ಲೂಕ 4:1-44

  • ಸೈತಾನ ಯೇಸುವನ್ನ ಪರೀಕ್ಷಿಸಿದ (1-13)

  • ಗಲಿಲಾಯದಲ್ಲಿ ಯೇಸು ಸಾರೋಕೆ ಆರಂಭಿಸಿದನು (14, 15)

  • ನಜರೇತಲ್ಲಿ ಯೇಸುವನ್ನ ಜನ್ರು ತಿರಸ್ಕರಿಸಿದ್ರು (16-30)

  • ಕಪೆರ್ನೌಮ್‌ ಊರಿನ ಸಭಾ ಮಂದಿರದಲ್ಲಿ (31-37)

  • ಸೀಮೋನನ ಅತ್ತೆಯನ್ನ ಮತ್ತು ಬೇರೆಯವ್ರನ್ನ ವಾಸಿ ಮಾಡಿದನು (38-41)

  • ಯಾರೂ ಇಲ್ಲದೆ ಇರೋ ಜಾಗದಲ್ಲಿ ಇದ್ದ ಯೇಸುವನ್ನ ಜನ್ರು ಕಂಡುಹಿಡಿದ್ರು (42-44)

4  ಆಮೇಲೆ ಯೇಸು ಯೋರ್ದನ್‌ ನದಿಯಿಂದ ಹೋದನು. ದೇವರು ಆತನಿಗೆ ಪವಿತ್ರಶಕ್ತಿ ಕೊಟ್ಟನು, ಆ ಶಕ್ತಿ ಆತನನ್ನ ಬರಡು ಪ್ರದೇಶಕ್ಕೆ ಕರ್ಕೊಂಡು ಹೋಯ್ತು.+  ಯೇಸು 40 ದಿನ ಕಾಡಲ್ಲಿ ಇದ್ದಿದ್ರಿಂದ ಏನೂ ತಿಂದಿರ್ಲಿಲ್ಲ. ಹಾಗಾಗಿ ತುಂಬ ಹಸಿವಾಯ್ತು. ಆಗ ಸೈತಾನ ಆತನನ್ನ ಪರೀಕ್ಷಿಸಿದ.+  ಸೈತಾನ “ನೀನು ದೇವರ ಮಗನಾಗಿದ್ರೆ ಈ ಕಲ್ಲಿಗೆ ರೊಟ್ಟಿ ಆಗು ಅಂತ ಹೇಳು” ಅಂದ.  ಅದಕ್ಕೆ ಯೇಸು “‘ಮನುಷ್ಯ ರೊಟ್ಟಿ ತಿನ್ನೋದ್ರಿಂದ ಮಾತ್ರ ಬದುಕಲ್ಲ’ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ”+ ಅಂದನು.  ಸೈತಾನ ಯೇಸುವನ್ನ ತುಂಬ ಎತ್ರದ ಸ್ಥಳಕ್ಕೆ ಕರ್ಕೊಂಡು ಹೋಗಿ ಲೋಕದ ಎಲ್ಲ ಸಾಮ್ರಾಜ್ಯಗಳನ್ನ ಒಂದೇ ಕ್ಷಣದಲ್ಲಿ ತೋರಿಸಿದ.+  ಆಮೇಲೆ ಹೀಗಂದ “ಎಲ್ಲ ಅಧಿಕಾರವನ್ನ, ಅದ್ರ ವೈಭವವನ್ನ ನಾನು ನಿನಗೆ ಕೊಡ್ತೀನಿ. ಯಾಕಂದ್ರೆ ಇದೆಲ್ಲ ನಂದೇ.+ ಇದನ್ನ ನಂಗಿಷ್ಟ ಇರೋರಿಗೆ ಕೊಡ್ತೀನಿ.  ಒಂದೇ ಒಂದು ಸಾರಿ ನೀನು ನನ್ನನ್ನ ಆರಾಧಿಸಿದ್ರೆ ಸಾಕು, ಇವೆಲ್ಲ ನಿಂಗೇ ಕೊಡ್ತೀನಿ” ಅಂದ.  ಅದಕ್ಕೆ ಯೇಸು “‘ನಿನ್ನ ದೇವರಾಗಿರೋ ಯೆಹೋವನನ್ನೇ* ನೀನು ಆರಾಧಿಸಬೇಕು, ಆತನೊಬ್ಬನಿಗೇ ನೀನು ಪವಿತ್ರ ಸೇವೆ ಸಲ್ಲಿಸಬೇಕು’ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ”+ ಅಂದನು.  ಆಮೇಲೆ ಸೈತಾನ ಆತನನ್ನ ಯೆರೂಸಲೇಮಿಗೆ ಕರ್ಕೊಂಡು ಹೋಗಿ ದೇವಾಲಯದ ಗೋಡೆ* ಮೇಲೆ ನಿಲ್ಲಿಸಿ “ನೀನು ದೇವರ ಮಗನಾಗಿದ್ರೆ ಇಲ್ಲಿಂದ ಜಿಗಿ.+ 10  ಯಾಕಂದ್ರೆ ಪವಿತ್ರ ಗ್ರಂಥದಲ್ಲಿ ಬರೆದಿರೋ ಹಾಗೆ ‘ನಿನ್ನನ್ನ ಕಾದು ಕಾಪಾಡೋಕೆ ದೇವರು ದೂತರಿಗೆ ಆಜ್ಞೆ ಕೊಡ್ತಾನೆ. 11  ನಿನ್ನ ಕಾಲು ಕಲ್ಲಿಗೆ ತಾಗದ ಹಾಗೆ ಅವರು ಕೈಯಿಂದ ನಿನ್ನನ್ನ ಎತ್ಕೊಳ್ತಾರೆ”+ ಅಂದ. 12  ಆಗ ಯೇಸು “‘ನೀನು ನಿನ್ನ ದೇವರಾದ ಯೆಹೋವನನ್ನ* ಪರೀಕ್ಷಿಸಬಾರದು’ ಅಂತಾನೂ ಪವಿತ್ರ ಗ್ರಂಥದಲ್ಲಿ ಬರೆದಿದೆ”+ ಅಂದನು. 13  ಹೀಗೆ ಪಿಶಾಚ ಎಲ್ಲ ಪರೀಕ್ಷೆಗಳನ್ನ ಮುಗಿಸಿ ಇನ್ನೊಂದು ಸಾರಿ ಒಳ್ಳೇ ಅವಕಾಶ ಸಿಗುತ್ತೆ ಅಂದ್ಕೊಂಡು ಆತನನ್ನ ಬಿಟ್ಟುಹೋದ.+ 14  ಆಮೇಲೆ ದೇವರ ಪವಿತ್ರಶಕ್ತಿಯ ಸಹಾಯದಿಂದ ಯೇಸು ಗಲಿಲಾಯಕ್ಕೆ ಹೋದನು.+ ಆತನ ಬಗ್ಗೆ ಸುತ್ತಮುತ್ತ ಪ್ರದೇಶಗಳಲ್ಲಿ ಒಳ್ಳೇ ಸುದ್ದಿ ಹಬ್ಬಿತು. 15  ಆತನು ಅವರ ಸಭಾಮಂದಿರಗಳಲ್ಲಿ ಕಲಿಸೋಕೆ ಶುರುಮಾಡಿದನು. ಎಲ್ರೂ ಆತನನ್ನ ಗೌರವದಿಂದ ನೋಡ್ತಿದ್ರು. 16  ಆಮೇಲೆ ಆತನು ನಜರೇತಿಗೆ ಹೋದನು.+ ಆತನು ಬೆಳೆದು ದೊಡ್ಡವನಾಗಿದ್ದು ಅಲ್ಲೇ. ರೂಢಿ ಪ್ರಕಾರ ಸಬ್ಬತ್‌ ದಿನದಲ್ಲಿ ಸಭಾಮಂದಿರಕ್ಕೆ+ ಹೋಗಿ ವಚನಗಳನ್ನ ಓದೋಕೆ ಎದ್ದು ನಿಂತನು. 17  ಆಗ ಆತನಿಗೆ ಪ್ರವಾದಿ ಯೆಶಾಯನ ಸುರುಳಿ ಕೊಟ್ರು. ಯೇಸು ಅದನ್ನ ತೆರೆದು ವಚನ ಹುಡುಕಿ 18  “ನನಗೆ ಯೆಹೋವ* ತನ್ನ ಪವಿತ್ರಶಕ್ತಿ ಕೊಟ್ಟಿದ್ದಾನೆ. ಯಾಕಂದ್ರೆ ಬಡವರಿಗೆ ಸಿಹಿಸುದ್ದಿ ಹೇಳೋಕೆ ನನ್ನನ್ನ ಅಭಿಷೇಕಿಸಿದ್ದಾನೆ. ಸೆರೆಯಲ್ಲಿ ಇರುವವರಿಗೆ ಬಿಡುಗಡೆ ಮಾಡೋಕೆ, ಕುರುಡರಿಗೆ ಕಣ್ಣನ್ನ ಕೊಡೋಕೆ, ಮನಮುರಿದವರನ್ನ ಬಿಡಿಸೋಕೆ ನನ್ನನ್ನ ಕಳಿಸಿದ್ದಾನೆ.+ 19  ಯೆಹೋವನ* ಅನುಗ್ರಹ ಸಿಗೋ ಸಮಯದ ಬಗ್ಗೆ ಸಾರೋಕೆ ಕಳಿಸಿದ್ದಾನೆ”+ ಅಂತ ಓದಿದನು. 20  ಓದಿದ ಮೇಲೆ ಆ ಸುರುಳಿ ಸುತ್ತಿ ಸೇವಕನಿಗೆ ಕೊಟ್ಟು ಹೋಗಿ ಕೂತನು. ಸಭಾಮಂದಿರದಲ್ಲಿದ್ದ ಜನ ಕಣ್ಣು ಮಿಟುಕಿಸದೆ ಆತನನ್ನೇ ನೋಡ್ತಾ ಇದ್ರು. 21  ಆಗ “ನೀವು ಈಗಷ್ಟೇ ಕೇಳಿಸ್ಕೊಂಡ ವಚನ ಇವತ್ತು ನೆರವೇರಿದೆ”+ ಅಂದನು. 22  ಜನ್ರೆಲ್ಲ ಆತನ ಬಗ್ಗೆ ಒಳ್ಳೇದಾಗಿ ಮಾತಾಡೋಕೆ ಶುರುಮಾಡಿದ್ರು. ಆತನ ಬಾಯಿಂದ ಬರ್ತಿದ್ದ ಮನಮುಟ್ಟೋ ಮಾತುಗಳಿಗೆ+ ಆಶ್ಚರ್ಯಪಟ್ಟು ‘ಇವನು ಯೋಸೇಫನ ಮಗ ತಾನೇ?’+ ಅಂತ ಹೇಳ್ತಿದ್ರು. 23  ಆಗ ಯೇಸು “‘ವೈದ್ಯನೇ ಮೊದಲು ನಿನ್ನನ್ನೇ ವಾಸಿಮಾಡ್ಕೊ’ ಅನ್ನೋ ಗಾದೆ ನನಗೆ ಹೇಳ್ತೀರ. ‘ಕಪೆರ್ನೌಮಲ್ಲಿ ನೀನು ಮಾಡಿದ್ದನ್ನ ಕೇಳಿಸ್ಕೊಂಡ್ವಿ. ಆದ್ರೆ ಅದೇ ಕೆಲಸಗಳನ್ನ ನಿನ್ನ ಸ್ವಂತ ಊರಲ್ಲಿ ಮಾಡಿ ತೋರಿಸು’ ಅಂತೀರ ಅನ್ನೋದು ನನಗೆ ಚೆನ್ನಾಗಿ ಗೊತ್ತು”+ ಅಂದನು. 24  ಆಮೇಲೆ “ನಿಮಗೆ ನಿಜ ಹೇಳ್ತೀನಿ, ಯಾವ ಪ್ರವಾದಿಗೂ ಸ್ವಂತ ಊರಲ್ಲಿ ಮರ್ಯಾದೆ ಸಿಗಲ್ಲ.+ 25  ಉದಾಹರಣೆಗೆ ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಬರ ಬಂತು. ಇಸ್ರಾಯೇಲಲ್ಲಿ ತುಂಬ ವಿಧವೆಯರಿದ್ರು.+ 26  ಆದ್ರೆ ದೇವರು ಎಲೀಯನನ್ನ ಅವರಲ್ಲಿ ಯಾರ ಹತ್ರಾನೂ ಕಳಿಸಲಿಲ್ಲ. ಸೀದೋನಿನ ಚಾರೆಪ್ತ ಊರಿನ ಒಬ್ಬ ವಿಧವೆ ಹತ್ರ ಕಳಿಸಿದನು.+ 27  ಅಷ್ಟೇ ಅಲ್ಲ ಪ್ರವಾದಿ ಎಲೀಷನ ಕಾಲದಲ್ಲಿ ಇಸ್ರಾಯೇಲಲ್ಲಿ ತುಂಬ ಕುಷ್ಠರೋಗಿಗಳು ಇದ್ರು. ಆದ್ರೆ ಯಾರಿಗೂ ವಾಸಿ ಆಗಲಿಲ್ಲ, ಸಿರಿಯದ ನಾಮಾನನಿಗೆ ಮಾತ್ರ ವಾಸಿ ಆಯ್ತು”+ ಅಂದನು. 28  ಇದನ್ನ ಕೇಳಿ ಸಭಾಮಂದಿರದಲ್ಲಿದ್ದ ತುಂಬ ಜನ್ರಿಗೆ ಕೋಪ ಬಂತು.+ 29  ಅವರು ಎದ್ದು ಆತನನ್ನ ಊರ ಹೊರಗೆ ಕರ್ಕೊಂಡು ಹೋದ್ರು. ಯಾಕಂದ್ರೆ ಅವ್ರ ಊರು ಬೆಟ್ಟದ ಮೇಲಿತ್ತು. ಅಲ್ಲಿಂದ ಆತನನ್ನ ತಳ್ಳಬೇಕಂತ ಇದ್ರು. 30  ಆದ್ರೆ ಆತನು ಅವ್ರ ಮಧ್ಯದಿಂದ ತಪ್ಪಿಸ್ಕೊಂಡು ತನ್ನ ದಾರಿಹಿಡಿದು ಹೋದನು.+ 31  ಆಮೇಲೆ ಗಲಿಲಾಯದಲ್ಲಿದ್ದ ಕಪೆರ್ನೌಮ್‌ ಊರಿಗೆ ಬಂದು ಸಬ್ಬತ್‌ ದಿನದಲ್ಲಿ ಕಲಿಸ್ತಾ ಇದ್ದನು.+ 32  ಆತನು ಕಲಿಸ್ತಿದ್ದ ರೀತಿ ನೋಡಿ ಅವ್ರಿಗೆ ತುಂಬ ಆಶ್ಚರ್ಯ ಆಯ್ತು.+ ಯಾಕಂದ್ರೆ ಆತನು ದೇವರಿಂದ ಅಧಿಕಾರ ಸಿಕ್ಕವನಂತೆ ಮಾತಾಡ್ತಿದ್ದನು. 33  ಆ ಸಭಾಮಂದಿರದಲ್ಲಿ ಕೆಟ್ಟ ದೇವದೂತ ಹಿಡಿದಿದ್ದ ಒಬ್ಬ ಮನುಷ್ಯನಿದ್ದ. ಅವನು ಗಟ್ಟಿಯಾಗಿ ಕಿರಿಚುತ್ತಾ+ 34  “ನಜರೇತಿನ ಯೇಸು,+ ನೀನ್ಯಾಕೆ ಇಲ್ಲಿಗೆ ಬಂದೆ? ನಮ್ಮನ್ನ ನಾಶಮಾಡೋಕಂತ ಬಂದ್ಯಾ? ನೀನು ಯಾರಂತ ಚೆನ್ನಾಗಿ ಗೊತ್ತು. ನೀನು ದೇವರ ಪವಿತ್ರ ಮಗ”+ ಅಂದ. 35  ಆದ್ರೆ ಯೇಸು “ಸುಮ್ಮನೆ ಅವನನ್ನ ಬಿಟ್ಟು ಹೊರಗೆ ಬಾ!” ಅಂತ ಗದರಿಸಿದನು. ಆಗ ಕೆಟ್ಟ ದೇವದೂತ ಆ ವ್ಯಕ್ತಿಯನ್ನ ಅವ್ರ ಮಧ್ಯ ಬೀಳಿಸಿ ಅವನಿಗೆ ಹಾನಿ ಮಾಡದೆ ಹೊರಗೆ ಬಂದ. 36  ಇದನ್ನ ನೋಡಿ ಎಲ್ರೂ ಬೆರಗಾಗಿ “ನೋಡಿ! ಇವನು ಎಷ್ಟು ಚೆನ್ನಾಗಿ ಮಾತಾಡ್ತಾನೆ, ಇವನ ಮಾತಲ್ಲಿ ತುಂಬ ಶಕ್ತಿಯಿದೆ. ಕೆಟ್ಟ ದೇವದೂತರು ಆತನ ಮಾತು ಕೇಳಿ ಬಿಟ್ಟು ಹೋಗ್ತಾರೆ” ಅಂತ ಮಾತಾಡ್ಕೊಂಡ್ರು. 37  ಹೀಗೆ ಆತನ ಬಗ್ಗೆ ಸುದ್ದಿ ಸುತ್ತಮುತ್ತ ಇದ್ದ ಊರಿನ ಮೂಲೆಮೂಲೆಗೂ ಹಬ್ಬಿತು. 38  ಸಭಾಮಂದಿರದಿಂದ ಯೇಸು ಸೀಮೋನನ ಮನೆಗೆ ಹೋದನು. ಸೀಮೋನನ ಅತ್ತೆಗೆ ತುಂಬ ಜ್ವರ ಇತ್ತು. ಹಾಗಾಗಿ ಅವಳನ್ನ ವಾಸಿಮಾಡು ಅಂತ ಅವರು ಯೇಸು ಹತ್ರ ಬೇಡಿದ್ರು.+ 39  ಆಗ ಯೇಸು ಅವಳನ್ನ ವಾಸಿಮಾಡಿದನು. ಅವಳು ತಕ್ಷಣ ಎದ್ದು ಅಡುಗೆ ಮಾಡೋಕೆ ಶುರುಮಾಡಿದಳು. 40  ಸೂರ್ಯ ಮುಳುಗ್ತಿದ್ದಾಗ ಜನ ಬೇರೆಬೇರೆ ರೋಗಗಳಿಂದ ನರಳ್ತಾ ಇದ್ದವ್ರನ್ನ ಯೇಸು ಹತ್ರ ಕರ್ಕೊಂಡು ಬಂದ್ರು. ಆತನು ಒಬ್ಬೊಬ್ಬರ ಮೇಲೂ ಕೈಯಿಟ್ಟು ವಾಸಿಮಾಡಿದನು.+ 41  ಕೆಟ್ಟ ದೇವದೂತರು ಸಹ “ನೀನು ದೇವರ ಮಗ”+ ಅಂತ ಕಿರಿಚ್ತಾ ತುಂಬ ಜನ್ರಿಂದ ಹೊರಗೆ ಬಂದ್ರು. ಆದ್ರೆ ಯೇಸು ಆ ಕೆಟ್ಟ ದೇವದೂತರಿಗೆ ಮಾತಾಡೋಕೆ ಬಿಡಲಿಲ್ಲ.+ ಯಾಕಂದ್ರೆ ಆತನೇ ಕ್ರಿಸ್ತ ಅಂತ ಅವ್ರಿಗೆ ಗೊತ್ತಿತ್ತು.+ 42  ಬೆಳಗಾದಾಗ ಆತನು ಯಾರೂ ಇಲ್ಲದೆ ಇರೋ ಸ್ಥಳಕ್ಕೆ ಹೋದನು.+ ಆದ್ರೆ ತುಂಬ ಜನ ಹುಡುಕ್ತಾ ಆತನ ಹತ್ರ ಬಂದ್ರು. ‘ನಮ್ಮನ್ನ ಬಿಟ್ಟುಹೋಗಬೇಡ’ ಅಂತ ಬೇಡ್ತಾ ತಡಿಯೋಕೆ ಪ್ರಯತ್ನಿಸಿದ್ರು. 43  ಆದ್ರೆ ಆತನು “ನಾನು ದೇವರ ಆಳ್ವಿಕೆಯ ಸಿಹಿಸುದ್ದಿನ ಬೇರೆ ಊರುಗಳಿಗೂ ಸಾರಬೇಕಿದೆ. ನನ್ನನ್ನ ಕಳಿಸಿರೋದು ಇದಕ್ಕೇ”+ ಅಂದನು. 44  ಆತನು ಹೇಳಿದ ತರಾನೇ ಯೂದಾಯದ ಸಭಾಮಂದಿರಗಳಲ್ಲಿ ಸಾರುತ್ತಾ ಹೋದನು.

ಪಾದಟಿಪ್ಪಣಿ

ಅಥವಾ “ಪ್ಯಾರಾಪಟ್ಟಿ, ಎತ್ರದ ಸ್ಥಳದ.”