ಮಾರ್ಕ 15:1-47

  • ಯೇಸುವನ್ನ ಪಿಲಾತನ ಮುಂದೆ ಕರ್ಕೊಂಡು ಬಂದ್ರು (1-15)

  • ಎಲ್ರ ಮುಂದೆ ಅವಮಾನ (16-20)

  • ಗೊಲ್ಗೊಥಾದಲ್ಲಿ ಯೇಸುವನ್ನ ಕಂಬಕ್ಕೆ ಜಡಿದ್ರು (21-32)

  • ಯೇಸು ತೀರಿಕೊಂಡನು (33-41)

  • ಯೇಸುವನ್ನ ಸಮಾಧಿ ಮಾಡಿದ್ರು (42-47)

15  ಬೆಳಗಾದ ತಕ್ಷಣ ಮುಖ್ಯ ಪುರೋಹಿತರು, ಹಿರಿಯರು, ಪಂಡಿತರು ಹೀಗೆ ಇಡೀ ಹಿರೀಸಭೆನೇ ಸೇರಿ ಬಂದಿತ್ತು. ಅವ್ರೆಲ್ಲ ಚರ್ಚೆ ಮಾಡಿ, ಯೇಸುವಿನ ಕೈಕಟ್ಟಿ ಪಿಲಾತನಿಗೆ ಒಪ್ಪಿಸಿದ್ರು.+  ಆಗ ಪಿಲಾತ “ನೀನು ಯೆಹೂದ್ಯರ ರಾಜನಾ?”+ ಅಂತ ಯೇಸುನ ಕೇಳಿದ. ಅದಕ್ಕೆ ಯೇಸು “ನೀನೇ ಹೇಳ್ತಾ ಇದ್ದೀಯಲ್ಲ”* ಅಂದನು.+  ಆದ್ರೆ ಮುಖ್ಯ ಪುರೋಹಿತರು ಆತನ ಮೇಲೆ ತುಂಬ ಆರೋಪಗಳನ್ನ ಹಾಕ್ತಾ ಇದ್ರು.  ಪಿಲಾತ ಮತ್ತೆ ಆತನಿಗೆ ಪ್ರಶ್ನೆ ಕೇಳ್ತಾ “ನೀನು ಏನೂ ಹೇಳಲ್ವಾ?+ ಅವರು ನಿನ್ನ ವಿರುದ್ಧ ಎಷ್ಟು ಆರೋಪ ಹಾಕ್ತಿದ್ದಾರೆ ನೋಡು” ಅಂದ.+  ಆದ್ರೆ ಯೇಸು ಸುಮ್ಮನೆ ಇರೋದನ್ನ ನೋಡಿ ಪಿಲಾತನಿಗೆ ತುಂಬ ಆಶ್ಚರ್ಯ ಆಯ್ತು.+  ಪ್ರತಿ ಪಸ್ಕ ಹಬ್ಬಕ್ಕೆ ಜನ ಕೇಳಿಕೊಳ್ಳೋ ಒಬ್ಬ ಕೈದಿಯನ್ನ ಪಿಲಾತ ಬಿಡುಗಡೆ ಮಾಡ್ತಿದ್ದ.+  ಆ ಸಮಯದಲ್ಲಿ ಬರಬ್ಬ ಅನ್ನೋ ಕೈದಿ ಇದ್ದ. ಅವನನ್ನ ರಾಜದ್ರೋಹಿಗಳ ಜೊತೆ ಜೈಲಿಗೆ ಹಾಕಿದ್ರು. ಯಾಕಂದ್ರೆ ಇವ್ರೆಲ್ಲ ಸೇರಿ ಸರ್ಕಾರದ ವಿರುದ್ಧ ದಂಗೆ ಎದ್ದು ಕೊಲೆ ಮಾಡಿದ್ರು.  ಹಾಗಾಗಿ ರೂಢಿ ಪ್ರಕಾರ ಜನ ತಮ್ಮ ಕೋರಿಕೆಯನ್ನ ತಿಳಿಸೋಕೆ ಪಿಲಾತನ ಹತ್ರ ಬಂದ್ರು.  ಪಿಲಾತ ಅವ್ರಿಗೆ “ನಾನು ನಿಮಗಾಗಿ ಯೆಹೂದ್ಯರ ರಾಜನನ್ನ ಬಿಡುಗಡೆ ಮಾಡ್ಲಾ?” ಅಂತ ಕೇಳಿದ.+ 10  ಯಾಕಂದ್ರೆ ಮುಖ್ಯ ಪುರೋಹಿತರು ಹೊಟ್ಟೆಕಿಚ್ಚಿಂದಾನೇ ಯೇಸುನ ತನ್ನ ಕೈಗೆ ಒಪ್ಪಿಸಿದ್ದಾರೆ ಅಂತ ಪಿಲಾತನಿಗೆ ಗೊತ್ತಿತ್ತು.+ 11  ಆದ್ರೆ ಯೇಸುವಿನ ಬದಲಿಗೆ ಬರಬ್ಬನನ್ನೇ ಬಿಡುಗಡೆ ಮಾಡಬೇಕಂತ ಕೇಳಿಕೊಳ್ಳಬೇಕು ಅಂತ ಮುಖ್ಯ ಪುರೋಹಿತರು ಜನ್ರ ಕಿವಿ ಊದಿದ್ರು.+ 12  ಪಿಲಾತ ಇನ್ನೊಂದು ಸಾರಿ ಜನ್ರಿಗೆ “ಹಾಗಾದ್ರೆ ನೀವು ಯೆಹೂದ್ಯರ ರಾಜ ಅಂತ ಕರಿಯೋ ಈ ಯೇಸುನ ನಾನೇನು ಮಾಡಲಿ?” ಅಂತ ಕೇಳಿದ.+ 13  ಅವ್ರೆಲ್ಲ “ಅವನನ್ನ ಕಂಬಕ್ಕೆ ಏರಿಸಿ” ಅಂತ ಮತ್ತೆ ಹೇಳಿದ್ರು.+ 14  ಆದ್ರೆ ಪಿಲಾತ ಅವ್ರಿಗೆ “ಯಾಕೆ? ಇವನೇನು ತಪ್ಪು ಮಾಡಿದ?” ಅಂತ ಕೇಳಿದ. ಜನ ಅದನ್ನ ಕಿವಿಗೆ ಹಾಕೊಳ್ಳದೇ “ಅವನನ್ನ ಕಂಬಕ್ಕೆ ಏರಿಸಿ” ಅಂತ ಜೋರಾಗಿ ಕೂಗ್ತಾನೇ ಇದ್ರು.+ 15  ಆಗ ಪಿಲಾತ ಜನ್ರನ್ನ ತೃಪ್ತಿಪಡಿಸೋಕೆ ಬರಬ್ಬನನ್ನ ಬಿಡುಗಡೆ ಮಾಡಿದ. ಯೇಸುವನ್ನ ಚಾಟಿಯಿಂದ ಹೊಡೆಸಿ+ ಕಂಬಕ್ಕೇರಿಸಿ ಕೊಲ್ಲೋಕೆ ಬಿಟ್ಟುಕೊಟ್ಟ.+ 16  ಸೈನಿಕರು ಯೇಸುವನ್ನ ರಾಜ್ಯಪಾಲನ ಮನೆ ಅಂಗಳಕ್ಕೆ ಕರ್ಕೊಂಡು ಹೋದ್ರು. ಆಮೇಲೆ ಸೈನಿಕರನ್ನೆಲ್ಲ ಅಲ್ಲಿ ಸೇರಿಸಿದ್ರು.+ 17  ಅವರು ಯೇಸುಗೆ ನೇರಳೆ ಬಣ್ಣದ ಬಟ್ಟೆ ಹಾಕಿ ಮುಳ್ಳಿನ ಕಿರೀಟ ಮಾಡಿ ಇಟ್ರು. 18  ಆಮೇಲೆ ಅವರು “ಯೆಹೂದ್ಯರ ರಾಜನಿಗೆ ಜೈ!” ಅಂತ ಜೋರಾಗಿ ಕೂಗ್ತಾ ಇದ್ರು.+ 19  ಅಷ್ಟೇ ಅಲ್ಲ ಕೋಲು ತಗೊಂಡು ಆತನ ತಲೆಗೆ ಹೊಡೆದ್ರು, ಆತನ ಮೇಲೆ ಉಗುಳಿದ್ರು. ಆತನ ಮುಂದೆ ಮಂಡಿಯೂರಿ ನಮಸ್ಕಾರ ಮಾಡಿದ್ರು. 20  ಹೀಗೆ ಗೇಲಿ ಮಾಡಿದ್ರು. ಆಮೇಲೆ ಆತನಿಗೆ ಹಾಕಿದ್ದ ನೇರಳೆ ಬಣ್ಣದ ಬಟ್ಟೆ ತೆಗೆದು ಆತನ ಬಟ್ಟೆಯನ್ನೇ ಹಾಕಿದ್ರು. ಆಮೇಲೆ ಆತನನ್ನ ಕಂಬಕ್ಕೆ ಜಡಿಯೋಕೆ ಕರ್ಕೊಂಡು ಹೋದ್ರು.+ 21  ದಾರಿಯಲ್ಲಿ ಕುರೇನೆ ಪಟ್ಟಣದ ಸೀಮೋನ ಅನ್ನೋ ವ್ಯಕ್ತಿ ಸಿಕ್ಕಿದ. ಅವನು ಅಲೆಕ್ಸಾಂದ್ರ ಮತ್ತು ರೂಫ ಅನ್ನುವವರ ಅಪ್ಪ. ಹಳ್ಳಿಯಿಂದ ಬರ್ತಿದ್ದ. ಅವನನ್ನ ಸೈನಿಕರು ಹಿಡ್ಕೊಂಡು ಯೇಸುವಿನ ಹಿಂಸಾ ಕಂಬ* ಹೊರೋಕೆ ಒತ್ತಾಯ ಮಾಡಿದ್ರು.+ 22  ಅವರು ಯೇಸುವನ್ನ ಗೊಲ್ಗೊಥಾ ಅನ್ನೋ ಸ್ಥಳಕ್ಕೆ ಕರ್ಕೊಂಡು ಬಂದ್ರು. ಗೊಲ್ಗೊಥಾ ಅಂದ್ರೆ “ತಲೆಬುರುಡೆಯ ಸ್ಥಳ” ಅಂತ ಅರ್ಥ.+ 23  ಇಲ್ಲಿ ಅವರು ಆತನಿಗೆ ಗಂಧರಸ ಬೆರಸಿದ ದ್ರಾಕ್ಷಾಮದ್ಯ ಕೊಡೋಕೆ ಪ್ರಯತ್ನಿಸಿದ್ರು.+ ಆದ್ರೆ ಆತನು ಅದನ್ನ ಕುಡಿಲಿಲ್ಲ. 24  ಅವರು ಯೇಸುವನ್ನ ಕಂಬಕ್ಕೆ ಜಡಿದ್ರು. ಆತನ ಬಟ್ಟೆಗಳು ಯಾರಿಗೆ ಸೇರಬೇಕು ಅಂತ ಚೀಟಿ ಹಾಕಿ ಹಂಚ್ಕೊಂಡ್ರು.+ 25  ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಗೆ ಕಂಬಕ್ಕೆ ಜಡಿದ್ರು. 26  ಅಷ್ಟೇ ಅಲ್ಲ ಆತನ ಮೇಲೆ ಹಾಕಿದ ಆರೋಪವನ್ನ ಅಂದ್ರೆ “ಇವನು ಯೆಹೂದ್ಯರ ರಾಜ” ಅನ್ನೋ ಮಾತನ್ನ ಹಲಗೆ ಮೇಲೆ ಕೆತ್ತಿದ್ರು.+ 27  ಯೇಸುವಿನ ಜೊತೆ ಇಬ್ಬರು ಕಳ್ಳರನ್ನೂ ಕಂಬಕ್ಕೆ ಏರಿಸಿದ್ರು. ಒಬ್ಬನನ್ನ ಬಲಗಡೆಯಲ್ಲಿ ಇನ್ನೊಬ್ಬನನ್ನ ಎಡಗಡೆಯಲ್ಲಿ.+ 28  *—— 29  ದಾರಿಯಲ್ಲಿ ಹೋಗೋರು ಬರೋರು ತಲೆ ಆಡಿಸ್ತಾ+ “ನೀನು ದೇವಾಲಯವನ್ನ ಕೆಡವಿ ಮೂರೇ ದಿನದಲ್ಲಿ ಮತ್ತೆ ಕಟ್ತೀನಿ ಅಂತ ಹೇಳಿದ್ಯಲ್ಲಾ?+ 30  ಹಿಂಸಾ ಕಂಬದಿಂದ* ಇಳಿದು ಬಂದು ಮೊದಲು ನಿನ್ನನ್ನ ನೀನು ಕಾಪಾಡ್ಕೊ” ಅಂತ ಅವಮಾನ ಮಾಡ್ತಾ ಇದ್ರು. 31  ಅದೇ ತರ ಮುಖ್ಯ ಪುರೋಹಿತರು, ಪಂಡಿತರು ಯೇಸುವನ್ನ ಗೇಲಿ ಮಾಡ್ತಾ “ಇವನಿಗೆ ಬೇರೆಯವ್ರನ್ನ ಕಾಪಾಡೋಕಾಗುತ್ತೆ. ಆದ್ರೆ ಅವನನ್ನೇ ಕಾಪಾಡ್ಕೊಳ್ಳೋಕೆ ಆಗಲ್ಲ.+ 32  ಈ ಕ್ರಿಸ್ತ, ಈ ಇಸ್ರಾಯೇಲ್ಯರ ರಾಜ ಹಿಂಸಾ ಕಂಬದಿಂದ* ಇಳಿದು ಬರಲಿ. ಆಗ ನಂಬ್ತೀವಿ” ಅಂತ ಹೇಳ್ತಾ ಇದ್ರು.+ ಆತನ ಅಕ್ಕಪಕ್ಕದ ಕಂಬದಲ್ಲಿದ್ದ ಕಳ್ಳರು ಸಹ ಆತನನ್ನ ಅವಮಾನಿಸ್ತಾ ಇದ್ರು.+ 33  ಮಧ್ಯಾಹ್ನ ಸುಮಾರು 12ರಿಂದ 3 ಗಂಟೆ ತನಕ ಇಡೀ ದೇಶದಲ್ಲಿ ಕತ್ತಲೆ ಕವಿತು.+ 34  ಸುಮಾರು ಮೂರು ಗಂಟೆಗೆ ಯೇಸು “ಏಲೀ, ಏಲೀ, ಲಮಾ ಸಬಕ್ತಾನೀ?” ಅಂತ ಜೋರಾಗಿ ಕೂಗಿದನು. “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?” ಅನ್ನೋದೇ ಅದರರ್ಥ.+ 35  ಆಗ ಅಲ್ಲಿ ನಿಂತವ್ರಲ್ಲಿ ಕೆಲವರು “ನೋಡಿ, ಇವನು ಎಲೀಯನನ್ನ ಕರಿತಿದ್ದಾನೆ” ಅಂದ್ರು. 36  ತಕ್ಷಣ ಒಬ್ಬ ಓಡಿಹೋಗಿ ಒಂದು ಸ್ಪಂಜು ತಗೊಂಡು ಹುಳಿ ದ್ರಾಕ್ಷಾಮದ್ಯದಲ್ಲಿ ಅದ್ದಿ ಕೋಲಿಗೆ ಸಿಕ್ಕಿಸಿ ಕುಡಿಯೋಕೆ ಕೊಡ್ತಾ+ “ಇರಿ ನೋಡೋಣ, ಇವನನ್ನ ಕೆಳಗೆ ಇಳಿಸೋಕೆ ಎಲೀಯ ಬರಬಹುದು” ಅಂದ. 37  ಆದ್ರೆ ಯೇಸು ಜೋರಾಗಿ ಕೂಗಿ ಪ್ರಾಣ ಬಿಟ್ಟನು.*+ 38  ಆಗ ಪವಿತ್ರಸ್ಥಳದ ತೆರೆ+ ಮೇಲಿಂದ ಕೆಳಗಿನ ತನಕ ಹರಿದು ಎರಡು ಭಾಗ ಆಯ್ತು.+ 39  ಆತನು ಸಾಯುವಾಗ ಆದ ಘಟನೆಗಳನ್ನ ಯೇಸುವಿನ ಎದುರಿಗೆ ನಿಂತಿದ್ದ ಸೇನಾಧಿಕಾರಿ ನೋಡಿ “ಇವನು ನಿಜವಾಗ್ಲೂ ದೇವರ ಮಗನೇ” ಅಂದ.+ 40  ಕೆಲವು ಸ್ತ್ರೀಯರು ಸಹ ದೂರದಲ್ಲಿ ನಿಂತು ಇದನ್ನ ನೋಡ್ತಿದ್ರು. ಅವ್ರಲ್ಲಿ ಮಗ್ದಲದ ಮರಿಯ, ಸಲೋಮೆ, ಚಿಕ್ಕ ಯಾಕೋಬನ ಮತ್ತು ಯೋಸೆಯ ಅಮ್ಮ ಮರಿಯ ಇದ್ರು.+ 41  ಯೇಸು ಗಲಿಲಾಯದಲ್ಲಿ ಇದ್ದಾಗ ಇವರು ಆತನ ಜೊತೆ ಇದ್ದು ಸೇವೆ ಮಾಡಿದ್ರು.+ ಇವ್ರಲ್ಲದೆ ಬೇರೆ ತುಂಬ ಸ್ತ್ರೀಯರೂ ಯೇಸು ಜೊತೆ ಯೆರೂಸಲೇಮಿಗೆ ಬಂದಿದ್ರು. 42  ಇನ್ನೇನು ಸಂಜೆ ಆಗ್ತಿತ್ತು. ಅಷ್ಟೇ ಅಲ್ಲ ಅದು ಸಬ್ಬತ್‌ ದಿನದ ಹಿಂದಿನ ದಿನ. ಅದು ಸಿದ್ಧತೆಯ ದಿನ. 43  ಅರಿಮಥಾಯದ ಯೋಸೇಫ ಅನ್ನುವವನು ಧೈರ್ಯದಿಂದ ಪಿಲಾತನ ಹತ್ರ ಹೋಗಿ ಯೇಸುವಿನ ದೇಹ ಕೊಡು ಅಂತ ಕೇಳ್ಕೊಂಡ. ಇವನು ಹಿರೀಸಭೆಯ ಮಾನ್ಯ ಸದಸ್ಯನಾಗಿದ್ದ. ಅವನು ದೇವರ ಆಳ್ವಿಕೆಗಾಗಿ ಕಾಯ್ತಾ ಇದ್ದ.+ 44  ಆದ್ರೆ ಯೇಸು ಸತ್ತಿದ್ದಾನಾ ಇಲ್ವಾ ಅಂತ ಪಿಲಾತನಿಗೆ ಸಂಶಯ ಇತ್ತು. ಹಾಗಾಗಿ ಅವನು ಸೇನಾಧಿಕಾರಿಯನ್ನ ಕರೆದು ಯೇಸು ಸತ್ತಿದ್ದಾನಾ ಅಂತ ಕೇಳಿದ. 45  ಯೇಸು ಸತ್ತಿದ್ದಾನೆ ಅಂತ ಗೊತ್ತಾದ ಮೇಲೆ ದೇಹ ತಗೊಂಡು ಹೋಗೋಕೆ ಪಿಲಾತ ಯೋಸೇಫನಿಗೆ ಅನುಮತಿ ಕೊಟ್ಟ. 46  ಯೋಸೇಫ ಉತ್ತಮ ಗುಣಮಟ್ಟದ ನಾರಿನ ಬಟ್ಟೆ ತಗೊಂಡು ಬಂದು ಯೇಸುವಿನ ದೇಹಕ್ಕೆ ಸುತ್ತಿ ಸಮಾಧಿಯಲ್ಲಿಟ್ಟ.+ ಆ ಸಮಾಧಿಯನ್ನ ಬಂಡೆ ಕೊರೆದು ಮಾಡಿದ್ರು. ಆಮೇಲೆ ಆ ಸಮಾಧಿ ಮುಂದೆ ದೊಡ್ಡ ಕಲ್ಲನ್ನ ಉರುಳಿಸಿ ಮುಚ್ಚಿದ.+ 47  ಆದ್ರೆ ಮಗ್ದಲದ ಮರಿಯ ಮತ್ತು ಯೋಸೆಯ ಅಮ್ಮ ಮರಿಯ ಆತನನ್ನ ಸಮಾಧಿ ಮಾಡಿದ್ದ ಸ್ಥಳ ನೋಡ್ತಾ ಇದ್ರು.+

ಪಾದಟಿಪ್ಪಣಿ

ಸಾಮಾನ್ಯವಾಗಿ ಒಂದು ವಿಷ್ಯನ ಒಪ್ಕೊಳ್ಳೋಕೆ ಆ ಕಾಲದಲ್ಲಿ ಹೀಗೆ ಹೇಳ್ತಾ ಇದ್ರು.
ಅಥವಾ “ಕೊನೆ ಉಸಿರೆಳೆದನು.”