ತಿಮೊತಿಗೆ ಬರೆದ ಎರಡನೇ ಪತ್ರ 2:1-26

  • ನಾನು ನಿನಗೆ ಹೇಳಿದ ವಿಷ್ಯವನ್ನ ನಂಬಿಗಸ್ತ ಪುರುಷರಿಗೆ ಕಲಿಸು (1-7)

  • ಸಿಹಿ ಸುದ್ದಿಗಾಗಿ ಕಷ್ಟ ಸಹಿಸ್ಕೊಳ್ಳಬೇಕು (8-13)

  • ಪವಿತ್ರ ಗ್ರಂಥವನ್ನ ಸರಿಯಾಗಿ ಬಳಸು (14-19)

  • ಯೌವನದಲ್ಲಿ ಬರೋ ಆಸೆಗಳಿಂದ ದೂರ ಓಡು (20-22)

  • ವಿರೋಧಿಗಳ ಜೊತೆ ನಡ್ಕೊಳ್ಳಬೇಕಾದ ವಿಧ (23-26)

2  ಹಾಗಾಗಿ ಮಗನೇ,+ ಕ್ರಿಸ್ತ ಯೇಸುವಿನ ಅಪಾರ ಕೃಪೆಯಿಂದ ಬಲ ಪಡ್ಕೊಳ್ತಾ ಇರು. 2  ನಾನು ನಿನಗೆ ಹೇಳಿದ ವಿಷ್ಯಗಳನ್ನ ಮತ್ತು ತುಂಬ ಸಾಕ್ಷಿಗಳು ಒಪ್ಕೊಂಡ ವಿಷ್ಯಗಳನ್ನ+ ನಂಬಿಗಸ್ತರಿಗೆ ಕಲಿಸು. ಆಗ ಅವರು ಬೇರೆಯವ್ರಿಗೆ ಕಲಿಸೋಕೆ ಸಾಕಷ್ಟು ಅರ್ಹತೆ ಪಡ್ಕೊತಾರೆ. 3  ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕನಾಗಿ+ ನಿನಗೆ ಬರೋ ಸಂಕಷ್ಟಗಳನ್ನ ಅನುಭವಿಸು.+ 4  ಒಬ್ಬನು ಸೈನಿಕನಾದ ಮೇಲೆ ವ್ಯಾಪಾರ ವ್ಯವಹಾರ* ನಡಿಸಲ್ಲ.* ಯಾಕಂದ್ರೆ ಅವನು ತನ್ನ ಸೇನಾಪತಿಯನ್ನ ಖುಷಿಪಡಿಸೋಕೆ ಇಷ್ಟಪಡ್ತಾನೆ. 5  ಆಟಗಳಲ್ಲೂ ನೋಡು, ನಿಯಮ ಬಿಟ್ಟು ಆಡಿದ್ರೆ ಕಿರೀಟ ಸಿಗಲ್ಲ.+ 6  ಬೆವರು ಸುರಿಸಿ ದುಡ್ಯೋ ರೈತ ತನ್ನ ಬೆಳೆಯ ಫಲವನ್ನ ಮೊದ್ಲು ತಿನ್ನಬೇಕು. 7  ನಾನು ಹೇಳ್ತಿರೋ ವಿಷ್ಯದ ಬಗ್ಗೆ ಯಾವಾಗ್ಲೂ ಯೋಚಿಸು. ಎಲ್ಲ ವಿಷ್ಯ ಅರ್ಥ ಮಾಡ್ಕೊಳ್ಳೋಕೆ* ದೇವರು ನಿನಗೆ ಸಹಾಯ ಮಾಡ್ತಾನೆ. 8  ನೆನಪಿಡು, ದೇವರು ಯೇಸು ಕ್ರಿಸ್ತನನ್ನ ಮತ್ತೆ ಜೀವಂತ ಎಬ್ಬಿಸಿದನು.+ ಆತನೇ ದಾವೀದನ ಸಂತಾನ.+ ಇದೇ ನಾನು ಸಾರೋ ಸಿಹಿಸುದ್ದಿ.+ 9  ಇದಕ್ಕೇ ನಾನು ಕಷ್ಟ ಅನುಭವಿಸ್ತಾ ಇದ್ದೀನಿ, ತಪ್ಪು ಮಾಡಿದವ್ರ ತರ ಜೈಲಲ್ಲಿ ಇದ್ದೀನಿ.+ ಹಾಗಿದ್ರೂ ದೇವರು ಕಲಿಸೋ ವಿಷ್ಯಗಳು ಜೈಲಲ್ಲಿ ಇಲ್ಲ.+ 10  ಈ ಕಾರಣಕ್ಕೇ ದೇವರು ಆರಿಸ್ಕೊಂಡ ಜನ್ರಿಗೋಸ್ಕರ ನಾನು ಎಲ್ಲ ಸಹಿಸ್ಕೊಳ್ತಾ ಇದ್ದೀನಿ.+ ಕ್ರಿಸ್ತ ಯೇಸು ಮೂಲಕ ಅವರೂ ರಕ್ಷಣೆ ಪಡಿಬೇಕು, ಶಾಶ್ವತ ಮಹಿಮೆ ಪಡಿಬೇಕು ಅಂತ ಸಹಿಸ್ಕೊಳ್ತಾ ಇದ್ದೀನಿ. 11  ಇದು ನಂಬುವಂಥ ವಿಷ್ಯ, ಏನಂದ್ರೆ ನಾವು ಆತನ ಜೊತೆ ಸತ್ತಿದ್ರೆ ನಿಜವಾಗ್ಲೂ ಆತನ ಜೊತೆ ಜೀವಿಸ್ತೀವಿ.+ 12  ಸಹಿಸ್ಕೊಳ್ತಾ ಇದ್ರೆ ನಾವೂ ಆತನ ಜೊತೆ ರಾಜರಾಗಿ ಆಳ್ತೀವಿ.+ ಆತನು ಯಾರಂತ ಗೊತ್ತಿಲ್ಲ ಅಂತ ನಾವು ಹೇಳಿದ್ರೆ ಆತನೂ ಹಾಗೇ ಹೇಳ್ತಾನೆ.+ 13  ನಾವು ನಂಬಿಕೆ ದ್ರೋಹ ಮಾಡಿದ್ರೂ ಆತನು ನಂಬಿಗಸ್ತನಾಗೇ ಇರ್ತಾನೆ, ಯಾಕಂದ್ರೆ ತನ್ನ ಸ್ವಭಾವದ ವಿರುದ್ಧ ನಡಿಯೋಕೆ ಆತನಿಗೆ ಸಾಧ್ಯನೇ ಇಲ್ಲ. 14  ಈ ವಿಷ್ಯಗಳನ್ನ ಅವ್ರಿಗೆ ನೆನಪಿಸ್ತಾ ಇರು. ಪದಗಳ ಬಗ್ಗೆ ಜಗಳ ಮಾಡಬಾರದು ಅಂತ ದೇವರ ಮುಂದೆ ಅವ್ರಿಗೆ ಹೇಳು.* ಅಂಥ ಜಗಳದಿಂದ ಕೇಳುವವ್ರಿಗೆ ನಷ್ಟ ಆಗುತ್ತೆ* ಬಿಟ್ರೆ ಪ್ರಯೋಜನ ಅಂತೂ ಆಗಲ್ಲ. 15  ದೇವರು ಮೆಚ್ಚಿದ ಸೇವಕನಾಗೋಕೆ, ಹುಡುಕಿದ್ರೂ ತಪ್ಪು ಸಿಗದ ಒಳ್ಳೇ ಕೆಲಸಗಾರನಾಗೋಕೆ,* ಪವಿತ್ರ ಗ್ರಂಥವನ್ನ* ಸರಿಯಾಗಿ ಬಳಸೋ ವ್ಯಕ್ತಿಯಾಗೋಕೆ+ ನಿನ್ನಿಂದ ಆಗೋದನ್ನೆಲ್ಲ ಮಾಡು. 16  ಆದ್ರೆ ಪವಿತ್ರ ಆಗಿರೋದನ್ನ ಕೆಡಿಸೋ ಸುಳ್ಳು ಮಾತುಗಳನ್ನ ಕೇಳಿಸ್ಕೊಬೇಡ.+ ಯಾಕಂದ್ರೆ ಅಂಥ ಮಾತನ್ನ ಹೇಳುವವರು ದೇವರಿಗೆ ಅಗೌರವ ತರೋ ರೀತಿಯಲ್ಲೇ ನಡಿತಾರೆ. 17  ಅವರ ಮಾತು ಕೊಳಕು ಹುಣ್ಣಿನ ತರ ಹರಡುತ್ತೆ. ಹುಮೆನಾಯ, ಪಿಲೇತ ಅಂಥವ್ರೇ.+ 18  ಅವ್ರಿಬ್ರೂ ಸತ್ಯ ಬಿಟ್ಟು ಹೋಗಿದ್ದಾರೆ. ಸತ್ತವರು ಈಗಾಗ್ಲೇ ಜೀವಂತವಾಗಿದ್ದಾರೆ ಅಂತ ಹೇಳ್ತಿದ್ದಾರೆ,+ ಜನ್ರ ನಂಬಿಕೆಯನ್ನ ಹಾಳು ಮಾಡ್ತಿದ್ದಾರೆ. 19  ಹಾಗಿದ್ರೂ ದೇವರು ಹಾಕಿರೋ ಗಟ್ಟಿಯಾದ ಅಡಿಪಾಯ ಭದ್ರವಾಗಿ ಇರುತ್ತೆ. “ತನ್ನವರು ಯಾರಂತ ಯೆಹೋವನಿಗೆ* ಚೆನ್ನಾಗಿ ಗೊತ್ತು”+ ಮತ್ತು “ಯೆಹೋವನ* ಹೆಸ್ರನ್ನ ಪಡಿದಿರೋ ಪ್ರತಿಯೊಬ್ರೂ+ ಅನೀತಿಯನ್ನ ಬಿಟ್ಟುಬಿಡ್ಲಿ” ಅನ್ನೋ ಮುದ್ರೆ ಆ ಅಡಿಪಾಯದ ಮೇಲಿದೆ. 20  ದೊಡ್ಡ ಮನೇಲಿ ಚಿನ್ನ ಬೆಳ್ಳಿಯ ಪಾತ್ರೆಗಳಷ್ಟೇ ಅಲ್ಲ ಮರದ ಮತ್ತು ಮಣ್ಣಿನ ಪಾತ್ರೆಗಳೂ ಇರುತ್ತೆ. ಸ್ವಲ್ಪ ಪಾತ್ರೆಗಳನ್ನ ವಿಶೇಷ* ಕೆಲಸಗಳಿಗೆ ಬಳಸಿದ್ರೆ, ಇನ್ನೂ ಸ್ವಲ್ಪ ಪಾತ್ರೆಗಳನ್ನ ಮಾಮೂಲಿ* ಕೆಲಸಕ್ಕೆ ಬಳಸ್ತಾರೆ. 21  ಮಾಮೂಲಿ ಪಾತ್ರೆ ತರ ಇರೋ ಜನ್ರಿಂದ ಯಾರು ದೂರ ಇರ್ತಾರೋ ಅವರು ವಿಶೇಷ ಪಾತ್ರೆ ತರ ಇರ್ತಾರೆ, ಅವ್ರನ್ನ ಮಾಮೂಲಿ ಪಾತ್ರೆ ತರ ಇರೋ ಜನ್ರ ಜೊತೆ ಸೇರಿಸಲ್ಲ, ಅವ್ರಿಂದ ಯಜಮಾನನಿಗೆ ಪ್ರಯೋಜನ ಇದೆ ಮತ್ತು ಅವ್ರನ್ನ ಪ್ರತಿಯೊಂದು ಒಳ್ಳೇ ಕೆಲಸಕ್ಕೆ ಸಿದ್ಧಮಾಡ್ತಾರೆ. 22  ಹಾಗಾಗಿ ಯೌವನದಲ್ಲಿ ಬರೋ ಆಸೆಗಳಿಂದ ದೂರ ಓಡಿಹೋಗು. ಶುದ್ಧ ಹೃದಯದಿಂದ ದೇವರಿಗೆ ಬೇಡುವವ್ರ ಜೊತೆ ನೀತಿ, ನಂಬಿಕೆ, ಪ್ರೀತಿ, ಶಾಂತಿಯನ್ನ ಗಳಿಸೋಕೆ ಶ್ರಮ ಹಾಕು. 23  ಪ್ರಯೋಜನ ಇಲ್ಲದ ಹುಚ್ಚು ವಾದ-ವಿವಾದಕ್ಕೆ ತಲೆ ಹಾಕಬೇಡ.+ ಯಾಕಂದ್ರೆ ಅದ್ರಿಂದ ಬರೀ ಜಗಳ ಹುಟ್ಟುತ್ತೆ ಅಂತ ನಿನಗೆ ಗೊತ್ತಲ್ವಾ. 24  ದೇವರ ಸೇವಕನಿಗೆ ಜಗಳ ಮಾಡೋ ಅಗತ್ಯ ಇಲ್ಲ. ಅವನು ಎಲ್ರ ಜೊತೆ ಮೃದುವಾಗಿ* ನಡ್ಕೊಬೇಕು,+ ಕಲಿಸೋ ಯೋಗ್ಯತೆ ಇರಬೇಕು, ತನ್ನ ವಿರುದ್ಧ ಯಾರಾದ್ರೂ ತಪ್ಪು ಮಾಡಿದ್ರೂ ತನ್ನನ್ನ ಹತೋಟಿಯಲ್ಲಿ ಇಟ್ಕೊಬೇಕು.+ 25  ವಿರೋಧಿಸುವವ್ರಿಗೆ ಸೌಮ್ಯವಾಗಿ ಉಪದೇಶ ಕೊಡಬೇಕು.+ ಒಂದುವೇಳೆ ಅವರು ಪಶ್ಚಾತ್ತಾಪಪಟ್ಟು ಸತ್ಯದ ಸರಿಯಾದ ಜ್ಞಾನ ಪಡಿಯೋಕೆ ದೇವರು ಅವಕಾಶ ಕೊಡಬಹುದು.+ 26  ಆಗ ಅವ್ರಿಗೆ ಬುದ್ಧಿ ಬಂದು, ಸೈತಾನ ತನ್ನ ಇಷ್ಟದ ಪ್ರಕಾರ ಮಾಡೋಕೆ ಅವ್ರನ್ನ ಜೀವಂತ ಹಿಡಿದಿದ್ದಾನೆ ಅಂತ ಅರ್ಥ ಮಾಡ್ಕೊಳ್ತಾರೆ.+ ಆಗ ಅವನ ಬಲೆಯಿಂದ ತಪ್ಪಿಸ್ಕೊಳ್ತಾರೆ.

ಪಾದಟಿಪ್ಪಣಿ

ಬಹುಶಃ, “ದಿನನಿತ್ಯದ ಚಟುವಟಿಕೆ.”
ಅಕ್ಷ. “ಸಿಕ್ಕಿಕೊಳ್ಳಲ್ಲ.”
ಅಥವಾ “ವಿವೇಚನೆ ಪಡಿಯೋಕೆ.”
ಅಥವಾ “ಕೇಳುವವರು ಹಾಳಾಗ್ತಾರೆ, ಬಿದ್ದುಬಿಡ್ತಾರೆ.”
ಅಕ್ಷ. “ಪೂರ್ತಿ ಸಾಕ್ಷಿಕೊಡು.”
ಅಥವಾ “ಶ್ರಮಜೀವಿ ಆಗೋಕೆ.”
ಅಕ್ಷ. “ದೇವರ ಸತ್ಯ ವಾಕ್ಯ.”
ಅಥವಾ “ಗೌರವದ.”
ಅಥವಾ “ಗೌರವವಿಲ್ಲದ.”
ಅಥವಾ “ಜಾಣತನದಿಂದ.”