ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಹೇಗೆ ತೂಕ ಇಳಿಸಿಕೊಳ್ಳಲಿ?

ಹೇಗೆ ತೂಕ ಇಳಿಸಿಕೊಳ್ಳಲಿ?

 ನಿಜವಾಗಲೂ ನಾನು ತೂಕ ಕಡಿಮೆ ಮಾಡಬೇಕಾ?

 ಕೆಲವು ಟೀನೇಜ್‌ ಹುಡುಗ ಹುಡುಗಿಯರು ತೂಕ ಕಡಿಮೆ ಮಾಡಿಕೊಳ್ಳಬೇಕು ಅಂತ ಹೇಳ್ತಾರೆ. ಆದರೆ

 •   ಹೆಚ್ಚಿನವರಿಗೆ ಅವರ ಆರೋಗ್ಯಕ್ಕಿಂತ ಅವರು ಹೇಗೆ ಕಾಣ್ತಾರೆ ಅನ್ನೋದರ ಬಗ್ಗೆನೇ ಚಿಂತೆ. ಕೆಜಿಗಟ್ಟಳೆ ತೂಕ ಕಡಿಮೆ ಮಾಡಿಕೊಳ್ಳಲು ಅವರೇ ಏನಾದ್ರೂ ದಾರಿ ಹುಡುಕುತ್ತಾರೆ. ಉದಾಹರಣೆಗೆ ಊಟ ಬಿಟ್ಟುಬಿಡುತ್ತಾರೆ, ತೂಕ ಕಡಿಮೆ ಮಾಡುವ ಮಾತ್ರೆ ತಿನ್ನುತ್ತಾರೆ. ಹೆಚ್ಚಾಗಿ ಇದರಿಂದ ಏನೂ ಪ್ರಯೋಜನ ಆಗಲ್ಲ, ಅಪಾಯನೇ ಜಾಸ್ತಿ.

   “ಕೆಲವು ಹುಡುಗಿಯರು ಬೇಗ ಸಣ್ಣ ಆಗ್ಬೇಕಂತ ಹೊಟ್ಟೆಗೆ ಏನೂ ತಿನ್ನದೆ ಇರ್ತಾರೆ. ಇದರಿಂದ ಅವರ ಆರೋಗ್ಯ ಹಾಳಾಗುತ್ತೆ. ಚೇತರಿಸಿಕೊಳ್ಳೋಕೆ ತುಂಬ ದಿನ ಹಿಡಿಯುತ್ತೆ.”—ಹೇಲಿ.

 •   ಹೆಚ್ಚಿನವರಿಗೆ ತೂಕ ಕಡಿಮೆ ಮಾಡಿಕೊಳ್ಳಬೇಕು ಅಂತ ಅನಿಸುತ್ತದೆ, ಆದರೆ ಅದರ ಅವಶ್ಯಕತೆ ಇರಲ್ಲ. ನಿಜ ಹೇಳಬೇಕೆಂದರೆ ಅವರು ಅಂದುಕೊಳ್ಳುವ ಹಾಗೆ ಅವರು ಜಾಸ್ತಿ ದಪ್ಪ ಇರಲ್ಲ. ಆದರೆ ಫ್ರೆಂಡ್ಸ್‌ ಜೊತೆ, ಹೀರೋಯಿನ್ಸ್‌ ಅಥವಾ ಬೇರೆ ಸ್ಟಾರ್‌ಗಳ ಜೊತೆ ತಮ್ಮನ್ನು ಹೋಲಿಸಿಕೊಳ್ಳುವಾಗ ಅವರ ತರ ತೆಳ್ಳಗೆ ಬಳ್ಳಿಯಂತೆ ಇರಬೇಕು ಅಂತ ಆಸೆಪಡುತ್ತಾರೆ.

   “13 ವಯಸ್ಸಲ್ಲಿ ನಾನು ಯಾವಾಗಲೂ ನನ್ನ ಫ್ರೆಂಡ್ಸ್‌ ಜೊತೆ ನನ್ನನ್ನು ಹೋಲಿಸಿಕೊಳ್ತಿದ್ದೆ. ಅವರ ಹಾಗೆ ಸಣ್ಣಗೆ, ಸಣಕಲ ಕಡ್ಡಿ ತರ ಇದ್ರೆ ಅವರು ನನ್ನನ್ನ ಇಷ್ಟಪಡ್ತಾರೆ ಅಂದುಕೊಂಡೆ.”—ಪಾವೊಲಾ.

 ಇನ್ನು ಕೆಲವರು ತೂಕ ಇಳಿಸಿಕೊಳ್ಳಲೇಬೇಕು. ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ ಪ್ರಕಾರ ...

 •   ಪ್ರಪಂಚದಲ್ಲಿ 5-19 ವಯಸ್ಸಿನವರಲ್ಲಿ ಸುಮಾರು 34 ಕೋಟಿ ಮಕ್ಕಳ ತೂಕ ಅವರ ವಯಸ್ಸು-ಎತ್ತರಕ್ಕಿಂತ ಜಾಸ್ತಿ ಇದೆ.

 •   1975 ರಲ್ಲಿ 5-19 ವಯಸ್ಸಿನವರಲ್ಲಿ ತೂಕ ಜಾಸ್ತಿ ಇದ್ದ ಮಕ್ಕಳು ಕೇವಲ 4% ಇದ್ದರು, ಆದರೆ 2016 ರಲ್ಲಿ 18% ಇದ್ದರು.

 •   ಲೋಕದ ಸುತ್ತ ಹೆಚ್ಚಿನ ದೇಶಗಳಲ್ಲಿ ಸಣಕಲಾಗಿ ಇರುವವರಿಗಿಂತ ಬೊಜ್ಜು ದೇಹದವರೇ ಜಾಸ್ತಿ.

 •   ಹಿಂದುಳಿದ ದೇಶಗಳಲ್ಲೂ ಬೊಜ್ಜು ದೇಹದವರು ಇರುವುದು ಸಾಮಾನ್ಯ. ಪೌಷ್ಟಿಕ ಆಹಾರ ಇಲ್ಲದೆ ಬಳಲುತ್ತಿರುವ ಕುಟುಂಬಗಳಲ್ಲೂ ಗುಂಡು ಗುಂಡಾಗಿ ಇರುವವರು ಇದ್ದಾರೆ.

 ತೂಕ ಇಳಿಸಲು ಏನು ಮಾಡಬೇಕು? ಏನು ಮಾಡಬಾರದು?

 ತೂಕ ಇಳಿಸಿಕೊಳ್ಳಲು ನೀವು ಏನು ಮಾಡ್ತೀರಾ?

 1.   ಊಟ ಬಿಡುತ್ತೀರಾ?

 2.   ಸರಿಯಾದ ಡಯಟ್‌ ಜೊತೆಗೆ ವ್ಯಾಯಾಮ ಮಾಡುತ್ತೀರಾ?

 3.   ತೂಕ ಕಡಿಮೆ ಮಾಡುವ ಮಾತ್ರೆ ತಿನ್ನುತ್ತೀರಾ?

 ಸರಿಯಾದ ವಿಧಾನ 2 ನೇಯದು ಅಂದ್ರೆ ಸರಿಯಾದ ಡಯಟ್‌ ಜೊತೆಗೆ ವ್ಯಾಯಾಮ ಮಾಡುವುದು.

 ಊಟ ಬಿಡುವುದರಿಂದ, ಕೆಲವು ಆಹಾರಗಳನ್ನು ತಿನ್ನದೇ ಇರುವುದರಿಂದ ಬೇಗ ತೂಕ ಕಡಿಮೆ ಆಗಬಹುದು. ಆದರೆ ಅದೆಲ್ಲ ಆರೋಗ್ಯಕ್ಕೆ ಒಳ್ಳೇದಲ್ಲ. ಮೊದಲಿನ ತರ ನೀವು ಊಟ ಮಾಡಲಿಕ್ಕೆ ಶುರುಮಾಡಿದಾಗ ಪುನಃ ತೂಕ ಜಾಸ್ತಿ ಆಗಬಹುದು.

 ಊಟ ಬಿಟ್ಟು ಸಮಸ್ಯೆ ತಲೆ ಮೇಲೆ ಎಳೆದುಕೊಳ್ಳುವುದಕ್ಕಿಂತ ಆರೋಗ್ಯವಾಗಿ ಇರುವುದೇ ಒಳ್ಳೇದು. ಆಗ ಆರೋಗ್ಯ ಸಮಸ್ಯೆ ಇರಲ್ಲ, ನೋಡಲಿಕ್ಕೂ ಚೆನ್ನಾಗಿ ಕಾಣುತ್ತೀರಿ. “ಲೈಫ್‌ ಸ್ಟೈಲ್‌ ಬದಲಾಯಿಸಿ, ಜೀವನಪೂರ್ತಿ ಅದನ್ನು ಪಾಲಿಸಿ. ಇದೇ ಸುರಕ್ಷಿತವಾದ ಆರೋಗ್ಯಕರ ವಿಧಾನ. ಇದರಿಂದ ತುಂಬ ಪ್ರಯೋಜನ ಇದೆ” ಎಂದು ಹೇಳುತ್ತಾರೆ ಡಾಕ್ಟರ್‌ ಮೈಕಲ್‌ ಬ್ರಾಡ್ಲಿ. a ಇದರಿಂದ ಏನು ಅರ್ಥ ಆಗುತ್ತೆ? ತೂಕ ಇಳಿಸಲಿಕ್ಕೆ ಡಯಟ್‌ ಮಾಡಿದರೆ ಸಾಕಾಗಲ್ಲ, ಬದಲಿಗೆ ನಿಮ್ಮ ಲೈಫ್‌ ಸ್ಟೈಲನ್ನೇ ಬದಲಾಯಿಸಬೇಕು.

 ನಾನೇನು ಮಾಡಬೇಕು?

 “ಎಲ್ಲ ವಿಷ್ಯಗಳಲ್ಲಿ ಇತಿಮಿತಿ ಇರಬೇಕು” ಎಂದು ಬೈಬಲ್‌ ಹೇಳುತ್ತದೆ. ಹಾಗಾಗಿ ತಿನ್ನುವುದಕ್ಕೂ ಒಂದು ಮಿತಿ ಇರಬೇಕು. (1 ತಿಮೊತಿ 3:11) ಅತಿಯಾಗಿ ತಿನ್ನಬಾರದು ಅಂತನೂ ಬೈಬಲ್‌ ನಿರ್ದಿಷ್ಟವಾಗಿ ಹೇಳುತ್ತದೆ. (ಜ್ಞಾನೋಕ್ತಿ 23:20; ಲೂಕ 21:34) ಇದನ್ನು ಮನಸ್ಸಲ್ಲಿಟ್ಟು ಆರೋಗ್ಯಕರ ಜೀವನ ನಡೆಸಿ.

 •   ಯಾವುದು ಆರೋಗ್ಯಕ್ಕೆ ಒಳ್ಳೇದು ಅಂತ ತಿಳಿದುಕೊಳ್ಳಿ.

   ಇದು ತಿನ್ನಬೇಕು, ಅದು ತಿನ್ನಲೇಬಾರದು ಅಂತ ಕಟ್ಟುನಿಟ್ಟಾಗಿ ಇರಬಾರದು. ಪೋಷಕಾಂಶಗಳ ಬಗ್ಗೆ ತಿಳಿದುಕೊಂಡು ಸಮತೋಲನ ಡಯಟ್‌ ಮಾಡುವುದು ಒಳ್ಳೇದು. ಇದರಿಂದ ತೂಕದ ಮೇಲೆ ನಿಗಾ ಇಡಲು ಆಗುತ್ತದೆ.

 •   ಪ್ರತಿದಿನ ವ್ಯಾಯಾಮ ಮಾಡಿ.

   ನಿಮ್ಮ ದೇಹ ಚುರುಕಾಗಿ ಇರುವ ತರ ಪ್ರತಿದಿನ ಏನು ಮಾಡಬಹುದು ಅಂತ ಯೋಚಿಸಿ. ಉದಾಹರಣೆಗೆ ಲಿಫ್ಟಲ್ಲಿ ಹೋಗುವ ಬದಲು ಮೆಟ್ಟಿಲು ಹತ್ತಿ. ಟಿವಿ ಮುಂದೆ ಕುಳಿತುಕೊಳ್ಳುವ ಬದಲು ಹೊರಗೆ ವಾಕಿಂಗ್‌ ಹೋಗಿ.

 •   ಕುರುಕಲು ತಿಂಡಿ ಬಿಟ್ಟುಬಿಡಿ, ಆರೋಗ್ಯಕರ ಆಹಾರವನ್ನೇ ತಿನ್ನಿ.

   “ಹಣ್ಣು, ತರಾಕರಿಗಳನ್ನು ನನ್ನ ಹತ್ತಿರನೇ ಇಟ್ಕೊಂಡಿರುತ್ತೀನಿ. ಹಸಿವಾದಾಗ ಅದನ್ನು ತಿನ್ನುತ್ತೀನಿ. ಹಾಗಾಗಿ ಹಾಳುಮೂಳು ತಿನ್ನುವ ಆಸೆ ಬರಲ್ಲ” ಅಂತ 16 ವಯಸ್ಸಿನ ಸೋಫಿಯ ಹೇಳುತ್ತಾಳೆ.

 •   ನಿಧಾನವಾಗಿ ತಿನ್ನಿ.

   ಕೆಲವರು ಗಬಗಬ ಅಂತ ತಿನ್ನುತ್ತಾರೆ, ಅವರ ಹೊಟ್ಟೆ ತುಂಬಿದ್ದರೂ ಅವರಿಗೆ ಗೊತ್ತಾಗಲ್ಲ. ಹಾಗಾಗಿ ನಿಧಾನವಾಗಿ ತಿನ್ನಿ. ಎರಡನೇ ಸಲ ತಟ್ಟೆಗೆ ಊಟ ಹಾಕಿಸಿಕೊಳ್ಳಬೇಕು ಅಂತ ಅನಿಸಿದರೆ ಸ್ವಲ್ಪ ಯೋಚಿಸಿ. ನಿಮ್ಮ ಹೊಟ್ಟೆ ತುಂಬಿದ್ದರೂ ಇನ್ನೂ ತಿನ್ನಬೇಕು ಅಂತ ನಿಮಗೆ ಸುಮ್ಮನೆ ಅನಿಸುತ್ತೆ ಅಷ್ಟೇ. ಆದರೆ ತಿನ್ನುವ ಅಗತ್ಯ ಇರಲ್ಲ.

 •   ಒಂದು ದಿನಕ್ಕೆ ಎಷ್ಟು ಕ್ಯಾಲೋರಿ ತಿನ್ನುತ್ತೀರಾ ಅಂತ ಲೆಕ್ಕ ಇಡಿ.

   ನೀವು ತಿನ್ನುವ ಆಹಾರದ ಪ್ಯಾಕೆಟ್‌ ಮೇಲೆ ಕ್ಯಾಲೋರಿ ಎಷ್ಟಿದೆ ಅಂತ ನೋಡಿ. ಉದಾಹರಣೆಗೆ ಕೂಲ್‌ ಡ್ರಿಂಕ್ಸ್‌, ಫಾಸ್ಟ್‌ ಫುಡ್‌ ಮತ್ತು ಬೇಕರಿ ತಿಂಡಿಗಳಲ್ಲಿ ತುಂಬ ಕ್ಯಾಲೋರಿಗಳು ಇವೆ. ಇದನ್ನು ತಿಂದರೆ ತೂಕ ಜಾಸ್ತಿ ಆಗುತ್ತದೆ.

 •   ಅತಿರೇಕಕ್ಕೆ ಹೋಗಬೇಡಿ.

   16 ವಯಸ್ಸಿನ ಸಾರಾ ಏನು ಹೇಳುತ್ತಾಳೆ ನೋಡಿ, “ಮೊದಲೆಲ್ಲ ನಾನು ಅದ್ರಲ್ಲಿ ಎಷ್ಟು ಕ್ಯಾಲೋರಿ ಇದೆ, ಇದ್ರಲ್ಲಿ ಎಷ್ಟಿದೆ ಅಂತ ಬರೀ ಕ್ಯಾಲೋರಿ ಬಗ್ಗೆನೇ ಲೆಕ್ಕ ಮಾಡ್ತಿದ್ದೆ. ಎಷ್ಟರ ಮಟ್ಟಿಗಂದ್ರೆ ತಟ್ಟೆಯಲ್ಲಿ ಊಟ ನೋಡಿದ್ರೆ ಸಾಕು ಬರೀ ಸಂಖ್ಯೆನೇ ಕಾಣಿಸ್ತಿತ್ತು.” ಅದೇ ತಪ್ಪನ್ನು ನೀವು ಮಾಡಬೇಡಿ. ಕ್ಯಾಲೋರಿ ಅಕೌಂಟೆಂಟ್‌ ಆಗಬೇಡಿ. ಯಾವಾಗಾದರೂ ಒಂದು ಸಲ ನಿಮಗೆ ಇಷ್ಟ ಆಗಿರೋದನ್ನು ತಿನ್ನುವುದರಲ್ಲಿ ತಪ್ಪೇನಿಲ್ಲ. ಕ್ಯಾಲೋರಿ ಜಾಸ್ತಿ ಇದ್ದರೂ ಪರವಾಗಿಲ್ಲ.

 ಟಿಪ್ಸ್‌: ನಿಮಗೆ ತೂಕ ಜಾಸ್ತಿ ಇದೆ ಅಂತ ಅನಿಸಿದ್ರೆ ನಿಮ್ಮ ಡಾಕ್ಟರ್‌ ಹತ್ತಿರ ಮಾತಾಡಿ. ನಿಮ್ಮ ಆರೋಗ್ಯ ಮತ್ತು ಸನ್ನಿವೇಶವನ್ನು ಮನಸ್ಸಲಿಟ್ಟು ಯಾವ ತರದ ಜೀವನಶೈಲಿ ನಿಮಗೆ ಒಳ್ಳೇದು ಅಂತ ಅವರು ಹೇಳುತ್ತಾರೆ.

a ವೆನ್‌ ಥಿಂಗ್ಸ್‌ ಗೆಟ್‌ ಕ್ರೇಜ಼ಿ ವಿತ್‌ ಯುವರ್‌ ಟೀನ್‌ ಪುಸ್ತಕದಿಂದ.