ಆದಿಕಾಂಡ 2:1-25

  • ಏಳನೇ ದಿನ ದೇವರ ವಿಶ್ರಾಂತಿ (1-3)

  • ಯೆಹೋವ ದೇವರು ಆಕಾಶ ಭೂಮಿ ಸೃಷ್ಟಿಸಿದನು (4)

  • ಏದೆನ್‌ ತೋಟದಲ್ಲಿ ಗಂಡು ಮತ್ತು ಹೆಣ್ಣು (5-25)

    • ಮಣ್ಣಿಂದ ಮನುಷ್ಯ (7)

    • ತಿನ್ನಬಾರದ ಮರದ ಹಣ್ಣು (15-17)

    • ಹೆಣ್ಣಿನ ಸೃಷ್ಟಿ (18-25)

2  ಈ ರೀತಿ ಆಕಾಶ,* ಭೂಮಿ, ಅವುಗಳಲ್ಲಿ ಇರೋ ಎಲ್ಲವನ್ನ ಸೃಷ್ಟಿಸೋ ಕೆಲಸ ಮುಗಿತು.+  ಏಳನೇ ದಿನ ಆರಂಭವಾಗೋ ಮೊದ್ಲು ದೇವರು ತಾನು ಮಾಡ್ತಿದ್ದ ಕೆಲಸ ಮುಗಿಸಿದನು. ಎಲ್ಲ ಕೆಲಸ ಮುಗಿಸಿ ಏಳನೇ ದಿನ ವಿಶ್ರಾಂತಿ ಪಡಿಯೋಕೆ ಶುರು ಮಾಡಿದನು.+  ದೇವರು ಏಳನೇ ದಿನವನ್ನ ಆಶೀರ್ವದಿಸ್ತಾ ಅದು ಪವಿತ್ರ ಅಂದನು. ಯಾಕಂದ್ರೆ ದೇವರು ತಾನು ಮಾಡಬೇಕಂತ ಇದ್ದ ಎಲ್ಲವನ್ನ ಸೃಷ್ಟಿ ಮಾಡಿ ಅವತ್ತಿಂದ ವಿಶ್ರಾಂತಿ ಮಾಡ್ತಾ ಇದ್ದಾನೆ.  ಹೀಗೆ ಭೂಮಿ ಆಕಾಶ ಸೃಷ್ಟಿ ಆಯ್ತು. ಆ ದಿನ* ಯೆಹೋವ* ದೇವರು ಭೂಮಿ ಆಕಾಶವನ್ನ ಸೃಷ್ಟಿ ಮಾಡಿದನು.+  ಅಲ್ಲಿ ತನಕ ಭೂಮಿ ಮೇಲೆ ಪೊದೆ ಗಿಡಗಳು ಇರಲಿಲ್ಲ. ಯಾಕಂದ್ರೆ ಯೆಹೋವ ದೇವರು ಭೂಮಿ ಮೇಲೆ ಮಳೆ ಬೀಳೋ ಹಾಗೆ ಮಾಡಿರಲಿಲ್ಲ. ಭೂಮಿಯಲ್ಲಿ ವ್ಯವಸಾಯ ಮಾಡೋಕೆ ಮನುಷ್ಯನೂ ಇರಲಿಲ್ಲ.  ಆದ್ರೆ ಭೂಮಿಯಿಂದ ನೀರು ಆವಿಯಾಗಿ ಹೋಗಿ ಆಮೇಲೆ ಇಡೀ ನೆಲನ ಒದ್ದೆ ಮಾಡ್ತಿತ್ತು.  ಆಮೇಲೆ ಯೆಹೋವ ದೇವರು ನೆಲದ ಮಣ್ಣಿಂದ*+ ಮನುಷ್ಯನನ್ನ ರಚಿಸಿ ಅವನ ಮೂಗೊಳಗೆ ಜೀವಶ್ವಾಸ ಊದಿದನು.+ ಆಗ ಆ ಮನುಷ್ಯನಿಗೆ ಜೀವ ಬಂತು.*+  ಯೆಹೋವ ದೇವರು ಪೂರ್ವ ದಿಕ್ಕಲ್ಲಿರೋ ಏದೆನಿನಲ್ಲಿ+ ಒಂದು ತೋಟ ಮಾಡಿ ಆ ಮನುಷ್ಯನನ್ನ ಅಲ್ಲಿ ಇರೋಕೆ ಬಿಟ್ಟನು.+  ಆ ತೋಟದಲ್ಲಿ ನೋಡೋಕೆ ಸುಂದರವಾದ, ತಿನ್ನೋಕೆ ಒಳ್ಳೊಳ್ಳೆ ಹಣ್ಣು ಕೊಡೋ ಎಲ್ಲ ಮರಗಳನ್ನ ಬೆಳೆಯೋ ಹಾಗೆ ಯೆಹೋವ ದೇವರು ಮಾಡಿದನು. ಅಷ್ಟೇ ಅಲ್ಲ ತೋಟದ ಮಧ್ಯದಲ್ಲಿ ಜೀವದ ಮರ*+ ಮತ್ತು ಒಳ್ಳೇದರ ಕೆಟ್ಟದ್ದರ ತಿಳುವಳಿಕೆ ಕೊಡೋ ಮರ*+ ಬೆಳೆಯೋ ಹಾಗೆ ಮಾಡಿದನು. 10  ಏದೆನಿಂದ ಒಂದು ನದಿ ಹರಿತಿತ್ತು. ಅದ್ರಿಂದ ಆ ತೋಟಕ್ಕೆ ನೀರು ಸಿಗ್ತಿತ್ತು. ಆ ನದಿ ಕವಲೊಡೆದು ನಾಲ್ಕು ನದಿಗಳಾಗಿ ಹರಿತು. 11  ಮೊದಲನೇ ನದಿ ಹೆಸರು ಪೀಶೋನ್‌. ಇದು ಚಿನ್ನ ಸಿಗೋ ಹವೀಲಾ ದೇಶದ ಸುತ್ತ ಹರಿಯುತ್ತೆ. 12  ಆ ದೇಶದಲ್ಲಿ ಸಿಗೋ ಚಿನ್ನ ಶುದ್ಧ. ಅಲ್ಲಿ ಸುಗಂಧ ಅಂಟು, ಗೋಮೇದಕ ರತ್ನನೂ ಸಿಗುತ್ತೆ. 13  ಎರಡನೇ ನದಿ ಹೆಸರು ಗೀಹೋನ್‌. ಇದು ಕೂಷ್‌ ದೇಶದ ಸುತ್ತ ಹರಿಯುತ್ತೆ. 14  ಮೂರನೇ ನದಿ ಹೆಸರು ಹಿದ್ದೆಕೆಲ್‌.*+ ಇದು ಅಶ್ಶೂರ್‌+ ದೇಶದ ಪೂರ್ವಕ್ಕೆ ಹರಿಯುತ್ತೆ. ನಾಲ್ಕನೇ ನದಿ ಹೆಸರು ಯೂಫ್ರೆಟಿಸ್‌.+ 15  ಯೆಹೋವ ದೇವರು ಮನುಷ್ಯನನ್ನ ಏದೆನ್‌ ತೋಟಕ್ಕೆ ಕರ್ಕೊಂಡು ಹೋದನು. ವ್ಯವಸಾಯ ಮಾಡೋಕೆ, ಅದನ್ನ ನೋಡ್ಕೊಳ್ಳೋಕೆ ಅವನನ್ನ ಅಲ್ಲಿ ಬಿಟ್ಟನು.+ 16  ಅಷ್ಟೇ ಅಲ್ಲ ಯೆಹೋವ ದೇವರು ಅವನಿಗೆ ಈ ಆಜ್ಞೆ ಕೊಟ್ಟನು: “ನೀನು ಈ ತೋಟದಲ್ಲಿರೋ ಎಲ್ಲ ಮರದ ಹಣ್ಣನ್ನ ಹೊಟ್ಟೆ ತುಂಬ ತಿನ್ನಬಹುದು.+ 17  ಆದ್ರೆ ಒಳ್ಳೇದರ ಕೆಟ್ಟದ್ದರ ತಿಳುವಳಿಕೆ ಕೊಡೋ ಮರದ ಹಣ್ಣನ್ನ ಮಾತ್ರ ತಿನ್ನಬಾರದು. ತಿಂದ್ರೆ ಅದೇ ದಿನ ಸತ್ತು ಹೋಗ್ತಿಯ.”+ 18  ಆಮೇಲೆ ಯೆಹೋವ ದೇವರು “ಮನುಷ್ಯ ಒಬ್ಬನೇ ಇರೋದು ಒಳ್ಳೇದಲ್ಲ. ಅವನಿಗೆ ಸರಿಯಾದ ಜೋಡಿ ಕೊಡ್ತೀನಿ. ಅವನಿಗಾಗಿ ಒಬ್ಬ ಸಹಾಯಕಿಯನ್ನ ಮಾಡ್ತೀನಿ”+ ಅಂದನು. 19  ಯೆಹೋವ ದೇವರು ಮಣ್ಣಿಂದ ಎಲ್ಲ ಕಾಡುಪ್ರಾಣಿ, ಆಕಾಶದಲ್ಲಿ ಹಾರಾಡೋ ಎಲ್ಲ ಜೀವಿಗಳನ್ನ* ರೂಪಿಸ್ತಿದ್ದ. ಆಮೇಲೆ ಅವುಗಳನ್ನ ಅವನ ಹತ್ರ ತಂದು ಅವನು ಪ್ರತಿಯೊಂದಕ್ಕೆ ಏನೇನು ಹೆಸರಿಡ್ತಾನೆ ಅಂತ ನೋಡಿದನು. ಅವನು ಒಂದೊಂದು ಪ್ರಾಣಿಗೆ ಏನು ಹೆಸರಿಟ್ನೋ ಅದೇ ಅದ್ರ ಹೆಸರಾಯ್ತು.+ 20  ಹೀಗೆ ಅವನು ಎಲ್ಲ ಸಾಕುಪ್ರಾಣಿಗೆ, ಆಕಾಶದಲ್ಲಿ ಹಾರಾಡೋ ಎಲ್ಲ ಜೀವಿಗೆ, ಪ್ರತಿಯೊಂದು ಕಾಡುಪ್ರಾಣಿಗೆ ಹೆಸರಿಟ್ಟ. ಆದ್ರೆ ಅವನಿಗೆ ಸಹಾಯ ಮಾಡೋಕೆ ಸರಿಯಾದ ಜೋಡಿ* ಇರಲಿಲ್ಲ. 21  ಹಾಗಾಗಿ ಯೆಹೋವ ದೇವರು ಅವನಿಗೆ ಗಾಢ ನಿದ್ದೆ ಬರಿಸಿದ. ಅವನು ನಿದ್ದೆ ಮಾಡ್ತಿದ್ದಾಗ ಅವನ ಪಕ್ಕೆ ಎಲುಬುಗಳಲ್ಲಿ ಒಂದನ್ನ ತೆಗೆದು ಆ ಜಾಗವನ್ನ ಮಾಂಸದಿಂದ ಮುಚ್ಚಿದನು. 22  ಆಮೇಲೆ ಯೆಹೋವ ದೇವರು ಆ ಮನುಷ್ಯನಿಂದ ತೆಗೆದ ಪಕ್ಕೆಲುಬನ್ನ ಸ್ತ್ರೀಯಾಗಿ ರೂಪಿಸಿದನು. ಅವಳನ್ನ ಅವನ ಹತ್ರ ಕರ್ಕೊಂಡು ಬಂದನು.+ 23  ಆಗ ಅವನು ಹೀಗೆ ಹೇಳಿದ: “ಇವಳೀಗ ನನ್ನ ಎಲುಬುಗಳಿಂದ ಬಂದ ಎಲುಬು,ನನ್ನ ಮಾಂಸದಿಂದ ಬಂದ ಮಾಂಸ ಆಗಿದ್ದಾಳೆ. ಇವಳು ನರನಿಂದ ಬಂದಿರೋದ್ರಿಂದಇವಳನ್ನ ನಾರೀ ಅಂತ ಕರಿತಾರೆ.”+ 24  ಹಾಗಾಗಿ ಪುರುಷ ತನ್ನ ಅಪ್ಪಅಮ್ಮನನ್ನ ಬಿಟ್ಟು ಹೆಂಡತಿ ಜೊತೆ ಇರ್ತಾನೆ.* ಅವರಿಬ್ರು ಒಂದೇ ದೇಹ ಆಗ್ತಾರೆ.+ 25  ಆ ಪುರುಷ ಮತ್ತು ಅವನ ಹೆಂಡತಿ ಬೆತ್ತಲೆಯಾಗಿದ್ರೂ+ ನಾಚಿಕೆಪಡಲಿಲ್ಲ.

ಪಾದಟಿಪ್ಪಣಿ

ಅದು ನಕ್ಷತ್ರ ಗ್ರಹ ಗ್ಯಾಲಕ್ಸಿಗಳು ಇರೋ ವಿಶ್ವ.
ಅದು, ಸೃಷ್ಟಿಯ ಆರು ದಿನಗಳನ್ನ ಸೂಚಿಸುತ್ತೆ.
ಇಲ್ಲಿ ದೇವರ ವೈಯಕ್ತಿಕ ಹೆಸರು יהוה (YHWH) ಮೊತ್ತಮೊದಲ ಸಾರಿ ಬಂದಿದೆ. ಇದು ಬೇರೆಲ್ಲಾ ದೇವರುಗಳಿಂದ ಯೆಹೋವ ಬೇರೆ ಅಂತ ತೋರಿಸುತ್ತೆ. ಪರಿಶಿಷ್ಟ ಎ4 ನೋಡಿ.
ಅಥವಾ “ಧೂಳಿಂದ.”
ಅಕ್ಷ. “ಉಸಿರಾಡೋ ಜೀವಿಯಾದ.” ಪದವಿವರಣೆಯಲ್ಲಿ “ಪ್ರಾಣ” ನೋಡಿ.
ಅಥವಾ “ಟೈಗ್ರಿಸ್‌.”
ಇಲ್ಲಿರೋ ಹೀಬ್ರು ಪದ ಪಕ್ಷಿಗೆ ಮಾತ್ರ ಅಲ್ಲ, ಕೀಟದ ತರ ರೆಕ್ಕೆ ಇರೋ ಬೇರೆ ಜೀವಿಗಳಿಗೂ ಸೂಚಿಸುತ್ತೆ.
ಅಥವಾ “ಸಹಾಯಕಿ.”
ಇದರ ಹೀಬ್ರು ಪದದ ಅರ್ಥ “ಅಂಟಿನ ತರ ಗಟ್ಟಿಯಾಗಿ ಅಂಟಿಕೊಳ್ಳೋದು.”