ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರನ್ನು ಮೆಚ್ಚಿಸಲು ಸಾಧ್ಯನಾ?

ದೇವರನ್ನು ಮೆಚ್ಚಿಸಲು ಸಾಧ್ಯನಾ?

ಬೈಬಲಿನಲ್ಲಿ ಹಾಡಿ ಹೊಗಳಿರುವ ನೀತಿವಂತ ವ್ಯಕ್ತಿಗಳ ಬಗ್ಗೆ ಓದಿದಾಗ, ‘ಅವರ ಹಾಗೆ ಇರಲಿಕ್ಕೆ ನನ್ನಿಂದಾಗಲ್ಲ, ತಪ್ಪೇ ಮಾಡದೆ ಯಾವಾಗಲೂ ಸರಿಯಾದದ್ದನ್ನೇ ಮಾಡಲು ನನ್ನಿಂದಂತೂ ಖಂಡಿತ ಆಗಲ್ಲ’ ಅಂತ ನಿಮಗನಿಸಿದೆಯಾ?

ಯೋಬನು “ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದನು.”—ಯೋಬ 1:1

ಬೈಬಲಿನಲ್ಲಿ ಯೋಬ ಎಂಬ ವ್ಯಕ್ತಿಯನ್ನು “ನಿರ್ದೋಷಿಯೂ ಯಥಾರ್ಥಚಿತ್ತನೂ” ಎಂದು ವರ್ಣಿಸಲಾಗಿದೆ. (ಯೋಬ 1:1) ಲೋಟ ಎಂಬವನನ್ನು “ನೀತಿವಂತನು” ಎಂದು ಕರೆಯಲಾಗಿದೆ. (2 ಪೇತ್ರ 2:8) ದಾವೀದ ಎಂಬ ವ್ಯಕ್ತಿಯನ್ನು ‘ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದನ್ನು ಮಾಡಿದ ಸೇವಕ’ ಎನ್ನಲಾಗಿದೆ. (1 ಅರಸುಗಳು 14:8, ಪವಿತ್ರ ಗ್ರಂಥ) ಆದರೆ ಈಗ ನಾವು ಈ ಮೂವರು ವ್ಯಕ್ತಿಗಳ ಜೀವನವನ್ನು ಸರಿಯಾಗಿ ಪರಿಶೀಲಿಸಿ ಕೆಳಗಿನ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿಯೋಣ: (1) ಅವರು ಯಾವ ತಪ್ಪು ಮಾಡಿದರು? (2) ಅವರ ಉದಾಹರಣೆಯಿಂದ ನಾವೇನನ್ನು ಕಲಿಯಬಹುದು? ಮತ್ತು (3) ಹುಟ್ಟಿನಿಂದಲೇ ಪಾಪಿಗಳಾದ ಮನುಷ್ಯರು ದೇವರನ್ನು ಮೆಚ್ಚಿಸಲು ಸಾಧ್ಯನಾ?

ಅವರು ಯಾವ ತಪ್ಪು ಮಾಡಿದರು?

‘ನಿಯಮವನ್ನು ಉಲ್ಲಂಘಿಸುವ ಜನರು ಸಡಿಲು ನಡತೆಯಲ್ಲಿ ಮುಳುಗಿರುವುದನ್ನು ಕಂಡು ಬಹಳವಾಗಿ ದುಃಖಿತನಾಗಿದ್ದ ನೀತಿವಂತನಾದ ಲೋಟನನ್ನು ದೇವರು ಪಾರುಮಾಡಿದನು.’—2 ಪೇತ್ರ 2:7

ಯೋಬನಿಗೆ ಒಂದರ ಮೇಲೊಂದರಂತೆ ಕಷ್ಟಗಳು ಬಂದೆರಗಿದವು. ಆಗ ತನಗೆ ಅನ್ಯಾಯವಾಗುತ್ತಿದೆ ಎಂದು ಅವನಿಗನಿಸಿತು. ತಾನು ನಂಬಿಗಸ್ತನಾಗಿದ್ದರೂ ಇಲ್ಲದಿದ್ದರೂ ದೇವರು ಅದರ ಬಗ್ಗೆ ತಲೆನೇ ಕೆಡಿಸಿಕೊಳ್ಳಲ್ಲ ಅಂತ ತಪ್ಪಾಗಿ ಭಾವಿಸಿದನು. (ಯೋಬ 9:20-22) ಅವನು ‘ತನ್ನಷ್ಟು ನೀತಿವಂತನು ಬೇರೆ ಯಾರೂ ಇಲ್ಲ’ ಅನ್ನೋ ರೀತಿಯಲ್ಲಿ ಮಾತಾಡಿದ್ದನ್ನು ಕೇಳಿಸಿಕೊಂಡವರಿಗೆ, ಅವನು ದೇವರಿಗಿಂತ ತಾನೇ ನ್ಯಾಯವಂತನೆಂದು ಭಾವಿಸುತ್ತಾನೆ ಅಂತ ಅನಿಸಿತು.—ಯೋಬ 32:1, 2; 35:1, 2.

ಲೋಟನಿಗೆ ತಾನು ಏನು ಮಾಡಬೇಕೆಂದು ಸ್ಪಷ್ಟವಾಗಿ ಗೊತ್ತಿದ್ದರೂ ಆ ನಿರ್ಣಯವನ್ನು ಮಾಡಲು ತಡಮಾಡಿದನು. ಅವನು ವಾಸವಾಗಿದ್ದ  ಸೊದೋಮ್‌ ಮತ್ತು ಗೊಮೋರ ಪಟ್ಟಣದಲ್ಲಿನ ಜನರು ಎಷ್ಟರ ಮಟ್ಟಿಗೆ ಅನೈತಿಕ ಕೃತ್ಯಗಳನ್ನು ನಡೆಸುತ್ತಿದ್ದರೆಂದರೆ ಅದನ್ನು ನೋಡಿ ಅವನು ತನ್ನ ಮನಸ್ಸಿನಲ್ಲಿ ‘ಯಾತನೆಪಡುತ್ತಾ ಇದ್ದನು.’ (2 ಪೇತ್ರ 2:8) ಆಗ ದೇವರು ದುಷ್ಟ ಜನರಿರುವ ಆ ಪಟ್ಟಣಗಳನ್ನು ನಾಶಮಾಡುತ್ತೇನೆಂದು ಲೋಟನಿಗೆ ಹೇಳಿದನು. ಅಷ್ಟೇ ಅಲ್ಲದೆ, ಲೋಟನು ಮತ್ತವನ ಕುಟುಂಬ ನಾಶವಾಗದಂತೆ ಅಲ್ಲಿಂದ ಹೋಗಲು ಸಮಯಾವಕಾಶ ನೀಡಿದನು. ಆ ಸಂದರ್ಭದಲ್ಲಿ ಲೋಟ ಏನು ಮಾಡಿದನು? ಈ ಜನರಿಂದಾಗಿ ಈಗಾಗಲೇ ಕಷ್ಟಪಡುತ್ತಿದ್ದ ಲೋಟ ತಕ್ಷಣವೇ ಆ ಪಟ್ಟಣ ಬಿಟ್ಟು ಹೋಗಿರುತ್ತಾನೆ ಅಂತ ನಿಮಗನಿಸಬಹುದು. ಆದರೆ ಅವನು ಹಾಗೆ ಮಾಡದೆ ಅಲ್ಲಿಂದ ಹೋಗಲು ತಡ ಮಾಡಿದನು. ಆಗ ದೇವರು ತನ್ನ ದೂತರನ್ನು ಕಳುಹಿಸಿದನು. ಅವರು ಲೋಟನ ಮತ್ತವನ ಕುಟುಂಬದವರ ಕೈಹಿಡಿದು ಪಟ್ಟಣದ ಹೊರಗಿದ್ದ ಸುರಕ್ಷಿತ ಸ್ಥಳಕ್ಕೆ ತಂದು ಬಿಟ್ಟರು.—ಆದಿಕಾಂಡ 19:15, 16.

ದಾವೀದ ‘ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದನ್ನು ಮಾಡಿ ತನ್ನ ಸಂಪೂರ್ಣವಾದ ಹೃದಯದಿಂದ ದೇವರನ್ನು ಹಿಂಬಾಲಿಸಿದ ಸೇವಕ.’—1 ಅರಸುಗಳು 14:8

ದಾವೀದನು ಒಮ್ಮೆ ತನ್ನ ಬಯಕೆಗಳನ್ನು ನಿಯಂತ್ರಣದಲ್ಲಿಡಲು ತಪ್ಪಿಹೋಗಿ ಬೇರೊಬ್ಬ ವ್ಯಕ್ತಿಯ ಪತ್ನಿಯೊಂದಿಗೆ ವ್ಯಭಿಚಾರ ಮಾಡಿದನು. ನಂತರ ತನ್ನ ತಪ್ಪನ್ನು ಮುಚ್ಚಿಡಲು ಆಕೆಯ ಗಂಡನನ್ನು ಕೊಲ್ಲಿಸಿದನು. (2 ಸಮುವೇಲ 11ನೇ ಅಧ್ಯಾಯ) ‘ದಾವೀದನ ಈ ಕೃತ್ಯವು ಯೆಹೋವನ ದೃಷ್ಟಿಯಲ್ಲಿ ತುಂಬ ಕೆಟ್ಟದ್ದಾಗಿತ್ತು’ ಎಂದು ಬೈಬಲ್‌ ಹೇಳುತ್ತದೆ.—2 ಸಮುವೇಲ 11:27.

ಯೋಬ, ಲೋಟ ಮತ್ತು ದಾವೀದ ಮೂವರೂ ತಪ್ಪು ಮಾಡಿದರು, ಕೆಲವು ತಪ್ಪುಗಳಂತೂ ಘೋರವಾಗಿದ್ದವು. ಆದರೂ ಅವರು ದೇವರಿಗೆ ವಿಧೇಯರಾಗಿದ್ದು ಪೂರ್ಣಹೃದಯದಿಂದ ಆತನ ಸೇವೆ ಮಾಡಲು ಬಯಸುತ್ತಿದ್ದರು. ಅವರು ನಿಜವಾಗಿಯೂ ತಮ್ಮ ತಪ್ಪಿಗಾಗಿ ಪಶ್ಚಾತ್ತಾಪಪಟ್ಟು, ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸಿದರು. ಆದ್ದರಿಂದಲೇ ದೇವರು ಅವರನ್ನು ಮೆಚ್ಚಿದನು ಮತ್ತು ಇದೇ ಕಾರಣಕ್ಕಾಗಿ ಅವರನ್ನು ಬೈಬಲಿನಲ್ಲಿ ನಂಬಿಗಸ್ತ ಪುರುಷರು ಎಂದು ಕರೆಯಲಾಗಿದೆ.

ಅವರಿಂದ ನಾವೇನನ್ನು ಕಲಿಯಬಹುದು?

ನಾವು ಹುಟ್ಟಿನಿಂದಲೇ ಪಾಪಿಗಳಾಗಿರುವುದರಿಂದ ತಪ್ಪೇ ಮಾಡದಿರಲು ಸಾಧ್ಯನೇ ಇಲ್ಲ. (ರೋಮನ್ನರಿಗೆ 3:23) ಆದರೆ ತಪ್ಪು ಮಾಡಿದಾಗ ನಾವು ನಿಜವಾಗಿಯೂ ಪಶ್ಚಾತ್ತಾಪಪಡಬೇಕು ಮತ್ತು ಅದನ್ನು ತಿದ್ದಿಕೊಳ್ಳಲು ನಮ್ಮಿಂದಾದಷ್ಟು ಪ್ರಯತ್ನಿಸಬೇಕು.

ಯೋಬ, ಲೋಟ ಮತ್ತು ದಾವೀದ ತಮ್ಮ ತಪ್ಪನ್ನು ಹೇಗೆ ತಿದ್ದಿಕೊಂಡರು? ಯೋಬನ ಹೃದಯದಲ್ಲಿ ವಂಚನೆ ಇರಲಿಲ್ಲ, ನಿಷ್ಠಾವಂತನಾಗಿದ್ದನು. ದೇವರು ಅವನನ್ನು ತಿದ್ದಿದಾಗ ಪಶ್ಚಾತ್ತಾಪಪಟ್ಟು ತನ್ನ ಯೋಚನೆಯನ್ನು ಸರಿಮಾಡಿಕೊಂಡನು. (ಯೋಬ 42:6) ಸೊದೋಮ್‌ ಮತ್ತು ಗೊಮೋರ ಪಟ್ಟಣದ ಜನರ ಅನೈತಿಕ ನಡತೆಯ ಬಗ್ಗೆ ಯೆಹೋವನಿಗೆ  ಹೇಗನಿಸುತ್ತಿತ್ತೋ ಅದೇ ಭಾವನೆ ಲೋಟನಿಗೆ ಸಹ ಇತ್ತು. ಅವನು ಮಾಡಿದ ತಪ್ಪೇನೆಂದರೆ ದೇವರು ಹೇಳಿದ ತಕ್ಷಣ ಅಲ್ಲಿಂದ ಹೊರಡದೇ ಇದ್ದದ್ದು. ಆದರೆ ತದನಂತರ ಆ ಪಟ್ಟಣಗಳನ್ನು ಬಿಟ್ಟು ಓಡಿ ಹೋದನು ಮತ್ತು ತನ್ನ ಪ್ರಾಣವನ್ನು ಕಾಪಾಡಿಕೊಂಡನು. ದೇವರ ಮಾತಿಗೆ ವಿಧೇಯತೆ ತೋರಿಸುತ್ತಾ ಆ ಪಟ್ಟಣವನ್ನು ಬಿಟ್ಟು ಹೋಗುವಾಗ ತಾನು ಕಳೆದುಕೊಳ್ಳುತ್ತಿದ್ದುದ್ದನ್ನು ಸಹ ತಿರುಗಿ ನೋಡಲೇ ಇಲ್ಲ. ದಾವೀದನು ದೇವರ ನಿಯಮವನ್ನು ಮೀರಿ ಘೋರ ತಪ್ಪನ್ನು ಮಾಡಿದರೂ ಪ್ರಾಮಾಣಿಕವಾಗಿ ಅದನ್ನು ಒಪ್ಪಿಕೊಂಡು, ನಿಜವಾದ ಪಶ್ಚಾತ್ತಾಪ ತೋರಿಸುತ್ತಾ ತನಗೆ ಕರುಣೆ ತೋರಿಸುವಂತೆ ದೇವರಲ್ಲಿ ಬೇಡಿಕೊಂಡನು.—ಕೀರ್ತನೆ 51.

ಮನುಷ್ಯರು ಅಪರಿಪೂರ್ಣರು ಎಂದು ಯೆಹೋವ ದೇವರು ಅರ್ಥ ಮಾಡಿಕೊಳ್ಳುತ್ತಾನೆ. ಆದ್ದರಿಂದಲೇ ಮೇಲೆ ತಿಳಿಸಲಾದ ಮೂವರೂ ಆತನನ್ನು ಮೆಚ್ಚಿಸಲು ಸಾಧ್ಯವಾಯಿತು. ದೇವರು “ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:14) ಇದರರ್ಥ, ನಾವು ತಪ್ಪು ಮಾಡದಿರಲು ಸಾಧ್ಯವೇ ಇಲ್ಲ ಅಂತ ದೇವರಿಗೆ ಗೊತ್ತಿದೆ. ಹಾಗಾದರೆ, ತನ್ನನ್ನು ಮೆಚ್ಚಿಸಲು ನಾವೇನು ಮಾಡಬೇಕೆಂದು ದೇವರು ಬಯಸುತ್ತಾನೆ?

ದೇವರು “ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.”—ಕೀರ್ತನೆ 103:14

ಹುಟ್ಟಿನಿಂದಲೇ ಪಾಪಿಗಳಾದ ಮನುಷ್ಯರು ದೇವರನ್ನು ಮೆಚ್ಚಿಸಲು ಸಾಧ್ಯನಾ?

ದಾವೀದನು ತನ್ನ ಮಗ ಸೊಲೊಮೋನನಿಗೆ ಕೊಟ್ಟ ಸಲಹೆಗಳಿಂದ ನಾವು ದೇವರನ್ನು ಹೇಗೆ ಮೆಚ್ಚಿಸೋದು ಅಂತ ತಿಳಿದುಕೊಳ್ಳಬಹುದು. “ನನ್ನ ಮಗನಾದ ಸೊಲೊಮೋನನೇ, ನೀನಂತೂ . . . ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದ . . . ಆತನನ್ನೇ ಸೇವಿಸು.” (1 ಪೂರ್ವಕಾಲವೃತ್ತಾಂತ 28:9) ಸಂಪೂರ್ಣ ಹೃದಯದಿಂದ ಸೇವಿಸುವುದು ಅಂದರೇನು? ತಪ್ಪೇ ಮಾಡದಿರುವುದು ಅಂತಲ್ಲ. ಬದಲಿಗೆ, ದೇವರನ್ನು ಪ್ರೀತಿಸಿ, ಆತನಿಗೆ ಏನು ಇಷ್ಟ, ಆತನು ನಮ್ಮಿಂದ ಏನು ಬಯಸುತ್ತಾನೆ ಅಂತ ತಿಳಿದುಕೊಂಡು ಅದಕ್ಕೆ ಸರಿಯಾಗಿ ನಡೆದುಕೊಳ್ಳುವುದೇ ಆಗಿದೆ. ನಾವು ಸಂಪೂರ್ಣ ಹೃದಯದಿಂದ ಸೇವಿಸುವುದಾದರೆ ದೇವರಿಗೆ ಸಂಪೂರ್ಣವಾಗಿ ವಿಧೇಯರಾಗುತ್ತೇವೆ ಮತ್ತು ತಪ್ಪನ್ನು ತಿದ್ದುವಾಗ ಬದಲಾವಣೆ ಮಾಡಿಕೊಳ್ಳುತ್ತೇವೆ. ಯೋಬ, ಲೋಟ ಮತ್ತು ದಾವೀದನಿಗೆ ದೇವರ ಮೇಲೆ ಪ್ರೀತಿ ಇತ್ತು ಮತ್ತು ಅವರು ಆತನಿಗೆ ವಿಧೇಯತೆ ತೋರಿಸಿದರು. ಆದ್ದರಿಂದಲೇ ಯೋಬನನ್ನು ‘ನಿರ್ದೋಷಿ’ ಎಂದು, ಲೋಟನನ್ನು ‘ನೀತಿವಂತ’ ಎಂದು ಮತ್ತು ದಾವೀದನನ್ನು ‘ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದನ್ನು ಮಾಡಿದ ಸೇವಕ’ ಎಂದು ಕರೆಯಲಾಗಿದೆ. ಹೀಗೆ ಅವರು ತಪ್ಪುಗಳನ್ನು ಮಾಡಿದರೂ ಅದನ್ನು ತಿದ್ದಿಕೊಂಡು ದೇವರನ್ನು ಮೆಚ್ಚಿಸಿದರು.

ಸಂಪೂರ್ಣ ಹೃದಯದಿಂದ ಸೇವಿಸುವುದು ಅಂದರೆ ದೇವರಿಗೆ ಏನು ಇಷ್ಟ ಅಂತ ತಿಳಿದುಕೊಂಡು ಮನಸ್ಪೂರ್ತಿಯಾಗಿ ಆತನಿಗೆ ವಿಧೇಯರಾಗುವುದೇ ಆಗಿದೆ

ಕೆಟ್ಟ ಯೋಚನೆ ಮಾಡಬಾರದು ಅಂತ ಅಂದುಕೊಂಡರೂ ಯಾವಾಗಲಾದರೂ ಅಂಥ ಯೋಚನೆ ನಿಮಗೆ ಬಂದಿದೆಯಾ? ಏನೋ ಹೇಳಿಬಿಟ್ಟು ನಂತರ ‘ಛೆ! ನಾನು ಹಾಗೆ ಮಾತಾಡಬಾರದಿತ್ತು’ ಅಂತ ಅಂದುಕೊಂಡಿದ್ದೀರಾ? ಅಥವಾ ಎಲ್ಲಾ ನಡೆದು ಹೋದ ನಂತರ ನೀವು ಮಾಡಿದ್ದು ತಪ್ಪು ಅಂತ ನಿಮಗನಿಸಿದೆಯಾ? ಹಾಗಾದರೆ ಈಗಾಗಲೇ ನೋಡಿದ ಮೂವರ ಉದಾಹರಣೆಗಳು ನಿಮಗೆ ಸಹಾಯ ಮಾಡುತ್ತವೆ. ತಪ್ಪೇ ಮಾಡದಿರುವುದು ನಮ್ಮಿಂದ ಸಾಧ್ಯವೇ ಇಲ್ಲ ಅಂತ ದೇವರಿಗೆ ಗೊತ್ತಿದೆ. ಆತನು ಬಯಸುವುದಿಷ್ಟೇ, ನಾವು ಆತನನ್ನು ಪ್ರೀತಿಸಬೇಕು ಮತ್ತು ವಿಧೇಯರಾಗಿರಲು ನಮ್ಮಿಂದಾದಷ್ಟು ಪ್ರಯತ್ನಿಸಬೇಕು. ಸಂಪೂರ್ಣ ಹೃದಯದಿಂದ ಇದನ್ನು ಮಾಡುವುದಾದರೆ ನಾವು ಸಹ ಖಂಡಿತ ದೇವರನ್ನು ಮೆಚ್ಚಿಸಲು ಸಾಧ್ಯ. ▪ (w15-E 07/01)