ತಿಮೊತಿಗೆ ಬರೆದ ಮೊದಲನೇ ಪತ್ರ 1:1-20

  • ವಂದನೆ (1, 2)

  • ಸುಳ್ಳು ಬೋಧಕರ ವಿಷ್ಯದಲ್ಲಿ ಎಚ್ಚರಿಕೆ (3-11)

  • ಪೌಲನಿಗೆ ಯೇಸು ತೋರಿಸಿದ ಅಪಾರ ಕೃಪೆ (12-16)

  • ಯುಗಯುಗಕ್ಕೂ ರಾಜ (17)

  • ‘ಚೆನ್ನಾಗಿ ಹೋರಾಟ ಮಾಡ್ತಾ ಇರು’ (18-20)

1  ನಾನು ಪೌಲ, ನಮ್ಮ ರಕ್ಷಕನಾದ ದೇವರು ಮತ್ತು ನಮ್ಮ ನಿರೀಕ್ಷೆಯಾದ ಕ್ರಿಸ್ತ ಯೇಸು ಆಜ್ಞೆ ಕೊಟ್ಟ ಹಾಗೆ ಕ್ರಿಸ್ತ ಯೇಸುವಿನ ಅಪೊಸ್ತಲನಾಗಿದ್ದೀನಿ.+  ಪ್ರೀತಿಯ ತಿಮೊತಿ,*+ ನಂಬಿಕೆಯಲ್ಲಿ ನೀನು ನನ್ನ ಸ್ವಂತ ಮಗನ ತರ.+ ತಂದೆಯಾದ ದೇವರು ಮತ್ತು ನಮ್ಮ ಪ್ರಭು ಕ್ರಿಸ್ತ ಯೇಸು ನಿನಗೆ ಅಪಾರ ಕೃಪೆ, ಕರುಣೆ ತೋರಿಸ್ಲಿ, ಶಾಂತಿ ಕೊಡ್ಲಿ.  ನಾನು ಮಕೆದೋನ್ಯಕ್ಕೆ ಹೋಗಬೇಕಿದ್ದಾಗ ನಿನಗೆ ಎಫೆಸದಲ್ಲೇ ಇರೋಕೆ ಕೇಳ್ಕೊಂಡ ಹಾಗೆ ಈಗ್ಲೂ ಕೇಳ್ಕೊಳ್ತೀನಿ. ಯಾಕಂದ್ರೆ ಸುಳ್ಳು ಬೋಧನೆ ಮಾಡಬಾರದು,  ಸುಳ್ಳು ಕಥೆಗಳಿಗೆ,+ ವಂಶಾವಳಿಗಳಿಗೆ ಗಮನ ಕೊಡಬಾರದು ಅಂತ ಸ್ವಲ್ಪ ಜನ್ರಿಗೆ ನೀನು ಆಜ್ಞೆ ಕೊಡಬೇಕು. ಅಂಥ ವಿಷ್ಯಗಳು ಬರೀ ಊಹಾಪೋಹಗಳಿಗೆ ಕಾರಣ ಆಗುತ್ತೆ ಅಷ್ಟೇ, ಅದ್ರಿಂದ ಏನೂ ಪ್ರಯೋಜನ ಇಲ್ಲ,+ ನಂಬಿಕೆನೂ ಬಲ ಆಗಲ್ಲ. ಅವು ದೇವರು ಹೇಳಿದ ವಿಷ್ಯಗಳಲ್ಲ.  ಶುದ್ಧ ಹೃದಯದಿಂದ, ಒಳ್ಳೇ ಮನಸ್ಸಾಕ್ಷಿಯಿಂದ, ಕಪಟವಿಲ್ಲದ ನಂಬಿಕೆಯಿಂದ+ ನಾವು ಪ್ರೀತಿ ತೋರಿಸಬೇಕು ಅಂತಾನೇ ನಾನು ಈ ನಿರ್ದೇಶನ* ಕೊಡ್ತಿದ್ದೀನಿ.+  ಸ್ವಲ್ಪ ಜನ ಇಂಥ ವಿಷ್ಯಗಳನ್ನ ಬಿಟ್ಟು ಕೆಲಸಕ್ಕೆ ಬಾರದ ಮಾತಲ್ಲಿ ಮುಳುಗಿ ಹೋಗಿದ್ದಾರೆ.+  ಅವರು ನಿಯಮ ಪುಸ್ತಕದ ಬಗ್ಗೆ ಕಲಿಸೋಕೆ ಇಷ್ಟಪಡ್ತಾರೆ.+ ಆದ್ರೆ ಅವರು ಏನು ಹೇಳ್ತಿದ್ದಾರೆ, ಯಾವುದನ್ನ ಮಾಡ್ಲೇಬೇಕು ಅಂತ ಒತ್ತಾಯ ಮಾಡ್ತಿದ್ದಾರೆ ಅನ್ನೋದು ಅವ್ರಿಗೇ ಅರ್ಥ ಆಗ್ತಿಲ್ಲ.  ಸರಿಯಾಗಿ ಪಾಲಿಸಿದ್ರೆ ನಿಯಮ ಪುಸ್ತಕ ಒಳ್ಳೇದೇ ಅಂತ ನಮಗೆ ಗೊತ್ತು.  ನಿಯಮ ಪುಸ್ತಕ ನೀತಿವಂತರಿಗೋಸ್ಕರ ಇಲ್ಲ. ನಿಯಮ ಮುರಿಯುವವ್ರಿಗೆ,+ ದಂಗೆ ಏಳುವವ್ರಿಗೆ, ದೇವರ ಮೇಲೆ ಭಕ್ತಿ ಇಲ್ಲದವ್ರಿಗೆ, ಪಾಪಿಗಳಿಗೆ, ದ್ರೋಹ ಬಗೆಯುವವ್ರಿಗೆ,* ಪವಿತ್ರವಾದದ್ದನ್ನ ತಳ್ಳಿಹಾಕುವವ್ರಿಗೆ, ಅಪ್ಪಅಮ್ಮನನ್ನ ಅಥವಾ ಬೇರೆಯವ್ರನ್ನ ಕೊಲ್ಲುವವ್ರಿಗೆ, 10  ಲೈಂಗಿಕ ಅನೈತಿಕತೆ* ಮಾಡುವವ್ರಿಗೆ, ಸಲಿಂಗಕಾಮಿಗಳಿಗೆ,* ಅಪಹರಣ ಮಾಡುವವ್ರಿಗೆ, ಸುಳ್ಳುಗಾರರಿಗೆ, ಮಾತು ತಪ್ಪುವವ್ರಿಗೆ* ಮತ್ತು ಒಳ್ಳೇ* ಬೋಧನೆಗೆ ವಿರುದ್ಧವಾಗಿರೋ ಕೆಲಸ ಮಾಡುವವ್ರಿಗೆ ಈ ನಿಯಮ ಪುಸ್ತಕ ಇದೆ.+ 11  ಆ ಬೋಧನೆ ಖುಷಿಯಾಗಿರೋ ದೇವರಿಂದ ಬಂದಿದೆ. ಮಹಿಮೆಯಿಂದ ತುಂಬಿರೋ ಸಿಹಿಸುದ್ದಿನೇ ಅದಕ್ಕೆ ಆಧಾರ. ಆ ಸುದ್ದಿ ಸಾರೋಕೆ ಆತನು ನನ್ನನ್ನ ನೇಮಿಸಿದ್ದಾನೆ.+ 12  ನನ್ನಲ್ಲಿ ಬಲ ತುಂಬಿದ ನಮ್ಮ ಪ್ರಭು ಕ್ರಿಸ್ತ ಯೇಸುಗೆ ನಾನು ತುಂಬ ಋಣಿ. ಯಾಕಂದ್ರೆ ನನ್ನನ್ನ ಆತನ ಸೇವೆಗೆ ನೇಮಿಸೋ ಮೂಲಕ ಆತನು ನನ್ನನ್ನ ನಂಬಿಗಸ್ತನಾಗಿ ನೋಡಿದನು.+ 13  ಮೊದ್ಲು ನಾನು ದೇವರದ್ದೇ ತಪ್ಪು ಅಂತ ಹೇಳ್ತಿದ್ದೆ, ದೇವಜನ್ರಿಗೆ ಹಿಂಸೆ ಕೊಡ್ತಿದ್ದೆ, ದುರಹಂಕಾರಿ ಆಗಿದ್ದೆ.+ ಆದ್ರೂ ಕ್ರಿಸ್ತ ನನಗೆ ಕರುಣೆ ತೋರಿಸಿದನು. ಯಾಕಂದ್ರೆ ನಾನು ಗೊತ್ತಿಲ್ದೆ, ದೇವರ ಮೇಲೆ ನಂಬಿಕೆ ಇಲ್ದೆ ಹಾಗೆ ಮಾಡ್ದೆ. 14  ಆದ್ರೆ ನಮ್ಮ ಒಡೆಯ ನನಗೆ ವಿಶೇಷವಾಗಿ ಅಪಾರ ಕೃಪೆ ತೋರಿಸಿದನು. ಅಷ್ಟೇ ಅಲ್ಲ ನಂಬಿಕೆ ಮತ್ತು ಕ್ರಿಸ್ತ ಯೇಸುವಿನಲ್ಲಿ ಇರೋ ಪ್ರೀತಿ ಪಡಿಯೋಕೆ ಸಹಾಯ ಮಾಡಿದನು. 15  ಒಂದಂತೂ ನಿಜ ಮತ್ತು ಅದನ್ನ ಪೂರ್ತಿ ಒಪ್ಕೊಬೇಕು, ಏನಂದ್ರೆ ಕ್ರಿಸ್ತ ಯೇಸು ಪಾಪಿಗಳನ್ನ ರಕ್ಷಿಸೋಕೆ ಈ ಲೋಕಕ್ಕೆ ಬಂದನು.+ ಆ ಪಾಪಿಗಳಲ್ಲಿ ದೊಡ್ಡ ಪಾಪಿ ನಾನೇ.+ 16  ಆದ್ರೂ ಆತನು ನನಗೆ ಕರುಣೆ ತೋರಿಸಿದನು. ಹೀಗೆ ಕ್ರಿಸ್ತ ಯೇಸು ಎಷ್ಟು ತಾಳ್ಮೆಯಿಂದ ಇದ್ದಾನೆ ಅಂತ ಮಹಾ ಪಾಪಿಯಾದ ನನ್ನ ಮೂಲಕ ತೋರಿಸ್ಕೊಟ್ಟನು. ಆತನ ಮೇಲೆ ನಂಬಿಕೆ ಇಟ್ಟು ಶಾಶ್ವತ ಜೀವ ಪಡಿಯುವವ್ರಿಗೆ ನನ್ನನ್ನ ಮಾದರಿಯಾಗಿ ಇಟ್ಟನು.+ 17  ಯುಗಯುಗಕ್ಕೂ ರಾಜನಾದ,+ ಯಾವಾಗ್ಲೂ ಇರೋ,+ ಕಣ್ಣಿಗೆ ಕಾಣದ+ ಒಬ್ಬನೇ ದೇವರಿಗೆ+ ಶಾಶ್ವತವಾಗಿ ಗೌರವ, ಮಹಿಮೆ ಸಲ್ಲಲಿ. ಆಮೆನ್‌. 18  ನನ್ನ ಮಗನಾದ ತಿಮೊತಿ, ನಿನ್ನ ಬಗ್ಗೆ ಹೇಳಿರೋ ಭವಿಷ್ಯವಾಣಿಗಳನ್ನ ಮನಸ್ಸಲ್ಲಿಟ್ಟು ಈ ನಿರ್ದೇಶನ* ಕೊಡ್ತಿದ್ದೀನಿ. ಇವೆಲ್ಲ ನೀನು ಚೆನ್ನಾಗಿ ಹೋರಾಟ ಮಾಡ್ತಾ ಇರೋಕೆ ಸಹಾಯ ಮಾಡುತ್ತೆ.+ 19  ನೀನು ನಂಬಿಕೆ, ಒಳ್ಳೇ ಮನಸ್ಸಾಕ್ಷಿಯನ್ನ ಕಾಪಾಡ್ಕೋ.+ ಸ್ವಲ್ಪ ಜನ ಮನಸಾಕ್ಷಿಯನ್ನ ತಳ್ಳಿಬಿಟ್ಟಿದ್ದಾರೆ. ಹಾಗಾಗಿ ಹಡಗು ಒಡೆದು ಹೋಗೋ ಹಾಗೆ ಅವ್ರ ನಂಬಿಕೆ ಹಾಳಾಗಿದೆ. 20  ಅದ್ರಲ್ಲಿ ಹುಮೆನಾಯ,+ ಅಲೆಕ್ಸಾಂದರ ಅಂಥವರು ಇದ್ದಾರೆ. ಅವ್ರನ್ನ ನಾನು ಸೈತಾನನಿಗೆ ಒಪ್ಪಿಸಿದ್ದೀನಿ.+ ಅವ್ರಿಗೆ ಸಿಗೋ ಶಿಕ್ಷೆಯಿಂದ ಅವರು ದೇವರನ್ನ ಬೈಯಬಾರದು ಅನ್ನೋ ಪಾಠ ಕಲೀಲಿ ಅಂತ ಹಾಗೆ ಮಾಡ್ದೆ.

ಪಾದಟಿಪ್ಪಣಿ

ಅರ್ಥ “ದೇವರಿಗೆ ಗೌರವ ಕೊಡೋ ವ್ಯಕ್ತಿ.”
ಅಥವಾ “ಆಜ್ಞೆ.”
ಅಥವಾ “ಶಾಶ್ವತ ಪ್ರೀತಿ ಇಲ್ಲದವ್ರಿಗೆ.”
ಅಥವಾ “ಗಂಡಸರ ಜೊತೆ ಲೈಂಗಿಕತೆ ನಡಿಸೋ ಗಂಡಸರಿಗೆ.”
ಅಥವಾ “ಸುಳ್ಳಾಣೆ ಇಡುವವ್ರಿಗೆ.”
ಅಥವಾ “ಪ್ರಯೋಜನ ತರೋ.”
ಅಥವಾ “ಆಜ್ಞೆ.”