ಯೋಹಾನ ಬರೆದ ಮೊದಲನೇ ಪತ್ರ 2:1-29

  • ನಮಗೋಸ್ಕರ ಯೇಸು ತನ್ನನ್ನೇ ಅರ್ಪಿಸಿದ (1, 2)

  • ಆತನ ಆಜ್ಞೆಗಳನ್ನ ಪಾಲಿಸೋದು (3-11)

    • ಹಳೇ ಮತ್ತು ಹೊಸ ಆಜ್ಞೆ (7, 8)

  • ಪತ್ರ ಬರೆಯೋಕೆ ಕಾರಣಗಳು (12-14)

  • ಲೋಕವನ್ನ ಪ್ರೀತಿಸಬೇಡಿ (15-17)

  • ಕ್ರಿಸ್ತನ ಶತ್ರುಗಳ ಬಗ್ಗೆ ಎಚ್ಚರಿಕೆ (18-29)

2  ನನ್ನ ಪ್ರೀತಿಯ ಮಕ್ಕಳೇ, ನೀವು ಪಾಪ ಮಾಡಬಾರದು ಅಂತ ಈ ವಿಷ್ಯಗಳ ಬಗ್ಗೆ ನಿಮಗೆ ಬರಿತಾ ಇದ್ದೀನಿ. ಆದ್ರೆ ಯಾರಾದ್ರೂ ಪಾಪ ಮಾಡೋದಾದ್ರೆ ಅವ್ರಿಗೆ ಸಹಾಯ ಮಾಡೋಕೆ+ ತಂದೆ ಹತ್ರ ನೀತಿವಂತನಾಗಿರೋ ಯೇಸು ಕ್ರಿಸ್ತ ಇದ್ದಾನೆ.+  ನಾವು ಮತ್ತೆ ದೇವರ ಜೊತೆ ಶಾಂತಿ ಸಂಬಂಧದಲ್ಲಿ ಇರಬೇಕಂತ ಆತನು ತನ್ನನ್ನೇ ಅರ್ಪಿಸಿದ್ದಾನೆ.*+ ಆತನು ನಮ್ಮ ಪಾಪಗಳಿಗೆ+ ಮಾತ್ರ ಅಲ್ಲ ಇಡೀ ಲೋಕದ ಜನ್ರ ಪಾಪಗಳಿಗೂ ಸೇರಿ ಅದನ್ನ ಕೊಟ್ಟಿದ್ದಾನೆ.+  ನಾವು ಆತನ ಆಜ್ಞೆಗಳನ್ನ ಪಾಲಿಸ್ತಾ ಇದ್ರೆ ಆತನನ್ನ ತಿಳ್ಕೊಂಡಿದ್ದೀವಿ ಅಂತ ಎಲ್ರಿಗೂ ಗೊತ್ತಾಗುತ್ತೆ.  “ನಾನು ದೇವರ ಬಗ್ಗೆ ತಿಳ್ಕೊಂಡಿದ್ದೀನಿ” ಅಂತ ಹೇಳಿ ಆತನ ಆಜ್ಞೆಗಳನ್ನ ಪಾಲಿಸದೆ ಇರುವವನು ಸುಳ್ಳುಬುರುಕ. ಅವನ ಹೃದಯದಲ್ಲಿ ಸತ್ಯಾನೇ ಇಲ್ಲ.  ಆದ್ರೆ ಯಾರು ಆತನ ಮಾತಿನ ಪ್ರಕಾರ ನಡಿತಾರೋ ಅವ್ರಿಗೆ ದೇವರ ಮೇಲೆ ಪ್ರೀತಿ ಇರುತ್ತೆ.+ ಅದು ಎಲ್ರಿಗೂ ಗೊತ್ತಾಗುತ್ತೆ. ಇದ್ರಿಂದ ನಾವು ದೇವರ ಜೊತೆ ನಡೀತಾ ಇದ್ದೀವಿ ಅಂತ ಗೊತ್ತಾಗುತ್ತೆ.+  ನಾನು ದೇವರ ಜೊತೆ ನಡೀತಾ ಇದ್ದೀನಿ ಅಂತ ಹೇಳೋ ವ್ಯಕ್ತಿಗೆ ಯೇಸು ತರಾನೇ ನಡಿಯೋ ಜವಾಬ್ದಾರಿ ಇದೆ.+  ಪ್ರೀತಿಯ ಸಹೋದರ ಸಹೋದರಿಯರೇ, ನಾನು ನಿಮಗೆ ಬರಿತಾ ಇರೋದು ಒಂದು ಹೊಸ ಆಜ್ಞೆ ಅಲ್ಲ, ಇದು ಮೊದಲಿಂದಾನೇ ಇತ್ತು.+ ಇದು ಹಳೇ ಆಜ್ಞೆನೇ. ಈ ಹಳೇ ಆಜ್ಞೆ ನೀವು ಕೇಳಿಸ್ಕೊಂಡಿರೋ ಮಾತೇ.  ಯೇಸು ಮತ್ತು ನೀವು ಪಾಲಿಸಿದ ಆ ಆಜ್ಞೆಯನ್ನೇ ಮತ್ತೆ ಹೊಸ ಆಜ್ಞೆ ತರ ಬರಿತಾ ಇದ್ದೀನಿ. ಯಾಕಂದ್ರೆ ಕತ್ತಲೆ ಕಳೆದು ನಿಜವಾದ ಬೆಳಕು ಈಗಾಗ್ಲೇ ಪ್ರಕಾಶಿಸ್ತಿದೆ.+  ತಾನು ಬೆಳಕಲ್ಲಿ ಇದ್ದೀನಿ ಅಂತ ಹೇಳಿ ತನ್ನ ಸಹೋದರನ ಮೇಲೆ ದ್ವೇಷ ಇಟ್ಕೊಂಡ್ರೆ+ ಅವನು ಇನ್ನೂ ಕತ್ತಲೆಯಲ್ಲೇ ಇದ್ದಾನೆ.+ 10  ತನ್ನ ಸಹೋದರನನ್ನ ಪ್ರೀತಿಸೋ ವ್ಯಕ್ತಿ ಬೆಳಕಲ್ಲೇ ಇರ್ತಾನೆ.+ ಯಾವ ಕಾರಣಕ್ಕೂ ಎಡವಿ ಬೀಳಲ್ಲ. 11  ಆದ್ರೆ ತನ್ನ ಸಹೋದರನ ಮೇಲೆ ದ್ವೇಷ ಇಟ್ಕೊಂಡಿರೋ ವ್ಯಕ್ತಿ ಕತ್ತಲಲ್ಲೇ ಇದ್ದಾನೆ ಮತ್ತು ಕತ್ತಲಲ್ಲೇ ನಡಿತಾನೆ.+ ಅವನು ಎಲ್ಲಿಗೆ ಹೋಗ್ತಾ ಇದ್ದಾನೆ ಅಂತ ಅವನಿಗೇ ಗೊತ್ತಿಲ್ಲ.+ ಯಾಕಂದ್ರೆ ಅವನ ಮುಖ ಕತ್ತಲೆಯಿಂದ ತುಂಬ್ಕೊಂಡಿದೆ. 12  ಪ್ರೀತಿಯ ಮಕ್ಕಳೇ, ಆತನ ಹೆಸ್ರಿನ ಮೂಲಕ ನಿಮ್ಮ ಪಾಪಗಳಿಗೆ ಕ್ಷಮೆ ಸಿಕ್ಕಿದೆ.+ 13  ಅಪ್ಪಂದಿರೇ, ಮೊದಲಿಂದಾನೇ ಇದ್ದವನ ಬಗ್ಗೆ ನಿಮಗೆ ಗೊತ್ತಿರೋದ್ರಿಂದ ನಾನು ನಿಮಗೆ ಇದನ್ನ ಬರಿತಾ ಇದ್ದೀನಿ. ಪ್ರೀತಿಯ ಯುವಜನ್ರೇ, ನೀವು ಸೈತಾನನ ಮೇಲೆ ಯುದ್ಧ ಮಾಡಿ ಗೆದ್ದಿದ್ದೀರ.+ ಅದಕ್ಕೆ ನಾನು ನಿಮಗೆ ಇದನ್ನ ಬರಿತಾ ಇದ್ದೀನಿ. ಚಿಕ್ಕ ಮಕ್ಕಳೇ, ನೀವು ನಮ್ಮ ತಂದೆಯಾಗಿರೋ ದೇವರ ಬಗ್ಗೆ ತಿಳ್ಕೊಂಡಿದ್ದೀರ.+ ಅದಕ್ಕೆ ನಿಮಗೆ ಈ ಪತ್ರ ಬರಿತಾ ಇದ್ದೀನಿ. 14  ಅಪ್ಪಂದಿರೇ, ಮೊದಲಿಂದಾನೇ ಇದ್ದವನ ಬಗ್ಗೆ ನೀವು ತಿಳ್ಕೊಂಡಿದ್ದೀರ. ಅದಕ್ಕೆ ನಾನು ನಿಮಗೆ ಬರಿತಾ ಇದ್ದೀನಿ. ಯುವಜನ್ರೇ, ನಿಮಗೆ ಶಕ್ತಿ ಇರೋದ್ರಿಂದ,+ ದೇವರ ಮಾತಿನ ಮೇಲೆ ನಂಬಿಕೆ ಇರೋದ್ರಿಂದ+ ನೀವು ಸೈತಾನನ ಮೇಲೆ ಯುದ್ಧ ಮಾಡಿ ಗೆದ್ದಿದ್ದೀರ.+ ಅದಕ್ಕೆ ನಾನು ನಿಮಗೆ ಇದನ್ನ ಬರಿತಾ ಇದ್ದೀನಿ. 15  ಲೋಕವನ್ನ, ಲೋಕದಲ್ಲಿರೋ ವಸ್ತುಗಳನ್ನ ಪ್ರೀತಿಸಬೇಡಿ.+ ಯಾರಾದ್ರೂ ಲೋಕವನ್ನ ಪ್ರೀತಿಸೋದಾದ್ರೆ ತಂದೆ ಮೇಲೆ ಅವನಿಗೆ ಪ್ರೀತಿ ಇಲ್ಲ ಅಂತರ್ಥ.+ 16  ಯಾಕಂದ್ರೆ ಒಬ್ಬ ವ್ಯಕ್ತಿ ತನಗೆ ಬೇಕಾದ ಕೆಟ್ಟ ವಿಷ್ಯಗಳ ಮೇಲೆ ಆಸೆಪಡೋದು ಸಹಜ.+ ಅವನ ಹತ್ರ ಇರೋ ವಸ್ತುಗಳನ್ನ ಬೇರೆಯವ್ರಿಗೆ ತೋರಿಸಿ ಜಂಬ ಕೊಚ್ಕೊಳ್ಳೋದು ಈ ಲೋಕದ ಜನ್ರ ಬುದ್ಧಿ. ಆದ್ರೆ ಈ ತರ ಯೋಚ್ನೆ ಮಾಡೋದನ್ನ ನಮ್ಮ ತಂದೆ ಕಲಿಸ್ಕೊಟ್ಟಿಲ್ಲ. ಇದೆಲ್ಲ ಲೋಕದ ಜನ್ರ ಚಿಂತೆ. 17  ಅಷ್ಟೇ ಅಲ್ಲ, ಲೋಕ ಮತ್ತು ಅದ್ರ ಆಸೆ ನಾಶ ಆಗುತ್ತೆ.+ ಆದ್ರೆ ದೇವರ ಇಷ್ಟವನ್ನ ಮಾಡೋ ವ್ಯಕ್ತಿ ಯಾವಾಗ್ಲೂ ಇರ್ತಾನೆ.+ 18  ಚಿಕ್ಕ ಮಕ್ಕಳೇ, ಸಮಯ ತುಂಬ ಕಮ್ಮಿ ಇದೆ. ಕ್ರಿಸ್ತನ ಶತ್ರು ಬರ್ತಾ ಇದ್ದಾನೆ.+ ಈಗ್ಲೇ ತುಂಬ ಶತ್ರುಗಳು ಬಂದುಬಿಟ್ಟಿದ್ದಾರೆ.+ ಅದಕ್ಕೆ ನಮಗೆ ಉಳಿದಿರೋ ಸಮಯ ತುಂಬ ಕಮ್ಮಿ ಅಂತ ಗೊತ್ತಾಗುತ್ತೆ. 19  ಅವರು ನಮ್ಮ ಜೊತೆನೇ ಇದ್ದವರು. ಆದ್ರೆ ನಮ್ಮವರಲ್ಲ.+ ಅವರು ನಮ್ಮವರು ಆಗಿದ್ರೆ ನಮ್ಮ ಜೊತೆನೇ ಇರ್ತಿದ್ರು. ಆದ್ರೆ ಅವರು ಯಾರೂ ನಮ್ಮವ್ರಲ್ಲ ಅಂತ ತೋರಿಸಿ ಕೊಡೋಕೆ ನಮ್ಮನ್ನ ಬಿಟ್ಟು ಹೋದ್ರು.+ 20  ದೇವರು ನಿಮ್ಮನ್ನ ಅಭಿಷೇಕ ಮಾಡಿ ಆರಿಸ್ಕೊಂಡಿದ್ದಾನೆ.+ ನಿಮಗೆಲ್ಲ ಜ್ಞಾನ ಇದೆ. 21  ನಿಮಗೆ ಸತ್ಯ ಏನಂತ ಗೊತ್ತಿಲ್ಲ ಅಂತಲ್ಲ,+ ಬದಲಿಗೆ ನಿಮಗೆ ಅದು ಗೊತ್ತು ಮತ್ತು ಸತ್ಯದಿಂದ ಯಾವತ್ತೂ ಸುಳ್ಳು ಬರಲ್ಲ ಅಂತ ನಾನು ಇದನ್ನ ಬರಿತಾ ಇದ್ದೀನಿ.+ 22  ಯೇಸುನೇ ಕ್ರಿಸ್ತ ಅನ್ನೋದನ್ನ ಒಪ್ಕೊಳ್ಳದೆ ಇರುವವನು ಬಿಟ್ರೆ ಇನ್ಯಾರು ಸುಳ್ಳು ಹೇಳ್ತಾರೆ?+ ತಂದೆಯನ್ನೂ ಮಗನನ್ನೂ ಒಪ್ಕೊಳ್ಳದೇ ಇರುವವನೇ ಕ್ರಿಸ್ತನ ಶತ್ರು.+ 23  ಮಗನನ್ನ ಒಪ್ಕೊಳ್ಳದೇ ಇರುವವನಿಗೆ ತಂದೆ ಆಶೀರ್ವಾದ ಸಿಗಲ್ಲ.+ ಆದ್ರೆ ಮಗನನ್ನ ಒಪ್ಕೊಳ್ಳುವವ್ರಿಗೆ+ ದೇವರ ಆಶೀರ್ವಾದ ಸಿಗುತ್ತೆ.+ 24  ಮೊದಲಿಂದಾನೂ ನೀವು ಕೇಳಿಸ್ಕೊಂಡಿರೋ ವಿಷ್ಯಗಳನ್ನ ಯಾವತ್ತೂ ಮರಿಬೇಡಿ.+ ಹಾಗೆ ಮಾಡೋದಾದ್ರೆ ನೀವು ತಂದೆಯನ್ನ, ಮಗನನ್ನ ಒಪ್ಕೊಳ್ತೀರ. 25  ಅಷ್ಟೇ ಅಲ್ಲ, ದೇವರು ನಮಗೆ ನಿತ್ಯಜೀವ+ ಕೊಡ್ತೀನಿ ಅಂತ ಆತನೇ ಮಾತು ಕೊಟ್ಟಿದ್ದಾನೆ. 26  ನಿಮ್ಮನ್ನ ದಾರಿತಪ್ಪಿಸೋಕೆ ಜನ್ರು ಪ್ರಯತ್ನಿಸ್ತಾರೆ. ಆದ್ರೆ ನೀವು ಹುಷಾರಾಗಿ ಇರಬೇಕಂತ ಈ ವಿಷ್ಯಗಳನ್ನ ಬರಿತಾ ಇದ್ದೀನಿ. 27  ಆದ್ರೆ ನಿಮ್ಮ ವಿಷ್ಯಕ್ಕೆ ಬಂದ್ರೆ, ದೇವರು ನಿಮಗೆ ಪವಿತ್ರಶಕ್ತಿ ಕೊಟ್ಟು ನಿಮ್ಮನ್ನ ಅಭಿಷೇಕ ಮಾಡಿರೋದ್ರಿಂದ+ ಆ ಶಕ್ತಿ ನಿಮ್ಮಲ್ಲಿ ಇರುತ್ತೆ. ಅದಕ್ಕೇ ನಿಮಗೆ ಕಲಿಸಿಕೊಡೋಕೆ ಯಾರ ಅವಶ್ಯಕತೆನೂ ಇಲ್ಲ. ಆದ್ರೆ ದೇವರು ಆ ಪವಿತ್ರಶಕ್ತಿನ ಬಳಸಿ ನಿಮಗೆ ಎಲ್ಲ ವಿಷ್ಯಗಳನ್ನ ಹೇಳ್ತಾನೆ.+ ಅದೆಲ್ಲ ಸತ್ಯ. ಅದ್ರಲ್ಲಿ ಸುಳ್ಳು ಯಾವುದೂ ಇಲ್ಲ. ಪವಿತ್ರಶಕ್ತಿ ನಿಮಗೆ ಕಲಿಸಿಕೊಟ್ಟಿರೋ ಹಾಗೆ ನೀವು ಆತನನ್ನ ಒಪ್ಕೊಳ್ಳಿ.+ 28  ಚಿಕ್ಕ ಮಕ್ಕಳೇ, ಆತನನ್ನ ಒಪ್ಕೊಳ್ಳಿ. ಆಗ್ಲೇ ಆತನು ಮತ್ತೆ ಬರುವಾಗ ನಮಗೆ ಧೈರ್ಯದಿಂದ ಮಾತಾಡೋಕೆ+ ಆಗುತ್ತೆ. ಆತನನ್ನ ನೋಡಿ ನಾಚಿಕೆಯಿಂದ ಬಚ್ಚಿಟ್ಕೊಳ್ಳಲ್ಲ. 29  ಯೇಸು ನೀತಿವಂತ ಅಂತ ನಿಮಗೆ ಗೊತ್ತಿರೋದ್ರಿಂದ ಸರಿಯಾದ ವಿಷ್ಯಗಳನ್ನ ಮಾಡೋ ಜನ್ರು ದೇವರ ಮಕ್ಕಳು ಅಂತ ಗೊತ್ತಾಗುತ್ತೆ.+

ಪಾದಟಿಪ್ಪಣಿ

ಅಥವಾ “ನಮ್ಮ ಪಾಪಗಳನ್ನ ಮುಚ್ಚೋಕೆ ತನ್ನನ್ನೇ ಬಲಿ ಕೊಟ್ಟಿದ್ದಾನೆ.”