ಜೆಕರ್ಯ 8:1-23

 • ಯೆಹೋವ ಚೀಯೋನಿಗೆ ಶಾಂತಿ ಮತ್ತು ಸತ್ಯ ಕೊಡ್ತಾನೆ (1-23)

  • ಯೆರೂಸಲೇಮ್‌, “ಸತ್ಯದ ಪಟ್ಟಣ” (3)

  • “ಒಬ್ಬರ ಜೊತೆ ಒಬ್ಬರು ಸತ್ಯನೇ ಮಾತಾಡಬೇಕು” (16)

  • ಉಪವಾಸ ಹಬ್ಬವಾಗಿ ಬದಲಾಯ್ತು (18, 19)

  • ‘ಯೆಹೋವನನ್ನ ಅಂಗಲಾಚಿ ಬೇಡ್ಕೊಳ್ಳೋಣ’ (21)

  • 10 ಜನ ಒಬ್ಬ ಯೆಹೂದ್ಯನ ಬಟ್ಟೆ ತುದಿಯನ್ನ ಹಿಡ್ಕೊತ್ತಾರೆ (23)

8  ಸೈನ್ಯಗಳ ದೇವರಾದ ಯೆಹೋವನ ಸಂದೇಶ ಮತ್ತೆ ಬಂತು. ಅದು ಹೀಗಿತ್ತು:  “ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ: ‘ನಾನು ಚೀಯೋನಿನ ವಿಷ್ಯದಲ್ಲಿ ತುಂಬ ಆಸಕ್ತಿ ತೋರಿಸ್ತೀನಿ. ಅದಕ್ಕಾಗಿ ಒಳಗೊಳಗೇ ಹಾತೊರಿತೀನಿ.+ ನನಗೆ ತುಂಬ ಕೋಪ ಬಂದಿದೆ. ಅವ್ರ ವಿರುದ್ಧ ನಾನು ಕ್ರಮ ತಗೋತೀನಿ.’”  “ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಾನು ಚೀಯೋನಿಗೆ ವಾಪಸ್‌ ಬಂದು+ ಯೆರೂಸಲೇಮಲ್ಲಿ ವಾಸಿಸ್ತೀನಿ.+ ಆಗ ಯೆರೂಸಲೇಮಿಗೆ ಸತ್ಯದ* ಪಟ್ಟಣ ಅನ್ನೋ ಹೆಸ್ರು ಬರುತ್ತೆ.+ ಸೈನ್ಯಗಳ ದೇವರಾದ ಯೆಹೋವನ ಬೆಟ್ಟವನ್ನ ಪವಿತ್ರ ಬೆಟ್ಟ ಅಂತ ಕರೆಯಲಾಗುತ್ತೆ.’”+  “ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘⁠ವಯಸ್ಸಾಗಿರೋ ಗಂಡಸ್ರು ಮತ್ತು ಸ್ತ್ರೀಯರು ಯೆರೂಸಲೇಮ್‌ ಪಟ್ಟಣದ ಮುಖ್ಯಸ್ಥಳದಲ್ಲಿ ಮತ್ತೆ ಕೂತ್ಕೊಳ್ತಾರೆ. ತುಂಬ ವಯಸ್ಸಾಗಿರೋದ್ರಿಂದ ಅವ್ರೆಲ್ಲ ತಮ್ಮತಮ್ಮ ಕೈಯಲ್ಲಿ ಕೋಲನ್ನ ಹಿಡ್ಕೊಂಡು ಕೂತ್ಕೊತ್ತಾರೆ.+  ಪಟ್ಟಣದ ಮುಖ್ಯಸ್ಥಳಗಳು ಆಟವಾಡೋ ಮಕ್ಕಳಿಂದ ತುಂಬಿಹೋಗುತ್ತೆ.’”+  “ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ: ‘ಈ ಜನ್ರಲ್ಲಿ ಉಳಿದವ್ರಿಗೆ ಇದು ಅಸಾಧ್ಯ ಅಂತ ಆ ದಿನಗಳಲ್ಲಿ ಅನಿಸಬಹುದು. ಇದು ನನಗೂ ಅಸಾಧ್ಯ ಅಂತ ನಿಮಗೆ ಅನಿಸುತ್ತಾ?’ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.”  “ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ಪೂರ್ವದ ಮತ್ತು ಪಶ್ಚಿಮದ ದೇಶಗಳಿಂದ ನಾನು ನನ್ನ ಜನ್ರನ್ನ ಕಾಪಾಡ್ತೀನಿ.+  ನಾನು ಅವ್ರನ್ನ ಕರ್ಕೊಂಡು ಬಂದು ಯೆರೂಸಲೇಮಲ್ಲಿ ವಾಸಿಸೋ ತರ ಮಾಡ್ತೀನಿ.+ ಅವರು ನನ್ನ ಜನ್ರಾಗ್ತಾರೆ. ನಾನು ಅವ್ರಿಗೆ ಸತ್ಯದ* ಮತ್ತು ನೀತಿಯ ದೇವರಾಗ್ತೀನಿ.’”+  “ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ಪ್ರವಾದಿಗಳ+ ಬಾಯಿಂದ ಬರೋ ಈ ಮಾತುಗಳನ್ನ ಕೇಳುವವ್ರೇ, ಧೈರ್ಯ ತಂದ್ಕೊಳ್ಳಿ.*+ ಸೈನ್ಯಗಳ ದೇವರಾದ ಯೆಹೋವನ ಆಲಯ ಕಟ್ಟೋಕೆ ಅಡಿಪಾಯ ಹಾಕಿದ ದಿನ ಈ ಮಾತುಗಳನ್ನ ಹೇಳಲಾಗಿತ್ತು. 10  ಆ ಸಮಯಕ್ಕಿಂತ ಮುಂಚೆ ಯಾವ ಮನುಷ್ಯನಿಗಾಗಲಿ ಯಾವ ಪ್ರಾಣಿಗಾಗಲಿ ಸಂಬಳ ಕೊಟ್ಟಿರಲಿಲ್ಲ.+ ಶತ್ರುಗಳಿಂದಾಗಿ ಪ್ರಯಾಣ ಮಾಡೋದು ಅಷ್ಟು ಕಷ್ಟವಾಗಿತ್ತು. ಯಾಕಂದ್ರೆ ಒಬ್ರನ್ನೊಬ್ರು ಎದುರಿಸೋಕೆ ನಾನು ಎಲ್ರನ್ನೂ ಪ್ರೇರೇಪಿಸಿದ್ದೆ.’ 11  ‘ಆದ್ರೆ ಈಗ ನಾನು ಉಳಿದಿರೋ ಜನ್ರ ಜೊತೆ ಮೊದಲಿನ ತರ ವ್ಯವಹರಿಸಲ್ಲ’+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ. 12  ‘ಯಾಕಂದ್ರೆ ಶಾಂತಿಯ ಬೀಜವನ್ನ ಬಿತ್ತಲಾಗುತ್ತೆ. ದ್ರಾಕ್ಷಿ ಬಳ್ಳಿ ಹಣ್ಣು ಬಿಡುತ್ತೆ ಮತ್ತು ಭೂಮಿ ಬೆಳೆ ಕೊಡುತ್ತೆ.+ ಆಕಾಶದಿಂದ ಇಬ್ಬನಿ ಬೀಳುತ್ತೆ. ಉಳಿದಿರೋ ಜನ ಇದನ್ನೆಲ್ಲ ಅನುಭವಿಸೋ ತರ ನಾನು ಆಶೀರ್ವಾದ ಮಾಡ್ತೀನಿ.+ 13  ಯೆಹೂದ ಮನೆತನವೇ, ಇಸ್ರಾಯೇಲ್‌ ಮನೆತನವೇ ಎಲ್ಲ ದೇಶಗಳಲ್ಲಿ ನಿಮ್ಮ ಹೆಸ್ರನ್ನ ಶಾಪದ ಮಾತಾಗಿ ಬಳಸಿದ ತರಾನೇ,+ ನಾನು ನಿಮ್ಮನ್ನ ರಕ್ಷಿಸಿದ ಮೇಲೆ ನಿಮ್ಮ ಹೆಸ್ರನ್ನ ಆಶೀರ್ವಾದದ ಮಾತಾಗಿ ಬಳಸ್ತೀನಿ.+ ಭಯಪಡಬೇಡಿ!+ ಧೈರ್ಯ ತಂದ್ಕೊಳ್ಳಿ.’*+ 14  ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ಸೈನ್ಯಗಳ ದೇವರಾಗಿರೋ ಯೆಹೋವನಾದ ನಾನು ಹೀಗೆ ಹೇಳ್ತಿದ್ದೀನಿ “ನಿಮ್ಮ ಪೂರ್ವಜರು ನನಗೆ ಕೋಪ ಬರೋ ತರ ಮಾಡಿದ್ರು. ಆಗ ನಾನು ನಿಮ್ಮ ಮೇಲೆ ಕಷ್ಟವನ್ನ ತರಬೇಕಂತ ದೃಢತೀರ್ಮಾನ ಮಾಡಿದ್ದೆ. ಅದ್ರ ಬಗ್ಗೆ ನಾನು ನನ್ನ ಮನಸ್ಸನ್ನ ಬದಲಾಯಿಸಿರಲಿಲ್ಲ.*+ 15  ಆದ್ರೆ ಈಗ ನಾನು ಯೆರೂಸಲೇಮ್‌ ಮತ್ತು ಯೆಹೂದದ ಜನ್ರಿಗೆ ಒಳ್ಳೇದನ್ನ ಮಾಡೋಕೆ ದೃಢತೀರ್ಮಾನ ಮಾಡಿದ್ದೀನಿ.+ ಹಾಗಾಗಿ ನೀವು ಭಯಪಡಬೇಡಿ!”’+ 16  ‘ನೀವು ಈ ವಿಷ್ಯಗಳನ್ನ ಮಾಡಬೇಕು: ಒಬ್ಬರ ಜೊತೆ ಒಬ್ಬರು ಸತ್ಯನೇ ಮಾತಾಡಬೇಕು.+ ನಿಮ್ಮ ಪಟ್ಟಣದ ಬಾಗಿಲುಗಳಲ್ಲಿ ತೀರ್ಪು ಕೊಡುವಾಗ ಅದು ಸತ್ಯಕ್ಕೆ ತಕ್ಕಂತೆ ಮತ್ತು ಶಾಂತಿಯನ್ನ ಹೆಚ್ಚಿಸೋ ತರ ಇರಬೇಕು.+ 17  ಬೇರೆಯವ್ರಿಗೆ ಕೆಟ್ಟದ್ದನ್ನ ಮಾಡೋ ಉದ್ದೇಶದಿಂದ ನಿಮ್ಮ ಮನಸ್ಸಲ್ಲಿ ಸಂಚು ಮಾಡಬೇಡಿ.+ ಸುಳ್ಳು ಆಣೆ ಮಾಡಬೇಡಿ.+ ಯಾಕಂದ್ರೆ ಇವೆಲ್ಲ ನಾನು ದ್ವೇಷಿಸೋ ವಿಷ್ಯಗಳು’+ ಅಂತ ಯೆಹೋವ ಹೇಳ್ತಿದ್ದಾನೆ.” 18  ಸೈನ್ಯಗಳ ದೇವರಾದ ಯೆಹೋವನ ಸಂದೇಶ ಮತ್ತೆ ನನಗೆ ಸಿಕ್ತು. ಅದೇನಂದ್ರೆ: 19  “ಸೈನ್ಯಗಳ ದೇವರಾಗಿರೋ ಯೆಹೋವನಾದ ನಾನು ಹೀಗೆ ಹೇಳ್ತಿದ್ದೀನಿ: ‘ನಾಲ್ಕನೇ ತಿಂಗಳಲ್ಲಿ,+ ಐದನೇ ತಿಂಗಳಲ್ಲಿ,+ ಏಳನೇ ತಿಂಗಳಲ್ಲಿ+ ಮತ್ತು ಹತ್ತನೇ ತಿಂಗಳಲ್ಲಿ+ ಮಾಡೋ ಉಪವಾಸಗಳು ಯೆಹೂದದ ಮನೆತನಕ್ಕೆ ಸಂತೋಷ ಸಂಭ್ರಮದಿಂದ ಆಚರಿಸೋ ಹಬ್ಬಗಳಾಗಿ ಬದಲಾಗುತ್ತೆ.+ ಹಾಗಾಗಿ ಸತ್ಯವನ್ನ ಮತ್ತು ಶಾಂತಿಯನ್ನ ಪ್ರೀತಿಸಿ.’ 20  ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ ‘ದೇಶದೇಶಗಳಿಂದ ಜನ ಮತ್ತು ಎಷ್ಟೋ ಪಟ್ಟಣಗಳ ಜನ್ರು ಬರೋ ಕಾಲ ಬರುತ್ತೆ. 21  ಒಂದು ಪಟ್ಟಣದವರು ಇನ್ನೊಂದು ಪಟ್ಟಣದ ಜನ್ರ ಹತ್ರ ಹೋಗಿ “ಯೆಹೋವನ ದಯೆಗಾಗಿ ಅಂಗಲಾಚಿ ಬೇಡ್ಕೊಳ್ಳೋಕೆ, ಸೈನ್ಯಗಳ ದೇವರಾದ ಯೆಹೋವನನ್ನ ಆರಾಧಿಸೋಕೆ ನಾವು ಹೋಗ್ತಿದ್ದೀವಿ. ನೀವೂ ಬನ್ನಿ”+ ಅಂತಾರೆ. 22  ಆಗ ಎಷ್ಟೋ ಜನಾಂಗಗಳು ಮತ್ತು ಬಲಿಷ್ಠ ದೇಶಗಳು ಸೈನ್ಯಗಳ ದೇವರಾದ ಯೆಹೋವನನ್ನ ಆರಾಧಿಸೋಕೆ,+ ಯೆಹೋವನ ಆಶೀರ್ವಾದ ಪಡಿಯೋಕೆ ಯೆರೂಸಲೇಮಿಗೆ ಬರುತ್ತೆ.’ 23  ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ಆ ದಿನಗಳಲ್ಲಿ ಎಲ್ಲ ಭಾಷೆಗಳಿಂದ ಎಲ್ಲ ದೇಶಗಳಿಂದ+ ಬಂದಂಥ 10 ಜನ ಒಬ್ಬ ಯೆಹೂದ್ಯನ ಬಟ್ಟೆಯ ತುದಿಯನ್ನ ಗಟ್ಟಿಯಾಗಿ ಹಿಡ್ಕೊಂಡು “ದೇವರು ನಿಮ್ಮ ಜೊತೆ ಇದ್ದಾನೆ ಅಂತ ನಾವು ಕೇಳಿಸ್ಕೊಂಡಿದ್ದೀವಿ.+ ಹಾಗಾಗಿ ನಾವೂ ನಿಮ್ಮ ಜೊತೆ ಬರ್ತಿವಿ”+ ಅಂತಾರೆ.’”

ಪಾದಟಿಪ್ಪಣಿ

ಅಥವಾ “ನಂಬಿಗಸ್ತ.”
ಅಥವಾ “ನಂಬಿಗಸ್ತ.”
ಅಕ್ಷ. “ನಿಮ್ಮ ಕೈಗಳನ್ನ ಬಲಪಡಿಸಿಕೊಳ್ಳಿ.”
ಅಕ್ಷ. “ನಿಮ್ಮ ಕೈಗಳನ್ನ ಬಲಪಡಿಸಿಕೊಳ್ಳಿ.”
ಅಥವಾ “ನನಗೆ ಯಾವುದೇ ಬೇಸರ ಇರಲಿಲ್ಲ.”