ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ನಿದ್ದೆ—ನಿಮ್ಮ ಎನರ್ಜಿ ಟಾನಿಕ್‌

ನಿದ್ದೆ—ನಿಮ್ಮ ಎನರ್ಜಿ ಟಾನಿಕ್‌

 ಮ್ಯಾಥ್ಸ್‌ನಲ್ಲಿ ಕಮ್ಮಿ ಮಾರ್ಕ್ಸ್‌ ಬಂದ್ರೆ, ನಾನಿನ್ನೂ ಚೆನ್ನಾಗಿ ಓದಬೇಕು ಅಂತ ಅನ್ಸುತ್ತೆ. ಸ್ಪೋರ್ಟ್ಸಲ್ಲಿ ಚೆನ್ನಾಗಿ ಆಡ್ತಿಲ್ಲ ಅಂದ್ರೆ, ನಾನಿನ್ನೂ ಚೆನ್ನಾಗಿ ಪ್ರಾಕ್ಟೀಸ್‌ ಮಾಡಬೇಕು ಅನ್ಸುತ್ತೆ. ಆದ್ರೆ ಇವೆರಡನ್ನೂ ಚೆನ್ನಾಗಿ ಮಾಡಬೇಕಂದ್ರೆ ನಮಗೆ ಕಣ್ತುಂಬ ನಿದ್ದೆ ಬೇಕು. ಯಾಕೆ ಗೊತ್ತಾ?

 ನಿದ್ದೆ ಯಾಕೆ ಬೇಕು?

 ಯುವಕರು ಒಂದು ದಿನದಲ್ಲಿ 8 ರಿಂದ 10 ಗಂಟೆ ನಿದ್ದೆ ಮಾಡಬೇಕು ಅಂತ ತಜ್ಞರು ಹೇಳ್ತಾರೆ. ನಿದ್ದೆ ಮಾಡೋದು ಅಷ್ಟು ಮುಖ್ಯನಾ?

  •   ಚೆನ್ನಾಗಿ ನಿದ್ದೆ ಮಾಡಿದ್ರೆ ಚೆನ್ನಾಗಿ ಯೋಚ್ನೆ ಮಾಡಕ್ಕಾಗುತ್ತೆ. ನಿದ್ದೆ ನಮ್ಮ “ಮೆದುಳಿಗೆ ಊಟ” ಇದ್ದ ಹಾಗೆ. ಎನರ್ಜಿ ಟಾನಿಕ್‌ ತರ ಸ್ಕೂಲಲ್ಲಿ, ಆಟದಲ್ಲಿ, ಸಮಸ್ಯೆಗಳನ್ನ ಸರಿಮಾಡೋಕೆ ಸಹಾಯ ಮಾಡುತ್ತೆ.

  •   ನಿಮ್ಮ ಮೂಡ್‌ ಕೂಡ ಚೆನ್ನಾಗಿರುತ್ತೆ. ಸರಿಯಾಗಿ ನಿದ್ದೆ ಮಾಡದಿದ್ರೆ ನಿಮ್ಮ ಮೂಡ್‌ ಚೆನ್ನಾಗಿರಲ್ಲ, ಬೇಜಾರಾಗಿ, ಕುಗ್ಗಿ ಹೋಗಿರ್ತೀರ ಮತ್ತು ಬೇರೆಯವ್ರ ಜೊತೆ ಚೆನ್ನಾಗಿ ಬೆರೆಯೋಕ್ಕಾಗಲ್ಲ.

  •   ಡ್ರೈವಿಂಗ್‌ ಚೆನ್ನಾಗಿ ಮಾಡಬಹುದು. 40 ರಿಂದ 59 ವಯಸ್ಸಿನವರಿಗೆ ಹೋಲಿಸಿ ನೋಡೋದಾದ್ರೆ, ನಿದ್ದೆ ಕಣ್ಣಲ್ಲಿ ಗಾಡಿ ಓಡಿಸಿದ್ರಿಂದ 16 ರಿಂದ 24 ವಯಸ್ಸಿನವರಿಗೆ ಎರಡು ಪಟ್ಟು ಜಾಸ್ತಿ ಆಕ್ಸಿಡೆಂಟ್‌ ಆಗಿದೆ ಅಂತ ಅಮೆರಿಕದ ಒಂದು ವರದಿ ತಿಳಿಸಿದೆ.

  •   ನಿದ್ದೆ ಚೆನ್ನಾಗಿದ್ರೆ ಒಳ್ಳೇ ಆರೋಗ್ಯ ಸಿಗುತ್ತೆ. ದೇಹದ ಎಲ್ಲಾ ರಿಪೇರಿ ಕೆಲಸಗಳು ನಾವು ನಿದ್ದೆ ಮಾಡೋವಾಗ ಆಗುತ್ತೆ. ಉದಾಹರಣೆಗೆ, ನಮ್ಮ ದೇಹದ ಜೀವಕೋಶಗಳು, ಅಂಗಾಂಶಗಳು ಮತ್ತು ರಕ್ತನಾಳಗಳು ಸರಿಯಾಗಿ ಕೆಲಸ ಮಾಡುತ್ತೆ. ಒಳ್ಳೇ ನಿದ್ದೆ ಇದ್ರೆ ಅತಿಯಾದ ಬೊಜ್ಜು, ಸಕ್ಕರೆ ಕಾಯಿಲೆ, ಲಕ್ವದಂಥ ಕಾಯಿಲೆಗಳಿಂದ ದೂರ ಇರಬಹುದು.

ಮೊಬೈಲ್‌ ಚೆನ್ನಾಗಿ ಕೆಲ್ಸ ಮಾಡಬೇಕಂದ್ರೆ ಅದ್ರ ಬ್ಯಾಟರಿನ ಚಾರ್ಜ್‌ ಮಾಡಬೇಕು ಅದೇ ತರ ನಾವು ಚೆನ್ನಾಗಿ ಕೆಲ್ಸ ಮಾಡಬೇಕು ಅಂದ್ರೆ ಚೆನ್ನಾಗಿ ನಿದ್ದೆ ಮಾಡಬೇಕು

 ನಿದ್ದೆ ಕಮ್ಮಿ ಆಗೋಕೆ ಕಾರಣ ಏನು?

 ನಿದ್ದೆ ಮಾಡೋದ್ರಿಂದ ತುಂಬ ಪ್ರಯೋಜ್ನಗಳು ಇದೆ ನಿಜ. ಆದ್ರೆ ಇವತ್ತು ತುಂಬ ಯುವಕರು ಸರಿಯಾಗಿ ನಿದ್ದೆ ಮಾಡ್ತಿಲ್ಲ. ಉದಾಹರಣೆಗೆ 16 ವಯಸ್ಸಿನ ಎಲಾನಿ ಹೇಳೋದು:

 “ನಮ್ಮ ಟೀಚರ್‌ ಕ್ಲಾಸಲ್ಲಿ ಎಲ್ಲರ ಹತ್ರ ಎಷ್ಟು ಹೊತ್ತಿಗೆ ಮಲಗ್ತೀರ ಅಂತ ಕೇಳಿದ್ರು, ಕೆಲವ್ರು ಬೆಳಗಿನ ಜಾವ 2:00 ಗಂಟೆ ಅಂದ್ರು ಇನ್ನೂ ಕೆಲವ್ರು 5:00 ಗಂಟೆ ಅಂದ್ರು. ಬರೀ ಒಬ್ಬ ಮಾತ್ರ ರಾತ್ರಿ 9:30 ಅಂತ ಹೇಳಿದ.”

 ನಿದ್ದೆ ಕೆಡೋಕೆ ಕಾರಣಗಳೇನು?

 ಸ್ನೇಹಿತರು.“ಫ್ರೆಂಡ್ಸ್‌ ಜೊತೆ ಹೊರಗೆ ಹೋದಾಗ, ರಾತ್ರಿಯೆಲ್ಲಾ ನಿದ್ದೆ ಮಾಡ್ದೆ ಟೈಮ್‌ ವೇಸ್ಟ್‌ ಮಾಡೋದು ತುಂಬ ಕಾಮನ್‌.”—ಪಾಮೆಲಾ.

 ಜವಾಬ್ದಾರಿಗಳು. “ನನಗೆ ನಿದ್ದೆ ಮಾಡೋಕೆ ತುಂಬ ಇಷ್ಟ, ಆದ್ರೆ ತುಂಬ ಕೆಲಸಗಳು ಇರೋದ್ರಿಂದ ಕಣ್ಣು ತುಂಬ ನಿದ್ದೆ ಮಾಡೋದು ಕಷ್ಟ.”—ಆ್ಯನ.

 ತಂತ್ರಜ್ಞಾನ. “ನಾನು ನಿದ್ದೆ ಕೆಡೋಕೆ ಮುಖ್ಯ ಕಾರಣ ನನ್ನ ಮೊಬೈಲ್‌. ಮಲಗಿರುವಾಗ ಅದನ್ನ ನೋಡದೆ ಇರೋಕೇ ಆಗಲ್ಲ.”—ಅನಿಸಾ.

 ಚೆನ್ನಾಗಿ ನಿದ್ದೆ ಮಾಡಬೇಕಂದ್ರೆ ಏನು ಮಾಡಬೇಕು?

  •   ನಿದ್ದೆ ಎಷ್ಟು ಮುಖ್ಯ ಅಂತ ತಿಳ್ಕೊಳ್ಳಿ. “ಅತಿಯಾಗಿ ದುಡಿಯೋದಕ್ಕಿಂತ ಒಂದಿಷ್ಟು ವಿಶ್ರಾಂತಿ ಪಡ್ಕೊಳ್ಳೋದೇ ಒಳ್ಳೇದು. ಅತಿಯಾಗಿ ದುಡಿಯೋದು ಗಾಳಿ ಹಿಡಿಯೋಕೆ ಓಡಿದ ಹಾಗೆ“ ಅಂತ ಬೈಬಲ್‌ ಹೇಳುತ್ತೆ. (ಪ್ರಸಂಗಿ 4:6) ನಿದ್ದೆ ಅನ್ನೋದು ನಮ್ಮ ಆರೋಗ್ಯಕ್ಕೆ ಬೇಕೇ ಬೇಕು. ಅದು ಸೋಮಾರಿತನ ಅಲ್ಲ. ಸರಿಯಾಗಿ ನಿದ್ದೆ ಮಾಡದಿದ್ರೆ ಯಾವ ಕೆಲಸನೂ ಚೆನ್ನಾಗಿ ಮಾಡೋಕಾಗಲ್ಲ, ಉತ್ಸಾಹದಿಂದ ಇರಕ್ಕಾಗಲ್ಲ.

  •   ನಿದ್ದೆ ಕೆಡೋಕೆ ಕಾರಣ ಏನು ಅಂತ ಕಂಡುಹಿಡೀರಿ. ಉದಾಹರಣೆಗೆ, ನೀವು ನಿಮ್ಮ ಫ್ರೆಂಡ್ಸ್‌ ಜೊತೆ ತುಂಬ ಸಮಯ ಕಳಿತೀರಾ? ಹೋಮ್‌ವರ್ಕ್‌ ಮತ್ತು ಬೇರೆ ಕೆಲಸಗಳು ಜಾಸ್ತಿ ಇದ್ಯಾ? ಫೋನ್‌ ನೋಡ್ತಾ ತುಂಬ ಲೇಟಾಗಿ ಮಲಗ್ತಿದ್ದೀರಾ ಅಥ್ವಾ ನೀವು ಮಲಗಿದ ಮೇಲೆ ಬರೋ ಮೆಸ್ಸೇಜ್‌ಗಳಿಂದ ನಿಮ್ಮ ನಿದ್ದೆ ಹಾಳಾಗ್ತಿದ್ಯಾ?

 ಸ್ವಲ್ಪ ಯೋಚಿಸಿ: ಒಂದೇ ದಿನದಲ್ಲಿ ನಿಮಗಿರೋ ಈ ಅಭ್ಯಾಸಗಳನ್ನ ಸರಿ ಮಾಡೋಕ್ಕಾಗಲ್ಲ. ಆದ್ರೆ ಪ್ರಯತ್ನ ಪಟ್ರೆ ಖಂಡಿತ ಒಳ್ಳೇ ಫಲಿತಾಂಶಗಳು ಸಿಗುತ್ತೆ. ಅದಕ್ಕೆ ಜ್ಞಾನೋಕ್ತಿ 21:5 ”ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ“ ಅಂತ ಹೇಳುತ್ತೆ.

 ಚೆನ್ನಾಗಿ ನಿದ್ದೆ ಮಾಡೋಕೆ ಒಬ್ಬೊಬ್ರಿಗೆ ಒಂದೊಂದು ತರದ ಸಲಹೆ ಸಹಾಯ ಮಾಡ್ಬಹುದು. ಉದಾಹರಣೆಗೆ, ಕೆಲವ್ರಿಗೆ ಹಗಲಲ್ಲಿ ಸ್ವಲ್ಪ ಹೊತ್ತು ನಿದ್ದೆ ಮಾಡೋದ್ರಿಂದ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತೆ. ಇನ್ನೂ ಕೆಲವ್ರಿಗೆ ಹಾಗೆ ಮಾಡಿದ್ರೆ ನಿದ್ದೆನೇ ಬರಲ್ಲ. ನಿಮ್ಗೆ ಯಾವ್ದು ಒಳ್ಳೇದು ಅಂತ ನಿಮ್ಗೇ ಗೊತ್ತು, ಅದ್ರ ಪ್ರಕಾರ ಮಾಡಿ. ಈ ಮುಂದಿನ ಸಲಹೆಗಳು ನಿಮ್ಗೆ ಸಹಾಯ ಮಾಡ್ಬಹುದು:

  •   ವಿಶ್ರಾಂತಿ ತಗೊಳೋಕೆ ಸಮಯ ಮಾಡ್ಕೊಳ್ಳಿ. ನಿದ್ದೆ ಮಾಡೋಕ್ಕಿಂತ ಮುಂಚೆ ಸ್ವಲ್ಪ ರೆಸ್ಟ್‌ ಮಾಡಿದ್ರೆ ಬೇಗ ನಿದ್ದೆ ಬರುತ್ತೆ.

     “ಎಲ್ಲಾ ಕೆಲಸಗಳನ್ನ ಮೊದಲೇ ಮಾಡಿ ಮುಗಿಸಿಬಿಟ್ರೆ ನಿದ್ದೆ ಮಾಡೋ ಸಮ್ಯದಲ್ಲಿ ಅದ್ರ ಬಗ್ಗೆ ಚಿಂತೆ ಮಾಡೋ ಅವಶ್ಯಕತೆ ಇರಲ್ಲ.”—ಮರಿಯ.

  •   ಒಳ್ಳೇ ಶೆಡ್ಯೂಲ್‌ ಮಾಡಿ. ಯಾವಾಗ ಏನ್‌ ಮಾಡ್ಬೇಕು ಅಂತ ಒಂದು ಶೆಡ್ಯೂಲ್‌ ಮಾಡಿ. ಆಗ ನಿದ್ದೆ ಮಾಡೋಕೂ ಟೈಂ ಇರುತ್ತೆ.

     “ನಂಗೆ ಕೊನೆ ಪಕ್ಷ 8 ಗಂಟೆ ಆದ್ರೂ ನಿದ್ದೆ ಮಾಡಬೇಕು. ಒಂದುವೇಳೆ ನಾನು ಬೆಳಿಗ್ಗೆ ಬೇಗ ಏಳಬೇಕಾದ್ರೆ ಹಿಂದಿನ ರಾತ್ರಿ ಸ್ವಲ್ಪ ಬೇಗನೇ ಮಲಗ್ತೀನಿ. ಎಷ್ಟು ಗಂಟೆ ಬೇಗ ಎದ್ದೇಳಬೇಕೋ ಅಷ್ಟು ಗಂಟೆ ಬೇಗ ಮಲಗ್ತೀನಿ.”—ವಿನ್ಸೆಂಟ್‌.

  •   ಪ್ರತಿದಿನ ಒಂದೇ ಟೈಂಗೆ ಮಲಗಿ. ನಾವು ಹೇಗೆ ಟ್ರೈನಿಂಗ್‌ ಕೊಡ್ತೀವೋ ಹಾಗೆ ನಮ್ಮ ದೇಹ ನಮ್ಮ ಮಾತು ಕೇಳುತ್ತೆ. ತಜ್ಞರು ಹೇಳೋ ಪ್ರಕಾರ ನಾವು ಯಾವಾಗ್ಲೂ ಒಂದೇ ಟೈಂಗೆ ಮಲಗಿ ಒಂದೇ ಟೈಂಗೆ ಎದ್ದೋಳೋದು ತುಂಬಾ ಒಳ್ಳೇದು. ಇದನ್ನ ಒಂದು ತಿಂಗಳು ಟ್ರೈ ಮಾಡಿ. ಆಮೇಲೆ ನಿಮಗೆ ಎಷ್ಟು ಖುಷಿ ಆಗುತ್ತೆ ಅಂತ ನೋಡಿ.

     “ನೀವು ಪ್ರತಿದಿನ ಒಂದೇ ಟೈಂಗೆ ಮಲಗಿದ್ರೆ ಮಾರನೇ ದಿನ ಲವಲವಿಕೆಯಿಂದ, ಉತ್ಸಾಹದಿಂದ ಇರ್ತೀರ. ಆಗ ನಿಮ್ಮ ಕೆಲ್ಸಗಳನ್ನ ಚೆನ್ನಾಗಿ ಮಾಡಬಹುದು.”—ಜೆರೆಡ್‌.

  •   ಫ್ರೆಂಡ್ಸ್‌ ಜೊತೆ ಎಷ್ಟು ಟೈಂ ಕಳೀತಿದ್ದೀರಾ ಅಂತ ಪರಿಶೀಲಿಸಿ. “ಎಲ್ಲ ವಿಷ್ಯಗಳಲ್ಲೂ ಇತಿಮಿತಿ ಇರಬೇಕು” ಅಂತ ಬೈಬಲ್‌ ಹೇಳುತ್ತೆ. ನಿಮ್ಮ ಫ್ರೀ ಟೈಮಲ್ಲಿ ಏನ್‌ ಮಾಡ್ತೀರ ಅನ್ನೋದು ಇದ್ರಲ್ಲಿ ಸೇರಿದೆ.—1 ತಿಮೊತಿ 3:2, 11.

     “ಸಂಜೆ ಹೊತ್ತು ನಾನು ನನ್ನ ಫ್ರೆಂಡ್ಸ್‌ ಜೊತೆ ಟೈಂ ಕಳಿಯೋದನ್ನ ಕಡಿಮೆ ಮಾಡಬೇಕು ಅಂದ್ಕೊಂಡೆ. ಯಾಕಂದ್ರೆ ಮನರಂಜನೆಗೆ ಜಾಸ್ತಿ ಟೈಂ ಕೊಟ್ರೆ ನನ್ನ ನಿದ್ದೆ ಟೈಂನ ತ್ಯಾಗ ಮಾಡಬೇಕಾಗುತ್ತೆ.”—ರೆಬೆಕ್ಕ.

  •   ನೀವು ನಿದ್ದೆ ಮಾಡೋವಾಗ ನಿಮ್ಮ ಮೊಬೈಲಿಗೂ ರೆಸ್ಟ್‌ ಕೊಡಿ. ಮಲಗೋಕೂ ಒಂದು ಗಂಟೆ ಮುಂಚೆ ಮೊಬೈಲ್‌ ನೋಡೋದು, ಇಂಟರ್ನೆಟ್ಟಲ್ಲಿ ಏನಾದ್ರೂ ಹುಡುಕೋದು, ಫ್ರೆಂಡ್ಸ್‌ಗೆ ಮೆಸೆಜ್‌ ಕಳಿಸೋದನ್ನ ನಿಲ್ಲಿಸಿ. ಯಾಕಂದ್ರೆ ಮೊಬೈಲ್‌, ಟೀವಿ, ಟ್ಯಾಬ್‌ಗಳಿಂದ ಬರೋ ಬೆಳಕು ನಿಮ್ಮ ನಿದ್ದೆನ ಹಾಳು ಮಾಡುತ್ತೆ ಅಂತ ತಜ್ಞರು ಹೇಳ್ತಾರೆ.

     “ದಿನದ 24 ಗಂಟೆಲಿ ನಿಮ್ಮ ಫ್ರೆಂಡ್ಸ್‌ ಯಾವಾಗ ಮೆಸೆಜ್‌ ಮಾಡಿದ್ರೂ ಅದಕ್ಕೆ ನೀವು ರಿಪ್ಲೈ ಮಾಡಬೇಕು ಅಂತ ಅವ್ರು ಇಷ್ಟ ಪಡ್ತಾರೆ. ಆದರೆ ನೀವು ಚೆನ್ನಾಗಿ ನಿದ್ದೆ ಮಾಡಬೇಕು ಅಂದ್ರೆ ನಿಮ್ಮ ಫೋನನ್ನ ದೂರ ಇಡಲೇಬೇಕು.”—ಜುಲಿಸ್ಸಾ.