯಲ್ಲಿ ದೂರ ದೂರ ದೇಶಗಳಲ್ಲಿರುವ ಜನರನ್ನು ನೋಡುತ್ತೇವೆ. ಮಾತ್ರವಲ್ಲ ಅವರ ಮಾತುಗಳನ್ನು ಸಹ ಕೇಳಿಸಿಕೊಳ್ಳುತ್ತೇವೆ.

ಅಷ್ಟೇನಾ, ಬಾಹ್ಯಾಕಾಶ ನೌಕೆಯಲ್ಲಿ ಕುಳಿತು ಮನುಷ್ಯರು ತುಂಬಾ ದೂರದಲ್ಲಿರುವ ಚಂದ್ರನನ್ನು ತಲಪಬಲ್ಲರು. ಅಲ್ಲಿಂದ ಭೂಮಿಗೆ ಸಂದೇಶಗಳನ್ನು ಕಳುಹಿಸಿಕೊಡಬಲ್ಲರು. ಈ ವಿಷಯ ನಿನಗೆ ಗೊತ್ತಿತ್ತಾ?— ಸಾಧಾರಣ ಮನುಷ್ಯರೇ ಇಷ್ಟೆಲ್ಲ ಮಾಡುವಾಗ ಸ್ವರ್ಗದಿಂದ ಸಂದೇಶಗಳನ್ನು ಕಳುಹಿಸಲು ದೇವರಿಗೆ ಸಾಧ್ಯವಾಗುವುದಿಲ್ಲವಾ?— ಖಂಡಿತ ಸಾಧ್ಯವಿದೆ! ರೇಡಿಯೋ ಟಿ.ವಿ. ಕಂಡುಹಿಡಿಯದಿದ್ದ ಕಾಲದಲ್ಲೇ ದೇವರು ಸ್ವರ್ಗದಿಂದ ಭೂಮಿಗೆ ಸಂದೇಶಗಳನ್ನು ಕಳುಹಿಸಿದ್ದನು.

ದೇವರು ದೂರದಿಂದಲೂ ನಮ್ಮೊಂದಿಗೆ ಮಾತಾಡಸಾಧ್ಯವಿದೆ ಎಂದು ಈ ಚಿತ್ರದಿಂದ ಹೇಗೆ ತಿಳಿಯಬಹುದು?

ಒಮ್ಮೆ ದೇವರು ಮಾತಾಡಿದ್ದನ್ನು ಮೋಶೆಯೆಂಬ ಮನುಷ್ಯನು ತನ್ನ ಕಿವಿಯಾರೆ ಕೇಳಿದನು. ಆದರೆ ಅವನಿಗೆ ದೇವರು ಕಾಣಿಸಲಿಲ್ಲ ಧ್ವನಿ ಮಾತ್ರ ಕೇಳಿಸಿತು. ಈ ಘಟನೆ ನಡೆದಾಗ ಅಲ್ಲಿ ಲಕ್ಷಾಂತರ ಜನರು ನೆರೆದಿದ್ದರು. ಆ ದಿನ ಏನಾಯಿತೆಂದರೆ, ಅಬ್ಬಾ! ಇಡೀ ಬೆಟ್ಟವೇ ಅಲುಗಾಡುವಂತೆ ದೇವರು ಮಾಡಿದನು. ಆಕಾಶದಲ್ಲಿ ಗುಡುಗು ಮಿಂಚು ಉಂಟಾಯಿತು. ಆಗ ಅಲ್ಲಿದ್ದ ಜನರಿಗೆ ದೇವರೇ ಮಾತಾಡಿದನೆಂದು ಗೊತ್ತಾಯಿತು. ಅವರೆಲ್ಲರೂ ಭಯದಿಂದ ಗಡಗಡ ನಡುಗುತ್ತಿದ್ದರು. ಹೆದರಿಕೆಯಿಂದ ಅವರು, ‘ದೇವರು ನಮ್ಮ ಸಂಗಡ ಮಾತಾಡಿದರೆ ನಾವು ಸತ್ತೇ ಹೋಗುವೆವು’ ಎಂದು ಮೋಶೆಗೆ ಹೇಳಿದರು. ಇದೆಲ್ಲಾ ಆದ ನಂತರ ಮೋಶೆ ದೇವರು ಹೇಳಿದನ್ನೆಲ್ಲಾ ಬರೆದುಕೊಂಡನು. ಅಂದು ಮೋಶೆ ಬರೆದದ್ದೆಲ್ಲವನ್ನು ನಾವಿಂದು ಬೈಬಲಿನಲ್ಲಿ ಓದಬಹುದು.—ವಿಮೋಚನಕಾಂಡ 20:18-21.

ಬೈಬಲನ್ನು ಬರೆದ ಈ ವ್ಯಕ್ತಿಗಳ ಹೆಸರುಗಳೇನು?

ಮೋಶೆ ಬೈಬಲಿನ ಮೊದಲ ಐದು ಪುಸ್ತಕಗಳನ್ನು ಬರೆದನು. ಆದರೆ ಬೈಬಲಿನಲ್ಲಿ ಇರುವ ಎಲ್ಲಾ ಪುಸ್ತಕಗಳನ್ನು ಅವನೊಬ್ಬನೇ ಬರೆಯಲಿಲ್ಲ. ಸುಮಾರು 40 ಮಂದಿ ಪುರುಷರ ಮೂಲಕ ದೇವರು ಬೈಬಲನ್ನು ಬರೆಯಿಸಿದನು. ಇವರೆಲ್ಲರೂ ತುಂಬಾ ವರ್ಷಗಳ ಹಿಂದೆ ಜೀವಿಸಿದ್ದ ಜನರಾಗಿದ್ದರು. ಬೈಬಲನ್ನು ಪೂರ್ತಿ ಮಾಡಲು ಅನೇಕ ವರ್ಷಗಳು ಹಿಡಿದವು. ಸುಮಾರು 1,600 ವರ್ಷಗಳ ಕಾಲಾವಧಿಯಲ್ಲಿ ಅದನ್ನು ಬರೆಯಲಾಯಿತು! ಆಶ್ಚರ್ಯಕರ ಸಂಗತಿ ಏನೆಂದರೆ, ಬೈಬಲನ್ನು ಬರೆದವರಲ್ಲಿ ಕೆಲವರು ಎಂದೂ ಒಬ್ಬರನ್ನೊಬ್ಬರು ನೋಡಿರಲಿಲ್ಲ. ಆದರೂ ಅವರು ಬರೆದಿರುವ ವಿಷಯಗಳನ್ನು ನೋಡುವುದಾದರೆ ಒಂದಕ್ಕೊಂದು ಹೊಂದಿಕೆಯಲ್ಲಿವೆ.

ಬೈಬಲನ್ನು ಬರೆಯಲು ದೇವರು ಉಪಯೋಗಿಸಿದ ಕೆಲವರು ಪ್ರಸಿದ್ಧ ವ್ಯಕ್ತಿಗಳಾಗಿದ್ದರು. ಉದಾಹರಣೆಗೆ, ಮೋಶೆ ಕುರಿಕಾಯುವ ಕುರುಬನಾಗಿದ್ದರೂ ಮುಂದೆ ಇಸ್ರಾಯೇಲ್‌ ದೇಶದವರ ನಾಯಕನಾಗಿ ಪ್ರಸಿದ್ಧನಾದನು. ಇನ್ನೊಬ್ಬ ಪ್ರಸಿದ್ಧ ವ್ಯಕ್ತಿ ಸೊಲೊಮೋನ. ಅವನು ಪ್ರಪಂಚದಲ್ಲೇ ತುಂಬಾ ಬುದ್ಧಿವಂತ ಹಾಗೂ ಶ್ರೀಮಂತ ರಾಜನಾಗಿದ್ದನು. ಬೈಬಲನ್ನು ಬರೆದವರಲ್ಲಿ ಇನ್ನಿತರರು ಇವರಷ್ಟು ಪ್ರಸಿದ್ಧ ವ್ಯಕ್ತಿಗಳಾಗಿರಲಿಲ್ಲ. ಉದಾಹರಣೆಗೆ, ಆಮೋಸ ಎಂಬವನು ಅಂಜೂರ ಹಣ್ಣಿನ ತೋಟದಲ್ಲಿ ಕೆಲಸ ಮಾಡುತ್ತಿದ್ದನು.

ಇನ್ನೊಂದು ವಿಷಯ ನಿನಗೆ ಗೊತ್ತಾ? ಬೈಬಲನ್ನು ಬರೆದವರಲ್ಲಿ ಒಬ್ಬನು ಡಾಕ್ಟರ್‌ ಆಗಿದ್ದನು. ಅವನ ಹೆಸರೇನೆಂದು ನಿನಗೆ ಗೊತ್ತಾ?— ಲೂಕ. ಬೈಬಲನ್ನು ಬರೆದ ಮತ್ತೊಬ್ಬ ಲೇಖಕನು ಜನರಿಂದ ತೆರಿಗೆ ವಸೂಲಿ ಮಾಡುವವನಾಗಿದ್ದನು. ಅವನ ಹೆಸರು ಮತ್ತಾಯ. ಇನ್ನೊಬ್ಬ ಲೇಖಕನು ವಕೀಲನಾಗಿದ್ದನು. ಇವನು ಯೆಹೂದಿ ಧರ್ಮದ ನೀತಿನಿಯಮಗಳನ್ನು ಚೆನ್ನಾಗಿ ಬಲ್ಲವನಾಗಿದ್ದನು. ಬೈಬಲಿನಲ್ಲಿ ಬೇರೆಲ್ಲರಿಗಿಂತ ಹೆಚ್ಚು ಪುಸ್ತಕಗಳನ್ನು ಬರೆದಿರುವವನು ಇವನೇ. ಇವನು ಯಾರು ಗೊತ್ತಾ?— ಪೌಲ. ಯೇಸುವಿನ ಗೆಳೆಯರಾಗಿದ್ದ ಪೇತ್ರ ಮತ್ತು ಯೋಹಾನರು ನಿನಗೆ ನೆನಪಿರಬಹುದು. ಅವರು ಸಹ ಬೈಬಲಿನ ಕೆಲವು ಪುಸ್ತಕಗಳನ್ನು ಬರೆದರು. ಇವರು ಮೀನುಗಾರರಾಗಿದ್ದರು.

ಬೈಬಲನ್ನು ಬರೆದವರಲ್ಲಿ ಹೆಚ್ಚಿನವರು, ದೇವರು ಏನೆಲ್ಲಾ ಮಾಡಲಿದ್ದಾನೆ ಎಂಬುದರ ಕುರಿತು ಬರೆದರು. ದೇವರು ಮುಂದೆ ಏನು ಮಾಡುತ್ತಾನೆ ಅಂತ ಅವರಿಗೆ ಹೇಗೆ ಗೊತ್ತಾಯಿತು?— ಹೇಗೆಂದರೆ, ದೇವರು ಅವರಿಗೆ ಆ ಮಾಹಿತಿಯನ್ನು ಕೊಟ್ಟಿದ್ದನು. ಮುಂದೆ ಏನು ನಡೆಯುತ್ತದೆ ಎಂದು ದೇವರು ಅವರಿಗೆ ತಿಳಿಸಿದ್ದನು.

ಮಹಾ ಬೋಧಕನಾದ ಯೇಸು ಭೂಮಿಗೆ ಬರುವ ಸಮಯದಷ್ಟಕ್ಕೆ ಬೈಬಲಿನ ಹೆಚ್ಚಿನ ಪುಸ್ತಕಗಳನ್ನು ಬರೆದು ಮುಗಿಸಲಾಗಿತ್ತು. ಯೇಸು ಭೂಮಿಗೆ ಬರುವ ಮೊದಲು ಎಲ್ಲಿದ್ದನು ಅಂತ ನಿನಗೆ ನೆನಪಿದ್ಯಾ? ಸ್ವರ್ಗದಲ್ಲಿ ತಾನೇ. ಹಾಗಾಗಿ, ದೇವರು ಏನೆಲ್ಲಾ ಮಾಡಿದನು ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಹೀಗಿರುವಾಗ ಬೈಬಲನ್ನು ಕೊಟ್ಟಿದ್ದು ದೇವರೋ ಇಲ್ಲವೋ ಅಂತ ಯೇಸುವಿಗೆ ಗೊತ್ತಿರುತ್ತೆ ಅಲ್ವಾ. ಬೈಬಲನ್ನು ದೇವರೇ ಕೊಟ್ಟಿದ್ದು ಎಂದು ಅವನು ನಂಬಿದನಾ?— ಹೌದು ನಂಬಿದನು.

ದೇವರ ಬಗ್ಗೆ ಜನರೊಂದಿಗೆ ಮಾತಾಡುವಾಗೆಲ್ಲ ಯೇಸು ಬೈಬಲನ್ನು ಉಪಯೋಗಿಸಿದನು. ಕೆಲವೊಮ್ಮೆ ಅದರಿಂದ ಓದಿ ಹೇಳುತ್ತಿದ್ದನು. ಇನ್ನು ಕೆಲವು ಸಂದರ್ಭಗಳಲ್ಲಿ ಬೈಬಲನ್ನು ನೋಡದೆ ಹಾಗೆಯೇ ಹೇಳುತ್ತಿದ್ದನು. ಅದು ಮಾತ್ರವಲ್ಲ, ದೇವರಿಂದ ಪಡೆದ ಇತರ ಅನೇಕ ವಿಷಯಗಳನ್ನು ಸಹ ಯೇಸು ತಿಳಿಸಿದನು. ‘ದೇವರಿಂದ ಕಲಿತ ವಿಷಯಗಳನ್ನೇ ನಾನು ಲೋಕದಲ್ಲಿ ಮಾತಾಡುತ್ತಿದ್ದೇನೆ’ ಎಂದು ಯೇಸು ಹೇಳಿದನು. (ಯೋಹಾನ 8:26) ಸ್ವರ್ಗದಲ್ಲಿ ದೇವರ ಜೊತೆ ಇದ್ದ ಕಾರಣ ಯೇಸು ದೇವರಿಂದ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದನು. ಆ ವಿಷಯಗಳನ್ನೇ ಯೇಸು ನಮಗೆ ತಿಳಿಸಿದನು. ಅವುಗಳನ್ನು ನಾವು ಎಲ್ಲಿ ಓದಬಹುದು?— ಬೈಬಲಿನಲ್ಲಿ. ನಾವು ಓದಬೇಕೆಂದೇ ಅದನ್ನೆಲ್ಲಾ ಬೈಬಲ್‌ನಲ್ಲಿ ಬರೆದಿಡಲಾಗಿದೆ.

ಬೈಬಲನ್ನು ಬರೆದ ಮನುಷ್ಯರು ಅದನ್ನು ಸಾಧಾರಣ ಜನರು ಮಾತಾಡುವ ಭಾಷೆಯಲ್ಲಿಯೇ ಬರೆದರು. ಬೈಬಲಿನ ದೊಡ್ಡ ಭಾಗವನ್ನು ಹೀಬ್ರೂ ಭಾಷೆಯಲ್ಲಿ ಬರೆಯಲಾಯಿತು. ಸ್ವಲ್ಪ ಭಾಗವನ್ನು ಆರಮೇಯಿಕ್‌ ಭಾಷೆಯಲ್ಲಿ ಬರೆಯಲಾಯಿತು. ಉಳಿದ ಭಾಗವನ್ನು ಗ್ರೀಕ್‌ ಭಾಷೆಯಲ್ಲಿ ಬರೆಯಲಾಯಿತು. ಆದರೆ ಇವತ್ತು ಎಲ್ಲರಿಗೂ ಈ ಭಾಷೆ ಓದಲು ಬರುವುದಿಲ್ಲ ಅಲ್ವಾ? ಆದುದರಿಂದಲೇ ಬೇರೆ ಬೇರೆ ಭಾಷೆಗಳಲ್ಲಿ ಬೈಬಲ್‌ ಸಿಗುತ್ತಿದೆ. ಇಂದು ಬೈಬಲ್‌ ಸುಮಾರು 2,260ಕ್ಕೂ ಹೆಚ್ಚಿನ ಭಾಷೆಗಳಲ್ಲಿದೆ. ಅಬ್ಬಾ, ಎಷ್ಟೊಂದು ಭಾಷೆಗಳಲ್ವಾ! ಎಲ್ಲಾ ಭಾಷೆಗಳ ಜನರು ಓದಬೇಕೆಂದು ದೇವರು ಈ ಪತ್ರವನ್ನು ಕೊಟ್ಟಿದ್ದಾನೆ. ಜನರು ಬೈಬಲನ್ನು ತಮ್ಮ ತಮ್ಮ ಭಾಷೆಗಳಿಗೆ ನಕಲು ಮಾಡಿರಬಹುದು. ಆದರೂ ಅದರಲ್ಲಿರುವ ಸಂದೇಶ ಮಾತ್ರ ದೇವರಿಂದಲೇ ಬಂದದ್ದು.

ಬೈಬಲ್‌ನಲ್ಲಿರುವ ಸಂದೇಶ ನಮಗೆ ತುಂಬಾ ಮುಖ್ಯ. ಬೈಬಲನ್ನು ಸಾವಿರಾರು ವರ್ಷಗಳ ಹಿಂದೆ ಬರೆಯಲಾಯಿತೇನೋ ನಿಜ. ಆದರೆ ಅದು ನಮ್ಮ ಸಮಯದಲ್ಲಿ ನಡೆಯುತ್ತಿರುವ ಸಂಗತಿಗಳ ಕುರಿತು ತಿಳಿಸುತ್ತದೆ. ಅಷ್ಟೇ ಅಲ್ಲ, ಮುಂದೆ ದೇವರು ನಮಗಾಗಿ ಏನು ಮಾಡಲಿದ್ದಾನೆ ಅಂತ ಸಹ ತಿಳಿಸುತ್ತದೆ. ಅದನ್ನೆಲ್ಲಾ ತಿಳಿಯಲು ನಿನಗೆ ಆಸೆಯಿಲ್ವಾ? ಅದು ನಮಗೆ ಒಳ್ಳೇ ನಿರೀಕ್ಷೆಯನ್ನು ನೀಡುತ್ತದೆ!

ಬೈಬಲನ್ನು ಓದಿದರೆ ನೀನು ಯಾವೆಲ್ಲಾ ವಿಷಯಗಳನ್ನು ತಿಳಿದುಕೊಳ್ಳಬಲ್ಲೆ?

ನಾವು ಹೇಗೆ ಜೀವಿಸಿದರೆ ದೇವರಿಗೆ ಸಂತೋಷವಾಗುತ್ತದೆ ಎಂದು ಸಹ ಬೈಬಲ್‌ ತಿಳಿಸುತ್ತದೆ. ಯಾವುದು ಸರಿ, ಯಾವುದು ತಪ್ಪು ಅಂತಾನೂ ಅದರಲ್ಲಿದೆ. ಅದನ್ನು ನೀನು, ನಾನೂ ಎಲ್ಲರೂ ತಿಳಿದುಕೊಳ್ಳಲೇಬೇಕು. ಯಾರೆಲ್ಲಾ ಕೆಟ್ಟದ್ದನ್ನು ಮಾಡಿದರು ಮತ್ತು ಅದಕ್ಕಾಗಿ ಅವರು ಏನೆಲ್ಲಾ ತೊಂದರೆ ಅನುಭವಿಸಿದರು ಎಂದು ಬೈಬಲಿನಲ್ಲಿ ಕೊಡಲಾಗಿದೆ. ಇದನ್ನು ಓದುವಾಗ ನಾವು ಏನು ಮಾಡಬಾರದು ಎಂಬ ಪಾಠವನ್ನು ಕಲಿಯುತ್ತೇವೆ. ಅವರು ಅನುಭವಿಸಿದ ತೊಂದರೆಗಳಿಂದಲೂ ದೂರವಿರಬಹುದು. ಒಳ್ಳೇ ಕೆಲಸಗಳನ್ನು ಮಾಡಿದವರ ಬಗ್ಗೆ ಹಾಗೂ ಅವರು ಪಡೆದ ಆಶೀರ್ವಾದಗಳ ಬಗ್ಗೆಯೂ ಬೈಬಲ್‌ ಹೇಳುತ್ತೆ. ಈ ಎಲ್ಲ ವಿಷಯಗಳು ಬೈಬಲ್‌ನಲ್ಲಿ ಕೊಟ್ಟಿರುವುದು ನಮ್ಮ ಪ್ರಯೋಜನಕ್ಕಾಗಿಯೇ.

ಆದರೆ ನಮಗೆ ನಿಜವಾಗಿಯೂ ಬೈಬಲಿನಿಂದ ಪ್ರಯೋಜನ ಸಿಗಬೇಕೆಂದರೆ ಮೊದಲು ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಬೇಕು. ನಮಗೆ ಬೈಬಲನ್ನು ಕೊಟ್ಟವರು ಯಾರು, ನೀನು ಹೇಳ್ತಿಯಾ?— ಹೌದು, ಬೈಬಲನ್ನು ಕೊಟ್ಟಾತನು ದೇವರೇ. ಅಂದ ಹಾಗೆ, ನೀನು ಜಾಣನಾಗಲು ಇಷ್ಟಪಡುತ್ತೀಯ ತಾನೇ? ನಾವು ಜಾಣರೆಂದು ಹೇಗೆ ತೋರಿಸಬಹುದು?— ದೇವರ ಮಾತನ್ನು ಕೇಳಿ ಅದರ ಪ್ರಕಾರ ನಡೆಯುವ ಮೂಲಕ ನಾವು ಜಾಣರಾಗಬಹುದು.

ಆದುದರಿಂದ ನಾವು ಒಟ್ಟಿಗೆ ಬೈಬಲನ್ನು ಓದಬೇಕು. ನಮ್ಮನ್ನು ತುಂಬಾ ಪ್ರೀತಿಸುವ ಒಬ್ಬ ವ್ಯಕ್ತಿ ನಮಗೆ ಪತ್ರ ಕಳುಹಿಸಿದರೆ ಅದನ್ನು ನಾವು ಪುನಃ ಪುನಃ ಓದುತ್ತೇವಲ್ಲಾ? ಅದು ನಮಗೆ ತುಂಬಾ ಮುಖ್ಯವಾಗಿರುತ್ತೆ. ಅದೇ ರೀತಿ ಬೈಬಲ್‌ ಕೂಡ ನಮಗೆ ಮುಖ್ಯವಾಗಿರಬೇಕು. ಏಕೆಂದರೆ ಎಲ್ಲರಿಗಿಂತಲೂ ನಮ್ಮನ್ನು ತುಂಬಾ ತುಂಬಾ ಪ್ರೀತಿಸುವಂಥ ದೇವರಿಂದ ಬಂದ ಪತ್ರ ಅದಾಗಿದೆ.

ಬೈಬಲ್‌ ನಿಜವಾಗಿಯೂ ದೇವರ ವಾಕ್ಯವಾಗಿದೆ ಮತ್ತು ನಮ್ಮ ಪ್ರಯೋಜನಕ್ಕಾಗಿ ಬರೆಯಲಾಗಿದೆ ಎಂದು ಈ ಶಾಸ್ತ್ರವಚನಗಳು ತಿಳಿಸುತ್ತವೆ. ನಾವೀಗ ಅವುಗಳನ್ನು ಓದೋಣ: ರೋಮನ್ನರಿಗೆ 15:4; 2 ತಿಮೊಥೆಯ 3:16, 17 ಮತ್ತು 2 ಪೇತ್ರ 1:20, 21.