ಲೂಕ 1:1-80

  • ಥೆಯೊಫಿಲನಿಗೆ ಬರೆದ ಪತ್ರ (1-4)

  • ಯೋಹಾನನ ಜನನದ ಬಗ್ಗೆ ಗಬ್ರಿಯೇಲ ಭವಿಷ್ಯವಾಣಿ ಹೇಳಿದ (5-25)

  • ಯೇಸುವಿನ ಜನನದ ಬಗ್ಗೆ ಗಬ್ರಿಯೇಲ ಭವಿಷ್ಯವಾಣಿ ಹೇಳಿದ (26-38)

  • ಮರಿಯ ಎಲಿಸಬೆತನ್ನ ಭೇಟಿ ಮಾಡ್ತಾಳೆ (39-45)

  • ಮರಿಯ ಯೆಹೋವನನ್ನ ಹಾಡಿ ಹೊಗಳ್ತಾಳೆ (46-56)

  • ಯೋಹಾನ ಹುಟ್ಟಿದ, ಅವನಿಗೆ ಹೆಸ್ರಿಟ್ರು (57-66)

  • ಜಕರೀಯ ಹೇಳಿದ ಭವಿಷ್ಯವಾಣಿ (67-80)

1  ಮಾನ್ಯ ಥೆಯೊಫಿಲನೇ, ನೈಜ ಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಬರಿಯೋಕೆ ತುಂಬ ಜನ ಶ್ರಮಿಸಿದ್ದಾರೆ. ನಾವು ಸಹ ನಡೆದ ಆ ವಿಷ್ಯಗಳನ್ನ ನಿಜ ಅಂತ ನಂಬ್ತೀವಿ.+  ಅದನ್ನ ಕಣ್ಣಾರೆ ನೋಡಿದವರು+ ಮತ್ತು ದೇವರ ಸಂದೇಶ ಸಾರುವವರು ಅವರು ಬರೆದಿರೋ ವಿಷ್ಯಗಳನ್ನೇ ನಮಗೆ ಹೇಳಿದ್ರು.+  ನಾನು ಸಹ ಎಲ್ಲ ವಿಷ್ಯಗಳನ್ನ ಪರೀಕ್ಷಿಸಿದೆ. ಹಾಗಾಗಿ ಅದೆಲ್ಲ ಮೊದಲಿಂದ ಹೇಗೆ ನಡಿತೋ ಹಾಗೇ ಬರಿತಾ ಇದ್ದೀನಿ.+  ಯಾಕಂದ್ರೆ ನೀನು ಕಲಿತಿರೋ ವಿಷ್ಯಗಳೆಲ್ಲ ನಿಜ ಅಂತ ನಂಬೋಕೆ ಇದು ಸಹಾಯ ಮಾಡುತ್ತೆ.+  ರಾಜ ಹೆರೋದ*+ ಯೂದಾಯವನ್ನ ಆಳ್ತಿದ್ದ ಕಾಲ ಅದು. ಅಬೀಯನ+ ವರ್ಗಕ್ಕೆ ಸೇರಿದ ಜಕರೀಯ ಅನ್ನೋ ಒಬ್ಬ ಪುರೋಹಿತ ಇದ್ದ. ಅವನ ಹೆಂಡತಿ ಆರೋನನ ವಂಶದವಳು. ಹೆಸ್ರು ಎಲಿಸಬೆತ್‌.  ಇಬ್ರಿಗೂ ದೇವರ ದೃಷ್ಟಿಯಲ್ಲಿ ಒಳ್ಳೇ ಹೆಸ್ರಿತ್ತು. ಯಾಕಂದ್ರೆ ಅವರು ಯೆಹೋವನ* ಎಲ್ಲ ಆಜ್ಞೆ ಪಾಲಿಸ್ತಿದ್ರು, ಆತನ ಇಷ್ಟಾನೇ ಮಾಡ್ತಿದ್ರು. ಅವ್ರ ಮೇಲೆ ಯಾವ ಆರೋಪನೂ ಇರ್ಲಿಲ್ಲ.  ಆದ್ರೆ ಅವ್ರಿಗೆ ಮಕ್ಕಳಿರ್ಲಿಲ್ಲ. ಎಲಿಸಬೆತ್‌ ಬಂಜೆಯಾಗಿದ್ದಳು. ಅಷ್ಟೇ ಅಲ್ಲ ಇಬ್ರಿಗೂ ತುಂಬ ವಯಸ್ಸಾಗಿತ್ತು.  ಅವತ್ತು ಅಬೀಯನ ವರ್ಗದ ಸರದಿ+ ಇತ್ತು. ಹಾಗಾಗಿ ಜಕರೀಯ ಪುರೋಹಿತ ಸೇವೆ ಮಾಡ್ತಿದ್ದ.  ಪುರೋಹಿತರ ಪದ್ಧತಿ ಪ್ರಕಾರ ಧೂಪ+ ಅರ್ಪಿಸೋ ಸರದಿ ಅವನಿಗೆ ಬಂತು. ಅವನು ಯೆಹೋವನ* ಆಲಯದ ಪವಿತ್ರ ಸ್ಥಳದ ಒಳಗೆ ಹೋದ.+ 10  ಧೂಪ ಹಾಕೋ ಸಮಯದಲ್ಲಿ ಜನ್ರೆಲ್ಲ ಹೊರಗೆ ನಿಂತು ಪ್ರಾರ್ಥನೆ ಮಾಡ್ತಾ ಇದ್ರು. 11  ಧೂಪವೇದಿಯ ಬಲಗಡೆಯಲ್ಲಿ ಯೆಹೋವನ* ಒಬ್ಬ ದೇವದೂತ ನಿಂತಿರೋದನ್ನ ಜಕರೀಯ ನೋಡಿದ. 12  ಅವನಿಗೆ ತುಂಬ ಗಾಬರಿ, ಭಯ ಆಯ್ತು. 13  ದೇವದೂತ “ಜಕರೀಯ ಭಯಪಡಬೇಡ. ದೇವರು ನಿನ್ನ ಮನದಾಳದ ಪ್ರಾರ್ಥನೆ ಕೇಳಿಸ್ಕೊಂಡಿದ್ದಾನೆ. ನಿನ್ನ ಹೆಂಡತಿ ಎಲಿಸಬೆತ್‌ಗೆ ಗಂಡುಮಗು ಹುಟ್ಟುತ್ತೆ. ಮಗುಗೆ ಯೋಹಾನ ಅಂತ ಹೆಸ್ರು ಇಡಬೇಕು.+ 14  ನಿನಗೆ ತುಂಬ ಖುಷಿ, ಆನಂದ ಆಗುತ್ತೆ. ಅವನು ಹುಟ್ಟಿದಾಗ ತುಂಬ ಜನ ಸಂತೋಷಪಡ್ತಾರೆ.+ 15  ಯಾಕಂದ್ರೆ ಅವನಿಗೆ ಯೆಹೋವ* ವಿಶೇಷ ಕೆಲಸ ಕೊಡ್ತಾನೆ.+ ಅವನು ದ್ರಾಕ್ಷಾಮದ್ಯ, ಮತ್ತುಬರಿಸೋ ಯಾವುದನ್ನೂ ಕುಡಿಬಾರದು.+ ತಾಯಿ ಹೊಟ್ಟೆಯಲ್ಲಿ ಇರುವಾಗ್ಲೇ* ದೇವರು ಅವನಿಗೆ ಪವಿತ್ರಶಕ್ತಿ ಕೊಡ್ತಾನೆ.+ 16  ದೇವರಾದ ಯೆಹೋವನ* ಕಡೆ ವಾಪಸ್‌ ಬರೋಕೆ ತುಂಬ ಇಸ್ರಾಯೇಲ್ಯರಿಗೆ ಸಹಾಯ ಮಾಡ್ತಾನೆ.+ 17  ಅಷ್ಟೇ ಅಲ್ಲ ದೇವರು ಅವನನ್ನ ತನಗಿಂತ ಮುಂದೆ ಕಳಿಸ್ತಾನೆ. ಎಲೀಯನ ಹುರುಪು, ಶಕ್ತಿ ಕೊಡ್ತಾನೆ.+ ಹೀಗೆ ದೊಡ್ಡವರ ಹೃದಯ ಮಕ್ಕಳ ತರ ಆಗೋ ಹಾಗೆ ಮಾಡ್ತಾನೆ.+ ಮಾತು ಕೇಳದವ್ರಿಗೆ ನೀತಿವಂತರ ವಿವೇಕ ಕೊಡ್ತಾನೆ. ಯೆಹೋವನನ್ನ* ಆರಾಧಿಸೋಕೆ ಇಷ್ಟಪಡೋ ಜನ್ರನ್ನ ಆತನಿಗಾಗಿ ತಯಾರು ಮಾಡ್ತಾನೆ”+ ಅಂದ. 18  ಆಗ ಜಕರೀಯ “ಇದನ್ನ ಹೇಗೆ ನಂಬಲಿ? ನನಗೂ ನನ್ನ ಹೆಂಡತಿಗೂ ತುಂಬ ವಯಸ್ಸಾಗಿದೆ” ಅಂದ. 19  ಅದಕ್ಕೆ ದೇವದೂತ “ನಾನು ದೇವರ ಸನ್ನಿಧಿಯಲ್ಲಿ+ ಸೇವೆಮಾಡೋ ಗಬ್ರಿಯೇಲ.+ ಈ ಸಿಹಿಸುದ್ದಿ ಹೇಳೋಕೆ ದೇವರೇ ನನ್ನನ್ನ ಕಳಿಸಿದನು. 20  ಆದ್ರೆ ನೀನು ನಂಬಲಿಲ್ಲ. ನಾನು ಹೇಳಿದ್ದೆಲ್ಲ ಸರಿಯಾದ ಸಮಯದಲ್ಲಿ ನಡಿಯುತ್ತೆ. ಅಲ್ಲಿ ತನಕ ನೀನು ಮೂಕನಾಗಿ ಇರ್ತೀಯ, ಮಾತಾಡೋಕಾಗಲ್ಲ” ಅಂದ. 21  ಹೊರಗೆ ಜನ ಜಕರೀಯನಿಗಾಗಿ ಕಾಯ್ತಾ ಇದ್ರು. ಪವಿತ್ರ ಸ್ಥಳದಿಂದ ಹೊರಗೆ ಬರೋಕೆ ಯಾಕೆ ತಡ ಆಗ್ತಿದೆ ಅಂತ ಯೋಚಿಸ್ತಿದ್ರು. 22  ಹೊರಗೆ ಬಂದಾಗ ಅವನಿಂದ ಮಾತಾಡೋಕೆ ಆಗ್ಲಿಲ್ಲ. ಅವನು ಪವಿತ್ರ ಸ್ಥಳದಲ್ಲಿ ಅದ್ಭುತ* ನೋಡಿರಬೇಕು ಅಂತ ಜನ ಅರ್ಥಮಾಡ್ಕೊಂಡ್ರು. ಅವ್ರ ಜೊತೆ ಅವನು ಸನ್ನೆ ಮಾಡಿ ಮಾತಾಡ್ತಾ ಇದ್ದ. ಮಾತೇ ಬರಲಿಲ್ಲ. 23  ಪುರೋಹಿತ ಸೇವೆ ಮುಗಿದಾಗ ವಾಪಸ್‌ ಮನೆಗೆ ಹೋದ. 24  ಸ್ವಲ್ಪ ದಿನ ಆದ ಮೇಲೆ ಅವನ ಹೆಂಡತಿ ಎಲಿಸಬೆತ್‌ ಗರ್ಭಿಣಿ ಆದಳು. ಐದು ತಿಂಗಳ ತನಕ ಎಲ್ಲೂ ಹೋಗದೆ ಮನೆಯಲ್ಲೇ ಇದ್ದಳು. 25  “ದೇವರು ನನ್ನ ಕಡೆ ಗಮನ ಹರಿಸಿದ್ದಾನೆ. ಜನ ನನ್ನನ್ನ ಕೀಳಾಗಿ ನೋಡಬಾರದು ಅಂತ ಯೆಹೋವ* ನನಗೋಸ್ಕರ ಇದನ್ನ ಮಾಡಿದ್ದಾನೆ”+ ಅಂತಿದ್ದಳು. 26  ಅವಳಿಗೆ ಆರು ತಿಂಗಳಾದಾಗ ದೇವರು ಗಬ್ರಿಯೇಲ+ ದೂತನನ್ನ ಗಲಿಲಾಯದ ನಜರೇತ್‌ ಪಟ್ಟಣಕ್ಕೆ ಕಳಿಸಿದ. 27  ಅಲ್ಲಿ ಮರಿಯ ಅನ್ನೋ ಕನ್ಯೆ+ ಇದ್ದಳು. ಅವಳಿಗೆ ದಾವೀದ ವಂಶದ ಯೋಸೇಫನ ಜೊತೆ ನಿಶ್ಚಿತಾರ್ಥ ಆಗಿತ್ತು.+ 28  ಆ ದೇವದೂತ ಮರಿಯಳ ಹತ್ರ ಬಂದು “ನಮಸ್ಕಾರ! ದೇವರ ಆಶೀರ್ವಾದ ನಿನ್ನ ಮೇಲೆ ತುಂಬಾ ಇದೆ. ಯೆಹೋವ* ನಿನ್ನ ಜೊತೆ ಇದ್ದಾನೆ” ಅಂದ. 29  ಅವಳಿಗೆ ತುಂಬ ಗಾಬರಿ ಆಯ್ತು. ಆ ಮಾತಿನ ಅರ್ಥ ಏನಂತ ಯೋಚಿಸೋಕೆ ಶುರುಮಾಡಿದಳು. 30  ಹಾಗಾಗಿ ಆ ದೇವದೂತ “ಮರಿಯ, ಭಯಪಡಬೇಡ. ನಿನ್ನ ಮೇಲೆ ದೇವರ ಆಶೀರ್ವಾದ ಇದೆ. 31  ನೀನು ಗರ್ಭಿಣಿ ಆಗ್ತೀಯ, ನಿನಗೆ ಮಗ ಹುಟ್ತಾನೆ.+ ಅವನಿಗೆ ಯೇಸು ಅಂತ ಹೆಸ್ರಿಡಬೇಕು.+ 32  ಆತನು ಮಹಾನ್‌ ವ್ಯಕ್ತಿಯಾಗಿ+ ಸರ್ವೋನ್ನತನ ಮಗ+ ಅಂತ ಕರೆಸ್ಕೊಳ್ತಾನೆ. ಯೆಹೋವ* ದೇವರು ಆತನಿಗೆ ಪೂರ್ವಜನಾದ ದಾವೀದನ ಸಿಂಹಾಸನ ಕೊಡ್ತಾನೆ.+ 33  ಯಾಕೋಬನ ವಂಶದವರ ಮೇಲೆ ರಾಜನಾಗಿ ಸದಾಕಾಲ ಆಳ್ತಾನೆ. ಆತನ ಆಳ್ವಿಕೆಗೆ ಅಂತ್ಯಾನೇ ಇಲ್ಲ”+ ಅಂದ. 34  ಅದಕ್ಕೆ ಮರಿಯ “ನಾನಿನ್ನೂ ಕನ್ಯೆ! ಹೇಗೆ ಮಗು ಹುಟ್ಟುತ್ತೆ?”+ ಅಂದಳು. 35  ಆಗ ದೇವದೂತ “ಪವಿತ್ರಶಕ್ತಿ ನಿನ್ನ ಮೇಲೆ ಬರುತ್ತೆ.+ ಸರ್ವೋನ್ನತನ ಶಕ್ತಿ ನಿನ್ನನ್ನ ಕಾಪಾಡುತ್ತೆ. ಹಾಗಾಗಿ ನಿನಗೆ ಹುಟ್ಟೋ ಮಗ ಪವಿತ್ರನಾಗಿ ಇರ್ತಾನೆ.+ ಅವನನ್ನ ದೇವರ ಮಗ+ ಅಂತ ಕರಿತಾರೆ. 36  ನೋಡು, ನಿನ್ನ ಸಂಬಂಧಿ ಎಲಿಸಬೆತ್‌ ಸಹ ವಯಸ್ಸಾದ ಮೇಲೆ ಗರ್ಭಿಣಿ ಆಗಿದ್ದಾಳೆ. ಅವಳ ಹೊಟ್ಟೆಯಲ್ಲಿ ಗಂಡುಮಗು ಇದೆ. ಜನ ಬಂಜೆ ಅಂತ ಕರಿತಿದ್ದ ಅವಳಿಗೆ ಈಗ ಆರು ತಿಂಗಳು. 37  ದೇವರಿಗೆ ಯಾವುದೂ ಅಸಾಧ್ಯ ಅಲ್ಲ”+ ಅಂದ. 38  ಮರಿಯ “ನಾನು ಯೆಹೋವನ* ದಾಸಿ! ನೀನು ಹೇಳಿದ ಹಾಗೇ ಆಗಲಿ” ಅಂದಳು. ಆ ದೇವದೂತ ಅಲ್ಲಿಂದ ಹೋದ. 39  ಆಮೇಲೆ ಮರಿಯ ಬೆಟ್ಟಗುಡ್ಡಗಳ ಪ್ರದೇಶವಾಗಿದ್ದ ಯೆಹೂದದ ಒಂದು ಪಟ್ಟಣಕ್ಕೆ ಬೇಗಬೇಗ ಹೋದಳು. 40  ಜಕರೀಯನ ಮನೆಗೆ ಹೋಗಿ ಎಲಿಸಬೆತ್‌ಗೆ ನಮಸ್ಕಾರ ಅಂದಳು. 41  ಅದನ್ನ ಎಲಿಸಬೆತ್‌ ಕೇಳಿದಾಗ ಅವಳ ಹೊಟ್ಟೆಯಲ್ಲಿದ್ದ ಮಗು ಜಿಗಿದಾಡಿತು. ಎಲಿಸಬೆತ್‌ ಪವಿತ್ರಶಕ್ತಿಯ ಸಹಾಯದಿಂದ 42  ಗಟ್ಟಿಯಾಗಿ “ನೀನು ಸ್ತ್ರೀಯರಲ್ಲೇ ಹೆಚ್ಚು ಆಶೀರ್ವಾದ ಪಡೆದವಳು. ನಿನ್ನ ಹೊಟ್ಟೆಯಲ್ಲಿರೋ ಮಗುಗೂ ಆಶೀರ್ವಾದ ಸಿಗಲಿ! 43  ನನ್ನ ಒಡೆಯನ ತಾಯಿನೇ ನನ್ನನ್ನ ನೋಡೋಕೆ ಬಂದಿದ್ದಾಳೆ. ನನಗೆ ಸಿಕ್ಕಿರೋದು ಎಂಥಾ ಸೌಭಾಗ್ಯ! 44  ನೋಡು, ನೀನು ನಮಸ್ಕಾರ ಅಂದ ತಕ್ಷಣ ನನ್ನ ಹೊಟ್ಟೆಯಲ್ಲಿರೋ ಮಗು ಖುಷಿಯಿಂದ ಜಿಗಿದಾಡಿತು. 45  ದೇವರ ಮಾತನ್ನ ನಂಬಿದ ನೀನು ಸಂತೋಷವಾಗಿ ಇರ್ತಿಯ. ಯಾಕಂದ್ರೆ ಯೆಹೋವ* ಹೇಳಿದ್ದೆಲ್ಲ ತಪ್ಪದೆ ನೆರವೇರುತ್ತೆ” ಅಂದಳು. 46  ಆಗ ಮರಿಯ “ನನ್ನ ಪ್ರಾಣ ಯೆಹೋವನನ್ನ* ಹೊಗಳುತ್ತೆ.+ 47  ನನ್ನ ರಕ್ಷಕನಾದ ದೇವರಿಂದ ನನಗೆ ಆಗ್ತಿರೋ ಸಂತೋಷನ ತಡಿಯೋಕಾಗ್ತಿಲ್ಲ.+ 48  ಯಾಕಂದ್ರೆ ಆತನು ತನ್ನ ದಾಸಿಯ ದೀನಸ್ಥಿತಿ ಗುರುತಿಸಿದ್ದಾನೆ.+ ಇವತ್ತಿಂದ ಎಲ್ಲ ಪೀಳಿಗೆಯವರು ನನ್ನನ್ನ ಭಾಗ್ಯವಂತಳು+ ಅಂತ ಹೇಳ್ತಾರೆ. 49  ಶಕ್ತಿಶಾಲಿ ದೇವರು ನನ್ನ ವಿಷ್ಯದಲ್ಲಿ ದೊಡ್ಡದೊಡ್ಡ ಕೆಲಸಗಳನ್ನ ಮಾಡಿದ್ದಾನೆ. ಆತನ ಹೆಸ್ರು ಪವಿತ್ರವಾಗಿದೆ.+ 50  ಆತನನ್ನ ನಂಬುವವರ* ಮೇಲೆ ಆತನ ಕರುಣೆ ಯಾವಾಗ್ಲೂ ಇರುತ್ತೆ.+ 51  ದೇವರು ತನ್ನ ಕೈಯಿಂದ ಶಕ್ತಿಶಾಲಿ ಕೆಲಸಗಳನ್ನ ಮಾಡಿದ್ದಾನೆ. ಗರ್ವಿಷ್ಠರನ್ನ ಚೆಲ್ಲಾಪಿಲ್ಲಿ ಮಾಡಿದ್ದಾನೆ.+ 52  ದೊಡ್ಡ ಅಧಿಕಾರದಲ್ಲಿದ್ದ ಜನ್ರನ್ನ ಸಿಂಹಾಸನದಿಂದ+ ಇಳಿಸಿ ದೀನರನ್ನ ಮೇಲೆ ಏರಿಸಿದ್ದಾನೆ.+ 53  ಹಸಿದವ್ರಿಗೆ ತೃಪ್ತಿ ಆಗುವಷ್ಟು ಒಳ್ಳೇದನ್ನ ಕೊಟ್ಟು+ ಶ್ರೀಮಂತರನ್ನ ಬರೀ ಕೈಯಲ್ಲಿ ಕಳಿಸಿಬಿಟ್ಟಿದ್ದಾನೆ. 54  ತನ್ನ ಸೇವಕನಾದ ಇಸ್ರಾಯೇಲನಿಗೆ ಸಹಾಯ ಮಾಡೋಕೆ ಬಂದಿದ್ದಾನೆ.+ ನಮ್ಮ ಪೂರ್ವಜರಿಗೆ ಹೇಳಿದ ಹಾಗೆ 55  ಅಬ್ರಹಾಮನ ಮೇಲೆ, ಅವನ ವಂಶದವರ+ ಮೇಲೆ ಯಾವಾಗ್ಲೂ ಕರುಣೆ ತೋರಿಸಿದ್ದಾನೆ” ಅಂದಳು. 56  ಮರಿಯ ಸುಮಾರು ಮೂರು ತಿಂಗಳು ಎಲಿಸಬೆತ್‌ ಜೊತೆ ಇದ್ದು ಮನೆಗೆ ವಾಪಸ್‌ ಹೋದಳು. 57  ಎಲಿಸಬೆತ್‌ಗೆ ಮಗು ಆಗೋ ಸಮಯ ಬಂತು. ಅವಳಿಗೆ ಗಂಡುಮಗು ಆಯ್ತು. 58  ಯೆಹೋವ* ವಿಶೇಷ ಕರುಣೆ ತೋರಿಸಿದ್ದಾನೆ ಅಂತ ಅಕ್ಕಪಕ್ಕದವರು, ಸಂಬಂಧಿಕರು ಕೇಳಿಸ್ಕೊಂಡಾಗ ಎಲಿಸಬೆತ್‌ ಜೊತೆ ಖುಷಿಪಟ್ರು.+ 59  ಎಂಟನೇ ದಿನ ಅವರು ಆ ಪುಟಾಣಿ ಮಗುಗೆ ಸುನ್ನತಿ ಮಾಡಿಸೋಕೆ ಬಂದ್ರು.+ ಮಗುಗೆ ಜಕರೀಯ ಅಂತ ಅದ್ರ ಅಪ್ಪನ ಹೆಸ್ರನ್ನೇ ಇಡಬೇಕಂತ ಇದ್ರು. 60  ಅದ್ರ ಅಮ್ಮ “ಬೇಡ, ಯೋಹಾನ ಅಂತ ಹೆಸರಿಡಬೇಕು” ಅಂದಳು. 61  ಅದಕ್ಕೆ ಅವರು “ನಿನ್ನ ಸಂಬಂಧಿಕ್ರಲ್ಲಿ ಯಾರಿಗೂ ಆ ಹೆಸ್ರು ಇಲ್ವಲ್ಲಾ?” ಅಂದ್ರು. 62  ಆಮೇಲೆ ಮಗುವಿನ ಅಪ್ಪನ ಹತ್ರ ಹೋಗಿ ಏನು ಹೆಸ್ರಿಡಬೇಕು ಅಂತ ಸನ್ನೆಮಾಡಿದ್ರು. 63  ಅದಕ್ಕೆ ಅವನು ಒಂದು ಹಲಗೆ ತರೋಕೆ ಹೇಳಿ ಅದ್ರ ಮೇಲೆ “ಅವನ ಹೆಸ್ರು ಯೋಹಾನ”+ ಅಂತ ಬರೆದ. ಇದನ್ನ ನೋಡಿ ಅವ್ರಿಗೆ ತುಂಬ ಆಶ್ಚರ್ಯ ಆಯ್ತು. 64  ತಕ್ಷಣ ಅವನ ನಾಲಿಗೆ ಸಡಿಲ ಆಯ್ತು. ದೇವರನ್ನ ಕೊಂಡಾಡ್ತಾ ಮಾತಾಡೋಕೆ ಶುರುಮಾಡಿದ.+ 65  ಅಕ್ಕಪಕ್ಕದ ಜನ್ರಿಗೆಲ್ಲ ತುಂಬ ಭಯ ಆಯ್ತು. ಯೂದಾಯದ ಜನ್ರೆಲ್ಲ ಇದ್ರ ಬಗ್ಗೆನೇ ಮಾತಾಡ್ತಾ ಇದ್ರು. 66  ಈ ವಿಷ್ಯ ಕೇಳಿಸ್ಕೊಂಡವ್ರ ಮನಸ್ಸಲ್ಲಿ “ಈ ಮಗು ದೊಡ್ಡವನಾದ ಮೇಲೆ ಏನಾಗ್ತಾನೆ?” ಅನ್ನೋ ಪ್ರಶ್ನೆ ಇತ್ತು. ಯಾಕಂದ್ರೆ ಅವನು ಯೆಹೋವನ* ಮೆಚ್ಚಿಕೆ ಪಡ್ಕೊಂಡಿದ್ದ. 67  ಆಗ ಮಗುವಿನ ತಂದೆ ಜಕರೀಯ ಪವಿತ್ರಶಕ್ತಿಯ ಸಹಾಯದಿಂದ ಭವಿಷ್ಯ ಹೇಳ್ತಾ 68  “ಇಸ್ರಾಯೇಲ್ಯರ ದೇವರಾದ ಯೆಹೋವನಿಗೆ* ಸ್ತುತಿ.+ ಯಾಕಂದ್ರೆ ಆತನು ಜನ್ರನ್ನ ಗಮನಿಸಿದ್ದಾನೆ, ಬಿಡುಗಡೆ ಮಾಡಿದ್ದಾನೆ.+ 69  ತನ್ನ ಸೇವಕ ದಾವೀದನ ವಂಶದಲ್ಲಿ ನಮಗಾಗಿ ಬಲಿಷ್ಠ ರಕ್ಷಕನನ್ನ* ಹುಟ್ಟಿಸಿದ್ದಾನೆ.+ 70  ಹಿಂದಿನ ಕಾಲದಿಂದ ತನ್ನ ಪವಿತ್ರ ಪ್ರವಾದಿಗಳ ಮೂಲಕ ಹೇಳಿಸಿದ್ದನ್ನ ಮಾಡಿದ್ದಾನೆ.+ 71  ದೇವರು ನಮ್ಮನ್ನ ಶತ್ರುಗಳ ಕೈಯಿಂದ, ದ್ವೇಷಿಸುವವರ ಕೈಯಿಂದ ರಕ್ಷಿಸ್ತಾನೆ ಅಂತ ಮಾತು ಕೊಟ್ಟಿದ್ದ.+ 72  ನಮ್ಮ ಪೂರ್ವಜರಿಗೆ ಕೊಟ್ಟ ಆ ಮಾತನ್ನ ಖಂಡಿತ ನೆರವೇರಿಸ್ತಾನೆ. ಕರುಣೆ ತೋರಿಸ್ತಾನೆ. ಪವಿತ್ರ ಒಪ್ಪಂದವನ್ನ ನೆನಪು ಮಾಡ್ಕೊಳ್ತಾನೆ.+ 73  ನಮ್ಮ ಪೂರ್ವಜ ಅಬ್ರಹಾಮನಿಗೆ ದೇವರು ಕೊಟ್ಟ ಮಾತೇ ಆ ಒಪ್ಪಂದ.+ 74  ಅದ್ರ ಪ್ರಕಾರ ನಾವು ಶತ್ರುಗಳ ಕೈಯಿಂದ ಬಿಡುಗಡೆ ಆದ ಮೇಲೆ ಭಯಪಡದೆ ತನಗೆ ಪವಿತ್ರ ಸೇವೆ ಮಾಡೋ ದೊಡ್ಡ ಅವಕಾಶ ಕೊಡ್ತಾನೆ. 75  ಆಗ ಜೀವ ಇರೋ ತನಕ ನಂಬಿಕೆ ಕಾಪಾಡ್ಕೊಂಡು ಸರಿಯಾದದ್ದನ್ನೇ ಮಾಡೋಕಾಗುತ್ತೆ. 76  ಆದ್ರೆ, ಪುಟ್ಟ ನಿನ್ನ ಬಗ್ಗೆ ಹೇಳೋದಾದ್ರೆ ನಿನ್ನನ್ನ ಸರ್ವೋನ್ನತನ ಪ್ರವಾದಿ ಅಂತ ಕರಿತಾರೆ. ಯಾಕಂದ್ರೆ ಯೆಹೋವ* ತನ್ನ ದಾರಿ ಸಿದ್ಧಮಾಡೋಕೆ ತನಗಿಂತ ಮುಂದೆ ನಿನ್ನನ್ನ ಕಳಿಸ್ತಾನೆ.+ 77  ಅಷ್ಟೇ ಅಲ್ಲ ಆತನು ಜನ್ರ ಪಾಪಗಳನ್ನ ಕ್ಷಮಿಸಿ ಅವ್ರನ್ನ ರಕ್ಷಿಸ್ತಾನೆ ಅನ್ನೋ ಸಂದೇಶ ಸಾರ್ತಿಯ.+ 78  ಇದು ನಮ್ಮ ದೇವರ ಕೋಮಲ ಕರುಣೆಯಿಂದ ಮಾತ್ರ ಸಾಧ್ಯ. ಆತನು ನಮ್ಮ ಕಡೆ ಕರುಣೆ ತೋರಿಸಿದ್ರೆ ಸಾಕು, ನಮ್ಮ ಮೇಲೆ ಸೂರ್ಯ ಮೂಡ್ತಾನೆ. 79  ಕತ್ತಲೆಯಲ್ಲಿ, ಮರಣದ ನೆರಳಲ್ಲಿ ಕೂತವ್ರಿಗೆ ಬೆಳಕು ಸಿಗುತ್ತೆ.+ ನಮ್ಮನ್ನ ಶಾಂತಿಯ ಮಾರ್ಗದಲ್ಲಿ ನಡೆಸ್ತಾನೆ” ಅಂದ. 80  ಆ ಚಿಕ್ಕ ಹುಡುಗ ಬೆಳೆದು ದೊಡ್ಡವನಾದ. ದೇವರ ಜೊತೆ ಅವನ ಸಂಬಂಧನೂ ಗಟ್ಟಿ ಆಯ್ತು. ಇಸ್ರಾಯೇಲ್ಯರಿಗೆ ಕಾಣಿಸ್ಕೊಳ್ಳೋ ತನಕ ಕಾಡಲ್ಲೇ ಜೀವನ ಮಾಡಿದ.

ಪಾದಟಿಪ್ಪಣಿ

ಅಕ್ಷ. “ಹುಟ್ಟೋಕೂ ಮುಂಚೆನೇ.”
ಅಥವಾ “ದರ್ಶನ.”
ಅಕ್ಷ. “ಭಯಪಡುವವರ.”
ಅಕ್ಷ. “ರಕ್ಷಣೆಯ ಕೊಂಬನ್ನ.” ಪದವಿವರಣೆಯಲ್ಲಿ “ಕೊಂಬು” ನೋಡಿ.