ಪ್ರಸಂಗಿ 3:1-22

  • ಪ್ರತಿಯೊಂದಕ್ಕೂ ಸಮಯ ಇದೆ (1-8)

  • ಜೀವನದಲ್ಲಿ ಸಂತೋಷ ದೇವರ ಉಡುಗೊರೆ (9-15)

    • ಶಾಶ್ವತವಾಗಿ ಜೀವಿಸೋ ಯೋಚ್ನೆ ಮನುಷ್ಯರ ಹೃದಯದಲ್ಲಿದೆ (11)

  • ದೇವರು ನ್ಯಾಯವಾಗಿ ಎಲ್ರಿಗೂ ತೀರ್ಪು ಕೊಡ್ತಾನೆ (16, 17)

  • ಪ್ರಾಣಿಗಳು ಸಾಯೋ ತರ ಮನುಷ್ಯರೂ ಸಾಯ್ತಾರೆ (18-22)

    • ಎಲ್ಲಾ ಮಣ್ಣಿಗೇ ಸೇರುತ್ತೆ (20)

3  ಪ್ರತಿಯೊಂದಕ್ಕೂ ಒಂದು ಸಮಯ ಇದೆ. ಆಕಾಶದ ಕೆಳಗೆ ನಡಿಯೋ ಒಂದೊಂದು ಕೆಲಸಕ್ಕೂ ಒಂದೊಂದು ಸಮಯ ಇದೆ.   ಹುಟ್ಟೋಕೆ ಒಂದು ಸಮಯ, ಸಾಯೋಕೆ ಒಂದು ಸಮಯ,ನೆಡೋಕೆ ಒಂದು ಸಮಯ, ನೆಟ್ಟದ್ದನ್ನ ಕೀಳೋಕೆ ಒಂದು ಸಮಯ,   ಕೊಲ್ಲೋಕೆ ಒಂದು ಸಮಯ, ವಾಸಿ ಮಾಡೋಕೆ ಒಂದು ಸಮಯ,ಕೆಡವಿ ಹಾಕೋಕೆ ಒಂದು ಸಮಯ, ಕಟ್ಟೋಕೆ ಒಂದು ಸಮಯ,   ಅಳೋಕೆ ಒಂದು ಸಮಯ, ನಗೋಕೆ ಒಂದು ಸಮಯ,ಗೋಳಾಡೋಕೆ ಒಂದು ಸಮಯ, ಕುಣಿದಾಡೋಕೆ ಒಂದು ಸಮಯ,   ಕಲ್ಲುಗಳನ್ನ ಎತ್ತಿ ಬಿಸಾಡೋಕೆ ಒಂದು ಸಮಯ, ಕಲ್ಲುಗಳನ್ನ ಕೂಡಿಸೋಕೆ ಒಂದು ಸಮಯ,ಅಪ್ಕೊಳ್ಳೋಕೆ ಒಂದು ಸಮಯ, ಅಪ್ಕೊಳ್ಳದೇ ಇರೋಕೆ ಒಂದು ಸಮಯ,   ಹುಡುಕೋಕೆ ಒಂದು ಸಮಯ, ಸಿಗಲ್ಲ ಅಂತ ಬಿಟ್ಟುಬಿಡೋಕೆ ಒಂದು ಸಮಯ,ಇಟ್ಕೊಳ್ಳೋಕೆ ಒಂದು ಸಮಯ, ಬಿಸಾಡೋಕೆ ಒಂದು ಸಮಯ,   ಹರಿದು ಹಾಕೋಕೆ ಒಂದು ಸಮಯ,+ ಹೊಲಿಯೋಕೆ ಒಂದು ಸಮಯ,ಸುಮ್ಮನಿರೋಕೆ ಒಂದು ಸಮಯ,+ ಮಾತಾಡೋಕೆ ಒಂದು ಸಮಯ,+   ಪ್ರೀತಿಸೋಕೆ ಒಂದು ಸಮಯ, ದ್ವೇಷಿಸೋಕೆ ಒಂದು ಸಮಯ,+ಯುದ್ಧ ಮಾಡೋಕೆ ಒಂದು ಸಮಯ, ಶಾಂತಿಯಿಂದ ಇರೋಕೆ ಒಂದು ಸಮಯ.  ಕಷ್ಟಪಟ್ಟು ದುಡಿಯುವವನಿಗೆ ಏನು ಲಾಭ ಸಿಗುತ್ತೆ?+ 10  ಮನುಷ್ಯರನ್ನ ಕಾರ್ಯನಿರತರನ್ನಾಗಿ ಇಡೋಕೆ ದೇವರು ಅವ್ರಿಗೆ ಕೊಟ್ಟ ಕೆಲಸವನ್ನ ನಾನು ನೋಡಿದ್ದೀನಿ. 11  ದೇವರು ಪ್ರತಿಯೊಂದನ್ನ ಸರಿಯಾದ ಸಮಯದಲ್ಲಿ ಅಂದವಾಗಿ* ಮಾಡಿದ್ದಾನೆ.+ ಶಾಶ್ವತವಾಗಿ ಜೀವಿಸೋ ಆಸೆಯನ್ನ ದೇವರು ಮನುಷ್ಯರ ಹೃದಯದಲ್ಲಿ ಇಟ್ಟಿದ್ದಾನೆ. ಆದ್ರೂ ಅವ್ರಿಗೆ ಸತ್ಯ ದೇವರು ಮಾಡಿರೋ ಕೆಲಸವನ್ನ ಪೂರ್ತಿ* ಅರ್ಥ ಮಾಡ್ಕೊಳ್ಳೋಕೆ ಯಾವತ್ತೂ ಆಗಲ್ಲ. 12  ನಾನೊಂದು ತೀರ್ಮಾನಕ್ಕೆ ಬಂದಿದ್ದೀನಿ. ಅದೇನಂದ್ರೆ ಜೀವನದಲ್ಲಿ ಸಂತೋಷವಾಗಿ ಇರೋದು ಮತ್ತು ಒಳ್ಳೇದು ಮಾಡೋದು, ಇದಕ್ಕಿಂತ ಉತ್ತಮವಾದದ್ದು ಮನುಷ್ಯರಿಗೆ ಬೇರೇನೂ ಇಲ್ಲ.+ 13  ಅದ್ರ ಜೊತೆ ಪ್ರತಿಯೊಬ್ಬನು ತಿನ್ಲಿ, ಕುಡಿಲಿ, ತನ್ನೆಲ್ಲ ಶ್ರಮದ ಕೆಲಸದಲ್ಲಿ ಸಂತೋಷ ಪಡಿಲಿ. ಇದು ದೇವರ ಉಡುಗೊರೆ.+ 14  ಸತ್ಯ ದೇವರು ಮಾಡೋದೆಲ್ಲ ಶಾಶ್ವತವಾಗಿ ಉಳಿಯುತ್ತೆ ಅಂತ ನಾನು ತಿಳ್ಕೊಂಡೆ. ಅವುಗಳಿಗೆ ಏನೂ ಕೂಡಿಸಬೇಕಾಗಿಲ್ಲ, ಅವುಗಳಿಂದ ಏನೂ ತೆಗಿಬೇಕಾಗಿಲ್ಲ. ಜನ್ರು ತನಗೆ ಭಯಪಡಬೇಕಂತ ಸತ್ಯ ದೇವರು ಇದನ್ನೆಲ್ಲ ಈ ರೀತಿ ಮಾಡಿದ್ದಾನೆ.+ 15  ಏನು ನಡಿತಿದ್ಯೋ ಅದು ಈ ಹಿಂದೆ ನಡೆದಿರೋ ವಿಷ್ಯಗಳೇ, ಮುಂದೆ ನಡಿಯೋದು ಈಗ ನಡಿತಿರೋ ವಿಷ್ಯಗಳೇ.+ ಮನುಷ್ಯರು ಬೆನ್ನಟ್ಟಿರೋದನ್ನ* ಸತ್ಯ ದೇವರು ಹುಡುಕ್ತಾನೆ. 16  ಭೂಮಿಯಲ್ಲಿ* ನ್ಯಾಯ ಇರಬೇಕಾದಲ್ಲಿ ಕೆಟ್ಟತನ ಇದ್ದಿದ್ದನ್ನ, ನೀತಿ ಇರಬೇಕಾದಲ್ಲಿ ಕೆಟ್ಟತನ ಇದ್ದಿದ್ದನ್ನ ಕೂಡ ನೋಡಿದ್ದೀನಿ.+ 17  ಹಾಗಾಗಿ ನಾನು ಮನಸ್ಸಲ್ಲೇ “ಸತ್ಯ ದೇವರು ನೀತಿವಂತರಿಗೂ ಕೆಟ್ಟವ್ರಿಗೂ ತೀರ್ಪು ಕೊಡ್ತಾನೆ.+ ಪ್ರತಿಯೊಂದು ವಿಷ್ಯಕ್ಕೂ ಪ್ರತಿಯೊಂದು ಕೆಲಸಕ್ಕೂ ಒಂದು ಸಮಯ ಇದೆ” ಅಂತ ಯೋಚಿಸಿದೆ. 18  “ಸತ್ಯ ದೇವರು ಮನುಷ್ಯರನ್ನ ಪರೀಕ್ಷಿಸಿ ಅವರು ಪ್ರಾಣಿಗಳ ತರ ಇದ್ದಾರೆ ಅಂತ ಅವ್ರಿಗೆ ತೋರಿಸ್ತಾನೆ” ಅಂತಾನೂ ನಾನು ಮನಸ್ಸಲ್ಲೇ ಯೋಚಿಸಿದೆ. 19  ಯಾಕಂದ್ರೆ ಮನುಷ್ಯರಿಗೂ ಪ್ರಾಣಿಗಳಿಗೂ ಕೊನೆಗೆ ಬರೋ ಗತಿ ಒಂದೇ. ಅದ್ರಲ್ಲಿ ಏನೂ ವ್ಯತ್ಯಾಸ ಇಲ್ಲ.+ ಪ್ರಾಣಿಗಳು ಸಾಯೋ ತರ ಮನುಷ್ಯರೂ ಸಾಯ್ತಾರೆ. ಮನುಷ್ಯರಲ್ಲೂ ಪ್ರಾಣಿಗಳಲ್ಲೂ ಇರೋದು ಜೀವಶಕ್ತಿನೇ.*+ ಪ್ರಾಣಿಗಳಿಗಿಂತ ಮನುಷ್ಯರು ಶ್ರೇಷ್ಠರಲ್ಲ, ಹಾಗಾಗಿ ಎಲ್ಲ ವ್ಯರ್ಥ. 20  ಎಲ್ಲಾ ಹೋಗೋದು ಒಂದೇ ಜಾಗಕ್ಕೆ.+ ಎಲ್ಲಾ ಮಣ್ಣಿಂದ ಆಯ್ತು,+ ಎಲ್ಲಾ ಮತ್ತೆ ಮಣ್ಣಿಗೇ ಸೇರುತ್ತೆ.+ 21  ಮನುಷ್ಯರ ಜೀವಶಕ್ತಿ ಮೇಲೆ ಹೋಗುತ್ತಾ, ಪ್ರಾಣಿಗಳ ಜೀವಶಕ್ತಿ ಕೆಳಗೆ ಮಣ್ಣಿಗೆ ಹೋಗುತ್ತಾ ಅಂತ ಯಾರಿಗಾದ್ರೂ ಗೊತ್ತಿದ್ಯಾ?+ 22  ಮನುಷ್ಯ ತನ್ನ ಕೆಲಸದಲ್ಲಿ ಸಂತೋಷ ಪಡಿಯೋದಕ್ಕಿಂತ ಬೇರೇನೂ ಒಳ್ಳೇದಿಲ್ಲ ಅಂತ ತಿಳ್ಕೊಂಡೆ.+ ಅದೇ ಅವನಿಗೆ ಸಿಗೋ ಪ್ರತಿಫಲ. ಯಾಕಂದ್ರೆ ಅವನು ಸತ್ತ ಮೇಲೆ ಏನಾಗುತ್ತೆ ಅಂತ ನೋಡೋ ಸಾಮರ್ಥ್ಯವನ್ನ ಅವನಿಗೆ ಕೊಡೋಕೆ ಯಾರಿಂದಾಗುತ್ತೆ?+

ಪಾದಟಿಪ್ಪಣಿ

ಅಥವಾ “ಸುವ್ಯವಸ್ಥಿತವಾಗಿ; ಸರಿಯಾಗಿ; ಸೂಕ್ತವಾಗಿ.”
ಅಕ್ಷ. “ಆರಂಭದಿಂದ ಕೊನೆ ತನಕ.”
ಬಹುಶಃ, “ಗತಿಸಿ ಹೋಗಿರೋದನ್ನ.”
ಅಕ್ಷ. “ಸೂರ್ಯನ ಕೆಳಗೆ.”
ಅಥವಾ “ಉಸಿರೇ.”