ವಿಮೋಚನಕಾಂಡ 32:1-35

  • ಚಿನ್ನದ ಕರುವಿನ ಆರಾಧನೆ (1-35)

    • ಮೋಶೆಗೆ ಕೇಳಿಸಿದ ವಿಚಿತ್ರ ಗೀತೆಯ ಶಬ್ದ (17, 18)

    • ಕಲ್ಲಿನ ಹಲಗೆಗಳನ್ನ ಮೋಶೆ ಚೂರುಚೂರು ಮಾಡಿದ (19)

    • ಲೇವಿಯರು ಯೆಹೋವನಿಗೆ ತೋರಿಸಿದ ನಿಷ್ಠೆ (26-29)

32  ತುಂಬ ದಿನವಾದ್ರೂ ಮೋಶೆ ಬೆಟ್ಟದಿಂದ+ ಇಳಿದು ಬರದೇ ಇರೋದನ್ನ ಜನ ನೋಡಿ ಆರೋನನ ಹತ್ರ ಬಂದು ಗುಂಪುಗೂಡಿ “ನಮ್ಮನ್ನ ಈಜಿಪ್ಟಿಂದ ಕರ್ಕೊಂಡು ಬಂದ ಆ ಮೋಶೆಗೆ ಏನಾಯ್ತೋ ಗೊತ್ತಿಲ್ಲ. ಹಾಗಾಗಿ ನಮ್ಮನ್ನ ಮಾರ್ಗದರ್ಶಿಸಿ ಮುಂದಕ್ಕೆ ಕರ್ಕೊಂಡು ಹೋಗೋಕೆ ನಮಗೊಂದು ದೇವರನ್ನ ಮಾಡ್ಕೊಡು” ಅಂದ್ರು.+  ಅದಕ್ಕೆ ಆರೋನ “ಸರಿ, ನಿಮ್ಮ ಹೆಂಡತಿ ಮಕ್ಕಳ ಕಿವಿಯಲ್ಲಿರೋ ಚಿನ್ನದ ಓಲೆಗಳನ್ನ+ ತಗೊಂಡು ಬಂದು ನನಗೆ ಕೊಡಿ” ಅಂದ.  ಅವರು ಹೋಗಿ ತಮ್ಮ ಹೆಂಡತಿ ಮಕ್ಕಳ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನ ತೆಗೆದು ಆರೋನನಿಗೆ ಕೊಟ್ರು.  ಅವನು ಅದನ್ನೆಲ್ಲ ಕರಗಿಸಿ ಅಚ್ಚಲ್ಲಿ ಹೊಯ್ದು ಕೆತ್ತನೆಯ ಸಲಕರಣೆಯಿಂದ ಒಂದು ಕರುವಿನ ಮೂರ್ತಿ ಮಾಡಿದ.+ ಆಗ ಜನ “ಇಸ್ರಾಯೇಲ್ಯರೇ, ನಮ್ಮ ದೇವರನ್ನ ನೋಡಿ. ನಮ್ಮನ್ನ ಈಜಿಪ್ಟಿಂದ ಬಿಡಿಸಿ ಕರ್ಕೊಂಡು ಬಂದಿದ್ದು ಈ ದೇವರೇ”+ ಅಂತ ಕೂಗೋಕೆ ಶುರುಮಾಡಿದ್ರು.  ಆರೋನ ಅದನ್ನ ನೋಡಿ ಆ ಕರುವಿನ ಮುಂದೆ ಒಂದು ಯಜ್ಞವೇದಿ ಕಟ್ಟಿದ. ಆಮೇಲೆ “ನಾಳೆ ಯೆಹೋವನಿಗಾಗಿ ಒಂದು ಹಬ್ಬ ಇರುತ್ತೆ” ಅಂತ ಎಲ್ರಿಗೂ ಹೇಳಿದ.  ಹಾಗಾಗಿ ಜನ್ರು ಮಾರನೇ ದಿನ ಬೆಳಿಗ್ಗೆ ಬೇಗ ಎದ್ದು ಸರ್ವಾಂಗಹೋಮ ಬಲಿಗಳನ್ನ ಸಮಾಧಾನ ಬಲಿಗಳನ್ನ ಅರ್ಪಿಸಿದ್ರು. ಕೂತು ತಿಂದ್ರು, ಕುಡಿದ್ರು. ಆಮೇಲೆ ಎದ್ದು ಮೋಜು ಮಾಡಿದ್ರು.+  ಆಗ ಯೆಹೋವ ಮೋಶೆಗೆ “ನೀನು ಬೆಟ್ಟದಿಂದ ಇಳಿದು ಹೋಗು. ನೀನು ಈಜಿಪ್ಟಿಂದ ಕರ್ಕೊಂಡು ಬಂದ ನಿನ್ನ ಜನ ಕೆಟ್ಟವರು ಆಗಿಬಿಟ್ರು.+  ನಾನು ಕೊಟ್ಟ ಆಜ್ಞೆಗಳನ್ನ* ಅವರು ಎಷ್ಟು ಬೇಗ ಮೀರಿದ್ದಾರೆ!+ ಅವರು ತಮಗಾಗಿ ಒಂದು ಕರು ಮೂರ್ತಿ ಮಾಡ್ಕೊಂಡು ಅದಕ್ಕೆ ಅಡ್ಡಬೀಳ್ತಿದ್ದಾರೆ. ಅದಕ್ಕೆ ಬಲಿಗಳನ್ನ ಅರ್ಪಿಸ್ತಾ ‘ಇಸ್ರಾಯೇಲ್ಯರೇ, ನಮ್ಮ ದೇವರನ್ನ ನೋಡಿ, ನಮ್ಮನ್ನ ಈಜಿಪ್ಟಿಂದ ಬಿಡಿಸಿ ಕರ್ಕೊಂಡು ಬಂದಿದ್ದು ಈ ದೇವರೇ’ ಅಂತ ಹೇಳ್ತಿದ್ದಾರೆ” ಅಂದನು.  ಯೆಹೋವ ಮೋಶೆಗೆ “ಈ ಜನ್ರು ತುಂಬ ಹಠಮಾರಿಗಳು ಅಂತ ನಂಗೊತ್ತು.+ 10  ನನಗೆ ಅವರ ಮೇಲೆ ಕೋಪ ಹೊತ್ತಿ ಉರಿತಿದೆ. ನಾನು ಅವರನ್ನೆಲ್ಲ ನಾಶ ಮಾಡಿಬಿಡ್ತೀನಿ. ನೀನು ನನ್ನನ್ನ ತಡಿಬೇಡ. ಅವರ ಬದ್ಲು ನಿನ್ನ ವಂಶದವರನ್ನೇ ಒಂದು ದೊಡ್ಡ ಜನಾಂಗ ಆಗೋ ತರ ಮಾಡ್ತೀನಿ”+ ಅಂದನು. 11  ಅದಕ್ಕೆ ಮೋಶೆ ತನ್ನ ದೇವರಾದ ಯೆಹೋವನ+ ಹತ್ರ ಮನವಿ ಮಾಡ್ತಾ “ಯೆಹೋವನೇ, ನೀನು ಅದ್ಭುತಗಳನ್ನ ಮಾಡಿ ನಿನ್ನ ಮಹಾಶಕ್ತಿಯಿಂದ ಈ ಜನ್ರನ್ನ ಈಜಿಪ್ಟಿಂದ ಬಿಡಿಸಿ ಕರ್ಕೊಂಡು ಬಂದೆ ಅಲ್ವಾ. ಈಗ ಅವ್ರ ಮೇಲೆ ಯಾಕೆ ಕೋಪ ಮಾಡ್ಕೊಳ್ತೀಯ? ಅವರನ್ನ ಯಾಕೆ ಪೂರ್ತಿ ನಾಶಮಾಡಬೇಕು ಅಂತಿದ್ದೀಯ?+ 12  ನೀನು ಅವರನ್ನ ನಾಶಮಾಡಿದ್ರೆ ಈಜಿಪ್ಟಿನವರು ನಿನ್ನ ಬಗ್ಗೆ ತಪ್ಪಾಗಿ ಮಾತಾಡಬಹುದಲ್ವಾ? ‘ಈ ಜನ್ರಿಗೆ ಕೇಡು ಮಾಡಬೇಕು ಅನ್ನೋ ಉದ್ದೇಶದಿಂದಾನೇ ಅವ್ರ ದೇವರು ಅವರನ್ನ ಇಲ್ಲಿಂದ ಕರ್ಕೊಂಡು ಹೋದನು. ಅವರನ್ನ ಬೆಟ್ಟಗಳಿಗೆ ಕರ್ಕೊಂಡು ಹೋಗಿ ಸಾಯಿಸಿ ಭೂಮಿ ಮೇಲೆ ಅವರ ಹೆಸರೇ ಇಲ್ಲದ ಹಾಗೆ ಮಾಡಬೇಕು ಅನ್ನೋದೇ ಆತನ ಉದ್ದೇಶ ಆಗಿತ್ತು’ ಅಂತ ಅವರು ಹೇಳಲ್ವಾ?+ ಹಾಗಾಗಿ ಕೋಪ ಬಿಡು. ನಿನ್ನ ಜನ್ರನ್ನ ನಾಶಮಾಡಬೇಕು ಅನ್ನೋ ತೀರ್ಮಾನದ ಬಗ್ಗೆ ಇನ್ನೊಂದು ಸಲ ಯೋಚಿಸು.* 13  ನಿನ್ನ ಸೇವಕರಾದ ಅಬ್ರಹಾಮ, ಇಸಾಕ, ಇಸ್ರಾಯೇಲನಿಗೆ ನಿನ್ನ ಮೇಲೆ ಆಣೆಯಿಟ್ಟು ಹೇಳಿದ ಮಾತನ್ನ ನೆನಪು ಮಾಡ್ಕೊ. ‘ನಿಮ್ಮ ಸಂತತಿನ ಆಕಾಶದ ನಕ್ಷತ್ರಗಳ+ ತರ ಲೆಕ್ಕ ಇಲ್ಲದಷ್ಟು ಮಾಡ್ತೀನಿ. ನಾನು ನಿಮ್ಮ ಸಂತತಿಗಾಗಿ ಇಟ್ಟಿರೋ ಈ ಇಡೀ ದೇಶನ ಅವರಿಗೆ ಕೊಡ್ತೀನಿ. ಅದು ಸದಾ ಅವರ ಆಸ್ತಿಯಾಗಿ ಇರುತ್ತೆ’ ಅಂತ ನೀನೇ ಮಾತು ಕೊಟ್ಟಿದ್ದೆ ತಾನೇ?”+ ಅಂದ. 14  ಹಾಗಾಗಿ ಯೆಹೋವ ತನ್ನ ತೀರ್ಮಾನ ಬದಲಾಯಿಸ್ಕೊಂಡನು, ತನ್ನ ಜನ್ರನ್ನ ಪೂರ್ತಿಯಾಗಿ ನಾಶಮಾಡಲಿಲ್ಲ.+ 15  ಆಮೇಲೆ ಮೋಶೆ ದೇವರ ಆಜ್ಞೆಗಳಿದ್ದ ಎರಡು ಕಲ್ಲಿನ ಹಲಗೆಗಳನ್ನ+ ಕೈಯಲ್ಲಿ ಹಿಡ್ಕೊಂಡು ಬೆಟ್ಟದಿಂದ ಇಳಿದು ಹೋದ.+ ಆ ಕಲ್ಲಿನ ಹಲಗೆಗಳ ಹಿಂದೆ ಮುಂದೆ ಎರಡೂ ಕಡೆ ಅಕ್ಷರಗಳನ್ನ ಕೆತ್ತಿ ಬರೆಯಲಾಗಿತ್ತು. 16  ಆ ಕಲ್ಲಿನ ಹಲಗೆಗಳನ್ನ ದೇವರೇ ಮಾಡಿ ಆತನೇ ಅವುಗಳ ಮೇಲೆ ಕೆತ್ತಿದ್ದನು.+ 17  ಬೆಟ್ಟದ ಬುಡದಲ್ಲಿದ್ದ ಜನ ಕೂಗಾಡ್ತಾ ಇದ್ದ ಶಬ್ದ ಕೇಳಿಸಿದಾಗ ಯೆಹೋಶುವ ಮೋಶೆಗೆ “ಪಾಳೆಯದಲ್ಲಿ ಯುದ್ಧ ನಡಿತಿರೋ ಶಬ್ದ ಕೇಳ್ತಾ ಇದೆ” ಅಂದ. 18  ಅದಕ್ಕೆ ಮೋಶೆ “ಜನ್ರು ಹಾಡ್ತಿರೋ ಶಬ್ದ ಕೇಳಿಸ್ತಿದೆ. ಆದ್ರೆ ಅದು ವಿಜಯ ಗೀತೆ ಅಲ್ಲ,ಸೋತವರು ಗೋಳಾಡ್ತಿರೋ ಶಬ್ದ ಅಂತಾನೂ ಅನಿಸ್ತಿಲ್ಲ,ಇದು ಬೇರೆ ಏನೋ ಶಬ್ದ” ಅಂದ. 19  ಮೋಶೆ ಪಾಳೆಯದ ಹತ್ರ ಬಂದ ಕೂಡಲೇ ಕರುವಿನ ಮೂರ್ತಿಯನ್ನ,+ ಜನ ಕುಣಿಯೋದನ್ನ ನೋಡಿದ. ಆಗ ಅವನಿಗೆ ಎಷ್ಟು ಕೋಪ ಬಂತಂದ್ರೆ ಕೈಯಲ್ಲಿದ್ದ ಕಲ್ಲಿನ ಹಲಗೆಗಳನ್ನ ಬೆಟ್ಟದ ಕೆಳಗೆ ಜೋರಾಗಿ ಎಸೆದುಬಿಟ್ಟ. ಆ ಹಲಗೆಗಳು ಚೂರುಚೂರಾಯ್ತು.+ 20  ಜನ್ರು ಮಾಡ್ಕೊಂಡಿದ್ದ ಕರುವಿನ ಮೂರ್ತಿನ ಅವನು ಬೆಂಕಿಯಲ್ಲಿ ಸುಟ್ಟುಬಿಟ್ಟ. ಅದನ್ನ ಪುಡಿಪುಡಿ ಮಾಡಿ+ ನೀರಿಗೆ ಹಾಕಿ ಇಸ್ರಾಯೇಲ್ಯರಿಗೆ ಆ ನೀರು ಕುಡಿಸಿದ.+ 21  ಮೋಶೆ ಆರೋನನಿಗೆ “ಇಷ್ಟು ಘೋರ ಪಾಪ ಜನ್ರ ತಲೆ ಮೇಲೆ ಬರೋ ತರ ಮಾಡಿದ್ಯಲ್ಲಾ? ಯಾಕೆ ಹೀಗಾಯ್ತು? ಈ ಜನ್ರು ಏನು ಮಾಡಿದ್ರು?” ಅಂತ ಕೇಳಿದ. 22  ಅದಕ್ಕೆ ಆರೋನ “ಸ್ವಾಮಿ ಕೋಪ ಮಾಡ್ಕೊಬೇಡ, ಈ ಜನ್ರ ಕೆಟ್ಟ ಬುದ್ಧಿ ನಿನಗೆ ಗೊತ್ತೇ ಇದೆ.+ 23  ಅವರು ನನ್ನ ಹತ್ರ ಬಂದು ‘ನಮ್ಮನ್ನ ಈಜಿಪ್ಟಿಂದ ಕರ್ಕೊಂಡು ಬಂದ ಆ ಮೋಶೆಗೆ ಏನಾಯ್ತೋ ಗೊತ್ತಿಲ್ಲ. ಈಗ ನಮ್ಮನ್ನ ಮುಂದೆ ಕರ್ಕೊಂಡು ಹೋಗೋಕೆ ನಮಗೊಂದು ದೇವರನ್ನ ಮಾಡ್ಕೊಡು’ ಅಂತ ಹೇಳಿದ್ರು.+ 24  ಅದಕ್ಕೇ ನಾನು ಅವರಿಗೆ ‘ನಿಮ್ಮ ಹತ್ರ ಇರೋ ಚಿನ್ನದ ಒಡವೆಗಳನ್ನ ಬಿಚ್ಚಿ ನನಗೆ ಕೊಡಿ’ ಅಂದೆ. ಅವರು ಕೊಟ್ಟ ಚಿನ್ನದ ಒಡವೆಗಳನ್ನ ನಾನು ಬೆಂಕಿಯಲ್ಲಿ ಹಾಕಿದಾಗ ಈ ಕರುವಿನ ಮೂರ್ತಿ ಬಂತು” ಅಂದ. 25  ಜನ ಎಲ್ಲೆಮೀರಿ ಹೋಗೋ ಹಾಗೆ ಆರೋನ ಬಿಟ್ಟಿದ್ರಿಂದ ಅವರು ತಮಗೆ ಇಷ್ಟ ಬಂದ ಹಾಗೆ ನಡೆದ್ರು ಅಂತ ಮೋಶೆಗೆ ಗೊತ್ತಾಯ್ತು. ಇಸ್ರಾಯೇಲ್ಯರು ಹಾಗೆ ಮಾಡಿ ವಿರೋಧಿಗಳ ಮುಂದೆ ಅವಮಾನಕ್ಕೆ ಗುರಿಯಾದ್ರು. 26  ಆಮೇಲೆ ಮೋಶೆ ಪಾಳೆಯದ ದ್ವಾರದಲ್ಲಿ ನಿಂತು “ಯೆಹೋವನ ಪಕ್ಷದಲ್ಲಿ ಇರೋರೆಲ್ಲ ನನ್ನ ಹತ್ರ ಬನ್ನಿ!”+ ಅಂದ. ಆಗ ಲೇವಿಯರೆಲ್ಲ ಅವನ ಸುತ್ತ ಬಂದು ನಿಂತ್ರು. 27  ಮೋಶೆ ಅವರಿಗೆ “ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನೀವೆಲ್ಲ ನಿಮ್ಮ ಕತ್ತಿ ತಗೊಳ್ಳಿ. ಇಡೀ ಪಾಳೆಯದಲ್ಲಿ ಒಂದು ತುದಿಯಿಂದ ಇನ್ನೊಂದು ತುದಿ ತನಕ ಹೋಗಿ* ಅಣ್ಣತಮ್ಮ, ನೆರೆಯವ, ಆಪ್ತ ಗೆಳೆಯ ಅಂತ ನೋಡದೆ ಜನ್ರನ್ನ ಸಾಯಿಸಿ’ ”+ ಅಂದ. 28  ಲೇವಿಯರು ಮೋಶೆ ಹೇಳಿದ ತರನೇ ಮಾಡಿದ್ರು. ಆ ದಿನ ಸುಮಾರು 3,000 ಗಂಡಸರನ್ನ ಸಾಯಿಸಿದ್ರು. 29  ಆಮೇಲೆ ಮೋಶೆ “ನಿಮ್ಮನ್ನ ಯೆಹೋವನ ಸೇವೆಗಾಗಿ ಇವತ್ತು ಪ್ರತ್ಯೇಕಿಸಿಕೊಳ್ಳಿ. ನೀವು ಆತನ ಮಾತನ್ನ ಕೇಳಿ ನಿಮ್ಮ ಅಣ್ಣತಮ್ಮಂದಿರ, ಮಕ್ಕಳ ವಿರುದ್ಧ ಹೋರಾಡಿದ್ದೀರ.+ ಹಾಗಾಗಿ ದೇವರು ನಿಮ್ಮನ್ನ ಇವತ್ತು ಆಶೀರ್ವದಿಸ್ತಾನೆ”+ ಅಂದ. 30  ಮಾರನೇ ದಿನನೇ ಮೋಶೆ ಜನ್ರಿಗೆ “ನೀವು ಘೋರ ಪಾಪ ಮಾಡಿದ್ದೀರ. ನಾನೀಗ ಬೆಟ್ಟ ಹತ್ತಿ ಯೆಹೋವನ ಹತ್ರ ಹೋಗಿ ನಿಮಗಾಗಿ ಅಂಗಲಾಚಿ ಬೇಡ್ತೀನಿ. ಆತನು ನಿಮ್ಮನ್ನ ಕ್ಷಮಿಸಬಹುದು”+ ಅಂದ. 31  ಮೋಶೆ ಮತ್ತೆ ಬೆಟ್ಟ ಹತ್ತಿ ಹೋಗಿ ಯೆಹೋವನಿಗೆ “ಈ ಜನ್ರು ತಮಗಾಗಿ ಒಂದು ಚಿನ್ನದ ದೇವರನ್ನ ಮಾಡ್ಕೊಂಡು ಘೋರ ಪಾಪ ಮಾಡಿದ್ದಾರೆ!+ 32  ನಿನಗೆ ಮನಸ್ಸಿದ್ರೆ ಜನ್ರ ಪಾಪನ ಕ್ಷಮಿಸು.+ ಇಲ್ಲಾಂದ್ರೆ ದಯವಿಟ್ಟು ನೀನು ಬರೆದಿರೋ ಪುಸ್ತಕದಿಂದ ನನ್ನ ಹೆಸರನ್ನೇ ಅಳಿಸಿಬಿಡು”+ ಅಂದ. 33  ಆದ್ರೆ ಯೆಹೋವ ಮೋಶೆಗೆ “ನನ್ನ ವಿರುದ್ಧ ಪಾಪಮಾಡಿದವರ ಹೆಸರುಗಳನ್ನೇ ನಾನು ನನ್ನ ಪುಸ್ತಕದಿಂದ ಅಳಿಸಿಹಾಕ್ತೀನಿ. 34  ಈಗ ಹೋಗು. ನಾನು ನಿನಗೆ ಹೇಳಿದ ಸ್ಥಳಕ್ಕೆ ಜನ್ರನ್ನ ಕರ್ಕೊಂಡು ಹೋಗು. ನನ್ನ ದೂತ ನಿನ್ನ ಮುಂದೆ ಹೋಗ್ತಾನೆ.+ ನಾನು ಅವರಿಗೆ ತೀರ್ಪು ಕೊಡೋ ದಿನದಲ್ಲಿ ಅವ್ರ ಪಾಪಕ್ಕೆ ಶಿಕ್ಷೆ ಕೊಡ್ತೀನಿ” ಅಂದನು. 35  ಜನ ಕರುವಿನ ಮೂರ್ತಿ ಮಾಡ್ಕೊಂಡಿದ್ರಿಂದ ಯೆಹೋವ ಅವರಿಗೆ ಕಾಯಿಲೆ ಬರೋ ತರ ಮಾಡಿದನು. ಆ ಮೂರ್ತಿನ ಅವರು ಆರೋನನ ಕೈಯಿಂದ ಮಾಡಿಸಿದ್ರು.

ಪಾದಟಿಪ್ಪಣಿ

ಅಕ್ಷ. “ಮಾರ್ಗ.”
ಅಥವಾ “ಮನಸ್ಸು ಬದಲಾಯಿಸ್ಕೊ.”
ಅಕ್ಷ. “ಬಾಗಿಲಿಂದ ಬಾಗಿಲಿಗೆ.”